ಭಾನುವಾರ, ಮೇ 29, 2022
31 °C
ರಷ್ಯಾದ ರೈಲು ಸುರಂಗ ಮಾರ್ಗದಲ್ಲಿ ದುರಂತ; 50ಕ್ಕೂ ಹೆಚ್ಚು ಜನರಿಗೆ ಗಾಯ

ಮೆಟ್ರೊ ರೈಲಿನಲ್ಲಿ ಅವಳಿ ಸ್ಫೋಟ: 10 ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮೆಟ್ರೊ ರೈಲಿನಲ್ಲಿ ಅವಳಿ ಸ್ಫೋಟ: 10 ಸಾವು

ಮಾಸ್ಕೊ: ಸೇಂಟ್ ಪೀಟರ್ಸ್‌ಬರ್ಗ್‌ನ ಮೆಟ್ರೊ ಸುರಂಗ ಮಾರ್ಗದಲ್ಲಿ ಸೋಮವಾರ ಅವಳಿ ಸ್ಫೋಟ ಸಂಭವಿಸಿದ್ದು ಕನಿಷ್ಠ 10 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಗವರ್ನರ್‌ ಅವರ ವಕ್ತಾರರು ತಿಳಿಸಿದ್ದಾರೆ.

ಸೆನ್ನಾಯ ಪ್ಲೊಶ್‌ಚೆಡ್‌ ಮತ್ತು ಟೆಕ್ನೊಲಾಜಿಚೆಸ್ಕಿ ಇನ್‌ಸ್ಟಿಟ್ಯೂಟ್ ನಿಲ್ದಾಣಗಳ ನಡುವಿನ ಸುರಂಗದಲ್ಲಿ ಈ ದುರಂತ ನಡೆದಿದೆ.

ಎರಡು ರೈಲುಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಸೇಂಟ್ ಪೀಟರ್ಸ್‌ಬರ್ಗ್‌ನ ತುರ್ತುಸೇವಾ ವಿಭಾಗ ಮಾಹಿತಿ ನೀಡಿದೆ.

ಸ್ಫೋಟಕ ವಸ್ತುವೊಂದನ್ನು ಮೆಟ್ರೊ ರೈಲಿನಲ್ಲಿ ಸಾಗಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಸಮಿತಿ ಹೇಳಿದೆ.

ಉತ್ತರ ರಷ್ಯಾದ ಹಲವು ರೈಲ್ವೆ ಸುರಂಗಗಳನ್ನು ಮುಚ್ಚಲಾಗಿದ್ದು, ಜನರನ್ನು ತೆರವುಗೊಳಿಸಲಾಗುತ್ತಿದೆ ಎಂದು ರೈಲ್ವೆ ನಿಗಮ ತಿಳಿಸಿದೆ.

ಸ್ಫೋಟದ ತೀವ್ರತೆಯಿಂದ ರೈಲಿನ ಬಾಗಿಲುಗಳು ಛಿದ್ರಗೊಂಡಿವೆ. ನಿಲ್ದಾಣದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳು ಹಾಗೂ ಗಾಯಾಳುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.

ರಾಜಧಾನಿ ಮಾಸ್ಕೋದ ಸುರಂಗ ಮಾರ್ಗಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಉಪ ಮೇಯರ್ ಮಾಕ್ಸಿಮ್ ಲಿಕ್ಸುಟೊವ್ ಅವರು ತಿಳಿಸಿದ್ದಾರೆ.

ನಗರದಲ್ಲೇ ಇದ್ದರು ಪುಟಿನ್‌

ಘಟನೆಗೆ ಕಾರಣ ತಿಳಿದಿಲ್ಲ. ಇದು ಭಯೋತ್ಪಾದಕರ ಕೃತ್ಯವೇ ಅಥವಾ ಬೇರೆ ಕಾರಣವಿದೆಯೇ ಎಂದು  ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. 

ಪುಟಿನ್ ಅವರು ಬೆಲಾರಸ್‌ ಅಧ್ಯಕ್ಷರ ಜತೆ ಮಾತುಕತೆಗಾಗಿ ನಗರಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.