7

ಖಾಸಗಿತನದ ಹಕ್ಕು ಹಾಗೂ ಮಾಧ್ಯಮ ಸಂಹಿತೆ

Published:
Updated:
ಖಾಸಗಿತನದ ಹಕ್ಕು ಹಾಗೂ ಮಾಧ್ಯಮ ಸಂಹಿತೆ

ಮಾಧ್ಯಮಗಳನ್ನು ನಿಯಂತ್ರಿಸುವ ಸಂಬಂಧ ಅಧ್ಯಯನ ನಡೆಸಲು ವಿಧಾನಮಂಡಲ ರಚಿಸಿರುವ ಜಂಟಿ ಸದನ ಸಮಿತಿ ರಾಜ್ಯದಲ್ಲಿ ವಿವಾದ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ  ಕೇರಳದ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್‌ ರಾಜೀನಾಮೆಗೆ ಕಾರಣವಾಗಿದ್ದ ಸುದ್ದಿಯನ್ನು ಪ್ರಸಾರ ಮಾಡಿದ್ದ ಅಲ್ಲಿನ ಮಂಗಳಂ ಟಿ.ವಿ. ಚಾನೆಲ್, ಅದು ‘ಹನಿ ಟ್ರ್ಯಾಪ್’ ಆಗಿತ್ತು ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವುದು ಕಾಕತಾಳೀಯ.ಈ ಪ್ರಕರಣದ ಪೊಲೀಸ್ ತನಿಖೆಗೆ ಎಲ್‌ಡಿಎಫ್ ಸರ್ಕಾರ ಆದೇಶ ನೀಡಿತ್ತು. ಇದಕ್ಕಾಗಿ ಉನ್ನತ ಅಧಿಕಾರಿಗಳ ತನಿಖಾ ತಂಡ ರಚನೆಯಾದ ಕೆಲವೇ ನಿಮಿಷಗಳಲ್ಲಿ ಸುದ್ದಿವಾಹಿನಿ ತಪ್ಪೊಪ್ಪಿಕೊಂಡಿದೆ.ಗೃಹಿಣಿಯೊಬ್ಬರ ಜೊತೆ ಸಚಿವರು ನಡೆಸಿದ ಅಸಭ್ಯ ಮಾತುಕತೆಯನ್ನು ಪ್ರಸಾರ ಮಾಡಲಾಗಿದೆ ಎಂದು ಸುದ್ದಿವಾಹಿನಿಯ ಸಿಇಓ ಪ್ರತಿಪಾದಿಸಿಕೊಂಡಿದ್ದರು. ಕಳೆದ ಮಾರ್ಚ್ 26ರಂದು ಈ ಹೊಸ ಸುದ್ದಿವಾಹಿನಿ ತನ್ನ ಪ್ರಸಾರ ಆರಂಭಿಸಿದ ಮೊದಲ ದಿನವೇ ಇದನ್ನು ಪ್ರಸಾರಮಾಡಿತ್ತು. ಏನೋ ಸಹಾಯಕ್ಕಾಗಿ ಸಚಿವರನ್ನು ಮಹಿಳೆ ಸಂಪರ್ಕಿಸಿದಾಗ ಇಂತಹ ಮಾತುಗಳನ್ನಾಡಿದ ಸಚಿವರು ಅಧಿಕಾರದುರುಪಯೋಗ ಮಾಡಿದ್ದಾರೆಂದು ಬಿಂಬಿಸಲಾಗಿತ್ತು.ಆದರೆ ಇದಕ್ಕೆ ತದ್ವಿರುದ್ಧವಾಗಿ ಗುರುವಾರ ರಾತ್ರಿ  ಟಿ.ವಿ. ಪರದೆ ಮೇಲೆ ಕಾಣಿಸಿಕೊಂಡ ಸಿಇಓ, ಈ ಮಾರು ವೇಷದ ಕಾರ್ಯಾಚರಣೆಯನ್ನು ನಡೆಸಿದ್ದು  ಸುದ್ದಿವಾಹಿನಿಯದೇ ಪತ್ರಕರ್ತೆ ಎಂದು ಹೇಳಿದರು. ‘ಸ್ವಯಂಪ್ರೇರಿತವಾಗಿ ಈ ಕಾರ್ಯಾಚರಣೆಗೆ ಮುಂದೆ ಬಂದ ಪತ್ರಕರ್ತೆಗೆ  ಎಂಟು ಸದಸ್ಯರ ತಂಡ  ನೆರವು ನೀಡಿತ್ತು. ಆದರೆ ಈ ಕಾರ್ಯಾಚರಣೆ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ಷೇಪಗಳಿಗೆ ಕಾರಣವಾಗಿದೆ.

ಹಲವು ಹಿರಿಯ ಪತ್ರಕರ್ತರು ಹಾಗೂ ಪತ್ರಕರ್ತೆಯರ ಮೇಲೆ ಇದು ಪರಿಣಾಮ ಬೀರಿದೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಆತ್ಮಾವಲೋಕ ಮಾಡಿಕೊಂಡು ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಪರಿಶೀಲಿಸುತ್ತೇವೆ’ ಎಂದೂ ಸಿಇಓ ಅಜಿತ್ ಕುಮಾರ್ ಹೇಳಿದ್ದಾರೆ.ಧ್ವನಿಮುದ್ರಿಕೆ ಪ್ರಸಾರವಾದಾಗಲಿಂದಲೇ ಅದರ ಸಾಚಾತನದ ಬಗ್ಗೆ ಹಿರಿಯ ಪತ್ರಕರ್ತರು ವ್ಯಕ್ತಪಡಿಸಿದ್ದ  ಸಂಶಯ ಕಡೆಗೂ ನಿಜವಾಗಿದ್ದು ವಿಪರ್ಯಾಸ. ಮಹಿಳೆಯ ಧ್ವನಿಯನ್ನು ಮಾರೆಮಾಚಿದ ಉದ್ದೇಶದ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ನಂತರ ಈ ಬಗ್ಗೆ ಪೊಲೀಸ್ ದೂರು ನೀಡಲು ಯಾವ ಮಹಿಳೆಯೂ ಮುಂದೆ ಬಂದಿರಲಿಲ್ಲ. ಹೀಗಾಗಿ ಸಚಿವರೊಬ್ಬರ ಖಾಸಗಿ ಲೈಂಗಿಕ ನಡಾವಳಿಗಳನ್ನು ಮಾರಾಟದ ಸರಕಿನಂತೆ ಬಿತ್ತರಿಸಿದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಅದರಲ್ಲೂ ಸುದ್ದಿವಾಹಿನಿ ಉದ್ಘಾಟನೆ ದಿನವೇ ಹೆಚ್ಚಿನ ಜನರ ಗಮನ ಸೆಳೆದು ವಾಣಿಜ್ಯ ಹಿತಾಸಕ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಸುದ್ದಿ ಸಂಸ್ಥೆಯ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡು ರಾಜಕಾರಣಿಯನ್ನು ಬಲೆಗೆ ಬೀಳಿಸಿದ ಕ್ರಮವಂತೂ ಮಾಧ್ಯಮ ಲೋಕದ ಹಿರಿಯರ ಟೀಕೆಗಳಿಗೆ ಗುರಿಯಾಗಿತ್ತು. 

ಪೋನ್ ಸಂಭಾಷಣೆ ಪರಸ್ಪರ ಒಪ್ಪಿತ  ರೀತಿಯಲ್ಲಿಯೇ ಇದ್ದದ್ದರಿಂದ ಖಾಸಗಿತನದ ಹಕ್ಕಿನ ಪ್ರಶ್ನೆಯಲ್ಲದೆ ಮಾಧ್ಯಮ ನೀತಿ ಸಂಹಿತೆಯ ಚರ್ಚೆಗೂ ಇದು ನಾಂದಿ ಯಾಗಿದೆ. ಈ ಚರ್ಚೆಯನ್ನು ಹುಟ್ಟುಹಾಕಿದ್ದೂ ಮಾಧ್ಯಮಲೋಕದ ವ್ಯಕ್ತಿಗಳೇ ಎಂಬುದು ವಿಶೇಷ. ಆದರೆ ಈ ಇಡೀ ಪ್ರಕರಣ  ಬೀರಿರುವ ಪರಿಣಾಮ ಸಮಸ್ಯಾತ್ಮಕವಾದದ್ದು.ಅದರಲ್ಲೂ ಕಳೆದ ಮೂರು, ನಾಲ್ಕು ದಶಕಗಳಿಂದಷ್ಟೇ ಮಾಧ್ಯಮಲೋಕಕ್ಕೆ ಪ್ರವೇಶಪಡೆದಿರುವ ಮಹಿಳೆ ತನ್ನ ಸಂಕಲ್ಪ, ಪರಿಶ್ರಮ ಹಾಗೂ ವೃತ್ತಿಪರತೆಯಿಂದ ನ್ಯೂಸ್‌ರೂಮ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಷ್ಟೇ ಉನ್ನತ ಸ್ಥಾನಗಳಿಗೇರಿದ್ದಾಳೆ. ಇಂತಹ ಸಂದರ್ಭದಲ್ಲಿ ‘ಹನಿ ಟ್ರ್ಯಾಪ್‌’ಗಾಗಿ  ಪತ್ರಕರ್ತೆಯೊಬ್ಬರನ್ನು ಬಳಸಿರುವುದು ಕಳವಳಕಾರಿ. ಈ ಪ್ರಕರಣದ ನಂತರ, ತಮಗಾದ ಅನುಭವವನ್ನು ‘ನ್ಯೂಸ್ 18’ ಪತ್ರಕರ್ತೆ ಸುವಿ ವಿಶ್ವನಾಥನ್ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ದಾಖಲಿಸಿದ್ದಾರೆ.  ತಾನು ಮಾಡುತ್ತಿದ್ದ ವರದಿಗಾಗಿ ಸಂದರ್ಶನ ಬೇಕೆಂದು ಕೋರಿ ಸುವಿ ಅವರು ಸಿಪಿಎಂ ನಾಯಕರೊಬ್ಬರಿಗೆ ಫೋನ್ ಮಾಡಿದಾಗ ಅವರಿಗೆ ಸಿಕ್ಕ ಉತ್ತರ ಅನಿರೀಕ್ಷಿತವಾದುದಾಗಿತ್ತು.

ಸಾಮಾನ್ಯವಾಗಿ ಇಂತಹ ಕೋರಿಕೆಗಳಿಗೆ ‘ಆಯ್ತು’ ಅಥವಾ ‘ಇಲ್ಲ’ ಎಂಬಂತಹ ಉತ್ತರದ ಬದಲಿಗೆ ‘ಯಾಕಾಗಿ ಈ ಸಂದರ್ಶನ? ನನ್ನನ್ನು ಎ. ಕೆ. ಶಶೀಂದ್ರನ್ ಆಗಿಸಲು ಬಯಸಿದ್ದೀರಾ? ಪುರುಷ ಪತ್ರಕರ್ತನಿಗೆ ಸಂದರ್ಶನ ನೀಡುತ್ತೇನೆ, ಮಹಿಳಾ ಪತ್ರಕರ್ತೆಗೆ ಅಲ್ಲ’ ಎಂದು ಹೇಳಿದುದಾಗಿ  ಸುವಿ ಬರೆದುಕೊಂಡಿದ್ದಾರೆ.ಪುರುಷರನ್ನು ಬಲೆಗೆ ಕೆಡವಲು ಮಹಿಳಾ ಪತ್ರಕರ್ತರನ್ನು ಬಳಸಿಕೊಳ್ಳಲಾಗುತ್ತದೆ ಎಂಬಂತಹ ಮಾತುಗಳಿಂದಾಗಿ ಪತ್ರಕರ್ತೆಯರ ಸಮುದಾಯ ಅವಮಾನ, ಅವಿಶ್ವಾಸ ಎದುರಿಸಬೇಕಾಗಿ ಬಂದಿರುವುದು ವಿಷಾದನೀಯ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ‘ನೆಟ್‌ವರ್ಕ್‍ ಆಫ್ ವಿಮೆನ್ ಇನ್ ಮೀಡಿಯ’ದ ಕೇರಳ ಘಟಕ, ‘ಹನಿ ಟ್ರಾಪ್‍’ನಲ್ಲಿ ಭಾಗಿಯಾಗುತ್ತಾರೆಂದು ಮಹಿಳಾ ವರದಿಗಾರರ ಮೇಲೆ ಮಾಡುತ್ತಿರುವ ಆರೋಪಗಳು ಅವಮಾನಕಾರಿಯಾದುದು ಎಂದು ಹೇಳಿದೆ. ಜೊತೆಗೆ ‘ಇಂತಹ  ಆರೋಪಗಳು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿವೆ’ ಎಂದೂ ಪತ್ರದಲ್ಲಿ ಹೇಳಲಾಗಿದೆ.ಈಗಾಗಲೇ ಮಹಿಳೆ ಹಲವು ನೆಲೆಗಳಲ್ಲಿ ಬಹು ವಿಧದ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಉದ್ಯೋಗ ಸ್ಥಳ, ಕುಟುಂಬ ಹಾಗೂ ಸುತ್ತಲ ವಾತಾವರಣದಲ್ಲಿ ಹಲವು ಬಗೆಯ ಪೂರ್ವಗ್ರಹಗಳನ್ನು ನಿರ್ವಹಿಸುತ್ತಲೇ ಅಸ್ಮಿತೆಯನ್ನು ಪ್ರತಿಪಾದಿಸಬೇಕಾದ ಹೊಣೆಗಾರಿಕೆ ಆಕೆಗಿದೆ. ಇಂತಹ ಸಂದರ್ಭದಲ್ಲಿ ಈ ಪ್ರಕರಣ, ವಿಶ್ವಾಸವನ್ನು ಮತ್ತಷ್ಟು ಕಸಿಯುವಂತಹದ್ದು.ಹೀಗಾಗಿಯೇ ‘ಮಹಿಳಾ ಪತ್ರಕರ್ತಳಾಗಿರಲು ನನಗೆ ಹೆಮ್ಮೆ ’( ಪ್ರೌಡ್ ಟು ಬಿ ವುಮನ್ ಜರ್ನಲಿಸ್ಟ್), ‘ನನ್ನ ಪ್ರಾಮಾಣಿಕತೆ ಬಗ್ಗೆ ನನಗೆ ಹೆಮ್ಮೆ’ ಎಂಬಂತಹ ಫಲಕಗಳನ್ನು ಹಿಡಿದು  ತಿರುವನಂತಪುರ, ಕೊಚ್ಚಿ ಹಾಗೂ ಕೋಝಿಕ್ಕೋಡ್‌ಗಳಲ್ಲಿ ಮಹಿಳಾ ಪತ್ರಕರ್ತರು ಪ್ರದರ್ಶನ ನಡೆಸಿದ್ದಾರೆ. ಪತ್ರಕರ್ತೆಯರು ಒಟ್ಟಾಗಿ ಕೇರಳದಲ್ಲಿ ಇಂತಹ ಪ್ರದರ್ಶನ ನಡೆಸಿರುವುದು ಇದೇ ಮೊದಲು.ಪತ್ರಿಕೋದ್ಯಮದಲ್ಲಿ ಮಹಿಳೆ ಹಾಗೂ ಮಹಿಳಾ ಪತ್ರಕರ್ತರ ಕುರಿತು ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಬರೆದಿರುವ ಹಿರಿಯ ಪತ್ರಕರ್ತೆ ಅಮ್ಮು ಜೋಸೆಫ್ ಅವರಿಗೆ ಈ ಪ್ರಕರಣದ ಕುರಿತು ಅಭಿಪ್ರಾಯ ಕೇಳಿದಾಗ ಅವರು ಹೇಳಿದ್ದು ಹೀಗೆ: ‘ಈ ಅನೈತಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಪತ್ರಕರ್ತೆಯ ಮೇಲೆ ಒತ್ತಡ ಹೇರಲಾಗಿತ್ತೆ ಎಂಬುದು ಸ್ಪಷ್ಟವಿಲ್ಲ. ಹೀಗಿದ್ದೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ  ಈ ಪತ್ರಕರ್ತೆಗೆ ಸಂಶಯದ ಲಾಭ ನೀಡಲು ಬಯಸುತ್ತೇನೆ.

ಏಕೆಂದರೆ ಉದ್ಯೋಗ ಅಭದ್ರತೆಯ ಇಂದಿನ ದಿನಗಳಲ್ಲಿ ಬಾಸ್ ಹೇಳಿದ್ದನ್ನು ಮಾಡದೇ ಇರುವುದು ಕಿರಿಯ ಪತ್ರಕರ್ತರಿಗೆ  ಸುಲಭದ ಸಂಗತಿಯಲ್ಲ. ಆದರೆ ಅದೇ ಸುದ್ದಿವಾಹಿನಿಯ ನೀತಿಗಳು ಹಾಗೂ ಸಚಿವರ ಮೇಲಿನ ಕಾರ್ಯಾಚರಣೆಯನ್ನು ವಿರೋಧಿಸಿ  ಪತ್ರಕರ್ತೆಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂಬುದೂ ಗಣನೀಯ.ಅಧಿಕಾರ ಸ್ಥಾನಗಳಲ್ಲಿರುವವರ ತಪ್ಪನ್ನು ಬಯಲು ಮಾಡಲು ಬೇರೆಲ್ಲಾ ತನಿಖಾ ಮಾರ್ಗಗಳಿಂದ ಸಾಧ್ಯವಾಗದಾಗ  ಈ ಬಗೆಯ ‘ಸ್ಟಿಂಗ್’ ಕಾರ್ಯಾಚರಣೆಯನ್ನು ಕಟ್ಟಕಡೆಯ ಆಯ್ಕೆಯಾಗಿ ಬಳಸಬೇಕು ಎಂಬುದು ನನ್ನ ನಿಲುವು. ಸಾರ್ವಜನಿಕ ಹಿತಾಸಕ್ತಿಗೆ ಇದು ಬೇಕೇಬೇಕು  ಎಂದಾದಲ್ಲಿ ಮಾತ್ರ  ಇದನ್ನು ಬಳಸಬೇಕು. ಆದರೆ ಹನಿ ಟ್ರ್ಯಾಪ್ ನಂತಹ ಅನೈತಿಕ ಆಚರಣೆಗಳಂತೂ ಸಮರ್ಥನೀಯವಲ್ಲ.’ರಕ್ಷಣಾ ಇಲಾಖೆಯಲ್ಲಿನ ಅವ್ಯವಹಾರಗಳನ್ನು ಬಹಿರಂಗಗೊಳಿಸುವುದಕ್ಕಾಗಿ ತೆಹೆಲ್ಕಾ ಪತ್ರಿಕೆ 2001ರಲ್ಲಿ ನಡೆಸಿದ ಮಾರುವೇಷದ ಕಾರ್ಯಾಚರಣೆ ತನಿಖಾ ಪತ್ರಿಕೋದ್ಯಮದಲ್ಲಿ ನೀತಿ ಸಂಹಿತೆಯ ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದರಲ್ಲೂ ಈ ಕಾರ್ಯಾಚರಣೆಯಲ್ಲಿ ಕಾಲ್‌ ಗರ್ಲ್‌ಗಳನ್ನು ಬಳಸಿದ್ದು ವಿವಾದವಾಗಿತ್ತು.ನಂತರದ ದಿನಗಳಲ್ಲಿ ಹೆಣ್ಣು ಭ್ರೂಣಗಳ ಲಿಂಗ ಪತ್ತೆಗಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸುವ ವೈದ್ಯರ ಅಕ್ರಮ ದಂಧೆಯನ್ನು ಬಯಲುಗೊಳಿಸಲೂ ತಮ್ಮ ಗುರುತು ಮರೆಮಾಚಿ ಮಾಹಿತಿಗಳನ್ನು ಪಡೆಯುವಂತಹ ತಂತ್ರಗಳನ್ನೇ ಪತ್ರಕರ್ತರಷ್ಟೇ ಅಲ್ಲ ಮಹಿಳಾ ಹೋರಾಟಗಾರರೂ ಬಳಸಿದ್ದರು.ವೈದ್ಯರನ್ನು ತಮ್ಮ ಬಲೆಗೆ ಬೀಳಿಸಲೆಂದೇ ಗರ್ಭಿಣಿ ಮಹಿಳೆಯೊಬ್ಬರನ್ನು (ಡೀಕಾಯ್‌) ಜೊತೆಯಲ್ಲಿ ಕರೆದೊಯ್ದು ಮಾಹಿತಿಯನ್ನು ತಿಳಿಯುವ ಯತ್ನ ಇದಾಗಿರುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಕೈಚೀಲಗಳಲ್ಲಿ ಅಡಗಿಸಿಟ್ಟ ಟೇಪ್‌ರೆಕಾರ್ಡರ್ ಹಾಗೂ ಕ್ಯಾಮ್‌ಕಾರ್ಡರ್‌ಗಳಲ್ಲಿ (ದೃಶ್ಯ ಶ್ರವ್ಯಗಳನ್ನು ಸೆರೆ ಹಿಡಿಯುವ ಪುಟ್ಟ ಸಾಧನ)ಈ ಸಂದರ್ಶನದ ವಿವರಗಳನ್ನೆಲ್ಲಾ ರೆಕಾರ್ಡ್ ಮಾಡಲಾಗುತ್ತಿತ್ತು.ಸಾರ್ವಜನಿಕ ಸೇವಕರ ಸಾರ್ವಜನಿಕ ನಡತೆಯನ್ನು ಬಹಿರಂಗಗೊಳಿಸುವುದಕ್ಕಾಗಿ ಪತ್ರಕರ್ತರು ತಮ್ಮ ಗುರುತು ಹೇಳಿಕೊಳ್ಳದೆ ಸಂಬಂಧಿಸಿದ ವ್ಯಕ್ತಿಯಿಂದ ವಿಷಯ ಬಹಿರಂಗಗೊಳಿಸಲು ಒಲಿಸಿಕೊಳ್ಳುವುದರಲ್ಲಿ ಯಾವುದೇ ಅನೀತಿ ಇಲ್ಲ ಎಂಬ ವಾದ ಇದೆ. ಆದರೆ ಸಾರ್ವಜನಿಕ ವ್ಯಕ್ತಿಗಳ ಖಾಸಗಿ ವಿಚಾರಗಳು ಪತ್ರಕರ್ತರ ವ್ಯಾಪ್ತಿಗೆ ಬರುವಂತಹದ್ದಲ್ಲ ಎಂಬ ಎಚ್ಚರವೂ ಇರುವುದು ಅವಶ್ಯ. ಇತ್ತೀಚೆಗಷ್ಟೇ ರಾಜ್ಯದ ಹಿಂದಿನ ಅಬಕಾರಿ ಸಚಿವರ ಸೆಕ್ಸ್ ವಿಡಿಯೊ ಪ್ರಸಾರ ಮಾಡಿದ್ದ ಟಿ.ವಿ. ಮಾಧ್ಯಮಗಳು ಅದರಲ್ಲಿದ್ದ ಸಾರ್ವಜನಿಕ ಹಿತಾಸಕ್ತಿ ಏನೆಂಬುದನ್ನು ವಿವರಿಸುವಲ್ಲಿ ಸೋತಿದ್ದವು. ಪತ್ರಕರ್ತರ ನಡಾವಳಿಗಳ ನೀತಿ ಸಂಹಿತೆಯ ಆಧಾರಗಳನ್ನು ರೂಪಿಸುವಲ್ಲಿ ಕಾನೂನಿನ ಮಾಪನಗಳೇ ನಿರ್ಣಾಯಕವಾಗಬೇಕಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ‘ಅಧಿಕೃತ ರಹಸ್ಯ ಕಾಯಿದೆ’ ಅಥವಾ ‘ನ್ಯಾಯಾಲಯ ನಿಂದನೆ ಕಾಯಿದೆ’ಯಂತಹ ಶಾಸನಗಳಿಗೆ ವಿರೋಧವಾಗಬಹುದಾದಂತಹ ಪತ್ರಿಕೋದ್ಯಮದ ಮಾರ್ಗಗಳನ್ನು ಬಳಸುವುದೂ ಕೆಲವೊಮ್ಮೆ ನೀತಿಯ ಚೌಕಟ್ಟಿಗೆ ಒಳಪಟ್ಟೇ ಇರುತ್ತದೆ.

ಈ ಎರಡೂ ಕಾಯಿದೆಗಳು, ಅಧಿಕಾರಸ್ತರನ್ನು ಯಾವುದಕ್ಕೂ ಹೊಣೆಗಾರರನ್ನಾಗಿಸದೆ ರಕ್ಷಿಸಲು ರೂಪಿಸಿರುವಂತಹ ವಸಾಹತುಶಾಹಿಯ ‘ಹ್ಯಾಂಗೋವರ್‌’ಗಳಾಗಿಬಿಟ್ಟಿವೆ. ಸಾರ್ವಜನಿಕ ಹಗರಣಗಳನ್ನು ಬಹಿರಂಗಗೊಳಿಸಲು ಇಂತಹ ಪ್ರಜಾಸತ್ತೆ ವಿರೋಧಿ ಕಾನೂನುಗಳೂ ತಮಗೆ ಅಡ್ಡಿಯಾಗದಂತೆ ಪತ್ರಕರ್ತರು ನೋಡಿಕೊಳ್ಳಬೇಕು ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ‘ಮಾಧ್ಯಮಗಳು ಹಾಗೂ ನೀತಿ ಸಂಹಿತೆ’ ಕಮ್ಮಟದಲ್ಲಿ ಅಭಿಪ್ರಾಯಪಟ್ಟಿದ್ದರು.ತಮ್ಮದೇ ನ್ಯಾಯ, ಅನ್ಯಾಯದ ವಿವೇಚನೆಯನ್ನು ಬಳಸಿ, ‘ಯಾರು ಮುಗ್ಧರು’ ಎಂಬುದನ್ನು ಪತ್ರಕರ್ತರೇ ನಿರ್ಧರಿಸಬೇಕು. ಇದರ ನಿರ್ಣಯಕ್ಕೆ ಯಾವುದೇ ವಸ್ತುನಿಷ್ಠ ಮಾನದಂಡಗಳು ಇರುವುದು ಸಾಧ್ಯವಿಲ್ಲ. ವಸ್ತುನಿಷ್ಠ ಮಾನದಂಡ ರೂಪಿಸುವ ಯಾವುದೇ ಯತ್ನವೂ ಅನಿವಾರ್ಯವಾಗಿ ಕಾನೂನಿನ ಆಧಾರದ ಮೇಲೆ ರೂಪಿತವಾದ ಮಾನದಂಡಗಳೇ ಆಗಿಬಿಡುತ್ತವೆ. ಇವು ಯಾವಾಗಲೂ ಸುಭದ್ರ ನೆಲೆಯದಾಗಿರುವುದು ಸಾಧ್ಯವಿಲ್ಲ ಎಂಬುದು ಪ್ರಶಾಂತ್ ಭೂಷಣ್ ಅಭಿಪ್ರಾಯವಾಗಿತ್ತು.ಹೀಗಾಗಿ ಇಲ್ಲಿ ಪತ್ರಕರ್ತರೇ ಗೆರೆ ಎಳೆದುಕೊಳ್ಳುವುದು ಮುಖ್ಯ. ಆಮಿಷಗಳಿಗೆ ಒಳಗಾಗದೆ ಸ್ವಯಂ ನಿಯಂತ್ರಣ ಪಾಲಿಸಬೇಕಾದುದು ಪತ್ರಿಕೋದ್ಯಮದ ಮೊದಲ ಪಾಠವಾಗಬೇಕು. ಭ್ರಷ್ಟಾಚಾರ ಬಯಲುಗೊಳಿಸುವಲ್ಲಿ ಸಾರ್ವಜನಿಕ ಉದ್ದೇಶ ಸ್ಪಷ್ಟವಿರಬೇಕು. ಅದರಿಂದ ಸಾರ್ವಜನಿಕರಿಗೆ ಉಪಯೋಗವಾಗುವಂತಿರಬೇಕು. ಇದನ್ನು ಸಾಧ್ಯವಾಗಿಸುವಂತಹ ಪರಿಸರ ಸೃಷ್ಟಿಸುವ ಕಾನೂನುಗಳಿಗಾಗಿ ಹೋರಾಟ ನಡೆಯಬೇಕಾದುದೂ ಇಲ್ಲಿ ಮುಖ್ಯ.ಆದರೆ ಪಾರದರ್ಶಕತೆ ಇಲ್ಲದ ಆಡಳಿತ ವ್ಯವಸ್ಥೆ ಹಾಗೂ ಸಮಾಜದಲ್ಲಿ ಭ್ರಷ್ಟರನ್ನು ಬಲೆಗೆ ಕೆಡವಲು  ಮಾರುವೇಷದ ಕಾರ್ಯಾಚರಣೆಯೇ ಬೇಕು. ಇಂತಹ ಕಾರ್ಯಾಚರಣೆ ಮಾತ್ರ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಒದಗಿಸಿಕೊಡಬಲ್ಲುದು ಎಂಬಂತಹ ಅಭಿಪ್ರಾಯವೂ ಚಾಲ್ತಿಯಲ್ಲಿದೆ.ಹೀಗಿದ್ದೂ ಅಸ್ತಿತ್ವದಲ್ಲಿರುವ ಮಾಹಿತಿ ಹಕ್ಕು ಕಾಯಿದೆ, ಸರ್ಕಾರದ ವರದಿಗಳು ಹಾಗೂ ಸಿಎಜಿ ವರದಿಗಳ ವಿಶ್ಲೇಷಣೆಗಳು ಕೂಡ ತನಿಖಾ ಪತ್ರಿಕೋದ್ಯಮಕ್ಕೆ ವೇದಿಕೆಯಾಗುವುದು ಸಾಧ್ಯವಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ವಿವಾದಗಳನ್ನು ಹುಟ್ಟುಹಾಕುವುದು ಹಾಗೂ ವಿವಾದಗಳನ್ನು ಬೆಳೆಸುವಲ್ಲಿ ವಾಸ್ತವಾಂಶಗಳು ಮರೆಯಾಗುತ್ತವೆ.ಇಂದಿನ ಈ ಅತಿರಂಜಿತ ವರದಿಗಾರಿಕೆಯ ದಿನಗಳಲ್ಲಿ ಪತ್ರಿಕೋದ್ಯಮದ ನೀತಿ ಸಂಹಿತೆಗಳನ್ನು ನೆನಪಿಸಿಕೊಳ್ಳುವುದು ಅಗತ್ಯ. ಸಮತೋಲನ ಹಾಗೂ ಸಂಯಮ ಮುಖ್ಯವಾದುದು. ಪ್ರಜಾಸತ್ತೆಯ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳಲು  ಇದು ಅತ್ಯಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry