7

ಶಿಸ್ತು ಕಾಯುವುದಕ್ಕಿಂತ ಅಪಖ್ಯಾತಿಯೇ ಲೇಸು?!

ಎ.ಸೂರ್ಯ ಪ್ರಕಾಶ್
Published:
Updated:
ಶಿಸ್ತು ಕಾಯುವುದಕ್ಕಿಂತ ಅಪಖ್ಯಾತಿಯೇ ಲೇಸು?!

​ಶಾಸನಸಭೆಗಳ ಸದಸ್ಯರಿಗೆ ಇರುವ ಹಕ್ಕುಗಳು  ಮತ್ತು ಸೌಲಭ್ಯಗಳು ಯಾವುವು ಹಾಗೂ ಅವುಗಳನ್ನು ಏಕೆ ನೀಡಲಾಗಿದೆ ಎಂಬುದರ ಬಗ್ಗೆ ಸಂಸತ್ತು ಮತ್ತು ವಿಧಾನಮಂಡಲಗಳ ಎರಡೂ ಸದನಗಳ ಮುಖ್ಯಸ್ಥರು ಮಾಹಿತಿ ನೀಡಬೇಕು.

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರ ಮೇಲೆ ಲೋಕಸಭಾ ಸದಸ್ಯ ರವೀಂದ್ರ ಗಾಯಕ್‌ವಾಡ್‌ ನಡೆಸಿದ ಪುಂಡಾಟಿಕೆ ಮತ್ತು ಗಾಯಕ್‌ವಾಡ್‌ ಅವರು, ‘ನಾನು ಅಧಿಕಾರಿಯನ್ನು ಚಪ್ಪಲಿಯಿಂದ 25 ಬಾರಿ ಹೊಡೆದೆ’ ಎಂದು ಬಡಾಯಿ ಕೊಚ್ಚಿಕೊಂಡಿದ್ದು ದೇಶದ ಆತ್ಮಸಾಕ್ಷಿಗೆ ಏಟು ನೀಡಿದೆ. ಆದರೆ ಇದಕ್ಕಿಂತ ಹೆಚ್ಚು ಕಳವಳಕ್ಕೆ ಕಾರಣವಾಗಿರುವುದು ಸಂಸತ್ತಿನ ಬಹುತೇಕ ಸದಸ್ಯರ ಮೌನ, ದೇಶದ ಅತ್ಯುನ್ನತ ಶಾಸನಸಭೆಯ ಪಾವಿತ್ರ್ಯಕ್ಕೆ ಕಳಂಕ ಅಂಟಿಸಿರುವ ತಮ್ಮ ಜೊತೆಗಾರನ ನಿರ್ಲಜ್ಜ ಪುಂಡಾಟಿಕೆಯ ವಿರುದ್ಧವಾಗಿ ಹಾಗೂ ಜನರ ಪರವಾಗಿ ಮಾತನಾಡಲು ಅವರು ಮುಂದಾಗದಿರುವುದು.ನೀತಿ ಸಂಹಿತೆಯನ್ನು ಜಾರಿಗೆ ತಂದು ಪುಂಡಾಟಿಕೆ ನಡೆಸುವ ಸಂಸದರನ್ನು ಹದ್ದುಬಸ್ತಿನಲ್ಲಿ ಇಡಲು ಸಂಸತ್ತು ಮುಂದಾಗದಿರುವ ವಿಚಾರವನ್ನು ಈ ವಿದ್ಯಮಾನವು ನಮ್ಮೆದುರು ತಂದು ನಿಲ್ಲಿಸಿದೆ. ಮುದ್ಗಲ್‌ ಘಟನೆಯ ಬಗ್ಗೆ ತನಿಖೆ ನಡೆಸಿದ 1951ರ ತಾತ್ಕಾಲಿಕ ಸಂಸತ್ತಿನ ಸದಸ್ಯರು ಸಂಸದರಿಗೆ ನೀತಿ ಸಂಹಿತೆಯೊಂದನ್ನು ರೂಪಿಸಿದ್ದರು. ಇದಾದ ನಂತರ, 1993ರಲ್ಲಿ ಲೋಕಸಭೆಯ ಸ್ಪೀಕರ್ ಶಿವರಾಜ್ ಪಾಟೀಲ್ ಅವರು ಒಂದು ಪ್ರಯತ್ನ ನಡೆಸಿದ್ದರು.

ಪಾಟೀಲರ ಪ್ರಯತ್ನ ಸಂಸತ್ತಿನ ಎರಡೂ ಸದನಗಳಲ್ಲಿ ‘ನೈತಿಕ ಸಮಿತಿ’ ರಚನೆಗೆ ಕಾರಣವಾಯಿತು. ಆದರೆ ಸಂಸದರ ನಡತೆಯನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ತೀರಾ ಕಡಿಮೆ. ನಮ್ಮ ಸಂಸದರು ತಮ್ಮ ಹಕ್ಕುಗಳು, ಸವಲತ್ತುಗಳ ಬಗ್ಗೆ ತೀರಾ ಜಾಗರೂಕರಾಗಿ ಇರುತ್ತಾರೆ. ಆದರೆ ದುರ್ವರ್ತನೆಯನ್ನು ಶಿಕ್ಷಿಸುವಲ್ಲಿ, ನೈತಿಕತೆಯನ್ನು ಕಾಯುವುದರಲ್ಲಿ ಸಂಸತ್ತು ವಿಫಲವಾಗಿದೆ.ಸಂಸದರು ಈ ಹಿಂದೆ ನಡೆಸಿದ ದುರ್ವರ್ತನೆಗಳಿಗೆ ಶಿಕ್ಷೆಯಾಗಿದ್ದಿದ್ದರೆ ಗಾಯಕ್‌ವಾಡ್‌ ಪ್ರಕರಣ ಸಂಭವಿಸುತ್ತಲೇ ಇರಲಿಲ್ಲ. ಹವಾನಿಯಂತ್ರಿತ, ಪ್ರಥಮ ದರ್ಜೆ ರೈಲು ಬೋಗಿಗಳಲ್ಲಿ ನಮ್ಮ ಸಂಸದರು ಉಚಿತವಾಗಿ ಪ್ರಯಾಣಿಸಬಹುದು. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ತಮ್ಮ ಕ್ಷೇತ್ರದಿಂದ ದೆಹಲಿಗೆ ತೆರಳಲು ವಿಮಾನ ಟಿಕೆಟ್‌ ಅಲ್ಲದೆ, ಅವರಿಗೆ ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸಲು 32 ಟಿಕೆಟ್‌ಗಳನ್ನು ನೀಡಲಾಗುತ್ತದೆ. ಹೀಗಿದ್ದರೂ, ಸಂಸದರ ಕುಟುಂಬದ ಸದಸ್ಯರು ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ ನಿದರ್ಶನಗಳಿವೆ.ಇದಲ್ಲದೆ, ತಾವು ಕಾಯ್ದಿರಿಸಿದ ಸೀಟುಗಳಲ್ಲಿ ಸಂಸದರು ಮತ್ತು ಅವರ ಜೊತೆಗಾರರು ಟಿಕೆಟ್‌ ಇಲ್ಲದೆಯೇ ಕುಳಿತಿದ್ದಕ್ಕೆ ಸಾಮಾನ್ಯ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರ ಮೇಲೆ ಈ ಗಣ್ಯ ವ್ಯಕ್ತಿಗಳು ಹಲ್ಲೆ ನಡೆಸಿದ, ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣಗಳೂ ಇವೆ. ಇಂಥ ಪ್ರಕರಣಗಳು ಅಪರೂಪವೇನೂ ಅಲ್ಲ. ಆದರೆ ತಮ್ಮ ಸವಲತ್ತುಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಂಸದರಿಗೆ ಸಂಸತ್ತು ಶಿಕ್ಷೆ ವಿಧಿಸಿದ್ದನ್ನು ಮಾತ್ರ ನಾವು ಕೇಳಿಲ್ಲ.ಗಾಯಕ್‌ವಾಡ್‌ ಪ್ರಕರಣವು ಸಂಸದರ ಪುಂಡಾಟಿಕೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ತೀರಾ ಇತ್ತೀಚಿನದು. ನಮ್ಮ ಸಂಸದರು ಹೇಗೆ ವರ್ತಿಸುತ್ತಾರೆ ಮತ್ತು ಅವರ ದುರ್ನಡತೆಗೆ ಸಂಬಂಧಿಸಿದ ದೂರುಗಳ ಬಗ್ಗೆ ನಮ್ಮ ಸಂಸತ್ತು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರಿಸುವ ಹಳೆಯ ಉದಾಹರಣೆಯೊಂದು ಇಲ್ಲಿದೆ.ಐಎಎಸ್‌ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರ ಜೊತೆ ನವದೆಹಲಿ – ಕಲ್ಕತ್ತಾ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಪ್ರಥಮದರ್ಜೆ ಬೋಗಿಯಲ್ಲಿ 1992ರ ಅಕ್ಟೋಬರ್ 28ರಂದು ಪ್ರಯಾಣಿಸುತ್ತಿದ್ದರು. ಬಿಹಾರದ ಇಬ್ಬರು ಸಂಸದರು ಗೋಮೋಹ್‌ ಮತ್ತು ಧನಬಾದ್‌ ರೈಲ್ವೆ ನಿಲ್ದಾಣಗಳಲ್ಲಿ ಇದೇ ರೈಲು ಹತ್ತಿದರು. ಗೋಮೋಹ್‌ದಲ್ಲಿ ರೈಲು ಹತ್ತಿದ ಸಂಸದನ ಜೊತೆ ಮೂರು ಜನ ಇದ್ದರು. ಅವರಲ್ಲಿ ಇಬ್ಬರು ಸಂಸದನ ಅಂಗರಕ್ಷಕರು, ಇನ್ನೊಬ್ಬ ಸಮವಸ್ತ್ರದಲ್ಲಿದ್ದ ಭದ್ರತಾ ಸಿಬ್ಬಂದಿ.ರೈಲು ಹತ್ತಿದ ಸಂಸದ, ಸೀಟು ಕಾಯ್ದಿರಿಸಿ ಅಲ್ಲಿ ಕುಳಿತಿದ್ದ ಪ್ರಯಾಣಿಕನಿಗೆ ಸೀಟು ಬಿಟ್ಟುಕೊಡುವಂತೆ ಸೂಚಿಸಿದ. ಇದಕ್ಕೆ ಒಪ್ಪದಿದ್ದಾಗ, ಸಂಸದನ ಅಂಗರಕ್ಷಕರು ಪ್ರಯಾಣಿಕನನ್ನು ಹೊಡೆದರು, ಪಿಸ್ತೂಲು ಹೊರತೆಗೆದು ಗುಂಡಿಕ್ಕುವುದಾಗಿ ಬೆದರಿಕೆ ಒಡ್ಡಿದರು. ಧನಬಾದ್‌ ರೈಲ್ವೆ ನಿಲ್ದಾಣದಲ್ಲಿ ಎರಡನೆಯ ಸಂಸದ ರೈಲು ಹತ್ತಿದಾಗ ಈ ಪ್ರಯಾಣಿಕ ಮತ್ತು ಅವನ ಕುಟುಂಬದ ಸದಸ್ಯರು ಮತ್ತೊಮ್ಮೆ ಆಘಾತಕ್ಕೆ ಒಳಗಾದರು.ಈಗ ಈ ಪ್ರಯಾಣಿಕನ ಮೇಲೆ ಹಲ್ಲೆ ನಡೆಸುವ ಸರದಿ ಎರಡನೆಯ ಸಂಸದ ಹಾಗೂ ಅವರ ಜೊತೆ ರೈಲು ಹತ್ತಿದ್ದ ಹತ್ತು ಜನ ಶಸ್ತ್ರಸಜ್ಜಿತ ಬೆಂಬಲಿಗರದ್ದಾಗಿತ್ತು. ಅವರು ಪ್ರಯಾಣಿಕನನ್ನು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಎಸೆಯಲೂ ಯತ್ನಿಸಿದರು.ಈ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾದರೂ, ರೌಡಿಗಳಂತೆ ವರ್ತಿಸಿದ ಸಂಸದರಿಗೆ ಶಿಕ್ಷೆ ವಿಧಿಸಲು ಸಂಸತ್ತು ಏನೂ ಮಾಡಲಿಲ್ಲ. ರೈಲಿನಲ್ಲಿ, ವಿಮಾನದಲ್ಲಿ ಇಂಥ ಹಲವು ಪ್ರಕರಣಗಳು ಇದಾದ ನಂತರ ನಡೆದಿವೆ. ಆದರೆ ಇವುಗಳಲ್ಲಿ ಭಾಗಿಯಾದ ಸಂಸದರಿಗೆ ಶಿಕ್ಷೆಯಾಗಿಲ್ಲ.ನಮ್ಮ ಪ್ರತಿನಿಧಿಗಳ ವಿರುದ್ಧದ ದೂರುಗಳ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಸಂಸದರ ಹಕ್ಕುಗಳ ಬಗ್ಗೆ ಇರುವ ಭ್ರಮೆ ಮತ್ತು ಇದರ ಪರಿಣಾಮವಾಗಿ ನಮ್ಮ ಜನಪ್ರತಿನಿಧಿಗಳು ಹೆಗಲ ಮೇಲೆ ಹೊತ್ತುಕೊಂಡಿರುವ ‘ನಾವು ಪ್ರಮುಖರು’ ಎಂಬ ಆಧಾರರಹಿತ ನಂಬಿಕೆ ಇದಕ್ಕೆ ಕಾರಣ.

ಶಾಸನಸಭೆಗಳ ಸದಸ್ಯರಿಗೆ ಇರುವ ಹಕ್ಕುಗಳು  ಮತ್ತು ಸೌಲಭ್ಯಗಳು ಯಾವುವು ಹಾಗೂ ಅವುಗಳನ್ನು ಏಕೆ ನೀಡಲಾಗಿದೆ ಎಂಬುದರ ಬಗ್ಗೆ ಸಂಸತ್ತು ಮತ್ತು ವಿಧಾನಮಂಡಲಗಳ ಎರಡೂ ಸದನಗಳ ಮುಖ್ಯಸ್ಥರು ಮಾಹಿತಿ ನೀಡಬೇಕು. ಸಂಸದೀಯ ಪ್ರಕ್ರಿಯೆಗಳು ಹಾಗೂ ನಿಯಮಗಳ ಕುರಿತ ಮೂಲ ಪಠ್ಯವನ್ನು ಬರೆದಿರುವ ಎಂ.ಎನ್. ಕೌಲ್ ಮತ್ತು ಎಸ್.ಎಲ್. ಶೆಕ್ದರ್‌ ಅವರು ಈ ವಿಚಾರಗಳ ಬಗ್ಗೆ ಅತ್ಯಂತ ಸತ್ವಯುತವಾಗಿ ಹೇಳಿದ್ದಾರೆ.ಸಂಸತ್ತಿನ ಸ್ವಾತಂತ್ರ್ಯ, ಅಧಿಕಾರ ಮತ್ತು ಘನತೆಯನ್ನು ಕಾಯಲು ಹಕ್ಕುಗಳನ್ನು ನೀಡಲಾಗಿದೆ. ‘ಹಕ್ಕು’ ಎಂದರೆ: ಸಂಸತ್ತಿನ ಎರಡೂ ಸದನಗಳು, ಅವುಗಳ ಸಮಿತಿಗಳು ಮತ್ತು ಸದಸ್ಯರಿಗೆ ಇರುವ ವಿನಾಯಿತಿ ಹಾಗೂ ರಕ್ಷಣೆಗಳು ಎಂದು  ಅವರು ಹೇಳಿದ್ದಾರೆ. ಸಂಸದರು ಸಂಸತ್ತಿನಲ್ಲಿ, ಶಾಸಕರು ವಿಧಾನಸಭೆಗಳಲ್ಲಿ ಅಡ್ಡಿಯಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಭಾಯಿಸಲಿ ಎಂಬ ಉದ್ದೇಶದಿಂದ ಅವರಿಗೆ ಹಕ್ಕುಗಳನ್ನು ನೀಡಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹಕ್ಕುಗಳು ಕ್ರಿಮಿನಲ್‌ ದುರ್ವರ್ತನೆ ತೋರಲು ಇರುವ ಪರವಾನಗಿ ಅಲ್ಲ.ದುರ್ವರ್ತನೆ ತೋರಿದ ಸಂಸದರ ವಿಚಾರದಲ್ಲಿ ಸಂಸತ್ತು ಈ ಹಿಂದೆ ತೀರಾ ಮೃದು ಧೋರಣೆ ಅನುಸರಿಸಿದೆ. ಹಾಗಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ‘ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಮ್ಮನ್ನು ಪ್ರಥಮ ದರ್ಜೆಯಿಂದ ದ್ವಿತೀಯ ದರ್ಜೆ ಬೋಗಿಗೆ ಕಳುಹಿಸಲಾಯಿತು. ಇದರಿಂದಾಗಿ ನಮ್ಮನ್ನು ಕೆಟ್ಟದ್ದಾಗಿ ನೋಡಿಕೊಂಡಂತೆ ಆಯಿತು’ ಎಂದು ಉತ್ತರ ಪ್ರದೇಶ ಮತ್ತು ಬಿಹಾರದ 18 ಸಂಸದರು 2011ರ ಡಿಸೆಂಬರ್‌ನಲ್ಲಿ ದೂರು ನೀಡಿದ್ದರು.

ಸಂಸದರು ತಮಗೆ ಬೇಕಾದಾಗ ರೈಲು ಹತ್ತಿ, ಅಲ್ಲಿರುವ ಪ್ರಯಾಣಿಕರು ತಮಗೆ ಸೀಟು ಬಿಟ್ಟುಕೊಡಬೇಕು ಎಂದು ಬಯಸುತ್ತಾರೆ. ಪ್ರಥಮ ದರ್ಜೆ ಬೋಗಿಯ 22 ಬರ್ತ್‌ಗಳ ಪೈಕಿ ಆರು ಮಾತ್ರ ಖಾಲಿ ಇದ್ದವು, ಅವುಗಳನ್ನು ಸಂಸದರಿಗೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಇನ್ನುಳಿದ ಸಂಸದರಿಗೆ ದ್ವಿತೀಯ ದರ್ಜೆಯ ಸ್ಲೀಪರ್‌ ಬೋಗಿಯಲ್ಲಿ ಅವಕಾಶ ಮಾಡಿಕೊಡಲಾಯಿತು. ಆದರೂ, ಸಚಿವರು ಸಂಸತ್ತಿನಲ್ಲಿ ಈ ಸಂಸದರ ಕ್ಷಮೆ ಯಾಚಿಸಬೇಕಾಯಿತು.ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಸದರು ತೋರಿದ ಜುಗುಪ್ಸೆ ಮೂಡಿಸುವ ವರ್ತನೆಯಿಂದಾಗಿ ಹಿರಿಯ ಪತ್ರಕರ್ತ ನಿಖಿಲ್ ಚಕ್ರವರ್ತಿ ಅವರು ತಮ್ಮ ಅಂಕಣದಲ್ಲಿ ಈ ಪ್ರಶ್ನೆ ಕೇಳಬೇಕಾಯಿತು: ‘ಸಂಸದರು ತಪ್ಪು ಮಾಡಿರುವ ಬಗ್ಗೆ (ಈ ತಪ್ಪು ಸಂಸದರೊಬ್ಬರು ದೇಶದ ಪ್ರಜೆಯಲ್ಲಿ ಭಯ ಮೂಡಿಸುವುದಕ್ಕೆ ಸಮ) ಮಾಹಿತಿ ದೊರೆತ ನಂತರ ಅವರಲ್ಲಿ ಶಿಸ್ತು ಮೂಡಿಸಲು ಪಕ್ಷದ ನಾಯಕರು ಮತ್ತು ಲೋಕಸಭೆಯ ಸ್ಪೀಕರ್‌ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಿದರೆ ಇತರರಲ್ಲಿ ಜ್ಞಾನೋದಯವಾಗುತ್ತಿತ್ತು.ಮಾಡಿರುವ ತಪ್ಪಿಗೆ ಅವರನ್ನು ಪವಿತ್ರ ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಬೇಕಿತ್ತು. ಸೂಕ್ತ ಶಿಕ್ಷೆ ವಿಧಿಸದಿದ್ದರೆ ಇಡೀ ಸಂಸ್ಥೆಗೇ ಅಪಖ್ಯಾತಿ ಮೆತ್ತಿಕೊಳ್ಳುತ್ತದೆ– ಆಗ ಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.’ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. ಈಗ ಸಂಸದರೊಬ್ಬರು ಏರ್‌ ಇಂಡಿಯಾ ಅಧಿಕಾರಿಗೆ ತನ್ನ ಚಪ್ಪಲಿಯಿಂದ 25 ಬಾರಿ ಹೊಡೆದೆ ಎಂದು ಸಾರ್ವಜನಿಕವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ನಿಖಿಲ್‌ ಚಕ್ರವರ್ತಿ ಅವರ ಮಾತುಗಳು ಪ್ರವಾದಿಯೊಬ್ಬನ ಹೇಳಿಕೆಗಳಂತೆ ಕಾಣುತ್ತವೆ. ಸಂಸದರನ್ನು ಆಯ್ಕೆಮಾಡುವ ಜನರ ಹಕ್ಕುಗಳನ್ನು ಸಂಸತ್ತು ಕಾಲು ಶತಮಾನದ ಹಿಂದೆಯೇ ಸಂಸದರ ‘ಹಕ್ಕು’ಗಳಿಗಿಂತ ಮೇಲಿನ ಸ್ತರದಲ್ಲಿ ಇಟ್ಟಿದ್ದಿದ್ದರೆ ಈಗ ಗಾಯಕ್‌ವಾಡ್‌ ಪ್ರಕರಣ ಸಂಭವಿಸುತ್ತಿರಲಿಲ್ಲ.ಬಿಹಾರದ ಸಂಸದರು ಸಂಸತ್ತಿನ ಘನತೆ ಕುಗ್ಗಿಸಿದರು. ಗಾಯಕ್‌ವಾಡ್‌ ಕೂಡ ಈಗ ಅದನ್ನೇ ಮಾಡಿದ್ದಾರೆ. ಸಂಸದರನ್ನು ಶಿಸ್ತಿಗೆ ಗುರಿಪಡಿಸುವುದಕ್ಕಿಂತ ಅಪಖ್ಯಾತಿಯೇ ಲೇಸು ಎಂದು ಸಂಸತ್ತು ಎಷ್ಟು ದಿನ ಭಾವಿಸುತ್ತದೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry