6

ಕೋಟಿ ಮಿದುಳುಗಳ ಬೆಸೆಯುವ ಕೆಲಸ

ನಾಗೇಶ್ ಹೆಗಡೆ
Published:
Updated:
ಕೋಟಿ ಮಿದುಳುಗಳ ಬೆಸೆಯುವ ಕೆಲಸ

ಮರೆಗುಳಿ ಡಾಕ್ಟರ್‌ಗಳ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಆದರೆ ‘ಮರಗಳ ಡಾಕ್ಟರ್’ ಬಗ್ಗೆ ಗೊತ್ತೆ?

ಬೆಂಗಳೂರಿನಲ್ಲಿ ಅಲ್ಲಲ್ಲಿ ಮರಗಳಿಗೆ ರಂಧ್ರ ಕೊರೆದು ಆಸಿಡ್ ತುಂಬುವ ವೃತ್ತಿಪರ ಕೊಲೆಗಡುಕರು ಇದ್ದಾರೆ. ಸುಪಾರಿ ಕೊಟ್ಟರೆ ಎಂಥದ್ದೇ ದೊಡ್ಡ ಮರವನ್ನಾದರೂ ಎರಡು ವಾರಗಳಲ್ಲಿ ಒಣಗಿಸಬಲ್ಲ ದುರುಳರು ಇವರು. ದಷ್ಟಪುಷ್ಟ ಮರ ಒಣಗುತ್ತಿದೆಯೆಂದು ದಾರಿಹೋಕರು ದೂರು ಕೊಟ್ಟರೆ ಚಿಕಿತ್ಸೆ ನೀಡಲು ‘ಟ್ರೀ ಡಾಕ್ಟರ್’ ಧಾವಿಸಿ ಬರುತ್ತಾರೆ. ಮರದ ಕಾಂಡವನ್ನು ಕೂಲಂಕಷ ಪರೀಕ್ಷಿಸಿ ಆಸಿಡ್ ರಂಧ್ರವನ್ನು ಗುರುತಿಸಿ, ಗಾಯವನ್ನು ತೊಳೆದು, ಔಷಧ ತುಂಬಿ, ಕ್ಷಾರದ ಮುಲಾಮು ಸವರುತ್ತಾರೆ. ದೂರು ಕೊಟ್ಟವರಿಗೆ ಧನ್ಯವಾದ ಹೇಳಿ ಯಾವ ಶುಲ್ಕವನ್ನೂ ಪಡೆಯದೆ ಬೈಕ್ ಹತ್ತಿ ಹೊರಡುತ್ತಾರೆ. ಆಗಾಗ ಬಂದು ಅದೇ ಮರದ ಸ್ಥಿತಿಯ ಅಧ್ಯಯನ ವರದಿ ತಯಾರಿಸಿ ತಮ್ಮದೇ ಅಂತರಜಾಲ ಪುಟಗಳಿಗೆ ಸೇರಿಸುತ್ತಾರೆ.

ಇವರು ಅಪ್ಪಟ ವಿಜ್ಞಾನಿಗಳೇನಲ್ಲ. ಸಂಬಳ ಪಡೆಯುವ ಅರಣ್ಯರಕ್ಷಕರೂ ಅಲ್ಲ; ಆದರೆ ಸಾಮಾಜಿಕ ಕಾಯಿಲೆಗಳಿಗೆ ಮುಲಾಮು ಹಚ್ಚಬೇಕೆಂಬ ಸ್ವಯಂ ಪ್ರೇರಣೆಯಿಂದ ವಿಜ್ಞಾನದ ಅಆಇಈ ಕಲಿತವರು. ಹೆಚ್ಚಿನ ಮಾಹಿತಿಗಾಗಿ ಆಗಾಗ ತಜ್ಞ ವಿಜ್ಞಾನಿಗಳನ್ನು ಕಾಡುತ್ತ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವವರು. ಇಂಥವರಿಗೆ ಜನವಿಜ್ಞಾನಿಗಳು (ಸಿಟಿಝನ್ ಸೈಂಟಿಸ್ಟ್) ಎನ್ನುತ್ತಾರೆ. ಅವರ ಕೊಡುಗೆ ಸಮಾಜಕ್ಕೆ, ವಿಜ್ಞಾನ ರಂಗಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು ಅಂಥ ಉದಾಹರಣೆಗಳನ್ನು ನೋಡೋಣ:

ಅಂತರಜಾಲದಲ್ಲಿ ಪ್ಲಾನೆಟ್‌ಫೋರ್ planetfour.org  ಎಂಬ ತಾಣ ಇದೆ. ಸೂರ್ಯನಿಂದ ನಾಲ್ಕನೆಯ ಗ್ರಹ ಎನಿಸಿದ ಮಂಗಳನ ನೆಲದ ಸಮೀಕ್ಷೆ ಮಾಡುವ ಕೆಲಸ ಇದರದ್ದು. ತಾಣವನ್ನು ತೆರೆದರೆ ಉಪಗ್ರಹವೊಂದು ಮಂಗಳಕ್ಕೆ ತೀರ ಸಮೀಪದಲ್ಲಿ ಸುತ್ತುತ್ತಿರುವ ದೃಶ್ಯವಿದೆ. ಮಂಗಳ ನೆಲದ ಚಿತ್ರವನ್ನು ಹಿಗ್ಗಿಸಿ, ಇನ್ನೂ ದೊಡ್ಡದಾಗಿ ಹಿಗ್ಗಿಸಿ, ಮೇಜಿನಗಲದ ಭಾಗವನ್ನು ಬಾಚುತ್ತ ಆ ಕೆಂಪುಗ್ರಹದ ವೈಚಿತ್ರ್ಯಗಳನ್ನು ನೋಡುತ್ತ ದಾಖಲಿಸುತ್ತ ಹೋಗಬೇಕು. ವಿಜ್ಞಾನಿಗಳೇ ಆ ಕೆಲಸವನ್ನು ಮಾಡುತ್ತ ಕೂತರೆ  ಇಡೀ ಮಂಗಳನ ನಕ್ಷೆಯನ್ನು ರೂಪಿಸಲು ನೂರಾರು ತಜ್ಞರಿಗೆ ನೂರಾರು ವರ್ಷಗಳೇ ಬೇಕು. ಆ ಕೆಲಸವನ್ನು ಈಗ ಲಕ್ಷೋಪಲಕ್ಷ ಜನವಿಜ್ಞಾನಿಗಳು ಒಟ್ಟಾಗಿ ಮಾಡುತ್ತಿದ್ದಾರೆ. ಮಂಗಳನೆಲದ ನಾನಾ ಬಗೆಯ ಲಕ್ಷಣಗಳ ವೀಕ್ಷಕ ವರದಿ ನೀಡುತ್ತಿದ್ದಾರೆ. ಜೇಡರ ಕಣಿವೆಯಂತೆ, ಇಂಕಾ ನಗರವಂತೆ, ಬೀಸಣಿಕೆ ದಿಬ್ಬವಂತೆ, ಉಲ್ಕಾ ಕೊಳ್ಳವಂತೆ... ಅವನ್ನೆಲ್ಲ ಗುರುತಿಸಲು ವಿಶೇಷ ಜ್ಞಾನವೇನೂ ಬೇಕಾಗಿಲ್ಲ. ಜಾಲತಾಣದಲ್ಲಿ ನೀಡಲಾದ ಸರಳ ಸೂಚನೆಗಳನ್ನು ಪಾಲಿಸಿದರೆ ಆಮೇಲೆಲ್ಲ ಕುತೂಹಲ, ತನ್ಮಯತೆ ಎರಡೇ ಸಾಕು. ಹಿಂದೆ ಬ್ರಿಟಿಷರು ಕುದುರೆ ಸವಾರಿಯಲ್ಲಿ ಭಾರತದ ತುಂಬೆಲ್ಲ ಓಡಾಡಿ ನೆಲವನ್ನೆಲ್ಲ ಅಳೆದು ಸರ್ವೆ ನಂಬರ್ ಕೊಟ್ಟ ಹಾಗೆ ಈಗ ವಿವಿಧ ದೇಶಗಳಲ್ಲಿ ಹವ್ಯಾಸಿಗಳು ಕಂಪ್ಯೂಟರ್ ಮೌಸ್ ಹಿಡಿದು ಮಂಗಳನ ನಕಾಶೆ ತಯಾರಿಸುತ್ತಿದ್ದಾರೆ.

ಅದಕ್ಕಿಂತ ಕುತೂಹಲಕಾರಿ ತಾಣವೆಂದರೆ ಐವೈಯರ್ eyewire.org. ಇದರಲ್ಲಿ ಮೋಜಿನ ಆಟವಾಡುತ್ತಲೇ ವಿಜ್ಞಾನಿಗಳಿಗೆ ನೆರವಾಗಬಹುದು. ನಮ್ಮ ಮಿದುಳಿನಲ್ಲಿ ಕಮ್ಮಿ ಎಂದರೂ 8500 ಕೋಟಿ ನರಕೋಶಗಳಿವೆ. ಅವು ಒಂದು ಲಕ್ಷ ಶತಕೋಟಿ (ಒಂದರ ಮುಂದೆ 14 ಸೊನ್ನೆ ಇಟ್ಟಷ್ಟು) ಸಂಪರ್ಕಬಿಂದುಗಳ ಮೂಲಕ ನರಮಂಡಲ ಜಾಲವನ್ನು ನಿರ್ಮಿಸಿಕೊಂಡು ಸಂದೇಶ ರವಾನೆ ಮಾಡುತ್ತಿರುತ್ತವೆ. ಅವುಗಳ ನಕ್ಷೆ ತಯಾರಿಸಿ ಸೂಪರ್ ಕಂಪ್ಯೂಟರಿಗೆ ಕೊಟ್ಟರೆ ನಮ್ಮ ಅದ್ಭುತ ಮಿದುಳಿನ ಸಂಪೂರ್ಣ ಚಿತ್ರಣ ನಮಗೇ ಸಿಕ್ಕಂತಾಗುತ್ತದೆ. ಕವಿಗಳು, ಅಂಧರು, ದಡ್ಡರು, ಇಚ್ಚಿತ್ತ ರೋಗಿಗಳು, ಯೋಗಿಗಳು, ಜೂಜುಕೋರರು, ಕಲಾವಿದರು, ಗಣಿತ ತಜ್ಞರು, ಚಟದಾಸರು, ಶಿಶುಕಾಮಿಗಳು, ಭ್ರಮಾಧೀನರು, ಸುಳ್ಳುಗಾರರು- ಹೀಗೆ ಯಾರದೇ ಮಿದುಳನ್ನು ಸ್ಕ್ಯಾನ್ ಮಾಡಿ ಎಲ್ಲಿ ಯಾವ ಭಾಗದ ನರಕೋಶಗಳು ಭಿನ್ನವಾಗಿ ವರ್ತಿಸುತ್ತಿವೆ ಎಂಬುದರ ನೇರ ಚಿತ್ರಣವನ್ನು ಕರಾರುವಾಕ್ಕಾಗಿ ಪಡೆಯಬಹುದು. ಅದರ ಪ್ರಯೋಜನ ಯಾರಿಗೆ ಮುಂದೆ ಹೇಗೆ ಆಗಲಿದೆ ಎಂಬುದು ಬೇರೆ ವಿಷಯ. ನರಮಂಡಲದ ಅಂಥ ಚಿತ್ರಣವನ್ನು ಪಡೆಯುವ ದಿಕ್ಕಿನಲ್ಲಿ ವಿಜ್ಞಾನರಂಗದಲ್ಲಿ ಭಾರೀ ಆಸಕ್ತಿ ಮೂಡಿದೆ.

ಇಲ್ಲೂ ಅಷ್ಟೆ: ಅಷ್ಟೊಂದು ನರಕೋಶಗಳ ಸರ್ವೆ ಮಾಡಲು ವಿಜ್ಞಾನಿಗಳಿಗೆ ಲಕ್ಷಗಟ್ಟಲೆ ವರ್ಷ ಬೇಕು. ಅದರ ಬದಲು ಕಂಪ್ಯೂಟರ್ ಮುಂದೆ ಆಕಳಿಸುತ್ತ ಕೂತಿರುವ ಜನರೆಲ್ಲ ಆಟದ ರೂಪದಲ್ಲಿ ನರಕೋಶಗಳನ್ನು ಜೋಡಿಸುತ್ತ ಹೋದರೆ? ಅದಕ್ಕೆಂದೇ ಮೊದಲು ಮಿದುಳಿನ ಒಂದು ಚಿಕ್ಕಭಾಗದ (ಕಣ್ಣಿನ ಅಕ್ಷಿಪಟಲದ) ನರಕೋಶಗಳ ಜಾಲದ ನಕ್ಷೆಯನ್ನು ಬಿಡಿಸುವ ಆಟವೊಂದನ್ನು ರೂಪಿಸಲಾಗಿದೆ. ಅಮೆರಿಕದ ಪ್ರತಿಷ್ಠಿತ ಎಮ್‌ಐಟಿ ಮತ್ತು ಪ್ರಿನ್ಸ್‌ಟನ್ ವಿಜ್ಞಾನಿಗಳು ಕಣ್ಣಿನ ನರಮಂಡಲದ ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಚಿತ್ರ ತೆಗೆದು ಅದರ ಥ್ರೀಡಿ ಕೊಂಡಿಗಳನ್ನು ಆಟದ ರೂಪದಲ್ಲಿ ನೀಡಿದ್ದಾರೆ. ಈ eyewire ಆಟದಲ್ಲಿ ಸದ್ಯಕ್ಕೆ 133 ದೇಶಗಳ 70 ಸಾವಿರ ಜನರು ಪಾಲ್ಗೊಂಡಿದ್ದಾರೆ. ಆಗಾಗ ಅವರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರುತ್ತದೆ. ಒಬ್ಬೊಬ್ಬರು ಒಂದೊಂದು ಆಟವನ್ನು ಗೆದ್ದಾಗಲೆಲ್ಲ, ಸೂಪರ್ ಕಂಪ್ಯೂಟರಿನಲ್ಲಿ ನರಕೋಶದ ಒಂದೊಂದು ಕೊಂಡಿಯ ಒಳರಚನೆ ಸ್ಪಷ್ಟವಾಗಿ ಮೂಡುತ್ತ ಹೋಗುತ್ತಿದೆ. ಆಟ ಗೆದ್ದವರಿಗೆ ಅಂಕಗಳು ಸಿಗುತ್ತವೆ. ಅಜ್ಜ-ಅಜ್ಜಿಯರಿಂದ ಹಿಡಿದು ಹೈಸ್ಕೂಲ್ ವಿದ್ಯಾರ್ಥಿಗಳೂ ಆಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಅಷ್ಟೊಂದು ಮಾನವ ಮಿದುಳುಗಳು ಏಕತ್ರಗೊಂಡು ಮಿದುಳಿನ ನಿಗೂಢವನ್ನು ಬಿಚ್ಚಿನೋಡಲು ಹೊರಟಂತಾಗಿದೆ. ಇಂಟರ್‌ನೆಟ್ ಸಂಪರ್ಕ ಚೆನ್ನಾಗಿದ್ದರೆ ನೀವೂ ಈ ಆಟದಲ್ಲಿ ಪಾಲ್ಗೊಳ್ಳಬಹುದು. ಒಂದು ಮಹಾನ್ ಸಂಶೋಧನೆಗೆ ನೆರವಾಗಬಹುದು.

ನಮ್ಮೊಳಗಿನ ಬ್ರಹ್ಮಾಂಡವನ್ನು ನೋಡಿದರೆ ಸಾಕೆ? ಇಡೀ ವಿಶ್ವಕ್ಕೇ ಪ್ರಜ್ಞೆ ಇದೆ ಎಂದು ಪರಿಭಾವಿಸಿದರೆ ಆಚಿನ ಆ ಲೋಕವನ್ನೂ ಅರ್ಥ ಮಾಡಿಕೊಳ್ಳಬೇಕಲ್ಲ? ಅದಕ್ಕೂ ‘ಝೂನಿವರ್ಸ್’ ಹೆಸರಿನ ಒಂದು ಜಾಲತಾಣವನ್ನು ಸೃಷ್ಟಿಸಲಾಗಿದೆ. ಯಾರು ಬೇಕಾದರೂ ಆಕಾಶದ ಒಂದೊಂದೇ ಉದ್ದಿನ ಕಾಳಿನಷ್ಟು ಜಾಗವನ್ನು ಆಯ್ದುಕೊಂಡು, ಆ ಭಾಗದ ನಕ್ಷತ್ರಗಳನ್ನು ವರ್ಗೀಕರಿಸಬಹುದು. ತಾರಾಶರಧಿಯ ಆ ಆಳದಲ್ಲಿ ಜೀವಿಗಳಿರುವ ಗ್ರಹವೇನಾದರೂ ಸಿಕ್ಕರೆ ನಿಮಗೆ ಲಾಟರಿ ಹೊಡೆದಂತೆ. zooniverse.org ತಾಣದಲ್ಲಿ ಭಾಷೆ, ಚರಿತ್ರೆ, ಜೀವವಿಜ್ಞಾನ, ಕಲೆ, ಔಷಧ, ಪ್ರಕೃತಿ, ಪುರಾತತ್ವ, ಹವಾಗುಣ ಹೀಗೆ 56 ಬಗೆಯ ಜನವಿಜ್ಞಾನ ಯೋಜನೆಗಳಲ್ಲಿ ಭಾಗಿಯಾಗಲು ಅವಕಾಶಗಳಿವೆ.

ಈಗೊಂದು ಸ್ವಾರಸ್ಯದ ತಾಜಾ ಕತೆಯತ್ತ ಬರೋಣ. ನಿಮ್ಮ ಕೈಯಲ್ಲಿ ಮೊಬೈಲ್ ಇರಬೇಕಲ್ಲ? ಅದರಿಂದ ಡೆಂಗೇ, ಚಿಕುನ್‌ಗುನ್ಯ, ಮಲೇರಿಯಾ ಇತ್ಯಾದಿ ರೋಗಗಳ ನಿಯಂತ್ರಣವೂ ಸಾಧ್ಯವಾದೀತು, ಹೇಗೆ ಗೊತ್ತೆ? ಸೊಳ್ಳೆಗಳಲ್ಲಿ 3500 ಪ್ರಭೇದಗಳಿವೆ. ಅವುಗಳಲ್ಲಿ ಕೆಲವೇ ಕೆಲವು ಮಾತ್ರ ರೋಗ ತರುತ್ತವೆ. ಯಾವ ಊರಿನಲ್ಲಿ ಯಾವ ಸೊಳ್ಳೆಯ ಹಾವಳಿ ಹೆಚ್ಚಿದೆ ಎಂಬುದು ಗೊತ್ತಾದರೆ ಆಯಾ ರೋಗಕ್ಕೆ ಪ್ರತಿಬಂಧಕ ವ್ಯವಸ್ಥೆ ಮಾಡಬಹುದು. ನಮ್ಮ ಪಕ್ಕದ ಕೊಳಕು ನೀರಿನಲ್ಲಿ ಯಾವ ಸೊಳ್ಳೆಗಳು ಹುಟ್ಟುತ್ತಿವೆ ಎಂದು ಗೊತ್ತಾಗುವುದು ಹೇಗೆ? ಊರೂರಿನ ಸೊಳ್ಳೆಗಳನ್ನು ಹಿಡಿದು ಲ್ಯಾಬಿಗೆ ಹೋಗಿ ಸೂಕ್ಷ್ಮದರ್ಶಕದಲ್ಲಿ ನೋಡುವುದರಲ್ಲಿ ವಾರವೇ ಕಳೆದಿರುತ್ತದೆ. ಅಷ್ಟರಲ್ಲಿ ಬೇರೆ ಜಾತಿಯ ಸೊಳ್ಳೆ ಹುಟ್ಟಬಹುದು. ಇತ್ತೀಚೆಗೆ ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯ ಹರಿಪ್ರಿಯಾ ಮುಕುಂದರಾಜನ್ ಎಂಬ ಜೀವವಿಜ್ಞಾನಿಗೆ ಹೊಸ ಐಡಿಯಾ ಹೊಳೆಯಿತು. ಸೊಳ್ಳೆಯ ‘ಗುಂಯ್’ ಸದ್ದಿನ ಮೂಲಕವೇ ಅದರ ಜಾತಿ ಯಾವುದೆಂದು ಗುರುತಿಸುವಲ್ಲಿ ಯಶಸ್ವಿಯಾದರು. ಸೊಳ್ಳೆಯ ಸದ್ದನ್ನು ರೆಕಾರ್ಡ್ ಮಾಡಲು ಹೈಟೆಕ್ ಸಾಧನಗಳೊಂದಿಗೆ ಏಗುತ್ತ, ಕೊನೆಗೆ ತಮ್ಮ ಸೆಲ್‌ಫೋನನ್ನೇ ಸೊಳ್ಳೆಗಳ ಗೂಡಿನೊಳಕ್ಕೆ ತೂರಿಸಿ ರೆಕಾರ್ಡ್ ಮಾಡಿದರು. ಅವರಿಗೇ ಅಚ್ಚರಿ ಆಗುವಂತೆ ಸುಸ್ಪಷ್ಟ ಧ್ವನಿಗ್ರಹಣ ಸಾಧ್ಯವಾಯಿತು. ಹೇಳಿಕೇಳಿ ಅವರು ಮನು ಪ್ರಕಾಶ್ ಶಿಷ್ಯೆ. ಅರ್ಧ ಡಾಲರ್ ವೆಚ್ಚದಲ್ಲಿ ರಟ್ಟಿನ ಮೈಕ್ರೊಸ್ಕೋಪ್ ತಯಾರಿಸಿ, ಅದರರ್ಧ ವೆಚ್ಚದಲ್ಲಿ ರಕ್ತ ಪರೀಕ್ಷೆಯ ಗಿರಗಿಟ್ಟೆಯನ್ನು ಸೃಷ್ಟಿಸಿ ಪ್ರಚಂಡ ಖ್ಯಾತಿಯನ್ನೂ ಆರೂಕಾಲು ಲಕ್ಷ ಡಾಲರ್‌ಗಳ ಪ್ರತಿಷ್ಠಿತ ಮೆಕ್‌ಆರ್ಥರ್ ಜೀನಿಯಸ್ ಅನುದಾನವನ್ನೂ ಗಳಿಸಿದ ಭಾರತೀಯ ಯುವಕ ಮನು ಪ್ರಕಾಶ್.

ಗುರು ಶಿಷ್ಯೆ ಇಬ್ಬರೂ ಸೇರಿ ವಿವಿಧ ಕಂಪನಿಗಳ ಫೋನ್‌ಗಳನ್ನು ಪರೀಕ್ಷಿಸಿದರು. ಲಡಕಾಸಿ ಫೋನ್‌ನಲ್ಲೂ ಧ್ವನಿಗ್ರಹಣ ಸಾಧ್ಯವೆಂದು ಕಂಡುಕೊಂಡರು. ರೆಕಾರ್ಡಿಂಗ್ ಕೂಡ ಸುಲಭ. ಮೊಬೈಲಿನ ರೆಕಾರ್ಡಿಂಗ್ ಐಕಾನನ್ನು ಒತ್ತಿ ಅಲ್ಲೆಲ್ಲೋ ತಟಸ್ಥ ಕೂತ ಸೊಳ್ಳೆಯ ಸಮೀಪಕ್ಕೆ ಒಯ್ದರೆ ಸಾಕು. ಸೊಳ್ಳೆ ಹಾರಿ ಹೋಗುವಾಗ ರೆಕ್ಕೆ ಬಡಿತದ ಸದ್ದು ಹೊಮ್ಮುತ್ತದೆ- ಆ ಅರೆಕ್ಷಣದ ದಾಖಲೆಯನ್ನು ವಾಟ್ಸಾಪ್ ಮೂಲಕ ಕೇಂದ್ರ ಕಚೇರಿಗೆ ಕಳಿಸಿಬಿಡಿ. ಒಂದು ಊರಿನ ನೂರಿಪ್ಪತ್ತು ಜನರಿಂದ ಇಂಥ ಸಂದೇಶಗಳು ಬಂದರೆ ಕಂಪ್ಯೂಟರಿನಲ್ಲಿ ಆ ಊರಿನ ಸೊಳ್ಳೆ ಸೈನ್ಯದ ಕುಲಗೋತ್ರದ ಚಿತ್ರಣ ಮೂಡುತ್ತದೆ. ಸೊಳ್ಳೆ ಕೂತಲ್ಲಿ ಮೊಬೈಲ್ ಒತ್ತಿದವರೆಲ್ಲ ಜನವಿಜ್ಞಾನಿಗಳಾಗುತ್ತಾರೆ. ಒಂದು ದೊಡ್ಡ ಸಮಸ್ಯೆಯ ಪರಿಹಾರಕ್ಕೆ ತಮ್ಮ ಕೊಡುಗೆ ನೀಡುತ್ತಾರೆ (ಸೊಳ್ಳೆಗಳ ಜಾತಿಸಮೀಕ್ಷೆ ಅಮೆರಿಕದಲ್ಲಿ ಕಳೆದ ವಾರವಷ್ಟೇ ಆರಂಭವಾಗಿದೆ, ಇಲ್ಲಿಗಿನ್ನೂ ಬಂದಿಲ್ಲ).

ಇಲ್ಲಿ ನಮ್ಮ ನೆಲದಲ್ಲಿ ಜನವಿಜ್ಞಾನಿಗಳ ಬೇರೆ ಕತೆಗಳಿವೆ. ಮರಗಳ ಡಾಕ್ಟರ್ ಎನ್ನಿಸಿಕೊಂಡ ಬೆಂಗಳೂರಿನ ವೃಕ್ಷ ಡಾಟ್‌ಕಾಮ್ ಬಳಗದ ವಿಜಯ್ ನಿಶಾಂತ್ ತಂಡ ಜಯನಗರದಲ್ಲಿ ಪ್ರತಿಯೊಂದು ಮರಕ್ಕೂ  ಆಧಾರ್ ಮಾದರಿಯ ಗುರುತಿನ ಚೀಟಿ ತಯಾರಿಸಿ ನೆಟ್‌ಗೆ ಹಾಕಿದೆ. ಢೋಂಗಿ ವಾಸ್ತುತಜ್ಞರು ಅಲ್ಲಿನ ಯಾರದೇ ಮನೆಯ ಮುಂದಿನ ಮರವನ್ನು ತೆಗೆಸುವುದು ಈಗ ಸುಲಭವಲ್ಲ. ವಿಜ್ಞಾನಿಗಳ ನೆರವಿನಿಂದಲೇ ನಡೆಯುತ್ತಿರುವ ಸೀಸನ್‌ವಾಚ್ ಮತ್ತು  ಹವ್ಯಾಸಿ ಪಕ್ಷಿವೀಕ್ಷಕರ ಇಬರ್ಡ್ (ebird.org) ಜಾಲತಾಣದಲ್ಲಿ ಏಳು ಸಾವಿರ ಸದಸ್ಯರಿದ್ದಾರೆ. ದಕ್ಷಿಣ ಕೊರಿಯಾ, ಬ್ರಿಟನ್‌ನಂಥ ಪುಟ್ಟ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ನೂರು ಕೋಟಿ ಮೊಬೈಲ್ ಬಳಕೆದಾರರಿದ್ದರೂ ಜನವಿಜ್ಞಾನಿಗಳ ಸಂಖ್ಯೆ ತೀರ ಕಡಿಮೆ ಇದೆ.   

ಆದರೂ ಶಿರಸಿಯ ಬಳಿಯ ಹುಲೇಮಳಗಿ ಊರಿನ ಯುವಕರು ಕಳೆದ 30 ವರ್ಷಗಳಿಂದ ತಮ್ಮ ಊರಿನ ಮಳೆ ದಾಖಲೆ ಇಟ್ಟಿರುವುದು, ಉಡುಪಿಯ ಉರಗತಜ್ಞ ಸನಿಲ್ ಮತ್ತು ಗೆಳೆಯರು ಮನೆಮನೆಗೆ ಹೋಗಿ ಅಲ್ಲಿಗೆ ಸೂಕ್ತವೆನಿಸಿದ ಗಿಡಗಳನ್ನು ಉಚಿತ ನೆಟ್ಟು ದಾಖಲೆ ಇಟ್ಟಿರುವುದು, ವಿಜ್ಞಾನದ ಪರಿಣತಿ ಇಲ್ಲದವರು ತಲ್ಲೂರಿನ ಕೆರೆ ಸುತ್ತ ಮಣ್ಣುಗುಣ, ಕಂಟೂರ್ ಬಂಡಿಂಗ್, ಟ್ರೀಲೈನ್, ಭೂಗತ ಜಲರೇಖೆ ಬಗ್ಗೆ ಚರ್ಚಿಸುತ್ತ ಬೋಳು ಬಯಲನ್ನು ಸುತ್ತುವುದು- ಇವೆಲ್ಲ ಸ್ವಸ್ಥ ಸಮಾಜದ ಕಣ್ಣು, ಕಿವಿ, ಕೈಗಳಂತೆ ಕಾಣುತ್ತವೆ ತಾನೆ?   

‘ಇಂದಿನ ಯುವಜನಾಂಗ ಸಿನಿಮಾ ನಟರನ್ನು, ಸಂಗೀತಗಾರರನ್ನು ಅನುಕರಣೆ ಮಾಡುವಷ್ಟೇ ಉತ್ಸಾಹದಿಂದ ವಿಜ್ಞಾನಿಗಳ ಅನುಕರಣೆ ಮಾಡಿದ್ದಿದ್ದರೆ ಅದನ್ನು ಎಷ್ಟೆತ್ತರಕ್ಕೆ ಕೊಂಡೊಯ್ಯಬಹುದಿತ್ತು’ ಎಂದು ಭೌತವಿಜ್ಞಾನಿ ಬ್ರಯನ್ ಗ್ರೀನ್ ನಮ್ಮ ದೇಶದ ಎಳೆಯರ ಕುರಿತೇ ಹೇಳಿದಂತಿದೆ. ಅಜ್ಞಾನ ಎಳೆಯರದಲ್ಲ. ಜನವಿಜ್ಞಾನದ ನಾನಾ ರೂಪಗಳನ್ನು ತೋರಿಸಬೇಕಾದ ಶಿಕ್ಷಕರ ಮಾರ್ಗದರ್ಶನ ಅವರಿಗೆ ಸಿಗಬೇಕಿದೆ. ಶಿಕ್ಷಕರಿಗಾಗಿಯೇ ಜನವಿಜ್ಞಾನ ಕುರಿತು ಬೇಸಿಗೆ ಶಿಬಿರ ಏರ್ಪಡಿಸೋಣವೆ?

ಕೈಯಲ್ಲಿ ಮೊಬೈಲ್ ಮತ್ತು ಮೊಬೈಲ್‌ನಲ್ಲಿ ಅಂತರಜಾಲ ಸಂಪರ್ಕ ಇದ್ದರೆ ಸಾಕು ವಿರಾಟ್ ವಿಶ್ವವನ್ನೇ ನಮ್ಮ ಮಿದುಳಿನಲ್ಲಿ ಅನಾವರಣ ಮಾಡುವ ಅವಕಾಶ ನಮ್ಮೆದುರು ಇದೆ. ಜೋಕು, ಲೈಕು, ಸೆಲ್ಫಿಗಳಿಂದ ತುಸು ಬಿಡುವು ಸಿಗಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry