ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ್ತೂರಿರಂಗನ್‌ ವರದಿ ಮಲೆನಾಡಿಗೆ ಮಾರಕ’

Last Updated 6 ಏಪ್ರಿಲ್ 2017, 4:45 IST
ಅಕ್ಷರ ಗಾತ್ರ

ಸಾಗರ: ಕಸ್ತೂರಿರಂಗನ್‌ ವರದಿಯ ಅಂಶಗಳು ಮಲೆನಾಡಿನ ಜನರ ಸಹಜ ಬದುಕನ್ನು ಕಿತ್ತುಕೊಳ್ಳುತ್ತಿದ್ದು, ಅವರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಹೇಳಿದರು.

ಇಲ್ಲಿನ ಮಲೆನಾಡು ರೈತ ಹಾಗೂ ಕೂಲಿಕಾರ್ಮಿಕರ ಹೋರಾಟ ವೇದಿಕೆ ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಹೊಳೆಬಾಗಿಲಿನಿಂದ ಸಾಗರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಶ್ಚಿಮಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ, ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಈಗಾಗಲೇ ಶರಾವತಿ ಜಲ ವಿದ್ಯುತ್‌ ಯೋಜನೆಗಾಗಿ ಇಲ್ಲಿನ ಜನ ಸಾಕಷ್ಟು ತ್ಯಾಗ ಮಾಡಿದ್ದಾರೆ. ಪರಿಸರದ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುವುದು ನಿಲ್ಲಬೇಕು ಎಂದು ಹೇಳಿದರು.

ಮಲೆನಾಡು ರೈತ ಹಾಗೂ ಕೂಲಿಕಾರ್ಮಿಕರ ಹೋರಾಟ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ‘ಕಸ್ತೂರಿರಂಗನ್‌ ವರದಿ ಹೆಸರಿನಲ್ಲಿ ಮಲೆನಾಡಿನ ಜನರ ಬದುಕನ್ನು ಅತಂತ್ರಗೊಳಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಪಕ್ಷಭೇದ ಮರೆತು ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಬೇಕಿದೆ’ ಎಂದರು.

ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆಯ ತಪ್ಪು ನೀತಿಯಿಂದ ಕಾಡು ನಾಶವಾಗಿದೆ. ಮಲೆನಾಡಿನಲ್ಲಿ ಏನಾದರೂ ಕಾಡುಗಳು ಉಳಿದು ರಕ್ಷಣೆಯಾಗಿದ್ದರೆ ಅದಕ್ಕೆ ಇಲ್ಲಿನ ಕೃಷಿಕರೇ ಕಾರಣ. ಈಗ ಕೃಷಿಕರ ಬದುಕಿಗೂ ಕಸ್ತೂರಿರಂಗನ್‌ ವರದಿ ಹೆಸರಿನಲ್ಲಿ ಸಂಚಕಾರ ತರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಪ್ಪ ಮಾತನಾಡಿ, ‘ಕಸ್ತೂರಿರಂಗನ್ ವರದಿಯ ಅನೇಕ ಅಂಶಗಳು ಅವೈಜ್ಞಾನಿಕವಾಗಿವೆ. ವರದಿ ವ್ಯಾಪ್ತಿಗೆ ಬರುವ ಗ್ರಾಮಗಳ ಜನರ ನ್ನಾಗಲೀ, ಜನಪ್ರತಿನಿಧಿಗಳನ್ನಾಗಲೀ ಸಂಪರ್ಕಿಸದೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ. ಈ ವರದಿ ಜಾರಿಗೆ ಬಂದರೆ ಮಲೆನಾಡಿನ ಜನರು ಹಲವು ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ಹೊಳೆಬಾಗಿಲಿನಿಂದ ಹೊರಟ ಪಾದಯಾತ್ರೆ ಆವಿನಹಳ್ಳಿ ತಲುಪಿದ್ದು, ಗುರುವಾರ ಬೆಳಿಗ್ಗೆ 8ಕ್ಕೆ ಆವಿನಹಳ್ಳಿ ಯಿಂದ ಸಾಗರಕ್ಕೆ ಬರಲಿದೆ ಎಂದು ಪಾದಯಾತ್ರೆಯ ಸಂಘಟಕರು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌, ತಾಲ್ಲೂಕು ಪಂಚಾಯ್ತಿ ಸದಸ್ಯೆ ಸವಿತಾ ದೇವರಾಜ್‌, ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ, ಸಂಕಣ್ಣ ಶಾನಭಾಗ್‌ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ರಮಣ್ಯ ಭಟ್, ಬಿ.ಎ.ಇಂದೂಧರ ಗೌಡ, ರವಿ ಸಿಗಂದೂರು, ನವೀನ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT