3

ಕುತೂಹಲ ಕೆರಳಿಸುತ್ತಿದೆ ರಾಜ್ಯ ರಾಜಕೀಯ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಕುತೂಹಲ ಕೆರಳಿಸುತ್ತಿದೆ ರಾಜ್ಯ ರಾಜಕೀಯ

ರಾಜಕೀಯದಲ್ಲಿ ಒಂದು ವರ್ಷ ಎನ್ನುವುದು ತುಂಬ ಸುದೀರ್ಘವಾದದ್ದು ಎಂದು ಕೆಲವರು ಹೇಳುತ್ತಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಸದ್ಯಕ್ಕೆ  ಐದು ವರ್ಷಗಳ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಇದೆ. ಮುಂಬರುವ ಹನ್ನೆರಡು ತಿಂಗಳಲ್ಲಿ ಅದರಲ್ಲೂ ವಿಶೇಷವಾಗಿ ಮುಂದಿನ ಚುನಾವಣಾ ವರ್ಷದಲ್ಲಿ ರಾಜ್ಯ ರಾಜಕೀಯ ಭೂಪಟದಲ್ಲಿ ಏನೆಲ್ಲಾ ವಿದ್ಯಮಾನಗಳು ಘಟಿಸಬಹುದು ಎನ್ನುವ ನಿರೀಕ್ಷೆ ಮತ್ತು ಅನುಮಾನಗಳು ಗರಿಗೆದರುತ್ತಿವೆ.ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ, ಹತ್ತಾರು ಕಾರಣಗಳಿಗೆ ಕರ್ನಾಟಕದ ಮೇಲೆ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ.  ಕರ್ನಾಟಕಕ್ಕೂ ಮುಂಚೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದರೂ, ರಾಜಕೀಯ ಕಾರಣಗಳಿಗೆ ಕರ್ನಾಟಕದ ಚುನಾವಣೆಯು ಹೆಚ್ಚು ಮಹತ್ವ ಪಡೆಯಲಿದೆ.2014ರ ಲೋಕಸಭಾ ಚುನಾವಣೆ ನಂತರ, ಬಿಜೆಪಿಯು ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದ ಮಹಾರಾಷ್ಟ್ರ, ಹರಿಯಾಣ ಅಥವಾ ಅಸ್ಸಾಂ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿ ಬೀಗುತ್ತಿದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಕೋಟೆಯನ್ನೂ ವಶಕ್ಕೆ ಪಡೆದುಕೊಳ್ಳುವುದು ಅದರ ಮುಂದಿನ ಹೆಜ್ಜೆಯಾಗಿದೆ.ಕರ್ನಾಟಕವು ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ದೇಶದ ಅತಿದೊಡ್ಡ ರಾಜ್ಯವಾಗಿದೆ.  ದಕ್ಷಿಣ ಭಾರತದಲ್ಲಿ ಬಿಜೆಪಿಯು ಗಮನಾರ್ಹವಾಗಿ ಬೇರು ಬಿಟ್ಟಿರುವ ಏಕೈಕ ರಾಜ್ಯವೂ ಇದಾಗಿದೆ. ಈ ಮೊದಲೂ ಪಕ್ಷವು ರಾಜ್ಯದಲ್ಲಿ ಅಧಿಕಾರ ನಡೆಸಿತ್ತು. ಇಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಾರಿಸುವುದು ವಿಂಧ್ಯ ಪರ್ವತಗಳ ದಕ್ಷಿಣ ಭಾಗದಲ್ಲಿ ಪಕ್ಷದ ಮಹತ್ವದ ವಿಜಯೋತ್ಸವ ಆಗಲಿದೆ.ರಾಜ್ಯದಲ್ಲಿನ ಅಧಿಕಾರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ ಪಕ್ಷದ ಪಾಲಿಗೂ ಅತ್ಯಂತ ಮಹತ್ವದ ಸಂಗತಿಯಾಗಿದೆ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸದಿದ್ದರೆ, ರಾಜಕೀಯ ನೆಲೆಯಲ್ಲಿ ಪಕ್ಷವು ಬಿಜೆಪಿಗೆ ಶರಣಾಗತಿಯಾದಂತೆ ಆಗಲಿದೆ. ಜತೆಗೆ ಉತ್ತರ ಮತ್ತು ಈಶಾನ್ಯ ಭಾರತದಲ್ಲಿನ ಕೆಲ ರಾಜ್ಯಗಳಿಗಷ್ಟೇ ಕಾಂಗ್ರೆಸ್‌ನ ಅಸ್ತಿತ್ವ ಸೀಮಿತವಾಗಿರಲಿದೆ.  ಹೀಗಾಗಿ ಕರ್ನಾಟಕವು ಎಲ್ಲ ಚುನಾವಣಾ ಕಣಗಳ ರಣರಂಗವಾಗಿರಲಿದೆ.  ಇದರ ಫಲಿತಾಂಶವು 2019ರ ಲೋಕಸಭಾ ಚುನಾವಣಾ ಅಲೆಯ ದಿಕ್ಸೂಚಿಯೂ ಆಗಿರಲಿದೆ.ಸದ್ಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಎರಡು ಉಪಚುನಾವಣೆಗಳು ಕೂಡ ಮುಂದಿನ ವರ್ಷದ ಚುನಾವಣೆಯ   ಅಲೆಯ ಸ್ವರೂಪವನ್ನು ನಿರ್ಧರಿಸಲಿವೆ. ಸಿದ್ದರಾಮಯ್ಯ ಸಂಪುಟದ ಸದಸ್ಯರೆಲ್ಲ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಬಿಡಾರ ಹೂಡಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಪಕ್ಷದ ಉನ್ನತ ಮುಖಂಡರೂ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಹಮ್ಮಿಕೊಂಡು ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಇದು ಎರಡೂ ಪಕ್ಷಗಳಿಗೂ ಈ ಉಪ ಚುನಾವಣೆಯು ಎಷ್ಟು ಮಹತ್ವದ್ದು ಆಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.ಈ ಹಿಂದಿನ ಚುನಾವಣೆಯಲ್ಲಿ ಈ ಎರಡೂ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆದ್ದು ಬಂದಿದ್ದರು. ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಉಳಿಸಿಕೊಂಡರೆ ಅದು ಪಕ್ಷದ ಕಾರ್ಯಕರ್ತರ ನೈತಿಕತೆ ಹೆಚ್ಚಿಸುವ ಗೆಲುವು ಆಗಿರಲಿದೆ. ಪಕ್ಷದ ಆಡಳಿತವನ್ನು ಬಲವಾಗಿ ಸಮರ್ಥಿಸಿಕೊಳ್ಳಲೂ ನೆರವಾಗಲಿದೆ.

ಒಂದು ವೇಳೆ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡರೆ, ಬಿಜೆಪಿಯು ಈ ಸದವಕಾಶವನ್ನು ತನ್ನ ಬಂಡವಾಳವನ್ನಾಗಿ ಬದಲಿಸಿಕೊಳ್ಳಲು ಮುಂದಾಗಲಿದೆ. ಗೆಲುವು, ಎರಡೂ ಪಕ್ಷಗಳಲ್ಲಿ ಹಂಚಿಹೋದರೆ, ಸ್ಪರ್ಧೆಯಲ್ಲಿ ಸಮತೋಲನ ಕಂಡು ಬರಲಿದೆ. ಕ್ರೀಡಾ ಭಾಷೆಯಲ್ಲಿಯೇ ಹೇಳುವುದಾದರೆ, ಪಂದ್ಯದ ವಿರಾಮದ ವೇಳೆಗೆ ಉಭಯ ತಂಡಗಳು 1–1 ಗೋಲು ಗಳಿಸಿದ್ದವು ಎಂದಷ್ಟೇ ಹೇಳಬೇಕಾಗುತ್ತದೆ.ನಂಜನಗೂಡು ಕ್ಷೇತ್ರದ ಉಪ ಚುನಾವಣೆಯು ಪಕ್ಷದ ಒಳಗಿನ ತೀವ್ರ ಒಡಕಿನ ಪ್ರತಿಫಲವಾಗಿದೆ.  ಬೇರೆ, ಬೇರೆ ಬಣಗಳ ಅಸ್ತಿತ್ವ  ಮತ್ತು ಮುಖಂಡರ ನಡುವಣ ಒಡಕು ಪಕ್ಷದ ಪಾಲಿಗೆ ಪೀಡೆಯಾಗಿ ಪರಿಣಮಿಸಿದೆ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ನ ಮಾಜಿ ಸಚಿವರು. ಕಾಂಗ್ರೆಸ್‌ ಅಭ್ಯರ್ಥಿಯು ಜೆಡಿಎಸ್‌ನ ಮುಖಂಡರಾಗಿದ್ದರು.

ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಸುಲಭವಾಗಿ ಹೇಗೆ ಜಿಗಿಯುತ್ತಾರೆ ಎನ್ನುವುದಕ್ಕೆ ಇವು ತಾಜಾ ನಿದರ್ಶನಗಳಾಗಿವೆ. ರಾಜಕೀಯ ನೈತಿಕತೆ ಎನ್ನುವುದು ಯಾರೊಬ್ಬರಿಗೂ ಬೇಕಾಗಿಲ್ಲ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಜಕೀಯ ವಲಸೆ ಸಾಧ್ಯತೆಗೂ ಇದು ಕೈಗನ್ನಡಿಯಾಗಿದೆ.

ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಪಕ್ಷಕ್ಕೆ ಎಳೆದು ತರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಚುನಾವಣೆಗಳು ಹತ್ತಿರ ಬಂದಾಗ ಪಕ್ಷ ಬಿಡುವ, ನಿಷ್ಠೆ ಬದಲಿಸುವ ರಾಜಕಾರಣಿಗಳ ಹಳೆಯ ಚಾಳಿಯ ಆರಂಭವಷ್ಟೆ ಇದಾಗಿದೆ. ಕಾಂಗ್ರೆಸ್‌ನ ಪ್ರಮುಖ ಸಚಿವರೊಬ್ಬರ  ಹಠಾತ್‌ ನಿಧನದ ಕಾರಣಕ್ಕೆ ಗುಂಡ್ಲುಪೇಟೆ ಉಪಚುನಾವಣೆ ನಡೆಯುತ್ತಿದೆ. ಇದು ರಾಜ್ಯದಲ್ಲಿನ ಜಾತಿ ರಾಜಕೀಯ ಪ್ರಾಬಲ್ಯಕ್ಕೆ ನಿಜವಾದ ಪರೀಕ್ಷೆ ಒಡ್ಡಲಿದೆ. ಪ್ರಮುಖ ಜಾತಿಗಳ ಬೆಂಬಲ ಪಡೆದುಕೊಂಡು ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಬಿಜೆಪಿ ಹವಣಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್‌, ಈ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸಿದ್ದ ಮಂತ್ರಿಯ ನಿಧನಾನಂತರದ ಅನುಕಂಪದ ಅಲೆ ನಂಬಿಕೊಂಡು ಚುನಾವಣೆ ಎದುರಿಸುತ್ತಿದೆ.ಪ್ರಭಾವಿ ಅಲ್ಲದ ಹಿಂದುಳಿದ ವರ್ಗಗಳ ಸಂಘಟನೆ ರೂಪಿಸುವ ಕಾಂಗ್ರೆಸ್‌ನ ಕಾರ್ಯತಂತ್ರ ಅಥವಾ ಅದರ ಯಶಸ್ಸಿನ ಪರೀಕ್ಷೆಯೂ ಈ ಉಪಚುನಾವಣೆಗಳಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿನ ಯಾವುದೇ ಬಗೆಯ ಹಿನ್ನಡೆಯು ಸೀಮಿತ ಸ್ವರೂಪದಲ್ಲಿ ಇರುವ ಸಾಮಾಜಿಕ ಸಂಘಟನೆಯ ಮಿತಿಗಳನ್ನು ಮತ್ತು ಪ್ರಭಾವಿ ಜಾತಿಗಳ ಪ್ರಾಬಲ್ಯ ಕ್ಷೀಣಿಸಿರುವುದನ್ನು ಸೂಚಿಸಲಿದೆ.ಇತ್ತೀಚಿನ ದಿನಗಳಲ್ಲಿ ಜನರ ಮನೋಭಾವದಲ್ಲಿ ವ್ಯಾಪಕ ಬದಲಾವಣೆ ಆಗುತ್ತಿರುವುದನ್ನು ಸರಿಯಾಗಿ ಗ್ರಹಿಸುವಲ್ಲಿ ವಿಫಲವಾಗುತ್ತಿರುವುದು ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಎದುರಿಸುತ್ತಿರುವ ಅತಿದೊಡ್ಡ ಸವಾಲು.ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ಕಂದರ ಹೆಚ್ಚಿರುವುದು ಹೆಚ್ಚು ಸ್ಪಷ್ಟವಾಗಿದೆ. ಚುನಾವಣೆಗೆ ಕೇವಲ ಒಂದು ವರ್ಷ ಇದ್ದರೂ, ರಾಜ್ಯ ಘಟಕಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡಲು ಪಕ್ಷಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದು ಪಕ್ಷವು ಸಂಘಟನೆಯನ್ನು ನಿರ್ಲಕ್ಷಿಸಿರುವುದು ಮತ್ತು ಪಕ್ಷದ ಮುಖಂಡರಿಗೆ ಸಚಿವ ಸ್ಥಾನ ಮತ್ತು ಪ್ರಮುಖ ಖಾತೆ ಗಿಟ್ಟಿಸುವುದೇ ಹೆಚ್ಚು ಮುಖ್ಯವಾಗಿರುವುದನ್ನು ಸೂಚಿಸುತ್ತದೆ.ಉಪಚುನಾವಣೆಯ ಫಲಿತಾಂಶ ಏನೇ ಇರಲಿ, ಕಾಂಗ್ರೆಸಿಗರು ಪಕ್ಷ ಸಂಘಟಿಸಲು ತೀವ್ರ ಗಮನ ನೀಡದಿದ್ದರೆ, ಒಂದು ತಂಡವಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಜನರ ಬೆಂಬಲ ಮತ್ತೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಬಿಜೆಪಿಯ ಕಾರ್ಯತತ್ಪರತೆಗೆ ಶರಣಾಗಬೇಕಾಗುತ್ತದೆ. ಬಿಜೆಪಿಯು ಉತ್ತರಪ್ರದೇಶದಲ್ಲಿನ ಪ್ರಯೋಗವನ್ನು ಕರ್ನಾಟಕದಲ್ಲಿಯೂ ಪುನರಾವರ್ತಿಸಲು ಹೆಚ್ಚು ಉತ್ಸುಕತೆ ತೋರಿಸುವುದರಲ್ಲಿ ಅನುಮಾನವೇ ಇಲ್ಲ. ಪಕ್ಷದ ಸಂಘಟನಾ ಕಾರ್ಯತಂತ್ರ, ಚುನಾವಣಾ ಆದ್ಯತೆಗಳು ಮತ್ತು ರಾಜಕೀಯ ಸಂದೇಶ ನೀಡುವ ವಿಷಯದಲ್ಲಿ ಉತ್ತರಪ್ರದೇಶದಲ್ಲಿನ  ಅನುಭವವನ್ನೇ ಇಲ್ಲಿಯೂ ಪ್ರಯೋಗಿಸಲಿದೆ. ಮತದಾರರಲ್ಲಿನ ಆಡಳಿತ ವಿರೋಧಿ ಮನೋಭಾವವನ್ನೇ ಬಂಡವಾಳ ಮಾಡಿಕೊಳ್ಳುವುದು ಬಿಜೆಪಿಯ  ಇನ್ನೊಂದು ಅಸ್ತ್ರ ಆಗಿರಲಿದೆ.ಉತ್ತರಪ್ರದೇಶದಲ್ಲಿ ಕೆಳ ಹಂತದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪಕ್ಷದ ಮುಂಚೂಣಿ ಪದಾಧಿಕಾರಿಗಳನ್ನು ಮತ್ತು ಕಾರ್ಯಕರ್ತರನ್ನು  ಬಳಸಿಕೊಳ್ಳಲಾಗಿತ್ತು. ಪಕ್ಷದ ಕೇಂದ್ರ ಮಟ್ಟದ ನಾಯಕರು ಕರ್ನಾಟಕದಲ್ಲಿಯೂ ಈ ಪ್ರಯೋಗ ಬಳಸಲು ಉದ್ದೇಶಿಸಿದ್ದಾರೆ.ಪಕ್ಷದ ರಾಜ್ಯಮಟ್ಟದ ಮುಖಂಡರ ಮಧ್ಯೆ ನಡೆಯುತ್ತಿರುವ ಒಳಜಗಳವನ್ನು ಕೇಂದ್ರೀಯ ಮುಖಂಡರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಚಾರ ಕಾರ್ಯತಂತ್ರವನ್ನೂ ಪಕ್ಷದ ಕೇಂದ್ರೀಯ ಮಂಡಳಿಯೇ ನಿರ್ವಹಿಸಲಿದೆ.ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಾವು ಹೊಂದಿರುವುದಾಗಿ ಬಿಜೆಪಿಯ ಅನೇಕರು ಈಗಾಗಲೇ ಭಾವಿಸಿದ್ದಾರೆ. ಆದರೂ, ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲು ಹಿಂದೇಟು ಹಾಕಬಹುದು.ರಾಜ್ಯದಲ್ಲಿ ಪಕ್ಷದ ಕೇಂದ್ರೀಯ ನಾಯಕರ ನೇತೃತ್ವದಲ್ಲಿಯೇ ಚುನಾವಣಾ ಪ್ರಚಾರ ಅಭಿಯಾನ ನಡೆಯುವ ಸಾಧ್ಯತೆ ಇದೆ. 2008 ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಹಲವಾರು ರಾಜಕೀಯ ನ್ಯೂನತೆಗಳು ಇದ್ದವು ಎನ್ನುವುದನ್ನು ರಾಜ್ಯದ ಮತದಾರರು ಸುಲಭವಾಗಿ ಮರೆತಿರಲಾರರು.ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿಯಾಗಿರುವ ಜೆಡಿಎಸ್‌, ಉಪ ಚುನಾವಣೆಯಿಂದ ದೂರ ಉಳಿದಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕದನವು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಮಧ್ಯೆ ನಡೆಯುವುದನ್ನು ಮತ್ತು ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಜೆಡಿಎಸ್‌ ತನ್ನ ಪ್ರಾಬಲ್ಯ ಸಾಬೀತುಪಡಿಸಲಿರುವುದನ್ನು ಇದು ಸೂಚಿಸಲಿದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ.ರಾಜ್ಯದಲ್ಲಿನ ಮುಂಬರುವ ದಿನಗಳು ಖಂಡಿತವಾಗಿಯೂ ತುಂಬ ಕುತೂಹಲಕಾರಿಯಾಗಿ ಇರಲಿವೆ. ಹಲವಾರು ತಿರುವುಗಳು ಮತ್ತು ಅನಿರೀಕ್ಷಿತ ಬೆಳವಣಿಗೆಗಳಿಗೆ ರಾಜ್ಯ ರಾಜಕಾರಣ ಸಾಕ್ಷಿಯಾಗಲಿದೆ. ಪ್ರತಿ ದಿನವೂ ರಾಜಕೀಯ ಅಲೆ ಬದಲಾಗಬಹುದು. ಒಟ್ಟಾರೆ ರಾಜಕೀಯ ಆಟ ಹೆಚ್ಚು ಆಕರ್ಷಕ ಆಗಿರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry