ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿಸುವ ಅಮಲು

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಬೇಕಿದ್ದ ರಾಜ್ಯದ ಹೆದ್ದಾರಿಗಳು ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗುತ್ತಿವೆ. ಕಳೆದ ವರ್ಷವೂ 21 ಸಾವಿರ ಅಪಘಾತಗಳು ಸಂಭವಿಸಿ 7,212 ಮಂದಿ ಜೀವ ತೆತ್ತಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ವಾಹನಗಳಿರುವ ರಾಜ್ಯಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕರ್ನಾಟಕ, ಅಪಘಾತಗಳಿಂದ ಹೆಚ್ಚು ಸಾವುಗಳು ಸಂಭವಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

‘2016ರಲ್ಲಿ ನಡೆದ ಒಟ್ಟು ಅಪಘಾತಗಳಲ್ಲಿ ಶೇ 30ರಷ್ಟು ಪಾನಮತ್ತ ಚಾಲನೆಯಿಂದ ಸಂಭವಿಸಿದವು’ ಎಂದು ಅಂದಾಜಿಸಿರುವ ಸಂಚಾರ ಪೊಲೀಸರು, ‘ಹೆದ್ದಾರಿಗಳಲ್ಲಿ ಮದ್ಯದಂಗಡಿ ಮುಚ್ಚಿಸಿದರೆ ಈ ಸಂಖ್ಯೆಯಲ್ಲಿ ಶೇ 10ರಷ್ಟಂತೂ ಇಳಿಕೆಯಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ಹೆದ್ದಾರಿಗಳನ್ನು ಬಳಸುತ್ತಾರೆ. ರಸ್ತೆ ಬದಿಯ ಬಾರ್‌ ಹಾಗೂ ರೆಸ್ಟೊರೆಂಟ್‌ಗಳು ಅವರನ್ನು ಆಕರ್ಷಿಸುತ್ತವೆ. ಕುಡಿದು ಪ್ರಯಾಣ ಮುಂದುವರಿಸುವ ಅವರು, ಅಮಲು ಏರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಗಂಭೀರ ಸ್ವರೂಪದ ಅಪಘಾತಗಳಿಗೆ ಕಾರಣರಾಗುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.

‘ಹೆದ್ದಾರಿಗಳಲ್ಲಿ ವಾಹನಗಳ ವೇಗಕ್ಕಾಗಲೀ, ಚಾಲಕರ ಅಜಾಗರೂಕತೆಗಾಗಲೀ ಇಷ್ಟು ದಿನ ಕಡಿವಾಣ ಇರಲಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್‌ನ ಆದೇಶ ಮಹತ್ವದ್ದು ಎನಿಸುತ್ತದೆ’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ (ಸಿಟಿಆರ್‌ಎಸ್‌) ಎಎನ್‌ಎಸ್‌ ಮೂರ್ತಿ ಅಭಿಪ್ರಾಯಪಟ್ಟರು.

‘ಇತರ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪಾನಮತ್ತ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ, ಹೆದ್ದಾರಿಗಳಲ್ಲಿ ಪ್ರತಿ ವಾಹನವನ್ನೂ ತಡೆದು ತಪಾಸಣೆ ನಡೆಸುವುದು ಕಷ್ಟ. ಅಷ್ಟೇ ಅಲ್ಲದೆ, ಸಿಬ್ಬಂದಿ ಕೊರತೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ಆಲ್ಕೋಮೀಟರ್‌ ಉಪಕರಣಗಳು ಇಲ್ಲದಿರುವ ಕಾರಣ ಆ ರಸ್ತೆಗಳಲ್ಲಿ ತಪಾಸಣೆ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಇದೇ ಜನವರಿಯಲ್ಲಿ 100 ಆಲ್ಕೋಮೀಟರ್‌ಗಳನ್ನು ಖರೀದಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆದ್ದಾರಿಗಳಲ್ಲೂ  ಸಂಚಾರ ಪೊಲೀಸರು ಆಲ್ಕೋಮೀಟರ್ ಹಿಡಿದು ನಿಲ್ಲಲಿದ್ದಾರೆ’.

‘ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಗಾಯಾಳುಗಳ ನೆರವಿಗೆ ಹೋಗಲು ಹೊಸದಾಗಿ ನೂರು ‘ಹೈವೇ ಪೆಟ್ರೋಲಿಂಗ್’ ವಾಹನಗಳನ್ನು ಖರೀದಿಸಿದ್ದೇವೆ. ಅವು  ಸದಾ ಹೆದ್ದಾರಿಗಳಲ್ಲಿ ಗಸ್ತು ತಿರುಗುತ್ತಿರುತ್ತವೆ. ಅಪಘಾತ ಸಂಭವಿಸಿದ ಕೂಡಲೇ ಟೋಲ್‌ನವರು ಸಹ ನಮಗೆ ಮಾಹಿತಿ ರವಾನಿಸುತ್ತಾರೆ’ ಎಂದು ವಿವರಿಸಿದರು.

ಸಾಕಷ್ಟು ಅಪಘಾತ ಪ್ರಕರಣಗಳಲ್ಲಿ ಮೃತ ವ್ಯಕ್ತಿ ಪಾನಮತ್ತನಾಗಿರುತ್ತಾನೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವಾಗ ‘ಆತ ಕುಡಿದಿದ್ದ’ ಎಂದು ಎಫ್‌ಐಆರ್ ಮಾಡುವುದಿಲ್ಲ. ಏಕೆಂದರೆ ಪಾನಮತ್ತನಾಗಿದ್ದ ಎಂದು ಎಫ್‌ಐಆರ್ ದಾಖಲಾದರೆ ಮೃತನ ಕುಟುಂಬಕ್ಕೆ ವಿಮೆ ಸಿಗುವುದಿಲ್ಲ.  ಹೀಗಾಗಿ ಪರಿಹಾರ ಸಿಗಲೆಂದೇ ಪೊಲೀಸರು ಕನಿಕರ ತೋರುತ್ತಾರೆ ಎಂದು ಮೂಲಗಳು ಹೇಳುತ್ತವೆ.

‘ಇಲ್ಲಿಯವರೆಗೆ ಪಾನಮತ್ತ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಬಗ್ಗೆ ಪ್ರತ್ಯೇಕ ದಾಖಲೆ ನಿರ್ವಹಣೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಇನ್ನು ಮುಂದೆ ಪಾನಮತ್ತ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಅಂಕಿ ಅಂಶವನ್ನು ಪ್ರತ್ಯೇಕವಾಗಿ ದಾಖಲಿಸುತ್ತೇವೆ. ಈ ಬಗ್ಗೆ ಪ್ರತಿ ಜಿಲ್ಲೆಯ ಪೊಲೀಸರಿಗೂ ಸೂಚನೆ ನೀಡಲಾಗಿದೆ’ ಎಂದು ಸಿಟಿಆರ್‌ಎಸ್‌ನ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜ್ಯದಲ್ಲಿ 2016ರ ಏಪ್ರಿಲ್‌ನಿಂದ 2017ರ ಫೆಬ್ರುವರಿವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 22,217 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದ  ಪೊಲೀಸರು, ಅವರ ಚಾಲನಾ ಪರವಾನಗಿಗಳನ್ನು (ಡಿಎಲ್) ಸಾರಿಗೆ ಇಲಾಖೆಗೆ ಕಳುಹಿಸಿದ್ದರು. ಅವುಗಳಲ್ಲಿ 13,298 ಪ್ರಕರಣಗಳು ಪಾನಮತ್ತ ಚಾಲನೆಗೇ ಸಂಬಂಧಿಸಿದ್ದವಾಗಿದ್ದವು. ಅಷ್ಟೂ ಮಂದಿಯ ಪರವಾನಗಿ ಅಮಾನತು ಮಾಡಿದ್ದೇವೆ’ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ತಿಳಿಸಿದರು.



‘ಮಾರಣಾಂತಿಕ ಅಪಘಾತಗಳ ಪ್ರಮಾಣವನ್ನು 2020ರ ವೇಳೆಗೆ ಶೇ 25ರಷ್ಟು ಕಡಿಮೆ ಮಾಡಬೇಕು ಎಂಬುದು ಇಲಾಖೆಯ ಗುರಿ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ನಮ್ಮ ಉದ್ದೇಶ ಈಡೇರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್‌ವರೆಗೂ ಅವಕಾಶ
ಹೆದ್ದಾರಿಗಳ ಆಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ತೆರವು ಮಾಡಬೇಕಿದೆ. ಆದರೆ, ಕರ್ನಾಟಕದಲ್ಲಿ ಅಬಕಾರಿ ವರ್ಷ ಅಥವಾ ಮದ್ಯ ಮಾರಾಟ ಪರವಾನಗಿ ನವೀಕರಣ ಜೂನ್‌ನಿಂದ ಆರಂಭವಾಗುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಹೆದ್ದಾರಿ ಬದಿಯ ಅಂಗಡಿ ತೆರವು ಮಾಡಲು ಅಲ್ಲಿಯವರೆಗೆ ಅವಕಾಶ ಇದೆ. ರಾಜ್ಯದಲ್ಲಿರುವ ಮದ್ಯದಂಗಡಿಗಳ ಪೈಕಿ ಶೇ 50ಕ್ಕಿಂತ ಹೆಚ್ಚು, ಹೆದ್ದಾರಿ ಆಸುಪಾಸಿನಲ್ಲೇ ಇವೆ. ಈಗ ಇವೆಲ್ಲವೂ ತೆರವಿನ ಭೀತಿ ಎದುರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT