ಶನಿವಾರ, ಮೇ 8, 2021
25 °C

ಕುಂದು–ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದು–ಕೊರತೆ

ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ಕೊನೆಗಾಣಿಸಿ

ಉದ್ಯೋಗದ ಅವಶ್ಯಕತೆಗೆ ಆರೋಗ್ಯ ಪ್ರಾಮಾಣ ಪತ್ರ ಪಡೆಯಲೆಂದು ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ನನ್ನೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಅಲ್ಲಿನ ಸಿಬ್ಬಂದಿಯೊಬ್ಬರನ್ನು ಕರೆದು ‘ವಿಚಾರಿಸಿಕೊಳ್ಳುವಂತೆ’ ಸೂಚಿಸಿದರು. ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಆ ವ್ಯಕ್ತಿ ‘ಖಾಸಗಿ ಆಸ್ಪತ್ರೆಯಲ್ಲಾದರೆ ₹1000 ಆಗುತ್ತದೆ ₹500 ಕೊಡು ಪ್ರಮಾಣ ಪತ್ರ ನೀಡುತ್ತೇವೆ’  ಎಂದು ಲಂಚದ ಬೇಡಿಕೆ ಇಟ್ಟರು.

ಸಾಮಾನ್ಯ ಪ್ರಮಾಣ ಪತ್ರಕ್ಕೆ ₹500 ಕೇಳಿದವರು. ವೈದ್ಯಕೀಯ ಸೇವೆಗಳಿಗೆ, ಸ್ಕ್ಯಾನಿಂಗ್, ಇನ್ನಿತರೆ ಸೇವೆಗಳಿಗೆ ಎಷ್ಟು ಲಂಚ ಪಡೆಯುತ್ತಿರಬಹುದು. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಡವರ ಸುಲಿಗೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿ.

-ವಿಜಯ್‌ಸಜ್ಜು.ವಿ., ಬೆಂಗಳೂರು

**

ರಿಸರ್ವೇಶನ್ ಕೌಂಟರ್ ಸ್ಥಳ ಬದಲಿಸಿ

ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರಿಸರ್ವೇಶನ್ ಕೌಂಟರ್‌ ಸ್ಥಳವನ್ನು ಬದಲಿಸಲಾಗಿದೆ. ಈ ಮೊದಲು ರಿಸರ್ವೇಶನ್ ಕೌಂಟರ್‌ ಮುಂಬಾಗಿಲಲ್ಲಿತ್ತು. ಈಗ ನಿಲ್ದಾಣದ ಹಿಂಬದಿಗೆ ವರ್ಗಾಯಿಸಿದ್ದಾರೆ. ಅಲ್ಲಿಗೆ ಹೋಗಲು ಮೇಲ್ಸೇತುವೆ ಬಳಸಬೇಕಾಗುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ.

ಅಧಿಕಾರಿಗಳು ಇತ್ತ ಗಮನಹರಿಸಿ, ಈ ಹಿಂದೆ ಇದ್ದಂತೆ ಮುಂಭಾಗಕ್ಕೇ ರಿಸರ್ವೇಶನ್ ಕೌಂಟರ್‌ ಬದಲಿಸಲಿ. ಇದು ಸಾಧ್ಯವಿಲ್ಲದಿದ್ದರೆ ಮೇಲ್ಸೇತುವೆಗೆ ಎಸ್ಕಲೇಟರ್‌ ಅಳವಡಿಸಲು ಕ್ರಮ ಕೈಗೊಳ್ಳಲಿ.

–ಮಹೇಶ ನಾಯ್ಕ, ಬಸವನಗರ

**

ಸುಗಮ ಸಂಚಾರ ಕಲ್ಪಿಸಿ

ಸಂಚಾರ ಪೊಲೀಸರು ದಂಡ ವಿಧಿಸುವ ರೀತಿಯಲ್ಲಿ ಬದಲಾವಣೆ ತರಬೇಕಿದೆ.

ಅತಿಯಾದ ಟ್ರಾಫಿಕ್, ಕೆಟ್ಟ ರಸ್ತೆಗಳು, ರಸ್ತೆ ಒತ್ತುವರಿಗಳಿಂದಾಗಿ ಸಂಚಾರ ದುಸ್ವಪ್ನವಾಗಿದೆ. ಇಂಥ ಸಮಯದಲ್ಲಿ ದಂಡದ ಹೆಸರಲ್ಲಿ ಪೊಲೀಸರು ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ.

ಫುಟ್‌ಪಾತ್‌ ಬಿಟ್ಟು ರಸ್ತೆಯ ಮೇಲೆ ಓಡಾಡುವವರಿಗೆ ಇಲ್ಲದ ದಂಡ, ರಸ್ತೆ ಸರಿಪಡಿಸದ ಬಿಬಿಎಂಪಿಗೆ ಇಲ್ಲದ ದಂಡ, ರಸ್ತೆಗಳಲ್ಲಿ ತಳ್ಳುಗಾಡಿಗಳನ್ನು ಇಟ್ಟುಕೊಳ್ಳುವವರಿಗೆ ಇಲ್ಲದ ದಂಡ, ಅಂಥವರನ್ನೂ ಕಂಡೂ ಕಾಣದಂತೆ ಅಡ್ಡಾಡುವ ಪೊಲೀಸರಿಗೆ ಇಲ್ಲದ ದಂಡ ವಾಹನ ಸವಾರರಿಗೆ ಮಾತ್ರ ಏಕೆ.

-ಯಮಲೂರು ಎಂ.ವೆಂಕಟಪ್ಪ

*

ಕಳಪೆ ಕಾಮಗಾರಿ

ಉಲ್ಲಾಳ ವಾರ್ಡ್ ನಂ 130ರ ವ್ಯಾಪ್ತಿಗೆ ಸೇರಿರುವ ಮರಿಯಪ್ಪನಪಾಳ್ಯದ 7ನೇ ಅಡ್ಡರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿ ಕಳಪೆಯಾಗಿದೆ. ಹಳೇ ರಸ್ತೆಯಲ್ಲಿದ್ದ ಗುಂಡಿಗಳಿಗೆ 40 ಎಂ.ಎಂ. ಜೆಲ್ಲಿ ಕಲ್ಲು ಹಾಕಿದ್ದಾರೆ. ನಂತರ ರಸ್ತೆ ಅಕ್ಕಪಕ್ಕ ಎರಡು ಕಡೆ ಮಣ್ಣಿನ ಮೇಲೆ ಡಾಂಬರು ಚೆಲ್ಲಿದ್ದಾರೆ.

ಮ್ಯಾನ್ ಹೋಲ್‌ಗಳು ರಸ್ತೆಯಿಂದ ಅರ್ಧ ಅಡಿಯಷ್ಟು ಎತ್ತರದಲ್ಲಿವೆ. ಓಡಾಡುವ ಜನರು ಎಡವಿ ಬೀಳುವ ಸಂಭವ ಹೆಚ್ಚು. ಕಳಪೆ ಗುಣಮಟ್ಟದ ಮತ್ತು ಮಣ್ಣಿನ ಮೇಲೆ ಹಾಕಿರುವ ಡಾಂಬರು ಮಳೆ ಬಂದಾಗ ಕಿತ್ತು ಹೋಗುವ ಸಂಭವವಿದೆ.  ಬಾಕ್ಸ್ ಚರಂಡಿಯನ್ನು ಸರಿಯಾಗಿ ನಿರ್ಮಿಸಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು ಈ ವಾರ್ಡ್‌ಗೆ ಬಂದು ಪರಿಶೀಲಿಸಬೇಕಾಗಿ ವಿನಂತಿ.

-7ನೇ ಅಡ್ಡ ರಸ್ತೆಯ ನಿವಾಸಿಗಳು, ಮರಿಯಪ್ಪನಪಾಳ್ಯ

*

ನೇರ ಬಸ್ ಬೇಕು

ಯಲಹಂಕ ಉಪನಗರದಿಂದ ಕೆ.ಆರ್.ಮಾರುಕಟ್ಟೆಗೆ ನೇರ ಬಸ್‌ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಪ್ರಯಾಣಿಕರು ಎನ್‌ಇಎಸ್‌ನಲ್ಲಿ ಇಳಿದು, ಬದಲಿ ಬಸ್ ಹತ್ತಬೇಕು. ಇದರಿಂದ ವೃದ್ಧರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಒಂದಾದರೂ ನೇರ ಬಸ್ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಎಚ್.ಎಸ್.ಮಂಜುನಾಥ, ಯಲಹಂಕ

***

ಕಾಂಕ್ರಿಟ್ ಕಾಡು ಕಟ್ಟಲು ಮುಂದಾದ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರಾಮಕೃಷ್ಣ ಮಠ ಹಾಗೂ ಟಿ.ಡಿ.ನಾಗಣ್ಣ ಆಟದ ಮೈದಾನದ ಮಧ್ಯೆ ಉದ್ಯಾನವನವನ್ನು ನಿರ್ನಾಮ ಮಾಡಲು ಮುಂದಾಗಿದೆ. ಆ ಸ್ಥಳದಲ್ಲಿ ಕಾಂಕ್ರಿಟ್ ಕಾಡು ಕಟ್ಟಲು ಹೊರಟಿದೆ. ಸುಂದರವಾಗಿ ಬೆಳೆದು ನಿಂತಿದ್ದ ಹಲವು ಜಾತಿಯ ಮರಗಳನ್ನು ಕಡಿಯುತ್ತಿದೆ.

ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಕಿರು ಅರಣ್ಯದಂತಿರುವ ಉದ್ಯಾನವನ್ನು ಉಳಿಸಲು ಗಮನ ನೀಡಬೇಕು. ಈ ಸ್ಥಳದಲ್ಲಿ ಇಂಗುಗುಂಡಿ, ನೆಡುತೋಪು ಅಭಿವೃದ್ಧಿಪಡಿಸಬೇಕು.

-ಚಿ.ಉಮಾ ಶಂಕರ್,  ಹನುಮಂತನಗರ

**

ಪಾದಚಾರಿಗಳ ಜೀವಕ್ಕೆ ಸಂಚಕಾರ

ಕೃಷ್ಣರಾವ್ ಪಾರ್ಕ್ ಸುತ್ತಲಿನ ಫುಟ್‌ಪಾತ್‌ಗಳು ದ್ವಿಚಕ್ರ ವಾಹನಗಳ ನಿಲುಗಡೆ ತಾಣವಾಗಿವೆ. ಪಾದಚಾರಿಗಳು ರಸ್ತೆಯಲ್ಲೇ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಿರುವ ಕಾರಣ ಪಾದಚಾರಿಗಳು ಅಪಘಾತಕ್ಕೆ ತುತ್ತಾಗುವ ಸಂಭವ ಹೆಚ್ಚು, ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಶೀಘ್ರ ಇತ್ತ ಗಮನ ಹರಿಸಬೇಕು.

-ನೊಂದ ಪಾದಚಾರಿಗಳು

**

ಸಮಯ ಪಾಲನೆ ಮರೆತ ‘ಜಿ.9’ ಬಸ್‌ಗಳು

ಯಲಹಂಕ ಉಪನಗರದಿಂದ  ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ‘ಜಿ.9’ ಮಾರ್ಗಸೂಚಿಯ ಬಸ್‌ಗಳಿಂದ ಜನರಿಗೆ ಸಾಕಷ್ಟು ಅನುಕೂಲವೇನೋ ಆಗಿದೆ. ಆದರೆ ಈ ಬಸ್‌ಗಳು ಸಮಯಪಾಲನೆಯಿಂದ ಬಹು ದೂರ ಉಳಿದಿವೆ. ಬಂದರೆ ಒಟ್ಟೊಟ್ಟಿಗೆ ಎರಡು ಮೂರು ಬಸ್‌ಗಳು ಬರುತ್ತವೆ. ಇಲ್ಲದಿದ್ದರೆ ಗಂಟೆಗಟ್ಟಲೆ ಕಾದುಕಾದು ಸುಸ್ತಾಗಬೇಕಾಗುತ್ತದೆ. ನಿಯಮಿತ ಸಮಯದ ಅಂತರದಲ್ಲಿ ಬಸ್ ಓಡಿಸಲು ಏನು ಕಷ್ಟ?

-ರಾಜೀವಲೋಚನ, ಎನ್‌ಇಎಸ್

*

ಚಾವಣಿ ನಿರ್ಮಿಸಿ

ಕೆಂಪೇಗೌಡ ನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ್ ಕಲ್ಪಿಸುವ ಸಂಪರ್ಕ ಸೇತುವೆಗೆ ಚಾವಣಿ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದೆ.

ನಗರದಲ್ಲಿ ಅತಿಯಾದ ಬಿಸಿಲಿದ್ದು, ಶಾಖಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಚಾವಣಿ ನಿರ್ಮಿಸಿದರೆ ಪ್ರಯಾಣಿಕರಿಗೆ ನೆರಳು ಒದಗಿಸಿದಂತಾಗುತ್ತದೆ. ಮೇಲ್ಸೇತುವೆ ಬಳಸಲು ಇದು ಉತ್ತೇಜನ ನೀಡುತ್ತದೆ.

-ಬಸವರಾಜ ಹುಡೇದಹಳ್ಳಿ, ರಾಜಾಜಿನಗರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.