7

ಷೇರುಪೇಟೆಯಲ್ಲಿ ಮಿಶ್ರ ಚಟುವಟಿಕೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ  ಸೂಚ್ಯಂಕ ಮತ್ತು ನಿಫ್ಟಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಬುಧವಾರ ಸೆನೆಕ್ಸ್ 30,007.48  ತಲುಪಿ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿದೆ. 2015ರ ಮಾರ್ಚ್4ಕ್ಕೆ 30,024.74 ಅಂಶ ತಲುಪಿ ನಿರ್ಮಿಸಿದ್ದ ಸರ್ವಕಾಲೀನ ಗರಿಷ್ಠ ದಾಖಲೆಗೆ ಅಲ್ಪ ಅಂತರದಲ್ಲಿದೆ.  

ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನದಲ್ಲಿ ಇರಿಸಬೇಕಾದ ಅಂಶವೆಂದರೆ ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಕೆಲವು ಸೇಕ್ಟೊರಲ್ ಇಂಡೆಕ್ಸ್‌ಗಳು ವಾರ್ಷಿಕ ಗರಿಷ್ಠ, ಕೆಲವು ಸರ್ವಕಾಲೀನ ಗರಿಷ್ಠ ದಲ್ಲಿವೆ. ಈ ಹಂತದಲ್ಲಿ ಹೆಚ್ಚಿನ ಅದ್ಯತೆ ಲಾಭದ ನಗದೀಕರಣಕ್ಕೆ ಇರಬೇಕಾಗಿದೆ.  ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್,  ಬಿ ಎಸ್ಇ 100, ಬಿಎಸ್‌ಇ 200, ಬಿಎಸ್ ಇ 500,  ಇನ್ಫ್ರಾಸ್ಟ್ರಕ್ಚರ್ ಇಂಡೆಕ್ಸ್, ಮ್ಯಾನುಫ್ಯಾಕ್ಚರಿಂಗ್ ಇಂಡೆಕ್ಸ್, ಬ್ಯಾಂಕೆಕ್ಸ್, ಕನ್ಸೂಮರ್ ಡ್ಯುರಬಲ್ ಇಂಡೆಕ್ಸ್,  ಯುಟಿಲಿಟೀಸ್ ಇಂಡೆಕ್ಸ್, ಎನರ್ಜಿ ಇಂಡೆಕ್ಸ್, ಫೈನಾನ್ಸ್ ಇಂಡೆಕ್ಸ್, ಇಂಡಸ್ಟ್ರಿಯಲ್ಸ್ ಇಂಡೆಕ್ಸ್, ಎಫ್ಎಂಸಿಜಿ ಇಂಡೆಕ್ಸ್   ವಾರ್ಷಿಕ ಹಾಗೂ ಸರ್ವಕಾಲೀನ ಗರಿಷ್ಠ ಮಟ್ಟ ತಲುಪಿ ತುಳುಕಾಡುತ್ತಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಗಳಲ್ಲದೆ  ಕಳಪೆ ಕಂಪೆನಿಗಳು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂದರೆ ಈ ಹಿಂದೆ ಮೋದಿ ಉದ್ಯೋಗ ಲಿಮಿಟೆಡ್ ಎಂಬ ಕಂಪೆನಿಯ ಷೇರಿನ ಬೆಲೆ  ಡಿಸೆಂಬರ್ ಅಂತ್ಯದಲ್ಲಿ ₹358 ರ ವಾರ್ಷಿಕ ಗರಿಷ್ಠ ತಲುಪಿದ್ದು ಸದ್ಯ ಆ ಷೇರಿನ ಬೆಲೆ ₹81ರ ಸಮೀಪ ಕುಸಿದಿದೆ. ಅದೂ  ನಿರಂತರ ಇಳಿಕೆಯಿಂದ.ಇದು ಮೂರು ತಿಂಗಳ ಬೆಳವಣಿಗೆಯಾದರೆ, ಒಂದೇ ದಿನದ ಬದಲಾವಣೆ ಹೇಗಿದೆ ಎಂದರೆ ಗುರುವಾರ ದಿನದ ಆರಂಭದಲ್ಲಿ ಗ್ಯಾಲ್ಯಾಂಟ್ ಇಸ್ಪಾಟ್ ಷೇರು ₹345ರ ಸಮೀಪದಿಂದ  ಕೇವಲ ಅರ್ಧ ಗಂಟೆ  ಅವಧಿಯಲ್ಲಿ ₹272.35ಕ್ಕೆ ಕುಸಿದು ದಿನದ ಲೋವರ್ ಸರ್ಕ್ಯೂಟ್ ತಲುಪಿ ನಂತರ ದಿನದ ಅಂತ್ಯದವರೆಗೂ ₹273ರಲ್ಲಿ ವಹಿವಾಟು ಆಗುತ್ತಿತ್ತು.  ನಂತರದ ದಿನವೂ ಲೋವರ್ ಸರ್ಕ್ಯೂಟ್ ತಲುಪಿತ್ತು. ಒಂದೇ  ದಿನ ಈ ಸ್ಮಾಲ್ ಕ್ಯಾಪ್ ಷೇರು ₹68ರಷ್ಟು ಕುಸಿದು ಹೂಡಿಕೆದಾರರ ಬಂಡವಾಳ ನಷ್ಟ ಮಾಡಿದೆ. ಗೋರಖ್‌ಪುರ  ಮೆಟ್ರೋ ರೇಲ್ ಯೋಜನೆಯ ಮಾರ್ಗ ಗ್ಯಾಲ್ಯಾಂಟ್ ಇಸ್ಪಾಟ್ ಕಂಪೆನಿ ನಿವೇಶನದ ಮೂಲಕ ಹಾಯ್ದು ಹೋಗಲಿದ್ದು ಸರ್ಕಾರ ಈ ನಿವೇಶನವನ್ನು ಸ್ವಾಧೀನ ಪಡಿಸಿಕೊಳ್ಳಲಿದೆ ಎಂಬ ಸುದ್ದಿ ಈ ಧಿಡೀರ್ ಬೆಳವಣಿಗೆಗೆ ಕಾರಣವಾಗಿದೆ.2010ರಿಂದ ₹110ರಲ್ಲಿಯೇ ಇದ್ದ  ಗ್ರಾಫೈಟ್ ಇಂಡಿಯಾ ಷೇರಿನ ಬೆಲೆ  ಮತ್ತೆ ಈ ವಾರ,  ಸುಮಾರು 7ವರ್ಷಗಳ ಅವಧಿಯಲ್ಲಿ  ₹137 ರ ಗರಿಷ್ಠ ತಲುಪಿ ಹೂಡಿಕೆಯಿಂದ ಬಿಡುಗಡೆಗೆ ಅವಕಾಶ ಕಲ್ಪಿಸಿತು. ನಂತರ ಈ ಬೆಲೆಯಲ್ಲಿ ಸ್ಥಿರತೆ ಕಾಣದೆ   ₹121ಕ್ಕೆ ಇಳಿಯಿತು. 2015ರ ಮಧ್ಯಂತರದಲ್ಲಿ ₹230/40ರಲ್ಲಿ ಖರೀದಿಸಿದ ಪ್ರೆಸ್ಟಿಜ್ ಎಸ್ಟೇಟ್ ಷೇರಿನ ಬೆಲೆಯು ಗುರುವಾರ ₹230ಕ್ಕೆ ಮತ್ತೊಮ್ಮೆ ತಲುಪಿದೆ. ಹೀಗೆ ಮಧ್ಯಂತರದಲ್ಲಿ ಅವಕಾಶ ಸೃಷ್ಟಿಸುವ ಪೇಟೆ  ಹೂಡಿಕೆದಾರರ ಸಹನೆ ಮತ್ತು ನಿರ್ಧರಿಸುವ ಗುಣಕ್ಕೆ ಸವಾಲಾಗಿದೆ.ಒಟ್ಟಾರೆ ನಾಲ್ಕು ದಿನಗಳ ವಹಿವಾಟಿನಲ್ಲಿ ಮಿಶ್ರಿತ ಚಟುವಟಿಕೆ ಪ್ರದರ್ಶಿತವಾಗಿದೆ.  ಸಂವೇದಿ ಸೂಚ್ಯಂಕ 86ಅಂಶ  ಏರಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 136 ಅಂಶ ಹಾಗು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 247 ಅಂಶ ಏರಿಕೆ ಕಂಡು ಮತ್ತೊಮ್ಮೆ ಚಟುವಟಿಕೆಯು ಮಧ್ಯಮ ಶ್ರೇಣಿ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳಲ್ಲಿ ಕೇಂದ್ರೀಕೃತವಾಗಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₹754 ಕೋಟಿ ಮೌಲ್ಯದ ಷೇರು ಖರೀದಿಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹48 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹121.54ಲಕ್ಷ ಕೋಟಿಯಿಂದ ₹122.91 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಗುರುವಾರ ತಲುಪಿದ  ₹123.38 ಲಕ್ಷ ಕೋಟಿಯು ಸರ್ವಕಾಲೀನ ದಾಖಲೆಯಾಗಿದೆ.ಹೊಸದಾಗಿ ವಹಿವಾಟಿಗೆ ಬಿಡುಗಡೆಯಾದ ಸಿಎಲ್ ಎಜುಕೇಟ್ ಕಂಪೆನಿಯ ಷೇರು ವಿತರಣೆ  ಬೆಲೆ ಕನಿಷ್ಠ ಮಟ್ಟ ತಲುಪಿದೆ. ಇಲ್ಲಿ ವಹಿವಾಟಿನ ಗಾತ್ರ ಸಹ ಅತಿ ಕಡಿಮೆಯಾಗಿದೆ. ಇದಕ್ಕೆ ಕಾರಣವೆಂದರೆ ಕಂಪೆನಿಯ ಷೇರು ಆರಂಭದಿಂದಲೂ 'ಟಿ' ಗುಂಪಿನಲ್ಲಿದ್ದು ಪ್ರತಿ ಮಾರಾಟ ಮತ್ತು ಕೊಳ್ಳುವಿಕೆಯನ್ನು ಷೇರುಗಳ ವಿಲೇವಾರಿಯೊಂದಿಗೆ ಚುಕ್ತಾ ಮಾಡಬೇಕಾದ ಕಾರಣ ಸಟ್ಟಾ ವ್ಯಾಪಾರಕ್ಕೆ ಅವಕಾಶವಿಲ್ಲ. ಈ ಷೇರಿನ ವಿಲೇವಾರಿ ಅಂಶ ಶೇ.100 ಆಗಿದೆ.  ಹಾಗಾಗಿ ವಹಿವಾಟಿನ ಗಾತ್ರ  ಕ್ಷೀಣವಾಗಿದೆ. ಈ ಷೇರನ್ನು ಏಪ್ರಿಲ್ 18 ರಿಂದ 'ಬಿ' ಗುಂಪಿಗೆ ವರ್ಗಾಯಿಸುವ ಸುದ್ದಿ ಹೊರಬಿದ್ದ  ಕಾರಣ ಷೇರಿನ ಬೆಲೆ ಶುಕ್ರವಾರ ದಿನದ ಗರಿಷ್ಠ ಆವರಣ ಮಿತಿ ತಲುಪಿತ್ತು. ಅಂದರೆ ಐಪಿಒಗಳಲ್ಲಿ ಹೂಡಿಕೆ ಮಾಡಿ ತ್ವರಿತ ಲಾಭ ಗಳಿಕೆಗೆ ಮಾತ್ರ ಸೀಮಿತವಾಗಿದ್ದಲ್ಲಿ ಫಲಿತಾಂಶ ಉತ್ತಮ.ವಾರದ ವಿಶೇಷ

ಷೇರುಪೇಟೆಗಳಲ್ಲಿ ವಹಿವಾಟುದಾರರು ಹೊಸ ಹೊಸ ವಿಧಾನ ಕಂಡುಕೊಳ್ಳುವ ಸಂಶೋಧನೆ ನಡೆಸುತ್ತಿರುತ್ತಾರೆ.  ಅದರಲ್ಲಿ ಅತ್ಯಂತ ಯಶಸ್ವಿ ಪ್ರಯೋಗವೆಂದರೆ ಇತ್ತೀಚಿನ ದಿನಗಳಲ್ಲಿ ಆರಂಭಿಕ ಷೇರು ವಿತರಣೆಗಳಾಗಿವೆ (ಐ ಪಿಓ). ಈಗಿನ ಐಪಿಒ ವಿತರಣೆಗೂ ಜಾಗತೀಕರಣಕ್ಕೂ ಮುಂಚಿನ ವಿತರಣೆಗಳಿಗೂ ಭಾರಿ ವ್ಯತ್ಯಾಸ, ಬದಲಾವಣೆಗಳಿವೆ.  ಅಂದು ಐಪಿಒಗಳಲ್ಲಿ ಷೇರು ಪಡೆಯಲು ಯಶಸ್ವಿಯಾದರೆ ಆಕರ್ಷಕ ಲಾಭ ಕಟ್ಟಿಟ್ಟ ಬುಟ್ಟಿಯಂತಿತ್ತು.  ಅದೇ ರೀತಿ ಇಂದಿನ ಐಪಿಒಗಳಲ್ಲಿ  ಐಪಿಒ ನಿಗದಿ ಆದಲ್ಲಿ ಹೆಚ್ಚಿನ ವಿತರಣೆಗಳಲ್ಲಿ ಉತ್ತಮ ಲಾಭ ಪಡೆಯುವಂತಾಗಿದೆ. 

ಈ ಹಿಂದೆ ವಿತರಣೆಗಳು ಅಲ್ಪ ಪ್ರೀಮಿಯಂ, ಬೆಲೆಯಲ್ಲಿ  ಆಗುತ್ತಿತ್ತು.  ಆಗ ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಷ್ಯುಸ್ ವಿತರಣೆ ಬೆಲೆಯನ್ನು ನಿಯಂತ್ರಿಸುತ್ತಿದ್ದರು.  ಈಗ ಕಂಪೆನಿಗಳಿಗೆ ತಮ್ಮ ಷೇರಿನ ವಿತರಣೆ ಬೆಲೆಯನ್ನು ತಾವೇ ಮರ್ಚಂಟ್‌ ಬ್ಯಾಂಕರ್  ಮೂಲಕ ನಿಗದಿಗೊಳಿಸುತ್ತಾರೆ.  ಸೆಬಿಗೆ ಸಲ್ಲಿಸಿದ ಡ್ರಾಫ್ಟ್ ಪ್ರಾಸ್ಪೆಕ್ಟಸ್‌ನಲ್ಲಿನ ಅಂಶ ಕ್ರಮ ಬದ್ಧವಾಗಿವೆಯೇ ಎಂಬ ಅಂಶವನ್ನು ಮಾತ್ರ ಪರಿಶೀಲಿಸಲಾಗುವುದು, ವಿತರಣೆ ಬೆಲೆ ಪರಿಗಣಿಸುವುದಿಲ್ಲ. ಹೀಗಾಗಿ ಈ ವಿಧವನ್ನು ಫ್ರೀ  ಪ್ರೈಸಿಂಗ್ ವಿಧ ಎನ್ನುವರು.   ಇತ್ತೀಚಿನ ದಿನಗಳಲ್ಲಿ ಕಂಪೆನಿಗಳು ಅತಿ ಹೆಚ್ಚಿನ ಬೆಲೆಗಳಲ್ಲಿ ವಿತರಿಸುತ್ತಿವೆ ಎಂಬ ಅಂಶ ಎಲ್ಲರ ಗಮನಕ್ಕೆ ಬಂದಿದ್ದರೂ, ವಿತರಣೆಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಗಮನಾರ್ಹ. ಇದಕ್ಕೆ ಕಾರಣ  ಸ್ಥಳೀಯ ವಿತ್ತೀಯ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳ ಹಾಗು ಮ್ಯೂಚುವಲ್ ಫಂಡ್  ತೋರುತ್ತಿರುವ ಆಸಕ್ತಿಯಾಗಿದೆ. ಇತ್ತೀಚಿಗೆ ವಹಿವಾಟಿಗೆ ಬಿಡುಗಡೆಯಾದ ಅವೆನ್ಯೂ ಸೂಪರ್ ಮಾರ್ಟ್ಸ್   ಕಂಪೆನಿಯ ಷೇರು ₹299 ರಲ್ಲಿ ವಿತರಣೆಯಾಗಿ ಆರಂಭದಿಂದಲೂ ಉತ್ತಮ ಲಾಭ ಗಳಿಸಿಕೊಟ್ಟಿದೆ. ಆದರೆ ಶುಕ್ರವಾರ  ಷೇರಿನ ಬೆಲೆಯಲ್ಲಿ ಕಂಡರಿಯದ ಚೇತರಿಕೆ ಮೂಡಿದೆ. ಅಂದು ದಿನದ ಆರಂಭದಲ್ಲಿ ಷೇರಿನ ಬೆಲೆಯು ₹664ರಲ್ಲಿದ್ದು ₹750ರ ಸಮೀಪ ಕೊನೆಗೊಂಡಿದೆ. ಅಂದಿನ ವಹಿವಾಟಿನ ಗಾತ್ರ ಸಹ ಮೂರು ಪಟ್ಟು ಹೆಚ್ಚಿದೆ. ದಿಢೀರ್ ಬದಲಾವಣೆಗೆ ಕಂಪೆನಿಯ ಬ್ಯಾಂಕ್ ಸಾಲಕ್ಕೆ ರೇಟಿಂಗ್ ಸಂಸ್ಥೆ 'ಕ್ರಿಸಿಲ್' AA / ಪಾಸಿಟಿವ್‌ನಿಂದ AA / ಸ್ಟೇಬಲ್‌ಗೆ ಹೆಚ್ಚಿಸಿರುವುದಾಗಿದೆ. ಈ ಕಾರಣಕ್ಕಾಗಿ ಇಂತಹ ಬೃಹತ್ ಏರಿಕೆ ಸರಿಯಲ್ಲ.  ಇಲ್ಲಿ ಹೂಡಿಕೆದಾರರು ಗಮನದಲ್ಲಿರಿಸಬಹುದಾದ ಅಂಶವೆಂದರೆ ಪ್ರವರ್ತಕರು ಶೇ.87ಕ್ಕೂ ಹೆಚ್ಚಿನ ಭಾಗಿತ್ವ ಹೊಂದಿದ್ದು,  ಸಾರ್ವಜನಿಕರಲ್ಲಿ ಶೇ.17.89 ಮಾತ್ರ ವಿತರಣೆಯಾಗಿದೆ. ಅಂದರೆ ಹರಿದಾಡುವ ಷೇರುಗಳ ಸಂಖ್ಯೆ ಸೀಮಿತವಾಗಿದೆ. ಶುಕ್ರವಾರ ವಹಿವಾಟಾದ ಷೇರುಗಳಲ್ಲಿ  ಕೇವಲ ಶೇ.7.7ರಷ್ಟು ಮಾತ್ರ ವಿಲೇವಾರಿಯಾಗಿದ್ದು, ಉಳಿದವು ಡೇ ಟ್ರೇಡಿಂಗ್ ಚಟುವಟಿಕೆಯಾಗಿವೆ.  ಹೂಡಿಕೆದಾರರು, ಲಾಭದ ನಗದೀಕರಣಕ್ಕೆ ಪ್ರಾಶಸ್ತ್ಯ ನೀಡುವುದು ಉತ್ತಮ.ಇದೇ  ರೀತಿ ಮತ್ತೊಂದು ಹೊಸ ಲಿಸ್ಟಿಂಗ್ ಕಂಪೆನಿ ಶಂಕರ ಬಿಲ್ಡಿಂಗ್ ಪ್ರಾಡಕ್ಟ್ಸ್ ಲಿಮಿಟೆಡ್‌ ಶುಕ್ರವಾರ ₹624ರ ಸಮೀಪದಿಂದ ₹695ರವರೆಗೂ ಏರಿಕೆ ಕಂಡಿದೆ. ಅಲ್ಲಿಯೂ ಸಹ ಶೇ.7.2 ರಷ್ಟು ಡೆಲಿವರಿ ವ್ಯವಹಾರವಾಗಿದ್ದು, ಉಳಿದಂತೆ ಡೇ ಟ್ರೇಡಿಂಗ್ ಚಟುವಟಿಕೆಯಾಗಿದೆ. ಈ ರೀತಿಯ ಸಟ್ಟಾ ವ್ಯಾಪಾರದ ಬೆಲೆಗಳು ಅಲ್ಪ ಕಾಲೀನವಾಗಿದ್ದು, ಅವಕಾಶದ ಲಾಭ ಪಡೆದು ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry