ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿಸಿದ ಚಿಕಿತ್ಸೆ: ಚಿಗುರಿದ ಮರಗಳು

ಮರಗಳಿಗೆ ಮರುಜೀವ ನೀಡುವ ಪ್ರಯತ್ನ
Last Updated 9 ಏಪ್ರಿಲ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತು ಫಲಕಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ‘ಆ್ಯಸಿಡ್‌ ದಾಳಿ’ಗೆ ಒಳಗಾಗಿದ್ದ ಮರಗಳಿಗೆ ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ಅವರು ನೀಡಿರುವ ಚಿಕಿತ್ಸೆ ಫಲಿಸಿದೆ.

ಆ್ಯಸಿಡ್‌ನಿಂದ ಸುಟ್ಟು ಹೋಗಿದ್ದ 17 ಮರಗಳ ಪೈಕಿ  ಹೂ ಅರಸಿ ಜಾತಿಯ ಮೂರು ಮರಗಳ ಬುಡದಲ್ಲಿ ಮತ್ತೆ ಚಿಗುರು  ಕಾಣಿಸಿಕೊಂಡಿದೆ.

ಮಾರತಹಳ್ಳಿ ರಸ್ತೆಯ ಬಳಿಯ ಮರಗಳು ಮಾರ್ಚ್‌ ಮೊದಲ ವಾರದಲ್ಲಿ  ಏಕಾಏಕಿ ಒಣಗಲಾರಂಭಿಸಿದ್ದು ಬೆಂಗಳೂರು  ಮಹಾನಗರ ಪಾಲಿಕೆಯ ವೃಕ್ಷ ಸಮಿತಿ ಸದಸ್ಯರೂ ಆಗಿರುವ ವಿಜಯ್‌ ಅವರ ಗಮನಕ್ಕೆ ಬಂದಿತ್ತು. ಅವರು ಈ ಮರಗಳನ್ನು ಪರಿಶೀಲಿಸಿದಾಗ  ಅವುಗಳ ಬುಡಕ್ಕೆ ಆ್ಯಸಿಡ್‌ ಸುರಿದಿರುವುದು ಪತ್ತೆಯಾಗಿತ್ತು.   ಈ ಬಗ್ಗೆ ಬಿಬಿಎಂಪಿ ಅರಣ್ಯ ಘಟಕಕ್ಕೆ ದೂರು ನೀಡಿದ್ದರು.

ಫಲಿಸಿದ ಚಿಕಿತ್ಸೆ: ‘ಆ್ಯಸಿಡ್‌ನಿಂದಾಗಿ ಮರಗಳು ಮತ್ತೆ ಬದುಕಿಸಲಾರದಷ್ಟು ಹಾನಿಗೊಳಗಾಗಿದ್ದವು. ಆದರೂ ಅವುಗಳನ್ನು ಉಳಿಸಲು ನನ್ನಿಂದಾದ ಪ್ರಯತ್ನ ಮಾಡಿದ್ದೇನೆ. ಮರಗಳ ಬುಡದಲ್ಲಿ ಆ್ಯಸಿಡ್‌ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಅವುಗಳ ಬೇರುಗಳನ್ನು ಬಲಪಡಿಸಲು ಚಿಕಿತ್ಸೆ ನೀಡಿದ್ದೆ. ಸುಲಭವಾಗಿ ಹೀರಿಕೊಳ್ಳುವ ಕೆಲವು ಪೋಷಕಾಂಶಗಳನ್ನು ಒದಗಿಸಿದ್ದೆ.  ಮರಗಳಿಗೆ  ಕೀಟಬಾಧೆ ತಗಲಬಾರದು ಎಂಬ ಕಾರಣಕ್ಕೆ ಶಿಲೀಂಧ್ರನಾಶಕಗಳನ್ನು ಚಿಮುಕಿಸಿದ್ದೆ. ನಿತ್ಯವೂ ಈ ಮರಗಳಿಗೆ ನೀರುಣಿಸಿದ್ದೇವೆ. ಚಿಕಿತ್ಸೆಯ ಬಳಿಕ ಮೂರು ಮರಗಳನ್ನು ಬದುಕಿಸಲು ಸಾಧ್ಯವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ  ಅಕ್ರಮವಾಗಿ ಜಾಹೀರಾತು ಅಳವಡಿಸಲಾಗಿತ್ತು. ನಾವು ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಮರಗಳಿಗೆ ಆ್ಯಸಿಡ್‌ ಸುರಿದ ಜಾಹೀರಾತು ಕಂಪೆನಿ ವಿರುದ್ಧ ಕ್ರಮ ಕೈಗೊಂಡರು. ಇದಾದ ಕೆಲವೇ ದಿನಗಳಲ್ಲಿ  ಮಹದೇವಪುರ  ಪೊಲೀಸ್‌ ಠಾಣೆಯ  ಸಮೀಪ 10 ಮರಗಳ ರೆಂಬೆಗಳನ್ನು ಜಾಹೀರಾತು ಸಂಸ್ಥೆಯೊಂದು ಕತ್ತರಿಸಿತು.  ಇಂತಹ ಪ್ರಕರಣಗಳು ಗುಟ್ಟಾಗಿ ನಡೆಯುತ್ತಲೇ ಇರುತ್ತವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅರಳಿ ಮರದ ಜೀವ ಉಳಿಸಲು ಪಣ
ಹಲಸೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿದ್ದ ಅರಳಿಮರವನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯೇ ಮುಂದೆ ನಿಂತು  ಕಡಿಸಿದ್ದಾರೆ. ಇದಕ್ಕೆ

ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.  ಸ್ಥಳೀಯರ ಒತ್ತಾಯದ ಮೇರೆಗೆ,  ನೂರಾರು ವರ್ಷಗಳಷ್ಟು ಹಳೆಯದಾದ ಈ ಮರಕ್ಕೂ ಮತ್ತೆ ಜೀವ
ಭರಿಸುವ ಪ್ರಯತ್ನಕ್ಕೆ ವಿಜಯ್‌ ಕೈಹಾಕಿದ್ದಾರೆ.

‘ಅರಳಿ ಮರವನ್ನು ಕಡಿದು ಐದಾರು ದಿನಗಳಾಗಿವೆ. ಈ ಮರಕ್ಕೂ ಚಿಕಿತ್ಸೆ ಆರಂಭಿಸಿದ್ದೇನೆ. ಮೇಣದ ಮುಲಾಮು ಹಚ್ಚಿದ್ದೇನೆ.  ಜೇನ್ನೊಣದ ಮೇಣ ಹಾಗೂ ಕಿತ್ತಳೆ ಎಣ್ಣೆಯನ್ನು ಬಿಸಿ ಮಾಡಿ ಈ ಮುಲಾಮನ್ನು ತಯಾರಿಸಲಾಗುತ್ತದೆ. ಇದು ಕಾಂಡದ ತೇವಾಂಶ ಉಳಿಸಿಕೊಳ್ಳಲು ಹಾಗೂ  ಕಾಂಡದೊಳಕ್ಕೆ ಕೀಟಗಳು ಪ್ರವೇಶಿಸುವುದನ್ನು ತಡೆಯಲು  ಇದು ಸಹಕಾರಿ’ ಎಂದು ವಿವರಿಸಿದರು.

‘ಮರ ಮತ್ತೆ ಚಿಗುರೊಡೆಯುವಂತೆ ಮಾಡಲು ಬುಡಕ್ಕೆ ಜೀವಾಮೃತ ಉಣಿಸುತ್ತಿದ್ದೇವೆ. ಐದು ಬಗೆಯ ಕಾಳುಗಳು, ಕರಿ ಬೆಲ್ಲ, ಸೆಗಣಿ ಹಾಗೂ ಗಂಜಳ ಬಳಸಿ ಜೀವಾಮೃತವನ್ನು ತಯಾರಿಸಲಾಗುತ್ತದೆ. ಇದು ಸೂಕ್ಷ್ಮಾಣುಜೀವಿಗಳ ಬಾಧೆಯಿಂದ ಮರಕ್ಕೆ ರಕ್ಷಣೆ ಒದಗಿಸುತ್ತದೆ’ ಎಂದು ಅವರು ತಿಳಿಸಿದರು.

‘10 ಲೀಟರ್‌ ನೀರಿಗೆ 2 ಲೀಟರ್‌ನಷ್ಟು ಜೀವಾಮೃತವನ್ನು ಮಿಶ್ರಮಾಡಿ ಈ ಮರದ ಬುಡಕ್ಕೆ ನಿತ್ಯವೂ ಉಣಿಸಬೇಕು. 15 ದಿನಗಳ ಒಳಗೆ ಅರಳಿಮರ ಮತ್ತೆ ಚಿಗುರೊಡೆಯುವ ಭರವಸೆ ಇದೆ’ ಎಂದರು. ಅನುಮತಿ ಪಡೆಯದೆಯೇ ಈ ಮರವನ್ನು ಕಡಿಸಿರುವ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಆಮ್ಲಜನಕದ ಆಗರ: ‘ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ್ಯವಾದ ಪ್ರಬೇಧ.  ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ  ಈ  ಮರಗಳ ಕೊಡುಗೆ ಮಹತ್ವದ್ದು’ ಎಂದು ವಿಜಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT