ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಮತದಾನ

13ರಂದು ಫಲಿತಾಂಶ
Last Updated 9 ಏಪ್ರಿಲ್ 2017, 20:35 IST
ಅಕ್ಷರ ಗಾತ್ರ

ಮೈಸೂರು/ಚಾಮರಾಜನಗರ: ಭಾರಿ ಕುತೂಹಲಕ್ಕೆ ಕಾರಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಗೆ ಅರೆ ಸೇನಾಪಡೆ ಹಾಗೂ ಪೊಲೀಸ್‌ ಕಾವಲಿನಲ್ಲಿ ಭಾನುವಾರ ಬಿರುಸಿನ ಮತದಾನ ನಡೆಯಿತು.

ನಂಜನಗೂಡಿನಲ್ಲಿ ದಾಖಲೆಯ ಶೇ 77.56, ಗುಂಡ್ಲುಪೇಟೆಯಲ್ಲಿ ಶೇ 87.10ರಷ್ಟು ಮತ ಚಲಾವಣೆ ಆಗಿದೆ. ಮಂದಗತಿಯಲ್ಲಿ ಶುರುವಾಗಿ ಮಧ್ಯಾಹ್ನದ ವೇಳೆಗೆ ಚುರುಕು ಪಡೆದುಕೊಂಡಿತು.

ಎರಡೂ ಕ್ಷೇತ್ರಗಳಲ್ಲಿ ಕೆಲವೆಡೆ ಕಾರ್ಯಕರ್ತರ ನಡುವೆ ಜಟಾಪಟಿ, ಗುಂಪು ಚದುರಿಸಲು ನಡೆದ ಲಘು ಲಾಠಿ ಪ್ರಹಾರ ಹೊರತುಪಡಿಸಿ ಮತದಾನ ಶಾಂತಿಯುತವಾಗಿತ್ತು. ಅರೆಸೇನಾ ಪಡೆಯ ಆರು ತುಕಡಿಗಳು ಸೇರಿದಂತೆ ಸುಮಾರು 2,000 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆ ಮುಂಭಾಗ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಗುಂಪು ಚದುರಿಸಿದರು. ಮುಬಾರಕ್‌ ಮತ್ತು ಸಾದಿಕ್‌ ಎಂಬುವವರು ಗಾಯಗೊಂಡಿದ್ದಾರೆ. ಈ ವೇಳೆ ಕೆಲಕಾಲ ಮಳೆ ಸುರಿಯಿತು.

ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌, ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಎಸ್‌. ನಿರಂಜನಕುಮಾರ್‌ ಅವರ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.

ಬಿಸಿಲಲ್ಲೂ ಬಿರುಸು: ನಂಜನಗೂಡಿನಲ್ಲಿ ಮತದಾರರು ಬಿಸಿಲ ಧಗೆಯಲ್ಲೂ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಇಲ್ಲಿ ದಾಖಲೆಯ ಮತದಾನವಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 76.18 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಶೇ 72.36ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ 71.9ರಷ್ಟು ಮತದಾನ ನಡೆದಿತ್ತು.

ಆರಂಭದಲ್ಲಿ ಮತದಾರರು ಅಷ್ಟೇನೂ ಉತ್ಸಾಹ ತೋರಿಸದ ಕಾರಣ ನೀರಸ ವಾತಾವರಣ ಸೃಷ್ಟಿಯಾಗಿತ್ತು. ಯುವಕರಿಗಿಂತ ವಯಸ್ಸಾದವರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದುದು ಕಂಡು ಬಂತು. ಮಧ್ಯಾಹ್ನದ ವೇಳೆಗೆ ಮತದಾನ ಚುರುಕಾಯಿತು. ಯುವಕರ ದಂಡು ಮತಗಟ್ಟೆಯತ್ತ ದಾಪುಗಾಲು ಇಟ್ಟಿತು.

ಮತಗಟ್ಟೆ ಸಂಖ್ಯೆ 49ರಲ್ಲಿ ಚುನಾವಣಾ ಸಿಬ್ಬಂದಿಯಿಂದ ಎಡವಟ್ಟು ಸಂಭವಿಸಿತು. ಮತ ಚಲಾಯಿಸಿದ ಮತದಾರರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದರು. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಎಡಗೈ ತೋರು ಬೆರಳಿಗೆ ಶಾಯಿ ಹಾಕಬೇಕಿತ್ತು. ಇದೇ ಮೊದಲ ಬಾರಿ ಮತ ಖಾತರಿ ಸೌಲಭ್ಯ (ವಿವಿ ಪ್ಯಾಟ್‌) ಬಳಸಲಾಯಿತು. ಕೆಲವರಿಗೆ ಅದೇನು ಎಂಬುದು ಗೊತ್ತಾಗದೆ ಮುಖ ಮುಖ ನೋಡುತ್ತಿದ್ದರು.

ಕೆಲವೆಡೆ ಸಂಜೆ 5 ಗಂಟೆಯೊಳಗೆ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ಸಂಜೆ 6ರವರೆಗೆ ಹಕ್ಕು ಚಲಾಯಿಸಿದರು. ಕೆಲವು ಮತದಾನ ಕೇಂದ್ರಗಳಲ್ಲಿ ಅಂಗವಿಕಲರು ಹಾಗೂ ವಯೋವೃದ್ಧರು ಮತದಾನ ಮಾಡಿದರು.

ವೆಬ್‌ ಕ್ಯಾಸ್ಟಿಂಗ್‌: ವಿವಾದದ ಕೇಂದ್ರಬಿಂದು ಬದನವಾಳು ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಇಲ್ಲಿನ ಗ್ರಾಮಸ್ಥರು ತಗಟ್ಟೆಗೆ ಬಂದು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ಮತಗಟ್ಟೆಯನ್ನು ಅತಿ ಸೂಕ್ಷ್ಮ ಎಂದು ಗುರುತಿಸಿದ್ದರಿಂದ ವೆಬ್‌ ಕ್ಯಾಸ್ಟಿಂಗ್‌ ಮಾಡಲಾಯಿತು. ಈ ಮೂಲಕ ಜಿಲ್ಲಾ ಚುನಾವಣಾ ಕಚೇರಿಗೆ ನೇರ ಪ್ರಸಾರ ಸೌಲಭ್ಯ ಕಲ್ಪಿಸಲಾಗಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದ ಕಣ್ಗಾವಲು ಕೂಡ ಇತ್ತು.
ಮೋಹನಕುಮಾರಿ ಹಾಲಹಳ್ಳಿಯಲ್ಲಿ ಮತ್ತು ನಿರಂಜನಕುಮಾರ್‌ ಚೌಡಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಸಂಸದ ಆರ್.ಧ್ರುವನಾರಾಯಣ ಹೆಗ್ಗವಾಡಿ ಗ್ರಾಮದಲ್ಲಿ ಮತದಾನ ಮಾಡಿದರು.

ಅಭ್ಯರ್ಥಿ ಕಳಲೆ ಕ್ರಮಕ್ಕೆ ಆಕ್ಷೇಪ
ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರು ತವರೂರು ಕಳಲೆ ಗ್ರಾಮದಲ್ಲಿ (ಮತಗಟ್ಟೆ ಸಂಖ್ಯೆ119) ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಚಿಹ್ನೆ ಹಸ್ತದ ಚಿತ್ರವಿರುವ ಶಾಲನ್ನು ಕೊರಳಿಗೆ ಕಟ್ಟಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಮತ ಚಲಾಯಿಸಿದ ಬಳಿಕ ವೃದ್ಧೆ ಸಾವು
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮನೆಗೆ ತೆರಳಿದ ವೃದ್ಧೆ ದೇವಮ್ಮ (80) ನಿಧನರಾದರು. ದೇವಮ್ಮ ದೈಹಿಕವಾಗಿ ಬಳಲಿದ್ದರು. ಅವರ ಇಚ್ಛೆಯ ಅನುಸಾರವೇ ಬೆಳಿಗ್ಗೆ ಕುಟುಂಬದ ಸದಸ್ಯರು ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸಿದ್ದರು.

ವಿವಿ ಪ್ಯಾಟ್‌ನಲ್ಲಿ ದೋಷ, ವಿಳಂಬ: ಮತ ಖಾತರಿ ಸೌಲಭ್ಯದ ವಿವಿ ಪ್ಯಾಟ್‌ ಹಾಗೂ ವಿದ್ಯುನ್ಮಾನ ಮತಯಂತ್ರ ಕೈಕೊಟ್ಟ ಕಾರಣ ನಂಜನಗೂಡಿನ ಚಿನ್ನದಗುಡಿಹುಂಡಿ, ಗುಂಡ್ಲುಪೇಟೆಯ ತೆರಕಣಾಂಬಿಹುಂಡಿ, ಭೀಮನಬೀಡು, ಮಡಹಳ್ಳಿ, ಮಲೆಯೂರು, ಕೋಡಿಹಳ್ಳಿ, ರಾಘವಾಪುರ ಗ್ರಾಮಗಳಲ್ಲಿ ಮತದಾನ ವಿಳಂಬವಾಯಿತು. ತಾಂತ್ರಿಕ ದೋಷದಿಂದ ಕೆಲವೆಡೆ ಮತದಾನ ಆರಂಭವಾಗಿದ್ದೇ ಬೆಳಿಗ್ಗೆ 8 ಗಂಟೆಗೆ. ಚುನಾವಣಾಧಿಕಾರಿಗಳು ಮತಗಟ್ಟೆಗೆ ಬಂದು ಹೊಸ ಯಂತ್ರ ಅಳವಡಿಸಿದರು.
* * *
ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ
ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT