ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಬರವಿಲ್ಲ

ತುಂಗಭದ್ರಾದಲ್ಲಿ ಮಾತ್ರ ಡೆಡ್‌ ಸ್ಟೋರೇಜ್‌ ನೀರು ಬಳಕೆ
Last Updated 10 ಏಪ್ರಿಲ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ಜಲಾಶಯಗಳ ನೀರನ್ನು ಆಶ್ರಯಿಸಿರುವ ಜನವಸತಿಗಳಿಗೆ ಜೂನ್‌ 15ರವರೆಗೂ ಕುಡಿಯುವ ನೀರಿಗೆ ತೊಂದರೆಯಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಜಲ ಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಎಲ್ಲ ಜಲಾಶಯಗಳಲ್ಲಿ ಬಳಕೆಗೆ ಲಭ್ಯ ಇರುವ ಹಾಗೂ ಡೆಡ್‌ ಸ್ಟೋರೇಜ್‌ನ (ಜಲಾಶಯಗಳ ಗೇಟ್‌ಗಿಂತಲೂ ಕೆಳಗಿರುವ ನೀರು) ಮಾಹಿತಿ ಪಡೆಯಲಾಗಿದೆ. ತುಂಗಭದ್ರಾ ಜಲಾಶಯ ಹೊರತುಪಡಿಸಿದರೆ ಬೇರೆ ಯಾವ ಜಲಾಶಯದಲ್ಲೂ ಡೆಡ್‌ ಸ್ಟೋರೇಜ್‌ ಬಳಸಬೇಕಾದ ಪರಿಸ್ಥಿತಿ ಜೂನ್‌ವರೆಗೆ ಇಲ್ಲ ಎಂದರು.

ಆಲಮಟ್ಟಿಯಲ್ಲಿ ಡೆಡ್‌ಸ್ಟೋರೇಜ್ ಸೇರಿ 12 ಟಿಎಂಸಿ ಅಡಿ ನೀರಿದ್ದು, ಅದರಲ್ಲಿ 8.28 ಟಿಎಂಸಿ ಅಡಿ ಬಳಕೆಗೆ ಲಭ್ಯ ಇದೆ. ಹೀಗಾಗಿ ಈ ನೀರನ್ನು ಆಶ್ರಯಿಸಿದ ಪ್ರದೇಶಗಳಿಗೆ  ಸಮಸ್ಯೆಯಾಗುವುದಿಲ್ಲ ಎಂದರು.

ನಾರಾಯಣಪುರ ಜಲಾಶಯದಲ್ಲಿ ಒಟ್ಟು13 ಟಿಎಂಸಿ ಅಡಿ ನೀರಿದ್ದು, 5.9 ಟಿಎಂಸಿ ಅಡಿ ಬಳಕೆಗೆ ದೊರೆಯಲಿದೆ. ಹಿಡಕಲ್‌, ಹಿಪ್ಪರಗಿಯಲ್ಲಿರುವ ನೀರು ಆ ಭಾಗದ ಕುಡಿಯುವ ಉದ್ದೇಶಕ್ಕೆ ಸಾಕಾಗಲಿದೆ ಎಂದು ಸಚಿವರು ವಿವರಿಸಿದರು.



ಮಲಪ್ರಭಾ ಜಲಾಶಯದಲ್ಲಿ 1.77 ಟಿಎಂಸಿ ಅಡಿ ನೀರಿದ್ದು. ಬಾದಾಮಿಯವರೆಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬರಾಜು ಮಾಡಬಹುದು. ಸಿಂಗಟಾಲೂರು ಯೋಜನೆಗೆ ಭದ್ರಾ ಜಲಾಶಯದಿಂದ 0.46 ಟಿಎಂಸಿ ಅಡಿ ನೀರು ಹರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ತುಂಗಭದ್ರಾದಲ್ಲಿ ಡೆಡ್ ಸ್ಟೋರೇಜ್‌ ಬಳಕೆ: ತುಂಗಭದ್ರಾ ಜಲಾಶಯದಲ್ಲಿ ಬಳಕೆಗೆ ಲಭ್ಯ ಇರುವ 1.70 ಟಿಎಂಸಿ ಅಡಿ ಹಾಗೂ ಡೆಡ್ ಸ್ಟೋರೇಜ್‌ ನೀರು 2 ಟಿಎಂಸಿ ಅಡಿ ಸೇರಿ ಒಟ್ಟು 3.70 ಟಿಎಂಸಿ ಅಡಿ ನೀರಿದೆ. ಇದರಲ್ಲಿ 0.50 ಟಿಎಂಸಿ ಅಡಿ ನೀರನ್ನು ಆಂಧ್ರಪ್ರದೇಶಕ್ಕೆ ಬಿಡಬೇಕಾಗುತ್ತದೆ. ಒಟ್ಟು 2.20 ಟಿಎಂಸಿ ಅಡಿ ನೀರು ಲಭ್ಯ ಇದ್ದು, ಡೆಡ್‌ ಸ್ಟೋರೇಜ್‌ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸಚಿವರು ಹೇಳಿದರು.

ಮೋಡ ಬಿತ್ತನೆಗೆ ಸಿದ್ಧತೆ: ಹಿಂದಿನ ವರ್ಷಗಳಲ್ಲಿ ಮುಂಗಾರು, ಹಿಂಗಾರು ಮುಗಿದ ಮೇಲೆ ಮೋಡ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಮಳೆ ಕೊರತೆ ಆಗಿರುವುದರಿಂದ ಮುಂಗಾರು ಆರಂಭದಲ್ಲಿಯೇ ಮೋಡ ಬಿತ್ತನೆಗೆ ಇಲಾಖೆ ಸಿದ್ಧತೆ ನಡೆಸಿದೆ. ಈ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
* * *
ಕುಡಿಯುವ ನೀರಿಗೆ ತೀವ್ರ ತೊಂದರೆ ಇರುವುದರಿಂದ ಜಲಾಶಯ ಅಥವಾ ನಾಲಾ ನೀರನ್ನು ಕೃಷಿ ಉದ್ದೇಶಕ್ಕೆ ರೈತರು ಬಳಸಬಾರದು.
ಎಂ.ಬಿ. ಪಾಟೀಲ
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT