ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಮರಾಠಿಗರ ಧರೆಪ್ಪನ ಜಾತ್ರೆ

Last Updated 11 ಏಪ್ರಿಲ್ 2017, 11:33 IST
ಅಕ್ಷರ ಗಾತ್ರ

ವಿಜಯಪುರ: ಚೈತ್ರ ಮಾಸದ ಹುಣ್ಣಿಮೆ ಯಂದು ತಮ್ಮೂರಿನಲ್ಲಿ ನಡೆಯುವ ಧರೆಪ್ಪನ ಜಾತ್ರೆಗೆ ಪೂಜಾ ಸಾಮಗ್ರಿ, ಹೂ ದಂಡೆ ಕೊಂಡೊಯ್ಯಲು ಮರಾಠಿಗರು ನಗರಕ್ಕೆ ಬರುವುದು ನಾಲ್ಕೈದು ಶತಮಾನಗಳಿಂದ ನಡೆದು ಬಂದಿದೆ.

ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಪುರ ತಾಲ್ಲೂಕಿನ ಅಂಬೆ, ಚಳೆ, ತಾರಾಪುರ, ಮಂಗೇವಾಡಿ ಗ್ರಾಮಗಳ ಜನತೆ ಈ ಸಂಪ್ರದಾಯವನ್ನು ಇಂದಿಗೂ ಅನೂಚಾನಾಗಿ ಪಾಲಿಸುತ್ತಿರುವುದು ವಿಶೇಷ.

ಮಹಾರಾಷ್ಟ್ರದ ಈ ನಾಲ್ಕು ಗ್ರಾಮಗಳಲ್ಲಿ ಧರೆಪ್ಪನ ದೇಗುಲವಿದೆ. ಚೈತ್ರ ಮಾಸದ ಹುಣ್ಣಿಮೆಯಂದು ಅಪಾರ ಭಕ್ತರ ಸಮ್ಮುಖ ವಿಜೃಂಭಣೆ ಯಿಂದ ಪ್ರತ್ಯೇಕವಾಗಿ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಅಗತ್ಯವಿರುವ ಪೂಜಾ ಸಾಮಗ್ರಿ, ಕಲ್ಯಾಣೋತ್ಸವಕ್ಕೆ ಬೇಕಿರುವ ಹೂ ದಂಡೆ ಕೊಂಡೊಯ್ಯುವುದು ನಗರದ ಶಹಾಪುರ ಅಗಸಿಯಲ್ಲಿರುವ ಅಗರವಾಲ ಕುಟುಂಬ, ಹೂಗಾರ ಕುಟುಂಬದಿಂದ ಎಂಬುದು ಇದರ ವೈಶಿಷ್ಟ್ಯ.

ಚೈತ್ರ ಮಾಸ ಆರಂಭಗೊಳ್ಳುತ್ತಿದ್ದಂತೆ ಈ ನಾಲ್ಕು ಮರಾಠಿ ಹಳ್ಳಿಗಳ ದೇಗುಲದಲ್ಲಿ ಜಾತ್ರೆಯ ಘಟಸ್ಥಾಪನೆ ನಡೆಯುತ್ತದೆ. ಪಂಚಮಿಯ ದಿನ ಗ್ರಾಮಗಳಿಂದ ಮನೆಗೊಬ್ಬರಂತೆ ಮಂದಿ ಪಾದಯಾತ್ರೆಗೆ ಶ್ರದ್ಧಾ ಭಕ್ತಿಯಿಂದ ಸಿದ್ಧರಾಗುತ್ತಾರೆ.

ಮಹಾವೀರ ಜಯಂತಿ ಮುನ್ನಾ ದಿನದ ಸಂಜೆ ವೇಳೆಗೆ ನಗರದಲ್ಲಿನ ಅಗರವಾಲ, ಹೂಗಾರ ಕುಟುಂಬದ ಮನೆಗಳ ಬಳಿ 10 ಸಹಸ್ರಕ್ಕೂ ಅಧಿಕ ಜನ ನಾಲ್ಕು ಗ್ರಾಮ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಂದ ಜಮಾಯಿಸುತ್ತಾರೆ.

ರಾತ್ರಿ ಸನಿಹದ ಕೇಶವ ಮಹಾರಾಜರ ಮಠ, ಅಗರವಾಲ, ಹೂಗಾರ ಮನೆ ಮುಂಭಾಗದ ಬಯಲಲ್ಲೇ ಮೊಕ್ಕಾಂ ಹೂಡುತ್ತಾರೆ. ಅಗರವಾಲ ಕುಟುಂಬ ಮಹಾವೀರ ಜಯಂತಿಯ ದಿನದ ನಸುಕಿನ ಮೂರು ಗಂಟೆ ವೇಳೆಗೆ ನಾಲ್ಕು ಗ್ರಾಮಗಳ ದೇವರ ಪೂಜಾರಿಗಳ ಸಮ್ಮುಖ ಧರೆಪ್ಪನ ವಿಶೇಷ ಪೂಜೆ ನಡೆಸುತ್ತದೆ.

ಈ ಸಂದರ್ಭವೇ ಅಗರವಾಲ ಕುಟುಂಬಸ್ಥರು ಜಾತ್ರೆಗೆ ಕುಂಕುಮ, ಅರಿಷಿಣ, ಹೂವು, ಹನುಮ ಜಯಂತಿ ಯಂದು ಹನುಮನಿಗೆ ಧರಿಸಲು ಸಿಂಧೂರ ಸೇರಿದಂತೆ ಇನ್ನಿತರೆ ಪೂಜಾ ಸಾಮಗ್ರಿ ಪೂಜೆ ಮಾಡಿ ಆಯಾ ಗ್ರಾಮದ ಪೂಜಾರಿಗಳ ಕೈಗಿಡುತ್ತಾರೆ. ಅನ್ನ ಸಂತರ್ಪಣೆಯೂ ನಡೆಯುತ್ತದೆ.

ಬಳಿಕ ವಿವಿಧ ಗ್ರಾಮದಿಂದ ಬಂದಂತಹ ಭಕ್ತರು ಹೂಗಾರ ಕಟ್ಟೆ ಯಲ್ಲಿ ಜಮಾಯಿಸುತ್ತಾರೆ. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ತಮ್ಮೂರಿನ ಹೂ ದಂಡೆಗಾಗಿ ಬಯಲಲ್ಲೇ ನಿಂತು ಕಾಯುತ್ತಾರೆ. ಈ ಸಂದರ್ಭ ಶಹಾಪುರ ಅಗಸಿಯಲ್ಲಿ ಕಾಲಿಡಲು ಸಾಧ್ಯವಿಲ್ಲದ ಜನದಟ್ಟಣೆ ಜಮಾಯಿಸುತ್ತದೆ.

ಈ ಸಮಯ ಇಲ್ಲಿ ನಡೆಯುವ ವ್ಯಾಪಾರದ ಪ್ರಮುಖ ವ್ಯಾಪಾರಿಗಳು–ಖರೀದಿದಾರರು ಸಹ ಆ ನಾಲ್ಕು ಗ್ರಾಮಗಳ ಜನರೇ ಎಂಬುದು ವಿಶೇಷ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನಗರದ ಜನತೆ ಇಲ್ಲಿ ಗೋಚರಿಸುತ್ತಾರೆ. ಅಪಾರ ಸಂಖ್ಯೆಯ ಈ ಜನಸಂದಣಿ ಮಾತ್ರ ಅಗರವಾಲ– ಹೂಗಾರ ಕುಟುಂಬಕ್ಕಷ್ಟೇ ಸಂಪರ್ಕ ಹೊಂದಿರುತ್ತದೆ.

ಹೂ ದಂಡೆ ಹೊತ್ತು ಓಡುವ ಭಕ್ತರು:
ತಮ್ಮ ಮನೆಯಲ್ಲಿ ಊರಿ ಗೊಂದರಂತೆ ನಾಲ್ಕು ಹೂ ದಂಡೆ ಗಳನ್ನು ಕಟ್ಟುವ ಹೂಗಾರ ಕುಟುಂಬ ಪೂಜೆ ಸಲ್ಲಿಸಿ ಹೊರಗೆ ತರುವುದೇ ತಡ. ಚಾತಕ ಹಕ್ಕಿಗಳಂತೆ ಕಾದು ನಿಂತಿದ್ದ ಮರಾಠಿ ಭಕ್ತ ಸಮೂಹ ನಾ ಮುಂದು ತಾ ಮುಂದು ಎಂದು ದಂಡೆಯಿದ್ದ ಬುಟ್ಟಿಯನ್ನು ಕಿತ್ತುಕೊಂಡು ತಲೆ ಮೇಲೆ ಹೊತ್ತು ಬರಿಗಾಲಲ್ಲಿ ಓಡುತ್ತಾರೆ.

ಹೂಗಾರ ಮನೆಯಿಂದ ಆರಂಭ ಗೊಂಡ ಓಟ ಸೋಮವಾರ ರಾತ್ರಿ 10 ಗಂಟೆ ವೇಳೆಗೆ ಆಯಾ ಗ್ರಾಮದ ದೇಗುಲ ತಲುಪುತ್ತದೆ. ಹಾದಿಯು ದ್ದಕ್ಕೂ ಅಪಾರ ಜನ ಜಮಾಯಿಸಿ ಹೂ ದಂಡೆಯ ಬುಟ್ಟಿ ಕಿತ್ತುಕೊಂಡು ಓಡು ವುದು ದೇಗುಲ ತಲುಪುವ ತನಕವೂ ನಡೆಯುತ್ತದೆ ಎಂದು ಮಚ್ಚೇಂದ್ರ ಲಂಡ್ವ ಕರಸೋಳಿ ಹೇಳಿದರು.

ಹೂ ದಂಡೆ ಹೊತ್ತೊಯ್ಯುವ ದಾರಿ ನಡುವೆ ಬೋರಗಿ ಬಳಿ ಭಾನುವಾರ ರಾತ್ರಿ ವಾಸ್ತವ್ಯ ಮಾಡಲಾಗುವುದು. ನಾಲ್ಕು ದಂಡೆಗಳು ನಾಲ್ಕು ದಾರಿಯಲ್ಲಿ ಸಾಗಿ ಆಯಾ ಗ್ರಾಮ ತಲುಪುತ್ತವೆ. ಆ ಗ್ರಾಮದ ಹೂ ದಂಡೆಯ ಹಿಂಭಾಗ ಆಯಾ ಗ್ರಾಮಸ್ಥರು, ಭಕ್ತರು ಸಾಗು ತ್ತಾರೆ. ಈ ಓಟದ ಹಿಂಭಾಗ ಅಸಂಖ್ಯಾತ ದ್ವಿಚಕ್ರವಾಹನ, ಕಾರು–ಜೀಪು ಭಾಗಿ ಯಾಗುತ್ತವೆ. ದಂಡೆ ಊರು ತಲುಪುವುದರೊಳಗೆ 50000ಕ್ಕೂ ಅಧಿಕ ಮಂದಿ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.

ರಾತ್ರಿ 10ರ ವೇಳೆಗೆ ದಂಡೆ ಊರ ದೇಗುಲ ತಲುಪುತ್ತಿದ್ದಂತೆ ಧರೆಪ್ಪನ ಕಲ್ಯಾಣೋತ್ಸವ ನಡೆಯುತ್ತದೆ. ಮರು ದಿನ ಬೆಳಿಗ್ಗೆ ಜಾತ್ರೆ ನಡೆಯುತ್ತದೆ. ಈ ಸಂದರ್ಭ ಊರ ಹನುಮನಿಗೆ ಅಗರವಾಲ ಕುಟುಂಬದಿಂದ ನೀಡುವ ಸಿಂಧೂರ ಇಡಲಾಗುವುದು ಎಂದು ಅಂಬೆ ದೇಗುಲದ ಪೂಜಾರಿ ಮಾಹಿತಿ ನೀಡಿದರು. ಪೂರ್ವದಿಂದಲೂ ಈ ಸಂಪ್ರದಾಯ ನಡೆದು ಬಂದಿದೆ. ಅಗರವಾಲ ಕುಟುಂಬದ ಪೂಜಾ ಸಾಮಗ್ರಿ, ಹೂಗಾರ ಕುಟುಂಬದ ಹೂ ದಂಡೆ, ತಾಜ್‌ ಬಾವಡಿಯ ಗಂಗಾ ಜಲ ಮರಾಠಿ ನೆಲದ ನಾಲ್ಕು ದೇಗುಲ ತಲುಪಿದಾಗ ಮಾತ್ರ ವಿಜೃಂಭಣೆಯ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ ಎಂದು ಭರತ ಅಗರವಾಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT