ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ತಲೆಗೆ ₹11 ಲಕ್ಷ ಬಹುಮಾನ

ವಿವಾದ ಹುಟ್ಟುಹಾಕಿದ ಬಿಜೆಪಿ ಯುವ ಮುಖಂಡನ ಘೋಷಣೆ, ವ್ಯಾಪಕ ಖಂಡನೆ
Last Updated 12 ಏಪ್ರಿಲ್ 2017, 18:15 IST
ಅಕ್ಷರ ಗಾತ್ರ

ಅಲೀಗಡ/ನವದೆಹಲಿ/ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಶಿರಚ್ಛೇದ ಮಾಡಿದವರಿಗೆ ₹11 ಲಕ್ಷ ಬಹುಮಾನ ಘೋಷಿಸುವ ಮೂಲಕ ಅಲ್ಲಿನ ಬಿಜೆಪಿಯ  ಅಂಗಸಂಸ್ಥೆ ಭಾರತೀಯ ಜನತಾ ಯುವ ಮೋರ್ಚಾ ಮುಖಂಡ ಯೋಗೇಶ್‌ ವಾರ್ಷ್ಣೇಯ ವಿವಾದ ಹುಟ್ಟುಹಾಕಿದ್ದಾರೆ.

ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ.‘ಯೋಗೇಶ್‌ ವಾರ್ಷ್ಣೇಯ ವಿರುದ್ಧ ಕಾನೂನು ಕ್ರಮಕೊಳ್ಳಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯೋಗೇಶ್‌ ಅವರನ್ನು ತಕ್ಷಣ ಬಂಧಿಸಬೇಕು ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಒತ್ತಾಯಿಸಿದೆ.

ವಿವಾದಾತ್ಮಕ ಹೇಳಿಕೆ: ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯ ಸುರಿ ಎಂಬಲ್ಲಿ ಹನುಮ ಜಯಂತಿಯ ಅಂಗವಾಗಿ ಮಂಗಳವಾರ ನಡೆದ ರ್ಯಾಲಿಯನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಯೋಗೇಶ್‌ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

‘ಮಮತಾ ಸರ್ಕಾರ  ಜನರಿಗೆ ಹೊಡೆಯುತ್ತಿದೆ. ಯಾರಾದರೂ ಕೆಂಪು ಅಂಗಿ ಅಥವಾ ಕೆಂಪು ಪ್ಯಾಂಟ್‌ ಧರಿಸಿದ್ದರೆ ಸಾಕು, ಪೊಲೀಸರು ಅವರಿಗೆ ಹೊಡೆಯುತ್ತಾರೆ. ನನಗೆ ಒಂದೂ ಅರ್ಥವಾಗುತ್ತಿಲ್ಲ... ಮಮತಾ ಬ್ಯಾನರ್ಜಿ ಇಫ್ತಾರ್‌ ಕೂಟ ಏರ್ಪಡಿಸುತ್ತಾರೆ. ಮುಸ್ಲಿಮರ ಪರವಾಗಿ ವಾದ ಮಾಡುತ್ತಾರೆ.

ಹಾಗಾದರೆ, ಹಿಂದೂಗಳು ಮನುಷ್ಯರಲ್ಲವೇ ಎಂದು ಅವರನ್ನು ಕೇಳಲು ಬಯಸುತ್ತೇನೆ’ ಎಂದು  ಹೇಳಿದ್ದಾರೆ.‘ಅವರಲ್ಲಿ ಮಾನವೀಯತೆ ಇದ್ದಿದ್ದರೆ ಈ ರೀತಿಯಾಗಿ ಬಡಿಯುತ್ತಿರಲಿಲ್ಲ. ಒಂದು ವೇಳೆ, ಯಾರಾದರೂ ಅವರ ಕತ್ತರಿಸಿದ ತಲೆಯನ್ನು ತಂದರೆ, ಆ ವ್ಯಕ್ತಿಗೆ ₹11 ಲಕ್ಷ  ಕೊಡುತ್ತೇನೆ’ ಎಂದು ಯೋಗೇಶ್‌ ಘೋಷಿಸಿದ್ದಾರೆ.

ಹನುಮ ಜಯಂತಿಯ ನಿಮಿತ್ತ ಸುರಿಯಲ್ಲಿ  ನಡೆದ ರ್‌್ಯಾಲಿಯಲ್ಲಿ ಜನರು ‘ಶ್ರೀರಾಮ್‌’ ಎಂದು ಘೋಷಣೆಗಳನ್ನು ಕೂಗಿದ್ದರು. ರ್‌್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಪೊಲೀಸರು ಹಾಕಿದ್ದ ಕಬ್ಬಿಣದ ತಡೆ ಬೇಲಿಯನ್ನು ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮುರಿಯಲು ಯತ್ನಿಸಿದ್ದರಿಂದ ಪೊಲೀಸರು ಲಾಠಿ ಬೀಸಬೇಕಾಯಿತು.

ಸುರಿಯ ಹೊರವಲಯದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಹಿಂದೂ ಸಂಘಟನೆಯೊಂದರ ಆಶ್ರಯದಲ್ಲಿ ನಡೆದ ಹನುಮ ಜಯಂತಿ ರ್‌್ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಹಾಗಿದ್ದರೂ ನೂರಾರು ಮಂದಿ ರ್‌್ಯಾಲಿಯಲ್ಲಿ ಭಾಗವಹಿಸಿದ್ದರು.

[related]

ಉಭಯ ಸದನ ಖಂಡನೆ
ಬಿಜೆಪಿ ಯುವ ಮುಖಂಡ ಮಾಡಿರುವ ಘೋಷಣೆಯನ್ನು ಸಂಸತ್ತಿನ ಉಭಯ ಸದನಗಳೂ ಬಲವಾಗಿ ಖಂಡಿಸಿವೆ.

ಟಿಎಂಸಿ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ, ಎಲ್ಲ ಪ್ರಮುಖ ಪಕ್ಷಗಳು ಮತ್ತು ಸರ್ಕಾರ ಯೋಗೇಶ್‌ ಹೇಳಿಕೆಯನ್ನು ಖಂಡಿಸಿದವು.

ರಾಜ್ಯ ಸರ್ಕಾರವು ಯೋಗೇಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬಹುದು ಎಂದು ರಾಜ್ಯಸಭೆಯ ಉಪ ಸಭಾಪತಿ ಪಿ.ಜೆ. ಕುರಿಯನ್‌ ಸಲಹೆ ನೀಡಿದ್ದಾರೆ.

ಸರ್ಕಾರದ ಪರ ಹೇಳಿಕೆ ನೀಡಿದ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಖ್ತಾರ್‌ ಅಬ್ಬಾಸ್ ನಕ್ವಿ, ‘ಈ ರೀತಿಯ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತೇನೆ. ಈ ವಿಚಾರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ’ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌, ‘ಯಾರೂ ಇಂತಹ ಹೇಳಿಕೆ ನೀಡಬಾರದು. ನಾವು ಇದನ್ನು ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.

***‌
ಉಚ್ಚಾಟಿತ ಮುಖಂಡ
ಯೋಗೇಶ್‌ ಹೇಳಿಕೆಯನ್ನು ಭಾರತೀಯ ಜನತಾ ಯುವ ಮೋರ್ಚಾ  ಕೂಡ ಖಂಡಿಸಿದೆ. ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಅವರನ್ನು ಎರಡು ವರ್ಷಗಳ ಹಿಂದೆ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಯೋಗೇಶ್‌ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅದು ಒತ್ತಾಯಿಸಿದೆ.

‘ಯೋಗೇಶ್‌ ವಾರ್ಷ್ಣೇಯ ಅವರಿಗೂ ಮೋರ್ಚಾಗೂ ನಂಟಿಲ್ಲ.  ಅವರ ಹೇಳಿಕೆಗಳಿಗೂ ನಮಗೂ ಸಂಬಂಧವಿಲ್ಲ’ ಎಂದು ಮೋರ್ಚಾದ ವಕ್ತಾರ ಶಿವಂ ಛಾಬ್ರ ಹೇಳಿದ್ದಾರೆ.

***
ಅವರು ನನ್ನನ್ನು ನಿಂದಿಸಬಹುದು. ಅವಮಾನಿಸಬಹುದು. ಪಿತೂರಿಯೂ ನಡೆಸಬಹುದು. ಆದರೆ, ಹೆದರಿಸಲು ಸಾಧ್ಯವಿಲ್ಲ. ಅವರನ್ನು ಕ್ಷಮಿಸು ಎಂದು ದೇವರನ್ನು ಕೇಳಿಕೊಳ್ಳುತ್ತೇನೆ
ಮಮತಾ ಬ್ಯಾನರ್ಜಿ,  ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT