ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

7

ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

Published:
Updated:
ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು

ಸಿಂಗಪುರ (ಪಿಟಿಐ): ಭಾರತದ ಪಿ.ವಿ ಸಿಂಧು ಹಾಗೂ ಬಿ.ಸಾಯಿ ಪ್ರಣೀತ್‌ ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಇತ್ತೀಚೆಗೆ ಇಂಡಿಯಾ ಓಪನ್ ಗೆದ್ದು ಕೊಳ್ಳುವ ಮೂಲಕ ಅಮೋಘ ಫಾರ್ಮ್‌ ನಲ್ಲಿರುವ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 19-21, 21–17, 21–8ರಲ್ಲಿ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಫಿತ್ರಿಯಾನಿ ಅವರನ್ನು ಮಣಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿರುವ ಇಂಡೊ ನೇಷ್ಯಾದ ಆಟಗಾರ್ತಿ ಎದುರು ಸಿಂಧು ಸುಲಭ ಗೆಲುವು ಪಡೆದುಕೊಂಡರು.

ಮೊದಲ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ ಗೆಲುವು ದಾಖಲಿಸಿದ ಫಿತ್ರಿಯಾನಿ ಎರಡನೇ ಗೇಮ್‌ನಲ್ಲಿ ಸೋಲು ಕಂಡರು. ಆದರೆ ಅನಗತ್ಯ ತಪ್ಪುಗಳಿಂದ ಹಿನ್ನಡೆ ಅನುಭವಿಸುವ ಮೂಲಕ ಸುಲಭದಲ್ಲಿ ನಿರ್ಣಾಯಕ ಗೇಮ್‌ ಬಿಟ್ಟುಕೊಟ್ಟರು. ಈ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡ ಭಾರತದ ಆಟಗಾರ್ತಿ ಗೆಲುವು ಒಲಿಸಿಕೊಂಡರು.

ಮುಂದಿನ ಸುತ್ತಿನಲ್ಲಿ ಸಿಂಧುಗೆ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರಾಗುವ ಸಾಧ್ಯತೆ ಇದೆ. ಇನ್ನೊಂದು ಪಂದ್ಯದಲ್ಲಿ ಚಿಯಾ ಸಿನ್‌ ಲೀ ಹಾಗೂ ಮರಿನ್ ಪೈಪೋಟಿ ನಡೆಸಲಿದ್ದಾರೆ. ಈ ಪಂದ್ಯವನ್ನು ಗೆದ್ದುಕೊಂಡ ಆಟಗಾರ್ತಿ ಎದುರು ಸಿಂಧು ಆಡಲಿದ್ದಾರೆ. ಸೈಯದ್ ಮೋದಿ ಗ್ರ್ಯಾನ್ ಪ್ರೀ ಗೋಲ್ಡ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಪ್ರಣೀತ್ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 21–15, 21–23, 21–16ರಲ್ಲಿ ಚೀನಾದ ಕ್ವಿಯಾವೊ ಬಿನ್ ಎದುರು ಗೆದ್ದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 30ನೇ ಸ್ಥಾನದ ಲ್ಲಿರುವ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಎಂಟನೇ ಶ್ರೇಯಾಂಕದ ತೊಂಗ್ಸಕ್‌ ಸೆನ್ಸ್‌ಸೊಮ್‌ ಬೂನ್ಸಕ್ ವಿರುದ್ಧ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 17–21, 21–17, 21–16ರಲ್ಲಿ ಕೊರಿಯಾದ ಜೀ ಹುವಾನ್ ಕಿಮ್‌ ಮತ್ತು ಲೀ ಸೊ ಹೀ ವಿರುದ್ಧ ಗೆಲುವು ದಾಖಲಿಸಿತು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಚೀನಾದ ಲು ಕಿ ಮತ್ತು ಹುವಾಂಗ್‌ ಯಾಕ್ವಿಂಗ್ ವಿರುದ್ಧ ಆಡಲಿದೆ.

ಐದನೇ ಸ್ಥಾನಕ್ಕೆ ಕುಸಿದ ಸಿಂಧು

ನವದೆಹಲಿ (ಪಿಟಿಐ): ಹೋದ ವಾರ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದ್ದ ಪಿ.ವಿ ಸಿಂಧು ನೂತನ ಪಟ್ಟಿಯಲ್ಲಿ ಗುರುವಾರ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. 21 ವರ್ಷದ ಹೈದರಾಬಾದ್‌  ಆಟಗಾರ್ತಿ ಮೊದಲ ಬಾರಿಗೆ ಇಂಡಿಯಾ ಓಪನ್ ಗೆದ್ದಕೊಂಡು ಮೂರು ಸ್ಥಾನ ಮೇಲೇರಿದ್ದರು. ಬಳಿಕ ನಡೆದ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸುವ ಮೂಲಕ ಮತ್ತೊಮ್ಮೆ ರ್‍ಯಾಂಕಿಂಗ್‌ನಲ್ಲಿ ಕುಸಿತ ಅನುಭವಿಸಿದ್ದಾರೆ. ಸೈನಾ ನೆಹ್ವಾಲ್  ಅವರು ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry