7
ಚುನಾವಣಾ ಸುಧಾರಣೆ ಹೇಗೆ?

ಮಿಂಚಿ ಮರೆಯಾಗುವ ಮಾಯಾಮೃಗ!

Published:
Updated:
ಮಿಂಚಿ ಮರೆಯಾಗುವ ಮಾಯಾಮೃಗ!

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ  ಮುಗಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಇನ್ನೂ ಸೋಲು– ಗೆಲುವಿನ ಲೆಕ್ಕಾಚಾರದಲ್ಲೇ ಮುಳುಗಿವೆ. ಉಭಯ ಕ್ಷೇತ್ರಗಳ ಮತದಾರರೂ ಅದೇ ಗುಂಗಿನಲ್ಲಿದ್ದಾರೆ. ಚುನಾವಣೆಗಳೇ ಹಾಗೆ. ಒಮ್ಮೆ ಅದರ ಹುಚ್ಚು ಹಚ್ಚಿಕೊಂಡರೆ ಬಿಡುವುದು ಕಷ್ಟ. ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರು ಒಂದಷ್ಟು ದಿನ ಅದೇ ವಿಷಯವನ್ನು ಮತ್ತೆಮತ್ತೆ ಚರ್ಚೆ ಮಾಡಿ ರೋಮಾಂಚನ ಅನುಭವಿಸುತ್ತಿರುತ್ತಾರೆ.

‘ಮಿಕ್ಕ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಹಣ ಮತ್ತು ಮದ್ಯದ ಹೊಳೆ ಹರಿದಿದೆ. ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರಿಂದ ಎಷ್ಟು ಖರ್ಚಾಗಿರಬಹುದು ಎಂಬ ನಿಖರವಾದ ಲೆಕ್ಕ ಸಿಗುವುದು ಕಷ್ಟವಾದರೂ ಹಿಂದಿನ ಚುನಾವಣೆಗಳನ್ನು ಈ ಚುನಾವಣೆ ಮೀರಿಸಿದೆ’ ಎನ್ನುವ ಮಾತುಗಳಿವೆ.

ನಮ್ಮ ಚುನಾವಣಾ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ. ಹದಗೆಟ್ಟಿರುವ ಈ ಚುನಾವಣಾ ವ್ಯವಸ್ಥೆಯನ್ನು ಬದಲಾವಣೆ ಮಾಡುವುದು ಹೇಗೆ? ಬದಲಾವಣೆ ಪ್ರಕ್ರಿಯೆ ಎಲ್ಲಿಂದ ಆರಂಭವಾಗಬೇಕು? ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳುತ್ತಿದ್ದಾರೆಂದು ಭಾವಿಸಲಾಗಿರುವ ಆಯ್ದ ಮತದಾರರಿಂದಲೋ, ದುಡ್ಡು ಹಂಚಿ ವಿಧಾನಮಂಡಲ ಅಥವಾ ಸಂಸತ್ತಿಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳಿಂದಲೋ ಇಲ್ಲವೆ, ಚುನಾವಣೆಗೆ ಕೋಟಿಗಟ್ಟಲೆ ಖರ್ಚು ಮಾಡುವ ಸಾಮರ್ಥ್ಯವಿದೆಯೇ ಎಂದು ಖಾತರಿಪಡಿಸಿಕೊಂಡು ಅಭ್ಯರ್ಥಿಗಳಿಗೆ  ಟಿಕೆಟ್ ಕೊಡುವ ರಾಜಕೀಯ ಪಕ್ಷಗಳಿಂದಲೋ, ಇವೆಲ್ಲವನ್ನೂ ನಿಯಂತ್ರಿಸುವ ಅಧಿಕಾರ ಹೊಂದಿರುವ ಚುನಾವಣಾ ಆಯೋಗದಿಂದಲೋ ಎಂಬ ಬಗ್ಗೆ ವ್ಯಾಪಕವಾದ ಚರ್ಚೆಗಳು ಆಗಬೇಕಿವೆ.1970ರ ದಶಕದಲ್ಲೇ, ‘ಹಣವಂತರಿಗೆ ಅಧಿಕಾರದ ರುಚಿ ತೋರಿಸಬಾರದು’ ಎಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರು ಪ್ರತಿಪಾದಿಸಿದ್ದರಂತೆ. ಅವರ ಈ ಮಾತಿಗೆ ಕಾರಣವಾದ ಒಂದು ಸಂದರ್ಭವನ್ನು ಲೋಕಸಭೆ ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಈಗಲೂ ನೆನಪು ಮಾಡಿಕೊಳ್ಳುತ್ತಾರೆ.ಖರ್ಗೆ, ಒಮ್ಮೆ ಉದ್ಯಮಿಯೊಬ್ಬರನ್ನು ಅರಸರ ಬಳಿಗೆ ಕರೆದೊಯ್ದು ಗುರುಮಠಕಲ್‌ನಿಂದ ಟಿಕೆಟ್‌ ಕೊಡುವಂತೆ ಒತ್ತಾಯ ಮಾಡಿದರಂತೆ. ಏನೂ ಮಾತನಾಡದೆ ಸುಮ್ಮನಿದ್ದ ಅರಸರು, ಅವರು ಹೋದ ಬಳಿಕ ಖರ್ಗೆ ಅವರನ್ನು ಕರೆದು ಬೈದರಂತೆ, ‘ಧನಿಕರಿಗೆ ಅಧಿಕಾರದ ರುಚಿ ತೋರಿಸಬಾರದು. ಅದರಿಂದಾಗುವ ಅಪಾಯದ ಅರಿವು ನಿನಗಿಲ್ಲ. ಅವರ ಬದಲು ನೀನೇ ಸ್ಪರ್ಧೆ ಮಾಡಿ ಗೆದ್ದು ಬಾ. ಅದನ್ನು ಬಿಟ್ಟು ಅವರಿಗೆ ಟಿಕೆಟ್‌ ಕೊಡಲು ಒತ್ತಾಯ ಮಾಡುತ್ತಿದ್ದೀಯಲ್ಲಾ ನಿನಗೆ ಬುದ್ಧಿಗಿದ್ದಿ ಇದೆಯಾ’ ಎಂದು ಗದರಿದರಂತೆ. ಐದು ದಶಕಗಳ ಹಿಂದೆ ದೇವರಾಜ ಅರಸರು ಯಾವುದು ಆಗಬಾರದೆಂದು  ಹೇಳಿದ್ದರೋ, ಈಗ ಹೆಚ್ಚುಕಡಿಮೆ ಅದೇ ಆಗುತ್ತಿದೆ. ಎಂಥಾ ದೂರದೃಷ್ಟಿ ಅವರದು!ಮೊದಮೊದಲಿಗೆ ತೆರೆಮರೆಯಲ್ಲಿ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದ ಉಳ್ಳವರು, ಈಗ ನೇರವಾಗಿ ರಂಗಪ್ರವೇಶ ಮಾಡುತ್ತಿದ್ದಾರೆ.  ಗಣಿ ಉದ್ಯಮಿಗಳು, ರಿಯಲ್‌ ಎಸ್ಟೇಟ್‌ ಮಾಫಿಯಾಗಳು,  ಲೇವಾದೇವಿದಾರರು  ಅಧಿಕಾರ ಸ್ಥಾನಗಳಲ್ಲಿ ವಿಜೃಂಭಿಸುತ್ತಿದ್ದಾರೆ. ಜನಹಿತ ಮರೆತು, ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಲಕ್ಷಗಳಲ್ಲಿ ಮುಗಿಯುತ್ತಿದ್ದ ವಿಧಾನಸಭೆ, ಲೋಕಸಭೆ ಚುನಾವಣೆಗಳು ಕೋಟಿಗಳ ಗಡಿ ದಾಟಿವೆ. ಕರ್ನಾಟಕದ ಮಟ್ಟಿಗಂತೂ ಈ ಮಾತು ಅಕ್ಷರಶಃ ಸತ್ಯವಾಗಿದೆ. ಬಹುಶಃ ಬೇರೆ ಯಾವ ರಾಜ್ಯದಲ್ಲೂ ಚುನಾವಣೆಗೆ ಇಷ್ಟೊಂದು ಹಣ ಖರ್ಚು ಮಾಡುವುದಿಲ್ಲ. ಕರ್ನಾಟಕದಲ್ಲಿ ಚುನಾವಣೆಗೆ ಹಣ ಖರ್ಚು ಮಾಡುತ್ತಿರುವುದನ್ನು ನೋಡಿ ಹೊರ   ರಾಜ್ಯಗಳ ಜನ ದಿಗಿಲು ಬೀಳುತ್ತಿದ್ದಾರೆ.2000ನೇ ಇಸವಿ ಬಳಿಕ ರಾಜ್ಯ ರಾಜಕಾರಣಕ್ಕೆ ವಿಶೇಷ ಮೆರುಗು ಬಂದಿದೆ. ಚುನಾವಣೆಗೂ ಜಾತ್ರೆಗಳಿಗೂ ವ್ಯತ್ಯಾಸವಿಲ್ಲದಂತೆ ಆಗಿದೆ. ಅಕ್ರಮ ಗಣಿಗಾರಿಕೆಯಿಂದ ಬಂದ ಹಣ ಚುನಾವಣೆ ಸ್ವರೂಪವನ್ನೇ ಬದಲಾಯಿಸಿಬಿಟ್ಟಿದೆ. ಅಕ್ರಮದ ಹಣದಲ್ಲಿ   ಒಂದಿಷ್ಟು ಮತದಾರರ ಜೇಬೂ ಸೇರಿದೆ. ಬಳ್ಳಾರಿಯಲ್ಲಿ ಮಾತ್ರವಲ್ಲ, ಹೊರ ಜಿಲ್ಲೆಗಳಲ್ಲೂ ಹಂಚಿಕೆ ಆಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.‘2008ರ ಚುನಾವಣೆ ನಂತರದ ಆಪರೇಷನ್‌ ಕಮಲ ರಾಜ್ಯದ ರಾಜಕೀಯ ದಿಕ್ಕನ್ನು ಬದಲಾಯಿಸಿದ್ದು  ಈಗ ಇತಿಹಾಸ.  ಅದಿರು ಉದ್ಯಮ ಉಚ್ಛ್ರಾಯ ಸ್ಥಿತಿ ತಲುಪಿದ ಗಳಿಗೆಯಿಂದ ಜನಾರ್ದನ ರೆಡ್ಡಿ  ಮತ್ತು ಅವರ ಸಹೋದರರ ಅದೃಷ್ಟ ಖುಲಾಯಿಸಿತು. ಇದೇ ಖುಷಿಯಲ್ಲಿ ರೆಡ್ಡಿ ಸಹೋದರರು  ಸುಷ್ಮಾ ಸ್ವರಾಜ್‌ ಅವರನ್ನು ಪ್ರಧಾನಿ ಮಾಡಬೇಕೆಂದು ಕನಸು ಕಂಡಿದ್ದರು. ಆದರೆ, ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಲುಕಿ ಅವರು ಒದ್ದಾಡಿದ್ದರಿಂದ ಕನಸು ಛಿದ್ರವಾಯಿತು. ಕರ್ನಾಟಕದಲ್ಲಿ ಅಲ್ಲಿವರೆಗೂ ಒಂದು ವೋಟಿನ ಮೌಲ್ಯ  ₹ 100 ಆಚೀಚೆ ಎಂಬಂತೆ ಇತ್ತು. ಗಣಿ ದುಡ್ಡು ಚುನಾವಣೆಗೆ ಬಳಕೆಯಾದ ಬಳಿಕ ₹ 1000ದ ಗಡಿ ದಾಟಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲೂ ಮತದಾರರಿಗೆ ರಾಜಾರೋಷವಾಗಿ ಹಣ ಹಂಚಿದ ವಿಡಿಯೊ ತುಣುಕುಗಳು ಎಲೆಕ್ಟ್ರಾನಿಕ್‌ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೂ, ನೀತಿ ಸಂಹಿತೆ ಕಾಪಾಡಬೇಕಾದ ಚುನಾವಣಾ ಆಯೋಗ ಮೌನವಾಗಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ತಮಿಳುನಾಡಿನ ಆರ್.ಕೆ. ನಗರದಲ್ಲಿ  ನಡೆದ ಅಕ್ರಮಗಳ ಕಾರಣಕ್ಕೆ ಉಪ ಚುನಾವಣೆಯನ್ನೇ ರದ್ದುಪಡಿಸಲಾಯಿತು.‘ಚುನಾವಣಾ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ. ಬೇಕಾದರೆ ಚುನಾವಣೆಗಳನ್ನು ಮುಂದೂಡಬಹುದು. ಅಭ್ಯರ್ಥಿಗಳನ್ನು ಕೆಲವು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ  ನಿಷೇಧಿಸಬಹುದು. ಅನೇಕ ಚುನಾವಣೆಗಳಲ್ಲಿ ಈ ರೀತಿ ಮಾಡಲಾಗಿದೆ’ ಎಂಬುದು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಅಧಿಕಾರಿ ಎಂ.ಎನ್.ವಿದ್ಯಾಶಂಕರ್‌ ನಿಲುವು.

‘ಆಯೋಗವು ತನಗಿರುವ ಅಧಿಕಾರವನ್ನು ಕಟ್ಟುನಿಟ್ಟಾಗಿ ಚಲಾಯಿಸಬೇಕು. ಪ್ರಕರಣಗಳ ಸ್ವರೂಪ ಗಮನದಲ್ಲಿಟ್ಟುಕೊಂಡು ನ್ಯಾಯಾಲಯಗಳು ಶಿಕ್ಷೆ ಕೊಡಬೇಕು’ ಎನ್ನುತ್ತಾರೆ ವಿದ್ಯಾಶಂಕರ್‌.ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸಮಯದಲ್ಲಿ ಅನೇಕ ಕಡೆಗಳಲ್ಲಿ ₹ 82 ಕೋಟಿ ವಶಪಡಿಸಿಕೊಂಡಿದ್ದರಂತೆ. ಆ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿಲ್ಲವಂತೆ. ಹತ್ತಿಪ್ಪತ್ತು ಸಾವಿರ ದಂಡ ಹಾಕಿ ಬಿಡುಗಡೆ ಮಾಡಿದರಂತೆ.‘ಬಹುತೇಕ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಣ ಹಂಚಿದವರಿಗೂ ತನಗೂ ಸಂಬಂಧವಿಲ್ಲ ಎಂದು ಕೈ ಎತ್ತಿಬಿಡುತ್ತವೆ. ಅಂಥ ಪ್ರಕರಣಗಳು ಬಿದ್ದು ಹೋಗುತ್ತವೆ. ಈ ಕಾರಣಕ್ಕೆ ಕಾನೂನು ತಿದ್ದುಪಡಿ ಅಗತ್ಯವಿದೆ’ ಎಂಬುದು ವಿದ್ಯಾಶಂಕರ್‌ ನಿಲುವು.ಈ ವಿಷಯದಲ್ಲಿ ವಕೀಲ ಬಿ.ಟಿ.ವೆಂಕಟೇಶ್‌ ಅವರ ಅಭಿಪ್ರಾಯ ಸ್ವಲ್ಪ ವಿಭಿನ್ನ. ‘ಮತದಾರ ಎಲ್ಲಿಯವರೆಗೂ ತನ್ನ  ಮತದ ಮಹತ್ವ ಅರಿಯುವುದಿಲ್ಲವೋ ಅಲ್ಲಿಯವರೆಗೂ ಚುನಾವಣಾ ವ್ಯವಸ್ಥೆ ಹೀಗೇ ಮುಂದುವರಿಯುತ್ತದೆ. ಅದರ ಬಗ್ಗೆ ಯಾವ ಅನುಮಾನವನ್ನೂ ಇಟ್ಟುಕೊಳ್ಳಬೇಡಿ’ ಎಂದು ವಿಶ್ಲೇಷಿಸುತ್ತಾರೆ.

‘ಚುನಾವಣೆಗೆ ಹಣ ಖರ್ಚು ಮಾಡುವ ವ್ಯವಸ್ಥೆ ನಮ್ಮಲ್ಲಿ ಮಾತ್ರ ಅಲ್ಲ, ಅಮೆರಿಕ  ಮತ್ತು ಇಂಗ್ಲೆಂಡ್‌ನಲ್ಲೂ ಇದೆ. ಅಮೆರಿಕದಲ್ಲಿ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮ, ಸಮಾರಂಭ ಸಂಘಟಿಸಲು ವಿಪರೀತ ಹಣ ಖರ್ಚು ಮಾಡುತ್ತಾರೆ. ಅಧ್ಯಕ್ಷರ ಅಧಿಕಾರಾವಧಿ ಮುಗಿದರೂ ಚುನಾವಣೆಗೆ ಮಾಡಿದ್ದ ಸಾಲ ಚುಕ್ತಾ ಆಗಿರುವುದಿಲ್ಲ.  ಚುನಾವಣೆ ವ್ಯವಸ್ಥೆ ಬದಲಾಗಬೇಕಾದರೆ ಮೊದಲಿಗೆ ಜನ ವಿದ್ಯಾವಂತರಾಗಬೇಕು. ಎರಡನೆಯದು, ಶೇಕಡಾವಾರು ಮತಗಳಿಕೆ ಪ್ರಮಾಣದ ಮೇಲೆ ಪ್ರಾತಿನಿಧ್ಯ ಸಿಗುವಂತಾಗಬೇಕು’ ಎನ್ನುವುದು ಅವರ ಆಶಯ.ವೆಂಕಟೇಶ್‌ ಅವರ ಮಾತಿನಲ್ಲಿ ಅರ್ಥವಿದೆ. ಮತಗಳನ್ನು ಮಾರುವವರು ಇರುವ ಕಡೆ ಸಹಜವಾಗಿ ಕೊಳ್ಳುವವರೂ ಇರುತ್ತಾರೆ. ಮತಗಳು ಇರುವುದು ಮಾರಾಟಕ್ಕಲ್ಲ ಎಂಬ ಪ್ರಜ್ಞೆ ಮತದಾರರಿಗೆ ಬಂದಾಗ ರಾಜಕೀಯ ಪಕ್ಷಗಳ ಅಟಾಟೋಪಗಳೂ ನಿಲ್ಲುತ್ತವೆ. ಇದಕ್ಕೆ ಇನ್ನೂ  ಕಾಲಾವಕಾಶ ಬೇಕು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರೂ ಹೆಚ್ಚುಕಡಿಮೆ ಇದೇ ನಿಲುವು ಹೊಂದಿದ್ದಾರೆ. ‘ಮತದಾರರ ಮನಸ್ಥಿತಿ ಬದಲಾವಣೆ ಆಗದಿದ್ದರೆ ಯಾವುದೇ ಕಾನೂನು ತಂದರೂ ಅಷ್ಟೆ. ನಾನು ಅಂಬೇಡ್ಕರ್‌ ಕುರಿತಾದ ಪುಸ್ತಕ ಓದುತ್ತಿದ್ದೆ. ಎಂಥಾ ಹೃದಯ ಶ್ರೀಮಂತಿಕೆ ಅವರದ್ದು. ಒಳ್ಳೆಯದನ್ನು ಮಾತ್ರ ತೆಗೆದುಕೊಂಡಿದ್ದಾರೆ. ಕೆಟ್ಟದರ ವಿರುದ್ಧ ಪ್ರತಿಭಟಿಸಿದ್ದಾರೆ. ನಮ್ಮ ಈಗಿನ ರಾಜಕೀಯ ಮುಖಂಡರಿಗೆ ಇಂಥ ಗುಣ ಇರಬೇಕು. ಈ ಗುಣಗಳನ್ನು ಮೈಗೂಡಿಸಿಕೊಳ್ಳದಿದ್ದರೆ ನೂರು ಸಿದ್ದರಾಮಯ್ಯ ಅಥವಾ ಮೋದಿಗಳು ಬಂದರೂ ಪ್ರಯೋಜನವಿಲ್ಲ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎನ್ನುತ್ತಾರೆ.ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡರು, ‘ಚುನಾವಣಾ ಆಯೋಗ  ನಿಜವಾಗಿಯೂ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಬೇಕು. ಅದಾಗಬೇಕಾದರೆ  ಮುಖ್ಯ ಚುನಾವಣಾ ಕಮಿಷನರ್‌ ಹಾಗೂ ಕಮಿಷನರ್‌ಗಳನ್ನು ಸರ್ಕಾರದಿಂದ ಹೊರತಾದ ಪ್ರತ್ಯೇಕ ಸಂಸ್ಥೆ ನೇಮಕ ಮಾಡಬೇಕು’ ಎಂಬ ಚಿಂತನೆ ಮುಂದಿಟ್ಟರು.ಚಂದ್ರೇಗೌಡರ ಚಿಂತನೆಯಲ್ಲಿ ಭವಿಷ್ಯದ ಬಗ್ಗೆ ಕಾಳಜಿ ಕಾಣುತ್ತದೆ. ಚುನಾವಣಾ ಆಯೋಗ ಕೆಲಸ ಮಾಡುತ್ತಿರುವುದನ್ನು ಗಮನಿಸಿದರೆ ನಿಜಕ್ಕೂ ಅದೊಂದು ಸ್ವಾಯತ್ತ ಸಂಸ್ಥೆಯೇ ಎಂಬ ಸಂಶಯ ಕಾಡುತ್ತದೆ. ನೇರವಾಗಿ, ನಿಷ್ಠುರವಾಗಿ ನಡೆದುಕೊಳ್ಳಬೇಕಾದ ಬಲಿಷ್ಠ ಆಯೋಗ ಯಾರದೋ ಮುಲಾಜಿಗೆ ಸಿಕ್ಕಿದೆ ಎಂಬ ಶಂಕೆ ಮೂಡುತ್ತದೆ.ಚುನಾವಣೆ ಸುಧಾರಣೆ ಯಾರದೋ ಒಬ್ಬರ ಜವಾಬ್ದಾರಿ ಅಲ್ಲ. ಎಲ್ಲರ ಹೊಣೆಯೂ ಹೌದು. ರಾಜಕೀಯ ಪಕ್ಷಗಳು ಕೇವಲ ಶ್ರೀಮಂತರನ್ನು ಹುಡುಕದೆ ಸಾಮಾನ್ಯರಿಗೂ ಟಿಕೆಟ್‌ ಕೊಡಬೇಕು. ಮತದಾರರು ಮತಗಳನ್ನು ಮಾರಿಕೊಳ್ಳದೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಬೇಕು, ಇದಾದರೆ ಚುನಾವಣೆ ವ್ಯವಸ್ಥೆ ತಾನಾಗಿಯೇ ಸರಿಹೋಗುತ್ತದೆ.

* * *

ಮತದಾರರಿಗೆ ಹಣ ಸಾಗಿಸುವಾಗ ಸಿಕ್ಕಿಕೊಂಡ ಪ್ರಕರಣಗಳಲ್ಲಿ  ಬರೀ ದಂಡ ಹಾಕಿದರೆ ಪ್ರಯೋಜನವಿಲ್ಲ. ಕಠಿಣ ಶಿಕ್ಷೆಗೆ ಅವಕಾಶವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು.

ಎಂ.ಎನ್.ವಿದ್ಯಾಶಂಕರ್‌,

ನಿವೃತ್ತ ಮುಖ್ಯ ಅಧಿಕಾರಿ, ರಾಜ್ಯ ಚುನಾವಣಾ ಆಯೋಗ* * *

ಸಚಿವರ ವಾದ

ವಿದ್ಯುನ್ಮಾನ ಮತದಾನ ಯಂತ್ರಗಳ ಬಳಕೆಯನ್ನೇ ಕೈಬಿಡಬೇಕೆಂಬ ವಾದಕ್ಕೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಡಿಸುವ ಪ್ರತಿವಾದ ಹೀಗಿದೆ-

1962ರಿಂದ 1999ರ ನಡುವಣ ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿ ಗಳಿಸಿದ ಮತಗಳಿಗಿಂತ ಹೆಚ್ಚಿನ ಸಂಖ್ಯೆಯ ಮತಗಳು ಅಸಿಂಧು ಆಗಿರುವ ಕ್ಷೇತ್ರಗಳ ಸಂಖ್ಯೆ ದೊಡ್ಡದು. ಇಂತಹ ಸೀಟುಗಳು 1962ರಲ್ಲಿ 54, 1967ರಲ್ಲಿ 104, 1971ರಲ್ಲಿ 52 , 1977ರಲ್ಲಿ 38, 1980ರಲ್ಲಿ 38, 1984-85ರಲ್ಲಿ 45, 1989ರಲ್ಲಿ 60, 1991-92ರಲ್ಲಿ 60, 1996ರಲ್ಲಿ 64, 1998ರಲ್ಲಿ 70, 1999ರಲ್ಲಿ 74 ಇದ್ದವು. ಸರಾಸರಿ ಲೆಕ್ಕ ಹಿಡಿದರೆ ಪ್ರತಿ ಚುನಾವಣೆಯಲ್ಲೂ ಇಂತಹ ಸೀಟುಗಳ ಸಂಖ್ಯೆ 65ರಿಂದ 70. ಈ ವಿಕೃತಿ ಸರಿಯಾದದ್ದು ಮತಯಂತ್ರಗಳ ಬಳಕೆಯಿಂದಲೇ ಎಂಬುದನ್ನು ಮರೆಯಬಾರದು.

* * *

ನಾನಾ ವರದಿಗಳು

ಚುನಾವಣೆ ವೆಚ್ಚವನ್ನು ಸರ್ಕಾರ ಭರಿಸಬೇಕೇ ಬೇಡವೇ ಎಂಬ ಕುರಿತು ಕಾಲಕಾಲಕ್ಕೆ ನಾನಾ ಸಮಿತಿಗಳು ವರದಿ ನೀಡಿವೆ. ವೆಚ್ಚವನ್ನು ಸರ್ಕಾರವೇ ಭರಿಸುವ ಕಾಲ ಇನ್ನೂ ಸನ್ನಿಹಿತ ಆಗಿಲ್ಲ ಎಂಬದು ಬಹುತೇಕ ವರದಿಗಳ ನಿಚ್ಚಳ ನಿಲುವು. ದಿನೇಶ್ ಗೋಸ್ವಾಮಿ, ಇಂದ್ರಜಿತ್ ಗುಪ್ತ , ವೆಂಕಟಾಚಲಯ್ಯ ಸಮಿತಿಗಳು, ಎರಡನೆಯ ಆಡಳಿತ ಸುಧಾರಣಾ ಸಮಿತಿ, ಸಿಐಐ (ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಕಾರ್ಯದಳ, ಅಸೋಚಾಮ್ ಹಾಗೂ ಕಾನೂನು ಆಯೋಗಗಳು ಈ ಕುರಿತು ವರದಿ ನೀಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry