ಮಾವು ಬಂತು ಮಾವು! ಬಹುಪರಾಕ್!

7

ಮಾವು ಬಂತು ಮಾವು! ಬಹುಪರಾಕ್!

Published:
Updated:
ಮಾವು ಬಂತು ಮಾವು! ಬಹುಪರಾಕ್!

ಈ ಸಲವೂ ನಮ್ಮ ಹಿತ್ತಲಿನ ಮಾವಿನಗಿಡ ಮೈತುಂಬ ಹೂತಳೆದು ಸಿಂಗರಿಸಿದ ತೇರಿನಂತೆ ಕಾಣತೊಡಗಿತು. ಅದರ ರೆಂಬೆತುದಿ ಮೊಂಡುಬೆರಳಂತೆ ಉಬ್ಬಿಕೊಂಡಿರುವುದನ್ನೇ ಗಮನಿಸುತಿದ್ದೆ. ಅವು ಹೂಗೊಂಚಲನ್ನು ಹಡೆಯಲು ಕಾದಿರುವಂತೆ ಧ್ಯಾನದಲ್ಲಿದ್ದವು. ಮೂಡಣದ ಗಾಳಿ ಬೀಸತೊಡಗಿದ ಒಂದು ಮುಂಜಾನೆ ನೋಡುತ್ತೇನೆ, ಮೊಗ್ಗಿನ ಕುಡಿಗಳೊಡೆದು ಸಣ್ಣನತ್ತುಗಳಂತೆ ಹೂಗಳಾದವು. ಬಳಿಕ ಪಚ್ಚೆಕಾಳುಗಳಂತೆ ಮಿಡಿಗಳು ಮೈದೋರಿದವು. ಅವು ನೀಳತೊಟ್ಟಿನಲ್ಲಿ ಉಯ್ಯಾಲೆಯನ್ನೂ ಆಡಿದವು. ಈಗ ಕಾಯಿ ಹಸಿರುತನ ಕಳಕೊಂಡು ನಸುಗೆಂಪೇರತೊಡಗಿದೆ. ಇನ್ನು ಅದು ಗಿಡದಿಂದ ಕೆಳಗಿಳಿದು ಹುಲ್ಲುಹಾಸಿನಲ್ಲಿ ಮಲಗಿ ಹೊಂಬಣ್ಣ ತಳೆಯುವುದಕ್ಕೆ ಕಾಯಬೇಕು.

ಮಾವು, ತನ್ನ ಒಗರು ಬಿಟ್ಟು ಹುಳಿ ಕಳಕೊಂಡು ಸಿಹಿಯಾಗುವುದು ನನ್ನಲ್ಲಿ ಸದಾ ವಿಸ್ಮಯ ಹುಟ್ಟಿಸುತ್ತದೆ. ನನ್ನೊಳಗಿನ ಎಳವೆಯ ನೆನಪನ್ನು ಮೀಟಿ ಎಬ್ಬಿಸುತ್ತದೆ. ನಮ್ಮೂರು, ಹಸಿರುಸೇನೆ ಮುತ್ತಿಗೆ ಹಾಕಿದಂತೆ ಮಾವು ಅಡಕೆ ತೋಟಗಳಿಂದಲೂ ಕನ್ನಡಿ ಕೆರೆಗಳಿಂದಲೂ ಆವೃತವಾಗಿದೆ. ಎಂತಲೇ ಅಲ್ಲಿ ಹುಡುಗರು ನೆಲದ ಮೇಲಿಗಿಂತ ಸರಾಗವಾಗಿ, ನೀರು ಮತ್ತು ಮರಗಳ ಮೇಲೆ ಚಲಿಸುವುದನ್ನು ಬೇಗನೆ ಕಲಿಯುವರು. ಅವರು ಮರವೇರಲು, ಮೀನು ಹಿಡಿಯಲು ತೋರುವ ಶ್ರದ್ಧೆಯ ಎಳ್ಳುಕಾಳಿನಷ್ಟು ಓದುಬರೆಹಕ್ಕೆ ಹಾಕಿದ್ದರೆ, ಈ ಹೊತ್ತಿಗೆ ಎಲ್ಲೆಲ್ಲಿರುತ್ತಿದ್ದರೊ? ಮಿಡಿಗಾಲದಲ್ಲಿ ಶುರುವಾಗುವ ಅವರ ಕ್ರಿಯಾಶೀಲತೆ, ಸೀಜನ್ನಿನ ಕೊನೆಯ ಹಣ್ಣು ಕಣ್ಮರೆಯಾಗುವ ತನಕ ಚಾಲ್ತಿಯಿರುತ್ತದೆ. ನಾನೊಂದು ಠೋಳಿ ಕಟ್ಟಿಕೊಂಡು ಮಾವಿನ ತೋಪುಗಳಿಗೆ ಅಲೆಯುತ್ತಿದ್ದೆ. ನಮ್ಮ ಗ್ಯಾಂಗಿನಲ್ಲಿ ಪೊದೆಯಲ್ಲಿ ಅಡಗಿ ಕಾವಲು ಕಾಯುವ, ಚಕಚಕ ಗಿಡಹತ್ತುವ, ಕಾಯಿ ಕಿತ್ತುಕೊಂಡು ಓಡುವ ಪರಿಣತ ದಳಗಳಿದ್ದವು. ಲೆಕ್ಕಾಚಾರ ತಪ್ಪಿ, ನಿಷ್ಕರುಣ ಮಾಲೀಕರ  ಕೈಗೆ ಸಿಕ್ಕು ಗಿಡಕ್ಕೆ ಕಟ್ಟಿಸಿಕೊಂಡು ಧರ್ಮದೇಟು ತಿನ್ನುವುದೂ ಇರುತ್ತಿತ್ತು. ಎಂತಲೇ ಕಟಾವು ಮುಗಿದ ತೋಟಗಳಲ್ಲಿ ‘ಹಂಕಲ್’ ಮುರಿಯುವುದು ನಮಗೆ ಖುಷಿ ಕೊಡುತ್ತಿತ್ತು.

ಹಂಕಲೆಂದರೆ, ತೋಟದವರ ಕುಯಿಲಿಗೆ ಸಿಗದೆ ಗಿಡದಲ್ಲಿ ಉಳಿದಿರಬಹುದಾದ ಕಾಯಿಯ ಹುಡುಕಾಟ. ಗಿಡದಡಿ ನಿಂತು ಕತ್ತೆತ್ತಿ ಕಣ್ಣನ್ನು ಚೂಪಾಗಿಸಿ ಎಲೆಗಳ ನಡುವೆ ದಿಟ್ಟಿ ಹಾಯಿಸುವುದು; ಕೊಂಬೆಯನ್ನು ಮೆಲ್ಲಗೆ ಅಲುಗಿಸಿ ಎಲೆಮರೆಯಲ್ಲಿರುವ ಕಾಯಿ ಹೊರಗಾಣುವಂತೆ ಮಾಡುವುದು; ನೂಲುಕುಕ್ಕೆಯ ರಿಂಗಿನೊಳಗೆ ಬಿಟ್ಟುಕೊಂಡು ಕೀಳುವುದು; ಕೆಳಗೆ ತಾಟು ಹಿಡಿದು ನಿಂತವನ ಮೂಲಕ ಹುಶಾರಾಗಿ ಇಳಿಸುವುದು. ‘ಕಾಯಿಳಿಸುವ’ ನುಡಿಗಟ್ಟಿನ ನವಿರುತನ ನನಗೆ ಹೊಳೆದಿದ್ದೇ ಹಂಪಿ ಸೀಮೆಗೆ ಬಂದಮೇಲೆ. ಇಲ್ಲಿ ಹಣ್ಣು ಕಾಯಿ ಹೂವನ್ನು ಗಿಡದಿಂದ ಬಿಡಿಸುವುದಕ್ಕೆ ‘ಹರಿಯೋದು’ ಎನ್ನುವರು. ಮಾವಿನಕಾಯಿ ‘ಇಳಿಸುವುದು’ ಜತನದ ಕಾರ್ಯ. ದಪ್ಪತೊಗಲಿನ ಮಲಗೋಬ, ಬಾದಾಮಿ ಪೆಟ್ಟು ತಡೆಯಬಲ್ಲವು. ರಸಪುರಿ ಬಲು ನಾಜೂಕು. ಬಿದ್ದರೆ ಹೋಯಿತು.

ಕಾಯಿಳಿಸುವಾಗ ಗಿಡವೇ ಸುಗಂಧ ಸುರಿಸಿದಂತೆ ಸೊನೆಯ ಗಮಲು ಹರಡುತ್ತದೆ. ಇದು ಮಾಗಿದ ಹಣ್ಣು ಹಬ್ಬಿಸುವ ಕಂಪಿಗಿಂತ ತೀಕ್ಷ್ಣ ಮಧುರ. ಚೇಣಿದಾರರು ಬಂಡಿಯಲ್ಲಿ ಕಾಯಿ ಹೇರಿಕೊಂಡು ತರುವಾಗಲಂತೂ ಸೊನೆಯ ಮೆರವಣಿಗೆಯೇ ತೆಗೆದಂತೆ. ಅನುಭವಸ್ಥರು ಸೊನೆಯ ಪರಿಮಳದಿಂದಲೇ ತಳಿ ಹೇಳಬಲ್ಲರು. ಕೆಲವು ತಳಿಗಳು, ತೊಟ್ಟು ಮುರಿವಾಗ ಪಿಚಕಾರಿ ಹೊಡೆದಂತೆ ಕಣ್ಣಿಗೆ ಸೊನೆ ಹಾರಿಸಿ, ನಾವು ತಕತಕ ಕುಣಿಯುವುದನ್ನು ತಮಾಷೆಯಾಗಿ ನೋಡುವುದುಂಟು. ಇದು ಕಾಯಿ ತನ್ನನ್ನು ಗಿಡದಿಂದ ಬೇರ್ಪಡಿಸಿದ್ದಕ್ಕೆ ತೀರಿಸಿಕೊಳ್ಳುವ ಮುಯ್ಯಿಯಂತೆಯೂ ತೋರುತ್ತದೆ.

ಬಿಸಿಲನಾಡಲ್ಲಿ ಸೊಕ್ಕಿ ಬೆಳೆಯುವ ಕಸಿಮಾವು, ಮಲೆನಾಡಲ್ಲಿ ಚಳಿಜ್ವರಕ್ಕೆ ಕುಗ್ಗುವ ರೋಗಿಯಂತೆ ಕಾಣುತ್ತದೆ. ಆದರೆ ಅರೆಮಲೆನಾಡಿನ ನಮ್ಮ ಸೀಮೆಯ ಮಸಾರಿ ನೆಲ, ಅತಿಯಲ್ಲದ ಮಳೆಗಾಲ, ಹಿತಮಿತ ಚಳಿ, ಮಾವಿಗೆ ಹೇಳಿ ಮಾಡಿಸಿದಂತೆ. ಜನ ಹಿತ್ತಲಲ್ಲೋ ತೋಟದ ಬೇಲಿಯಲ್ಲೋ ಒಂದಾದರೂ ಮಾವು ಸಾಕುವರು. ಮನೆಯವರೆಲ್ಲ ತಿಂದು ನಂಟರಿಗೆ ಹಂಚಿ ಉಳಿದಿದ್ದು ಕೈಖರ್ಚಿನ ಬಾಬತ್ತು. ನಾನು ಕಂಡಂತೆ, ಬಡವರು ಹರಬರಕ ಮನೆಗಿಟ್ಟುಕೊಂಡು ಒಳ್ಳೇ ಹಣ್ಣನ್ನು ಸಂತೆಗೊಯ್ಯುವುದೇ ಹೆಚ್ಚು. ನಾವು ನಮ್ಮ ಪಾಲಿನ ಕಾಯನ್ನು ಬಣವೆಯಲ್ಲಿ ಅಡಗಿಸುತ್ತಿದ್ದೆವು. ಇದರ ದೆಸೆಯಿಂದ ಬಣವೆ ಹೆಗ್ಗಣ ಕೊರೆದ ನೆಲದಂತಾಗುತ್ತಿತ್ತು.

ಮಾಗಲು ಬಿಟ್ಟರೆ ತಾನೇ? ದಿನಕ್ಕೆ ಹತ್ತು ಸಲ ಕಾಯನ್ನು ಹೊರತೆಗೆದು ಮೂಸಿ ಹೆಬ್ಬೆರಳನ್ನು ಅದುಮಿ ಚೆಕ್ ಮಾಡುವುದರಲ್ಲೇ ಹಗಲು ಕಳೆಯುತ್ತಿತ್ತು. ನಾವು ಮಾವಿನ ಬೆದೆಹತ್ತಿ ತಿರುಗುವುದನ್ನು ತಪ್ಪಿಸಲು, ಅಪ್ಪ ಒಂಟಿಮರ ಚೇಣಿ ಹಿಡಿಯುತ್ತಿದ್ದನು. ಕುಯಿಲಿನ ದಿನ ಗಾಡಿ ಕಟ್ಟಿಕೊಂಡು ಹೋಗಿ, ಅಡುಗೆ ಮಾಡುಂಡು, ಕಾಯಿಳಿಸಿಕೊಂಡು ಬರುತ್ತಿದ್ದೆವು. ಕಾಯಿ ಕತ್ತಲುಕೋಣೆಯಲ್ಲಿ ಹುಲ್ಲಿನೊಳಗೆ ತಪಸ್ಸಿಗೆ ಕೂರುತ್ತಿತ್ತು. ಕಂಪು ಮನೆತುಂಬ ಹರಡುವ ತನಕ ‘ಅಡಿ’ ಕೆಡಿಸುವಂತಿಲ್ಲ. ಅಡಿ ತೆಗೆದ ವಾರಕಾಲ ಮಾಡಿದಡುಗೆಗೆ ಉಣ್ಣುವವರೇ ದಿಕ್ಕಿರುವುದಿಲ್ಲ. ಮನೆಸುತ್ತ ಸುವಾಸನೆ, ಓಟೆ, ಸಿಪ್ಪೆ. ಕೈಬಾಯೆಲ್ಲ ಅಂಟು. ಈ ಸಹಜ ಪರಿಮಳ ರುಚಿ, ಕಾರ್ಬೈಡ್ ಹಾಕಿ ಬಲವಂತಕ್ಕೆ ಹಣ್ಣಾಗಿಸಿದರೆ ಕಾಣದು. ಸಹಜ ಮಾಗುವಿಕೆಗೂ ಕಾಯಲಾಗದ ಮಾರುಕಟ್ಟೆಯ ಅವಸರ–ದುರಾಸೆಗಳು, ಕಂಪನ್ನಷ್ಟೇ ಅಲ್ಲ, ತಿನ್ನುವ ಸಖವನ್ನೂ ಕೊಂದುಬಿಟ್ಟಿವೆ.

ಲೋಕದ ಬಹುತೇಕ ನುಡಿಗಳಲ್ಲಿ ತಾಯ ಹೆಸರೊಳಗಿನ ‘ಮ’ಕಾರವು – ಮಾಂಗಾಯ್, ಮ್ಯಾಂಗೊ, ಆಮ್ರ, ಆಮ್ – ಮಾವಿಗೂ ಸುತ್ತಿಕೊಂಡಿದೆ. ಅದಕ್ಕೇ ಇರಬೇಕು, ಕೆಲವರು ಮಾವನ್ನು ಹಿಡಿದರೆ ತಾಯೆದೆಗೆ ಬಾಯಿಟ್ಟ ಕೂಸಿನಂತಾಗುವರು. ಇನ್ನು ಕೆಲವರು ಹಣ್ಣನ್ನು ಬೊಗಸೆಯಲ್ಲಿ ಹಿಡಿದು, ಸಿಪ್ಪೆಗೆನ್ನೆ ಕಚ್ಚಿ, ಉಕ್ಕಲು ಸಿದ್ಧವಾಗಿರುವ ರಸವನ್ನು ಕಣ್ತುಂಬಿಕೊಂಡು, ತುಟಿಹಚ್ಚಿ ಹೀರುತ್ತ ಸಮಾಧಿಸ್ಥಿತಿಗೆ ಸಂದ ಯೋಗಿಗಳಾಗುವರು. ಸೇಬು–ದ್ರಾಕ್ಷಿಗಳ ದೊಡ್ಡಸ್ತಿಕೆ ಏನೇಯಿರಲಿ, ಹೀಗೆ ರಸಪಾನ ಸಾಧ್ಯವಿರುವುದು ಮಾವಿಗೆ ಮಾತ್ರ. ನಾನೀಗಲೂ ಮಾವನ್ನು ಕೊಯ್ದು ತಿನ್ನಲಾರೆ. ಹುಟ್ಟಿದಾರಭ್ಯ ಜತೆಯಲ್ಲಿರುವ ಸಿಪ್ಪೆ–ತಿರುಳನ್ನು ನಿಷ್ಕರುಣೆಯಿಂದ ಅಗಲಿಸಲಾರೆ. ಅದರಲ್ಲೂ ‘ಗಿಣಿಮೂತಿ’ ರುಚಿಯಿರುವುದೇ ತೊಟ್ಟಿನ ಇಳಿಜಾರು ಭಾಗದ ಸಿಪ್ಪೆಯಲ್ಲಿ. ರಸಪುರಿ ತಿನ್ನುವಾಗ ರಸ ಅಂಗೈಯಿಂದಿಳಿದು ಮೊಣಕೈಯತ್ತ ಹರಿಯಲೆತ್ನಿಸುವುದು ಸಾಮಾನ್ಯ. ಆಗೆಲ್ಲ ರಸನಷ್ಟವಾಗದಂತೆ ತಕ್ಷಣ ಕಾರ್ಯಾಚರಣೆ ಮಾಡಲು ನಾಲಗೆಯನ್ನು ಕಳಿಸುತ್ತಿದ್ದೆವು. ಖಂಡವೆಲ್ಲ ಮುಗಿದ ಬಳಿಕ ಓಟೆಯ ವಿಚಾರಣೆ ಶುರುವಾಗುತ್ತಿತ್ತು. ಅದುವೋ ನಾಲಗೆ ಹೊಡೆತಕ್ಕೆ ಸಿಕ್ಕಿ ಬೆಳ್ಳಗಾಗುತಿತ್ತು. ಓಟೆಸುಖಕ್ಕಾಗಿಯೆ ‘ಶಹಾತ್‌ಗುಟಲಿ’ (ಜೇನೋಟೆ) ಎಂಬ ತಳಿಯೂ ಇದೆ. ರೇಶಿಮೆ ನುಣುಪಿನ ನಾರುಳ್ಳ ಇದರ ಓಟೆಯನ್ನು ಅಂಗೈಯಲ್ಲಿ ಹಿಡಿದು ಹಿಚುಕುತ್ತ ಉಕ್ಕುವ ಊಟೆಯನ್ನು ಹೀರಬೇಕು. ದುಃಖವೆಂದರೆ, ಕಸಿಹಣ್ಣನ್ನು ಬಣ್ಣದ ಕಾಗದದ ಹಾಸಿನಲ್ಲಿ ನೀಟಾಗಿ ಜೋಡಿಸಿ ಝಗಮಗಿಸುವ ದೀಪಗಳ ಬೆಳಕಿನಡಿ ಇಡುವ ಅಂಗಡಿಯವರು, ಉರುಟು ಉಂಡೆಯಂತಿರುವ ಜೇನೋಟೆಯನ್ನು ಮಾತ್ರ, ಸಿರಿವಂತರ ಮನೆಯ ಔತಣದಲ್ಲಿ ಭಿಕ್ಷುಕರನ್ನು ಕೊನೇ ಪಂಕ್ತಿಗೆ ಕೂರಿಸುವಂತೆ ಮೂಲೆಯಲ್ಲಿ ಕುಪ್ಪೆ ಹಾಕುವರು. ಈ ತಬ್ಬಲಿಗಳಿಗೆ ತಕ್ಕಡಿ ಮರ್ಯಾದೆಯೂ ಇಲ್ಲ. ಡಜನ್ ಲೆಕ್ಕಾಚಾರ. ಈ ದೇಶೀಫಲವನ್ನು ಒಂದೇ ಬೈಠಕ್ಕಿಗೆ ಹತ್ತು–ಹನ್ನೆರಡು ತಿನ್ನಬೇಕು. ಮಕ್ಕಳಿಗೆ ಇದರ ಒಂದು ಓಟೆ ಸಿಕ್ಕರೆ ಸಂಜೆತನಕ ಮನೆಯತ್ತ ಸುಳಿಯುವುದಿಲ್ಲ. ಸೀಜನ್ನಿನಲ್ಲಿ ಅವುಗಳ ಅಂಗಿಗಳು ರಸಪಾನ ಮಾಡಿ ತಾಡಪಾಲಿನಂತೆ ಸೆಟೆಯುವುದುಂಟು.

ಓಟೆ ಎಂದಾಗ ಎ.ಕೆ. ರಾಮಾನುಜನ್ ಹೇಳಿದ ಕತೆ ನೆನಪಾಗುತ್ತಿದೆ. ಒಂದೂರಲ್ಲಿ ಒಬ್ಬ ರಾಜ. ಅವನಿಗೆ ಮಕ್ಕಳ ಫಲವಿರಲಿಲ್ಲ. (ರಾಜರಿಗೇ ಯಾಕೆ ಹೀಗಾಗುತ್ತದೆಯೊ?) ಆಗ ಋಷಿಯೊಬ್ಬ ಮಾವನ್ನು ಮಂತ್ರಿಸಿ ರಾಣಿಗೆ ನೀಡುವನು. ತಿರುಳನ್ನು ಮೆದ್ದ ರಾಣಿ, ಓಟೆಯನ್ನು ಉಪ್ಪರಿಗೆಯಿಂದ ಹೊರಗೆಸೆಯುವಳು. ಕೆಳಗೆ ಮೇಯುತ್ತಿದ್ದ ಬಿಡಾಡಿ ಮೇಕೆಯೊಂದು ಅದನ್ನು ತಿನ್ನುತ್ತದೆ. ರಾಣಿಗೆ ನವಮಾಸವಾದರೂ ಗರ್ಭ ಕಟ್ಟುವುದಿಲ್ಲ. ಮೇಕೆ ರಾಜಕುವರನನ್ನು ಹಡೆಯುತ್ತದೆ. ಲೋಕವು ನಿಕೃಷ್ಟವೆಂದು ಭಾವಿಸಿದ ವಸ್ತುಗಳಲ್ಲೇ ಕಲಾಸೃಷ್ಟಿಯ ಸಾಮಗ್ರಿಯಿದೆ ಎಂದು ಸೂಚಿಸಲು ರಾಮಾನುಜನ್ ಇದನ್ನು ಹೇಳಿದಂತಿದೆ. ಓಟೆಯಲ್ಲಿ ಸಂತಾನಶಕ್ತಿ ಇದೆಯೋ ಇಲ್ಲವೋ, ಚೀಪುವ ಖುಷಿ ಮಾತ್ರ ಬೇಜಾನಿದೆ.

ಮಾವುಸೆಳೆತ ಬಾಳಿನಲ್ಲಿ ನನ್ನನ್ನು ಅದೆಷ್ಟೋ ಅಪಮಾನಗಳಿಗೆ ದೂಡಿದೆ. ಮನೆಯಲ್ಲಿ ಹಣ್ಣು ಕೊಯ್ಯಲು ನನಗೆ ಈಗಲೂ ಬಿಡುವುದಿಲ್ಲ – ಓಟೆಯಲ್ಲಿ ಹೆಚ್ಚು ತಿರುಳು ಉಳಿಸಿಕೊಂಡು ತಿನ್ನುತ್ತೇನೆಂದು. ನನ್ನ ದುರಾಸೆ ಕಂಡು ಅಮ್ಮ ‘ನೀನು ಮಾವಿನ ಹುಳವಾಗಿ ಹುಟ್ಟುತ್ತೀಯ’ ಎನ್ನುತ್ತಿದ್ದಳು. ನಾನು ಈ ಮಧುರ ಶಾಪಕ್ಕೆ ಖುಷಿಪಡುತ್ತಿದ್ದೆ – ರಸ ಕುಡಿದು ಅಲ್ಲೇ ಈಜಾಡಿಕೊಂಡಿರಬಹುದು ಎಂದು. ‘ರಸವೇ ಜನನ, ವಿರಸವೇ ಮರಣ’ ಎಂದು ಕವಿನುಡಿಯಿದೆಯಷ್ಟೆ. ಅದ್ವೈತಿಗಳೆಲ್ಲ ರಸವಾದಿಗಳೇ. ಕದ್ದು ಕತ್ತಲಲ್ಲಿ ಹಣ್ಣು ತಿನ್ನುವವರು ಸಾಮಾನ್ಯವಾಗಿ ರಸ ಮತ್ತು ರಸಜೀವಿಗಳ ನಡುವೆ ತರತಮ ಮಾಡುವುದಿಲ್ಲ.

ಮಾವುಚೌರ್ಯ ಜನರ ಜನ್ಮಸಿದ್ಧ ಹಕ್ಕಿರಬೇಕು. ಎಂತಲೇ ಜನರಿಗೆ ‘ಯಾರಿಗೆ ಕೇಳಿ ಕಾಯಿ  ಕಿತ್ಕೊಂಡೆ?’ ಎಂದು ಜಬರಿದರೆ, ‘ಏ! ತಿನ್ನಾಕೊಂದು ಕಾಯಿ ಕಿತ್ಕಂಡರೆ ನಾಯಿ ಆಡದಂಗ್ ಆಡ್ತೀಯಲ್ಲಪ್ಪ’ ಎಂದು ನಮ್ಮನ್ನೇ ಆರೋಪಿ ಮಾಡುವರು. ಈ ತಾಪತ್ರಯವೇ ಬೇಡವೆಂದು ನಾನು ನಮ್ಮ ಗಿಡ ಕಾಯಿ ಕಚ್ಚಿದೊಡನೆ, ಜನತೆಯ ಹಕ್ಕನ್ನು ರದ್ದುಮಾಡಿ ಪೊಲೀಸನಾಗಿ ಮಾರ್ಪಡುತ್ತೇನೆ. ಬೀದಿ ಹುಡುಗರು ಏರದಂತೆ ಕಾಂಪೌಂಡಿಗೆ ಬಳ್ಳಾರಿಜಾಲಿ ಬಿಗಿಸುವುದು; ಗಿಡದ ಕೆಳಗೇ ಓದುತ್ತಲೋ ಅಡ್ಡಾಡುತ್ತಲೋ ಇರುವುದು; ಕೋತಿಗಳು ಬಂದರೆ ಪಟಾಕಿ ಹಾರಿಸುವುದು ಮಾಡತೊಡಗುತ್ತೇನೆ. ಮಾಜಿಚೋರನಿಗೆ ಹಾಲಿಚೋರರನ್ನು ಹಿಡಿಯಲು ನೈತಿಕ ಅಧಿಕಾರವಿದೆಯೇ? ಈ ನೈತಿಕಪ್ರಶ್ನೆ ನುಗ್ಗಿದಾಗೆಲ್ಲ ಕತ್ತುಹಿಡಿದು ಹೊರದಬ್ಬುತ್ತೇನೆ.

ಕಂಡವರ ಗಿಡದಲ್ಲಿ ಮಾವನ್ನು ಕಂಡರೆ, ನನಗೀಗಲೂ ಕೈ ಚುರುಚುರು ಅನ್ನುತ್ತದೆ. ಈಚೆಗೆ ಕಡಲ ಪ್ರವಾಸಕ್ಕೆಂದು ಹೋದಾಗ, ಗೋಕರ್ಣ ಸೀಮೆಯ ಗೆಳೆಯರೊಬ್ಬರ ಮನೆಯಲ್ಲಿ ನಡೆದ ಘಟನೆಯನ್ನು ಹೇಳಬೇಕು. ಮನೆಯವರು ನಮಗಾಗಿ ಮೀನಿನ ಔತಣ ಏರ್ಪಡಿಸಿದ್ದರು. ಮನೆ ತುಂಬ ಈಸಾಡಿ ಮಾವಿನ ಸುಗಂಧ ತುಂಬಿಕೊಂಡಿದ್ದನ್ನು ಹೋದೊಡನೆ ಗುರುತಿಸಿದೆ.

ಊಟದ ಬಳಿಕ ತಟ್ಟೆಯಲ್ಲಿಟ್ಟು ಮಾವಿನಸೀಳನ್ನು ಕೊಟ್ಟರು. ಅವುಗಳ ಸಂಖ್ಯೆ ತೀರಾ ಕಮ್ಮಿಯಿತ್ತು. ರಾತ್ರಿ ಮಲಗಲು ನನಗೆ ಅಟ್ಟದ ಮೇಲೆ ಹಾಸಿಗೆ ಬಿಡಿಸಿಕೊಟ್ಟರು. ಹಣ್ಣನ್ನು ಅಲ್ಲೇ ಒತ್ತಿಗಿಟ್ಟಿದ್ದರಿಂದ ಪರಿಮಳವು ಉಸಿರಿನ ಜೊತೆಗೂಡಿ ಕೊಲ್ಲತೊಡಗಿತು. ನಿಶ್ಯಬ್ದ ರಾತ್ರಿಯಲ್ಲಿ ಅಲೆಗಳು ದಡಕ್ಕೆ ಬಡಿವ ಧಡಲ್ ಬಡಲ್ ಸದ್ದು ಬೇರೆ. ಇನ್ನೆಲ್ಲಿಯ ನಿದ್ದೆ? ಕತ್ತಲಲ್ಲೇ ತಡವರಿಸಿಕೊಂಡು ಅಂಬೆಗಾಲಿಟ್ಟು ಹೋಗಿ ಒಂದು ಹಣ್ಣನ್ನು ತೆಗೆದೆ. ಹುಲ್ಲಿನ ಸರಸರಕ್ಕೆ ಅಟ್ಟದ ಕೆಳಗಿನ ಬೆಂಚಿನಮೇಲೆ ಪವಡಿಸಿದ್ದ ಗೆಳೆಯನ ಅಪ್ಪ,  ‘ಯಾರದು? ಎಂದರು. ಜನ ಗಾಢನಿದ್ದೆಯಲ್ಲಿರುವಾಗ ಇಂತಹ ಗದರುದನಿಯ ಅಗತ್ಯವಿರಲಿಲ್ಲ. ತೋಟದ ಒಂಟಿಮನೆಗಳಲ್ಲಿ ವಾಸಿಸುವವರಿಗೆ ನಾಯಿಗಿವಿ. ಸಣ್ಣ ಸಪ್ಪಳಕ್ಕೂ ಧಡಕ್ಕನೇಳುವರು. ವೃದ್ಧರಂತೂ ನಿದ್ದೆಯನ್ನೇ ಗಡಿಪಾರು ಮಾಡಿರುವರು. ನಾನು ನಿತ್ರಾಣ ದನಿಯಲ್ಲಿ ‘ಬಚ್ಚಲಿಗೆ ಹೋಗಬೇಕಿತ್ತು’ ಎಂದೆ. ಯಜಮಾನರು ಲೈಟುಹಾಕಿ ‘ಅತ್ತ ಯಾಕೆ ಹೋದಿರಿ ಸಾರು? ಪಾವಟಿಗೆ ಇತ್ತ ಉಂಟಲ್ಲಾ’ ಎಂದು ಹಾದಿ ತೋರಿದರು. ಬೆಳಿಗ್ಗೆ ಹೊರಡುವಾಗ ಹಣ್ಣು ತುಂಬಿದ ಪೆಟ್ಟಿಗೆಯೊಂದು ಕಾರಿನೊಳಗೆ ಬಂದಿತು.  ಯಜಮಾನರು ನನ್ನ ಹೆಂಡತಿಯನ್ನು ಪಕ್ಕ ಕರೆದು ‘ಕೇಳಿದರೆ ಇನ್ನೊಂದು ಪೆಟ್ಟಿಗೆ ಕೊಡುವೆ. ನಿನ್ನ ಗಂಡ ಕತ್ತಲಲ್ಲಿ ಅಟ್ಟದಿಂದ ಬಿದ್ದಿದ್ದರೆ ಗತಿಯೇನು?’ ಎಂದರಂತೆ. ಅದೊಂದು ಚಾಡಿಹೇಳುವ ಅಪರಾಧವೇ? ಅಷ್ಟಕ್ಕೂ ನಾನು ಹೋಗಿದ್ದು ಹಣ್ಣಿನ ಸುಗಂಧ ಮೂಸಲು. ಜನ ಆನೆ ಕಳೆದರೆ ತೆಪ್ಪಗಿರುತ್ತಾರೆ. ಒಂದು ಹಣ್ಣು ಹೋದರೆ ರಾಜ್ಯ ಕಳೆದವರಂತೆ ಆಡುತ್ತಾರೆ. ‘ನಿನ್ನಿಂದ ಮರ್ಯಾದೆಯಿಲ್ಲ’ ಎಂದು ಹೆಂಡತಿ ಛೀಮಾರಿ ಹಾಕಿದಳು. ಕದ್ದು ಮಾಡುವ ಪ್ರೇಮದಲ್ಲಿ ರೋಮಾಂಚನವಿರುವಂತೆ, ಕದ್ದು ತಿನ್ನುವ ಹಣ್ಣಲ್ಲಿ ರುಚಿ ಜಾಸ್ತಿ. ನಮ್ಮ ಹಿತ್ತಲಿಗೆ ನುಗ್ಗುವ ಹಕ್ಕಿ ಕೋತಿ ಮಾಡುವುದು ಇದನ್ನು ತಾನೆ? ಪ್ರಿಯ ವಸ್ತುವನ್ನು ದಕ್ಕಿಸಿಕೊಳ್ಳಬೇಕಾದರೆ ಅಪಮಾನಕ್ಕೆ ಅಳುಕಬಾರದು. ಭಂಡರೆಂದು ಆಡಿಕೊಳ್ಳುವವರಿಗೂ ಮರೆವೆಂಬುದು ಇರುತ್ತದಷ್ಟೆ.

ದೆಹಲಿಯಲ್ಲೂ ಹೀಗೇ ಆಯಿತು. ಅದೊಂದು ಭಾರತದ ಆಹಾರ ಸಂಸ್ಕೃತಿ ಕುರಿತ ಕಾರ್ಯಕ್ರಮ. ಅತಿಥಿಗಳ ಮಧ್ಯಾಹ್ನದೂಟಕ್ಕೆ ಬಫೆ ಏರ್ಪಡಿಸಿತ್ತು. ಹಬೆಯಾಡುವ ಬೋಗುಣಿಗಳಲ್ಲಿ ಹತ್ತಾರು ಭಕ್ಷ್ಯಗಳು. ಅಖೈರಿಗೆ ಮಾವಿನ ಕೊಯ್ದ ಕೆನ್ನೆಗಳಿದ್ದ ಬೋಗುಣಿಯಿತ್ತು. ಪಕ್ಕದಲ್ಲೇ ತಿರುಳನ್ನು ಐಸ್‌ಕ್ರೀಮಂತೆ ಬಗೆದು ತಿನ್ನಲು ಚಮಚೆಯನ್ನೂ ಇಡಲಾಗಿತ್ತು. ಜುಲೈ ತಿಂಗಳಲ್ಲಿ ಮಾವನ್ನು ಕಂಡು ನನ್ನ ಸಂಯಮ ಹಾರಿಹೋಯಿತು. ಊಟಬಿಟ್ಟು ತಟ್ಟೆತುಂಬ ಹೋಳು ತುಂಬಿಕೊಂಡು ದೂರಕುಳಿತು ತಿನ್ನತೊಡಗಿದೆ. ರಟ್ಟಿನಂತಹ ಹಸಿರುಸಿಪ್ಪೆಯ ಸಮೇತ ಕಟಕ್ಕೆಂದು ಕಚ್ಚಿದೊಡನೆ ಸಿಗುತ್ತಿದ್ದ ಮೃದುಖಂಡ ಬಾಯ್ತುಂಬ ಹರಡಿಕೊಳ್ಳುತ್ತಿತ್ತು. ಕೋಟು–ಟೈ ತೊಟ್ಟ ವಿದ್ವಾಂಸರು ಕಣ್ಣನ್ನು ಚಾಕುವಾಗಿಸಿ ನನ್ನ ಹಪಾಪಿತನ ಗಮನಿಸುತ್ತಿದ್ದರು. ‘ಸಾಲಾ ಮದ್ರಾಸಿ. ಕಿತನೆ ಆಮ್ ಅಕೇಲಾ ಖಾ ರಹಾಹೈ. ಜಿಂದಗಿ ಮೇ ಕಭಿ ಆಂ ನಹಿ ದೇಖಾ ದಿಕತಾ’ ಎಂದು ಗೊಣಗಿರಬೇಕು. ಜೀವನದಲ್ಲಿ ಎಂದೂ ಮುಲಾಖತಿ ಆಗದವರು ಏನಂದುಕೊಂಡರೆ ಏನಂತೆ? ಸದರಿ ಹಣ್ಣಿನ ಹೆಸರು ‘ಲಂಗಡಾ’. ನಾನು ಕೂಡಲೇ ಲಂಗಡಾಭಿಮಾನಿಯಾದೆ. ಬನಾರಸ್ ಸೀಮೆಯಲ್ಲಿ ಕುಂಟರೈತ ಬೆಳೆದಿದ್ದರಿಂದ ಈ ಹೆಸರಂತೆ. ಸರಿಕಾಣಲಿಲ್ಲ. ನಾವೇ ವಾಸಿ. ಬದಾಮಿ ರಸಪುರಿ ತೋತಾಪುರಿ ದಿಲ್‌ಪಸಂದ್ ಮಲಗೋಬ ಬೇನಿಶಾ ನೀಲಂ-ಚೆಂದದ ಹೆಸರಿಟ್ಟಿದ್ದೇವೆ.

ಹಣ್ಣುಗಳಲ್ಲಿ ‘ಬಾದಾಮಿ’ ಸುರುವಿಗೆ ಕಾಣಿಸಿಕೊಂಡು ಕಣ್ಮರೆಯಾದರೆ, ನಿಡುಗಾಲ ಇರುವುದು ‘ಗಿಣಿಮೂತಿ’. ಮಾವೋತ್ಸವಕ್ಕೆ ವಿದಾಯ ಹೇಳಲೆಂದೇ ಉಳಿದಂತೆ ‘ನೀಲಂ’ ಕಾಣಿಸುತ್ತದೆ. ಸಪೂರ ಅಂಗಸೌಷ್ಟವವುಳ್ಳ ‘ಗಿಣಿಮೂತಿ’ಗೆ ಹೋಲಿಸಿದರೆ, ಮೈತುಂಬಿಕೊಂಡ ‘ಮಲಗೋಬ’ ಕುಸ್ತಿಪಟು. ಪಂಪ ಬನವಾಸಿಯ ಸಮೃದ್ಧಿ ಬಣ್ಣಿಸುತ್ತ ‘ಒಂದು ಹೂವಿನ ಮಧುಪಾನದಿಂದಲೇ ದುಂಬಿಗಳು ದಣಿದು ಹೋಗುತ್ತವೆ’ ಎನ್ನುವುದುಂಟು. ಸರಿಯಾದ ಒಂದು ‘ಮಲಗೋಬ’ ತಿಂದರೂ ಹೀಗೇ ಮುಖ ಮುರಿಯುತ್ತದೆ. ಕೆಣಕುವಂತೆ ಮುದ್ದಾಗಿ ಬಾಗಿದ ತುದಿಯುಳ್ಳ ‘ರಸಪುರಿ’, ರತಿಪೂರ್ವ ಚೇಷ್ಟೆಗೆ ದ್ರವಿಸುವ ನಲ್ಲರಂತೆ ಬಾಯಲ್ಲೆ ಕರಗುತ್ತದೆ. ‘ಬಾದಾಮಿ’, ಗುಲಾಬಿ ತಿರುಳಲ್ಲಿ ರುಚಿಯಡಗಿಸಿಕೊಂಡು ಕಚ್ಚಿದಂತೆಲ್ಲ ಇಷ್ಟಿಷ್ಟೆ ಬಿಟ್ಟುಕೊಡುವ ಸಂಯಮಿ. ನಾನು ಲಾಲ್‌ಬಾಗಿನ ಮಾವುಮೇಳಕ್ಕೆ ತಪ್ಪದೇ ಹೋಗುತ್ತೇನೆ. ಅದೊಂದು ಹೋಳಿಯಾಡಿ ಬಂದವರ ನೆರವಿಯಂತೆ. ಮೈಸೂರು–ಹುಣಸೂರು, ಹುಬ್ಬಳ್ಳಿ–ಧಾರವಾಡ ರಸ್ತೆಗಳಲ್ಲೂ ಕಾಮನಬಿಲ್ಲನ್ನು ತುಂಡುಮಾಡಿಟ್ಟಂತೆ ಹಣ್ಣನ್ನು ಜೋಡಿಸುವರು. ಆದರೆ ಬಣ್ಣವಿದ್ದಲ್ಲೆಲ್ಲ ಸ್ವಾದ ಖಚಿತವಲ್ಲ.

ವರುಷಕ್ಕೊಮ್ಮೆ ಆಗಮಿಸುವ ಮಾವಿಗೆ, ಬಾಳೆ ಸೀಬೆಗಳಿಲ್ಲದ ಸಮ್ಮಾನ. ನೇರಳೆ ಹಲಸೂ ವರುಷಕ್ಕೊಮ್ಮೆ ಬಂದರೂ ಮಾವಿಗೇಕೆ ಈ ಮನ್ನಣೆ? ಫಲಗಳ ರಾಜನೆಂಬ ಹೆಸರು? ಹಾದಿಬೀದಿಯ ಮಕ್ಕಳ ಕೈಬಾಯಿಗೆ ಸಿಗುವ ಹಣ್ಣಿಗೆ ರಾಜನೆಂಬ ಹೆಸರಾದರೂ ಉಚಿತವಲ್ಲ.  ಗಿಣಿಮೂತಿಗೆ ‘ಆಮಿನ್ನಿ’ (ಮಾವಿನಿ) ಎಂದು ಹೆಣ್ಹೆಸರುಂಟು. ‘ಕಿತನೆ ದಿನ್ ಛುಪೇಗಿ ಕೈರಿ ತು ಪತ್ತೋಂಕೆ ಆಡಮೆ; ಏಕ್‌ದಿನ್ ಆಯೇಗಿ ಬಿಕನೆ ಬಾಜಾರ್ ಮೆ’ (ಎನಿತು ದಿನ ಎಲೆ ಮರೆಯಲೆ ಅಡಗಿರುವೆ; ಒಮ್ಮೆ ಬರಲೇಬೇಕು ಸಂತೆಗೆಲೆ ಮಾವೆ) ಎಂಬ ಶಾಯರಿಯೂ ಇದೆ. ಯಾರು ಕಟ್ಟಿದರೋ ಮಾವಿಗೂ ಗಿಳಿಗೂ ನಂಟು? ಯಾವ ಹಕ್ಕಿ ಕಡಿದರ ಗಿಣಗಡಕವೇ. ಕವಿಗಳು ಹೆಣ್ದುಟಿಯನ್ನು ‘ಗಿಣಗಡಕ ಹಣ್ಣಿನಾಂಗ’ ಎಂದು ಬಣ್ಣಿಸಿರುವುದುಂಟು. ಸೂರ್ಯನ ಕಣ್ಣಿಗೆ ಬೀಳುವ ಕಾಯಿ ಸಂಜೆ ಆಗಸದಂತೆ ಬಣ್ಣವೇರಿಸಿಕೊಳ್ಳುತ್ತದೆ. ಅದನ್ನು ಕಂಡು ಗಿಳಿಗಳ ಚಿತ್ತ ಚಲಿತವಾಗದೆ ಇರುತ್ತದೆಯೇ?

ನಮ್ಮೂರ ಮಂಡಿ ವ್ಯಾಪಾರಿಗಳು, ಸಾಧಾರಣ ಹಣ್ಣನ್ನೆಲ್ಲ ಲೋಕಲ್ ಮಾರುಕಟ್ಟೆಗೆ ಬಿಟ್ಟು, ಒಳ್ಳೆಯ ಮಾಲನೆಲ್ಲ ಸಾಂಗಲಿಗೆ ಸಾಗಿಸುವರು; ಮಹಾರಾಷ್ಟ್ರದಲ್ಲಿ ಒಬ್ಬೊಬ್ಬರೂ ಬುಟ್ಟಿ ಹಣ್ಣನ್ನು ಮುಗಿಸುವರೆಂದು ಕತೆಕಟ್ಟಿ ಹೇಳುವರು. ಈ ದಂತಕತೆಯಲ್ಲಿ ಸಾಕಷ್ಟು ನಿಜಾಂಶವಿದೆ ಎಂದು ಮಹಾರಾಷ್ಟ್ರಕ್ಕೆ ಹೋದಾಗ ಅರಿವಾಯಿತು. ಪುಣೆಯ ‘ಬಾಲಗಂಧರ್ವ ನಾಟ್ಯಮಂದಿರ’ದ ಆವರಣದಲ್ಲಿ ಏರ್ಪಾಟಾಗಿದ್ದ ಮಾವುಮೇಳ ಕಂಡಾಗ ‘ನಾವು ಬಾಯಿಲ್ಲದ ಜನ. ಬೆಳೆಯುತ್ತೇವೆ. ಮಾರುತ್ತೇವೆ. ರಸಿಕರಾದ ಮರಾಠಿಗರು ಮಾವು ತಿನ್ನುವ ಸಂಸ್ಕೃತಿಯನ್ನೇ ರೂಪಿಸಿದ್ದಾರೆ’ ಎಂದು ಅನಿಸಿಬಿಟ್ಟಿತು. ಲವಂಗದಂತೆ ತೊಟ್ಟನ್ನು ಬುಡಕ್ಕೆ ಅಂಟಿಸಿಕೊಂಡಿದ್ದ ರತ್ನಗಿರಿ ಆಪೂಸು, ಗಿಡವೇ ಪಕ್ಷಿರೂಪ ತಳೆದು ಇಟ್ಟುಹೋದ ಹೊನ್ನತತ್ತಿಯಂತೆ ಬಾದೆಹುಲ್ಲಿನಲ್ಲಿ ಪವಡಿಸಿತ್ತು; ಅಲ್ಲಿ ಪ್ರತಿ ರಾಜಕೀಯ ಪಕ್ಷವೂ ತನ್ನ ಮಳಿಗೆ ಹಾಕಿತ್ತು. ಕೆಲವು ಮಳಿಗೆಗಳಲ್ಲಿ ಬಿಸಿಬಿಸಿ ‘ಪೂರಣ್ ಪೋಳಿ’ಯ ಮೇಲೆ ರಸಸುರಿದು ಕೊಡುತ್ತಿದ್ದರು. ಪುಣೆಯಲ್ಲಿ ಕುಡಿವಷ್ಟು ರಸಕೊಡುವ ವಿಶೇಷ ಊಟದ ಹೋಟೆಲುಗಳೂ ಇವೆ. ಗ್ಲಾಸು ಖಾಲಿ ಮಾಡುವುದನ್ನೇ ಕಾಯುತ್ತ ಹೂಜಿಯಲ್ಲಿರುವ ರಸ ಸುರಿಯಲೆಂದೇ ಒಬ್ಬ ಮಾಣಿಯಿದ್ದಾನೆ.  ನಾನು ಊಟ ಕಡಿಮೆಗೊಳಿಸಿ ಹತ್ತುಲೋಟ ಹೀರಿದೆ. ಈಗಲೂ ಆ ವ್ಯವಸ್ಥೆ ಉಳಿದಿದೆಯೋ ಇಲ್ಲವೋ ಕಾಣೆ. ಆದರೂ, ರಸವನ್ನು ನಾಲಗೆಗೆ ತಾಗಿಸದೆ ಪೈಪಿನಿಂದ ಗಂಟಲಿಗೆ ರವಾನಿಸುವುದು ಮಾವಿಗೆ ಮಾಡುವ ಅಪಮಾನವೆ ಸರಿ. ಹಣ್ಣನ್ನು ಅಂಗೈಯಲ್ಲಿಟ್ಟು ಸ್ಪರ್ಶಸುಖ ಅನುಭವಿಸಿ, ಕಣ್ಣಿಗೆ ಬಣ್ಣ ತುಂಬಿಕೊಂಡು, ಮೂಗಿಗೆ ಕಂಪು ಕಳಿಸಿ, ಹಲ್ಲು ತುಟಿ ನಾಲಗೆಗಳಲ್ಲಿ ಚೆಲ್ಲಿಕೊಂಡು ತಿಂದರೇನೇ ಸುಖ.

ಬಾಳಿನ ಸಮಸ್ತ ಹಂತಗಳಲ್ಲೂ ಉಪಯುಕ್ತವಾಗುವ ಮಾವಿನ ಬಳಕೆ ಮಿಡಿಯಿಂದ ಶುರುವಾಗುತ್ತದೆ. ಉಪ್ಪುನೀರಲ್ಲಿ ಮಲಗಿ, ಸುಕ್ಕಗಟ್ಟಿದ ಮೈಯನ್ನು ಮಸಾಲೆದ್ರವದಲ್ಲಿ ಹೊರಳಿಸಿಕೊಂಡು, ತಟ್ಟೆತುದಿಗೆ ಆಗಮಿಸುವ ಮಿಡಿ, ಜನ್ಮಾಂತರ ದಾಟಿ ಬಂದ ಮಾವಿನ  ಆತ್ಮದಂತೆ ಕಾಣುತ್ತದೆ. ನಮ್ಮ ಅಡುಗೆ ಮನೆಗಳು ಈ ಕಾರಣಕ್ಕೆ ಅದ್ಭುತ ಪ್ರಯೋಗಾಲಯಗಳು. ಮಿಡಿಯನ್ನು ಯಾರಾದರೂ ಕಚ್ಚುವುದನ್ನು ನೋಡುವುದಿರಲಿ, ನೆನೆಸಿಕೊಂಡರೇ ಬಾಯಲ್ಲಿ ಜಲವಾಡುತ್ತದೆ. ಉಪ್ಪಿನಕಾಯಿ ವರುಷವಿಡೀ ಮಾವನ್ನು ತಿನ್ನುವ ಒಳ್ಳೆಯ ಉಪಾಯ. ಗಿಡದ ಜೀವವೇ ಜಾಡಿಯಲ್ಲಿ ಹೋಳಾಗಿ ನೆಲೆಸಿದಂತಿರುವ ಅದು, ಅಪ್ರಮಾಣ ಅಪ್ರಮೇಯ ಕೂಡಲಸಂಗಮ ಭಕ್ತರ ಕರಸ್ಥಳಕ್ಕೆ ಬಂದು ಚುಳುಕಾದಂತೆ ಕಾಣುತ್ತದೆ. ಮಿಡಿ ಮತ್ತು ಚಟ್ನಿಗೆಂದೇ ಮೀಸಲಾದ ತಳಿಗಳಿವೆ. ಚಟ್ನಿ ಉಪ್ಪಿನಕಾಯಷ್ಟು ದೀರ್ಘಾಯುಷಿಯಲ್ಲ. ಆದರೇನಂತೆ, ಅಲ್ಪಾಯುಷ್ಯವೇ ರುಚಿಯನ್ನು ಮುಮ್ಮಡಿಸಿದಂತಿದೆ. ಒಮ್ಮೆ, ತಿಪಟೂರು ಕಡೆಯ  ಮಿತ್ರರೊಬ್ಬರು ಮನೆಗೆ ಬಂದಾಗ ಊಟಕ್ಕೆ ತಟ್ಟೆಯಂಚಲ್ಲಿ ಮಾವಿನಚಟ್ನಿ ಬಡಿಸಿದೆವು. ಅವರು ಚಟ್ನಿಗೆ ಬೆರಳಿಟ್ಟು ನಾಲಗೆಗೆ ಮುಟ್ಟಿಸಿದರು. ರುಚಿ ಬ್ರಹ್ಮರಂದ್ರಕ್ಕೆ ಹತ್ತಿರಬೇಕು. ಕೂಡಲೇ ‘ಏ, ನಿಮ್ಮ ಸಾರುಗೀರು ಬ್ಯಾಡ. ಸ್ವಲ್ಪ ಎಳ್ಳೆಣ್ಣೆ ಕೊಡ್ರಿಯಿಲ್ಲಿ’ ಎಂದವರೇ ಚಟ್ನಿಗೆ ಹಸಿಯೆಣ್ಣೆ ಕಲಸಿಕೊಂಡು ಬಿಸಿಯನ್ನದ ಜತೆ ಸಂಲಗ್ನಗೊಳಿಸಿ ಬಡತಾ ಬಡಿದರು.

ಮಾವು ಮಿಡಿಯಿಂದ ಹಿಡಿದು ತೊಟ್ಟುಕಳಚಿ ಬೀಳುವ ತನಕ ಒದಗುವ ಪರಿ ಕಾಣಬೇಕಾದರೆ ಮಲೆನಾಡಿಗೇ ಹೋಗಬೇಕು. ಒಮ್ಮೆ ಪಶ್ಚಿಮಘಟ್ಟದಲ್ಲಿ ಚಾರಣಿಸುತ್ತಿರುವಾಗ,  ಕಾಡಮೂಲೆಯಲ್ಲಿರುವ ಆಪ್ತರೊಬ್ಬರ ಮನೆಗೆ ಹೇಳದೆ ಕೇಳದೆ ಹಸಿದ ತೋಳಗಳಂತೆ ಹೊಕ್ಕೆವು. ಮನೆಯವರು ನಮ್ಮ ಬಾಡುಮುಖ ಕಂಡವರೇ ‘ಹತ್ತೇ ನಿಮಿಷ. ಎಲೆ ಹಾಕ್ತೇವೆ’ ಎಂದರು. ‘ಬೇಡಬೇಡ, ಪರವಾಗಿಲ್ಲ, ಹೋಗಿಬಿಡ್ತೇವೆ, ಕಾಫಿ ಕೊಟ್ಟರೆ ಸಾಕಿತ್ತು’ ಎಂದು ಗೊಣಗುತ್ತಲೇ ಬಿಡಾರಬಿಟ್ಟೆವು. ಪಕ್ಕದಲ್ಲಿ ಸುರಿಯುತ್ತಿದ್ದ ಝರಿಯಲ್ಲಿ ಮಿಂದು ಬರುವಷ್ಟರಲ್ಲಿ ಅಡುಗೆ ತಯಾರಾಗಿತ್ತು. ಅವರು ಮಾಡಿದ್ದು ಮೂರೇ ಕೆಲಸ: ಎದುರು ಗದ್ದೆಯಲ್ಲಿ ಬೆಳೆದ ಕೆಂಪಕ್ಕಿ ಬೇಯಿಸಿದ್ದು; ಮನೆ ಹಿಂದಿದ್ದ ಮಾವಿನಮರದಿಂದ ಹಣ್ಣು ತಂದು ಬೇಯಿಸಿ, ಹಿಚುಕಿ ತೆಗೆದ ರಸಕ್ಕೆ ಉಪ್ಪುಕಾರ ಹಾಕಿ ಒಗ್ಗರಣೆ ಕೊಟ್ಟಿದ್ದು; ಸಣ್ಣಚಾಪೆಯಂತಹ ಕುಡಿಯೆಲೆಯ ಮೇಲೆ ಸುಡು ಅನ್ನದ ಸಹ್ಯಾದ್ರಿಶ್ರೇಣಿ ನಿರ್ಮಿಸಿ, ಮೇಲೆ ಮಾವಿನಹುಳಿಯ ಹೊಳೆಯನ್ನು ಹರಿಸಿದ್ದು. ನಾವು ಸುರಿದುಕೊಂಡು ತಿಂದೆವು. ನಮ್ಮೀ ಮೃಷ್ಟಾನ್ನ ಭೋಜನಕ್ಕೆ ಕಾರಣವಾದ ವೃಕ್ಷದರ್ಶನ ನಾನು ಮಾಡಬಯಸಿದೆ. ಉಂಡನಂತರ ನೋಡಿದ್ದೇ ಒಳ್ಳೆಯದಾಯಿತು. ಹಣ್ಣು ನೆಲಕ್ಕೆ ಹಾಸಿಗೆ ಹಾಸಿತ್ತು – ಇರುವೆ, ನೊಣ, ಹಕ್ಕಿ, ದನ, ಜನ, ಕಾಡುಹಂದಿ ಸಮಪಾಲಿನಲ್ಲಿ ಉಣ್ಣುವಂತೆ. ‘ಇಲ್ಲಿ ಯಾರೂ ಅಮುಖ್ಯರಲ್ಲ, ಯಾವುದೂ ಅಮುಖ್ಯವಲ್ಲ’ ಎಂಬ ದಾರ್ಶನಿಕ ಹೇಳಿಕೆಯನ್ನು ಕುವೆಂಪು ಮಾಡಿದ್ದು, ಸಮಸ್ತ ಜೀವರಾಶಿಗಳ ಈ ಸಹಪಂಕ್ತಿ ನೋಡಿಯೇ ಇರಬೇಕು.

ಮಲೆನಾಡಿಗರಲ್ಲಿ ‘ಅಪ್ಪೆಹುಳಿ’ ಎಂಬ ಪೇಯವುಂಟು. ನನ್ನ ಮರ್ಯಾದೆ ಕಳೆಯುವುದಕ್ಕೆ ಇದೊಂದು ಬಾಕಿಯಿತ್ತು. ಹೊನ್ನಾವರ ಸೀಮೆಯ ಕಾರ್ಯಕ್ರಮವದು. ಮಧ್ಯಾಹ್ನ ಊಟದ ಬಳಿಕ ಅಪ್ಪೆಹುಳಿ ಕೊಟ್ಟರು. ಜೀರಿಗೆ ಪರಿಮಳದ ಅಪ್ಪೆ ಬೇಯಿಸಿ ರಸ ತೆಗೆದು, ಉಪ್ಪು ಇಂಗು ಬೆಲ್ಲ ಕರಿಬೇವು ಒಣಮೆಣಸು ಹಾಕಿ, ಒಗ್ಗರಣೆ ಕೊಟ್ಟ ಘಮಘಮಿಸುವ ಹುಳಿಯನ್ನು,  ಶರಾವತಿಯ ಜಲದಂತೆ ಬಕೇಟುಗಳಲ್ಲಿ ತುಂಬಿಟ್ಟಿದ್ದರು. ನಾನು ಕಳ್ಳಬಟ್ಟಿ ಕುಡುಕನಂತೆ ಐದು ಲೋಟ ಹೀರಿದೆ. ಕೊನೇ ಲೋಟ ಖಾಲಿ ಮಾಡಿದ್ದಷ್ಟೇ ಗೊತ್ತು. ಎಷ್ಟೊ ಹೊತ್ತಿನ ಬಳಿಕ ಯಾರೊ ಭುಜ ಅಲುಗಿಸಿ ‘ಕಾರ್ಯಕ್ರಮ ಮುಗೀತು, ಏಳಿ’ ಎಂದರು. ಕನಸಿನ ಲೋಕದಿಂದ ಹೊರಬಂದೆ. ಸಂಘಟಕರು ಅಡುಗೆಭಟ್ಟರ ಮೇಲೇರಿ ಹೋಗಿ ‘ಇನ್ನೊಮ್ಮೆ ಅಪ್ಪೆಹುಳಿ ಮಾಡು. ಕೈಕಾಲು ಮುರೀತೇನೆ, ಭಡವಾ’ ಎಂದು ಕೂಗಾಡಿದರಂತೆ. ‘ಒಳ್ಳೆಯ ಭಾಷಣ ಕಳೆದುಕೊಂಡಿರಿ’ ಎಂದು ಗೆಳೆಯರು ಆಕ್ಷೇಪಿಸಿದರು. ಭಾಷಣಕ್ಕೇನು ಬರ? ಅಪ್ಪೆಹುಳಿ ಎಲ್ಲಿ ಸಿಗಬೇಕು? ಸಮುದ್ರ ಮಥನದಲ್ಲಿ ಮೋಹಿನಿ ಅಪ್ಪೆಹುಳಿ ಬಡಿಸಿದ್ದರೆ, ದೇವತೆಗಳು ಅಮೃತ ಚೆಲ್ಲಿ ಚಪ್ಪರಿಸಿರುತ್ತಿದ್ದರು ಎಂದು ಪ್ರಮಾಣ ಮಾಡಿ ಹೇಳಬಲ್ಲೆ.

ಕಳಿಂಗ ಯುದ್ಧದ ಪ್ರಾಯಶ್ಚಿತ್ತವನ್ನು ಅಶೋಕ ಬೌದ್ಧ ಭಿಕ್ಷುಗಳಿಗಾಗಿ ಸಾಲುಮರ ನೆಡಿಸಿ ಮಾಡಿಕೊಂಡನಷ್ಟೆ. ಅವುಗಳಲ್ಲಿ ಮಾವಿನವೂ ಇದ್ದಿರಬೇಕು. ಯಾಕೆಂದರೆ, ಬುದ್ಧನ ಶಿಷ್ಯೆಯರಲ್ಲಿ ಒಬ್ಬಳು ಮಾವ್ತೋಟದ ಒಡತಿ – ಆಮ್ರಪಾಲಿ. ಯಾರೋ ಅಶೋಕನ ಮೊಮ್ಮಗ, ಶಿವಮೊಗ್ಗ–ಶಿಕಾರಿಪುರ ರಸ್ತೆಯುದ್ದಕ್ಕೂ ನಾಟಿಮರ ನೆಡಿಸಿದ್ದು, ಅವು ಶತಮಾನ ಪೂರೈಸಿವೆ. ಕೆಲವು ರೆಂಬೆಕೊಂಬೆ ಮೇಲೆಲ್ಲ ಸೀತಾಳೆದಂಡೆ–ಫರ್ನ್ ಬೆಳೆಸಿಕೊಂಡು ಕಥಕ್ಕಳಿ ಪಾತ್ರಗಳಾಗಿವೆ. ಬೆಂಗಳೂರು–ಹೊನ್ನಾವರ ರಸ್ತೆಯಂಚಿಗಿದ್ದ ನಮ್ಮ ಮನೆಯೆದುರೂ ಇಂಥದೇ ಸಾಲುಮರವಿತ್ತು. ತಬ್ಬಲು ನಾಲ್ಕಾಳು ಸಾಲದು. ನರಮನುಷ್ಯ ಹತ್ತಲಾಗದಷ್ಟು ಎತ್ತರಕ್ಕೆ ಕಾಂಡ ಕಳಿಸಿ, ನೆತ್ತಿಯ ಮೇಲಷ್ಟೆ ಕೊಂಬೆ ಹರಡಿತ್ತು. ನೀಲಾಗಸಕ್ಕೆ ಕೈಚಾಚಿದ ಅವು ಬೇರಿನಿಂದ ಜೀವರಸ ಸರಬರಾಜಾಗದೆ ಒಣಗುತ್ತಿದ್ದವು. ಜೀವವಿದ್ದ ಕೆಲವೇ ಕೊಂಬೆಗಳಲ್ಲಿ, ಸೆರಗಲ್ಲಿ ಕಟ್ಟಿ ತಂದ ತಿಂಡಿಯನ್ನು ಅಜ್ಜಿ ಮೊಮ್ಮಕ್ಕಳಿಗೆ ಹಂಚುವಂತೆ, ಫಲ ತಳೆಯುತ್ತಿತ್ತು. ಬೀಳುವ ಹಣ್ಣಿಗೆ ಕಾಯುವುದು ಬಿಟ್ಟು ಬೇರೆ ಹಾದಿಯಿರಲಿಲ್ಲ. ಪುಟ್ಟಗಾತ್ರದ ಅನಾಮಿಕ. ನಾಟಿಯಾದರೂ ನಾರಿಲ್ಲ. ಹಣ್‌ಗಾಲಕ್ಕೆ ನಾವು ಅದರಡಿ ಹಾಸಿಕೊಂಡು ಮಲಗುತ್ತಿದ್ದೆವು. ಫತ್ತೆಂದು ಸದ್ದಾದರೆ ಓಡಿಹೋಗಿ ತುಡುಕುತ್ತಿದ್ದೆವು. ಈ ಫಲಪಾತಕ್ಕಾಗಿಯೇ ಕಾದಿದ್ದ ಬಿಡಾಡಿ ದನಗಳ ಜತೆ ಸ್ಪರ್ಧಿಸುತ್ತಿದ್ದೆವು. ಒಂದು ದುರ್ದಿನ ರಸ್ತೆ ಅಗಲೀಕರಣದಲ್ಲಿ ವೃಕ್ಷಪಿತಾಮಹ ಕೊನೆಯುಸಿರು ಎಳೆಯಿತು. ಇಂತಹ ಯಾವೆಲ್ಲ ಮರಗಳು ಎಷ್ಟು ಕಾಲದಿಂದ ತಮ್ಮ ಚಹರೆ ಉಳಿಸಿಕೊಂಡು ಬಂದಿವೆಯೋ? ಕಸಿಹಣ್ಣು ಬಂದೊಡನೆ ‘ನಾಟಿ’ಯಾಗಿ ಬದಿಗೆ ಸರಿದವು. ಹೆಚ್ಚಿನವು ಕಣ್ಮರೆಯೂ ಆಗಿವೆ. ಕಸಿಯ ಶ್ರೇಷ್ಠತೆ ಉಳಿಸಿಕೊಳ್ಳಲು ನೂರಾರು ದೇಶಿತಳಿಗಳನ್ನು ಕೊಲ್ಲುತ್ತಿರುವ ಜನಾಂಗವಾದಿಗಳೇ ನಾವು?

ನಾ ಕಂಡಂತೆ ಧಾರವಾಡಿಗರು ಮನೆ ಕಾಂಪೌಂಡಲ್ಲಿ ಮಾವನ್ನು ಉಳಿಸಿಕೊಂಡಿದ್ದಾರೆ. ಕಾಂಡ–ಕೊಂಬೆ ಒಳಬಿಟ್ಟುಕೊಂಡು ಮನೆಕಟ್ಟಿರುವ ಒಬ್ಬ ಮಿತ್ರರಿಗೆ  ‘ಕಸಕಡ್ಡಿ ಬೀಳ್ತಾವ. ಮಂಗ್ಯಾನ ಕಾಟ. ಕಡಸಿಬಿಡ್ರೀ. ಕಟ್ಟಿಗೆಯಾದರೂ ಆಗ್ತಾವ’ ಎಂದು ಜನ ಸಲಹೆ ಕೊಟ್ಟಿರುವರು. ಅದಕ್ಕವರು ‘ಇದು ನಮ್ಮ ಅವ್ವಿದ್ದಂಗ. ನೆಳ್ ಕೊಟ್ಟದ. ಹಣ್ ಕೊಟ್ಟದ. ಹಕ್ಕಿಗಳನ್ನ ಕರದು ಕೂರಿಸಿಕೊಂಡದ. ನನ್ನ ಮಕ್ಕಳು ಹಾಡೊ ಸಂಗೀತ ಕೇಳಕೊಂಡ್ ಬೆಳೆದದ. ಜೀವ ಇರೋತನಕ ಕಡಗೊಡಸಲ್ಲ ಎಂದು ಹೇಳಿಕೊಂಡು ಬಂದಿದ್ದಾರೆ. ಆದರೂ ಬೆಳೆವ ಊರು ಗಿಡಕ್ಕೆ ಕೊಡಲಿಯಿಡುತ್ತಿದೆ. ಮಾವಿನ ತೋಟಗಳು ಬಡಾವಣೆಯಾಗಲಿ; ಬಾರಾದರೂ ಆಗಲಿ, ಗಿಡ ಉಳಿಸಿಕೊಳ್ಳಲಿ. ಕಾರಣ, ಒಂದು ಗಿಡ ಸಾಮಾನ್ಯ ಮನೆಗೆ ಅರಮನೆ ಕಳೆಕೊಡಬಲ್ಲದು. ಇರುವೆಯಿಂದ ಹಕ್ಕಿತನಕ ಜೀವರಾಶಿಗೆ ಬದುಕು ಒದಗಿಸಬಲ್ಲದು. ಬುದ್ಧನ ಮಂದಸ್ಮಿತದಂತೆ ವಿಶಿಷ್ಟ ನೆಮ್ಮದಿ ಕೊಡಬಲ್ಲದು.

ಯಾರೊ ಕಸಿತಜ್ಞ, ಒಂದೇ ಗಿಡದಲ್ಲಿ ಹತ್ತಾರು ಜಾತಿಯ ಕಾಯಿ ಬಿಡುವಂತೆ ಮಾಡಿರುವನಂತೆ. ಬಹುಶಃ ಯಾರೂ ವರುಷವಿಡೀ ಫಲ ಬಿಡುವ ಮಾವನ್ನು ಸೃಷ್ಟಿಸಿದಂತಿಲ್ಲ. ಸೃಷ್ಟಿಸುವುದೂ ಬೇಡ. ವರುಷಕ್ಕೊಮ್ಮೆ ಫಲಿಸುವಲ್ಲೇ ಅದರ ವಿಶಿಷ್ಟತೆಯಿದೆ. ಅದು ಕಾಯುವ  ಮಹತ್ವ ತಿಳಿಸುತ್ತದೆ. ಫಲ ಗಿಡದಲ್ಲಿರುವುದು ಮೂರು ತಿಂಗಳಾದರೆ, ಮನದೊಳಗೆ  ಬೆಳೆಯುವುದು ನವಮಾಸ. ಈಚು ಕಾಯಿ ದೊರೆಗಾಯಿ ಹಣ್ಣಿನ ರೂಪಾಂತರಗಳಲ್ಲಿ ನಾಲ್ಪರಿಯ ಕಂಪನ್ನು ಸೂಸುವುದು, ಯಾವುದೋ ದಿಟವನ್ನು ಸೂಚಿಸುವಂತೆ ತೋರುತ್ತದೆ. ಅದು ನಮ್ಮ ಬಾಳಲ್ಲಿ ಕೇವಲ ಸ್ವಾದಿಷ್ಟ ನೆನಪುಗಳ ರೂಪದಲ್ಲಿಲ್ಲ. ಸುಖದುಗುಡಗಳಿಗೆ ಸಾಕ್ಷಿಪ್ರಜ್ಞೆಯೂ ಆಗಿದೆ. ಇದಕ್ಕೆ ಉದಾಹರಣೆ ನನ್ನ ಸಹಪಾಠಿಯೇ. ಮಾವೆಂದರೆ ಜೀವ ಬಿಡುತ್ತಿದ್ದ ಆತ ಮಾಡಿದ ತಪ್ಪಿಗಾಗಿ ಅದನ್ನು ತಿನ್ನುವುದನ್ನೇ ನಿಷೇಧಿಸಿಕೊಂಡಿದ್ದಾನೆ. ಒಮ್ಮೆ ಅವನ ಮುದಿಅವ್ವ, ಬಜಾರಿನಿಂದ ತನಗೆ ಪ್ರಿಯವಾದ ಹಣ್ಣು ತರಲು ಐದಾರು ಸಲ ಹೇಳಿದಳಂತೆ. ಇವನು ಕೆಲಸದೊತ್ತಡದಲ್ಲಿ ಲಕ್ಷ್ಯ ವಹಿಸಲಿಲ್ಲ. ಆಕಸ್ಮಿಕವಾಗಿ ಆಕೆ  ತೀರಿಕೊಂಡಳು. ಅವ್ವ ಹಣ್ಣು ತಿನ್ನದೇ ಜೀವಬಿಟ್ಟಳು ಎಂಬ ವೇದನೆಯ ಹರಳು ಅವನ ಮನದ ಹಸಿಗೋಡೆಗೆ ನೆಟ್ಟಿಬಿಟ್ಟಿದೆ. ಹೋದವರ ಸಾವು ಇದ್ದವರ ಬಾಯಿ ಕಟ್ಟಿದೆ.

ಸಾವೆಂದಾಗ ಗೆಳೆಯರ ಪಾನಗೋಷ್ಠಿಯ ಪ್ರಸಂಗವೊಂದು ನೆನಪಾಗುತ್ತಿದೆ. ನಶಾವಸ್ಥೆಯ ಉತ್ತುಂಗದಲ್ಲಿ ಹೇಗೋ ಸಾವಿನ ವಿಷಯ ಮಾತುಕತೆಯಲ್ಲಿ ನುಸುಳಿತು. ಜೀವಗಳ್ಳತನದಿಂದಲೋ ಪೆಗ್ಗುಗಳ ಹೆಚ್ಚಳದಿಂದಲೋ ಮಿತ್ರನೊಬ್ಬ ‘ಈ ಚೆಲುವಾದ ಲೋಕ ಬಿಟ್ಟು ತೆರಳಬೇಕಲ್ಲ’ ಎಂದು ಅಳತೊಡಗಿದ. ನಾನು ‘ಚಿಂತೆ ಯಾಕೊ, ಸತ್ತರೆ ಸ್ವರ್ಗವಿದೆಯಂತಲ್ಲ’ ಎಂದೆ. ಮಾವೆಂದರೆ ಕಳ್ಳು ಹರಿದುಕೊಳ್ಳುತ್ತಿದ್ದ ಕವಿ ಗಾಲಿಬ್ ‘ಸ್ವರ್ಗವೆನ್ನುವುದು ಸಾವಿನ ಕರಾಳಸತ್ಯ ಮರೆಯಲೆಂದು ಮಾನವರು ಕಟ್ಟಿಕೊಂಡಿರುವ ಒಳ್ಳೆಯ ಕಲ್ಪನೆ’ ಎಂದು ಹೇಳಿದ್ದು ನನಗೆ ಚೆನ್ನಾಗಿ ನೆನಪಿತ್ತು. ಆದರೂ ಗೆಳೆಯನ ಸಮಾಧಾನಕ್ಕಾಗಿ ಹೀಗೆಂದೆ. ಸರಿ, ಚರ್ಚೆ ಸ್ವರ್ಗಸುಖಗಳತ್ತ ಹೊರಳಿತು. ಸ್ವರ್ಗದಲ್ಲಿ ನಮ್ಮಿಷ್ಟದ ವಸ್ತು ಏನೆಂದು ಕೇಳಿದರೆ ಏನು ಹೇಳುವುದೆಂಬ ಪ್ರಶ್ನೆ ಬಂತು. ಮದ್ಯಪ್ರಿಯರು ತಮ್ಮಿಚ್ಛೆಯ ಪಾನೀಯದ ಹೆಸರು ಹೇಳಿದರು. ಭೋಜನಪ್ರಿಯನೊಬ್ಬ ಭಕ್ಷ್ಯಗಳ ಪಟ್ಟಿಮಾಡಿದ. ಒಬ್ಬ ರಫಿಯ ಹಾಡುಗಳೆಂದ. ನನ್ನ ಸರದಿ ಬಂದಾಗ ಹೆಚ್ಚು ಆಲೋಚಿಸದೆ ಹೇಳಿದೆ: ಮಾವಿನಹಣ್ಣು.

ಬಹುಶಃ ಮಾವು ನನ್ನ ಪ್ರಜ್ಞೆಯ ಆಳವನ್ನು ಆವರಿಸಿಕೊಂಡಿರುವಂತಿದೆ. ಎಂತಲೇ ‘ನಾನೊಂದು ಮರವಾಗಿ ಹುಟ್ಟಿದರೆ’ ಎಂಬ ಕವನವನ್ನು ಕಂಡಾಗಲೆಲ್ಲ ‘ಮಾವಿನ ಮರವಾಗಿ ಹುಟ್ಟಿದ್ದರೆ’ ಎಂದು ತಿದ್ದಬೇಕೆನಿಸುತ್ತದೆ. ಬೇಂದ್ರೆಯವರ ‘ಜೋಗಿ’ ಕವನದ ನಾಯಕ ಕೋಗಿಲೆಯ ಸಂಗಕ್ಕಾಗಿ ‘ಕನಸಿನೊಳಗ ನಾ ಮಾಮರ ಆಗತೇನು’ ಎನ್ನುವುದುಂಟು. ಮಾಮರ ಕೋಗಿಲೆಗಳ ನಂಟು ಕವಿಕಲ್ಪನೆ. ನಮ್ಮ ಹಿತ್ತಲಿಗೆ ಬರುವ ಕೋಗಿಲೆ ಎಲೆದಟ್ಟಣೆಯುಳ್ಳ ಮಾವಿನ ಗಿಡದಲ್ಲಿ ಅಡಗಿ ಕುಳಿತರೂ, ತಿನ್ನುವುದೆಲ್ಲ ಸಂಪಿಗೆಹಣ್ಣು, ಅಂಜೂರ. ನಮ್ಮ ಲೇಖಕರಲ್ಲಿ ತನ್ನನ್ನು ಮಾವಿನ ಮರಕ್ಕೆ ಹೋಲಿಸಿಕೊಂಡವರು ಲಂಕೇಶರೇ ಇರಬೇಕು. ಅವರ ಆತ್ಮಕತೆಯ ಹೆಸರು ‘ಹುಳಿಮಾವಿನ ಮರ’. ಸ್ವರ್ಗದಲ್ಲಿ ನಂಬಿಕೆಯಿಲ್ಲದ ಲೇಖಕನೊಬ್ಬ ಇಹದಲ್ಲಿಯೇ ಮರದ ಜತೆ ಸಂಬಂಧ ಸ್ಥಾಪಿಸಿಕೊಂಡ ವಿಶಿಷ್ಟ ಪರಿಯಿದು. ಕೊನೆಗೂ ಅವರು ತಮ್ಮ ತೋಟದ ಮಾವಿನ ಮರದಡಿಯೇ ಮಣ್ಣಾದರು.

ಮಾವಿನಮರ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ. ಬುಡದಿಂದಲೇ ಕೊಂಬೆ ಕವಲೊಡೆಯುವ ಅದರಲ್ಲಿ ಮಕ್ಕಳು ಮರಕೋತಿ ಆಡುತ್ತವೆ; ಹುಡುಗಿಯರು ತೋಳಕೊಂಬೆಗೆ ಉಯ್ಯಾಲೆ ಕಟ್ಟಿ ಜೀಕುವರು; ಬಸುರಿಯರು ಹುಳಿಗಾಯಿ ತಿನ್ನಬಯಸುವರು; ಹಕ್ಕಿಗಳು ವಿಶ್ರಮಿಸುವವು; ಜನ ಚಿರನಿದ್ರೆಗೆ ಅದರ ನೆರಳನ್ನು ಆರಿಸಿಕೊಳ್ಳುವರು. ಅವರು ತಿಂದೆಸೆದ ಸಿಪ್ಪೆ–ಓಟೆ ಪ್ರಾಣಿಯ ಹೊಟ್ಟೆ ಸೇರುವವು. ಅದೃಷ್ಟವಿದ್ದರೆ ರಾಜಕುವರನಾಗಿ ಹುಟ್ಟುವವು. ಮಾವಿಗೆ ಮದುವೆಯಿಂದ ಮರಣದ ತನಕ ನರರ ಕಥನಗಳು ಬಳ್ಳಿಯಂತೆ ಹಬ್ಬಿಕೊಂಡಿವೆ.

ಕಿರಿಯ ಮಿತ್ರನೊಬ್ಬನ ಲಗ್ನ ಪ್ರಕರಣ ನೆನಪಾಗುತ್ತಿದೆ. ಅವನದು ಜಾತಿಗೆರೆ ಮೀರಿದ ಪ್ರೇಮವಾದ ಕಾರಣ, ಎರಡೂ ಕಡೆಯ ಬೀಗರು ನಿರೀಕ್ಷೆಯಂತೆ ಗೈರುಹಾಜರಾಗಿದ್ದರು. ಧಾರವಾಡದ ಹೋಟೆಲೊಂದರ ಹುಲ್ಲುಹಾಸಿನಲ್ಲಿದ್ದ ಮರದಡಿ, ಕೆಲವೇ ಮಿತ್ರರ ಸಮ್ಮುಖದಲ್ಲಿ ಹಾರ ಬದಲಿಕೆ ಆಯಿತು. ಪುರೋಹಿತನ ಪಾತ್ರವನ್ನೂ ವಹಿಸಿದ್ದ ನಾನು, ತೀಡುತ್ತಿದ್ದ ಸೊನೆಯ ಕಂಪಿಂದ ಎಚ್ಚೆತ್ತು ತಲೆಯೆತ್ತಿ ನೋಡಿದೆ. ಮೈತುಂಬ ಹೂಬಿಟ್ಟ ಮಾವಿನ ಮರ. ಈಗ ದಂಪತಿಗೆ ಮುದ್ದಾದ ಹೆಮ್ಮಗುವಿದೆ. ಆಮ್ರವತಿ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry