7

ಗ್ರಾಮಜೀವನದ ಸಂಕ್ರಮಣ ಚಿತ್ರಣ

Published:
Updated:
ಗ್ರಾಮಜೀವನದ ಸಂಕ್ರಮಣ ಚಿತ್ರಣ

ಸ್ವತಂತ್ರ ನಾಟಕಗಳಿರಲಿ ಅನುವಾದವಿರಲಿ ಡಿ.ಎಸ್‌. ಚೌಗಲೆಯವರು ತನ್ನ ಕಾಲದ ಸಾಮಾಜಿಕ ಬದುಕಿಗೆ ತೀವ್ರವಾಗಿ ಸ್ಪಂದಿಸುತ್ತಿರುವ ಲೇಖಕರಾದುದರಿಂದ, ‘ಉದ್ವಸ್ಥ’ ನಾಟಕದ ಮೂಲಕ ಅವರು ಕಟ್ಟಿ ಕೊಡುತ್ತಿರುವ ಸಾಮಾಜಿಕ ವಾಸ್ತವಕ್ಕೆ ಮಹತ್ವವಿದೆ. ಗಾಂಧೀಜಿ ಹಾಗೂ ಗಾಂಧಿಪ್ರಣೀತ ವಿಚಾರಗಳು ಈ ನಾಟಕಕಾರರನ್ನು ಬಹುವಾಗಿ ಕಾಡಿರುವಂತಿದೆ. ಗಾಂಧೀಜಿ, ಕಸ್ತೂರಬಾ, ಅಂಬೇಡಕರ ಕುರಿತು ಅವರು ನಾಟಕಗಳನ್ನು ರಚಿಸಿದ್ದಾರೆ. ಅಥವಾ ಅನುವಾದಿಸಿದ್ದಾರೆ.

ಈ ನಾಟಕಕ್ಕೂ ಕನಸಿದ ‘ಗ್ರಾಮ ಸ್ವರಾಜ್ಯ’, ಒಂದು ಹಳಹಳಿಕೆಯಂತೆ ಹಿನ್ನೆಲೆಯಲ್ಲಿ ಹಿಂಬಾಲಿಸಿರುವಂತಿದೆ. ನಾಟಕದ ಆರಂಭ ಹಾಗೂ ಮುಕ್ತಾಯದ ದೃಶ್ಯಗಳು ಗಾಂಧಿಪುತ್ಥಳಿಯ ಸನ್ನಿಧಿಯಲ್ಲೇ ನಡೆಯುತ್ತವೆ. ನಿವೇದಕನೆಂಬ ನಾಟಕದ ಸೂತ್ರಧಾರ, ಗಾಂಧೀಜಿಯೊಂದಿಗೆ ಸ್ವಗತ ಸಂಭಾಷಣೆ ನಡೆಸುತ್ತಾನೆ. ನಾಟಕದ ಅರೆಪಾಲಿಗೂ ಮಿಗಿಲಾದ ಘಟನೆಗಳು ನಡೆಯುವುದು ಸಾರ್ವಜನಿಕ ಸ್ಥಳಗಳಲ್ಲಿ; ಸರ್ಕಲ್‌, ಬಾರ್‌, ಎಮ್ಮೆಲ್ಲೆ ಆಫೀಸ್‌ ಮುಂತಾದ ಜಾಗಗಳಲ್ಲಿ. ಹೀಗೆ ಒಂದು ಕುಟುಂಬದ ಕತೆಯೊಂದಿಗೇ ಸಾರ್ವಜನಿಕ ಜೀವನದಲ್ಲಾದ ಪಲ್ಲಟವನ್ನೂ ಈ ನಾಟಕ ಕಟ್ಟಿಕೊಡುತ್ತಿರುವುದು ಅರ್ಥಪೂರ್ಣವಾಗಿದೆ. ಈ ಎರಡು ಎಳೆಗಳನ್ನು ಸರಿಯಾಗಿ ಜೋಡಿಸಿ ರಂಗಕೃತಿಯನ್ನು ನಿರ್ಮಿಸ ಬೇಕಾಗುತ್ತದೆ. ವಸ್ತು ನಿರೂಪಣೆಗೆ ಎರಡೂ ಬೇರೆ ಬೇರೆ ಅಲ್ಲ; ಎಂಬುದು ರಂಗಕೃತಿ ಕಟ್ಟುವವರಿಗೆ, ನಿರ್ದೇಶಕರಿಗೆ ಗೊತ್ತಿರಬೇಕಾಗುತ್ತದೆ. ಇಲ್ಲದಿದ್ದರೆ ವಸ್ತುಗ್ರಹಿಕೆ ಹಾಗೂ ನಿರೂಪಣೆ ಅಸ್ತವ್ಯಸ್ತವಾಗುವ ಸಂಭವವಿದೆ.

ನಾಟಕದೊಳಗಿನ ಘಟನಾವಳಿಗಳು ಉತ್ತರ ಕರ್ನಾಟಕದ ಬೆಳಗಾವಿ ಆಸುಪಾಸಿನಲ್ಲಿ ನಡೆದಿರುವಂತೆ ಕಲ್ಪಿಸಲಾಗಿದೆಯಾದರೂ ಸಂಭಾಷಣೆ ಯಲ್ಲಿ ಮತ್ತೆ ಮತ್ತೆ ಮಹಾರಾಷ್ಟ್ರದ ವಿದರ್ಭದ ಪ್ರಸ್ತಾಪವಿದೆ. ಎರಡೂ ರಾಜ್ಯಗಳಲ್ಲಿ ಕಳೆದ ಎರಡು ಮೂರು ದಶಕಗಳಿಂದ ರೈತರ ಬದುಕು ಅತಂತ್ರಗೊಂಡಿದೆ. ಸಾಮಾಜಿಕ ಹಾಗೂ ಆರ್ಥಿಕ ನೆಲೆಯಲ್ಲಿ ಬದಲಾಗುತ್ತಿರುವ ಈ ಗ್ರಾಮಜೀವನದ ಚಿತ್ರ, ಈ ನಾಟಕದ ಕೇಂದ್ರವಾಗಿದ್ದು ಇದಕ್ಕೆ ಹುಸಿ ಅಸ್ಮಿತೆಯ ಹಂಗಿಲ್ಲ. ಮಹಾರಾಷ್ಟ್ರ ಹಾಗೂ ಕರ್ನಾಟಕ, ಎರಡೂ ರಾಜ್ಯಗಳಲ್ಲಿ ಸ್ವಾರ್ಥಿ ರಾಜಕಾರಣಿಗಳು ಭಾಷಾ ಸಮುದಾಯಗಳ ನಡುವೆ ವಿರಸ ಹುಟ್ಟಿಸುವ ನಿರಂತರ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲೇ ಎರಡೂ ರಾಜ್ಯಗಳ ರೈತರ ಬವಣೆ, ದುಃಖ, ದುಮ್ಮಾನಗಳು ಸಮಾನವಾಗಿವೆ. ವಿದರ್ಭದ ರೈತನಿರಲಿ, ಉತ್ತರಕರ್ನಾಟಕದ ರೈತನಿರಲಿ, ಕಷ್ಟಸುಖಗಳೆರಡಕ್ಕೂ ಸಮಾನ ಬಾಧ್ಯಸ್ಥರು. ಸಮಾನ ಪರಂಪರೆ ನೆನಪುಗಳಿರುವ ಈ ಎರಡೂ ರಾಜ್ಯಗಳ ಜನರನ್ನು ಸಂಕಷ್ಟದ ಸಂದರ್ಭದಲ್ಲಿಯಾದರೂ ಒಟ್ಟಾಗಿ ನೋಡುವ ಒಂದು ಆಯಾಮವನ್ನು ಈ ನಾಟಕವು ಮಾರ್ಮಿಕವಾಗಿ ಧ್ವನಿಸುತ್ತಿರುವುದು ಗಮನಾರ್ಹ.

ಖಾಸಗಿ ಬದುಕಿನ ನೆಲೆಯಿಂದಲೂ ನಾಟಕವು ಕಾಣಿಸಲೆಳಸುವ ಚಿತ್ರ ಗಮನಾರ್ಹವಾಗಿದೆ. ಮನುಷ್ಯ ಸಂಬಂಧಗಳಲ್ಲಿದ್ದ ಭಾವನೆಗಳು ಮಾಯವಾಗಿ ಲೆಕ್ಕಾಚಾರದ ಹಣಕಾಸಿನ ವಿಚಾರ ಮುನ್ನೆಲೆಗೆ ಬಂದಿದೆ. ಈ ಲೆಕ್ಕಾಚಾರದ ಆಟೋಪದಲ್ಲಿ ಹೃದಯದ ಅನಿಸಿಕೆಗಳಿಗೆ ಆಸ್ಪದವೇ ಇಲ್ಲ. ತಂದೆ ತಾಯಿಗಳು ಹಾಗೂ ಮಕ್ಕಳ ನಡುವೆ ಕಂದಕವೇರ್ಪಟ್ಟಿರುವುದನ್ನು ಕೇವಲ ತಲೆಮಾರುಗಳ ಸಂಘರ್ಷವೆಂದು ಹೇಳು ವಂತಿಲ್ಲ. ಜಾಗತೀಕರಣದ ಪ್ರಭಾವದಿಂದ ರಾಷ್ಟ್ರಜೀವನದಲ್ಲಿ ಆದ ಮೂಲಭೂತ ಮಾರ್ಪಾಡು ಗಳು ಖಾಸಗಿ ಬದುಕನ್ನು ಆಪೋಶನ ತೆಗೆದುಕೊಂಡಿವೆ. ಎಲ್ಲ ಮನುಷ್ಯ ಸಂಬಂಧಗಳು ಜಡಗೊಂಡು ಹಣದ ಅಬ್ಬರದಲ್ಲಿ ಹಳೆಯ ತಲೆಮಾರಿನವರು ಹತಾಶರಾಗಿ ಕೈ ಚೆಲ್ಲುವ ನೋವು ತುಂಬಿದ ದುರಂತವನ್ನು ನಾಟಕ ಕಟ್ಟಿಕೊಡುತ್ತಿದೆ. ರಾಜಕೀಯ ನಾಯಕರಿರಲಿ ಚಳವಳಿಗಾರರಿರಲಿ ಈ ಹೊಸ ಆರ್ಥಿಕ ನೆಲೆಯ ಆಘಾತಕ್ಕೆ ಸಿಲುಕಿ ನೈತಿಕವಾಗಿ ದಿವಾಳಿಯ ಅಂಚಿಗೆ ತಲುಪಿದ್ದಾರೆ. ಇದೆಲ್ಲವೂ ನಾಟಕದಲ್ಲಿ ದುರಂತ ವ್ಯಂಗ್ಯವಾಗಿ ನಿರೂಪಣೆಗೊಂಡಿದೆ.

(‘ಉದ್ವಸ್ಥ’ ಕೃತಿಯ ಮುನ್ನುಡಿಯಿಂದ ಆಯ್ದ ಭಾಗ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry