7

ಹೊಸ ರಾಜಕೀಯ ಬಂಡವಾಳ?

ಶೇಖರ್‌ ಗುಪ್ತ
Published:
Updated:
ಹೊಸ ರಾಜಕೀಯ ಬಂಡವಾಳ?

ಕಳೆದ ಬುಧವಾರ ನಡೆದ ನನ್ನ ‘ಆಫ್‌ ದಿ ಕಫ್‌’ ಸಂದರ್ಶನ ಕಾರ್ಯಕ್ರಮದಲ್ಲಿ, ಪಂಜಾಬ್‌ನ ಹೊಸ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ವ್ಯಕ್ತಪಡಿಸಿದ ಅನೇಕ ಅಭಿಪ್ರಾಯಗಳು ಅವರು ಪ್ರತಿನಿಧಿಸುವ ಕಾಂಗ್ರೆಸ್‌ ಪಕ್ಷಕ್ಕೆ ಅಪಥ್ಯವಾಗಿ ಪರಿಣಮಿಸಲಿವೆ.

 

ಚುನಾವಣಾ ಮತಯಂತ್ರಗಳ ದುರ್ಬಳಕೆ ಬಗ್ಗೆ ತಮ್ಮ ಪಕ್ಷ ವ್ಯಕ್ತಪಡಿಸಿರುವ ಅನುಮಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದು ವೇಳೆ ಮತಯಂತ್ರಗಳನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡಿದ್ದರೆ ಪಂಜಾಬ್‌ನ ಮುಖ್ಯಮಂತ್ರಿ ಹುದ್ದೆಯಲ್ಲಿ ನನ್ನ ಬದಲಿಗೆ ಬಾದಲ್‌ ಕುಟುಂಬಕ್ಕೆ ಸೇರಿದ ಯಾರಾದರೊಬ್ಬರು ಬಂದು ಕುಳಿತುಕೊಳ್ಳುತ್ತಿದ್ದರು’ ಎಂದು ಅವರು ಹೇಳಿದರು.

 

ಮತಯಂತ್ರಗಳ ದುರುಪಯೋಗ ಪ್ರತಿಭಟಿಸಿ ಅವರ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿನ ಪ್ರತಿಪಕ್ಷದ ಮುಖಂಡರ ನಿಯೋಗವೊಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ದಿನವೇ ಅವರು ಈ ಮಾತು ಆಡಿದ್ದರು.

 

‘ಪ್ರಾದೇಶಿಕವಾಗಿ ಪ್ರಭಾವಶಾಲಿಯಾಗಿರುವ ರಾಜಕೀಯ ಮುಖಂಡರ ಮಹತ್ವವನ್ನು ರಾಷ್ಟ್ರೀಯ ಪಕ್ಷಗಳು ಒಪ್ಪಿಕೊಳ್ಳುವ ಅನಿವಾರ್ಯವನ್ನು ಪಂಜಾಬ್‌ ರಾಜ್ಯದಲ್ಲಿನ ನನ್ನ ಗೆಲುವು ಸಾಬೀತುಪಡಿಸಿದೆ. ತಮ್ಮನ್ನು ಮುನ್ನಡೆಸುವವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಮತದಾರರಿಗೆ ಇರಬೇಕು’ ಎಂದು ಅವರು ಹೇಳಿದ್ದರು.

 

‘ರಾಷ್ಟ್ರೀಯ ಮುಖಂಡರು ರಾಜ್ಯಗಳಿಗೆ ಬಂದು ಸ್ಥಳೀಯ ನಾಯಕರಿಗೆ ವೋಟ್‌ಗಳು ಬೀಳುವಂತೆ ಮಾಡಿ ಅವರನ್ನು ಗೆಲ್ಲಿಸಿ ಕೊಡುವ ದಿನಗಳು ಈಗ ಕೊನೆಗೊಂಡಿವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ನನಗೆ  ಮುಕ್ತ ಹಸ್ತ ನೀಡಿದ್ದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಉತ್ತಮ ಸಾಧನೆ ತೋರುವುದಕ್ಕೆ ಇನ್ನೊಂದು ಕಾರಣವಾಗಿದೆ’ ಎಂದೂ ಅವರು ಹೇಳಿದ್ದರು.

 

‘ಹಿಂದಿನ ಚುನಾವಣೆಯಲ್ಲಿ 117 ಅಭ್ಯರ್ಥಿಗಳ ಪೈಕಿ ಕೇವಲ 46 ಅಭ್ಯರ್ಥಿಗಳನ್ನು ಸೂಚಿಸಲು ಪಕ್ಷವು ನನಗೆ ಅನುಮತಿ ನೀಡಿತ್ತು. ಪಕ್ಷದ ಸೋಲಿಗೆ ಇದೂ ಒಂದು ಕಾರಣವಾಗಿತ್ತು’ ಎಂದು ಹೇಳಿದ್ದರು.ಅಮರಿಂದರ್‌ ಸಿಂಗ್ ಅವರ  ಈ ಎಲ್ಲ ಹೇಳಿಕೆಗಳು ಅವರ ಪಕ್ಷಕ್ಕೆ ಮತ್ತು ಎಂದೂ ಚುನಾವಣೆ ಎದುರಿಸದ ಕಾಂಗ್ರೆಸ್‌ನ ದರ್ಬಾರಿಗಳ ಪಾಲಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇವರೆಲ್ಲ ಖಾಸಗಿಯಾಗಿ ಅಮರಿಂದರ್‌ ಅವರ ಅನಿಸಿಕೆಗಳನ್ನು ಪಿಸುಮಾತಿನಲ್ಲಿ ಬೆಂಬಲಿಸಿ ಮಾತನಾಡುವುದು ಇನ್ನೊಂದು ಸೋಜಿಗದ ಸಂಗತಿಯಾಗಿದೆ.ಅಮರಿಂದರ್‌ ಅವರ ಈ ಎಲ್ಲ ಹೇಳಿಕೆಗಳಿಗೆ ಕಾಂಗ್ರೆಸ್‌ ಪಕ್ಷವು ಹೇಗೆ ಪ್ರತಿಕ್ರಿಯಿಸಲಿದೆ ಎಂದು ನಾನು ಖಚಿತವಾಗಿ ಏನನ್ನೂ ಹೇಳಲಾರೆ. ಸಿಖ್‌ ತೀವ್ರವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕೆನಡಾದಲ್ಲಿನ ಸಿಖ್‌ರ, ಅದರಲ್ಲೂ ವಿಶೇಷವಾಗಿ ಪ್ರಧಾನಿ ಜಸ್ಟಿನ್‌ ಟ್ರುಡೆವ್‌ ಅವರ ಉದಾರವಾದಿ ಸರ್ಕಾರದ ಬಗ್ಗೆ ಅವರು ಆಡಿರುವ ಮಾತುಗಳು ಅವರ ಹೇಳಿಕೆಗಳ ಪೈಕಿ ಹೆಚ್ಚು ಗಮನ ಸೆಳೆದಿವೆ.

 

ಆಫ್ಘಾನಿಸ್ತಾನ್‌ ಯುದ್ಧದಲ್ಲಿ ಭಾಗವಹಿಸಿ ಮನ್ನಣೆ ಗಳಿಸಿರುವ ಮಾಜಿ ಕರ್ನಲ್‌ ಮತ್ತು ಸದ್ಯಕ್ಕೆ ಕೆನಡಾದ ರಕ್ಷಣಾ ಸಚಿವರಾಗಿರುವ ಹರ್ಜಿತ್‌ ಸಿಂಗ್‌ ಸಜ್ಜನ್‌ ಅವರನ್ನು ಈ ಹಿಂದೆ ನಾನು ಯಾವತ್ತೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.‘ಕೆನಡಾ ಸರ್ಕಾರದಲ್ಲಿ ಇರುವ ಎಲ್ಲ ನಾಲ್ಕು ಮಂದಿ ಸಿಖ್‌ರು ಖಲಿಸ್ತಾನ್‌ ಪರ ಸಹಾನುಭೂತಿ ಹೊಂದಿದವರಾಗಿದ್ದಾರೆ. ಇವರು ನನ್ನ ಕೆನಡಾ ಭೇಟಿ ವಿರೋಧಿಸುತ್ತಿದ್ದಾರೆ. ನಾನು ಕೆನಡಾಕ್ಕೆ ಭೇಟಿ ನೀಡಿ ಅಲ್ಲಿನ ಪಂಜಾಬಿಗಳ ಜತೆ ಮಾತನಾಡಬೇಕು ಎಂದು ಬಯಸಿರುವೆ. ಅಲ್ಲಿನ ಸರ್ಕಾರದಲ್ಲಿ ಖಲಿಸ್ತಾನ್‌ ಪರ ಇರುವವರ ಕಾರಣಕ್ಕೆ ನನ್ನ ಕೆನಡಾ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತಿದೆ.ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರುಡೆವ್‌ ಅವರ ಉದಾರವಾದವನ್ನು ವಿಶ್ವದಾದ್ಯಂತ ಮೆಚ್ಚಿಕೊಂಡ ಅನೇಕರಲ್ಲಿ ನಾನು ಕೂಡ ಒಬ್ಬನಾಗಿರುವೆ. ಆದರೆ, ಅವರು ನನ್ನ ಕೆನಡಾ ಪ್ರವೇಶಕ್ಕೆ ಅವಕಾಶ ಮಾಡಿಕೊಡದೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದಾರೆ’ ಎಂದೂ ಅಮರಿಂದರ್‌ ದೂರುತ್ತಾರೆ.

ಈ ಹೇಳಿಕೆಗೆ ಕೆನಡಾ ಸರ್ಕಾರ ತುರ್ತಾಗಿ ಪ್ರತಿಕ್ರಿಯಿಸಿದೆ.ತನ್ನ ಸಚಿವರನ್ನು ಸಮರ್ಥಿಸಿಕೊಂಡಿರುವುದರ ಜತೆಗೆ, ಅಮರಿಂದರ್‌ ಅವರ ಕೆನಡಾ ಭೇಟಿಯನ್ನೂ ಸ್ವಾಗತಿಸಿದೆ. ಇದು ವಿವಾದದ ಒಂದು ಮುಖವಷ್ಟೆ. ನಮ್ಮ ಮಾಧ್ಯಮಗಳು ಇದನ್ನು ನಮ್ಮ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಲಿಲ್ಲ. ಏಕೆಂದರೆ ಅಮರಿಂದರ್‌   ಬಿಜೆಪಿಗೆ ಸೇರಿದವರಲ್ಲ. ಪಂಜಾಬ್‌ ಈಗ ಮಾಧ್ಯಮಗಳ ಆದ್ಯತೆ ಮತ್ತು ಮನಸ್ಸಿನಿಂದ ದೂರವಾಗಿರುವುದೂ ಇನ್ನೊಂದು ಕಾರಣವಾಗಿದೆ.ಅಮರಿಂದರ್‌ ಅವರ ಧೈರ್ಯ ಮತ್ತು ಪ್ರಾಮಾಣಿಕ ಅನಿಸಿಕೆಯನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲಾದರೂ ಬಿಜೆಪಿ ಸ್ವಾಗತಿಸಬೇಕಾಗಿತ್ತು ಮತ್ತು ಸಾಗರೋತ್ತರ ಸಿಖ್‌ ತೀವ್ರಗಾಮಿ ಗುಂಪುಗಳ ಧೋರಣೆಯನ್ನು ಅವರು ಟೀಕಿಸಿರುವುದನ್ನು ಮುಂದುವರೆಸಿಕೊಂಡು ಹೋಗಬೇಕಾಗಿತ್ತು. ಆದರೆ, ಅಂತಹ ಪ್ರಯತ್ನವೇನೂ ಕಂಡು ಬಂದಿಲ್ಲ.ಸಿಖ್‌ ತೀವ್ರಗಾಮಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ವಿದೇಶಗಳಲ್ಲಿ ನೆಲೆಸಿರುವ ಶ್ರೀಮಂತ ಸಿಖ್‌ರು, ಅದರಲ್ಲೂ ವಿಶೇಷವಾಗಿ ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ನೆಲೆಸಿರುವವರು ಪಂಜಾಬ್‌ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದು, ತಮ್ಮ ಪ್ರತಿಸ್ಪರ್ಧಿ ಪಕ್ಷ ಆಮ್‌ ಆದ್ಮಿಯನ್ನು ಬೆಂಬಲಿಸಿದ್ದರಿಂದ ಅಮರಿಂದರ್‌ ಬಹುಶಃ  ಪ್ರಚೋದಿತರಾಗಿರಬಹುದು.

 

1984ರ ಗಾಯಗಳನ್ನು ಅಮೃತಸರ ಮತ್ತು ದೆಹಲಿಯಲ್ಲಿ ಮತ್ತೆ ಕೆದಕುವ ಉದ್ದೇಶ ವಿದೇಶಿ ಸಿಖ್‌ರದಾಗಿತ್ತು. ಅವರು ಬೆಂಬಲಿಸುವವರು ಚುನಾವಣೆಯಲ್ಲಿ ಗೆದ್ದು ಬಂದಿದ್ದರೆ ಹಳೆಯ ಭಯಾನಕ ಚಲನಚಿತ್ರವೊಂದು ಮತ್ತೆ ಪ್ರದರ್ಶನಗೊಳ್ಳುವ ಸಾಧ್ಯತೆ ಇತ್ತು. ಭಾರತದ ಯಾವುದೇ ದೇಶಭಕ್ತ ವ್ಯಕ್ತಿ ಪ್ರಸ್ತಾಪಿಸುವಂತಹ ವಿಷಯಗಳನ್ನೇ ಅಮರಿಂದರ್‌ ಪ್ರಸ್ತಾಪಿಸಿದ್ದಾರೆ.  ರಾಷ್ಟ್ರೀಯ ಪಕ್ಷವೊಂದರ ಪ್ರಭಾವಿ ವ್ಯಕ್ತಿ ಮಾಡುವ ಕೆಲಸವನ್ನೇ ಅವರು ಮಾಡಿದ್ದಾರೆ.ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ತೂಕಡಿಸುತ್ತಿರುವ ಅವರ ಸ್ವಂತ ಪಕ್ಷವನ್ನು  ಬಡಿದೆಬ್ಬಿಸಬೇಕಾಗಿದೆ. ಈ ಹಿಂದೆಯೂ ಪಕ್ಷ ನಿರ್ವಹಿಸಿದ ಪಾತ್ರದ ಬಗ್ಗೆ  ಇದುವರೆಗೂ ಪೋಷಿಸಿಕೊಂಡು ಬಂದಿರುವ ಆತ್ಮಸಾಕ್ಷಿಯನ್ನೂ ಎಚ್ಚರಿಸುವ ಕೆಲಸ ಆಗಬೇಕಾಗಿದೆ.ಜಾಗತಿಕ ಮುಖಂಡರ ಮನಗೆಲ್ಲಲು ಪ್ರಯತ್ನಿಸುತ್ತಿರುವ ಮತ್ತು ಈ ಮೂಲಕ ಭಾರತ ಮತ್ತು ತಮ್ಮ ಬಗ್ಗೆ ಹೊಸ ವರ್ಚಸ್ಸು ಬೆಳೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸುತ್ತದೆ. ಈ ಖಲಿಸ್ತಾನ್‌ ಪರ ಸಹಾನುಭೂತಿ ಹೊಂದಿರುವವರ ವಿರುದ್ಧ ಅವರೇಕೆ ಚುನಾವಣಾ ಪ್ರಚಾರ ಸಭೆಗಳಲ್ಲಿ ವಾಗ್ದಾಳಿ ನಡೆಸಲಿಲ್ಲ?

 

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡುವ ರೀತಿಯಲ್ಲಿ ವರ್ತಿಸಿದ ಇಂತಹ ಬಾಹ್ಯಶಕ್ತಿಗಳ ಬಗ್ಗೆ ಅವರೇಕೆ ಸುಮ್ಮನಿದ್ದಾರೆ? ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ಸಾಂಕೇತಿಕವಾಗಿಯೂ ಪ್ರತಿಭಟನೆಯನ್ನೇಕೆ ದಾಖಲಿಸಿಲ್ಲ.

 

ಸಿಖ್‌ ಸಚಿವರ ಪೂರ್ವಾಪರದ ಬಗ್ಗೆ ಕೆನಡಾ ಸರ್ಕಾರಕ್ಕೆ ಏಕೆ ನೆನಪಿಸಿಲ್ಲ? ಈ ಸಚಿವರು ಖಲಿಸ್ತಾನ್‌ ದೇಶ ನಿರ್ಮಾಣದ ಭ್ರಮೆಯಿಂದ ಹೊರ ಬಂದಿರುವ ಬಗ್ಗೆ ಸ್ಪಷ್ಟ ಭರವಸೆಯನ್ನೇಕೆ ಪಡೆದುಕೊಂಡಿಲ್ಲ?– ಇಂತಹ ಪ್ರಶ್ನೆಗಳಿಗೆ ಇದುವರೆಗೂ ಸಮಾಧಾನಕರ ಉತ್ತರ ಸಿಕ್ಕಿಲ್ಲ.ಭಾರತದ ದೃಷ್ಟಿಯಿಂದ ನೋಡುವುದಾದರೆ, ಈ ಸಚಿವರಲ್ಲಿ ಕನಿಷ್ಠ ಮೂವರ ಪೂರ್ವಾಪರವು ಅನುಮಾನಾಸ್ಪದವಾಗಿದೆ. ಸಜ್ಜನ್‌ ಅವರ ತಂದೆ, ಖಲಿಸ್ತಾನ್‌ ಪರ ಹೋರಾಡುವ ಸಂಸ್ಥೆಯಾಗಿರುವ ವಿಶ್ವ ಸಿಖ್ ಸಂಘಟನೆಯ (ಡಬ್ಲ್ಯುಎಸ್‌ಒ) ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಸಜ್ಜನ್‌ ಅವರು ಆಫ್ಘಾನಿಸ್ತಾನ ಸಮರದ ವೀರ ಯೋಧರಲ್ಲಿ ಒಬ್ಬರಾಗಿದ್ದರು.ಇವರು ವ್ಯಾಂಕೋವರ್‌ನಲ್ಲಿ ಬೇಹುಗಾರಿಕೆ ಸಲಹಾ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಇದು ಮೈತ್ರಿಕೂಟದ ಸೇನಾಪಡೆಗಳಿಗೆ ಸಲಹೆ ನೀಡುತ್ತಿತ್ತು. ಇನ್ನೊಬ್ಬ ಸಚಿವ ನವದೀಪ್‌ ಸಿಂಗ್‌ ಬೈನ್ಸ್‌, ನಿಷೇಧಿತ ಬಬ್ಬರ್‌ ಖಾಲ್ಸಾದ ವಕ್ತಾರರಾಗಿದ್ದ ದರ್ಶನ್‌ ಸಿಂಗ್‌ ಸೈನಿ ಅವರ ಅಳಿಯನಾಗಿದ್ದಾರೆ. ಸೈನಿ ಅವರ ಹಿಂದಿನ ಒಲವುಗಳನ್ನು ಮರೆಮಾಚಲು ಸಾಧ್ಯವೇ ಇಲ್ಲ. ಅಮರಜಿತ್‌ ಸಿಂಗ್‌ ಸೋಹಿ ಅವರನ್ನು ಭಯೋತ್ಪಾದನೆ ಆಪಾದನೆ ಮೇರೆಗೆ ಭಾರತದಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ಆದರೆ, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದರಿಂದ ಕೋರ್ಟ್‌ ಅವರನ್ನು ಖುಲಾಸೆ ಮಾಡಿತ್ತು.ಭಾರತ ಸರ್ಕಾರದ ವಿರುದ್ಧ ಯಾವುದೇ ಅಪಪ್ರಚಾರ ನಡೆಸದಂತೆ ನೋಡಿಕೊಳ್ಳುವುದಾಗಿ ಕೆನಡಾ ಸರ್ಕಾರವು ಖಾಸಗಿಯಾಗಿ ಭಾರತಕ್ಕೆ ಭರವಸೆ ನೀಡಿದೆ. ಆದರೆ, ಭಾರತ ವಿರುದ್ಧದ ಖಲಿಸ್ತಾನ್‌ ಪರ ಶಕ್ತಿಗಳ ಹಳೆಯ ಕಾರ್ಯತಂತ್ರಗಳನ್ನು ಕೈಬಿಡಲಾಗಿರುವ ಬಗ್ಗೆ  ನಿಸ್ಸಂದಿಗ್ಧ  ಹೇಳಿಕೆಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ, ಇದುವರೆಗೂ ಈ ಶಕ್ತಿಗಳ ವಿರುದ್ಧ ದನಿ ಎತ್ತಿಲ್ಲ. ಕೆನಡಾದ ತೀವ್ರಗಾಮಿ ಶಕ್ತಿಗಳು ಭಾರತದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧದ ಚುನಾವಣೆಯಲ್ಲಿ ಪ್ರಚಾರ ಮಾಡುವ ಮತ್ತು ಧನಸಹಾಯ ನೀಡುವುದರ ವಿರುದ್ಧ ಈ ಎರಡೂ ಪಕ್ಷಗಳು ಅಪಾಯದ ಕರೆಗಂಟೆಯನ್ನೇ ಬಾರಿಸದಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ.ಅಮರಿಂದರ್‌ ಅವರ ಮಾತುಗಳಲ್ಲಿ ಮೊಂಡು ವಾದ  ಮತ್ತು ರಾಜತಾಂತ್ರಿಕ ಸೂಕ್ಷ್ಮತೆ   ಇರದಿರಬಹುದು. ಆದರೆ, ಅವರೊಬ್ಬ ಪಕ್ಕಾ ರಾಜಕಾರಣಿ. ಸಂದರ್ಶನದ ಕೊನೆಯಲ್ಲಿ ನಾನು ಅವರ ನಿಲುವಿನಲ್ಲಿನ ಸ್ಪಷ್ಟತೆ, ಅದರಲ್ಲೂ ವಿಶೇಷವಾಗಿ ಕೆನಡಾ ಕುರಿತು ತಳೆದಿರುವ ಧೋರಣೆಗಾಗಿ ಅಭಿನಂದಿಸಿದೆ.

 

ಅದಕ್ಕೆ ಧನ್ಯವಾದ ಹೇಳಿದ ಅವರು, ‘ಈ ಸಜ್ಜನ್‌ ಅವರ ಜತೆ ಬಿಜೆಪಿ ಹೇಗೆ ವ್ಯವಹರಿಸಲಿದೆ? ನಾನು ಅವರೊಬ್ಬ ಖಲಿಸ್ತಾನಿ ಎಂದು ಕರೆದಿರುವೆ. ಆದಾಗ್ಯೂ ಮೇಲ್ನೋಟಕ್ಕೆ ಅವರು ಹೀಗೆ ಕಾಣುತ್ತಿದ್ದರೂ, ಕೆನಡಾದ ಸಿಖ್‌ ಸಚಿವರೊಬ್ಬರಿಗೆ ಅದ್ಹೇಗೆ ಕೆಂಪು ರತ್ನಗಂಬಳಿಯ ಸ್ವಾಗತ ಕೋರುತ್ತಾರೆ’ ಎಂದು ನನ್ನನ್ನೇ ಪ್ರಶ್ನಿಸಿದರು.ಒಂದು ಹಂತದಲ್ಲಿ ಇದೊಂದು ರಾಜಕೀಯಕ್ಕೆ ಸಂಬಂಧಿಸಿದ ಸರಳ ವಿಷಯವಾಗಿದೆ ಎಂದಿಟ್ಟುಕೊಂಡರೂ, ಅದನ್ನು ಆಳವಾಗಿ ವಿಶ್ಲೇಷಿಸಿದರೆ ಅದೊಂದು ರಾಜಕೀಯ ವಿವಾದವಾಗಿದೆ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ.ಪಾಕಿಸ್ತಾನ, ಭಯೋತ್ಪಾದನೆ ಮತ್ತು ಚೀನಾದ ಬಗ್ಗೆ ಯುಪಿಎ ಸರ್ಕಾರವು ಯಾವತ್ತೂ ಮೃದು ಧೋರಣೆ ತಳೆದಿರಲಿಲ್ಲ. ದಲೈಲಾಮಾ ಅವರು 2009ರಲ್ಲಿ ತವಾಂಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೀನಾ ಬೆದರಿಕೆ ಒಡ್ಡಿದ್ದರೂ ಸರ್ಕಾರ ತನ್ನ ನಿಲುವು ಸಡಿಲಿಸಿರಲಿಲ್ಲ.

 

ಆದರೆ, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷವು, ತೀವ್ರ ಸ್ವರೂಪದ ರಾಷ್ಟ್ರೀಯ ಆಸಕ್ತಿಯ ವಿಷಯಗಳ ಬಗ್ಗೆ ಮೃದು ಧೋರಣೆ ತಳೆದಿದೆ.  ಬಿಜೆಪಿಯು ತನ್ನ ರಾಷ್ಟ್ರೀಯತೆಯ ವಿಚಾರಧಾರೆ ಪ್ರಚುರಪಡಿಸಲು ಮುಕ್ತ ಅವಕಾಶ ಒದಗಿಸಿ ಕೊಟ್ಟಿದೆ. ಇದೇ ಕಾರಣಕ್ಕೆ ಮೋದಿ ಅವರು, ಬಿಜೆಪಿಯ ಅಂತರ್ಗತವಾದ ಹಿಂದುತ್ವದ ಕುರಿತು ಜನರಲ್ಲಿ ವಿಶಿಷ್ಟ ಬಗೆಯಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.ಬಾತ್ಲಾ ಹೌಸ್‌ ಎನ್‌ಕೌಂಟರ್‌ ಕುರಿತು ಅನುಮಾನ ವ್ಯಕ್ತಪಡಿಸುವ ಮೂಲಕ ದಿಗ್ವಿಜಯ್‌ ಸಿಂಗ್‌ ಅವರು ತಮ್ಮದೇ ಪಕ್ಷದ ವರ್ಚಸ್ಸಿಗೆ ಮಸಿ ಬಳಿದಿರುವುದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು. ತಮ್ಮದೇ ಸರ್ಕಾರ ಕೊಡಮಾಡಿದ್ದ ಶಾಂತಿ ಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರ ಪುರಸ್ಕೃತ ಪೊಲೀಸ್‌ ಅಧಿಕಾರಿಯು ಈ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು.

 

ಮಾವೊವಾದಿಗಳಿಗೆ ನೆರವಾದ ಕಾರಣಕ್ಕೆ  ದೇಶದ್ರೋಹದ ಆರೋಪದ ಮೇರೆಗೆ ಶಿಕ್ಷೆಗೆ ಗುರಿಯಾಗಿದ್ದ ಬಿನಾಯಕ್‌ ಸೇನ್‌ ಅವರು ಶಿಕ್ಷೆಯಿಂದ ಪಾರಾಗಲು ಕಾಂಗ್ರೆಸ್‌ ಪಕ್ಷವು ನೆರವಾಗಿತ್ತು. ಅವರನ್ನು ಯೋಜನಾ ಆಯೋಗದ ಮಹತ್ವದ ಸಮಿತಿಯ ಸದಸ್ಯರನ್ನಾಗಿಯೂ ನೇಮಿಸಿತ್ತು.

 

ಇಂತಹ ನಡೆಯ ಮೂಲಕ ಕಾಂಗ್ರೆಸ್‌, ಇಂದಿರಾ ಗಾಂಧಿ ಕಾಲದ, ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜಿಗೆ ಅವಕಾಶವೇ ಇರದ ಹಳೆಯ ಕಠಿಣ ನಿಲುವನ್ನು ಕೈಬಿಟ್ಟಿರುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಹೊರಟಿತ್ತು. ಇಂತಹ ನಿರ್ಧಾರಗಳ ಮೂಲಕ ಪಕ್ಷವು, ಸ್ವಯಂ ಸೇವಾ ಸಂಸ್ಥೆಯ (ಎನ್‌ಜಿಒ) ಚಿಂತನೆಯ ಧಾಟಿಯಲ್ಲಿ ಆಲೋಚನೆ ಮಾಡಲು ಆರಂಭಿಸಿತ್ತು.ಅದೇ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಅಮರಿಂದರ್‌ ಸಿಂಗ್‌ ಅವರು, ಈಗ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಭಾವನಾತ್ಮಕ ವಿಷಯಗಳನ್ನು ಕೆದಕಿ ಮೋದಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಹೊರಟಿದ್ದಾರೆ. ಕೆನಡಾದ ರಕ್ಷಣಾ ಸಚಿವರನ್ನು ಸರ್ಕಾರ ಹೇಗೆ ಸ್ವಾಗತಿಸಲಿದೆ?, ಭಾರತದ ಸಮಗ್ರತೆ ಮತ್ತು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವ ಕುರಿತು ಕೆನಡಾ ಸರ್ಕಾರದಿಂದ ಎನ್‌ಡಿಎ ಸರ್ಕಾರ ಸ್ಪಷ್ಟ ಬದ್ಧತೆ ಬಯಸುವುದೇ ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ.ಮಾಮೂಲಿನಂತೆ ಕಾಂಗ್ರೆಸ್‌ ಪಕ್ಷವು ಈಗಲೂ ನಿದ್ದೆಯಲ್ಲಿದೆ. ಅಮರಿಂದರ್‌ ಅವರು ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ ಎಂದೇ ಕಾಂಗ್ರೆಸ್‌ನ ಪ್ರಭೃತಿಗಳು ನಿರ್ಧಾರಕ್ಕೆ ಬಂದಿರಬಹುದು. ತೀಕ್ಷ್ಣಮತಿಯಾಗಿರುವ ಮೋದಿ ಅವರು ಈ ವಿಷಯವನ್ನು ತಾವೇ ಮೊದಲು ಪ್ರಸ್ತಾಪಿಸಿ, ಈ ಬಗ್ಗೆ ಕೆನಡಾ ಸರ್ಕಾರದಿಂದ ಭರವಸೆ ಅಥವಾ ವಿವರಣೆ ಪಡೆಯಲು ಮುಂದಾಗಬಹುದು. ಅಮರಿಂದರ್‌ ಪ್ರಸ್ತಾಪಿಸಿರುವ ವಿಷಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲೂ ಮೋದಿ ಅವರು ಹವಣಿಸಬಹುದು.ರಾಷ್ಟ್ರೀಯತೆಗೂ ಹಿಂದುತ್ವಕ್ಕೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಅರ್ಥೈಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಯಾವುದೇ ರಾಜಕೀಯ ಪಕ್ಷ, ಅದರಲ್ಲೂ ರಾಷ್ಟ್ರೀಯ ಪಕ್ಷವೊಂದು ಇಂತಹ ವಿವಾದವನ್ನು ಕೈಬಿಡುವಷ್ಟು ಸಮರ್ಥವಾಗಿರಲಿದೆಯೇ? ಇದು ರಾಜಕೀಯ ಪಕ್ಷಗಳ ಚುನಾವಣಾ ಭವಿಷ್ಯದಲ್ಲಿ ಪ್ರತಿಫಲನಗೊಳ್ಳಲಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.

ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

****

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌,  ಈಗ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಭಾವನಾತ್ಮಕ ವಿಷಯಗಳನ್ನು ಕೆದಕಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಹೊರಟಿದ್ದಾರೆ. ಖಲಿಸ್ತಾನ ಪರ ಸಹಾನುಭೂತಿ ಹೊಂದಿದ ಕೆನಡಾ ಸರ್ಕಾರದಲ್ಲಿ ಸಚಿವರಾಗಿರುವ ನಾಲ್ವರು ಸಿಖ್‌ರ ಬಗ್ಗೆ ಎನ್‌ಡಿಎ ಸರ್ಕಾರ ಯಾವ ನಿಲುವು ತಳೆಯಲಿದೆ ಎನ್ನುವುದು ಅವರ ಪ್ರಶ್ನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry