7

2018ರ ಚುನಾವಣೆ ಕಾಂಗ್ರೆಸ್ಸಿಗೇ ಹೆಚ್ಚು ಮುಖ್ಯ...

Published:
Updated:
2018ರ ಚುನಾವಣೆ ಕಾಂಗ್ರೆಸ್ಸಿಗೇ ಹೆಚ್ಚು ಮುಖ್ಯ...

ಗೆಲುವೇ ಹಾಗೆ. ಅದು ಅಪ್ರತಿಮವಾದುದು. ಗೆಲುವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಹುಮ್ಮಸ್ಸನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಮಾತಿನ ವರಸೆಯನ್ನು ಬದಲಿಸುತ್ತದೆ.

 

ಈಗ ನೋಡಿ, ಎರಡೂ ಉಪಚುನಾವಣೆಗಳಲ್ಲಿ ಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಸಾರಿ ಹೇಗೆ  ಮಾತನಾಡುತ್ತಿದ್ದಾರೆ ಎಂದು. ಅದು ಅವರು ತಿಳಿದು ಮಾತನಾಡಿದರೇ ಅಥವಾ ಗೆಲುವಿನ ಉಮೇದು ಹಾಗೆ  ಮಾತನಾಡಿಸಿತೇ ತಿಳಿಯದು. ಉಪಚುನಾವಣೆಗಳ ಫಲಿತಾಂಶ ಬರುತ್ತಿದ್ದಂತೆಯೇ ಅವರು, ‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದರು. ಅವರು ಅಷ್ಟಕ್ಕೇ ನಿಲ್ಲಲಿಲ್ಲ.‘ಮುಂದಿನ ಚುನಾವಣೆಯ ನೇತೃತ್ವವನ್ನು ನಾನೇ  ವಹಿಸುತ್ತೇನೆ’ ಎಂದೂ ಸಾರಿ ಬಿಟ್ಟರು. ಕಾಂಗ್ರೆಸ್‌ ಹೈಕಮಾಂಡ್‌ ಸಂಸ್ಕೃತಿಯನ್ನು ನೋಡಿಕೊಂಡು ಬಂದವರಿಗೆ ಇದು ಒಂದಿಷ್ಟು ಧಾರ್ಷ್ಟ್ಯದ ಮಾತು. ಏಕೆಂದರೆ ಅಲ್ಲಿ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು, ‘ಈ ಚುನಾವಣೆಯಲ್ಲಿನ ಗೆಲುವು ಸಾಮೂಹಿಕ ನಾಯಕತ್ವದ ಗೆಲುವು’ ಅಂದಿದ್ದರು! ಕಾಂಗ್ರೆಸ್ಸಿನಲ್ಲಿ ಏನಿದ್ದರೂ ಗಾಂಧಿ ಮನೆತನದ ನೇತೃತ್ವವೇ ಇರಬೇಕು. ಸೋನಿಯಾ, ರಾಹುಲ್‌ ಹೆಸರು ಜಪ ಮಾಡುತ್ತಲೇ ಮತ ಕೇಳಬೇಕು. ಅದು ಅಲ್ಲಿನ ದಾಸ್ಯ ಸಂಸ್ಕೃತಿ ಬಯಸುವ ಮಾತು.

 

‘ಮುಂದಿನ ಚುನಾವಣೆಯ ನೇತೃತ್ವವನ್ನು ನಾನೇ ವಹಿಸುತ್ತೇನೆ’ ಎಂದರೆ ‘ಮುಖ್ಯಮಂತ್ರಿ ಅಭ್ಯರ್ಥಿ ನಾನೇ’ ಎಂದೂ ಧ್ವನಿತವಾಗುತ್ತದೆ. ಆದರೆ, ಆ ಮಾತನ್ನು ಈಗಲೇ ಸಿದ್ದರಾಮಯ್ಯ ಆಡಿಲ್ಲ. ‘ಅದು ಹೈಕಮಾಂಡ್‌ಗೆ ಬಿಟ್ಟುದು’ ಎಂದು ಅಷ್ಟರ ಮಟ್ಟಿಗೆ ಜಾಣತನ ತೋರಿಸಿದ್ದಾರೆ. ಆದರೆ, ಕಳೆದ ನಾಲ್ಕು ವರ್ಷಗಳ ಅವರ ಆಡಳಿತ ನೋಡಿದರೆ ಅವರು ಕರ್ನಾಟಕದ ಮಟ್ಟಿಗೆ ತಮಗೆ ಪರ್ಯಾಯವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದಾರೆ.  ಪಕ್ಷವೂ ಹಾಗೆಯೇ ಪರಿಗಣಿಸಿದಂತೆ  ಕಾಣುತ್ತದೆ.ಎಸ್‌.ಎಂ.ಕೃಷ್ಣ, ಜನಾರ್ದನ ಪೂಜಾರಿ, ಜಾಫರ್‌ ಷರೀಫ್‌ ಮತ್ತು ಎಂ.ವಿ.ರಾಜಶೇಖರನ್‌ ಅವರಂಥ ಹಿರಿಯರು ಸಿದ್ದರಾಮಯ್ಯ ಅವರನ್ನು ಬದಲಿಸಲು ಅಥವಾ ಅಸ್ಥಿರಗೊಳಿಸಲು ಮಾಡಿದ ಯಾವ ಪ್ರಯತ್ನವೂ ಕೈಗೂಡಲಿಲ್ಲ.ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳು : ಒಂದು, ಕರ್ನಾಟಕದ ಕಾಂಗ್ರೆಸ್‌ ವ್ಯವಹಾರಗಳ ಮೇಲೆ ಸಿದ್ದರಾಮಯ್ಯನವರು ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡು ತಮ್ಮ ನಾಯಕತ್ವದ ವಿರುದ್ಧ ಸಂಪುಟದಲ್ಲಿ ಯಾವ ಅಪಸ್ವರವೂ ಏಳದಂತೆ ಎಚ್ಚರ ವಹಿಸಿರುವುದು. ಎರಡು : ತಮ್ಮ ಕೆಲಸದಲ್ಲಿ ಹೈಕಮಾಂಡ್‌ ಅಥವಾ ಹೈಕಮಾಂಡ್‌ನ ಪ್ರತಿನಿಧಿ ಯಾವುದೇ ಹಸ್ತಕ್ಷೇಪ ಮಾಡದಂತೆ ನೋಡಿಕೊಂಡಿರುವುದು. 

 

ವಿಂಧ್ಯ ಪರ್ವತದ ಕೆಳಗಿನ ಇಡೀ ದಕ್ಷಿಣ ಭಾರತದಲ್ಲಿ ಇರುವ ತಮ್ಮ ಏಕೈಕ ಸರ್ಕಾರಕ್ಕೆ ಸೋನಿಯಾ ಗಾಂಧಿಯವರಾಗಲೀ, ರಾಹುಲ್‌ ಗಾಂಧಿಯವರಾಗಲೀ ಅಥವಾ ಅವರ ಪ್ರತಿನಿಧಿಯಾಗಲೀ ಹೆಚ್ಚಿನ ಕಿರಿಕಿರಿ ಮಾಡಿಲ್ಲ. ನಿಧಾನವಾಗಿ ತನ್ನ ಬಲ ಕ್ಷೀಣಿಸುತ್ತ ಇರುವುದರಿಂದ, ಇರುವ ಒಂದು ದೊಡ್ಡ ಸರ್ಕಾರ ನೆಮ್ಮದಿಯಿಂದ ಆಡಳಿತ ಮಾಡಲಿ ಎಂದು ಹೈಕಮಾಂಡ್‌ ಅಂದುಕೊಂಡಿರಬಹುದು.

 

ಈಗ, 2018ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯನವರು ಕರ್ನಾಟಕವನ್ನು ಕಾಂಗ್ರೆಸ್ಸಿನ ಭದ್ರಕೋಟೆಯಾಗಿಯೇ ಉಳಿಸಿಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆ. ನಿಜ. ಉಪ ಚುನಾವಣೆಗಳ ಫಲಿತಾಂಶ ಮುಂದಿನ ಮಹಾಚುನಾವಣೆಗೆ ದಿಕ್ಸೂಚಿಯಲ್ಲ. ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದಾಗ ನಡೆದ 20ಕ್ಕಿಂತ ಹೆಚ್ಚು ಉಪಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಿತ್ತು. ಆದರೆ, ಕೊನೆಯಲ್ಲಿ 2013ರಲ್ಲಿ ಎಲ್ಲ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದಯನೀಯವಾಗಿ ಸೋತಿತು.

 

ಹಾಗೆಯೇ 2018ರ ಮೇ ಒಳಗೆ ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸು ಗೆಲ್ಲುತ್ತದೆಯೇ ಅಥವಾ ಸೋಲುತ್ತದೆಯೇ? ಕಾಂಗ್ರೆಸ್ಸು ಗೆಲ್ಲಬಾರದು ಎಂದು ಬಿಜೆಪಿ ಬಯಸುತ್ತದೆ ಮತ್ತು ಅದನ್ನು ಸೋಲಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಅದು ಮಾಡುತ್ತದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇತ್ಯಾದಿ ಏನೂ ಇರಲಿಲ್ಲ. ಅದು ಸ್ಥಳೀಯ ಸಂಗತಿಗಳ ಮೇಲೆ ನಡೆದ ಚುನಾವಣೆ ಆಗಿತ್ತು.

 

2018ರ ಚುನಾವಣೆ ಹಾಗೆ ಆಗುವುದಿಲ್ಲ. ಮೋದಿ ಮತ್ತು ಅಮಿತ್‌ ಷಾ ಅವರು ಇಲ್ಲಿಗೆ ಬಂದೇ ಬರುತ್ತಾರೆ. ಗೆಲ್ಲಲು ಏನೆಲ್ಲ ಕಾರ್ಯತಂತ್ರ ರೂಪಿಸಬೇಕೋ ಅದನ್ನೆಲ್ಲ ಮಾಡುತ್ತಾರೆ. ಹಾಗೆ ಮಾಡಿದ ಮೇಲೂ ಇಲ್ಲಿ ಕಾಂಗ್ರೆಸ್‌ ಪಕ್ಷ ಮರಳಿ ಅಧಿಕಾರ ಹಿಡಿದರೆ ಅದು ನಿಜಕ್ಕೂ ಅಪ್ರತಿಮವಾದ ಗೆಲುವು ಎಂದು ಅನಿಸುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರವೇಶಿಸದಂತೆ ತಡೆಯುವುದಕ್ಕಾಗಿ ಕಾಂಗ್ರೆಸ್‌ ಕೋಟೆಯನ್ನು ಕಾಯುವ ‘ಸಂಗೊಳ್ಳಿ ರಾಯಣ್ಣ’ನ ಪಾತ್ರವನ್ನು ಸಿದ್ದರಾಮಯ್ಯನವರು ಈಗ ನಿಭಾಯಿಸಬೇಕಾಗಿದೆ!

 

ನಂಜನಗೂಡು ಚುನಾವಣೆಯಲ್ಲಿ ಬಿಜೆಪಿಯವರು ಒಂದು ಪ್ರಯೋಗ ಮಾಡಿದರು : ಅದು ದಲಿತ ಮತ್ತು ಲಿಂಗಾಯತ ಮತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವೇ ಎಂದು ನೋಡುವ ಪ್ರಯೋಗವಾಗಿತ್ತು. ಅದು ಕೈಗೂಡಲಿಲ್ಲ. ಅದಕ್ಕೆ ಅವರು ಆರಿಸಿಕೊಂಡ ಅಭ್ಯರ್ಥಿಯೂ ಕಾರಣವಾಗಿರಬಹುದು.

 

ಕರ್ನಾಟಕದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗದಂತೆ ಸಿದ್ದರಾಮಯ್ಯ ತಡೆದಿದ್ದಾರೆ ಎಂಬ ಅಸಮಾಧಾನವನ್ನು ಕಾಂಗ್ರೆಸ್ಸಿನವರೇ ಅನೇಕ ಸಾರಿ ತೋಡಿಕೊಂಡಿದ್ದಾರೆ. ಎಂ.ವಿ.ರಾಜಶೇಖರನ್‌ ಅವರಂತೂ ಅವಕಾಶ ಸಿಕ್ಕಾಗಲೆಲ್ಲ ಆ ಮಾತು ಆಡಿದ್ದಾರೆ. ಇದೇ ಕಾರಣಕ್ಕಾಗಿ ದಲಿತರಿಗೆ ಕಾಂಗ್ರೆಸ್ಸಿನ ಬಗೆಗೆ ಇರುವ ಅತೃಪ್ತಿಯನ್ನು ಬಿಜೆಪಿ ನಗದು ಮಾಡಿಕೊಳ್ಳಲು ಈ ಚುನಾವಣೆಯಲ್ಲಿ ಯತ್ನಿಸಿತು. ಅದು ಫಲ ನೀಡಿಲ್ಲ.

 

ಹಾಗೆ  ನೋಡಿದರೆ ಈ ಪ್ರಯೋಗ ಮಾಡಲು ಹೋಗಿ ಬಿಜೆಪಿ ಯಡವಟ್ಟು ಮಾಡಿಕೊಂಡಂತೆ ಕಾಣುತ್ತದೆ. ಶ್ರೀನಿವಾಸಪ್ರಸಾದ್‌ ಅವರಷ್ಟು ‘ಪ್ರಬಲ’ ದಲಿತ ನಾಯಕನ ಬದಲು ಕಳಲೆ ಕೇಶವಮೂರ್ತಿಯವರಂಥ ಅಷ್ಟೇನು ಪ್ರಸಿದ್ಧರಲ್ಲದ ಒಬ್ಬ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕೆ ಇಳಿಸಿದ್ದರೆ ಅದಕ್ಕೆ ಇನ್ನಷ್ಟು ಹೆಚ್ಚು ಮತಗಳು ಬೀಳುತ್ತಿದ್ದುವು ಎಂದೂ ಅನಿಸುತ್ತದೆ.

 

ಶ್ರೀನಿವಾಸಪ್ರಸಾದ್‌ ಅವರು ಕಾಂಗ್ರೆಸ್‌ ಬಿಡುತ್ತಿದ್ದಂತೆಯೇ ಅವರ ಮನೆಗೆ ಧಾವಿಸಿದ ಬಿಜೆಪಿ ನಾಯಕರ ವರ್ತನೆಯೂ ನಾಯಕತ್ವದ ದಿವಾಳಿತನವನ್ನು ತೋರಿಸುತ್ತಿತ್ತು. ಪ್ರಸಾದ್‌ ಬಂದ ಕೂಡಲೇ ತನ್ನ ದಲಿತ ಬಲ ಹೆಚ್ಚುತ್ತದೆ ಎಂದು ಅದು ಭಾವಿಸಿದ್ದು ತಪ್ಪಾಯಿತು. ದಲಿತರಲ್ಲಿ ಎಡಗೈ ಸಮುದಾಯದ ಅನೇಕ ನಾಯಕರು ಬಿಜೆಪಿಯಲ್ಲಿ ಇದ್ದಾರೆ. ಅವರಿಗೆ, ‘ಈ ಪರಿಯ ಪ್ರಸಾದ್ ಓಲೈಕೆ’ ಸರಿ ಅನಿಸಿರಲಿಲ್ಲ. ತನ್ನ ಶಕ್ತಿ ಯಾವುದು ಎಂದು ತಿಳಿದುಕೊಂಡು ಅದನ್ನೇ ಇನ್ನಷ್ಟು ಬಲಗೊಳಿಸಲು ಬಿಜೆಪಿ ಯತ್ನಿಸಬೇಕಿತ್ತು. ಈಗ ಪ್ರಸಾದ್‌ ಅವರನ್ನು ನೆಚ್ಚಿಕೊಂಡುದು ಸರಿ ಹೋಗಲಿಲ್ಲ ಎಂದು ಬಿಜೆಪಿ ನಾಯಕರಿಗೆ ಅನಿಸಿರಬಹುದು.

 

ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕಾದ ಇನ್ನೊಂದು ಸಂಗತಿ ಎಂದರೆ ಚುನಾವಣೆ ಸಮಯದಲ್ಲಿ ನಾಲಿಗೆಯ ಮೇಲೆ ನಿಯಂತ್ರಣ ಹಾಕಿಕೊಳ್ಳುವುದು. ಉತ್ತರ ಪ್ರದೇಶದ ಭಾಷೆಯಲ್ಲಿ ಮಾತನಾಡಿದರೆ ಕರ್ನಾಟಕದಲ್ಲಿ ಗೆಲುವು ಕಷ್ಟ. ಇಲ್ಲಿನ ಜನರು ಸಜ್ಜನಿಕೆಯ ಗಡಿ ದಾಟಿ ಮಾತನಾಡುವುದನ್ನು ಇಷ್ಟ ಪಡುವುದಿಲ್ಲ. ಯಾರೆಲ್ಲ ಏನೆಲ್ಲ ಮಾತನಾಡಿದರು ಎಂಬುದು ಈಗ  ಇತಿಹಾಸದಲ್ಲಿ ದಾಖಲಾಗಿರುವುದರಿಂದ ನಾನು ಇಲ್ಲಿ ಮತ್ತೆ ಕೆದಕಲು ಹೋಗುವುದಿಲ್ಲ.

 

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಸ್ವಂತ ಬಲದ ಮೇಲೆ ಗೆದ್ದಿತೇ ಅಥವಾ ಜನತಾದಳ (ಎಸ್‌) ಗೈರು ಹಾಜರಿ ಅದನ್ನು ಗೆಲುವಿನ ದಡ ಮುಟ್ಟಿಸಿತೇ ಎಂಬ ಪ್ರಶ್ನೆ ಮುಂದಿನ ಚುನಾವಣೆ ದೃಷ್ಟಿಯಿಂದ ಬಹಳ ಮಹತ್ವದ್ದು. ಕುಮಾರಸ್ವಾಮಿಯವರು, ‘ಬಿಜೆಪಿಯ ಗೆಲುವಿನ ನಾಗಾಲೋಟ ತಡೆಯುವುದಕ್ಕಾಗಿಯೇ ನಾವು ಅಭ್ಯರ್ಥಿಗಳನ್ನು ಹಾಕಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಹಾಗಾದರೆ, ಇದು ಮುಂದಿನ ಚುನಾವಣೆಯಲ್ಲಿ ಮೈತ್ರಿಗೆ ಶ್ರೀಕಾರವೇ ಎಂದರೆ ‘ಅಲ್ಲ’ ಎಂದೂ ಅವರು ಹೇಳಿದ್ದಾರೆ.

 

2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅನುಸರಿಸಿದ  ಕಾರ್ಯತಂತ್ರ ಬಿಜೆಪಿಯ ವಿರುದ್ಧದ ಮತಗಳು ಒಡೆಯದಂತೆ ನೋಡಿಕೊಳ್ಳುವ ಒಂದು ಯಶಸ್ವಿ ಸೂತ್ರದಂತೆ ಕಾಣುತ್ತದೆ. ನಿತೀಶ್‌ಕುಮಾರ್‌ ಅವರು ತಮ್ಮ ರಾಜಕೀಯ ಕಡುವೈರಿ ಲಾಲುಪ್ರಸಾದ್‌ ಅವರ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇದ್ದರೆ ವಿಧಾನಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆ ರಾಜ್ಯದಲ್ಲಿ ನಿತೀಶ್‌ ಸಾಕಷ್ಟು ಜನಪ್ರಿಯ ನಾಯಕ ಮತ್ತು ಸಾಕಷ್ಟು ಅಭಿವೃದ್ಧಿ ಕೆಲಸ  ಮಾಡಿದವರು ಕೂಡ.ಆದರೂ, ಅವರು ಮೋದಿ ಜನಪ್ರಿಯತೆಯ ಸುಂಟರಗಾಳಿಯಲ್ಲಿ ಕೊಚ್ಚಿ ಹೋಗಬಹುದಿತ್ತು. ಆ ಅಪಾಯವನ್ನು ಅವರು  ಮುಂಚೆಯೇ ಗ್ರಹಿಸಿ ‘ಮಹಾಘಟಬಂಧನ್‌’ ರಚಿಸಿಕೊಂಡರು. ಮೋದಿ ಸೃಷ್ಟಿಸಿದ ಈ ಅಲೆಯನ್ನು ತಡೆದು ನಿಲ್ಲಿಸಿದ ಇನ್ನೊಂದು ಗಟ್ಟಿ ಮರ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌. ನವೀನ್‌ ಗೆಲುವಿಗೆ ಬೇರೆ ಕಾರಣಗಳು ಇದ್ದಂತೆ  ಇವೆ. ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ರಾಜಕೀಯ ಭಿನ್ನ ನೆಲೆಯದು.

 

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ‘ಸೇನಾಪತಿ’ಯಾಗಲಿರುವ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸಲು ಸಮರ್ಥವಾಗಿದೆಯೇ? ಜನತಾದಳ (ಎಸ್‌)ನ ಸ್ಪರ್ಧೆ ಬಿಜೆಪಿ ವಿರೋಧಿ ಮತಗಳನ್ನು ಈಗ ವಿಭಜಿಸಬಹುದಾಗಿದ್ದರೆ ಮುಂದೆಯೂ ವಿಭಜಿಸಬಹುದು ಮತ್ತು ಅದು ಬಿಜೆಪಿಗೆ ಅನುಕೂಲ ಆಗಬಹುದು. ಈಗಿನ ಇಂಗಿತಗಳನ್ನು ನೋಡಿದರೆ ಚುನಾವಣೆಗಿಂತ ಮುಂಚಿನ ಮೈತ್ರಿಯಲ್ಲಿ ಜನತಾದಳ (ಎಸ್‌)ಕ್ಕೆ ಆಸಕ್ತಿ ಇದ್ದಂತೆ ಇಲ್ಲ. ಫಲಿತಾಂಶ ಬಂದ ನಂತರ ಅದು ತನ್ನ ಎದೆಗೆ ಹತ್ತಿರ ಇಟ್ಟುಕೊಂಡ ಕಾರ್ಡುಗಳನ್ನು ತನಗೆ ಹೇಗೆ ಬೇಕೋ ಹಾಗೆ ಆಡುವಂತೆ ಕಾಣುತ್ತದೆ!

 

ಇದಕ್ಕೆ ಮುಖ್ಯ ಕಾರಣ ಎಂದರೆ ದೇವೇಗೌಡರು ತಮ್ಮ ಜೀವನದ ಉದ್ದಕ್ಕೂ ಕಾಂಗ್ರೆಸ್‌ ವಿರೋಧಿ ರಾಜಕಾರಣ ಮಾಡಿಕೊಂಡು ಬಂದುದು. ಅವರ ಪಕ್ಷದ ಶಕ್ತಿ ಇರುವುದು ಕೂಡ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುವುದರಲ್ಲಿಯೇ. 1996ರಲ್ಲಿ ಅವರು ಪ್ರಧಾನಿಯಾಗುವಾಗ ಕಾಂಗ್ರೆಸ್‌ ಬೆಂಬಲ ಪಡೆದಿದ್ದರು. 2004ರಲ್ಲಿ ರಾಜ್ಯದಲ್ಲಿ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಅವರು ಬೆಂಬಲ ಕೊಟ್ಟಿದ್ದರು. ಆದರೆ, ಕುಮಾರಸ್ವಾಮಿಯವರಿಗೆ ಆ ಸಮ್ಮಿಶ್ರ ಸರ್ಕಾರ ಎಷ್ಟು ಉಸಿರುಗಟ್ಟಿಸಿತ್ತು ಎಂದರೆ ಅವರು ಅತ್ಯಂತ ನಿಗೂಢವಾದ ಕ್ಷಿಪ್ರಕ್ರಾಂತಿ ಮಾಡಿ ಧರ್ಮಸಿಂಗ್‌ ಸರ್ಕಾರವನ್ನು ಬೀಳಿಸಿ 2006ರಲ್ಲಿ ತಾವು ಮುಖ್ಯಮಂತ್ರಿಯಾದರು.

 

ಅಂದರೆ, ಉಭಯ ಪಕ್ಷಗಳ ನಡುವೆ ಅಪಾರವಾದ ಅಪನಂಬಿಕೆ ಇದೆ. ಮೈತ್ರಿ ಮಾಡಿಕೊಳ್ಳಲು ಅಪಾರವಾದ ನಂಬಿಕೆ ಇರಬೇಕು, ಅಪನಂಬಿಕೆ ಅಲ್ಲ! ದೇವೇಗೌಡರ ಜೊತೆಗೆ ಸೇರಿಕೊಂಡರೆ ನಮ್ಮನ್ನು ಮುಗಿಸಿಬಿಡುತ್ತಾರೆ ಎಂದು ಕಾಂಗ್ರೆಸ್ಸಿಗರಿಗೆ ಅದೇ ಕಾರಣಕ್ಕಾಗಿ ಅಪಾರವಾದ ಭಯವಿದೆ! ಹಾಗಾಗಿ ಸಿದ್ದರಾಮಯ್ಯನವರಾಗಲೀ, ಕಾಂಗ್ರೆಸ್‌ ಪಕ್ಷದ ಇತರ ನಾಯಕರಾಗಲೀ 2018ರ ಚುನಾವಣೆಗಿಂತ ಮುಂಚಿತವಾಗಿ ಜನತಾದಳ (ಎಸ್‌)ದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಅನಿಸುವುದಿಲ್ಲ.

 

ಇತ್ತ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಕುಮಾರಸ್ವಾಮಿಯವರಿಗೂ ಅನೇಕ ಸಮಸ್ಯೆಗಳು ಇವೆ. ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಅನೇಕ ವರ್ಷಗಳ ಕಾಲ ಜೊತೆಯಾಗಿ ಇದ್ದುಕೊಂಡು ರಾಜಕೀಯ ಮಾಡಿದವರು. ಅವರು ಹಾಗೆ ರಾಜಕೀಯ ಮಾಡುವಾಗ ಕುಮಾರಸ್ವಾಮಿ ಇನ್ನೂ ಚಿಕ್ಕವರು.ತಮ್ಮ ತಂದೆಗೆ ಸಿದ್ದರಾಮಯ್ಯ  ತಮಗಿಂತ  ಹೆಚ್ಚು ಹತ್ತಿರ ಎಂದು ಅನೇಕ ಸಾರಿ ಕುಮಾರಸ್ವಾಮಿಯವರಿಗೆ ಅನಿಸಿದ್ದಿರಬಹುದು.  ತಮ್ಮ ಪಕ್ಷವನ್ನು ಒಡೆಯಲು ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದಾರೆ ಎಂಬುದು ಕುಮಾರಸ್ವಾಮಿಯವರ ಅಸಮಾಧಾನಕ್ಕೆ ಈಚಿನ ಇನ್ನೊಂದು ಕಾರಣ. ಅವರಿಬ್ಬರ ನಡುವೆ ಇನ್ನೂ ಅನೇಕ ವೈಷಮ್ಯಗಳು ಇದ್ದಂತೆ ಇವೆ. ಅಂದರೆ ಎರಡೂ ಕಡೆಯಿಂದಲೂ ಅವರ ದಾರಿಗಳು ಬೇರೆ ಬೇರೆ ಎಂದೇ ಅರ್ಥ. ಮತ್ತು ಕುಮಾರಸ್ವಾಮಿಯವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು 2018ರ ಚುನಾವಣೆ ಕಡೆಯ ಪ್ರಯತ್ನ ಎಂದು ಅಂದುಕೊಂಡಿದ್ದಾರೆ. ಮತ್ತು ಆ ಚುನಾವಣೆಯಲ್ಲಿ ತಾವು ಸ್ವತಂತ್ರವಾಗಿ ಅಧಿಕಾರ ಹಿಡಿಯುವುದಾಗಿ ಅವರು ನಂಬಿದ್ದಾರೆ. ಕಾಂಗ್ರೆಸ್ ಜೊತೆಗೆ ಕೈಗೂಡಿಸುವುದು ಎಂದರೆ ತಮ್ಮದು ಕಿರಿಯ ಪಾಲುದಾರ ಸ್ಥಾನ ಎಂದು ಒಪ್ಪಿಕೊಂಡಂತೆ.ಅಲ್ಲಿಗೆ ತಾವು ಮುಖ್ಯಮಂತ್ರಿ ಆಗುವ ಕನಸಿಗೆ ತರ್ಪಣ ಬಿಟ್ಟಂತೆ. ಈಗಲೇ ಆ ಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕಿಂತ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳುವುದು ಜಾಣ ರಾಜಕಾರಣ ಎಂದು ಗೌಡರಿಗೆ ಹಾಗೂ ಸ್ವಾಮಿಯವರಿಗೆ ಅನಿಸಿರಬಹುದು.

 

 ಆದರೆ, ಹೀಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎನ್ನುವ ಅಥವಾ ಆಯ್ಕೆಗಳನ್ನು  ಮುಕ್ತವಾಗಿ ಇಟ್ಟುಕೊಳ್ಳುವ ಒಂದು ಪಕ್ಷ ಚುನಾವಣೆಗಳಿಗೆ ಹೆದರಬಾರದು. ಅವರು ಈ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ‘ಅಧಿಕಾರದ ರಾಜಕಾರಣ ಮಾಡುತ್ತೇವೆ’ ಎಂದು ಒಂದು ಸಾರಿ ತೀರ್ಮಾನಿಸಿದ ಮೇಲೆ ಕಷ್ಟ ಸುಖ ಹೇಳುತ್ತ ಕುಳಿತರೆ ಯಾರೂ ಕೇಳುವುದಿಲ್ಲ. ಈ ಉಪಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್ಸಿನಿಂದ ಬಂದ ಒಂದು ‘ಒಣ ಧನ್ಯವಾದ’ ಬಿಟ್ಟರೆ ಅವರಿಗೆ ಬೇರೆ ಏನೂ ಸಿಗಲಿಲ್ಲ!

 

ಜನತಾದಳಕ್ಕೆ ಬರೀ ಧನ್ಯವಾದ ಹೇಳಿ ಅದನ್ನು ಅಲ್ಲಿಯೇ ಬಿಟ್ಟು ಏಕಾಂಗಿಯಾಗಿ ಸ್ಪರ್ಧಿಸುವ ಕಾಂಗ್ರೆಸ್‌ ಪಕ್ಷ ಮುಂದಿನ ಒಂದು ವರ್ಷದ ಅವಧಿಯಲ್ಲಿ ಏನು ಮಾಡಬೇಕು ಎಂದು ಯೋಚಿಸಬೇಕು. ಈ ಸರ್ಕಾರದ ಸಮಸ್ಯೆಯೇನು ಎಂದರೆ ಅದು ಸಾಮೂಹಿಕವಾಗಿ ಯೋಚಿಸುತ್ತದೆ ಮತ್ತು ಕಾರ್ಯ ನಿರ್ವಹಿಸುತ್ತದೆ ಎಂದು ಅನಿಸದೇ ಇರುವುದು.

 

ಆಡಳಿತದಲ್ಲಿ ವಿಪರೀತ ಜಡತ್ವ ಇದೆ ಎಂದು ಅನಿಸುತ್ತ ಇರುವುದು. ಮತ್ತು ಅದೇ ಕಾರಣಕ್ಕಾಗಿ ಅದು ಜನೋಪಯೋಗಿಯಾಗಿ ಇದೆ ಎಂದು ಅನಿಸದೇ ಇರುವುದು. ಅದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದೇ ಇರುವುದು. ಸಿದ್ದರಾಮಯ್ಯನವರು ಏನೇ ಹೇಳಿದರೂ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಅಂಥ ಪ್ರಾಮಾಣಿಕ ಬದ್ಧತೆ ಇದೆ ಎಂದು ಯಾರಿಗೂ ಅನ್ನಿಸಿರದೇ ಇರುವುದು!

 

ಉಳಿದಿರುವ ಒಂದು ವರ್ಷ ಒಂದು ರೀತಿಯಲ್ಲಿ ಬಹಳ ಕಡಿಮೆ ಅವಧಿ. ಇನ್ನೊಂದು ರೀತಿಯಲ್ಲಿ, ತಿದ್ದಿಕೊಳ್ಳಬೇಕು ಎಂಬ ಮನಸ್ಸು ಇದ್ದರೆ, ಬಹಳ ದೊಡ್ಡ ಅವಧಿ. ಉಳಿದಿರುವ ಒಂದು ವರ್ಷದಲ್ಲಿ ಯಾವ ಮಹತ್ವದ ಚುನಾವಣೆಗಳೂ ಇಲ್ಲ. ಈ ಅವಧಿಯಲ್ಲಿ ಆಡಳಿತಕ್ಕೆ ಒಂದಿಷ್ಟು ಧ್ಯಾನಸ್ಥ ಸ್ಥಿತಿ ಬೇಕು. ಅದು ಚುರುಕುಗೊಂಡಿದೆ, ಜನಪರವಾಗಿದೆ, ಮತ್ತು ವೇಗವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಜನರಿಗೆ ಅನಿಸಬೇಕು. ಅದಕ್ಕೆ ಸಂಪುಟದ ಸಾಂಘಿಕ ಪ್ರಯತ್ನ ಬೇಕು. ಅವರೆಲ್ಲ ತಮ್ಮ ಜಡತ್ವವನ್ನು ನೀಗಿಕೊಂಡು ಕೆಲಸ ಮಾಡಬೇಕು. ಆದರೆ, ಹಾಗೆ ಆಗದೇ ಇರಬಹುದು.

 

ಏಕೆಂದರೆ ಎಲ್ಲ ಪಕ್ಷಗಳಲ್ಲಿ ಇರುವ ಹಾಗೆ ಕಾಂಗ್ರೆಸ್ಸಿನಲ್ಲಿಯೂ ಒಂದಿಷ್ಟು ಮನೆ ಮುರುಕತನ ಇದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ಸು ಗೆಲ್ಲಲಿ ಎಂದು ಎಲ್ಲ ಕಾಂಗ್ರೆಸ್‌  ನಾಯಕರು ಬಯಸಿದ್ದರು ಎಂದರೆ ನಂಬುವುದು ಕಷ್ಟ!

 

 ‘ಎರಡೂ ಕಡೆ ಗೆದ್ದರೆ ಸಿದ್ದರಾಮಯ್ಯ ಬಲಿಷ್ಠರಾಗುತ್ತಾರೆ. ಅವರು ಬಲಿಷ್ಠರಾದರೆ ಮುಂದಿನ ಚುನಾವಣೆಯಲ್ಲಿ ಅವರೇ ನಾಯಕರಾಗುತ್ತಾರೆ. ಅವರೇ ನಾಯಕರಾದರೆ ಅವರೇ ಸಹಜವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎನಿಸುತ್ತಾರೆ. ಅವರು ಹೊರಗಿನವರು. ಈಗ ಅವರಿಗೆ ಅವಕಾಶ ಸಿಕ್ಕಿದೆ. ಮುಂದಿನ ಸಾರಿಯೂ ಅವರಿಗೇ ಅವಕಾಶ ಸಿಗಬೇಕೇ? ಮೂಲ ಕಾಂಗ್ರೆಸ್ಸಿಗರು ಇನ್ನೂ ಹೀಗೆಯೇ ಎಷ್ಟು ವರ್ಷ ತೆರೆಯ ಮರೆಯಲ್ಲಿ ಕಾಯುವುದು? ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರೆಲ್ಲ ಮುಖ್ಯಮಂತ್ರಿ ಆಗುವುದು ಬೇಡವೇ’ ಎಂದೆಲ್ಲ ಅವರು ಯೋಚಿಸಿದ್ದರು.

 

ಈ  ಯೋಚನೆಯಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಗೆಲುವಿನ ಲೆಕ್ಕಾಚಾರ ಸಿಕ್ಕುದರ ಜೊತೆಗೆ ಅದೃಷ್ಟದ ಬಲವೂ ಇದ್ದಂತೆ ಇದೆ. ಇಲ್ಲವಾದರೆ ಅವರು ಹೀಗೆ ನಿರ್ವಿಘ್ನವಾಗಿ ನಾಲ್ಕು ವರ್ಷ ಆಡಳಿತ ಮುಗಿಸಿ ಐದನೇ ವರ್ಷದ ಆಡಳಿತ ಪೂರ್ಣಗೊಳಿಸುವ ಕಡೆಗೆ ದಾಪುಗಾಲು ಇಡುತ್ತಿರಲಿಲ್ಲ.

 

ಸ್ಥಳೀಯ ಮಟ್ಟದ ಇಂಥೆಲ್ಲ ಸಹಜ ಒಳಗುದಿಗಳ ನಡುವೆ, ದೇಶದ ಮಟ್ಟದಲ್ಲಿ ಸೋತು ಸುಣ್ಣವಾಗಿರುವ, ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಭಿನ್ನವಾಗಿ ಯೋಚನೆ ಮಾಡಬೇಕಿದೆ. ಸ್ಥಳೀಯವಾಗಿ ತನಗೆ ಗೆಲುವು ತಂದುಕೊಡಬಲ್ಲ ನಾಯಕರ ಬೆನ್ನಿಗೆ ಅದು ನಿಲ್ಲಬೇಕಿದೆ. ಆ ಅರ್ಥದಲ್ಲಿ 2018ರ ರಾಜ್ಯ ವಿಧಾನಸಭೆ ಚುನಾವಣೆ ಬಿಜೆಪಿಗಿಂತ ಕಾಂಗ್ರೆಸ್ಸಿಗೇ ಬಹಳ ಮುಖ್ಯವಾದುದು.

 

ಏಕೆಂದರೆ 1985ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರಲಿಲ್ಲ. 1983ರಲ್ಲಿ ಚುನಾಯಿತವಾಗಿದ್ದ ಪಕ್ಷವೇ 1985ರಲ್ಲಿ ಮತ್ತೆ ಅಧಿಕಾರ ಹಿಡಿದಿತ್ತು. ನಂತರ ನಡೆದ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯದ ಜನರು ಅದುವರೆಗೆ ಆಡಳಿತ ಮಾಡಿದ ಪಕ್ಷಕ್ಕೆ ಮತ ಹಾಕಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry