ಸಾಯಿಪ್ರಣೀತ್ ಚಾರಿತ್ರಿಕ ಗೆಲುವು

7

ಸಾಯಿಪ್ರಣೀತ್ ಚಾರಿತ್ರಿಕ ಗೆಲುವು

Published:
Updated:
ಸಾಯಿಪ್ರಣೀತ್ ಚಾರಿತ್ರಿಕ ಗೆಲುವು

ಸಿಂಗಪುರ: ಸೂಪರ್ ಸೀರಿಸ್ ಟೂರ್ನಿಯೊಂದರಲ್ಲಿ ಫೈನಲ್‌ ತಲುಪಿದ ಮೊದಲ ಪಂದ್ಯದಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಬಿ.ಸಾಯಿ ಪ್ರಣೀತ್ ಭಾನುವಾರ ಇಲ್ಲಿ ಭಾರತದ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್ ಪಂದ್ಯ ಭಾರತದ ಪಾಲಿಗೆ ಐತಿಹಾಸಿಕ ಕ್ಷಣ ಎನಿಸಿದೆ.

ಬ್ಯಾಡ್ಮಿಂಟನ್ ಇತಿಹಾಸದಲ್ಲಿಯೇ ಭಾರತದ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದು ಇದೇ ಮೊದಲು.

ಈ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಪ್ರಶಸ್ತಿ ಕೂಡ ಇದಾಗಿದೆ. ಸೈನಾ ನೆಹ್ವಾಲ್‌ 2010ರಲ್ಲಿ ಚಾಂಪಿಯನ್ ಆಗಿದ್ದರು.

ವಿಶ್ವ ರ‌್ಯಾಂಕಿಂಗ್ನಲ್ಲಿ 30ನೇ ಸ್ಥಾನದಲ್ಲಿರುವ ಪ್ರಣೀತ್‌ 17–21, 21–17, 21–12ರಲ್ಲಿ 29ನೇ ಸ್ಥಾನದಲ್ಲಿರುವ ಕೆ. ಶ್ರೀಕಾಂತ್‌ಗೆ ಆಘಾತ ನೀಡಿದ್ದಾರೆ.

ಇತ್ತೀಚೆಗೆ ಕೆನಡಾ ಓಪನ್ ಗೆದ್ದುಕೊಂಡಿದ್ದ ಪ್ರಣೀತ್‌, ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.

ಮೊದಲ ಗೇಮ್‌ನಲ್ಲಿ ಭಾರತದ ಅನುಭವಿ ಆಟಗಾರ ಶ್ರೀಕಾಂತ್‌ ತಮ್ಮ ನಿಖರ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳಿಂದ ಗಮನಸೆಳೆದರು.  ಪ್ರಣೀತ್ ಅವರ ಫೋರ್‌ಹ್ಯಾಂಡ್ ಹೊಡೆತಗಳಿಗೆ ಶ್ರೀಕಾಂತ್ ಅಮೋಘ ರೀತಿಯಲ್ಲಿ ರಿಟರ್ನ್ಸ್ ಮಾಡುವ ಮೂಲಕ ಹೆಚ್ಚು ಪಾಯಿಂಟ್ಸ್‌ ಕಲೆಹಾಕಿದರು.

ಇಬ್ಬರೂ ಆಟಗಾರರು ದೀರ್ಘ ರ್‍ಯಾಲಿಗಳ ಗೋಜಿಗೆ ಹೋಗಲಿಲ್ಲ. ಚುಕುಕಿನ ಆಟದಿಂದ ಬೇಗನೆ ಪಾಯಿಂಟ್ಸ್ ಪಡೆದುಕೊಂಡರು. ಶ್ರೀಕಾಂತ್‌ 11–7ರ ಮುನ್ನಡೆ ಪಡೆದರು. ಬಳಿಕ ಪ್ರಣೀತ್‌ 14–15ರಲ್ಲಿ ಪೈಪೋಟಿ ನೀಡಿದರು. ನಂತರದಲ್ಲಿ ಶ್ರೀಕಾಂತ್ ಅವರ ಪ್ರಬಲ ಸ್ಮ್ಯಾಷ್‌ಗಳಿಗೆ ಉತ್ತರಿಸುವಲ್ಲಿ ಪ್ರಣೀತ್‌ ಮಂಕಾದಂತೆ ಕಂಡರು. ಕೊನೆಯಲ್ಲಿ ಗೇಮ್‌ ಶ್ರೀಕಾಂತ್ ಅವರ ಪಾಲಾಯಿತು.

ಎರಡನೇ ಗೇಮ್‌ನಲ್ಲಿ ಶ್ರೀಕಾಂತ್‌ 4–1ರ ಮುನ್ನಡೆ ಪಡೆದರು. ಪ್ರಣೀತ್‌ 7–7 ಹಾಗೂ 10–10ರಲ್ಲಿ ಸಮಬಲದ ಪೈಪೋಟಿ ನೀಡಿದರು. 20–17ರ ವರೆಗೆ ಪ್ರಣೀತ್ ಪ್ರಾಬಲ್ಯದಲ್ಲಿದ್ದರು. ಈ ಹಂತದಲ್ಲಿ ಶ್ರೀಕಾಂತ್ ತಮ್ಮ ಸರ್ವ್‌ನಲ್ಲಿ ಮಾಡಿದ ತಪ್ಪಿನಿಂದಾಗಿ ಸೋಲು ಕಂಡರು.

ನಿರ್ಣಾಯಕ ಗೇಮ್‌ನಲ್ಲೂ ಚುರುಕಿನ ಆಟ ಮುಂದುವರಿಸಿದ ಪ್ರಣೀತ್‌ 7–3ರಲ್ಲಿ ಮುನ್ನಡೆಯ ಆರಂಭ ಪಡೆದರು. ಬ್ಯಾಕ್‌ಹ್ಯಾಂಡ್ ಹೊಡೆತ ಗಳಿಂದ ಪಾಯಿಂಟ್ಸ್‌ ಕಲೆಹಾಕಿದರು. 11–5ಕ್ಕೆ ಪಾಯಿಂಟ್ಸ್ ಹೆಚ್ಚಿಸಿಕೊಂಡರು.  ಬದಲಾದ ಕೋರ್ಟ್‌ನಲ್ಲೂ ಶ್ರೀಕಾಂತ್ ಆಟದ ಲಯದಲ್ಲಿ ವ್ಯತ್ಯಾಸವಾಗಲಿಲ್ಲ. ಶ್ರೀಕಾಂತ್‌ ನೆಟ್‌ ಸಮೀಪದಲ್ಲಿ ಆಡು ವಾಗ ಹೆಚ್ಚು ಪಾಯಿಂಟ್ಸ್ ಬಿಟ್ಟುಕೊಟ್ಟರು.

ಡ್ರಾಪ್‌ ಷಾಟ್‌ನ ಬಲದಿಂದಾಗಿ ಪ್ರಣೀತ್‌ 19–12ರಲ್ಲಿ ದೊಡ್ಡ ಮೊತ್ತದ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಮ್ಯಾಚ್‌ ಪಾಯಿಂಟ್‌ ಪಡೆಯುವ ಮೂಲಕ ಪ್ರಣೀತ್‌ ಪಂದ್ಯ ಗೆದ್ದು ಸಂಭ್ರಮಿಸಿದರು.

ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ತಮ್ಮ ಅಮೋಘ ಸಾಮರ್ಥ್ಯದ ಆಟ ಪ್ರದರ್ಶಿಸಿದ್ದ ಪ್ರಣೀತ್‌ ಕ್ವಾರ್ಟರ್‌ಫೈನಲ್‌ ನಲ್ಲಿ ಥಾಯ್ಲೆಂಡ್‌ನ ಎಂಟನೇ ಶ್ರೇಯಾಂಕದ ಆಟಗಾರ ತೊಂಗ್ಸಕ್‌ ಸೆನ್ಸೊಬೂನ್ಸಕ್‌ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ 21–6, 21–8ರಲ್ಲಿ ದಕ್ಷಿಣ ಕೊರಿಯಾದ ಲೀ ಡಾಂಗ್‌ ಕೊಯೆನ್‌ಗೆ ಆಘಾತ ನೀಡಿದ್ದರು.

‘ಶ್ರೀಕಾಂತ್‌ ಹಾಗೂ ಪ್ರಣೀತ್ ಇಬ್ಬರೂ ಫೈನಲ್‌ ತಲುಪಿದ್ದು ಹೆಮ್ಮೆ ಎನಿಸಿತು. ಇದು ದೊಡ್ಡ ಟೂರ್ನಿ. ಪ್ರಣೀತ್ ಯುವ ಆಟಗಾರ. ಅವರಿಗೆ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಳ್ಳಲು ಮುಂದಿನ ಟೂರ್ನಿಗಳಲ್ಲಿ ಸಾಕಷ್ಟು ಅವಕಾಶ ಇದೆ’ ಎಂದು ರಾಷ್ಟ್ರೀಯ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.

‘ಪ್ರಣೀತ್ ಇಲ್ಲಿಯವರೆಗೂ ಉತ್ತಮ ಇತಿಹಾಸ ಹೊಂದಿದ್ದಾರೆ. ಲೀ ಚಾಂಗ್ ವಿ, ತೌಫಿಕ್ ಅವರನ್ನು ಮಣಿಸಿದ್ದಾರೆ. ಅವರ ಆಟದಲ್ಲಿ ಗುಣಮಟ್ಟ ಇದೆ. ಆದರೆ ಇನ್ನೂ ಸ್ಥಿರವಾಗಿ ಆಡುವ ಕಲೆ ಅವರಿಗೆ ಸಿದ್ಧಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

**

ಪ್ರತಿದಿನ ಒಟ್ಟಿಗೆ ಅಭ್ಯಾಸ ನಡೆಸುವ ಆಟಗಾರನ ಎದುರು ಆಡುವುದು ಕಷ್ಟ. ಟೂರ್ನಿಯಲ್ಲಿ ನಾನು ಆಡಿದ ರೀತಿ ತೃಪ್ತಿ ತಂದಿದೆ. ಈ ಜಯ ಅವಿಸ್ಮರಣೀಯ

-ಸಾಯಿ ಪ್ರಣೀತ್‌, ವಿಜೇತ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry