ವರದಕ್ಷಿಣೆ: ಶಂಕೆ ನಿವಾರಣೆ ಸೂತ್ರ

7

ವರದಕ್ಷಿಣೆ: ಶಂಕೆ ನಿವಾರಣೆ ಸೂತ್ರ

Published:
Updated:

2015ರ ನವೆಂಬರ್‌ ತಿಂಗಳಿನಲ್ಲಿ ಮುಂಬೈನ ಸಾಫ್ಟ್‌ವೇರ್‌ ಉದ್ಯೋಗಿ ಸತೀಶ್‌ ಎಂಬುವರು ಹೆಂಡತಿಯ ವಿರುದ್ಧ ದೂರು ದಾಖಲು ಮಾಡಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣರಾದರು.  ಅದೇ ರೀತಿ, ಇತ್ತೀಚೆಗೆ ಬೆಂಗಳೂರಿನ   ಟೆಕಿ ಮಂಜುನಾಥನ್‌ ಕೂಡ ಇದೇ ಹಾದಿ ತುಳಿದು ಎಲ್ಲರ ಹುಬ್ಬೇರಿಸಿದ್ದಾರೆ.

ತಮ್ಮ ಹೆಂಡತಿಯ ತವರು ಮನೆಯವರು ತಮಗೆ ವರದಕ್ಷಿಣೆ ನೀಡಿರುವುದು ತಪ್ಪು ಎಂದು ಅವರ   ವಿರುದ್ಧ ‘ವರದಕ್ಷಿಣೆ ನಿಷೇಧ ಕಾಯ್ದೆ’ ಅಡಿ  ಇವರಿಬ್ಬರೂ ದೂರು ದಾಖಲಿಸಿರುವುದೇ ಇಷ್ಟೆಲ್ಲಾ ಚರ್ಚೆಗೆ ಕಾರಣ! ಈ ಕಾಯ್ದೆಯ ಪ್ರಕಾರ ವರದಕ್ಷಿಣೆ ಪಡೆಯುವುದು ಮಾತ್ರವಲ್ಲದೆ ಅದನ್ನು ನೀಡುವುದು ಕೂಡ ಅಪರಾಧ ಆಗಿರುವುದರಿಂದ ಹೆಂಡತಿಯ ಪೋಷಕರನ್ನೂ ಶಿಕ್ಷಿಸಿ ಎಂದು ದೂರು ದಾಖಲು ಮಾಡಿದ್ದಾರೆ. ಮುಂಬೈ ಪ್ರಕರಣದಲ್ಲಿ ಅಲ್ಲಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಹೆಂಡತಿ ಹಾಗೂ ಆಕೆಯ ತಂದೆಯ ಕುಟುಂಬದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವಂತೆ  ಪೊಲೀಸರಿಗೆ ಆದೇಶಿಸಿದೆ. ಬೆಂಗಳೂರಿನ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿದ್ದಾರೆ. ಇವೆರಡೂ ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ.

ಈ ಎರಡೂ ಪ್ರಕರಣಗಳಲ್ಲಿ, ಗಂಡಂದಿರು ಸುಖಾಸುಮ್ಮನೆ ದೂರು ದಾಖಲಿಸಿಲ್ಲ. ಹೆಂಡತಿಯ ತವರು ಮನೆಯವರು ತಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ದಾಖಲು ಮಾಡಿದ್ದಕ್ಕೆ ಪ್ರತಿಯಾಗಿ ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ. ‘ಹೆಂಡತಿಯ ಮನೆಯವರು ನಮ್ಮ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ, ಇವೆಲ್ಲಾ ಸುಳ್ಳು’ ಎಂದು ಗಂಡಂದಿರು ಪೊಲೀಸರು ಹಾಗೂ ಕೋರ್ಟ್‌ ಎದುರು ಗೋಗರೆದರೂ ಪ್ರಯೋಜನ ಆಗಲಿಲ್ಲ.  ಆದ್ದರಿಂದ ಹೆಂಡತಿ ಬಳಸಿರುವ ಅಸ್ತ್ರವನ್ನೇ ಪ್ರತಿಅಸ್ತ್ರವಾಗಿ ಬಳಸಿ ಅವರ ತವರು ಮನೆಯವರನ್ನೂ ಕೋರ್ಟ್‌ಗೆ ಎಳೆದಿದ್ದಾರೆ!

‘ವರದಕ್ಷಿಣೆ ನಿಷೇಧ ಕಾಯ್ದೆ’ಯ ದುರುಪಯೋಗ ಆಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, 2014ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಕೇಂದ್ರ ಸರ್ಕಾರ  ಚರ್ಚೆ ಶುರು ಮಾಡಿತ್ತು. ಆದರೆ ಅದಿನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಕಳೆದ ವರ್ಷ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದ ಅಂಕಿಅಂಶಗಳ ಪ್ರಕಾರ, ವರದಕ್ಷಿಣೆ ನಿಷೇಧ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಶೇಕಡ 10ರಿಂದ 15ರಷ್ಟು ಪ್ರಕರಣಗಳು ಖೊಟ್ಟಿ.  ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ‘ಈ ರೀತಿ ಖೊಟ್ಟಿ ಪ್ರಕರಣ ದಾಖಲು ಮಾಡುವುದು ಕೂಡ ವಿಚ್ಛೇದನಕ್ಕೆ ಒಂದು ಕಾರಣ ಆಗಬಹುದು’ ಎಂದು ಕೆ.ಶ್ರೀನಿವಾಸ್‌ ಹಾಗೂ ಕೆ.ಸುನೀತಾ ದಂಪತಿ ಪ್ರಕರಣದಲ್ಲಿ ಹೇಳಿದೆ. ಇದರ ಹೊರತಾಗಿಯೂ ಅಲ್ಲಲ್ಲಿ  ಕಾಯ್ದೆಯ ದುರುಪಯೋಗದ ಮಾತುಗಳು ಕೇಳಿ ಬರುತ್ತಿವೆ.

ಇದರ ನಡುವೆ, ಯೋಚಿಸಬೇಕಿರುವ ವಿಷಯವೆಂದರೆ, ಭಾರತದಲ್ಲಿ ‘ವರದಕ್ಷಿಣೆ ನಿಷೇಧ ಕಾಯ್ದೆ’ ಜಾರಿಗೆ ಬಂದು ಐದೂವರೆ ದಶಕ ಕಳೆದಿದೆ (ಇದು 1961ರ ಕಾಯ್ದೆ). ವರದಕ್ಷಿಣೆಗೆ ಸಂಬಂಧಿಸಿದಂತೆ ವಿಶ್ವದಲ್ಲಿ ಇರುವ ಅತ್ಯಂತ ಹಳೆಯ ಕಾಯ್ದೆ ನಮ್ಮದು ಎಂಬ ಹೆಗ್ಗಳಿಕೆಯೂ ಇದೆ. ಹಾಗೆಯೇ, ಬ್ರಿಟನ್‌ ಹೊರತಾಗಿ ವಿಶ್ವದ ಬಹುಪಾಲು  ದೇಶಗಳಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ವಿಚಿತ್ರ ಎಂದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ನೀಡಿರುವ ವರದಿಯ ಪ್ರಕಾರ ವರದಕ್ಷಿಣೆ ಕೊಲೆ, ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಬ್ರಿಟನ್‌ಗಿಂತಲೂ ಭಾರತದಲ್ಲೇ ಹೆಚ್ಚು. ಭಾರತಕ್ಕೆ ಇದರಲ್ಲಿ ನಂ.1 ಪಟ್ಟ! ಇಲ್ಲಿ ಪ್ರತಿ ಗಂಟೆಗೆ ಒಬ್ಬ ಮಹಿಳೆ ವರದಕ್ಷಿಣೆಯ ಕಾರಣಗಳಿಂದಾಗಿ ಸಾಯುತ್ತಿದ್ದಾಳೆ ಎಂದಿದೆ ಎನ್‌ಸಿಆರ್‌ಬಿ. ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 25 ಸಾವಿರ ವರದಕ್ಷಿಣೆ ಕೊಲೆ ಪ್ರಕರಣಗಳು ನಡೆದಿರುವುದಾಗಿ ಈಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ. ಅಪ್ಪ ವರದಕ್ಷಿಣೆ ನೀಡಬೇಕಾಗುತ್ತದೆ ಎಂದು ಹೆದರಿ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವುದು  ಮೊನ್ನೆಮೊನ್ನೆಯಷ್ಟೇ ಮಹಾರಾಷ್ಟ್ರದ ಲಾತೂರ್‌ನಿಂದ ವರದಿಯಾಗಿದೆ.

ಇನ್ನೊಂದೆಡೆ, ಮದುವೆಯಾದ ನಂತರ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೆ ಸತ್ತರೂ ಅದು ವರದಕ್ಷಿಣೆ ಸಾವೇ ಎಂಬ ಅನುಮಾನ ಸುಳಿದಾಡುವುದು ಸಹಜ. ತಮ್ಮ ಮಗಳು ಕೊಲೆಯಾದಳೆಂದೋ ಅಥವಾ ಆತ್ಮಹತ್ಯೆ ಮಾಡಿಕೊಂಡಳು ಎಂದೋ ತಿಳಿದ ತಕ್ಷಣ ಹಿಂದೆ ಮುಂದೆ ಯೋಚಿಸದ ಆಕೆಯ ಪೋಷಕರು ಮೊದಲು ಗಂಡಿನ ವಿರುದ್ಧ ಅಸ್ತ್ರವಾಗಿ ಬಳಸುವುದು ಇದೇ ಕಾಯ್ದೆಯನ್ನು.  ಪೊಲೀಸರು ಕೂಡ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಮೊದಲೇ ಗಂಡನ ಮನೆಯವರನ್ನು ಬಂಧಿಸುತ್ತಾರೆ.

ಗಂಡಿನ ಮನೆಯವರು ಧನಪಿಶಾಚಿಗಳು ಎಂದು ತಿಳಿದರೂ, ಆತನ ‘ಅರ್ಹತೆ’ ನೋಡಿಯೋ ಇಲ್ಲವೇ ವರದಕ್ಷಿಣೆ ಕೊಟ್ಟರಷ್ಟೇ ಮಗಳು ಸುಖವಾಗಿರುತ್ತಾಳೆ ಎಂಬ ಭ್ರಮೆಯಿಂದಲೋ ಮದುವೆ ಮಾಡಿಕೊಡುವವರ ದೊಡ್ಡ ಸಂಖ್ಯೆಯೇ ಇದೆ. ಮದುವೆಯಾದ ಮೇಲೆ ಗಂಡಿನ ಮನೆಯವರ ಬೇಡಿಕೆ ಈಡೇರಿಸಲಾಗದೆ ಮಗಳನ್ನು ಕಳೆದುಕೊಂಡು ಅವಳ ಶವದ ಎದುರು ರೋದಿಸುವಾಗ ಮಾತ್ರ ಇವರಿಗೆಲ್ಲಾ ವರದಕ್ಷಿಣೆ ನಿಷೇಧ ಕಾಯ್ದೆ ನೆನಪಾಗುತ್ತದೆ...!

ಹಾಗಿದ್ದರೆ ಕಾಯ್ದೆಯ ದುರುಪಯೋಗವೂ ಆಗದಂತೆ, ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಬಲಿಯೂ ಆಗದಂತೆ ಮಾಡುವ ಯಾವುದಾದರೂ ಉಪಾಯ ಇದೆಯೇ? ಇದೆ. ಇವೆರಡಕ್ಕೂ ಒಳ್ಳೆಯ ಮದ್ದು ಮೇಲೆ ಉಲ್ಲೇಖಿಸಿದ ನಿದರ್ಶನಗಳಲ್ಲಿ ಅಡಗಿದೆ.  ವರದಕ್ಷಿಣೆ ನಿಷೇಧ ಕಾಯ್ದೆಯಡಿ ವರದಕ್ಷಿಣೆ ಪಡೆದಿರುವುದು ಸಾಬೀತಾದರೆ ಏಳು ವರ್ಷಗಳ ಶಿಕ್ಷೆಗೆ ಅವಕಾಶ ಇರುವಂತೆ ಅದನ್ನು ಕೊಡುವವರಿಗೂ ಏಳು ವರ್ಷಗಳ ಶಿಕ್ಷೆ ವಿಧಿಸಲು ಅವಕಾಶ ಇದೆ. ಆದರೆ ಇದುವರೆಗೆ ಹೆಣ್ಣಿನ ಮನೆಯವರ ವಿರುದ್ಧ  ಯಾವೊಂದು ಕೋರ್ಟ್‌ ಶಿಕ್ಷೆ ವಿಧಿಸಿದ ಉದಾಹರಣೆ ಇದ್ದಂತಿಲ್ಲ. ಇದೇ ವೇಳೆ, ವರದಕ್ಷಿಣೆ ಪಡೆದಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆಯೇ ಅಪರಾಧಿಗಳು ಕೂಡ ಸುಲಭದಲ್ಲಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಈ ನಿಟ್ಟಿನಲ್ಲಿ, ವರದಕ್ಷಿಣೆ ನಿಷೇಧ ಕಾಯ್ದೆಗೆ ಇನ್ನಷ್ಟು ಬಲಕೊಡಬೇಕಿದೆ, ಅದಕ್ಕೆ ಸ್ಪಷ್ಟ ರೂಪ ಬರಬೇಕಿದೆ. ಕೆಲವು ಹೆಣ್ಣುಮಕ್ಕಳ ಪೋಷಕರು ವರದಕ್ಷಿಣೆ ರೂಪದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಳಿಯನಿಗೆ ಕಾಣಿಕೆ ರೂಪದಲ್ಲೋ, ‘ಮದುವೆಯ ಖರ್ಚು’ ಎಂದು ಹೇಳಿಯೋ ಒಂದಿಷ್ಟು ಹಣ, ಒಡವೆ, ವಾಹನ ಇತ್ಯಾದಿಗಳನ್ನು ನೀಡುವುದಿದೆ. ಈ ಪ್ರತ್ಯಕ್ಷ, ಪರೋಕ್ಷ ರೂಪದ ಉಪಚಾರಗಳನ್ನು ಕಾನೂನುಬದ್ಧಗೊಳಿಸಬೇಕಿದೆ.

ಮದುವೆಯ ನೋಂದಣಿ ಮಾಡಿಸುವುದು ಈಗ ಕಡ್ಡಾಯ. ನೋಂದಣಿಯ ವೇಳೆ ಹೆಣ್ಣಿನ ಮನೆಯವರಿಂದ ಗಂಡಿನ ಮನೆಯವರು ಏನೇನು ಪಡೆದುಕೊಂಡಿದ್ದಾರೆ (ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ) ಎಂಬುದನ್ನು ಅದರಲ್ಲಿಯೇ ನಮೂದಿಸುವುದನ್ನು ಕೂಡ ಕಡ್ಡಾಯ ಮಾಡಬೇಕಿದೆ. ಮದುವೆಯ ಮಾತುಕತೆ ಸಂದರ್ಭದಲ್ಲಿ ದಕ್ಷಿಣೆಯ ನೋಂದಣಿಗೆ ಗಂಡಿನ ಕಡೆಯವರು ಒಪ್ಪಿದರೆ ಅವರ ಮೇಲೆ ಸಂಪೂರ್ಣ ವಿಶ್ವಾಸ ಮೂಡಲು ಹೆಣ್ಣಿನ ಕಡೆಯವರಿಗೆ ಸಾಧ್ಯವಾದೀತು. ಇದರ ಜೊತೆಗೆ, ಮುಂದೆ ಅನಾಹುತ ಸಂಭವಿಸಿದರೆ  ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ತಪ್ಪಿಸಬಹುದು. ಇನ್ನೊಂದೆಡೆ, ಗಂಡಿನ ಮನೆಯವರು ಹಣ ಪಡೆದಿರುವ ಸಾಕ್ಷ್ಯ ಈ ದಾಖಲೆಯಲ್ಲೇ ಸಿಕ್ಕರೆ, ವರದಕ್ಷಿಣೆಯ ಹೆಸರಿನಲ್ಲಿ ಗಂಡಿನ ಮನೆಯವರ ಮೇಲೆ ಸುಳ್ಳು ಮೊಕದ್ದಮೆ ಹೂಡುವ ಪ್ರಮೇಯವೂ ತಪ್ಪಲು ಸಾಧ್ಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry