7

ಐರೋಬೋಟ್ ರೂಂಬ 980 ಒಂದು ಬುದ್ಧಿವಂತ ನಿರ್ವಾತ ಪೊರಕೆ­

ಯು.ಬಿ. ಪವನಜ
Published:
Updated:
ಐರೋಬೋಟ್ ರೂಂಬ 980 ಒಂದು ಬುದ್ಧಿವಂತ ನಿರ್ವಾತ ಪೊರಕೆ­

ಗಂಡ ಹೆಂಡತಿ ಇಬ್ಬರೂ ದುಡಿಯುವವರಾದರೆ ಮನೆ ಸ್ವಚ್ಛ ಮಾಡಲು ಸಮಯ ದೊರೆಯುವುದಿಲ್ಲ. ಇನ್ನುಕೆಲವರಿಗೆ ದೇಹವನ್ನು ಬಗ್ಗಿಸಿ ಕಸ ಹೊಡೆಯಲು ಆಗುವುದಿಲ್ಲ. ಇಂತಹವರಿಗಾಗಿ ಹಲವು ನಮೂನೆಯ ವಾಕ್ಯೂಮ್ ಕ್ಲೀನರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಕೆಲವು ಸರಳವಾದವುಗಳಾದರೆ ಇನ್ನು ಕೆಲವು ಹಲವು ನಮೂನೆಯ ಸವಲತ್ತುಗಳನ್ನು ನೀಡುವಂತಹವುಗಳು. ಬೇರೆ ಬೇರೆ ನಮೂನೆಯ ಹೀರು ನಳಿಗೆಗಳು, ಬ್ರಶ್‌ಗಳು ಎಲ್ಲ ಇವುಗಳ ಜೊತೆ ದೊರೆಯುತ್ತವೆ.ಕೆಲವು ಮಾದರಿಗಳಲ್ಲಿ ನೆಲವನ್ನು ಒರೆಸುವ ಸವಲತ್ತುಗಳೂ ಇವೆ. ಇವೆಲ್ಲವನ್ನು ಬಳಸಬೇಕಾದರೆ ನಿಮಗೆ ಸಮಯ ಬೇಕು. ವಾಕ್ಯೂಮ್ ಕ್ಲೀನರ್ ಅನ್ನು ಹಿಡಿದುಕೊಂಡು ಮನೆ ಪೂರ್ತಿ ನಡೆದಾಡಬೇಕಾಗುತ್ತದೆ.ಇದಕ್ಕಾಗಿ ಸಮಯವೇ ಇಲ್ಲದಿದ್ದರೆ ಏನು ಮಾಡಬೇಕು? ಸುಮ್ಮನೆ ಒಂದು ಸ್ವಿಚ್ ಹಾಕಿದರೆ ಸಾಕು, ವಾಕ್ಯೂಮ್ ಕ್ಲೀನರ್ ಮನೆ ಪೂರ್ತಿ ಓಡಾಡಿ ಸ್ವಚ್ಛ ಮಾಡುವಂತಿದ್ದರೆ ಚೆನ್ನು ಎಂಬ ಭಾವನೆ ಬರುತ್ತಿದೆಯೇ? ಹೌದಾದಲ್ಲಿ ನಿಮ್ಮಂತಹವರಿಗಾಗಿ ಒಂದು ಬುದ್ಧಿವಂತ ಹೀರು ಪೊರಕೆ ಅಥವಾ ನಿರ್ವಾತ ಪೊರಕೆ (vacuum cleaner) ಬಂದಿದೆ. ಅದುವೇ ಐರೋಬೋಟ್ ರೂಂಬ (iRobot Roomba). ಇದು ನಮ್ಮ ಈ ವಾರದ ಗ್ಯಾಜೆಟ್.ಗುಣವೈಶಿಷ್ಟ್ಯಗಳು

ವೃತ್ತಾಕಾರದಲ್ಲಿದೆ, 35 ಸೆ.ಮೀ. ವ್ಯಾಸ, 8 ಸೆ.ಮೀ. ಎತ್ತರ, 4 ಕಿ.ಗ್ರಾಂ. ತೂಕ, 27 ವ್ಯಾಟ್ ವಿದ್ಯುತ್ ಶಕ್ತಿ ಬಳಕೆ, 6 ಸೆನ್ಸರ್‌ಗಳು, ಚಾರ್ಜಿಂಗ್ ಸಮಯ 3-4 ಗಂಟೆ, ಒಮ್ಮೆ ಚಾರ್ಜ್ ಆದರೆ ಸುಮಾರು ಎರಡು ಗಂಟೆ ಕೆಲಸ ಮಾಡುತ್ತದೆ, ಒಂದು ಚಾರ್ಜ್‌ನಲ್ಲಿ ಸುಮಾರು 2000 ಚದರ ಅಡಿ ಸ್ವಚ್ಛ ಮಾಡುತ್ತದೆ, 2.4 GHz ವೈಫೈ, ಕ್ಯಾಮೆರಾ ಇತ್ಯಾದಿ. ಬೆಲೆ ₹69,900.ಇದು ಮೊದಲ ನೋಟಕ್ಕೆ ವಾಕ್ಯೂಮ್ ಕ್ಲೀನರ್ ಎಂದು ಅನಿಸುವುದಿಲ್ಲ. ವೃತ್ತಾಕಾರದಲ್ಲಿರುವ ಹೋಮ್ ರೋಬೋಟ್ ರೀತಿ ಕಾಣಿಸುತ್ತದೆ. ಕೆಳಭಾಗದಲ್ಲಿ ಸಿಲಿಂಡರಿನಾಕೃತಿಯ ಚಕ್ರಗಳಿವೆ. ಮಾಮೂಲಿ ಚಕ್ರಗಳೂ ಇವೆ. ಒಂದು ಬ್ರಶ್ ಕೂಡ ಇದೆ. ಈ ಚಕ್ರಗಳು ತಿರುಗಿ ವಾಕ್ಯೂಮ್ ಕ್ಲೀನರ್ ಮುಂದೆ ಹೋಗುತ್ತದೆ. ಚಿಕ್ಕ ಚಕ್ರಗಳು ಎಡಕ್ಕೆ ಬಲಕ್ಕೆ ತಿರುಗಲು ಸಹಾಯ ಮಾಡುತ್ತವೆ.ಸಿಲಿಂಡರಿನಾಕಾರದ ಚಕ್ರಗಳ ಮಧ್ಯೆ ಗಾಳಿಯನ್ನು ಹೀರುವ ವ್ಯವಸ್ಥೆ ಇದೆ. ಹೀಗೆ ಹೀರಿದ ಗಾಳಿಯನ್ನು ಅದು ಪಕ್ಕದಲ್ಲಿರುವ ಒಂದು ಚಿಕ್ಕ ಕೊಠಡಿಗೆ ತಳ್ಳುತ್ತದೆ. ಅಲ್ಲಿರುವ ಸೋಸುಕವು ಕಸವನ್ನು ತಡೆಹಿಡಿದು ಗಾಳಿಯನ್ನು ಮಾತ್ರ ಹೊರಕ್ಕೆ ಕಳುಹಿಸುತ್ತದೆ. ಈ ಕೊಠಡಿಯಲ್ಲಿರುವ ಸೋಸುಕವನ್ನು ಆಗಾಗ ತೆಗೆದು ಸ್ವಚ್ಛ ಮಾಡುತ್ತಿರಬೇಕು.

ಈ ಕೊಠಡಿಯಲ್ಲಿ ಕಸ ಪೂರ್ತಿ ತುಂಬಿದಾಗ ಇನ್ನಷ್ಟು ಕಸವನ್ನು ಹೀರಿಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ. ಆಗ ಅದು ಎಚ್ಚರಿಸುತ್ತದೆ. ಆಗ ಸೋಸುಕವನ್ನು ತೆಗೆದು ಅದನ್ನು ಸ್ವಚ್ಛ ಮಾಡಬೇಕು ಮತ್ತು ಕೊಠಡಿಯಲ್ಲಿ ತುಂಬಿದ ಕಸವನ್ನು ತೆಗೆಯಬೇಕು.

ಇದನ್ನು ಚಾರ್ಜ್ ಮಾಡಲು ಒಂದು ಘಟಕ ಇದೆ. ಈ ವಾಕ್ಯೂಮ್ ಕ್ಲೀನರ್ ಅನ್ನು ಅದರ ಮೇಲೆ ಇಡಬೇಕು. ಈ ಮೂಲ ಘಟಕವನ್ನು ಸಾಮಾನ್ಯವಾಗಿ ಕೋಣೆಯ ಒಂದು ಬದಿಯಲ್ಲಿಟ್ಟು ವಿದ್ಯುತ್‌ಗೆ ಸಂಪರ್ಕ ಮಾಡಿರಬೇಕು. ವಾಕ್ಯೂಮ್ ಕ್ಲೀನರ್ ಈ ಘಟಕಕ್ಕೆ ನಿರಂತರ ಸಂಪರ್ಕದಲ್ಲಿರುತ್ತದೆ.

ಕ್ಲೀನ್ ಎಂದು ಬರೆದ ಬಟನ್ ಅನ್ನು ಒತ್ತಿದರೆ ವಾಕ್ಯೂಮ್ ಕ್ಲೀನರ್ ಈ ಮೂಲ ಘಟಕದಿಂದ ಕಳಚಿಕೊಂಡು ಬಂದು ಇಡೀ ಕೋಣೆಯನ್ನು ಸುತ್ತಿ ಸುತ್ತಿ ಸ್ವಚ್ಛ ಮಾಡುತ್ತದೆ. ಕೋಣೆಯಲ್ಲಿ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಅವುಗಳ ಪಕ್ಕದಲ್ಲಿ ಹೋಗಿ, ಕೆಳಗೆ ನುಸುಳಿ ಇದು ಕೋಣೆಯನ್ನು ಸ್ವಚ್ಛ ಮಾಡುತ್ತದೆ.

ಕುರ್ಚಿ, ಮಂಚ, ಇನ್ನಿತರ ಅಡೆತಡೆಗಳನ್ನು ಅದು ಅರ್ಥ ಮಾಡಿಕೊಂಡು ಅವುಗಳನ್ನು ನಿವಾರಿಸಿಕೊಂಡು ಚಲಿಸುತ್ತದೆ. ಇಡಿಯ ಕೋಣೆ ಸ್ವಚ್ಛವಾದಾಗ ಇದು ತಾನಾಗಿಯೇ ಹೋಗಿ ಮೂಲ ಘಟಕಕ್ಕೆ ಸಂಪರ್ಕಗೊಂಡು ನಿಲ್ಲುತ್ತದೆ. ಆಗ ಅದು ಮತ್ತೆ ಚಾರ್ಜ್ ಆಗುತ್ತದೆ. ಕೋಣೆಯ ಬಾಗಿಲು ತೆಗೆದುಕೊಂಡಿದ್ದರೆ ಇದು ಕೋಣೆಯಿಂದ ಕೋಣೆಗೆ ಹೋಗಿ ಇಡಿಯ ಮನೆಯನ್ನೇ ಸ್ವಚ್ಛ ಮಾಡುತ್ತದೆ. ಇದರ ಕ್ಯಾಮೆರಾ ಇಡೀ ಮನೆಯನ್ನು ತನ್ನ ಮೆದುಳಿನಲ್ಲಿ ಚಿತ್ರಿಸಿಕೊಂಡು ಯಾವ ಮೂಲೆಯನ್ನೂ ಬಿಡದೆ ಪೂರ್ತಿ ಸ್ವಚ್ಛ ಮಾಡುತ್ತದೆ.

ಈ ವಾಕ್ಯೂಮ್ ಕ್ಲೀನರ್‌ಗೆ ಆಂಡ್ರಾಯ್ಡ್‌ ಮತ್ತು ಐಫೋನ್‌ಗೆ ಕಿರುತಂತ್ರಾಂಶಗಳಿವೆ (ಆ್ಯಪ್). ಈ ಕಿರುತಂತ್ರಾಂಶ ಇರುವ ಫೋನ್ ಮತ್ತು ವಾಕ್ಯೂಮ್ ಕ್ಲೀನರ್ ಅನ್ನು ಮನೆಯ ವೈಫೈ ಜಾಲಕ್ಕೆ ಸೇರಿಸಿ ಸಂಪರ್ಕ ಮಾಡಬೇಕು. ಪ್ರತಿ ದಿನ ಎಷ್ಟು ಗಂಟೆಗೆ ಮನೆಯನ್ನು ಸ್ವಚ್ಛ ಮಾಡಬೇಕು ಎಂದು ನೀವು ನಿಗದಿ ಮಾಡಬಹುದು. ಪ್ರತಿ ದಿನ ನಿಗದಿತ ಸಮಯಕ್ಕೆ ಅದು ತಾನಾಗಿಯೇ ಮನೆಯನ್ನು ಸ್ವಚ್ಛ ಮಾಡುತ್ತದೆ.

ಕೆಲಸ ಮಾಡುತ್ತಿರುವಾಗ ಮಧ್ಯದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಅಲ್ಲಿಂದ ಪುನಃ ಪ್ರಾರಂಭಿಸಬಹುದು ಅಥವಾ ಸಂಪೂರ್ಣ ನಿಲ್ಲಿಸಬಹುದು. ಸಂಪೂರ್ಣ ನಿಲ್ಲಿಸು ಎಂದು ಆಜ್ಞಾಪಿಸಿದರೆ ಅದು ಮತ್ತೆ ಮೂಲ ಘಟಕಕ್ಕೆ ಹೋಗಿ ಸಂಪರ್ಕಗೊಂಡು ನಿಲ್ಲುತ್ತದೆ.

ಕಂಪೆನಿಯವರು ಎರಡು ವಿಶೇಷ ಸಾಧನಗಳನ್ನು ನೀಡಿದ್ದಾರೆ. ಇವು ಅವಕೆಂಪು (infrared) ಕಿರಣಗಳನ್ನು ಸೂಸುತ್ತಿರುತ್ತವೆ. ಇದು ಒಂದು ರೀತಿ ಲಕ್ಷ್ಮಣರೇಖೆಯಂತೆ. ವಾಕ್ಯೂಮ್ ಕ್ಲೀನರ್ ಈ ಕಿರಣವನ್ನು ದಾಟಿ ಹೋಗುವುದಿಲ್ಲ. ಕೋಣೆಯಲ್ಲಿ ಒಂದು ಜಾಗಕ್ಕೆ ಈ ಕ್ಲೀನರ್ ಹೋಗಬಾರದು ಎಂದಿದ್ದಲ್ಲಿ ಈ ಕಿರಣದ ಸಹಾಯ ಪಡೆಯಬಹುದು.

ಈ ನಿರ್ವಾತ ಪೊರಕೆ ಚೆನ್ನಾಗಿ ಕೆಲಸ ಮಾಡುತ್ತದೆ. ಇಡಿಯ ಮನೆಯನ್ನು ಮತ್ತೆ ಮತ್ತೆ ಚಲಿಸಿ ಸ್ವಚ್ಛ ಮಾಡುತ್ತದೆ. ಎಲ್ಲ ನಮೂನೆಯ ಕಸವನ್ನು ಹೀರಿಕೊಳ್ಳುತ್ತದೆ. ಗೋಡೆಯ ಅತಿ ಪಕ್ಕದಲ್ಲಿ ಅಂದರೆ ಗೋಡೆಯಿಂದ ಸುಮಾರು ಒಂದು ಇಂಚಿನ ಒಳಗೆ ಇರುವ ಕಸವನ್ನು ಇದು ಹೀರುವುದಿಲ್ಲ. ಇದು ಕಸವನ್ನು ಹೀರುವುದು ಮಾತ್ರ. ನೆಲವನ್ನು ಒರೆಸುವುದಿಲ್ಲ. ನೆಲಕ್ಕೆ ಗಟ್ಟಿಯಾಗಿ ಅಂಟಿಕೊಂಡ ದೂಳನ್ನು ನೀವು ಒದ್ದೆ ಬಟ್ಟೆ ತೆಗೆದುಕೊಂಡು ಒರೆಸಲೇಬೇಕು. ಈ ರೀತಿ ಒರೆಸಲು ಇದೇ ಕಂಪೆನಿಯವರು ಇನ್ನೊಂದು ಉಪಕರಣ ತಯಾರಿಸಿದ್ದಾರೆ. 

ಒಟ್ಟಿನಲ್ಲಿ ಹೇಳುವುದಾದರೆ ಈ ದುಬಾರಿ ಯಂತ್ರವನ್ನು ಕೊಳ್ಳುವಷ್ಟು ಸ್ಥಿತಿವಂತರು ನೀವಾಗಿದ್ದರೆ ಈ ಬುದ್ಧಿವಂತ ಕಸಸೆಳಕವನ್ನು ನೀವು ಕೊಳ್ಳಬಹುದು. ಇದರ ವಿಡಿಯೊ ­ವಿಮರ್ಶೆ ನೋಡಬೇಕಿದ್ದರೆ bit.ly/2pEQGqe ಕೊಂಡಿ ಕ್ಲಿಕ್ಕಿಸಿ.

*
ವಾರದ ಆ್ಯಪ್- ಭಾರತೀಯ ಡಿಜಿಟಲ್ ಲೈಬ್ರರಿ
ಭಾರತ ಸರ್ಕಾರದವರ ಯೋಜನೆ ಡಿಜಿಟಲ್ ಲೈಬ್ರರಿಯಲ್ಲಿ ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳಿವೆ. ಅದು ಅಂತರಜಾಲದ ಮೂಲಕ ಲಭ್ಯ. ಈಗ ಅದಕ್ಕೆ ಒಂದು ಕಿರುತಂತ್ರಾಂಶ (ಆ್ಯಪ್) ಕೂಡ ಬಂದಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ National Digital Library India ಎಂದು ಹುಡುಕಬೇಕು ಅಥವಾ bitly.com/gadgetloka274 ಜಾಲತಾಣಕ್ಕೆ ಭೇಟಿ ನೀಡಬೇಕು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಕ್ಕೆ (DLI) ಇದು ಮೊಬೈಲ್ ಇಂಟರ್‌ಫೇಸ್. ಅಂದರೆ DLI ಯಲ್ಲಿರುವ ಎಲ್ಲ ಸಮಸ್ಯೆಗಳು ಇಲ್ಲೂ ಇವೆ.

ಬಹುದೊಡ್ಡ ಸಮಸ್ಯೆ ಎಂದರೆ ಹುಡುಕುವಿಕೆ. ಕನ್ನಡ ಪುಸ್ತಕಗಳ ಶೀರ್ಷಿಕೆಯನ್ನು ಇಂಗ್ಲಿಷ್ ಲಿಪಿಯಲ್ಲಿ ಹಲವು ಕಡೆ ತಪ್ಪು ತಪ್ಪಾಗಿ ನೀಡಿದ್ದಾರೆ. ಒಮ್ಮೆ ಡೌನ್‌ಲೋಡ್ ಮಾಡಿಕೊಂಡ ಪುಸ್ತಕವನ್ನು ಪುನಃ ಇದೇ ಕಿರುತಂತ್ರಾಂಶದ ಮೂಲಕ ತೆರೆಯಲು ಸೌಲಭ್ಯ ನೀಡಿಲ್ಲ. ಡೌನ್‌ಲೋಡ್ ಮಾಡಿಕೊಂಡ ಪುಸ್ತಕಗಳು ಪಿಡಿಎಫ್ ರೂಪದಲ್ಲಿ download ಫೋಲ್ಡರಿನಲ್ಲಿರುತ್ತವೆ. ಅಡೋಬ್ ಪಿಡಿಎಫ್ ರೀಡರ್ ಹಾಕಿಕೊಂಡು ಈ ಫೈಲ್‌ಗಳನ್ನು ತೆರೆದು ಓದಬಹುದು.

*
ಗ್ಯಾಜೆಟ್‌ ಸುದ್ದಿ -ಐಫೋನ್ ಜೋಡಿಸಿ ತಯಾರಿಸಲು ಚೀನಾಕ್ಕೆ ಭೇಟಿ
ಅತಿ ದುಬಾರಿ ಐಫೋನ್ ಯಾರಿಗೆ ಗೊತ್ತಿಲ್ಲ? ಐಫೋನ್ ಎಷ್ಟು ದುಬಾರಿಯೆಂದರೆ ಐಫೋನ್ ಕೊಳ್ಳಲು ಕಿಡ್ನಿ ಮಾರಬೇಕು ಎಂಬುದು ತುಂಬ ಪ್ರಸಿದ್ಧ ಜೋಕು ಆಗಿದೆ. ಐಫೋನ್ ಕೆಟ್ಟರೆ ಅದರ ದುರಸ್ತಿಯೂ ಅತಿ ದುಬಾರಿಯೇ. ಕೆಟ್ಟುಹೋದ ಐಫೋನ್‌ಗೆ ಭಾಗಗಳನ್ನು ಮುಕ್ತ ಮಾರುಕಟ್ಟೆಯಿಂದ ಕೊಂಡುಕೊಂಡು ಜೋಡಿಸುವ ಬಗ್ಗೆ ಹಲವು ಬ್ಲಾಗ್‌ಗಳು ವಿಡಿಯೊಗಳು ಲಭ್ಯವಿವೆ. ಹೀಗಿರುವಾಗ ಸ್ಕೋಟ್ಟಿ ಅಲ್ಲೆನ್ ಎಂಬುವರು ಚೀನಾ ದೇಶಕ್ಕೇ ಭೇಟಿ ನೀಡಿದರು.

ಅದರಲ್ಲೇನು ವಿಶೇಷ ಎನ್ನುತ್ತೀರಾ? ಅವರು ಭೇಟಿ ನೀಡಿದ ಉದ್ದೇಶ ಐಫೋನ್‌ನ ಭಾಗಗಳನ್ನು ರಸ್ತೆ ಬದಿಯಿಂದ ಕೊಂಡುಕೊಂಡು ಅವುಗಳನ್ನು ಜೋಡಿಸಿ ಒಂದು ಐಫೋನ್ ತಯಾರಿಸುವುದು. ಒಂಬತ್ತು ತಿಂಗಳು ಚೀನಾದ ಬೀದಿ ಬೀದಿ ಅಲೆದು ಭಾಗಗಳನ್ನು ಕೊಂಡುಕೊಂಡು ಕೊನೆಗೂ ಅವರು ತಮ್ಮ ಐಫೋನ್ ತಯಾರಿಸುವುದರಲ್ಲಿ ಯಶಸ್ವಿಯಾದರು.

*
ಗ್ಯಾಜೆಟ್‌ ಸಲಹೆ -ಮೈನುದ್ದಿನ್ ಚೌಧುರಿ ಅವರ ಪ್ರಶ್ನೆ: ನಾವು ಟೈಪ್ ಮಾಡಿರುವ ಡಾಕ್ಯುಮೆಂಟಿನ ಹಲವಾರು ಪುಟಗಳನ್ನು (pages) ಒಟ್ಟಿಗೆ ಸೇರಿಸಿ, ಒಂದೇ ಪಿ.ಡಿ.ಎಫ್.(PDF) ಫೈಲನ್ನಾಗಿ ಪರಿವರ್ತಿಸಲು ಒಂದು ಉತ್ತಮ ಹಾಗೂ ಉಚಿತ ಆಂಡ್ರಾಯ್ಡ್  ಆ್ಯಪ್ ಯಾವುದು?
ಉ: Private PDF Mini

*
ಗ್ಯಾಜೆಟ್‌ ತರ್ಲೆ 
ಕೆಲವರಿಗೆ ದಿನಕ್ಕೆ ಕನಿಷ್ಠ ನಾಲ್ಕು ಸಂದೇಶಗಳನ್ನು ಯಾರಿಗಾದರೂ ಫಾರ್ವರ್ಡ್ ಮಾಡದಿದ್ದರೆ ನಿದ್ದೆ ಬರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry