ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ, ಜೋಷಿ ಆಸೆಗೆ ತಣ್ಣೀರು ಸುರಿದ ಆದೇಶ

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬದುಕಿನ ಇಳಿಸಂಜೆಯಲ್ಲಿ ತಡಬಡಾಯಿಸಿರುವ ಬಿಜೆಪಿಯ ಕಟ್ಟರ್ ಹಿಂದೂವಾದಿ ನಾಯಕರಿಬ್ಬರಿಗೆ  ರಾಜಕಾರಣದ ಹೊಸ ಉತ್ತುಂಗದ ಬಾಗಿಲುಗಳು ಇನ್ನು ತೆರೆಯಲಾರವು.

ನರೇಂದ್ರ ಮೋದಿ- ಅಮಿತ್ ಷಾ ಜೋಡಿ ಈ ಇಬ್ಬರೂ ನಾಯಕರನ್ನು ಮಾರ್ಗದರ್ಶಕ ಮಂಡಲಿ ಎಂಬ ವಾರ್ಧಕ್ಯ ವಿಶ್ರಾಂತಿ ಗೃಹಕ್ಕೆ ಕಳಿಸಿಬಿಟ್ಟಿತ್ತು. ಆದರೂ ಈ ಹಿರಿಯ ನಾಯಕರ ರಾಜಕೀಯ ಆಶಾದೀಪ ಆರಿರಲಿಲ್ಲ. ಎಂಬತ್ತೊಂಬತ್ತು ವರ್ಷ ವಯಸ್ಸಿನ ಎಲ್.ಕೆ.ಅಡ್ವಾಣಿ ಮತ್ತು ಎಂಬತ್ತೆರಡರ ಡಾ. ಮುರಳಿ ಮನೋಹರ ಜೋಷಿ ಇಬ್ಬರೂ ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿರಿಸಿದ್ದವರು. ಹೊಸ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಕೆಲವೇ ತಿಂಗಳುಗಳಲ್ಲಿ ಆರಂಭ ಆಗಲಿರುವ ಈ ಹಂತದಲ್ಲಿ ಇಬ್ಬರೂ ನಾಯಕರ ನಿರೀಕ್ಷೆಯ ಮೇಲೆ ಸುಪ್ರೀಂ ಕೋರ್ಟ್ ಆದೇಶ ತಣ್ಣೀರು ಸುರಿದಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು 1990ರ ದಶಕಗಳಲ್ಲಿ ದೇಶದಾ­ದ್ಯಂತ ಬಡಿದೆಬ್ಬಿಸಲಾದ ಹಿಂದುತ್ವದ ಅಲೆಯು ಬಾಬರಿ ಮಸೀದಿ ಧ್ವಂಸಕ್ಕೆ ದಾರಿ ಮಾಡಿತ್ತು. ಹಿಂದೂ ರಾಷ್ಟ್ರೀಯತೆ ಸ್ಥಾಪನೆಯ ಪ್ರಬಲ ಪ್ರತಿಪಾದನೆಯನ್ನು ದೇಶದಾದ್ಯಂತ ಮತ್ತೊಮ್ಮೆ ಬಡಿದೆಬ್ಬಿಸಿದ ಬೆಳವಣಿಗೆ ಬಾಬರಿ ಮಸೀದಿ ಧ್ವಂಸ. ಸಂಘ ಪರಿವಾರ ಬಣ್ಣಿಸಿದ ಈ  ‘ಹಿಂದೂ ಜಾಗೃತಿ ಯಜ್ಞ’ದ ಪ್ರಮುಖ ಋತ್ವಿಕ ಲಾಲ್ ಕೃಷ್ಣ ಅಡ್ವಾಣಿಯವರೇ ಆಗಿದ್ದರು. ಪೌರಾಣಿಕ ಯುದ್ಧಗಳಲ್ಲಿ ಬಳಕೆಯಾಗುವುದೆಂದು ಬಣ್ಣಿಸಲಾಗುವ ರಥವೊಂದನ್ನು ಏರಿ ದೇಶದಾದ್ಯಂತ ಯಾತ್ರೆ ನಡೆಸಿದ್ದರು ಅಡ್ವಾಣಿ. ಈ ದಿನಗಳಲ್ಲಿ ತಮಗೆ ಅಂಟಿಕೊಂಡಿದ್ದ ಕಟ್ಟರ್ ಹಿಂದೂವಾದಿಯ ವರ್ಚಸ್ಸನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅವರು ಯಶಸ್ಸು ಕಾಣಲಿಲ್ಲ. ಪಾಕಿಸ್ತಾನದ ಸ್ಥಾಪಕ ಜಿನ್ನಾ ಒಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದರು ಎಂಬ ಅವರ ಹೇಳಿಕೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿ ಅವರ ರಾಜಕಾರಣಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಒಡಿಶಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುರಳಿ ಮನೋಹರ ಜೋಷಿಯವರನ್ನು ವೇದಿಕೆಗೆ ಕರೆದಿದ್ದರು ಮೋದಿಯವರು. ಅವರ ಈ ಚರ್ಯೆ ಜೋಷಿಯವರಿಗೆ ರಾಷ್ಟ್ರಪತಿ ಹುದ್ದೆ ಸಿಕ್ಕೀತು ಎಂಬ ಅಸ್ಪಷ್ಟ ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು.

ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಆದೇಶ, ಈ ಇಬ್ಬರೂ ಹಿರಿಯರ ನಿರೀಕ್ಷೆಯ ಮೇಲೆ ಚಪ್ಪಡಿ ಎಳೆದಿದೆ.

ಚುನಾವಣೆಗಳಲ್ಲಿ ಈಗಲೂ ಕೋಮು ಧ್ರುವೀಕರಣವನ್ನು ಕೂಡ ನೆಚ್ಚುವ ಬಿಜೆಪಿಯು ಇಂದಿನ ಬೆಳವಣಿಗೆಯನ್ನು 2019ರ ಲೋಕಸಭಾ ಚುನಾವಣೆಗಳ ಹೊತ್ತಿನಲ್ಲಿ ಬಳಕೆ ಮಾಡಿಕೊಳ್ಳುವ ಸನ್ನಾಹ ಹೊಂದಿದೆ ಎಂದು ರಾಜಕೀಯ ಪಂಡಿತರ ಒಂದು ವರ್ಗ ವ್ಯಾಖ್ಯಾನಿಸಿದೆ. ಹದಿಮೂರು ನಾಯಕರ ಮೇಲಿನ ಆರೋಪಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಗಡುವು ವಿಧಿಸಿದೆ. ಆನಂತರ ಬಾಬರಿ ಮಸೀದಿ- ರಾಮಮಂದಿರ ವಿವಾದ ಮತ್ತೆ ಭುಗಿಲೆದ್ದರೆ ಅದರ ಲಾಭ ಬಿಜೆಪಿಗೇ ಎಂಬ ಲೆಕ್ಕಾಚಾರವನ್ನು ಈ ಪಂಡಿತರು ಗುರುತಿಸುತ್ತಾರೆ.

ಆದರೆ ರಾಮಮಂದಿರ ನಿರ್ಮಾಣದ ರಾಜಕಾರಣ ತನ್ನ ರಾಜಕೀಯ ಉಪಯುಕ್ತತೆಯನ್ನು ಕಳೆದುಕೊಂಡಿದೆ, ಅದು ಅವಧಿ ತೀರಿರುವ ಹಳೆಯ ಸರಕು ಎಂಬುದು ಹಲವು ರೂಪಗಳಲ್ಲಿ ಹಲವು ರಂಗುಗಳಲ್ಲಿ ಈಗಾಗಲೇ ವ್ಯಕ್ತವಾಗಿರುವ ಭಾವನೆ.

ಅಶೋಕ ಚಟರ್ಜಿ ಕರಸೇವೆಯಲ್ಲಿ ಪಾಲ್ಗೊಂಡ ಆಯೋಧ್ಯೆಯ ಒಬ್ಬ ವ್ಯಾಪಾರಿ. ಸಂಘ ಪರಿವಾರದ ಮುಖವಾಣಿ ‘ಪಾಂಚಜನ್ಯ’ದ ಬಾತ್ಮೀದಾರ. ಈತನ ಪ್ರಕಾರ, ರಾಮಮಂದಿರ ಆಂದೋಲನ ‘ಹಿಂದುತ್ವ ಯೋಜನೆ’ಯ ತನ್ನ ಉದ್ದೇಶವನ್ನು ಈಗಾಗಲೇ ಸಾಧಿಸಿಬಿಟ್ಟಿದೆ. ಈ ಸಾಧನೆಯ ಫಲವೇ 282 ಸೀಟು ಗೆದ್ದು ಪ್ರಧಾನಿಯಾಗಿ ಮೋದಿಯವರ ಅಧಿಕಾರಗ್ರಹಣ.

ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಗೋರಖಪುರದ  ಆದಿತ್ಯನಾಥ ಯೋಗಿ ಅವರು ಸ್ಥಾಪಿಸಿರುವ ಸಂಸ್ಥೆ ಹಿಂದೂ ಯುವವಾಹಿನಿ. ಈ ಸಂಸ್ಥೆಯ ಪ್ರಮುಖ ಪಿ.ಕೆ.ಮಾಲ್ ಪ್ರಕಾರ, ಅವರ ಯೋಜನೆ ಸಮಗ್ರ ಹಿಂದುತ್ವವೇ ವಿನಾ ಕೇವಲ ರಾಮಮಂದಿರ ನಿರ್ಮಾಣ ಅಲ್ಲ.

ಭಯೋತ್ಪಾದಕರ ನಿರ್ಮೂಲನೆ, ದೇಶದ ಗಡಿಗಳ ಬಂದೋಬಸ್ತು, ಜನಸಾಮಾನ್ಯರ ಸ್ಥಿತಿಗತಿ ಸುಧಾರಣೆಯೇ ಬಿಜೆಪಿಯ ಇಂದಿನ ಪರಮ ಆದ್ಯತೆ ಎನ್ನುತ್ತಾರೆ ಲಲ್ಲೂ ಸಿಂಗ್. ಅಯೋಧ್ಯೆಯ ಅವಳಿ ನಗರವಾದ ಫೈಜಾಬಾದ್ ಲೋಕಸಭಾ ಸದಸ್ಯ ಲಲ್ಲೂ ಸಿಂಗ್ 1992ರ ಕರಸೇವೆಯಲ್ಲಿ ಪಾಲ್ಗೊಂಡ­ವರು. ರಾಮಮಂದಿರವನ್ನು ಇಂದಲ್ಲ ನಾಳೆ ಕಟ್ಟಲಾಗುವುದು. ಅಯೋಧ್ಯೆಯ ತನ್ನ ಸ್ಥಾನವನ್ನು ಯಾವಾಗ ಅಲಂಕರಿಸಬೇಕೆಂಬುದನ್ನು ದೇವಾಧಿದೇವ ಶ್ರೀರಾಮನೇ ನಿರ್ಣಯಿಸುತ್ತಾನೆ. ಅಯೋಧ್ಯೆಯ ಅರಸನಾಗಿ ಶ್ರೀರಾಮ ಮಾಡಿದ್ದನ್ನೇ ಇಂದು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ರಾಕ್ಷಸ ಮನಸ್ಥಿತಿ ಹೊಂದಿದ ಭಯೋತ್ಪಾದಕರ ಸಂಹಾರ, ಬಡವರ ಉದ್ಧರಿಸಿ ಅವರನ್ನು ರಾವಣನ ವಿರುದ್ಧ ಹೋರಾಟಕ್ಕೆ ತೊಡಗಿಸಿಕೊಂಡ ರಾಮನ ದಾರಿಯಲ್ಲೇ ನಡೆದಿದ್ದಾರೆ ಮೋದಿ ಎಂಬ ಲಲ್ಲೂ ಮನದಿಂಗಿತ ಸದ್ಯದ ಬಿಜೆಪಿ ಮನದಿಂಗಿತವನ್ನು ಪ್ರತಿಫಲಿಸುತ್ತದೆ.

ಮೋದಿಯವರು ಅಧಿಕಾರಕ್ಕೆ ಬರಲು ಹಿಂದುತ್ವವೇ ಕಾರಣ ಎಂಬುದನ್ನು ಎಲ್ಲರೂ ಬಲ್ಲರು, ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪು ನೀಡಿದ ಮರುಕ್ಷಣವೇ ಮಂದಿರ ನಿರ್ಮಾಣ ಆರಂಭ ಆಗುತ್ತದೆ ಎನ್ನುತ್ತಾರೆ ಅಯೋಧ್ಯೆಯ ಸಂತಶ್ರೇಣಿಯ ಪ್ರಮುಖರಾದ ರಾಘವೇಶ ದಾಸ ವೇದಾಂತಿ.

ಅತ್ತ ಅಯೋಧ್ಯೆಯ ಕರಸೇವಕಪುರಂನಲ್ಲಿ ಭವ್ಯ ರಾಮಮಂದಿರದ ಸವಿವರ ಪ್ರತಿಕೃತಿಗೆ ಕಟ್ಟೆಚ್ಚರದ ಕಾವಲು ಇರಿಸಲಾಗಿದೆ. ಕಲ್ಲುಗಳನ್ನು ಹೊಳಪುಗೊಳಿಸುವ, ಕಂಬಗಳನ್ನು ಕಡೆದು ಜೋಡಿಸಿಡುವ, ಅಮೃತಶಿಲೆಯಲ್ಲಿ ವಿನ್ಯಾಸಗಳನ್ನು ಕೆತ್ತಿಡುವ ಕೆಲಸ ನಿಲ್ಲದೆ ನಡೆದಿದೆ. ಬಾಬರಿ ಮಸೀದಿ ಧ್ವಂಸದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಕಾಶಿ ಸಮೀಪದ ಹಳ್ಳಿಯ ನಿವಾಸಿ ಹಜಾರಿಲಾಲ್ 32 ವರ್ಷದ ಯುವಕ. ಈಗ ಕರಸೇವಕಪುರಂನಲ್ಲಿ ಆತನದೇ ಕಾರುಬಾರು. ಆದರೆ ಮಂದಿರ ತಲೆಯೆತ್ತುವುದೋ ಇಲ್ಲವೋ ಎಂಬುದು ಆತನೂ ಅರಿಯದ ಸಂಗತಿ.

ಲೈಬರ್ಹಾನ್ ಆಯೋಗ ಹೇಳಿದ್ದೇನು?

ನ್ಯಾಯಮೂರ್ತಿ ಲೈಬರ್ಹಾನ್ ವಿಚಾರಣಾ ಆಯೋಗವನ್ನು ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರ 1992ರ ಡಿಸೆಂಬರ್ 16ರಂದು ರಚಿಸಿತು. ಮೂರು ತಿಂಗಳೊಳಗೆ ವರದಿ ನೀಡಬೇಕಿದ್ದ ಈ ಆಯೋಗ 48 ವಿಸ್ತರಣೆಗಳನ್ನು ಪಡೆಯಿತು. ಹದಿನೇಳು ವರ್ಷಗಳ ನಂತರ 2009ರಲ್ಲಿ ವರದಿ ಸಲ್ಲಿಸಿತು.

ವರದಿಯ ಪ್ರಕಾರ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣಸಿಂಗ್ ಸೇರಿದಂತೆ 68 ಮಂದಿಯನ್ನು ದೋಷಿಗಳೆಂದು ಸಾರಿತು.

ಬಾಬರಿ ಮಸೀದಿ ಧ್ವಂಸದ ಪ್ರಧಾನ ವಾಸ್ತುಶಿಲ್ಪಿಯೆಂದು ಆರ್ಎಸ್ಎಸ್ ಅನ್ನು ಕರೆಯಿತು. ವಾಜಪೇಯಿ, ಅಡ್ವಾಣಿ,  ಜೋಷಿ ತ್ರಿವಳಿಯನ್ನು ಸಂಘ ಪರಿವಾರದ ಹುಸಿ ಸೌಮ್ಯವಾದಿಗಳು ಎಂದು ಬಣ್ಣಿಸಿತು. ಇಡೀ ಒಳಸಂಚಿನ ಅರಿವಿದ್ದ ಈ ತ್ರಿವಳಿ, ರಾಮಜನ್ಮಭೂಮಿ ಆಂದೋಲನದಿಂದ ದೂರ ಕಾಪಾಡಿಕೊಂಡಿರುವ ನಟನೆ ಮಾಡಿದರು. ಮಸೀದಿಯ ಧ್ವಂಸಕ್ಕೆ ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಈ ತ್ರಿವಳಿಯೇ ಕಾರಣ ಎಂದಿದೆ. ಸಂಘ ಪರಿವಾರವನ್ನು ಕಾರ್ಪೊರೇಟೀಕರಣಗೊಂಡ ರಾಜಕೀಯ ಪಕ್ಷವೊಂದರ ಅತ್ಯಂತ ಯಶಸ್ವಿ ಮಾದರಿ. ಬಿಜೆಪಿಯ ಆರ್ಎಸ್ಎಸ್‌ನ ಬಾಲಂಗೋಚಿ. ಸಂಘ ಪರಿವಾರದ ಮುಖವಾಡ ಎಂದಿದೆ.

ಬಾಬರಿ ಮಸೀದಿಯನ್ನು ಕೆಡವಿದಾಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‌ ಸಿಂಗ್, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ, ಮುಲಾಯಂ ಸಿಂಗ್ ಮುಂತಾದವರ ಹೇಳಿಕೆಗಳನ್ನು ಆಯೋಗ ದಾಖಲಿಸಿತು. ಬಿಬಿಸಿ ಪತ್ರಕರ್ತ ಮಾರ್ಕ್ ಟಲಿ, ಅಂದಿನ ಆರ್‌ಎಸ್‌ಎಸ್‌ ಪ್ರಮುಖ ಕೆ.ಎಸ್.ಸುದರ್ಶನ್, ಜ್ಯೋತಿ ಬಸು, ವಿ.ಪಿ.ಸಿಂಗ್, ವಿನಯ ಕಟಿಯಾರ್, ಪಿ.ವಿ.ನರಸಿಂಹರಾವ್, ಅಶೋಕ್ ಸಿಂಘಲ್ ಮುಂತಾದ ನೂರಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿತು.

ನರಸಿಂಹರಾವ್ ನೇತೃತ್ವದ ಅಂದಿನ ಕೇಂದ್ರ ಸರ್ಕಾರದ ಮೇಲೆ ಈ ಆಯೋಗ ಯಾವ ದೋಷವನ್ನೂ ಹೊರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT