ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೇದಾರಿ ‘ಪ್ರತಿಭೆ’ಗೆ ಸಾಣೆ ಹಿಡಿಯುವ ಕೋರ್ಸ್‌

ಬೆಳಗಾವಿಯ ಆರ್‌ಸಿಯುನಲ್ಲಿದೆ ಅಪರಾಧಶಾಸ್ತ್ರ ಹಾಗೂ ನ್ಯಾಯವಿಜ್ಞಾನ
Last Updated 20 ಏಪ್ರಿಲ್ 2017, 10:30 IST
ಅಕ್ಷರ ಗಾತ್ರ

ಬೆಳಗಾವಿ: ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದು ಸವಾಲಿನ ಸಂಗತಿಯೇ ಸರಿ. ಇಂಥ ಪ್ರಕರಣಗಳನ್ನು ಭೇದಿಸುವ ಕೌಶಲವುಳ್ಳವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಹೀಗೆ ಕೌಶಲ ಸಾಧಿಸಲು ನೆರವಾಗುವ ಹಾಗೂ ಪತ್ತೇದಾರಿ ಪ್ರತಿಭೆ ಉಳ್ಳವರಿಗೆ ಸಾಣೆ ಹಿಡಿಯುವ, ಅವರಿಗೆ ವೈಜ್ಞಾನಿಕವಾಗಿ ಕಲಿಸುವ ಉದ್ದೇಶದಿಂದ ‘ಅಪರಾಧಶಾಸ್ತ್ರ ಹಾಗೂ ನ್ಯಾಯವಿಜ್ಞಾನ’ ಕೋರ್ಸ್‌ ಅನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅರಂಭಿಸಿದೆ.
ಐದು ವರ್ಷಗಳ ಈ ಸಂಯೋಜಿತ ಕೋರ್ಸ್‌ಗೆ ದ್ವಿತೀಯ ಪಿ.ಯು ಅಥವಾ ತತ್ಸಮಾನ ಶಿಕ್ಷಣದಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದು ಉತ್ತೀರ್ಣರಾದವರು ಪ್ರವೇಶ ಪಡೆಯಲು ಅರ್ಹರು.

ಅಪರಾಧಶಾಸ್ತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಮಾಡುವುದು, ವೃತ್ತಿಪರರನ್ನಾಗಿಸುವ ಉದ್ದೇಶದಿಂದ ಈ ಕೋರ್ಸ್‌ ಆರಂಭಿಸಲಾಗಿದೆ. ಬೋಧನೆ ಜೊತೆಗೆ ಪ್ರಾಯೋಗಿಕ ತರಬೇತಿಗಳ ಮೂಲಕ ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ರೂಪಿಸಲಾಗುತ್ತದೆ. ಪೊಲೀಸ್‌, ಜೈಲು ಸುಧಾರಣೆ, ಆಡಳಿತ ಸುಧಾರಣೆ, ನ್ಯಾಯವಿಜ್ಞಾನ, ಅಪರಾಧ ಕಾನೂನು ಹಾಗೂ ಅಪರಾಧಶಾಸ್ತ್ರೀಯ ಸಂಶೋಧನೆ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಬೋಧಿಸಲಾಗುತ್ತದೆ.

ಆಸಕ್ತರು, ತಮ್ಮದೇ ಆದ ಡಿಟೆಕ್ಟಿವ್ ಏಜೆನ್ಸಿ ಆರಂಭಿಸಿಕೊಂಡು ಉದ್ಯೋಗ ಕಂಡುಕೊಳ್ಳಬಹುದು; ಒಂದಷ್ಟು ಜನರಿಗೆ ಕೆಲಸವನ್ನೂ ಕೊಡಬಹುದು. ಇಂಥದೊಂದು ಧೈರ್ಯ ಹಾಗೂ ಸ್ಥೈರ್ಯ ಹೊಂದುವ ನಿಟ್ಟಿನಲ್ಲಿ ಕೌಶಲವನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ.

‘ಕೋರ್ಸ್‌ಗೆ ಜೂನ್‌–ಜುಲೈನಲ್ಲಿ ಪ್ರವೇಶ ಪ್ರಕ್ರಿಯೆ ಪ್ರಕ್ರಿಯೆ ಆರಂಭವಾಗುತ್ತದೆ. ಮೂರು ವರ್ಷ ಅಧ್ಯಯನ ನಡೆಸಿದ ಬಳಿಕ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ನೀಡಲಾಗುತ್ತಿದೆ. ಆ ನಂತರ ಬೇರೆ ಸ್ನಾತಕ ಪದವಿಯನ್ನೂ ಪಡೆಯಲು ಅವಕಾಶವಿದೆ. ಈ ಕೋರ್ಸ್‌ನಲ್ಲಿ ಐದು ವರ್ಷ ಅಧ್ಯಯನ ನಡೆಸಿದವರಿಗೆ ಸ್ನಾತಕೋತ್ತರ ಪದವಿ ನೀಡಲಾಗುತ್ತದೆ. ಈ ಸಾಲಿಗೆ ಗರಿಷ್ಠ 25 ಮಂದಿಗೆ ಪ್ರವೇಶಾವಕಾಶ ದೊರೆಯಲಿದೆ’ ಎಂದು ವಿಭಾಗದ ಸಹ ಪ್ರಾಧ್ಯಾಪಕ ಡಾ.ಆರ್‌.ಎನ್‌. ಮನಗೋಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ನಾಲ್ಕನೇ ಬ್ಯಾಚ್‌ ಹೊರಬರುತ್ತಿದೆ. ಈ ಕೋರ್ಸ್‌ ಮುಗಿಸಿದವರು ಸೆಕ್ಯುರಿಟಿ ಏಜೆನ್ಸಿಗಳು, ಏರ್‌ಇಂಡಿಯಾ, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ (ಕೆ–ಸೆಟ್‌) ಅಪರಾಧಶಾಸ್ತ್ರ ವಿಷಯದಲ್ಲಿ ತೇರ್ಗಡೆಯಾದವರಲ್ಲಿ ನಮ್ಮ ವಿಭಾಗದವರು ಗಮನಾರ್ಹ ಸಾಧನೆ ಮಾಡಿದ್ದಾರೆ’ ಎನ್ನುತ್ತಾರೆ ಅವರು. ಪ್ರವೇಶ ಪ್ರಕ್ರಿಯೆ ಮೊದಲಾದ ಮಾಹಿತಿಗೆ ಮೊ: 94481 68129 (ಡಾ. ಆರ್‌.ಎನ್‌. ಮನಗೂಳಿ) ಸಂಪರ್ಕಿಸಬಹುದು.

ಉದ್ಯೋಗಾವಕಾಶ
ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳಿವೆ. ಪೊಲೀಸ್‌ ಇಲಾಖೆ, ಕಾರಾಗೃಹ, ಬಾಲ ನ್ಯಾಯ ಮಂಡಳಿ, ವಿಧಿವಿಜ್ಞಾನ ಪ್ರಯೋಗಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ, ಖಾಸಗಿ ತನಿಖಾ ಸಂಸ್ಥೆ, ಬಿಪಿಆರ್‌ಡಿ (ಬ್ಯೂರೊ ಅಫ್‌ ಪೊಲೀಸ್‌ ರಿಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌), ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳಿವೆ. ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಬೋಧನೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಅರ್ಹತೆ ಗಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT