ಗುಹೆಗಳ ಮಾಯಾಲೋಕ ಮೇಘಾಲಯ

7

ಗುಹೆಗಳ ಮಾಯಾಲೋಕ ಮೇಘಾಲಯ

Published:
Updated:
ಗುಹೆಗಳ ಮಾಯಾಲೋಕ ಮೇಘಾಲಯ

ಮೇಘಾಲಯ ರಾಜ್ಯ ಸುಂದರವಾದ ಕಾಡು, ಕಣಿವೆ, ಪರ್ವತ ಶ್ರೇಣಿಗಳು ಮತ್ತು ಭೋರ್ಗರೆಯುವ ಜಲಪಾತಗಳ ಪುಟ್ಟ ನಾಡು. ದಟ್ಟ ಮೇಘಗಳು ಇಲ್ಲಿ ಆಲಯ ಕಟ್ಟಿಕೊಂಡು, ಧಾರಕಾರವಾಗಿ ಮಳೆ ಸುರಿಯುವುದರಿಂದ ಈ ರಾಜ್ಯಕ್ಕೆ ‘ಮೇಘಾಲಯ’ ಎನ್ನುವ ಹೆಸರು ಬಂದಿದೆ.

ಇಲ್ಲಿನ ಪರ್ವತಗಳಲ್ಲಿ ಗುಪ್ತಗಾಮಿನಿಯಾಗಿ ನೂರಾರು ನದಿ, ತೊರೆ, ಝರಿಗಳು ಹರಿಯುತ್ತವೆ, ಜಲಪಾತಗಳು ಧುಮುಕುತ್ತವೆ, ನೆಲದೊಳಗೆ ಸರೋವರಗಳು ಅಡಗಿಕುಳಿತಿವೆ. ಇಲ್ಲಿನ ಸುಣ್ಣ ಮತ್ತು ಮರಳು ಶಿಲೆಗಳಲ್ಲಿ ಸಾವಿರಾರು ಗುಹೆಗಳು ನಿರ್ಮಾಣಗೊಂಡಿವೆ. ವರ್ಷಕ್ಕೆ ಸರಾಸರಿ 26,461 ಮಿ.ಮೀ. ಮಳೆ ಬೀಳುವ ಚಿರಾಪುಂಜಿ (ಸೋಹರಾ) ಮತ್ತು ಮಯ್‌ಸಿನ್ರಾಮ್ ಇರುವುದು ಇದೇ ಪರ್ವತಗಳಲ್ಲಿ.22,500 ಚದರ ಕಿ.ಮೀ. ವಿಸ್ತೀರ್ಣದ ಈ ಪುಟ್ಟ ರಾಜ್ಯದಲ್ಲಿ ಎಲ್ಲೆಲ್ಲೂ ಕಡಿದಾದ ಕಣಿವೆ, ತಪ್ಪಲು, ಪರ್ವತ ಶಿಖರಗಳು ಮತ್ತು ಜಲಪಾತಗಳೇ ಕಾಣಿಸುತ್ತವೆ. ಪ್ರಪಂಚದ ಅತಿ ಅದ್ಭುತ ರಮಣೀಯ ಗುಹೆಗಳ ಪಟ್ಟಿಗೆ ಸೇರಿರುವ ನೂರಾರು ಗುಹೆಗಳು ಮೇಘಾಲಯದಲ್ಲಿದ್ದು, ಪ್ರಪಂಚದ ಗುಹಾನಕ್ಷೆಯಲ್ಲಿ ಹೆಸರು ಪಡೆದಿವೆ.ಇದುವರೆಗೂ ಮೇಘಾಲಯದಲ್ಲಿ ಸಾವಿರಕ್ಕಿಂತ ಹೆಚ್ಚು ಗುಹೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸುಮಾರ 700 ಗುಹೆಗಳಲ್ಲಿ ಗುಹಾ ಸಂಶೋಧಕರು/ವಿಜ್ಞಾನಿಗಳು ಸಂಶೋಧನೆ ನಡೆಸಿ, ನಕ್ಷೆಗಳು ಮತ್ತು ಇನ್ನಿತರ ವಿವರಗಳನ್ನು ಸಂಗ್ರಹಿಸಿದ್ದಾರೆ.

ದೇಶದಲ್ಲಿಯೇ ಉದ್ದವಾದ ಮೊದಲ 20 ಗುಹೆಗಳಲ್ಲಿ (18ನೇ ಗುಹೆ ಆಂಧ್ರಪ್ರದೇಶ, 7ನೇ ಗುಹೆ ಮಿಜೋರಾಂ) 18 ಗುಹೆಗಳು ಮೇಘಾಲಯದಲ್ಲಿಯೇ ಇವೆ. ಅವುಗಳ ಉದ್ದ 20.20 ಕಿ.ಮೀ.ನಿಂದ 3.4 ಕಿ.ಮೀ.ವರೆಗೂ ಮತ್ತು ಆಳ 317 ಮೀಟರ್‌ನಿಂದ 111 ಮೀಟರ್‌ವರೆಗೂ ಇದೆ.ಕಥೆ ಹೇಳುವ ಗುಹೆಗಳು

ಗುಹೆಗಳು ಮಾನವ ಇತಿಹಾಸದ ಮೊದಲ ನಾಗರಿಕ ತೊಟ್ಟಿಲುಗಳು. ಆದಿಮಾನವ 50 ಲಕ್ಷ ವರ್ಷಗಳ ಹಿಂದೆ ಮರಗಳಿಂದ ಕೆಳಗಿಳಿದು ಬಂದು ಮೊದಲು ಆಶ್ರಯ ಪಡೆದಿದ್ದು ಗುಹೆಗಳಲ್ಲೇ. ಅವನ ಬುದ್ಧಿ ಹಂತಹಂತವಾಗಿ ಬೆಳೆಯಲು ಪ್ರಾರಂಭವಾಗಿದ್ದು ಗುಹೆಗಳಲ್ಲಿ.

ಚಿತ್ರಕಲೆ ಅರಳಿದ್ದು, ಪ್ರಾಣಿಗಳನ್ನು ಬೇಟೆಯಾಡಲು ಕಲಿತಿದ್ದು, ಬೆಂಕಿ ಕಂಡುಕೊಂಡಿದ್ದು ಗುಹೆಗಳಲ್ಲಿ ಇದ್ದಾಗಲೇ. ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು 20 ಸಾವಿರ ವರ್ಷಗಳ ಹಿಂದಿನವರೆಗೂ ಮನುಷ್ಯ ಗುಹೆಗಳಲ್ಲೇ ಆಶ್ರಯ ಪಡೆದಿದ್ದ. ಅನಂತರ ಬಯಲಿಗೆ ಬಂದು ಗುಡಿಸಿಲು ಕಟ್ಟಿಕೊಳ್ಳಲು ಪ್ರಾರಂಭಿಸಿದ. ಕ್ರಮೇಣ, ನದಿ ದಂಡೆಗಳು ನಾಗರಿಕತೆಯ ತೊಟ್ಟಿಲುಗಳಾದವು. ಮೇಘಾಲಯದ ಮಧ್ಯ ಪ್ರಾಂತ್ಯದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 300 ಕಿ.ಮೀ. ಉದ್ದಕ್ಕೂ ಕಾಶಿ, ಜಯಂತಿ ಮತ್ತು ಘಾರೋ ಪರ್ವತಗಳಲ್ಲಿ (ಕಾಶಿ, ಜಯಂತಿ, ಘಾರೋ ಬುಡಕಟ್ಟು ಹೆಸರುಗಳು) ಈ ಗುಹೆಗಳು ಹರಡಿಕೊಂಡಿವೆ. ಈ ಭಾಗದ ಇಂದಿನ ಪರ್ವತಗಳು ಬಹಳಷ್ಟು ಕಾಲ ಸಮುದ್ರದ ಅಂಚು ಅಥವಾ ಒಳಗಿದ್ದ ಪ್ರದೇಶವಾಗಿದ್ದವು.

ಸ್ಥಳೀಯರು ಬಹಳಷ್ಟು ಗುಹೆಗಳ ಜೊತೆಗೆ ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಿಕೊಂಡಿದ್ದು, ಹಲವು ಗುಹೆಗಳು ನಂಬಿಕೆಯ ತಾಣಗಳಾಗಿ ಇಂದಿಗೂ ಉಳಿದುಕೊಂಡಿವೆ. ಆರೋಗ್ಯ ಕೆಟ್ಟಾಗ ಕೋಳಿ, ಆಡುಗಳನ್ನು ಬಲಿಕೊಟ್ಟು ಪೂಜೆ ಮಾಡಿಕೊಂಡು ಬರುವ, ಜಾತ್ರೆ ನಡೆಸುವ ಸ್ಥಳಗಳು ಇವಾಗಿವೆ. ಮಳೆಗಾಲದಲ್ಲಿ ಜಾನುವಾರುಗಳ ತಂಗುದಾಣಗಳನ್ನಾಗಿ ಗುಹೆಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಗುಹೆಗಳಿಗೆ ಸಂಬಂಧಿಸಿದಂತೆ ಅದ್ಭುತ ಜನಪದ ಕಥೆಗಳು ಇಲ್ಲಿ ಜನಜನಿತವಾಗಿವೆ.ಮುಗಿಯದ ಹುಡುಕಾಟ

ಬ್ರಿಟಿಷರು ಮತ್ತು ಜಯಂತಿ ರಾಜರ ಮಧ್ಯೆ ಯುದ್ಧ ನಡೆದಾಗ ರಾಜರು ಸಿಂಡಯ್ ಗುಹೆಗಳಲ್ಲಿ ಅಡಗಿಕೊಳ್ಳುತ್ತಿದ್ದರೆಂದು 1820ರಲ್ಲಿ ವಾಲ್ಟರ್ ದಾಖಲಿಸಿದ್ದಾರೆ. 1827ರ ಸುಮಾರಿನಲ್ಲಿ ಕ್ಯಾಪ್ಟನ್ ಜೇಮ್ಸ್ ಭುಬನ್ ಮತ್ತು ವಾಲ್ಟರ್ ಭುವನ್ ಗುಹೆಗಳನ್ನು ಸಂಶೋಧಿಸಿದ್ದರು. ಇದರಲ್ಲಿ ಇಂದಿಗೂ ಸ್ಥಳೀಯರು ಎರಡು ವರ್ಷಕ್ಕೊಮ್ಮೆ ಬುಡಕಟ್ಟು ಸಂಪ್ರದಾಯದ ಹಬ್ಬಗಳನ್ನು ಆಚರಿಸುತ್ತಾರೆ.1830–1850ರ ಮಧ್ಯೆ ಚಿರಾಪುಂಜಿಯ ಸುತ್ತಲಿರುವ ಅನೇಕ ಗುಹೆಗಳನ್ನು ಬ್ರಿಟಿಷರು ಶೋಧಿಸಿದ್ದರು. ಇದೇ ಕಾಲದಲ್ಲಿ ಚಿರಾಪುಂಜಿ ಪ್ರದೇಶದಲ್ಲಿ ಧುಮುಕುವ ಕೆಲವು ಜಲಪಾತಗಳು ದಟ್ಟ ಕಾಡು–ಪರ್ವತಗಳ ನಡುವೆ ಕಣ್ಣಿಗೆ ಕಾಣದೆ ಅನಾಮಿಕವಾಗಿಯೇ ಉಳಿದಿರುವುದನ್ನು ಗಮನಿಸಿ ಸಂಶೋಧನೆ ನಡೆಸಿದ್ದರು. ಕೆಲವು ನದಿಗಳು ಸುಣ್ಣದ ಶಿಲೆಗಳ ಒಳಗಿನ ಗುಹೆಗಳ ಮೂಲಕ ಭೂಗರ್ಭದಲ್ಲಿ ಹರಿದು, ಬಾಂಗ್ಲಾ ದೇಶದ ಬಯಲುಗಳನ್ನು ತಲುಪುವುದು ತಿಳಿಯಿತು.

ಭೂವಿಜ್ಞಾನಿ ಥಾಮಸ್ ಒಲ್ಡ್‌ಹ್ಯಾಮ್ ಇಂತಹ ಅನೇಕ ಜಲಪಾತಗಳು ಮತ್ತು ಗುಹೆಗಳ ನಡುವಿನ ಸಂಬಂಧಗಳನ್ನು ತೋರಿಸಿಕೊಟ್ಟರು. 1867ರಲ್ಲಿ ಗಾಡ್ವಿನ್ ಆಸ್ಟಿನ್, ಘಾರೋ ಪರ್ವತಗಳ ಮಧ್ಯ ಚಿಬಕ್ ಎಂಬ ದೊಡ್ಡ ನದಿ ಭೂಮಿಯ ಒಳಗಿಂದ ಹೊರಗಡೆಗೆ ಚಿಮ್ಮಿ ಹರಿಯುತ್ತಿರುವುದನ್ನು ನೋಡಿದರು.

1875ರಲ್ಲಿ ಸುಂಡರ್ಸನ್ ಎನ್ನುವವರು, ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕೆಲಸದಲ್ಲಿ ತೊಡಗಿದ್ದಾಗ ‘ಡೊಬೋಕೊಲ್’ ಎಂಬ ಸ್ಥಳದಲ್ಲಿ ಒಂದು ಗುಹೆಯ ಬಾಯಿಯ ಹತ್ತಿರಕ್ಕೆ ತಲುಪಿದರು. ಆ ಗುಹೆಯಲ್ಲಿ ಇಡೀ ದಿನ ಕಳೆದು 1190 ಮೀಟರ್ ದೂರ ನಡೆದು– ಅಲ್ಲೊಂದು ಸೀಸೆಯ ಮೇಲೆ ತಾನು ತಲುಪಿದ ವಿಷಯ ಬರೆದಿಟ್ಟು ಬಂದಿದ್ದರು. ಅದನ್ನು 1917ರಲ್ಲಿ ಸ್ಟಾನ್ಲೆ ಕೆಂಪ್ ಮತ್ತು ಮೋಪು ಗುಹೆಯ ನಕ್ಷೆ ಮಾಡುವಾಗ ಪತ್ತೆಹಚ್ಚಿ ತಂದಿದ್ದರು.ಬಿಸಿಲನ್ನೇ ಕಾಣದ ಜೀವಿಗಳು!

ಇಲ್ಲಿನ ಗುಹೆಗಳಲ್ಲಿ ತಲೆಮಾರುಗಳಿಂದ ಜೀವಿಸುವ ಬಹಳಷ್ಟು ಪ್ರಾಣಿಗಳು ಬಿಸಿಲನ್ನೇ ಕಂಡಿಲ್ಲ. ಹಾಗಾಗಿ ಅವು ತೆಳ್ಳಗೆ ಬಿಳುಪಾಗಿ ಕೂದಲು, ರೆಕ್ಕೆ, ಕಣ್ಣುಗಳಿಲ್ಲದಾಗಿವೆ. ಜೇಡ, ಚೇಳು, ಬಸವನ ಹುಳು, ಕ್ರಿಕೆಟ್ಸ್, ಜಿರಳೆ, ಜೀರುಂಡೆ, ಇರುವೆ, ಏಡಿ, ಕಪ್ಪೆ, ಮೀನು, ಹಲ್ಲಿ ಇತ್ಯಾದಿ ಪ್ರಾಣಿಗಳು ಇಲ್ಲಿವೆ.

ಕಣ್ಣು ಕಾಣದ ಬಾವಲಿಗಳಂತೂ ಮಿಲಿಯಗಟ್ಟಲೆ ಇವೆ. ಹುಲಿ, ಸಿಂಹ, ಚಿರತೆ, ತೋಳ, ಕರಡಿ, ಆನೆ ಇನ್ನಿತರ ಪ್ರಾಣಿಗಳು ಕೆಲವು ಗುಹೆಗಳನ್ನು ಮನೆ ಮಾಡಿಕೊಂಡಿವೆ. ಆಳವಾದ ಗುಹೆಗಳ ಒಳಗೆ ಬಿದ್ದು ಸತ್ತ ಪ್ರಾಣಿಗಳೆಷ್ಟೋ? ರಸ್ತೆ ಪಕ್ಕದಲ್ಲಿದ್ದ ಗುಹೆಯೊಂದಕ್ಕೆ ಒಂದು ಟ್ರಕ್ಕು ಬಿದ್ದು ಅದರಲ್ಲಿದ್ದವರೆಲ್ಲ ಪ್ರಾಣ ಕಳೆದುಕೊಂಡಿದ್ದರು.ಅಮೆರಿಕ ಮತ್ತು ಯುರೋಪ್ ದೇಶಗಳ ಗುಹಾ ಸಂಶೋಧಕರು Caving in the abode of the clouds ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ, 1992ರಿಂದ ಪ್ರತಿವರ್ಷವೂ ಇಲ್ಲಿಗೆ ಬಂದು ಫೆಬ್ರುವರಿ–ಮಾರ್ಚ್‌ನಲ್ಲಿ ಸಂಶೋಧನೆ ನಡೆಸಿ ಹೋಗುತ್ತಾರೆ.

ಮೇಘಾಲಯದ ಬ್ರಿಯನ್ ಕೆರ್‌ಪ್ರನ್ ಡೆಲಿ ಎಂಬವರು, Adventure associationನ ಕಾರ್ಯದರ್ಶಿಯಾಗಿದ್ದಾರೆ. ಗುಹೆಗಳ ಬಗ್ಗೆ ಆಸಕ್ತಿ ಇರುವವರು ಬ್ರಿಯನ್ ಕೆರ್‌ಪ್ರನ್ ಡೆಲಿ ಮತ್ತು ಮೇಘಾಲಯ ಸರ್ಕಾರವನ್ನು ಸಂಪರ್ಕಿಸಬಹುದು.ಗುಹೆಗಳ ಅದ್ಭುತ ಸೌಂದರ್ಯ

ಇಲ್ಲಿನ ಕೆಲವು ನದಿಗಳು ತಮ್ಮ ಹರಿವಿಗೆ ಅಡ್ಡ ಬರುವ ಬೆಟ್ಟಗಳನ್ನೇ ಕೊರೆದು ಕರಗಿಸಿ ಗುಹೆಗಳ ಒಳಗೆ ನುಗ್ಗಿ ಹರಿಯುತ್ತಿವೆ. ಇಂಥ ಕಡೆಗಳಲ್ಲೆಲ್ಲ ಪರ್ವತಗಳು ನದಿಗಳಿಗೆ ದಾರಿಮಾಡಿಕೊಟ್ಟು, ಮೈಯೆಲ್ಲ ರಂಧ್ರಗಳನ್ನು ಮಾಡಿಕೊಂಡು ನಿಂತಿವೆ. ಕೆಲವು ಗುಹೆಗಳು ಸುರಂಗಗಳಂತಿದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸೂರ್ಯನ ಬೆಳಕನ್ನು ನೋಡಬಹುದು.

‘ಕ್ರೆಮ್ ಲಿಮ್‌ಪುಟ್’ ಎಂಬ ಗುಹೆಯಲ್ಲಿ– 25 ಮೀ. ಅಗಲ, 25 ಮೀ. ಎತ್ತರ ಮತ್ತು 75 ಮೀ. ಉದ್ದದ ಗ್ಯಾಲರಿ ಇದ್ದು, ಅದನ್ನು ‘ಮೊಗಲ್ಸ್‌ ರೂಂ’ ಎಂದು ಹೆಸರಿಸಲಾಗಿದೆ. ‘ಕ್ರೆಮ್ ಡಿಯಂಗ್ನ್‌ಯ್’ ಗುಹೆ ಕೇವಲ 116 ಮೀ. ಉದ್ದವಿದ್ದು, ಅದರ ಒಳಕ್ಕೆ ಬೆಳಕು ಬಿದ್ದಾಗ ನೂರಾರು ಕ್ಯಾಂಡಲ್ ಹಚ್ಚಿದ ಚರ್ಚ್‌ನಂತೆ ಕಂಗೊಳಿಸುತ್ತದೆ. ‘ಕ್ರೆಮ್‌ಕುಟ್ ಸ್ಯುಟಂಗ್’ ಗುಹೆಯಲ್ಲಿ ಅವಿತುಕೊಂಡ ಸ್ಥಳೀಯರು ಬ್ರಿಟಿಷರ ಮೇಲೆ ವಿಷ ಬಾಣಗಳ ಮಳೆಗೆರೆದು ನೂರಾರು ಬ್ರಿಟಿಷ್ ಯೋಧರನ್ನು ಸಾಯಿಸಿದ್ದರು.ಗುಹೆಗಳ ಒಳಗಿನ ಕಲೆ ಬಣ್ಣಿಸಲಾರದಷ್ಟು ವೈವಿಧ್ಯಮಯ. ಇದೆಲ್ಲ ಸಾವಿರಾರು ವರ್ಷಗಳ ನೈಸರ್ಗಿಕ ಕುಸುರಿ ಕಲೆಯ ಫಲ. ಗುಹೆಗಳು ಅಗಾಧವಾಗಿದ್ದು ಆಕಾರವಿಲ್ಲದ ಹಳ್ಳಗಳಂತೆ, ಛಾವಣಿ ಇಲ್ಲದ ಆಕಾಶ ಕಾಣುವ ಸುರಂಗಗಳಂತೆ, ಆಳಕ್ಕೆ ಇಳಿದ ಗಣಿ ಶ್ಯಾಪ್ಟ್‌ಗಳಂತೆ, ಮೇಲೆ ಗುಮ್ಮಟಗಳಂತೆ ಮತ್ತು ಹತ್ತಾರು ಬಾಗಿಲುಗಳಿರುವ ಸಂಕೀರ್ಣ ಗುಹೆಗಳಂತೆ ರೂಪುಗೊಂಡಿವೆ. ಕೆಲವೊಮ್ಮೆ ಕಾಮನಬಿಲ್ಲು ಬಣ್ಣಗಳ ಕಲ್ಲುಹೂವುಗಳು, ಸೂರ್ಯನ ಬೆಳಕಿನ ಕಿಟಿಕಿಗಳನ್ನು ಹೊಂದಿರುವ ಗುಹೆಗಳು ಎದುರಾಗಿ ನೋಡುಗರನ್ನು ಸೆಳೆಯುತ್ತವೆ.ಮೇಘಾಲಯದಲ್ಲಿ ಇಷ್ಟೆಲ್ಲ ವೈವಿಧ್ಯಮಯ ಗುಹೆಗಳಿದ್ದರೂ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲಿ ಪ್ರವಾಸಿಗರನ್ನು ಆಕರ್ಷಿಸುವ ಯಾವ ಸವಲತ್ತುಗಳನ್ನು ಇದುವರೆಗೂ ಮಾಡಿಲ್ಲ. ಈ ಗುಹೆಗಳಿಗೆ ಬಣ್ಣಬಣ್ಣದ ಬೆಳಕಿನ ದೀಪಗಳನ್ನು ಅಳವಡಿಸಿ, ಒಳ್ಳೆಯ ರಸ್ತೆಗಳನ್ನು ಮಾಡಿ ಪ್ರವಾಸಿಗರನ್ನು ಆಕರ್ಷಿಸಿದರೆ ದೇಶದ ಪ್ರವಾಸೋದ್ಯಮದಲ್ಲಿ ದೊಡ್ಡ ಪವಾಡವನ್ನೇ ಮಾಡಬಹುದು. ಪ್ರಪಂಚದ ಅನೇಕ ದೇಶಗಳಲ್ಲಿ ಗುಹೆಗಳನ್ನು ಪ್ರವಾಸೋದ್ಯಮದ ಆಕರ್ಷಣೀಯ ಸ್ಥಳಗಳನ್ನಾಗಿ ರೂಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry