ಚರ್ಮದ ಹೊದಿಕೆಯ ಪುಸ್ತಕಗಳು ಬೇಕೆ?

7

ಚರ್ಮದ ಹೊದಿಕೆಯ ಪುಸ್ತಕಗಳು ಬೇಕೆ?

Published:
Updated:
ಚರ್ಮದ ಹೊದಿಕೆಯ ಪುಸ್ತಕಗಳು ಬೇಕೆ?

ರಾಜಸ್ತಾನದ ನಗರಗಳಲ್ಲಿಯೇ ಅತೀ ಸುಂದರ ನಗರ ಉದಯಪುರ. ಇದನ್ನು ಸರೋವರಗಳ ನಗರವೆಂದೂ, ಪೂರ್ವದ ವೆನಿಸ್ ಎಂದೂ ಕರೆಯಲಾಗುತ್ತದೆ.ಮೇವಾರದ ಅರಸು ಮಹಾರಾಜ ಉದಯ್‌ಸಿಂಗ್‌ ಕ್ರಿ.ಶ. 562ರಲ್ಲಿ ಉದಯಪುರ ನಗರವನ್ನು ನಿರ್ಮಿಸಿದ. ಅರಾವಳಿ ಬೆಟ್ಟಗಳಿಂದ ಸುತ್ತುವರಿದ ಮತ್ತು ಸುಂದರ ಸರೋವರಗಳಿದ್ದ ಈ ಪ್ರದೇಶ ನಿಸರ್ಗ ರಮಣೀಯತೆಯಿಂದಲೂ ಹಾಗೂ ಹೆಚ್ಚು ಸುರಕ್ಷಿತ ಎನ್ನುವ ಕಾರಣಕ್ಕಾಗಿಯೂ ರಾಜನ ಗಮನಸೆಳೆದಿತ್ತು.

ನಂತರದ ದಿನಗಳಲ್ಲಿ ಉದಯಪುರ, ರಾಜಸ್ತಾನದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಗುರ್ತಿಸಿಕೊಂಡಿತು. ರಾಜಸ್ತಾನಿ ಕಲೆ, ಸಾಹಿತ್ಯ, ಜಾನಪದ ಕಲೆಗಳ ಪ್ರದರ್ಶನಕ್ಕೆ ಈ ನಗರ ಹೆಸರುವಾಸಿ. ರಾಜಸ್ತಾನಿ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸಹ ಮುಂದು. ಚಿತ್ರಕಲೆ, ಸಂಗೀತಕ್ಕೂ ಹೆಸರುವಾಸಿ.ಉದಯಪುರದ ಮತ್ತೊಂದು ಖ್ಯಾತಿ ಅಲ್ಲಿನ ಚರ್ಮದ ಹೊದಿಕೆಯ ಪುಸ್ತಕಗಳದು. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಈ ಪುಸ್ತಕಗಳು ಅಚ್ಚುಮೆಚ್ಚು. ಉದಯಪುರದ ಭೇಟಿಯ ಗುರುತಾಗಿ ಪುಸ್ತಕಗಳನ್ನು ಪ್ರವಾಸಿಗರು ಕೊಳ್ಳುತ್ತಾರೆ.

ಉದಯಪುರ ಸ್ಥಾಪನೆಯಾದಾಗ, ಜೈಪುರದ ಭಾಗದಲ್ಲಿ ಇದ್ದಂತಹ ಕಾಗದ ತಯಾರಿಕಾ ಕಲೆಯ ಉದ್ದಿಮೆಯನ್ನು ಇಲ್ಲೂ ಪ್ರಾರಂಭಿಸಲಾಯಿತು. ಪುಸ್ತಕದ ಕವಚವಾಗಿ ಚರ್ಮವನ್ನು ಹದಗೊಳಿಸಿ ಬಳಸಲಾಗುತ್ತಿತ್ತು.

ಆ ಚರ್ಮದ ಹೊದಿಕೆಯ ಮೇಲೆ ಕಲಾವಿದರು ಚಿತ್ತಾರಗಳನ್ನು ಮೂಡಿಸುತ್ತಿದ್ದರು. ಆಗ ಉದಯಪುರ ಸಮೀಪದ ಗೋಸುಂಡ ಎಂಬ ಪ್ರದೇಶದಲ್ಲಿ ಬೆಳೆಯುತ್ತಿದ್ದ ಒಂದು ಜಾತಿಯ ಹುಲ್ಲನ್ನು ಪೇಪರ್‌ ತಯಾರಿಕೆಗೆ ಬಳಸುತ್ತಿದ್ದರು.ಬ್ರಿಟಿಷ್‌ ಆಡಳಿತ ಈ ದೇಶಿ ಉದ್ಯಮವನ್ನು ನಾಶಮಾಡಿತು. ಆದರೆ ಸ್ವಾತಂತ್ರ್ಯಾನಂತರ ಪ್ರವಾಸೋದ್ಯಮಕ್ಕೆ ರಾಜಸ್ತಾನ ಆದ್ಯತೆ ನೀಡುತ್ತಿದ್ದಂತೆ ಫೀನಿಕ್ಸ್‌ ಪಕ್ಷಿಯಂತೆ ಈ ಕಲೆಯು ಪುನರುಜ್ಜೀವಗೊಂಡಿತು. ನಾನಾ ಆಕಾರದ ಪುಸ್ತಕಗಳು, ಚರ್ಮದ ಹೊದಿಕೆಯ ಮೇಲೆ ನಾನಾ ರೀತಿಯ ಉಬ್ಬುಚಿತ್ರಗಳು, ರಂಗವಲ್ಲಿಗಳು ನೋಡಲು ಬಲು ಸುಂದರ.ಉದಯಪುರದ ಪ್ರತಿನಿಧಿಯಂತೆ, ಊರಿನ ನೆನಪನ್ನು ಉಕ್ಕಿಸುವ ವಸ್ತುವಿನಂತಿರುವ ಈ ಪುಸ್ತಕಗಳನ್ನು ತಯಾರಿಸುವ ಹಲವಾರು ಗುಡಿ ಕೈಗಾರಿಕೆಗಳು ಇಲ್ಲಿವೆ.ಹಳೆಯ ಹತ್ತಿ ಬಟ್ಟೆಗಳನ್ನು ಖರೀದಿಸಿ ತುರಿದು, ನೆನೆಸಿ, ನಂತರ ವಿವಿಧ ಹಂತಗಳ ಮೂಲಕ ಪೇಪರ್‌ ತಯಾರಿಸಲಾಗುತ್ತದೆ. ಹದಗೊಳಿಸಿದ ಚರ್ಮವನ್ನು ಕತ್ತರಿಸಿ, ವಿವಿಧ ರೀತಿಯಲ್ಲಿ ಸಿಂಗರಿಸಿ, ಚಿತ್ರಗಳನ್ನು ಮೂಡಿಸುವುದು ಮತ್ತೊಂದು ಹಂತ. ಎರಡನ್ನೂ ಒಂದುಗೂಡಿಸುವುದು ಕೊನೆಯ ಹಂತವಾಗಿದೆ.ಚರ್ಮದ ಹೊದಿಕೆಯ ಪುಸ್ತಕಗಳು, ಆಲ್ಬಮ್‌ಗಳ ಮಾರಾಟದ ಅಂಗಡಿಯನ್ನು ಹೊಂದಿರುವ ಮಹೇಂದ್ರಸಿಂಗ್‌ ಹೇಳುವಂತೆ, ‘ಚರ್ಮದ ಪುಸ್ತಕಗಳು ಉದಯಪುರದ ವೈಶಿಷ್ಟ್ಯ.

ಛಾಯಾಚಿತ್ರಗಳನ್ನು ಕಂಪ್ಯೂಟರ್‌ ಚಿಪ್‌ನೊಳಗೆ ಇಟ್ಟುಕೊಳ್ಳುವ ಈ ಕಾಲದಲ್ಲೂ ಚರ್ಮದ ಹೊದಿಕೆಯ ಕಪ್ಪುಬಣ್ಣದ ದಪ್ಪ ಕಾಗದ ಹೊಂದಿರುವ, ಹಿಂದಿನ ಕಾಲದ ಫೋಟೊ ಆಲ್ಬಮ್‌ಗಳನ್ನು ಪ್ರವಾಸಿಗರು (ಅದರಲ್ಲೂ ವಿದೇಶಿಯರು) ಇಷ್ಟಪಟ್ಟು ಖರೀದಿಸುತ್ತಾರೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry