7

ಕಾಶ್ಮೀರಿಗರ ಹೃದಯ ಗೆಲ್ಲಬೇಕಾಗಿದೆ

ಶೇಖರ್‌ ಗುಪ್ತ
Published:
Updated:

ಭಾರತವು  ಕಾಶ್ಮೀರವನ್ನು ಕಳೆದುಕೊಂಡಿರುವುದೇ? ಸ್ಪಷ್ಟತೆಗೆ ಹೇಳುವುದಾದರೆ, ಇಲ್ಲ ಎಂದೇ ಹೇಳಬೇಕಾಗುತ್ತದೆ. ಆದರೆ, ಈ ನಿಟ್ಟಿನಲ್ಲಿ ದೇಶವು ತುಂಬ ಎಚ್ಚರಿಕೆಯಿಂದಲೇ  ಹೆಜ್ಜೆ ಇಡಬೇಕಾಗಿದೆ.  1947ರಿಂದ ನಾವು ಸಾಕಷ್ಟು ಬಾರಿ ಕಾಶ್ಮೀರವನ್ನು ಕಳೆದುಕೊಂಡಿದ್ದೇವೆ.  ಆಗಿನ ಲೆಫ್ಟನಂಟ್‌ ಕರ್ನಲ್‌  ಹರಬಕ್ಷ ಸಿಂಗ್ ಅವರ ನೇತೃತ್ವದಲ್ಲಿನ ಪಡೆಗಳು ಅಂದಿನ ಪುಟ್ಟದಾದ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ  ಪಾಕಿಸ್ತಾನದ ಆಕ್ರಮಣಕಾರರ ಗುಂಪೊಂದು ದಾಳಿ ನಡೆಸಿತ್ತು.  ಅಂದಿನ ನಿರಾಶಾದಾಯಕ ಪರಿಸ್ಥಿತಿ ಹೇಗೆ ಇತ್ತು ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ, ಗ್ರಂಥಾಲಯಕ್ಕೆ ತೆರಳಿ  ಲೆಫ್ಟ್‌ನಂಟ್‌ ಜನರಲ್‌ ಲಿನೊನೆಲ್‌ ಪಿ. ಸೇನ್‌ ಅವರ ‘ಸ್ಲೆಂಡರ್‌ ವಾಸ್‌ ದ ಥ್ರೆಡ್‌’ ಪುಸ್ತಕ ಓದಬೇಕು.

1965ರಲ್ಲಿ ನಾವು ಕಾಶ್ಮೀರವನ್ನು ಎರಡನೆಯ ಬಾರಿಗೆ ಕಳೆದುಕೊಂಡಿದ್ದೆವು. 1962ರಲ್ಲಿ  ಚೀನಾ ಜತೆಗೆ ನಡೆದ ಸಮರದ ನಂತರ  ಪಾಕಿಸ್ತಾನವು ಭಾರತದ ವಿರುದ್ಧ ಹೆಣೆಯುತ್ತ ಬಂದಿದ್ದ ಸೇನಾ ಕಾರ್ಯತಂತ್ರಕ್ಕೆ ಭಾರತವು 1965ರಲ್ಲಿ  ತಾರ್ಕಿಕ ಅಂತ್ಯ ಕಾಣಿಸಿತ್ತು.  ಹಜರತ್‌ಬಾಲ್‌ನಿಂದ ಪವಿತ್ರ ಅವಶೇಷಗಳನ್ನು ಪಾಕಿಸ್ತಾನದ ಪಡೆಗಳು ಕಳ್ಳತನ ಮಾಡಿಕೊಂಡು ಹೋಗಿದ್ದವು. ನೆಹರೂ ಅವರ ದುರ್ಬಲ ಸರ್ಕಾರದ ಫಲವಾಗಿ ಅಯೂಬ್‌ ಖಾನ್‌ ಅವರ ಮಹತ್ವಾಕಾಂಕ್ಷೆಯ ‘ಆಪರೇಷನ್‌ ಗಿಬ್ರಾಲ್ಟರ್‌’ನಲ್ಲಿ  ಪಾಕಿಸ್ತಾನದ ಸಾವಿರಾರು ಸೈನಿಕರು  ಕಾಶ್ಮೀರ ಕಣಿಯೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದರು.  ಚಾಂಬ್‌ ಪ್ರದೇಶದಲ್ಲಿ ಭಾರತ ನಡೆಸಿದ್ದ  ‘ಆಪರೇಷನ್‌ ಗ್ರ್ಯಾಂಡ್‌ ಸ್ಲ್ಯಾಮ್‌’ ಬಹುತೇಕ ಯಶಸ್ವಿಯಾಗಿತ್ತು. ಆಗ, ಕಾಶ್ಮೀರವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು  ಲೆಫ್ಟ್‌ನಂಟ್‌ ಜನರಲ್‌ ಹರಬಕ್ಷ ಸಿಂಗ್‌ ಅವರ ‘ವಾರ್‌ ಡಿಸ್‌ಪ್ಯಾಚಸ್‌’ ಕೃತಿ ಓದಬೇಕು.   ಈಗ ಕಂಡುಬರುತ್ತಿರುವ ಟೆಲಿವಿಷನ್‌ ಚಾನೆಲ್‌ಗಳ  ಹಾವಳಿ ಆಗ ಇದ್ದಿರಲೇ ಇಲ್ಲ.  ಅಂದಿನ ಅಪಾಯಕಾರಿ ದಶಕಗಳಲ್ಲಿ  ಸೇನಾ ಮುಖ್ಯಸ್ಥರು ತಮ್ಮ ಜೀವಮಾನವಿಡಿ ನಿಜವಾದ ವೈರಿಗಳನ್ನು ಮುಖಾಮುಖಿಯಾಗಿ ಎದುರಿಸುತ್ತಿದ್ದರು. 1965ರಲ್ಲಿಯೂ ಭಾರತವು ಕಾಶ್ಮೀರವನ್ನು ಸೇನಾ ದೃಷ್ಟಿಕೋನದಿಂದ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿತ್ತು.  ಅಲ್ಲಿಂದಾಚೆಗೆ 52 ವರ್ಷಗಳು ಗತಿಸಿವೆ.

ಆನಂತರವೂ ಪಾಕಿಸ್ತಾನ ಹಲವು ಬಾರಿ ಭಾರತದ ಜತೆ ಕಾಲುಕೆದರಿ ಜಗಳಕ್ಕೆ ಬಂದಿದೆ. 1971ರಲ್ಲಿ ಪೂಂಚ್‌ನಲ್ಲಿ ದಾಳಿ ನಡೆಸಿತ್ತು. ನಂತರ ಚಾಂಬ್‌ನಲ್ಲಿ ದಾಳಿಗೆ ಮುಂದಾಗಿತ್ತು.  1999ರಲ್ಲಿ ಕಾರ್ಗಿಲ್‌ನಲ್ಲಿ ನಡೆಸಿದ ದಾಳಿಯು, ಭಾರತವು ಕಾಶ್ಮೀರದ ಮೇಲೆ ಹೊಂದಿರುವ ಹಿಡಿತಕ್ಕೆ ಪ್ರತಿಯಾಗಿ  ಒಡ್ಡಿದ್ದ ಮಹತ್ವದ ಸೇನಾ ಬೆದರಿಕೆಯಾಗಿತ್ತು.  ಈ ಅರ್ಧ ಶತಮಾನದ ಕಾಲಾವಧಿಯಲ್ಲಿ ಭಾರತವು ಈ ಮೊದಲಿನಕ್ಕಿಂತ  ಸ್ವಲ್ಪಮಟ್ಟಿಗೆ  ಹೆಚ್ಚಿನ ಪ್ರಮಾಣದ  ಕಾಶ್ಮೀರದ ಭೂ ಪ್ರದೇಶದ ಮೇಲೆ ಹಿಡಿತ ಹೊಂದಿರುವುದು  ನಿಜ. ಹಾಗಿದ್ದರೆ, ನಾವು ಈಗ ಯಾವ ವಿಷಯದ ಬಗ್ಗೆ ಹೆಚ್ಚು ಚಿಂತಿತರಾಗಬೇಕಾಗಿದೆ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.

ಸೇನಾ ಬೆದರಿಕೆಯೊಂದು ತಾರ್ಕಿಕವಾಗಿ ಅಂತ್ಯವಾಗಿರುವಾಗ, ಕಾಶ್ಮೀರ ಕುರಿತ ನಮ್ಮ ಚಿಂತನೆ ಈಗಲೂ ಸೇನಾ ಕಾರ್ಯಾಚರಣೆ ಕುರಿತೇ ಗಿರಕಿ ಹೊಡೆಯುತ್ತಿದೆ. ಈ ಹಿಂದೆ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ  ‘ಎಚ್ಚರದಿಂದ ಇರಿ, ನೀವು ನಿಮ್ಮ ಕಾಶ್ಮೀರ ಸಂರಕ್ಷಿಸಲು ಹೋರಾಡಬೇಕಾಗಿದೆ’ (ಹೋಷಿಯಾರ್‌ ತುಮ್‌ ಕೊ, ಅಪ್ನೆ ಕಾಶ್ಮೀರ್‌ ಕಿ ರಕ್ಷಾ ಕರ್ನಿ ಹೈ) ಎಂದು ಪುಟ್ಟ ಹಾಡು ಹೇಳಿಸುತ್ತಿದ್ದರು.  ವ್ಯತ್ಯಾಸ ಏನೆಂದರೆ, ಈ ಹಿಂದಿನ  ದಿನಗಳಲ್ಲಿ ಸೇನಾ ಬೆದರಿಕೆ ಎನ್ನುವುದು ನಿಜವಾಗಿತ್ತು. 

ಈಗ, ಈ  ಹಿಂದಿನಂತೆ ಸೇನಾ ಬೆದರಿಕೆ ಇಲ್ಲ. ಆದರೆ,  ಈಗ ನಮ್ಮ ಜನರೇ ಸೇನಾ ಬೆದರಿಕೆಯಾಗಿ ಬದಲಾಗಿರುವುದನ್ನು ಕಾಣುವಂತಹ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಕಾಶ್ಮೀರದ ಭೂಭಾಗವು  ಪಾಕಿಸ್ತಾನ ಸೇನೆಯ ಆಕ್ರಮಣದಿಂದ ಸುರಕ್ಷಿತವಾಗಿದೆ. ಈಗಾಗಲೇ ನಾವು ಕಾಶ್ಮೀರವನ್ನು ಕಳೆದುಕೊಂಡಿರದಿದ್ದರೆ,  ಮಾನಸಿಕವಾಗಿ  ಮತ್ತು ಭಾವನಾತ್ಮಕವಾಗಿ ನಾವು ಕಾಶ್ಮೀರವನ್ನು ತ್ವರಿತವಾಗಿ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದೇ ಸದ್ಯದ ಸಂದರ್ಭದಲ್ಲಿ  ಚರ್ಚಾಸ್‍ಪದ ವಿಷಯವಾಗಿದೆ.

ಇಲ್ಲಿ ಮೂರು ಪ್ರಶ್ನೆಗಳು ಎದುರಾಗುತ್ತವೆ. ಕಾಶ್ಮೀರವನ್ನು ಭಾವನಾತ್ಮಕವಾಗಿ ಕಳೆದುಕೊಳ್ಳುತ್ತಿರುವುದನ್ನು ನಾವು ತಿಳಿದುಕೊಳ್ಳುವ ಬಗೆ  ಹೇಗೆ. ಸ್ಥಳೀಯರ ಬಗ್ಗೆ  ನಮ್ಮಲ್ಲಿ ಕಾಳಜಿ ಇದೆಯೇ ಮತ್ತು ಅಂತಿಮವಾಗಿ ನಾವು ಅವರ ಬಗ್ಗೆ ಭವಿಷ್ಯದಲ್ಲಿಯೂ ಕಾಳಜಿ ತೋರಲಿದ್ದೇವೆಯೇ? ಎನ್ನುವ ಪ್ರಶ್ನೆಗಳಿಗೆ ನಮ್ಮಷ್ಟಕ್ಕೆ ನಾವೇ ಉತ್ತರ ಕಂಡುಕೊಳ್ಳಬೇಕಾಗಿದೆ.

ಎರಡನೆ ಪ್ರಶ್ನೆ ಚಿಕ್ಕದಾಗಿರುವುದರಿಂದ ನಾವು ಇಲ್ಲಿ ಮೊದಲು ಅದಕ್ಕೆ ಉತ್ತರ ಕಂಡುಕೊಳ್ಳೋಣ.  ‘ಇಲ್ಲ. ನಾವು ಆ ಬಗ್ಗೆ ಕಾಳಜಿ ಹೊಂದಿಲ್ಲ’ ಎನ್ನುವ ಉತ್ತರ ಸಿಗಲಿದೆ.  ಇದರ ಕಾರಣವೂ ಸಂಕ್ಷಿಪ್ತ ಮತ್ತು ಕಠೋರವಾಗಿದೆ. ಬಹುತೇಕ ವಾದಗಳೂ ದೇಶಭಕ್ತಿಯ ಸುತ್ತಲೇ ಗಿರಕಿ ಹೊಡೆಯುತ್ತಿವೆ.  ನಿಮ್ಮನ್ನು  ದ್ವೇಷಿಸುವ ಜನರ ಪ್ರೀತಿ ಗೆಲ್ಲಲು ನೀವೇಕೆ ಚಿಂತೆ ಮಾಡುವಿರಿ. ದಶಕಗಳ ಕಾಲ ದೇಶಕ್ಕೆ ನಿಷ್ಠರಾಗಿರದ,  ನಿಮ್ಮ ಸೈನಿಕರ ಮೇಲೆ ಕಲ್ಲು ತೂರಬೇಕು  ಎಂದು ಪ್ರಚೋದಿಸುವ ಮತ್ತು ಬಹಿರಂಗವಾಗಿ  ದೇಶದ್ರೋಹವನ್ನು ಆಚರಿಸುವ ಜನರ ಧೋರಣೆಯನ್ನು ಭಾರತವು ಹೇಗೆ ಪರಿಗಣಿಸಲಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಒಂದೆಡೆ  ಭಾರತ ಬದಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ,   ಸಾಮಾನ್ಯ ವ್ಯಕ್ತಿಯೊಬ್ಬ ಸಿನಿಮಾ ಮಂದಿರದಲ್ಲಿ ರಾಷ್ಟ್ರ

ಗೀತೆ ನುಡಿಸುವಾಗ ಎದ್ದುನಿಲ್ಲದ ಕಾರಣಕ್ಕೆ ಆತನನ್ನು ಜೈಲಿಗೆ ತಳ್ಳಲಾಗುತ್ತಿದೆ. ಕಾಶ್ಮೀರದಲ್ಲಿ ಮಾತ್ರ ಬಹಿರಂಗವಾಗಿ ದೇಶ ವಿರೋಧಿ ಕೃತ್ಯ ಎಸಗುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಸಹನೆಗೂ ಒಂದು ಮಿತಿ ಇರುತ್ತದೆ. ಇಲ್ಲಿಯವರೆಗೆ ಸಹಿಸಿದ್ದೂ ಆಯಿತು. ಭಾರತವನ್ನು ಇಷ್ಟಪಡದ ಕಾಶ್ಮೀರದ ಜನರು ಭಾರತ ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಲಿ ಎಂದೂ ಕೆಲವರು ಹೇಳುತ್ತಾರೆ.

ಮೊದಲ ಪ್ರಶ್ನೆಯು ತನ್ನಲ್ಲಿಯೇ ಉತ್ತರ ಅಡಗಿಸಿ ಇಟ್ಟುಕೊಂಡಿದೆ.  ಕೆಲ ತಿಂಗಳುಗಳಿಂದ ಕಣಿವೆಯಲ್ಲಿನ ಕಾಶ್ಮೀರದ ಜನರು ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದು ಸೈನಿಕರ ಜತೆ ಸಂಘರ್ಷ ನಡೆಸುತ್ತಿದ್ದಾರೆ. ಲಾಠಿ, ಗುಂಡು, ಪೆಲೆಟ್‌ಗಳ ಬೆದರಿಕೆಯನ್ನು ಮೆಟ್ಟಿ ನಿಲ್ಲುತ್ತಿದ್ದಾರೆ. ವಾರಗಳು ಗತಿಸಿದಂತೆ,  ಕಾಶ್ಮೀರದ ಜನರನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡರೆ ಅವರನ್ನೂ ಬಲಿಗೊಡಲು ಹಿಂದೆ ಮುಂದೆ ನೋಡದಂತಹ ಮನಸ್ಥಿತಿಗೆ ಸ್ಥಳೀಯರು ತಲುಪಬಹುದು.

ಕಾಶ್ಮೀರ ಭೂಭಾಗದ ಮೇಲೆ  ಸೇನೆಯು ಸಂಪೂರ್ಣ ಹಿಡಿತ ಹೊಂದಿರುವುದನ್ನು ಸಾಬೀತುಪಡಿಸಲು ಹೆಚ್ಚಿನ ಸಾಕ್ಷ್ಯ ಒದಗಿಸುವ ಅಗತ್ಯವೇನೂ ಇಲ್ಲ. ಆದರೆ, ನಾವು ಕಾಶ್ಮೀರದ ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಅವರ ವಿಶ್ವಾಸಕ್ಕೆ ಎರವಾಗುತ್ತಿದ್ದೇವೆ.

ಮೂರನೇ ಪ್ರಶ್ನೆ ತುಂಬ ಸಂಕೀರ್ಣವಾಗಿರುವುದರಿಂದ ನಾವು ಅದರ ಬಗ್ಗೆ  ಹೆಚ್ಚು ಕಾಳಜಿ ವಹಿಸಬೇಕಾಗಿದೆ.  ಒಂದು ವೇಳೆ ನೀವು  ತೀವ್ರ ರಾಷ್ಟ್ರೀಯವಾದಿ ಆಗಿದ್ದರೆ, ‘ದೇಶ ದ್ರೋಹಿಗಳು ಪಾಕಿಸ್ತಾನಕ್ಕೆ ಹೋಗಲಿ’ ಎಂದೇ ನಿಮ್ಮ ಉತ್ತರವಾಗಿರುತ್ತದೆ.  ಆಮೇಲೆ, ದೇಶದ ಇತರ ಭಾಗಗಳಿಂದ ರಾಷ್ಟ್ರೀಯವಾದಿಗಳನ್ನು (ಹಿಂದೂಗಳು) ಕಾಶ್ಮೀರಕ್ಕೆ ಸಾಗಿಸಬೇಕಾಗುತ್ತದೆ.

ಕೆಲ ನೂರು ಜನರನ್ನು ಸೇನಾ ಕಾರ್ಯಾಚರಣೆಯಲ್ಲಿ ಕೊಂದು ಹಾಕಿದರೆ ಎಲ್ಲ ಬಗೆಯ ದಂಗೆ ತಣ್ಣಗಾಗಲಿದೆ ಎಂದು ಇನ್ನೂ ಕೆಲ ನಿವೃತ್ತ ಸೇನಾ ಪ್ರಮುಖರು ಪ್ರತಿಪಾದಿಸುತ್ತಾರೆ.  ಇಂತಹ ಕೃತ್ಯವನ್ನು ಎಲ್ಲರಿಗೂ ಗೊತ್ತಾಗುವಂತೆ  ಮಾಡಿದರೆ ಟೆಲಿವಿಷನ್‌ ವರದಿಗಾರರು ಆ ಘಟನೆಯನ್ನು ಪ್ರತ್ಯಕ್ಷವಾಗಿ ವರದಿ ಮಾಡಬಹುದು ಬಿಡಿ. ಇದರಿಂದ ಇತರ ದೇಶದ್ರೋಹಿಗಳು ಹಿಮ್ಮೆಟ್ಟಲೂಬಹುದು.

ಇದೊಂದು ಕಾಶ್ಮೀರ ಕಳೆದುಕೊಳ್ಳುವ ಅತ್ಯಂತ ಸುಲಭ ಕೃತ್ಯವಾಗಿರುವುದರ ಜತೆಗೆ, ಭಾರತವನ್ನೂ ಕಳೆದುಕೊಳ್ಳುವ ಸುಲಭೋಪಾಯವೂ ಆಗಿರಲಿದೆ. ನಾವಿಲ್ಲಿ ಭಾರತದ ಹಿರಿಮೆ ಬಗ್ಗೆಯಷ್ಟೇ ಮಾತನಾಡದೆ ಕಟು ವಾಸ್ತವದ ಸಂಗತಿಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.

ಸೇನಾ  ಶಕ್ತಿ,  ಧೈರ್ಯ, ಪ್ರತಿಭೆ, ನಿರ್ದಯತೆ ಎಲ್ಲವನ್ನೂ ಒಳಗೊಂಡಿರುವ ಇಸ್ರೇಲ್‌ ದೇಶದ ಬಗ್ಗೆ ನಾವೆಲ್ಲ ತುಂಬ ಹೆಮ್ಮೆ ಪಡುತ್ತೇವೆ.  50 ವರ್ಷಗಳ ಕಾಲ ಅದು ಇಂತಹ ಕಾರ್ಯತಂತ್ರವನ್ನೇ ಅನುಸರಿಸುತ್ತ  ಬಂದಿದ್ದರೂ ತನ್ನ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದೆ. 1967ರಲ್ಲಿ  ಆರು ದಿನಗಳ ಕಾಲ ನಡೆದ ಯುದ್ಧದಲ್ಲಿ ಅರಬರಿಗೆ ಸೇರಿದ ದೊಡ್ಡ ಭೂ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.  ವಶಪಡಿಸಿಕೊಂಡ ಭೂ ಪ್ರದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯಶಸ್ವಿಯಾಗಿದ್ದರೂ, ವಶಪಡಿಸಿಕೊಂಡ ಪ್ರದೇಶದಲ್ಲಿ ಸ್ಥಳೀಯರ ವಿರೋಧ ಹೆಚ್ಚುತ್ತಲೇ ಹೋಗಿದೆ.

ಇಸ್ರೇಲ್‌ಗೆ ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ  ಬೆಂಬಲ ಇದೆ.  ಅದರ ಸೇನಾ ಸಾಮರ್ಥ್ಯ ಅಗಾಧವಾಗಿದೆ.  ಅದರ ಸೇನಾ ಮತ್ತು ಬೇಹುಗಾರಿಕೆ ಪಡೆಗಳಿಗೆ ವ್ಯಾಪಕ ಅಧಿಕಾರ ಇದೆ.  ಆಫ್ರಿಕಾ  ಮತ್ತು ಪೂರ್ವ ಯುರೋಪ್‌ನಿಂದ ವಲಸೆ ಬಂದ ಯಹೂದಿಗಳು ದೇಶಕ್ಕೆ ನಿಷ್ಠೆಯಿಂದ ಇದ್ದಾರೆ.  ಹಲವಾರು ಗೆರಿಲ್ಲಾ ಕಾರ್ಯಾಚರಣೆಗಳನ್ನು ಮಟ್ಟ ಹಾಕಲಾಗಿದೆ.  ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಆಕ್ರಮಿಸಿಕೊಂಡಿದನ್ನು ವಿರೋಧಿಸುವ ಪ್ಯಾಲೆಸ್ಟೀನಿಯನ್ನರ ಬಂಡಾಯವನ್ನು ಹತ್ತಿಕ್ಕಲಾಗಿದೆ. ವಿಶ್ವಸಂಸ್ಥೆಯ ನಿರ್ಣಯ  ಮತ್ತು ಜಾಗತಿಕ ಒತ್ತಡವನ್ನು ಸಮರ್ಥವಾಗಿ ನಿವಾರಿಸಿಕೊಳ್ಳುತ್ತಲೇ ಬಂದಿದೆ.  ಕಂಡಲ್ಲಿ ಗುಂಡಿಕ್ಕುವ, ಗೋಡೆ ಕಟ್ಟುವ ತೀರ್ಮಾನಗಳ ಕಟ್ಟುನಿಟ್ಟಿನ ಜಾರಿ ಜತೆಗೆ ಎಲ್ಲೆಡೆ ಸೇನೆ ನಿಯೋಜಿಸುತ್ತಲೇ  ಬಂದಿದೆ.

ಇಂತಹ ನೀತಿ ಅನುಸರಿಸಿದ್ದಕ್ಕೆ ಇಸ್ರೇಲ್‌ ದುಬಾರಿ ಬೆಲೆಯನ್ನೂ  ತೆತ್ತಿದೆ. ಹಣ ಮತ್ತು  ಅಸಂಖ್ಯ ಯಹೂದಿಗಳ ಜೀವ ಕಳೆದುಕೊಂಡಿದೆ.  ಜಾಗತಿಕ ಗೌರವಕ್ಕೂ ಎರವಾಗಿದೆ. ಭೂಮಿಯನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಕೆಲವರ ಕಲ್ಪನೆಗಳು ಏನೇ ಇರಲಿ, ಭಾರತವೂ ಇಂತಹ ಧೋರಣೆಯನ್ನು ಕಾಶ್ಮೀರದಲ್ಲಿ ಅನುಸರಿಸಿದರೆ ಯಶಸ್ವಿಯಾಗಲಿದೆ ಎಂದು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ. ಅದೊಂದು  ಆತ್ಮಹತ್ಯಾ ಯತ್ನವೂ ಆಗಿರಲಿದೆ. ಭಾರತ ಯಾವತ್ತೂ  ಇಸ್ರೇಲ್‌ ಆಗಲಾರದು.  ಆಗಲೂಬಾರದು.

ಭಾರತದಲ್ಲಿ ಪ್ರತಿ ಮುಸ್ಲಿಂ, ಕ್ರೈಸ್ತ, ಬುದ್ಧ, ಫಾರ್ಸಿ ಮತ್ತು ನಾಸ್ತಿಕರು ಕೂಡ ಸಮಾನ ನಾಗರಿಕರು.  ಅವರೆಲ್ಲ ಸಮಾನ ಹಕ್ಕುಗಳನ್ನೂ ಹೊಂದಿದ್ದಾರೆ. ದೇಶದ ಯಾವುದೇ ಪ್ರಜೆ, ರಾಷ್ಟ್ರಪತಿ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಕ್ಷಣಾ  ಮತ್ತು ಬೇಹುಗಾರಿಕೆ ಪಡೆಗಳ ಮುಖ್ಯಸ್ಥರೂ ಆಗಬಹುದು.  ಒಂದು ದೇಶ  ಎರಡು ವ್ಯವಸ್ಥೆಯು ಸಾಂವಿಧಾನಿಕವಾಗಿ ಕಾರ್ಯಸಾಧ್ಯವಾಗದ ವ್ಯವಸ್ಥೆಯಾಗಿದೆ. ವಿಶಿಷ್ಟ ಸರ್ವಾಧಿಕಾರಿ ವ್ಯವಸ್ಥೆ ಇರುವ ದೇಶಗಳಲ್ಲಿ ಮಾತ್ರ ಅಂತಹ ವ್ಯವಸ್ಥೆ ಜಾರಿಯಲ್ಲಿ ಇರಲು ಸಾಧ್ಯವಿದೆ. ಹಾಂಕಾಂಗ್‌ ವಿಷಯದಲ್ಲಿ ಚೀನಾ ಇಂತಹದ್ದೇ ನಿಲುವನ್ನು ಹೊಂದಿದೆ.

ಹಿಂದಿನ ಭಾನುವಾರ ನಾನು ನವದೆಹಲಿಯಲ್ಲಿನ ಸತ್ಯ ಸಾಯಿ ಬಾಬಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ  ಭಾಗವಹಿಸಿದ್ದೆ.  ಬೇಹುಗಾರಿಕೆ ಪಡೆ ‘ರಾ’ದ ಮಾಜಿ ಮುಖ್ಯಸ್ಥ ಮತ್ತು ಕಾಶ್ಮೀರದ ಗವರ್ನರ್‌ ಆಗಿದ್ದ ಗಿರೀಶ್‌ ಚಂದ್ರ ಸಕ್ಸೇನಾ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಸಮಾರಂಭದಲ್ಲಿ ನಮ್ಮ ಬೇಹುಗಾರಿಕೆ, ರಕ್ಷಣೆ, ರಾಜತಾಂತ್ರಿಕ ಮತ್ತು ಸೇನಾಪಡೆಗಳ ನಿವೃತ್ತ ಅಧಿಕಾರಿಗಳು ಭಾಗವಹಿಸಿದ್ದರು.

1991ರಲ್ಲಿ ಪಾಕಿಸ್ತಾನದಿಂದ ಒಳನುಸುಳಿ ಬರುವವರ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇದ್ದ ದಿನಗಳಲ್ಲಿ  ನಾನು ಮತ್ತು ಟೈಮ್‌ ನಿಯತಕಾಲಿಕದ ದೆಹಲಿ ಬ್ಯೂರೊ ಮುಖ್ಯಸ್ಥ  ಎಡ್ವರ್ಡ್‌ ಡೆಸ್ಮಂಡ್‌ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಲು ಉದ್ದೇಶಿಸಿದ್ದೇವು.  ಇದಕ್ಕೆ ನೆರವು ಪಡೆಯಲು ನಾವಿಬ್ಬರೂ ಅಂದಿನ ಗೃಹ ಕಾರ್ಯದರ್ಶಿ ನರೇಶ್‌ ಚಂದ್ರ ಅವರನ್ನು ಭೇಟಿಯಾಗಲು ಹೋಗಿದ್ದೆವು.

ನಮ್ಮ ಆಲೋಚನೆ ಇಷ್ಟಪಟ್ಟ ಅವರು, ‘ಮುಂದುವರೆಯಿರಿ’ ಎಂದು ಹೇಳಿದ್ದರು.  ನಮಗೆ ಅಗತ್ಯ ಸಹಕಾರ ನೀಡಲು ರಕ್ಷಣಾ ಇಲಾಖೆಗೂ ನಾನು ಮನವಿ ಮಾಡಿಕೊಂಡಿದ್ದೆ. ಕಾಶ್ಮೀರದ ರಾಜ್ಯಪಾಲರ ಸಹಕಾರವೂ ನಮಗೆ ಬೇಕಾಗಿತ್ತು. ‘ಚಿಂತಿಸಬೇಡಿ. ನಾನು ಅವರಿಗೆ ಹೇಳುವೆ’ ಎಂದು ಅಭಯ ನೀಡಿದ್ದರು. ಗಿರೀಶ್‌ ಚಂದ್ರ ಅವರು ನರೇಶ್‌ ಚಂದ್ರ ಅವರ ಹಿರಿಯ ಸೋದರ ಆಗಿದ್ದರು. ಗಿರೀಶ್‌ ಚಂದ್ರ ಅವರ ಸ್ಮರಣಾರ್ಥ ನಡೆದ ಸಭೆಯಲ್ಲಿ ನರೇಶ್‌ ಅವರೂ ಭಾಗವಹಿಸಿದ್ದರು. ‘ನಾವು ಕಾಶ್ಮೀರವನ್ನು ಕಳೆದುಕೊಂಡಿದ್ದೇವೆಯೇ’ ಎಂದು ನಾನು ಅವರನ್ನು ಪ್ರಶ್ನಿಸಿದ್ದೆ. ಕಾಶ್ಮೀರದಲ್ಲಿ ಬಂಡಾಯ ತಾರಕಕ್ಕೆ ಏರಿದ ಸಂದರ್ಭದಲ್ಲಿಯೇ ನಾನು ಈ ಪ್ರಶ್ನೆ ಕೇಳಿದ್ದೆ.

ನನ್ನ ಪ್ರಶ್ನೆಗೆ ಗಿರೀಶ್‌ ಅವರು ‘ಇಲ್ಲ, ಅದು ಆಗಿಲ್ಲ’ ಎಂದು ತಣ್ಣಗೆ ಉತ್ತರಿಸಿದ್ದರು. ‘ದೇಶವೊಂದು ಒಗ್ಗಟ್ಟಾಗಿ  ಇರಲು ತನ್ನದೇ ಆದ ದಿಟ್ಟತನ ಹೊಂದಿರುತ್ತದೆ.  ನಾವು ಕೂಡ ಅಂತಹ ಸಾಮರ್ಥ್ಯ ಹೊಂದಿದ್ದೇವೆ’ ಎಂದು ಹೇಳಿದ್ದರು.

ಆ ಸಂದರ್ಭದಲ್ಲಿನ ಬಂಡಾಯವನ್ನು  ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಲಾಗಿತ್ತು.  ರಾಜ್ಯದ ಸಮಗ್ರ ಸ್ವರೂಪವನ್ನು ಕಾಯ್ದುಕೊಳ್ಳಲಾಗಿತ್ತು. ಈ ವಿಷಯದಲ್ಲಿ ಗಿರೀಶ್‌ ಚಂದ್ರ ಅವರು ಯಶಸ್ವಿಯಾಗಿದ್ದರು.

‘ಜನರ ಬೆಂಬಲಕ್ಕೆ ನಿಲ್ಲಲು ರಾಜಕೀಯ ಕ್ರಿಯಾ ಯೋಜನೆ ರೂಪಿಸುವ ಅಗತ್ಯ ಇದೆ. ಭಾರತದಲ್ಲಿ ಉಳಿಯುವುದರಲ್ಲಿಯೇ ನಿಮ್ಮ ಶ್ರೇಯೋಭಿವೃದ್ಧಿ ಅಡಗಿದೆ ಎನ್ನುವುದನ್ನು ಕಾಶ್ಮೀರದ ಜನರಿಗೆ  ಮನವರಿಕೆ ಮಾಡಿಕೊಡಬೇಕಾಗಿದೆ. ನಮ್ಮ ಕರ್ತವ್ಯಕ್ಕೆ ರಾಜಕೀಯ ಮುಖಂಡರು ಮುಕ್ತ ಮನಸ್ಸಿನಿಂದ ಬೆಂಬಲಿಸಿದರೆ ನಮ್ಮ ಕೆಲಸ ಇನ್ನಷ್ಟು ಹಗುರವಾಗಲಿದೆ’ ಎಂದು ಅವರು ಹೇಳಿದ್ದರು. ಈಗಲೂ ಅಂತಹದ್ದೇ  ಮಾತು ಮತ್ತು ಕೃತ್ಯಗಳ ಮೂಲಕ ಕಾಶ್ಮೀರದ ಜನರ ಹೃದಯ ಗೆಲ್ಲುವ ಕೆಲಸ ಆಗಬೇಕಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry