ಗುರುವಾರ , ಜೂನ್ 17, 2021
28 °C

ಜನರಿಕ್‌ ಔಷಧ ಸೂಚಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಜನರಿಕ್‌ ಔಷಧ ಸೂಚಿಸಿ

ನವದೆಹಲಿ: ಜನರಿಕ್‌ ಔಷಧಗಳನ್ನೇ ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿಯು (ಎಂಸಿಐ) ಎಲ್ಲ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅಲ್ಲದೇ, ಚೀಟಿಯಲ್ಲಿ ಔಷಧಗಳ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸುವಂತೆಯೂ ಅದು ತಾಕೀತು ಮಾಡಿದೆ. ಒಂದು ವೇಳೆ, ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.

ರೋಗಿಗಳಿಗೆ ಔಷಧಗಳನ್ನು ಸೂಚಿಸುವಾಗ ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ಅವುಗಳನ್ನು ಬಳಸುವಾಗ ವಿವೇಚನೆ ಬಳಸುವಂತೆಯೂ ಎಂಸಿಐ ಸಲಹೆ ನೀಡಿದೆ.

ವೈದ್ಯರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಿ ಮಂಡಳಿಯು ಕಳೆದ ವರ್ಷ (2016) ಅಧಿಸೂಚನೆ ಹೊರಡಿಸಿತ್ತು. 

ಈಗ ಅದೇ ಮಾರ್ಗಸೂಚಿಗಳನ್ನು ವೈದ್ಯಕೀಯ ಕಾಲೇಜುಗಳ ಡೀನ್‌ಗಳು, ಪ್ರಾಂಶುಪಾಲರು, ಆಸ್ಪತ್ರೆಗಳ ನಿರ್ದೇಶಕರು ಮತ್ತು ಎಲ್ಲ ರಾಜ್ಯಗಳ ವೈದ್ಯಕೀಯ ಮಂಡಳಿಗಳ ಗಮನಕ್ಕೆ ತಂದಿರುವ ಎಂಸಿಐ, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

ವೈದ್ಯರು ರೋಗಿಗಳಿಗೆ ಅಗ್ಗದ ಜನರಿಕ್‌ ಔಷಧಗಳನ್ನೇ ತೆಗೆದುಕೊಳ್ಳಲು ಸೂಚಿಸುವಂತೆ ಮಾಡಲು ಕಾನೂನು ರೂಪಿಸಬೇಕಾದ ಅವಶ್ಯಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಕೆಲವೇ ದಿನಗಳಲ್ಲಿ ಎಂಸಿಐ, ಈ ಸುತ್ತೋಲೆ ಹೊರಡಿಸಿದೆ.

ಗುಜರಾತ್‌ನ ಸೂರತ್‌ನಲ್ಲಿ ಇತ್ತೀಚೆಗೆ ಮಲ್ಟಿ–ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ್ದ ಮೋದಿ, ‘ಬಡ ಜನರಿಗೆ ಅರ್ಥವಾಗದ ರೀತಿಯಲ್ಲಿ ವೈದ್ಯರು ಔಷಧಗಳ ಹೆಸರುಗಳನ್ನು ಬರೆಯುತ್ತಾರೆ. ಅಂತಿಮವಾಗಿ ಜನರು ಖಾಸಗಿ ಔಷಧ ಮಳಿಗೆಗಳಿಂದ ಹೆಚ್ಚಿನ ಬೆಲೆಗೆ ಔಷಧ ಖರೀದಿಸುತ್ತಾರೆ’ ಎಂದಿದ್ದರು.

ತಿದ್ದುಪಡಿ: ಬ್ರ್ಯಾಂಡ್‌ ಔಷಧಗಳ ಬದಲಾಗಿ ಜನರಿಕ್‌ ಔಷಧಗಳನ್ನೇ ತೆಗೆದುಕೊಳ್ಳಲು ರೋಗಿಗಳಿಗೆ ಸೂಚಿಸುವುದನ್ನು ಕಡ್ಡಾಯಗೊಳಿಸುವುದಕ್ಕಾಗಿ   ಭಾರತೀಯ ವೈದ್ಯಕೀಯ ಮಂಡಳಿ (ವೃತ್ತಿಪರ ನಡತೆ, ಶಿಷ್ಟಾಚಾರ ಮತ್ತು ನೈತಿಕತೆ) ನಿಯಂತ್ರಣ ಕ್ರಮಗಳು–2002ರ 1.5ನೇ ನಿಯಮಕ್ಕೆ ತಿದ್ದುಪಡಿ  ತರಲಾಗಿತ್ತು.

ಪರಿಷ್ಕರಣೆ:  2015ರಲ್ಲಿ ಪ್ರಕಟಿಸಲಾಗಿರುವ ಅಗತ್ಯ ಔಷಧಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಲಿದ್ದು ಇನ್ನಷ್ಟು ಔಷಧಗಳನ್ನು ಅದಕ್ಕೆ ಸೇರಿಸಲಿದೆ.

ಔಷಧಿ ಪೂರೈಕೆಗೆ ಸಿದ್ಧ: ಅನಂತಕುಮಾರ್‌

ಮಂಗಳೂರು: ‘ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಎಲ್ಲ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಜೆನೆರಿಕ್ ಔಷಧಿ ಬಳಕೆಗೆ ಮುಂದಾದರೆ, ಅಗತ್ಯ ಪ್ರಮಾಣದ ಔಷಧಿ ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದರು.

ಶನಿವಾರ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈಗ ರಾಜ್ಯದ ಆರೋಗ್ಯ ಇಲಾಖೆ ತನ್ನ ಆಸ್ಪತ್ರೆಗಳಿಗೆ ವರ್ಷಕ್ಕೆ ₹ 400 ಕೋಟಿ ಮೊತ್ತದ ಔಷಧಿಗಳನ್ನು ಖಾಸಗಿ ಕಂಪೆನಿಗಳಿಂದ ಖರೀದಿಸಿ, ಪೂರೈಕೆ ಮಾಡುತ್ತಿದೆ. ಅದೇ ಪ್ರಮಾಣದ ಜೆನೆರಿಕ್‌ ಔಷಧಿಯನ್ನು ಖರೀದಿಸಿ, ಬಳಕೆ ಮಾಡಿದರೆ₹ 150 ಕೋಟಿ ಮಾತ್ರ ಸಾಕಾಗುತ್ತದೆ. ಇದರಿಂದ ರಾಜ್ಯ ಸರ್ಕಾರಕ್ಕೆ

₹ 250 ಕೋಟಿ ಉಳಿತಾಯವಾಗುತ್ತದೆ’ ಎಂದರು.

ಕೆ.ಆರ್‌.ರಮೇಶ್‌ಕುಮಾರ್ ಅವರು ಆರೋಗ್ಯ ಸಚಿವರಾದ ಬಳಿಕ ಜೆನೆರಿಕ್‌ ಔಷಧಿ ಬಳಕೆಯತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚಿನ ಆಸಕ್ತಿ ತೋರುತ್ತಿದೆ. 200 ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. ಖಾಸಗಿ ವ್ಯಕ್ತಿಗಳು, ಸಹಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಬಯಸಿದರೆ ಜನೌಷಧಿ ಕೇಂದ್ರಗಳನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.