ಸಾಧನೆಯ ಎತ್ತರದಲ್ಲಿ ಪ್ರಣೀತ್‌

7

ಸಾಧನೆಯ ಎತ್ತರದಲ್ಲಿ ಪ್ರಣೀತ್‌

Published:
Updated:
ಸಾಧನೆಯ ಎತ್ತರದಲ್ಲಿ ಪ್ರಣೀತ್‌

ಚೊಂಗ್‌ ವೀ, ಮಹಮ್ಮದ್‌ ಹಫೀಜ್‌ ಹಾಶಿಮ್‌, ತೌಫಿಕ್‌ ಹಿದಾಯತ್‌  ಹು ಯನ್‌... ಹೀಗೆ ವಿಶ್ವದ   ಘಟಾನುಘಟಿಗಳಿಗೆ ಆಘಾತ ನೀಡಿ ಬ್ಯಾಡ್ಮಿಂಟನ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದ ಪ್ರತಿಭಾವಂತ ಆಟಗಾರ ಬಿ. ಸಾಯಿ ಪ್ರಣೀತ್‌.

 

ಎಳವೆಯಲ್ಲಿಯೇ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಮಹಾ ದಾಸೆ ಹೊತ್ತು ಆ ದಿಶೆಯಲ್ಲಿ ಕಠಿಣ ಪರಿಶ್ರಮದಿಂದ ಹಲವು ಕೌಶಲಗಳನ್ನು ಮೈಗೂಡಿಸಿಕೊಂಡು ಸಾಗುತ್ತಿರುವ ಹೈದರಾಬಾದ್‌ನ ಆಟಗಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

 

ಹೋದ ವಾರ ನಡೆದ ಸಿಂಗಪುರ ಓಪನ್‌ ಸೂಪರ್‌ ಸರಣಿಯಲ್ಲಿ ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

 

lಸಿಂಗಪುರ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದೀರಿ. ಈ ಸಾಧನೆಯ ಬಗ್ಗೆ ಹೇಳಿ?

ಈ ಹಿಂದೆ  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದೆ. ಆದರೆ ಸೂಪರ್‌ ಸರಣಿ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿರುವುದು ಮೊದಲು. ಹೀಗಾಗಿ ಅತೀವ ಖುಷಿಯಾಗಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಸಿಂಗಲ್ಸ್‌ ಆಟಗಾರ ಅನಿಸಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಇಂತಹ ಅದ್ಭುತ ಸಾಧನೆಗಾಗಿ ಎದುರು ನೋಡುತ್ತಿದ್ದೆ.

 

lಪ್ರಶಸ್ತಿಯ ನಿರೀಕ್ಷೆ ಇತ್ತೇ?

ಟೂರ್ನಿಯಲ್ಲಿ ನನಗಿಂತಲೂ ಬಲಿಷ್ಠ ಆಟಗಾರರು ಭಾಗವಹಿಸಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲುತ್ತೇನೆ ಅಂತ ಖಂಡಿತಾ ಭಾವಿಸಿರಲಿಲ್ಲ.

ಪಂದ್ಯದಿಂದ ಪಂದ್ಯಕ್ಕೆ ಗುಣಮಟ್ಟದ ಆಟ ಆಡುವುದರತ್ತ ಮಾತ್ರ ಚಿತ್ತ ಹರಿಸಿದ್ದೆ .ಹೀಗಾಗಿ ಸುಲಭವಾಗಿ ಎದುರಾಳಿಗಳ ಸವಾಲು ಮೀರಿ ನಿಂತು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಲು ಸಾಧ್ಯವಾಯಿತು.

 

lಫೈನಲ್‌ನಲ್ಲಿ ಶ್ರೀಕಾಂತ್ ವಿರುದ್ಧ ಸೆಣಸಬೇಕಿತ್ತು. ಹೀಗಾಗಿ ಪಂದ್ಯಕ್ಕೂ ಮುನ್ನ ಏನಾದರೂ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದಿರಾ?

ನಾವಿಬ್ಬರೂ ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇವೆ. ಜೊತೆಗೆ ಈ ಹಿಂದೆ ಹಲವು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದೇವೆ. ಹೀಗಾಗಿ ಅವರ ಆಟದ ತಂತ್ರಗಳೇನು ಎಂಬುದರ ಅರಿವಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಆಡಿದೆ. ಪಂದ್ಯಕ್ಕೆಂದೇ  ವಿಶೇಷ ಸಿದ್ಧತೆಗಳನ್ನೇನೂ ಮಾಡಿಕೊಂಡಿರಲಿಲ್ಲ.

 

lಮುಂಬರುವ ವಿಶ್ವ ಚಾಂಪಿಯನ್‌ ಷಿಪ್‌ಗೆ ಅರ್ಹತೆ ಗಳಿಸುವ ಅವಕಾಶ ನಿಮಗೂ ಇದೆಯಲ್ಲವೇ?

ಏಪ್ರಿಲ್‌ 27ಕ್ಕೆ ವಿಶ್ವ ಬ್ಯಾಡ್ಮಿಂಟನ್‌ ಫೆಡ ರೇಷನ್‌ (ಬಿಡಬ್ಲ್ಯುಎಫ್)  ಬಿಡುಗಡೆ ಮಾಡುವ ನೂತನ ಕ್ರಮಾಂಕ ಪಟ್ಟಿಯ ಆಧಾರ ದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಅರ್ಹತೆ ನಿರ್ಧ ರಿತವಾಗಲಿದೆ. ಒಂದೊಮ್ಮೆ ಅವಕಾಶ ಸಿಕ್ಕರೆ ದೇಶಕ್ಕೆ ಪದಕ ಗೆದ್ದು ಕೊಡಲು ಶ್ರಮಿಸುತ್ತೇನೆ. 

 

lನೀವು ಆಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳ ಬೇಕೆಂದು ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಹೇಳಿದ್ದಾರಲ್ಲ?

ಗೋಪಿ ಸರ್‌ ಹೇಳಿರುವುದು ನಿಜ. ಆಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಒಂದು ಟೂರ್ನಿ ಗೆದ್ದ ಬಳಿಕ ನಂತರದ ಟೂರ್ನಿಗಳಲ್ಲಿ ಬೇಗನೆ ಹೋರಾಟ ಮುಗಿಸುತ್ತಿದ್ದೇನೆ. ಇದನ್ನು ಸರಿಪಡಿಸಿಕೊಳ್ಳಬೇಕು. ಜೊತೆಗೆ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವತ್ತಲೂ ಚಿತ್ತ ಹರಿಸಬೇಕು.  

 

lಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ (ಪಿಬಿಎಲ್‌) ಆಡಿದ್ದೀರಿ. ಇದ ರಿಂದ ಏನಾದರೂ ಪ್ರಯೋಜನವಾಗಿದೆಯಾ?

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗಿಂತ ತುಂಬಾ ಭಿನ್ನವಾದುದು. 

 ಲೀಗ್‌ ಶುರುವಾದ ಬಳಿಕ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ಸಾಕಷ್ಟು ಯುವ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಲೀಗ್‌ನಲ್ಲಿ ವಿಶ್ವದ ಘಟಾನುಘಟಿ ಆಟಗಾರರೂ ಆಡುವುದ ರಿಂದ  ಅವರು ಪಂದ್ಯಕ್ಕೆ ಸಿದ್ಧಗೊಳ್ಳುವ ಬಗೆ, ಒತ್ತಡ ಮೀರಿ ನಿಲ್ಲುವ ಕಲೆ ಹೀಗೆ ಹಲವು ವಿಷಯಗಳನ್ನು ಕಲಿಯಲು ಇದು ವೇದಿಕೆಯಾಗಿದೆ.

 

lಬ್ಯಾಡ್ಮಿಂಟನ್‌ ಲೋಕಕ್ಕೆ ಅಡಿ ಇಟ್ಟಿದ್ದು ಹೇಗೆ?

ಎಳವೆಯಿಂದಲೇ ಈ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಎಂಟನೇ ವಯಸ್ಸಿನಲ್ಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಆಟದ ಪಾಠಗಳನ್ನು ಕಲಿಯುತ್ತಾ ಸಾಗಿದೆ. 2010ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ನಂತರ ಅದೃಷ್ಟ ಬದಲಾಯಿತು. ಬಳಿಕ ಸೀನಿಯರ್ ವಿಭಾಗದಲ್ಲೂ ಅಮೋಘ ಸಾಮರ್ಥ್ಯ ತೋರಿ  ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದೇನೆ.

 

lಗೋಪಿಚಂದ್‌ ಅಕಾಡೆಮಿಗೆ ಸೇರಿದ್ದು ಯಾವಾಗ?

ಸಬ್‌ಜೂನಿಯರ್‌ ಮತ್ತು ಜೂನಿಯರ್‌ ಹಂತ ಗಳಲ್ಲಿ ಚೆನ್ನಾಗಿ ಆಡುತ್ತಿದ್ದುದರಿಂದ 13ನೇ ವಯಸ್ಸಿನಲ್ಲಿ (2005) ಅಪ್ಪ, ಗೋಪಿಚಂದ್‌ ಅಕಾಡೆಮಿಗೆ ಸೇರಿಸಿದರು. ಅಲ್ಲಿ  ಗೋಪಿ ಸರ್‌ ನನ್ನ ಪ್ರತಿಭೆಗೆ ಸಾಣೆ ಹಿಡಿದರು. 

 

lಗೋಪಿಚಂದ್‌ ಅವರ ತರಬೇತಿ ಕ್ರಮ ಹೇಗಿರುತ್ತದೆ?

ಅವರು ತುಂಬಾ ಶ್ರಮಜೀವಿ. ತರಬೇತಿ  ವಿಚಾರದಲ್ಲಿ ಅಷ್ಟೇ ಕಟ್ಟುನಿಟ್ಟು. ಅಭ್ಯಾಸದ ವೇಳೆ ಖುದ್ದು ಹಾಜರಿದ್ದು ಎಲ್ಲರ ಆಟವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಬಳಿಕ ತಪ್ಪನ್ನು ತಿದ್ದುತ್ತಾರೆ. ಕಠಿಣ ಅಭ್ಯಾಸದ ಜೊತೆಗೆ ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತಲೂ ಚಿತ್ತ ಹರಿಸುವಂತೆ ಸಲಹೆ ನೀಡುತ್ತಾರೆ. 

 

lನಿಮ್ಮ ಆಟದಲ್ಲಿ ಏನು ಸುಧಾರಣೆ ಆಗಬೇಕು ಅನಿಸುತ್ತದೆ?

ನೆಟ್‌ನ ಸಮೀಪದಲ್ಲಿ ತುಂಬಾ ಚೆನ್ನಾಗಿ ಆಡುತ್ತೇನೆ. ಆದರೆ ಅಂಗಳದಲ್ಲಿ ಚುರುಕಾಗಿ ಓಡುವುದು ಮತ್ತು ಬಲವಾದ ಹೊಡೆತಗಳನ್ನು ಬಾರಿಸುವ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಿದೆ. 

 

lನಿಮ್ಮ ಪ್ರಕಾರ ವಿಶ್ವದ ಅತ್ಯಂತ ಬಲಿಷ್ಠ ಆಟಗಾರ ಯಾರು?

ನಿರ್ದಿಷ್ಟವಾಗಿ ಒಬ್ಬರ ಹೆಸರು ಹೇಳುವುದು ಕಷ್ಟ. ಬ್ಯಾಡ್ಮಿಂಟನ್‌ ಆಡುವ ಎಲ್ಲಾ ದೇಶಗಳ ಆಟಗಾರರೂ ಬಲಿಷ್ಠರೇ ಆಗಿದ್ದಾರೆ.

 

lಮೆಚ್ಚಿನ ಆಟಗಾರ?

ಬ್ಯಾಡ್ಮಿಂಟನ್ ಲೋಕದಲ್ಲಿ ಎತ್ತರದ ಸಾಧನೆ ಮಾಡಿರುವ ಎಲ್ಲರೂ ಇಷ್ಟದ ಆಟಗಾರರೇ. ಎಲ್ಲರಿಂದಲೂ  ಹೊಸ ವಿಷಯ ಮತ್ತು ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಳ್ಳಲು  ಪ್ರಯತ್ನಿಸುತ್ತಿದ್ದೇನೆ.

 

lಕ್ರೀಡಾ ಬದುಕಿನ ಸ್ಮರಣೀಯ ಕ್ಷಣ?

 ಸಿಂಗಪುರ ಸೂಪರ್‌ ಸರಣಿಯಲ್ಲಿ ಪ್ರಶಸ್ತಿ ಗೆದ್ದಿದ್ದು  ನಿಜಕ್ಕೂ ಅವಿಸ್ಮರಣೀಯ.

 

lವಿಶ್ವ ಕ್ರಮಾಂಕ ಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದೀರಿ. ಇದರ ಬಗ್ಗೆ ಹೇಳಿ?

ಸಿಂಗಪುರ ಓಪನ್‌ಗೂ ಮುನ್ನ 30ನೇ ಸ್ಥಾನದಲ್ಲಿದ್ದೆ. ಅಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ಎಂಟು ಸ್ಥಾನ ಬಡ್ತಿ ಸಿಕ್ಕಿದೆ. ಇದು ಕ್ರೀಡಾ ಬದುಕಿನ ಶ್ರೇಷ್ಠ ಸಾಧನೆಯೂ ಹೌದು. ಮುಂದಿನ ಟೂರ್ನಿಗಳಲ್ಲಿ ಇನ್ನಷ್ಟು ಚೆನ್ನಾಗಿ ಆಡಿ ಸ್ಥಾನ ಉತ್ತಮ ಪಡಿಸಿಕೊಳ್ಳುವ ಗುರಿ ಇದೆ.

 

lಈ ವರ್ಷ ಆಡಿದ  14 ಪಂದ್ಯಗಳ ಪೈಕಿ 11ರಲ್ಲಿ ಗೆದ್ದಿದ್ದೀರಿ. ಈ ಯಶಸ್ಸಿನ ಹಿಂದಿನ ಗುಟ್ಟೇನು?

ಅಂಗಳಕ್ಕಿಳಿದ ಮೇಲೆ ಎದುರಾಳಿ ಯಾರು, ಆತನ ಸಾಮರ್ಥ್ಯ ಏನು ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಶ್ರೇಷ್ಠ ಆಟ ಆಡಲು ಪ್ರಯತ್ನಿಸುತ್ತೇನೆ. ಹೀಗಾಗಿಯೇ ಯಶಸ್ಸು  ಒಲಿಯುತ್ತಿದೆ.

 

lಸಿಂಗಲ್ಸ್‌ ಮತ್ತು ಡಬಲ್ಸ್‌. ಇವೆರಡರಲ್ಲಿ ನಿಮ್ಮ ಆದ್ಯತೆ?

ಸಿಂಗಲ್ಸ್‌ಗೆ ಮೊದಲ ಆದ್ಯತೆ ನೀಡುತ್ತೇನೆ. ಆರಂಭದಿಂದಲೂ ಇದರಲ್ಲೇ ಎತ್ತರದ ಸಾಧನೆ ಮಾಡುವ ಕನಸು ಹೊತ್ತಿದ್ದೇನೆ. ಇದರ ನಡುವೆ ಆಗಾಗ ಡಬಲ್ಸ್‌ನಲ್ಲೂ ಭಾಗವಹಿಸುತ್ತೇನೆ.

 

lಭಾರತದಲ್ಲಿ ಬ್ಯಾಡ್ಮಿಂಟನ್‌ಗೆ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ಹೇಳಿ?

ಶುರುವಿನ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ. ಅತ್ಯಾಧುನಿಕ ಮೂಲ ಸೌಕರ್ಯಗಳೂ ಇವೆ. ನಾವು ಕೂಡ  ಚೀನಾ, ಜಪಾನ್‌, ಮಲೇಷ್ಯಾ, ಸ್ಪೇನ್‌ ಮತ್ತು ಇಂಡೊನೇಷ್ಯಾದ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ಒಡ್ಡುವ ಮಟ್ಟಕ್ಕೆ ಬೆಳೆದಿದ್ದೇವೆ.

 

lಮುಂದಿನ ಟೂರ್ನಿಗಳ ಕುರಿತು ಹೇಳಿ?

ಜೂನ್‌ನಲ್ಲಿ  ಇಂಡೊನೇಷ್ಯಾ ಮತ್ತು ಆಸ್ಟ್ರೇಲಿಯಾ ಓಪನ್‌ ಟೂರ್ನಿಗಳು ನಡೆಯುತ್ತವೆ. ಎರಡರಲ್ಲೂ ಪ್ರಶಸ್ತಿ ಗೆಲ್ಲಬೇಕು.  

 

lಜೀವನದ ಗುರಿ?

ಎಲ್ಲಾ ಕ್ರೀಡಾಪಟುಗಳಿಗೂ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆದ್ದು ಕೊಡಬೇಕೆಂಬ ಕನಸಿರುತ್ತದೆ. ನಾನೂ  ಇದರಿಂದ ಹೊರತಾಗಿಲ್ಲ.  

***

ಪ್ರಣೀತ್‌ ಪರಿಚಯ

ಜನನ: 10 ಆಗಸ್ಟ್‌ 1992

ಸ್ಥಳ: ಹೈದರಾಬಾದ್‌

ಆಟದ ಶೈಲಿ: ಬಲಗೈ 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry