7

ಲಾಭದ ನಗದೀಕರಣಕ್ಕೆ ಅವಕಾಶ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆ ವಹಿವಾಟಿಗೆ ಲಿಸ್ಟಿಂಗ್  ಅದ ಸಿಎಲ್ ಎಜುಕೇಟ್ ಲಿಮಿಟೆಡ್ ಕಂಪೆನಿ ಇತ್ತೀಚಿಗೆ ಪ್ರತಿ ಷೇರಿಗೆ ₹502 ರಂತೆ ಸಾರ್ವಜನಿಕರಿಗೆ ವಿತರಿಸಿ  ಮೊದಲ  ದಿನದಿಂದಲೂ ವಿತರಣೆ ಬೆಲೆ ತಲುಪಿದಾಯಿತು.  ಷೇರಿನ ಬೆಲೆಯು ₹349.55 ರವರೆಗೂ ಕುಸಿದಿತ್ತು. ಇದಕ್ಕೆ ಕಾರಣ ಷೇರಿನ ವಹಿವಾಟು  ಟಿ ಗುಂಪಿನಲ್ಲಿತ್ತು.  ಅಂದರೆ ವಹಿವಾಟಾದ ಷೇರುಗಳು ಸಂಪೂರ್ಣವಾಗಿ ವಿಲೇವಾರಿಯಾಗುವ ಗುಂಪು ಇದಾಗಿದೆ.

ಖರೀದಿಸಿದರೆ ಷೇರುಗಳನ್ನು ಡೆಲಿವರಿ ತೆಗೆದುಕೊಳ್ಳಲೇಬೇಕು, ಮಾರಾಟ ಮಾಡಿದರೆ ಷೇರು ಡೆಲಿವರಿ ನೀಡಲೇಬೇಕು.  ಇಲ್ಲಿ ಶೇ100  ವಿಲೇವಾರಿ ವಹಿವಾಟಾಗಿ, ದೈನಂದಿನ ಚಟುವಟಿಕೆಗೆ ಅವಕಾಶವಿರುವುದಿಲ್ಲ.ಏ.18ರಿಂದ ಈ ಷೇರನ್ನು‘ಟಿ’ಗುಂಪಿನಿಂದ ‘ಬಿ’ ಗುಂಪಿಗೆ ವರ್ಗಾಯಿಸಲಾಯಿತು.ಅಂದು ಷೇರಿನ ಬೆಲೆ ₹426ರಿಂದ ₹474 ರವರೆಗೂ ಏರಿಳಿತ ಪ್ರದರ್ಶಿಸಿದೆ.  

ಶುಕ್ರವಾರದ ವಹಿವಾಟಿನಲ್ಲಿಶೇ 47 ರಷ್ಟು ಮಾತ್ರ ವಿಲೇವಾರಿಯಾಗಿ, ಉಳಿದವು ದೈನಂದಿನ ವಹಿವಾಟಿನಲ್ಲಿ ಚುಕ್ತಾ ಆಗಿದೆ.   ಇನ್ನು ಈ ವಾರ ಹೆಚ್ಚಿನ ಏರಿಕೆ ದಾಖಲಿಸಿದ ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಲಿಮಿಟೆಡ್‌ ಡೆಲಿವರಿ ಯಾಗುವ ಷೇರುಗಳ ಸಂಖ್ಯೆ ಕೇವಲ ಶೇ10 ಮಾತ್ರ.  ಹಾಗೆಯೇ ಮತ್ತೊಂದು ಚುರುಕಾದ ಏರಿಕೆ ಕಂಡ ಕಂಪೆನಿ ಅದಾನಿ ಎಂಟರ್‌ಪ್ರೈಸಸ್. ಡೆಲಿವರಿಯಾಗುವ ಷೇರು ಶೇ11 ರಷ್ಟಿದ್ದು, ಉಳಿದ ಷೇರು ಡೇ  ಟ್ರೇಡಿಂಗ್‌ನಲ್ಲಿ ಚುಕ್ತಾ ಆಗುವುದು.  ಅಂದರೆ ಷೇರುಪೇಟೆಯಲ್ಲಿ ಸ್ಪೆಕ್ಯೂಲೇಟಿವ್ ವ್ಯವಹಾರವು ಹೆಚ್ಚಾಗಿರುವುದಕ್ಕೆ ಷೇರಿನ ಬೆಲೆ ಗಗನಕ್ಕೇರಿರುವುದೇ ಕಾರಣವಾಗಿದೆ.

ಪಿಎಸ್‌ಯು ಸೂಚ್ಯಂಕ,ಬ್ಯಾಂಕೆಕ್ಸ್, ಎನರ್ಜಿ, ಫೈನಾನ್ಸ್, ಆಯಿಲ್ ಅಂಡ್ ಗ್ಯಾಸ್, ರಿಯಾಲ್ಟಿ ಸೂಚ್ಯಂಕ,   ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ ಈ ವಾರ ವಾರ್ಷಿಕ ಗರಿಷ್ಠವಲ್ಲದೆ ಸರ್ವಕಾಲೀನ ಗರಿಷ್ಠ ದಾಖಲಿಸಿವೆ.

ಷೇರುಪೇಟೆಯಲ್ಲಿ ಷೇರಿನ ದರ ಏರಿಕೆ ಮತ್ತು ಇಳಿಕೆ ಕಾಣುವುದನ್ನು  ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗಿರುವುದಕ್ಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿರುವುದಾಗಿದೆ. ಯಾವುದೇ ಬೆಳವಣಿಗೆಗಳನ್ನು ವಿಶೇಷವಾಗಿ ಅದು ಕಂಪೆನಿಯ ಷೇರಿನ ಮೇಲೆ ಪ್ರಭಾವ ಬೀರುವಂತಹುದಾದರೆ ತಕ್ಷಣ ಅಂಥವನ್ನು ಆ ಷೇರು ಲಿಸ್ಟ್ ಅದ ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಲೇಬೇಕು. 

ಈ ಅಂಶದ ಕಾರಣವೇ ಸೋಮವಾರ ಸಾರ್ವಜನಿಕ ವಲಯದ ಪವರ್ ಫೈನಾನ್ಸ್, ರೂರಲ್ ಎಲೆಕ್ಟ್ರಿ ಫಿಕೇಷನ್ ಕಾರ್ಪೊರೇಷನ್,   ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ತ್ವರಿತವಾದ ಇಳಿಕೆಯನ್ನು ದಿನದ ಮಧ್ಯಂತರದಲ್ಲಿ ಕುಸಿತ ಕಂಡವು.  ಕುಸಿತದ ವೇಗ ಎಷ್ಟರ ಮಟ್ಟಿಗಿತ್ತು ಎಂದರೆ  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್  ಕಂಪೆನಿಯ ಷೇರು ₹214ರಲ್ಲಿ ಇದ್ದದ್ದು   ದಿಢೀರ್ ಕುಸಿತದಿಂದ ₹203ಕ್ಕೆ  ವೇಗವಾಗಿ ಕುಸಿಯಿತು.  ಅದೇ ರೀತಿ ಪವರ್ ಫೈನಾನ್ಸ್ ಸಹ ₹168 ರ ಸಮೀಪದಿಂದ ₹154ರವರೆಗೂ ಕುಸಿಯಿತು.  ಈ ಕುಸಿತದ ಹಿಂದೆ ಆಗ ಹೊರಬಿದ್ದ ಸುದ್ದಿ, ಸರ್ಕಾರ ತನ್ನ ಬಂಡವಾಳ ಹಿಂತೆಗೆತ ಯೋಜನೆಯಡಿ  ಫೈನಾನ್ಸ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್,   ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸೇಲ್,  ಎನ್‌ಹೆಚ್‌ಪಿಸಿ, ಎನ್‌ಟಿಪಿಸಿ  ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲಿದೆ ಎಂಬುದಾಗಿದೆ.

ಸೋಮವಾರ ದಿನದ ಆರಂಭದಿಂದಲೂ ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಕಂಪೆನಿಯ ಷೇರು ಹೆಚ್ಚು ಏರಿಕೆ ಕಾಣಲಾರಂಭಿಸಿತು.  ಈ ಕಂಪೆನಿಯು ಗೃಹ ನಿರ್ಮಾಣ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಚಟುವಟಿಕೆ ಬೇರ್ಪಡಿಸಿ ಪ್ರತ್ಯೇಕ ಕಂಪೆನಿಗಳನ್ನಾಗಿಸುವ ನಿರ್ಧಾರ ಇದಕ್ಕೆ  ಕಾರಣ. 

ಈ ಕಂಪೆನಿಯ ಷೇರಿನ ಬೆಲೆಯೂ 18ನೇ  ಏಪ್ರಿಲ್  2016 ರಲ್ಲಿ ₹54 ರ ಸಮೀಪವಿದ್ದು ಅದು ವಾರ್ಷಿಕ ಕನಿಷ್ಠವಾಗಿದೆ. ಸರಿಯಾಗಿ ಒಂದು ವರ್ಷದ ದಲ್ಲಿ ₹150.90ರ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.  ಸೋಮವಾರ ಸರಿಯಾಗಿ ವಾರ್ಷಿಕ ಕನಿಷ್ಠ ತಲುಪಿದ ದಿನದಿಂದ ಒಂದು ವರ್ಷದ ಕೊನೆ ದಿನ  ಸುಮಾರು ಒಂದೇ ದಿನ ಶೇ42 ರಷ್ಟು ಏರಿಕೆ ದಾಖಲಿಸಿರುವುದು ಸಹಜ ಚಟುವಟಿಕೆಯಲ್ಲ.  

ಈ ಷೇರು ಇತ್ತೀಚಿಗೆ ಮೂಲಾಧಾರಿತ ಪೇಟೆಯಿಂದ ಮಿತಿಮೀರಿದ ಚಟುವಟಿಕೆಯ ಕಾರಣ,  ಅಮಾನತುಗೊಂಡಿದೆ.  ಈ ಕಾರಣ ಶೂನ್ಯ ಮಾರಾಟಗಾರರನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕ್ರಮವಾಗಿರಲೂಬಹುದು.  ಆದರೆ ಷೇರುದಾರರಿಗೆ ಲಾಭದ ನಗದೀಕರಣ ಮಾಡಿಕೊಳ್ಳಲು ಒಂದು ಅವಕಾಶ ಪೇಟೆ ಒದಗಿಸಿದೆ.

ಒಟ್ಟಾರೆ ಸಂವೇದಿ ಸೂಚ್ಯಂಕವು 96 ಅಂಶ ಕುಸಿತ ಕಂಡರೆ, ಮಧ್ಯಮ ಶ್ರೇಣಿಯ ಸೂಚ್ಯಂಕ 136 ಅಂಶ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 285 ಅಂಶ ಏರಿಕೆಯಿಂದ ಪೇಟೆಯಲ್ಲಿ ನಡೆಯುತ್ತಿರುವ ಚಟುವಟಿಕೆಯ ರೀತಿ ಮತ್ತು ಅಡಕವಾಗಿರುವ ಅಪಾಯದ ಮಟ್ಟವನ್ನು  ತೋರಿಸುತ್ತದೆ.  

ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾಗಿ ₹3,001  ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,492 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹123.34 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡುಕೊಂಡಿದೆ. 

ಬೋನಸ್ ಷೇರು:  ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ ಲಿಮಿಟೆಡ್  1:10 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಶಾಂತಾಯ್ ಇಂಡಸ್ಟ್ರೀಸ್ ಲಿಮಿಟೆಡ್, ಎಕ್ಸ್‌ಟಿ ಗುಂಪಿನಲ್ಲಿ ವಹಿವಾಟಾಗುತ್ತಿರುವ ಕಂಪೆನಿ ಮೇ 5ರಂದು  ಬೋನಸ್ ಷೇರು ಪರಿಶೀಲಿಸಲಿದೆ.

ಲಾಭಾಂಶ: ಸೈಯೆಂಟ್ ಲಿಮಿಟೆಡ್ ಪ್ರತಿ ಷೇರಿಗೆ ₹5(ಮುಖ ಬೆಲೆ ₹5), ಎಚ್‌ಡಿ ಎಫ್‌ಸಿ ಬ್ಯಾಂಕ್ ₹11 (₹2), ಓರಿಯೆಂಟ್ ಪೇಪರ್ ಅಂಡ್ ಇಂಡಸ್ಟ್ರೀಸ್ ₹0.50(₹1), ಟಿಸಿಎಸ್ ₹27.50 (₹1), ವಿಎಸ್‌ಟಿ ಇಂಡಸ್ಟ್ರೀಸ್  ₹75.

ಹೊಸ ಷೇರು: ದೆಹಲಿಯ ಪುಸ್ತಕ ಪ್ರಕಟಣೆ ಕಂಪೆನಿ ಎಸ್. ಚಂದ್ ಆ್ಯಂಡ್ ಕಂಪೆನಿ ತನ್ನ ₹5 ರ ಮುಖಬೆಲೆಯ ಷೇರುಗಳನ್ನು,  ಈ ತಿಂಗಳ 26 ರಿಂದ 28 ರವರೆಗೂ, ಪ್ರತಿ ಷೇರಿಗೆ ₹660 ರಿಂದ ₹670 ರ ಅಂತರದಲ್ಲಿ, 22 ಷೇರುಗಳ ಗುಣಕಗಳಲ್ಲಿ ಸಾರ್ವಜನಿಕ ವಿತರಣೆ ಮಾಡಲಿದೆ. 

ಈ ಕಂಪೆನಿಯ ಷೇರುಗಳು ಬಾಂಬೆ ಷೇರು ವಿನಿಮಯ ಕೇಂದ್ರ ಹಾಗು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‌ಗಳಲ್ಲಿ ವಹಿವಾಟಾಗಲಿವೆ.ಕಲ್ಕತ್ತಾ, ಲೂಧಿಯಾನ, ದೆಹಲಿ ಮತ್ತು ಜಯಪುರ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ  ಪರಮೇಶ್ವರ ಸಿಲ್ಕ್‌ ಮಿಲ್ಸ್ ಲಿಮಿಟೆಡ್   ಷೇರುಗಳು  ಸೋಮವಾರ(ಏ.24)  ಎಕ್ಸ್‌ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಮೂಲಾಧಾರಿತ ಪೇಟೆಯ ಪಟ್ಟಿಗೆ ಹೊಸ  ಸೇರ್ಪಡೆ: ಬಜಾಜ್ ಫಿನ್ ಸರ್ವ್, ಬರ್ಜರ್ ಪೇಂಟ್ಸ್, ಎಂಆರ್‌ಪಿಎಲ್, ಎನ್‌ಬಿಸಿಸಿ, ನೆಸ್ಲೆ ಇಂಡಿಯಾ, ಚೋಳಮಂಡಲಂ ಇನ್ವೆಸ್ಟ್‌ಮೆಂಟ್ಸ್, ಬಾಲಕೃಷ್ಣ ಇಂಡಸ್ಟ್ರೀಸ್, ಫೋರ್ಟಿಸ್ ಹೆಲ್ತ್ ಕೇರ್, ಮಹಾನಗರ ಗ್ಯಾಸ್, ವಿ ಗಾರ್ಡ್ ಇಂಡಸ್ಟ್ರೀಸ್, ಕ್ಯಾನ್‌ಫಿನ್ ಹೋಮ್ಸ್, ಎಂಸಿ ಎಕ್ಸ್,  ಗಾಡ್ ಫ್ರೆ ಫಿಲಿಪ್ಸ್, ಜಿಎಸ್ಎಫ್ ಸಿ,  ರೇಮಾಂಡ್, ಬಲರಾಂಪುರ್ ಚೀನಿ ಮಿಲ್ಸ್  ಷೇರುಗಳು ಇದೇ 28 ರಿಂದ   ಆರಂಭವಾಗುವ  ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‌ನ ಮೂಲಾಧಾರಿತ ಪೇಟೆಯ ಹೊಸ ಚುಕ್ತಾ ಚಕ್ರದ ವಹಿವಾಟಿನ ಪಟ್ಟಿಗೆ ಸೇರ್ಪಡೆಯಾಗಲಿವೆ.   

ಈ ಕಾರಣ ಏ.20 ರಂದು ಈ ಪಟ್ಟಿಯ ಹೆಚ್ಚಿನ  ಕಂಪೆನಿಗಳು ಆರಂಭದಲ್ಲಿ ಆಕರ್ಷಕ ಏರಿಕೆ ಪಡೆದವಾದರೂ ಸ್ಥಿರತೆ ಕಾಣದೆ ಇಳಿಕೆ ಕಂಡವು.  ಎನ್‌ಬಿಸಿಸಿ, ಬಲರಾಂಪುರ್ ಚಿನ್ನಿ ಮಿಲ್ಸ್  ಸ್ವಲ್ಪಮಟ್ಟಿನ ಸ್ಥಿರತೆ ಕಂಡುಕೊಂಡವು.  ಬಜಾಜ್ ಫಿನ್ ಸರ್ವ್, ನೆಸ್ಲೆ ಇಂಡಿಯಾ, ಚೋಳಮಂಡಲಂ ಇನ್ವೆಸ್ಟ್ ಮೆಂಟ್ಸ್, ಬಾಲಕೃಷ್ಣ ಇಂಡಸ್ಟ್ರೀಸ್,  ಕ್ಯಾನ್ ಫಿನ್ ಹೋಮ್ಸ್,  ಗಾಡ್ ಫ್ರೆ ಫಿಲಿಪ್ಸ್, ನಂತಹ ಹೆಚ್ಚಿನ ಮೌಲ್ಯದ ಷೇರುಗಳು ಹೆಚ್ಚಾಗಿ ವಿತ್ತೀಯ ಸಂಸ್ಥೆಗಳ ಕೈಲಿರುವುದರಿಂದ ಇವುಗಳಲ್ಲಾಗುವ ರಭಸದ ಏರಿಳಿತಗಳ,  ಸಣ್ಣ ಹೂಡಿಕೆದಾರರು,  ವೀಕ್ಷಕರಾಗುವಂತಾಗಿದೆ.

ವಾರದ ವಿಶೇಷ

ಷೇರುಪೇಟೆ ಹೆಚ್ಚು ಏರಿಕೆ ಕಂಡಂತೆಲ್ಲಾ ಸಾರ್ವಜನಿಕರಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ.  ಇದು ಹಿಂದಿನಿಂದಲೂ ಬಂದಿರುವ ಪದ್ಧತಿ. ಪೇಟೆಯಲ್ಲಿ ವ್ಯವಹರಿಸುವ ವಿಧಗಳು  ಭಿನ್ನತೆಯಿಂದ ಕೂಡಿದರೂ ಹೂಡಿಕೆದಾರರು ಅಳವಡಿಸಿಕೊಳ್ಳುವ ರೀತಿ ಮಾತ್ರ ಒಂದೇ ಹಾದಿಯಲ್ಲಿ ಸಾಗಿದೆ. ಪೇಟೆಗಳು ಗರಿಷ್ಠ ಮಟ್ಟದಲ್ಲಿದ್ದಾಗ ಷೇರುಗಳನ್ನು ಕೊಂಡಲ್ಲಿ ಲಾಭ ಗಳಿಕೆಗಿಂತ ಕೈಲಿರುವ ಹಣ ಉಳಿಸಿಕೊಳ್ಳುವುದು ಸಾಹಸಮಯವಾಗುತ್ತದೆ. 

ಈ ಹಂತದಲ್ಲಿ ಬಂಡವಾಳ ಕರಗುವ ವೇಗ ಮಾತ್ರ ಅತಿ ಹೆಚ್ಚು.  ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಯಾಂಕ ಹಾಗೂ ಕಳಪೆ ಷೇರುಗಳಲ್ಲಿ ಹೂಡಿಕೆಗೆ ಮಾಡುವಾಗ ಹೆಚ್ಚಿನ ಎಚ್ಚರ ಅಗತ್ಯ. ಈ ವಲಯಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡುವಾಗ ಆ ಷೇರು ಹಿಂದೆ ತಲುಪಿದ್ದ ಗರಿಷ್ಠ ದರಕ್ಕೆ ಹೆಚ್ಚಿನ ತೂಕ ಕೊಡುವ ಅಗತ್ಯವಿಲ್ಲ.  ವಾಸ್ತವಾಂಶ ಅರಿತು ನಿರ್ಧರಿಸುವುದು ಜಾಣ ನಡೆ.

ಹೊಸದಾಗಿ ಪೇಟೆ ಪ್ರವೇಶ ಮಾಡುವವರು, ಯುವ ಪೀಳಿಗೆಯವರು, ನೌಕರರರು ಷೇರುಪೇಟೆಯ ಚಟುವಟಿಕೆಯನ್ನು ಉಳಿತಾಯ ಭಾವನೆಯಿಂದ ನಡೆಸುವುದು ಸುರಕ್ಷಿತ ವಿಧಾನವಾಗಿದೆ.  ಇಲ್ಲಿನ ಚಟುವಟಿಕೆಗಳು ಈಗಿನ ದಿನಗಳಲ್ಲಿ ಹೆಚ್ಚು ಸಟ್ಟಾ ಮಾದರಿಯಲ್ಲಿದ್ದು, ಪೂರ್ವಕಲ್ಪಿತ ನಿರ್ಧಾರ ಆಧಾರಿತ ಚಟುವಟಿಕೆ ಸುರಕ್ಷಿತವಲ್ಲ.  ಒಂದು ಉತ್ತಮ, ಉತ್ಕೃಷ್ಟ ಮತ್ತು  ಅಗ್ರಮಾನ್ಯ  ಕಂಪೆನಿಯ ಷೇರಿನ ಬೆಲೆಯು ಕುಸಿದಿದೆ ಎಂದರೆ ಅದು ಹೂಡಿಕೆಗೆ ಅವಕಾಶ ಎಂಬುದು ನಿರ್ವಿವಾದ.  

ಅಗ್ರಮಾನ್ಯ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಲ್ಲಿ  ಷೇರಿನ ಬೆಲೆ ಕುಸಿತ ಕಂಡರೂ  ಅವು ಆಕರ್ಷಕ ಲಾಭಾಂಶವನ್ನು, ಬೋನಸ್ ಷೇರನ್ನು, ವಿತರಿಸುವ ಸಾಮರ್ಥ್ಯ ಮತ್ತು ಇತಿಹಾಸ ಹೊಂದಿದೆಯೇ  ಎಂಬುದನ್ನು ತಿಳಿದು ಅಂತಹ ಕಂಪೆನಿಯ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡುವುದು ಒಳಿತು. 

ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ (ಎಸ್ಐಪಿ) ರೀತಿ ಹೂಡಿಕೆಗೂ ಈ ಪದ್ಧತಿ ಅಳವಡಿಸಿಕೊಳ್ಳಬಹುದು.  ಉದಾಹರಣೆಗೆ ಪ್ರತಿ ತಿಂಗಳು ₹10 ಸಾವಿರ  ಉಳಿತಾಯ ಮಾಡಬೇಕೆಂದಿದ್ದರೆ, ಅಗ್ರಮಾನ್ಯ ಕಂಪೆನಿಗಳಲ್ಲಿ ಐದರಿಂದ ಹತ್ತು ಕಂಪೆನಿಗಳ ಪಟ್ಟಿ ಸಿದ್ಧಪಡಿಸಿಕೊಳ್ಳಿರಿ.  ನೀವು ಹೂಡಿಕೆ ಮಾಡಬೇಕೆಂದಿರುವ ತಿಂಗಳಲ್ಲಿ, ಈ ಪಟ್ಟಿಯಲ್ಲಿರುವ ಷೇರುಗಳಲ್ಲಿ ಯಾವುದರ ಬೆಲೆ ಇಳಿಕೆಯಾಗಿದೆಯೋ ಆ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಿರಿ. 

ಹೀಗೆ ಕ್ರಮೇಣ ನಿಮ್ಮ ಹೂಡಿಕೆ ಗುಚ್ಛವು ಬೆಳೆದು ಕೆಲವು ವರ್ಷಗಳ ನಂತರ ಸದೃಢವಾದ ಗುಚ್ಛವಾಗಿರುತ್ತದೆ.  ಒಂದು ವೇಳೆ ಹಣದ ಅವಶ್ಯಕತೆ ಬಂದಲ್ಲಿ, ಅವಶ್ಯಕತೆಗೆ ತಕ್ಕಷ್ಟು ಷೇರುಗಳ ಮಾರಾಟ ಮಾಡಿ ಹಣ ಪಡೆದುಕೊಳ್ಳಬಹುದು. ಒಮ್ಮೊಮ್ಮೆ ಈ ಪಟ್ಟಿಯಲ್ಲಿನ ಷೇರುಗಳು ಅಗಾಧವಾದ ಕುಸಿತ ಕಂಡ ಸಂದರ್ಭದಲ್ಲಿ ನಿಮ್ಮ ಹೂಡಿಕೆ ಪ್ರಮಾಣ ಹೆಚ್ಚಿಸಿಕೊಂಡು ಅವಕಾಶದ ಲಾಭ ವೃದ್ಧಿಸಿಕೊಳ್ಳಬಹುದು.  

ಪೇಟೆಯಲ್ಲಿ ಹೆಚ್ಚು ಸ್ಪೆಕ್ಯೂಲೇಟಿವ್ ಚಟುವಟಿಕೆ ನಡೆಯುತ್ತಿರುವುದರಿಂದ ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡಿರಿ.  ಷೇರು ವಿನಿಮಯ ಕೇಂದ್ರಗಳು ಸಹ ತಮ್ಮ ವಹಿವಾಟಿನ ಗಾತ್ರ ಹೆಚ್ಚಿಸಿಕೊಳ್ಳುವ ಭರದಲ್ಲಿ ಮೂಲಾಧಾರಿತ ಪೇಟೆಗಳಿಗೆ ಹೆಚ್ಚಿನ ಕಂಪೆನಿಗಳನ್ನು ಸೇರಿಸುತ್ತಿದ್ದು, ಇದು ಪೇಟೆಯಲ್ಲಿ ಹೆಚ್ಚಿನ ಏರಿಳಿತ ಉಂಟುಮಾಡುತ್ತದೆ.

ಕನ್ನಡಿಯಲ್ಲಿ ಕಾಣುವುದಕ್ಕಿಂತ, ಲಾಭವನ್ನು ಕೈಗೆಟುಕಿಸಿಕೊಂಡು ಕಿಸೆ ಸೇರಿಸಿಕೊಂಡು, ಅವಕಾಶಕ್ಕೆ ಕಾಯುವ ಸಹನೆ ಬೆಳೆಸಿಕೊಂಡಲ್ಲಿ ಪೇಟೆಯು  ಉತ್ತಮ ಲಾಭ ದೊರಕಿಸಿಕೊಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry