ಭಾನುವಾರ, ಮೇ 29, 2022
31 °C
ಸಿಆರ್‌ಪಿಎಫ್‌ ಮೇಲೆ ಹೊಂಚು ದಾಳಿಯ ಅಟ್ಟಹಾಸ

ನಕ್ಸಲ್‌ ಕ್ರೌರ್ಯ: 25 ಯೋಧರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಸಲ್‌ ಕ್ರೌರ್ಯ: 25 ಯೋಧರು ಬಲಿ

ರಾಯಪುರ: ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮೇಲೆ ಅತ್ಯಂತ ಘೋರ ಹೊಂಚು ದಾಳಿ ನಡೆಸಿರುವ ನಕ್ಸಲರು 25 ಯೋಧರ ಹತ್ಯೆ ನಡೆಸಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಛತ್ತೀಸಗಡದ ದಕ್ಷಿಣ ಬಸ್ತರ್‌ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ಸೋಮವಾರ ಮಧ್ಯಾಹ್ನ 12.25ಕ್ಕೆ ಈ ದಾಳಿ ನಡೆದಿದೆ. ನಕ್ಸಲ್‌ ಉಗ್ರವಾದದಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಪ್ರದೇಶ ಇದು.

ದಾಳಿ ನಡೆಸಿದ ತಂಡದಲ್ಲಿ 300 ನಕ್ಸಲರಿದ್ದರು ಎಂದು ಅಂದಾಜಿಸಲಾಗಿದೆ. ದಾಳಿ ನಡೆದಾಗ ಸಿಆರ್‌ಪಿಎಫ್‌ ಗಸ್ತು ಪಡೆಯಲ್ಲಿ 99 ಯೋಧರಿದ್ದರು. ಮೊದಲಿಗೆ 11 ದೇಹಗಳು ಪತ್ತೆಯಾದವು. ನಂತರ ಶೋಧ ಕಾರ್ಯಾಚರಣೆ ವೇಳೆ 12 ದೇಹಗಳು ಸಿಕ್ಕವು. ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್‌ ಮೂಲಕ ರಾಯಪುರ ಮತ್ತು ಜಗದಾಲ್ಪುರದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಸಾಗುವ ದಾರಿಯಲ್ಲಿ ಒಬ್ಬ ಯೋಧ ಮೃತಪಟ್ಟರು.

ಗಾಯಗೊಂಡಿರುವ ಒಬ್ಬ ಯೋಧ ದಾಳಿಯ ಬಗ್ಗೆ ಹೀಗೆ ವಿವರಿಸಿದ್ದಾರೆ. ‘ನಕ್ಸಲರು ಮೊದಲಿಗೆ ಗ್ರಾಮಸ್ಥರನ್ನು ಕಳುಹಿಸಿ ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ... ದಾಳಿ ನಡೆಸಿದ ಗುಂಪಿನಲ್ಲಿ ಕೆಲವು ಮಹಿಳೆಯರೂ ಇದ್ದರು. ಕಪ್ಪು ಸಮವಸ್ತ್ರ ಧರಿಸಿದ್ದ ನಕ್ಸಲರಲ್ಲಿ ಎ.ಕೆ–47 ಬಂದೂಕುಗಳಿದ್ದವು’ ಎಂದರು.

ಸಿಆರ್‌ಪಿಎಫ್‌ ಪಡೆ ಮರುದಾಳಿ ನಡೆಸಿದೆ. ಅದರಲ್ಲಿ 10–12 ನಕ್ಸಲರು ಸತ್ತಿರಬಹುದು ಎಂದು ಯೋಧ ಹೇಳಿದ್ದಾರೆ. ಸಿಆರ್‌ಪಿಎಫ್‌ ಪಡೆಯ ಕಮಾಂಡರ್‌, ಇನ್ಸ್‌ಪೆಕ್ಟರ್‌ ದರ್ಜೆಯ ಅಧಿಕಾರಿ ರಘವೀರ್‌ ಸಿಂಗ್‌ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟ ಯೋಧರ ಆಯುಧಗಳನ್ನು ನಕ್ಸಲರು ಹೊತ್ತೊಯ್ದಿದ್ದಾರೆ.

ಕೋಬ್ರಾ: ನೆರವು: ದಾಳಿ ನಡೆದ ಪ್ರದೇಶಕ್ಕೆ ವಿಶೇಷ ಪಡೆಗಳನ್ನು ಕಳುಹಿಸಲಾಗಿದೆ. ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೊ ಪಡೆ ಕೂಡ ಅಲ್ಲಿಗೆ ಧಾವಿಸಿದೆ. ಹತ್ತಿರದ ಶಿಬಿರಗಳಿಂದಲೂ ಸಿಆರ್‌ಪಿಎಫ್‌ ಯೋಧರನ್ನು ಕಳುಹಿಸಲಾಗಿದೆ.

ಸಿಆರ್‌ಪಿಎಫ್‌ಗೆ ಮುಖ್ಯಸ್ಥರಿಲ್ಲ: ಅರೆ ಸೇನಾ ಪಡೆಯ ಮುಖ್ಯಸ್ಥರಾಗಿದ್ದ ಕೆ. ದುರ್ಗಾ ಪ್ರಸಾದ್‌ ಅವರು ಫೆಬ್ರುವರಿ 28ರಂದು ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ ಪೂರ್ಣಾವಧಿ ಮುಖ್ಯಸ್ಥರನ್ನು ಸರ್ಕಾರ ಇನ್ನೂ ನೇಮಿಸಿಲ್ಲ. ದೇಶದ ಅತ್ಯಂತ ದೊಡ್ಡ ಅರೆ ಸೇನಾಪಡೆಗೆ ಮುಖ್ಯಸ್ಥರಿಲ್ಲದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ದಾಳಿಯ ಘಟನಾವಳಿ

* ಸೋಮವಾರ ಮಧ್ಯಾಹ್ನ 12.25ಕ್ಕೆ ದಾಳಿ ಆರಂಭ

* 99 ಯೋಧರ ಸಿಆರ್‌ಪಿಎಫ್‌ ಪಡೆ ಮೇಲೆ 300 ನಕ್ಸಲರಿಂದ ಹೊಂಚು ದಾಳಿ

* ಗ್ರಾಮಸ್ಥರನ್ನು ಕಳುಹಿಸಿ ಯೋಧರ ಮಾಹಿತಿ ಕಲೆ ಹಾಕಿದ ನಕ್ಸಲರು

* ನಕ್ಸಲ್‌ ನಿಗ್ರಹಕ್ಕಾಗಿಯೇ 74ನೇ ಬೆಟಾಲಿಯನ್‌ ನಿಯೋಜನೆ ಆಗಿತ್ತು

* ಬುರ್ಕಾಪಾಲ್‌–ಜಗರ್‌ಗುಂಡಾ ನಡುವೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಸಿಆರ್‌ಪಿಎಫ್‌ ಪಡೆ ಗಸ್ತು ನಡೆಸುತ್ತಿತ್ತು.

* ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ಅವರು ಸುಕ್ಮಾಗೆ ಭೇಟಿ ನೀಡಲಿದ್ದಾರೆ

** ಛತ್ತೀಸಗಡದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿ ಹೇಡಿತನದ್ದು. ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಲಾಗಿದೆ.

-ನರೇಂದ್ರ ಮೋದಿ, ಪ್ರಧಾನಿ

* 7–8 ಯೋಧರು ಇನ್ನೂ ಪತ್ತೆಯಾಗಿಲ್ಲ. ಇಡೀ ಪ್ರದೇಶದ ಶೋಧ ನಡೆಸಿ ಎಲ್ಲ ಯೋಧರನ್ನು ಸಂಪರ್ಕಿಸಿದ ಬಳಿಕ ಸಾವಿನ ಪ್ರಮಾಣ ತಿಳಿಯಲಿದೆ.

-ಸಿಆರ್‌ಪಿಎಫ್‌ ಅಧಿಕಾರಿ

ನಕ್ಸಲ್ ದಾಳಿಯ ಕಹಿನೆನಪುಗಳು...

2017, ಮಾರ್ಚ್‌ 12: ಛತ್ತೀಸಗಡ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಹಠಾತ್ ದಾಳಿಗೆ ಸಿಆರ್‌ಪಿಎಫ್‌ನ 12 ಯೋಧರ ಸಾವು. ಯೋಧರಿಂದ ಶಸ್ತ್ರಾಸ್ತ್ರ ದೋಚಿದ ನಕ್ಸಲರು.

2014, ಮಾರ್ಚ್‌ 11: ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 15 ಭದ್ರತಾ ಸಿಬ್ಬಂದಿ ಸಾವು.

2014, ಫೆಬ್ರುವರಿ 28: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ ಆರು ಪೊಲೀಸ್ ಅಧಿಕಾರಿಗಳ ಬಲಿ.

2013, ಜುಲೈ 2: ಜಾರ್ಖಂಡ್ ರಾಜ್ಯದ ಡುಮ್ಕಾದಲ್ಲಿ ನಡೆದ ದಾಳಿಯಲ್ಲಿ ಪಾಕುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಐದು ಪೊಲೀಸ್ ಅಧಿಕಾರಿಗಳ ಸಾವು.

2013, ಮೇ 25: ಛತ್ತೀಸಗಡದ ದರ್ಭಾ ಕಣಿವೆಯಲ್ಲಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ರಾಜ್ಯದ ಮಾಜಿ ಸಚಿವ ಮಹೇಂದ್ರ ಕರ್ಮಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್ ಸೇರಿದಂತೆ 25 ಕಾಂಗ್ರೆಸ್ ಮುಖಂಡರ ಸಾವು.

2012, ಅಕ್ಟೋಬರ್ 18: ಗಯಾ ಜಿಲ್ಲೆಯಲ್ಲಿ ಆರು ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ನಕ್ಸಲೀಯರು.

2010, ಜೂನ್ 29: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಹಠಾತ್ ದಾಳಿಗೆ 26 ಸಿಆರ್‌ಪಿಎಫ್‌ ಯೋಧರ ಬಲಿ.

2010, ಮೇ 8: ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ವಾಹನ ಸ್ಫೋಟಿಸಿ 8 ಜನ ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ನಕ್ಸಲೀಯರು.

2010, ಏಪ್ರಿಲ್ 6: ದಾಂತೇವಾಡ ಜಿಲ್ಲೆಯಲ್ಲಿ 76 ಜನ ಸಿಆರ್‌ಪಿಎಫ್‌ ಯೋಧರ ಹತ್ಯೆ.

2010, ಏಪ್ರಿಲ್ 4: ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ಸ್ಫೋಟಕ ಬಳಸಿ 11 ಜನ ಪೊಲೀಸ್ ಕಮಾಂಡೊಗಳ ಹತ್ಯೆ.

2010, ಫೆಬ್ರುವರಿ 15: ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿಯಲ್ಲಿ ಈಸ್ಟರ್ನ್‌ ಫ್ರಂಟಿಯರ್ ರೈಫಲ್ಸ್‌ನ 24 ಸೈನಿಕರ ಸಾವು.

2009, ಅಕ್ಟೋಬರ್ 8: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಲಹೇರಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ 17 ಪೊಲೀಸರು ಹತ.

2009, ಸೆಪ್ಟೆಂಬರ್ 26: ಬಿಜೆಪಿ ಸಂಸದ ಬಲಿರಾಂ ಕಶ್ಯಪ್ ಅವರ ಇಬ್ಬರು ಮಕ್ಕಳನ್ನು ಜಗದಾಲ್ಪುರದ ಪೈರಗುಡ ಹಳ್ಳಿಯಲ್ಲಿ ಹತ್ಯೆ ಮಾಡಿದ ನಕ್ಸಲೀಯರು.

2009, ಜೂನ್‌ 10: ಜಾರ್ಖಂಡ್‌ನ ಸಾರಂಡಾದಲ್ಲಿ ಒಂಬತ್ತು ಪೊಲೀಸರ ಹತ್ಯೆ.

2009, ಮೇ 22: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 16 ಪೊಲೀಸರ ಸಾವು.

2009, ಏಪ್ರಿಲ್ 13: ಪೂರ್ವ ಒಡಿಶಾದಲ್ಲಿ ಅರೆಸೈನಿಕ ಪಡೆಯ 10 ಸೈನಿಕರನ್ನು ಕೊಂದ ನಕ್ಸಲೀಯರು.

2008, ಜುಲೈ 16: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನೆಲಬಾಂಬ್‌ ಸ್ಫೋಟಿಸಿ 21 ಪೊಲೀಸರನ್ನು ಕೊಂದ ನಕ್ಸಲೀಯರು.

2008, ಜೂನ್‌ 29: ಒಡಿಶಾದ ಬಾಲಿಮೇಲಾ ಜಲಾಶಯದ ಬಳಿ ದೋಣಿ ಮೇಲೆ ದಾಳಿ ನಡೆಸಿ 38 ಯೋಧರನ್ನು ಕೊಂದ ನಕ್ಸಲೀಯರು.

ಐಎಎಸ್‌ ಅಧಿಕಾರಿಯ ಒತ್ತೆ

ಮಲ್ಕನ್‌ಗಿರಿ ಜಿಲ್ಲಾಧಿಕಾರಿ ಆಗಿದ್ದ, ಐಎಎಸ್‌ ಅಧಿಕಾರಿ ವಿನೀಲ್ ಕೃಷ್ಣ ಅವರನ್ನು ನಕ್ಸಲೀಯರು 2011ರ ಫೆಬ್ರುವರಿಯಲ್ಲಿ ಅಪಹರಿಸಿ, ಒಂಬತ್ತು ದಿನ ಒತ್ತೆ ಇರಿಸಿಕೊಂಡಿದ್ದರು.

ನಕ್ಸಲೀಯರ ಜೊತೆ ಮಾತುಕತೆ ನಡೆಸಿದ್ದ ಒಡಿಶಾ ಸರ್ಕಾರ, ಐದು ಜನ ಶಂಕಿತ ನಕ್ಸಲೀಯರನ್ನು ಬಂಧಮುಕ್ತಗೊಳಿಸಿ, ವಿನೀಲ್ ಅವರನ್ನು ಒತ್ತೆಯಿಂದ ಬಿಡಿಸಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.