6

ರಾಮಜ್ಯೋತಿಯೂ ಫಾತಿಮಾಳ ಹುಂಜವೂ

ಟಿ.ಕೆ.ತ್ಯಾಗರಾಜ್
Published:
Updated:
ರಾಮಜ್ಯೋತಿಯೂ ಫಾತಿಮಾಳ ಹುಂಜವೂ

ಅದು ತೊಂಬತ್ತರ ದಶಕದ ಆರಂಭದ ಒಂದು ದಿನ. ಪೊಲೀಸರು, ಕರ್ಫ್ಯೂ ಬಿಟ್ಟರೆ ಅಲ್ಲಿದ್ದದ್ದು ಭಯ, ಭಯ ಮತ್ತು ಭಯ ಮಾತ್ರ. ಭಯದ ಹಿಂದೆಯೇ ನೋವಿನ  ಕತೆಗಳಿದ್ದವು. ಲಂಕೇಶ್ ಪತ್ರಿಕೆಯಿಂದ ವರದಿ ಮಾಡುವ ಸಲುವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ಹೋಗಿದ್ದ ನನಗೆ ಮೊದಲು ಕಂಡುಬಂದ ಚಿತ್ರ ಇದು.

ಅದೆಷ್ಟೋ ಬಡ ಮುಸ್ಲಿಮರ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದವು. ಅಂಗಡಿ ಮುಂಗಟ್ಟುಗಳು ಲೂಟಿಯಾಗಿದ್ದವು. ಬೆರಳೆಣಿಕೆಯಷ್ಟಿದ್ದ ಸಿರಿವಂತ ಮುಸ್ಲಿಮರು ಮಾತ್ರ ಪೊಲೀಸರ ರಕ್ಷಣೆ ಪಡೆದಿದ್ದರು. ವಿವಿಧ ಪತ್ರಿಕೆಗಳಿಂದ ವರದಿಗಾಗಿ ಹೋದವರು ಅದೆಷ್ಟೇ ಬರೆದರೂ ಅಲ್ಲಿನ ಅಲ್ಪಸಂಖ್ಯಾತ ಸಮುದಾಯ ಅನುಭವಿಸಿದ ನೋವು, ಹಿಂಸೆ, ಹಾನಿ, ಅನಾಹುತದ ಒಂದು  ಪರ್ಸೆಂಟ್‌ನಷ್ಟೂ ಹೊರ ಜಗತ್ತಿಗೆ ತಿಳಿಸುವುದು ಸಾಧ್ಯವಾಗಿರಲಿಲ್ಲ.

ಒಂದೊಂದು ಮನೆಯಲ್ಲೂ ಒಂದೊಂದು ಕಣ್ಣೀರ ಕತೆ. ಅವರ ಕಣ್ಣೀರಿಗೆ ಆಳ, ಅಗಲ ಸೇರಿದಂತೆ ಯಾವುದೇ ಅಳತೆ ಇರಲಿಲ್ಲ. ಕೊನೆಯೇ ಇಲ್ಲದ ಅಳತೆ. ಅಂಥಕತೆಗಳನ್ನು ಕೇಳುವ ವ್ಯವಧಾನ ಯಾರ ಕಿವಿಗಳಿಗೂ ಇರಲಿಲ್ಲ. ಬೆಂಕಿ ಬಿದ್ದ ಗುಡಿಸಲುಗಳ ಮುಂದೆ ಚಳಿಕಾಯಿಸಿಕೊಂಡವರೆಷ್ಟೋ, ಕಣ್ಣೀರ ಕೊಳದಲ್ಲಿ ಈಜಿ ವಿಕೃತ ಖುಷಿ ಅನುಭವಿಸಿದವರೆಷ್ಟೋ.

ಬೆಂಕಿಗೆ ಆಹುತಿಯಾಗಿ ಬೂದಿಯಾಗಿ ಪರಿವರ್ತನೆ ಹೊಂದಿದ್ದ ಅಂಥಾ ಒಂದು ಗುಡಿಸಲಿನ ಎದುರು ನಿಂತಾಗ ಅದರ ಮಾಲೀಕ ಮೊಹ್ಮದ್, ಆತನ ಪತ್ನಿ ಮತ್ತು ಮಗಳು ಫಾತಿಮಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಬೆಂಕಿಯ ಹೊಗೆ ಇನ್ನೂ ಆರಿರಲಿಲ್ಲ. ಈ ಮೊಹ್ಮದನಿಗೆ ಜಮೀನೂ ಇರಲಿಲ್ಲ,

ಅಂಗಡಿಯೂ ಇರಲಿಲ್ಲ, ಅಲ್ಲಿ ಇಲ್ಲಿ ಕೂಲಿಮಾಡುತ್ತಾ ಬದುಕು ಸಾಗಿಸುತ್ತಿದ್ದ ಕುಟುಂಬ. ದುಷ್ಕರ್ಮಿಗಳು ಹಾಕಿದ ಬೆಂಕಿಯಿಂದ ಅವರ ಗುಡಿಸಲಿನ ಜತೆ ಪಾತ್ರೆ ಪಡಗ, ಬಟ್ಟೆ, ಆಹಾರ ಧಾನ್ಯಗಳಷ್ಟೇ ಸುಟ್ಟು ನಾಶವಾಗಿರಲಿಲ್ಲ, ಅವರ ಮನಸ್ಸೂ ನೋವಿನ ಬೆಂಕಿಯಲ್ಲಿ ಬೆಂದು ಹೋಗಿತ್ತು. ಮುಂದೇನು ಎಂಬ ಪ್ರಶ್ನೆಗೆ ಉತ್ತರವೇ ಗೊತ್ತಿಲ್ಲದ ಅತಂತ್ರ ಸ್ಥಿತಿ.

ಮೊಹ್ಮದ್ ಮತ್ತು ಆತನ ಪತ್ನಿ ನಡು ವಯಸ್ಕರು. ಅವರ ಪುತ್ರಿ ಫಾತಿಮಾ ಹದಿಹರೆಯದವಳು. ರಾತ್ರಿಯ ಗಂಜಿಗೆ ಏನು ಮಾಡುವುದು? ಆ ರಾತ್ರಿ ಕಳೆಯುವುದಾದರೂ ಎಲ್ಲಿ? ಹದಿಹರೆಯದ ಮಗಳನ್ನು ಇರಿಸಿಕೊಂಡು ಗುಡಿಸಲು ಎದುರಿನ ಖಾಲಿ ಜಾಗದಲ್ಲಿ ಮಲಗುವುದಾದರೂ ಸಾಧ್ಯವೇ? ಆ ರಾತ್ರಿ ಅಲ್ಲಿದ್ದರೆ ಇನ್ನೂ ಏನಾದರೂ ಅನಾಹುತ ಸಂಭವಿಸಬಹುದೆಂಬ ಆತಂಕ. ಏನೂ ತೋಚದ ಸ್ಥಿತಿ. ಆ ದಿಕ್ಕೆಟ್ಟ ಸ್ಥಿತಿ ನೋಡಿ ನನ್ನ ಕಣ್ಣು ತೇವಗೊಂಡಿದ್ದನ್ನು ಕಂಡ ಜತೆಯಲ್ಲೇ ಇದ್ದ ಗೆಳೆಯರಾದ ಎಂ.ಎಚ್.ಯೂನುಸ್ ಮತ್ತು ಇ.ಸುಲೇಮಾನ್ ಶೇಖ್ ಕೂಡಾ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿದ್ದರು. ಅವರತ್ತ ನೋಡಿದೆ. ಮೊದಲು ಈ ಕುಟುಂಬವನ್ನು ರಕ್ಷಿಸಬೇಕು, ಅವರಿಗೊಂದು ಆಶ್ರಯ ಒದಗಿಸಬೇಕು ಅನ್ನುವುದನ್ನು ಬಿಟ್ಟರೆ ಬೇರೇನೂ ಹೊಳೆಯುತ್ತಿರಲಿಲ್ಲ.

ಅದೇ ಸೋಮವಾರಪೇಟೆಯಲ್ಲಿ ಓರ್ವ ಸಿರಿವಂತ ಮುಸ್ಲಿಂ ಪ್ಲಾಂಟರ್ ಇದ್ದರು. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ರಾಜಕಾರಣಿ ಕೂಡಾ. ಬಡ ಮುಸ್ಲಿಮರಿಗೆಲ್ಲ ಬಹಳ ಸಹಾಯ ಮಾಡುತ್ತಿದ್ದರೆಂಬ ಸಂಗತಿ ಜನಜನಿತವಾಗಿತ್ತು. ಮೊಹ್ಮದ್ ಕುಟುಂಬಕ್ಕೆ ಅವರ ಮನೆಯಲ್ಲೇ  ಆಶ್ರಯ ಒದಗಿಸುವಂತೆ ಕೋರಿಕೊಳ್ಳಬೇಕೆಂದು ನಿರ್ಧರಿಸಿ ನಮ್ಮ ಕಾರ್‌ನಲ್ಲಿ (ಸೋಮವಾರಪೇಟೆಯಲ್ಲಿ ಬಿಗುವಿನ ವಾತಾವರಣ ಇದ್ದುದರಿಂದ ಮಡಿಕೇರಿಯಿಂದ ಯಾವುದೇ ಟ್ಯಾಕ್ಸಿ ಅಲ್ಲಿಗೆ ಬರಲು  ಸಿದ್ಧವಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯ ನಾಗರಾಜ್ ತಮ್ಮ ಕಾರನ್ನು ಕೊಟ್ಟಿದ್ದರು. ಅಷ್ಟೇ ಅಲ್ಲ. ‘ಸೋಮವಾರಪೇಟೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವುದರಿಂದ ಏನಾದರೂ ತೊಂದರೆ ಆಗಬಹುದು, ಎಚ್ಚರಿಕೆಯಿಂದ ಹೋಗಿ ಬನ್ನಿ, ಕಾರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದಿದ್ದರು. ಸಂಜೆ ನಾವು ಮಡಿಕೇರಿಗೆ ವಾಪಸಾಗುವುದು ತಡವಾಗಿದ್ದರಿಂದ ಅವರು ಆತಂಕಗೊಂಡಿದ್ದರು. ಹುಷಾರಾಗಿ ವಾಪಸಾಗಿದ್ದನ್ನು ನೋಡಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಅಪ್ಪಟ ಮನುಷ್ಯ ಪ್ರೇಮಿಯಾದ ದಲಿತ ಸಮುದಾಯಕ್ಕೆ ಸೇರಿದ ಆ ವೈದ್ಯ ಈಗ ನಮ್ಮ ನಡುವೆ ಇಲ್ಲ ಎನ್ನುವುದೇ ಬೇಸರದ ಸಂಗತಿ) ಅವರನ್ನು ಕರೆದೊಯ್ಯಲು ಮುಂದಾದೆವು. ಮೊಹ್ಮದ್ ಮತ್ತು ಅವರ ಪತ್ನಿ ಬಂದು ಕಾರ್‌ನಲ್ಲಿ ಕುಳಿತರೂ ಫಾತಿಮಾ ಮಾತ್ರ ಇನ್ನೂ ಬಂದಿರಲಿಲ್ಲ. ನಮಗೋ ಆತಂಕ. ಕತ್ತಲು ನಿಧಾನಕ್ಕೆ ಆವರಿಸುತ್ತಿದೆ. ಈ ಕುಟುಂಬವನ್ನು ಹೇಗಾದರೂ ಮಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿ ವಾಪಸಾದರೆ ಸಾಕೆಂಬ ಆತುರ ನಮ್ಮಲ್ಲಿತ್ತು. ಮೊದಲೇ ಅಲ್ಲಿ ಅಂತೆಕಂತೆಗಳ ಸಂತೆ, ವದಂತಿಗಳ ಮಹಾಪೂರ. ಮುಸ್ಲಿಂ ಕುಟುಂಬವೊಂದನ್ನು ಯಾರೋ ಕಾರ್‌ನಲ್ಲಿ ಕರೆದೊಯ್ದರು ಎಂಬ ವದಂತಿ ಯಾರಾದರೂ ಹಬ್ಬಿಸಿದರೆ ಎಂಬ ಕಳವಳ ಬೇರೆ. ಎಷ್ಟು ಹೊತ್ತಾದರೂ ಫಾತಿಮಾ ಕಾಣುತ್ತಿಲ್ಲ. ಹೊರಡುವ ಹೊತ್ತಿನಲ್ಲಿ ಈ ಹುಡುಗಿ ಎಲ್ಲಿ ಹೋದಳಪ್ಪ ಎಂದು ಮನಸ್ಸಿನಲ್ಲೇ ಬೈದುಕೊಂಡು ಗುಡಿಸಲಿನ ಅವಶೇಷಗಳ ಹಿಂದೆ ನಾನು,  ಯೂನುಸ್ ಮತ್ತು ಸುಲೇಮಾನ್ ಹುಡುಕುತ್ತಾ ಹೋದರೆ ಸ್ವಲ್ಪ ದೂರದಲ್ಲಿ ಫಾತಿಮಾ ಹುಂಜವೊಂದನ್ನು ಹಿಡಿದುಕೊಂಡು ಓಡಿ ಬರುತ್ತಿದ್ದುದು ಕಾಣಿಸಿತು. ಅವಳನ್ನು ಬಯ್ಯಬೇಕೆಂದರೂ ಕಣ್ಣೀರು ಕಾಣೆಯಾಗಿ ನಗುಮೊಗದಲ್ಲಿದ್ದ ಹುಡುಗಿಗೆ ಮತ್ತೆ ನೋವುಂಟು ಮಾಡಬಾರದೆಂದು ಸುಮ್ಮನಾದೆ. ನಮ್ಮ ಹತ್ತಿರ ಬಂದವಳೇ,  ‘ಇದು ನಾನು ಸಾಕಿದ ಹುಂಜ. ಪುಟ್ಟ ಮರಿಯಿಂದ ನಾನೇ ಸಾಕಿದ್ದೇನೆ. ಗುಡಿಸಿಲಿಗೆ ಬೆಂಕಿ ಬಿದ್ದು ಅದಕ್ಕೆ ಏನಾಯಿತೋ ಏನೋ ಎಂದು ಹುಡುಕುತ್ತಿದ್ದೆ. ನನ್ನ ಅದೃಷ್ಟಕ್ಕೆ ಸಿಕ್ಕಿತು. ನಮಗಿರುವುದು ಇದೊಂದೇ ಆಸ್ತಿ’ ಎಂದಾಗ ಕಣ್ಣೀರು ನಮ್ಮ ಆಸ್ತಿಯಾಗಿತ್ತು. ಆ ಸಂದರ್ಭ ನಮಗೆ ಬಡ ಮುಸ್ಲಿಂ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನಷ್ಟೇ ತೋರಿಸಿಕೊಟ್ಟಿರಲಿಲ್ಲ, ಸಂಬಂಧಗಳ ಅರ್ಥಕ್ಕೆ ಹೊಸತೊಂದು ವ್ಯಾಖ್ಯೆ ಬರೆದಿತ್ತು.

ಮೊಹ್ಮದ್, ಆತನ ಪತ್ನಿ ಮತ್ತು ಮಗಳ ಜತೆ ಹುಂಜ ಎಂಬ ಇನ್ನೋರ್ವ ಅತಿಥಿಯನ್ನೂ ಕಾರ್‌ನಲ್ಲಿ ಕೂರಿಸಿಕೊಂಡು ಆ ಸಿರಿವಂತ ಮುಸ್ಲಿಂ ಪ್ಲಾಂಟರ್ ಬಂಗಲೆಗೆ ಹೋದರೆ ಅಲ್ಲಿ ಸರ್ಪಗಾವಲು. ಪೊಲೀಸರಿಗೆ ನಮ್ಮ ಪರಿಚಯ ಹೇಳಿ ಒಳಹೋದರೆ, ಆ ಸಿರಿವಂತ ಪ್ಲಾಂಟರ್, ತಮ್ಮ ಕುಟುಂಬದ ಸದಸ್ಯರು ಮತ್ತು ಒಂದಷ್ಟು ಜನರೊಂದಿಗೆ ಕುಳಿತಿದ್ದರು. ನಾವು ಅವರ ಬಳಿ ಹೋಗಿ ಮೊಹ್ಮದ್ ಕುಟುಂಬದ ಅತಂತ್ರ ಪರಿಸ್ಥಿತಿಯನ್ನು ವಿವರಿಸಿ ವಾತಾವರಣ ತಿಳಿಯಾಗುವವರೆಗೆ ಆಶ್ರಯ ನೀಡುವಂತೆ ಕೇಳಿಕೊಂಡೆವು. ನಮ್ಮ ಮನವಿಗೆ ಆತ ಸ್ಪಂದಿಸಲಿಲ್ಲ. ‘ಇವತ್ತು ಇವರಿಗೆ ಆಶ್ರಯ ಕೊಟ್ರೆ ನಾಳೆ ಇನ್ನೊಬ್ರು ಬರ್ತಾರೆ, ಅವರನ್ನು ನೋಡಿಕೊಂಡು ಮತ್ತೆ ಇನ್ನಷ್ಟು ಜನ್ರು ಬರ್ತಾರೆ’ ಅಂದರು. ‘ನಿಮ್ಮನ್ನು ಮುಸ್ಲಿಮರೆಲ್ಲ ಬಡವರ ಬಂಧು ಎಂದುಕೊಂಡಿದ್ದಾರೆ. ಈ ಕುಟುಂಬಕ್ಕೆ ನೀವೇನೂ ಹಣ ಕೊಡಬೇಕಿಲ್ಲ. ಒಂದೆರಡು ದಿನ ಅನ್ನ ಹಾಕಿದರೆ ಸಾಕು. ನಿಮ್ಮ ಮನೆ ಜಗಲಿಯಲ್ಲೇ ಮಲಗಿಕೊಳ್ಳುತ್ತಾರೆ. ಪೊಲೀಸರು ಇರುವುದರಿಂದ ಅವರಿಗೇನೂ ತೊಂದರೆ ಆಗುವುದಿಲ್ಲ’  ಅಂದಿದ್ದಕ್ಕೆ ಆತ, ‘ಬಡವರ ಬಂಧು ಅಂದರೆ ಬಂದ ಬಂದವರಿಗೆಲ್ಲ ಜಾಗ ಕೊಡೋಕ್ಕೆ ಆಗ್ತದಾ?’ ಎಂದು ಮರು ಪ್ರಶ್ನೆ ಹಾಕಿದ. ಆ ಭಾರೀ ಬಂಗಲೆಯಲ್ಲಿ ಆತನ ಕುಟುಂಬದವರಲ್ಲದೆ ಇನ್ನೂ ಇನ್ನೂರು ಮಂದಿಯಾದರೂ ಉಳಿದುಕೊಳ್ಳಲು ಅವಕಾಶವಿತ್ತು. ಆತನಿಗೆ ಹಣದ ಕೊರತೆಯೂ ಇರಲಿಲ್ಲ.

‘ನಾನೇನಾದ್ರೂ ಇವರಿಗೆ ಇರಲಿಕ್ಕೆ ಜಾಗ ಕೊಟ್ಟರೆ ಅವರೆಲ್ಲ (ಕೋಮು ಹಿಂಸೆಗೆ ಕಾರಣರಾದವರು) ನನಗೆ ತೊಂದ್ರೆ ಮಾಡ್ತಾರೆ. ಆಗ ನೀವು ಬರ್ತೀರಾ?’ ಆತನ ಪ್ರಶ್ನೆಗಳು ನಿಂತಿರಲಿಲ್ಲ. ಆಗ ನಾನು ಹೇಳಿದೆ,  ‘ನೋಡಿ. ನಾನು ಇವರನ್ನೆಲ್ಲ ನನ್ನ ಮನೆಗೆ ಕರೆದೊಯ್ಯಬಹುದು. ಆದರೆ ಸೋಮವಾರಪೇಟೆಯ ಪರಿಸ್ಥಿತಿ ನೋಡಿದರೆ ಯಾವನೋ ಒಬ್ಬ ಹಿಂದೂ ಬಂದು ಮುಸ್ಲಿಂ ಕುಟುಂಬವೊಂದನ್ನು ಅಪಹರಿಸಿದ್ದಾನೆ ಎಂಬ ವದಂತಿ ಹಬ್ಬಿದರೆ ಪರಿಸ್ಥಿತಿ ಏನಾಗಬಹುದು ಯೋಚಿಸಿ’ ಎಂದೆ. ಆದರೂ ಆತ ಮೊಹ್ಮದ್ ಕುಟುಂಬಕ್ಕೆ ಆಶ್ರಯ ನೀಡಲು ಸಮ್ಮತಿಸಲಿಲ್ಲ. ಬಡ ಮುಸ್ಲಿಮರ ಪಾಲಿನ ಬಂಧು ಎಂದು ಪ್ರಚಾರ ಪಡೆದಿದ್ದ ಆ ವ್ಯಕ್ತಿ ಸುಳ್ಳುಗಳನ್ನೇ ತನ್ನ ಪ್ರಚಾರಕ್ಕೆ ಬಳಸಿಕೊಂಡಿದ್ದ ಅನ್ನುವುದು ಮನದಟ್ಟಾಯಿತು. ಅಲ್ಲೇ ನಮ್ಮ ಹಿಂದೆ ಹುಂಜ ಹಿಡಿದುಕೊಂಡು ನಿಂತಿದ್ದ ಫಾತಿಮಾಳತ್ತ ನೋಡಿದ ಆತ, ಹುಂಜವನ್ನು ತೋರಿಸಿ, ಮಲಯಾಳಂ ಭಾಷೆಯಲ್ಲೇ ಅದಕ್ಕೆ ಎಷ್ಟು ಕೊಡಬೇಕು? ಇವತ್ತು ರಾತ್ರಿ ಊಟಕ್ಕೆ ಆಗುತ್ತದೆ. ನಿಮಗೆ ದುಡ್ಡೂ ಸಿಗುತ್ತದೆ ಅಂದ. ಹೆದರಿದ ಫಾತಿಮಾ ಒಂದು ಹೆಜ್ಜೆ ಹಿಂದೆ ಸರಿದು ಹುಂಜವನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಳು. ಆಶ್ರಯಕ್ಕಾಗಿ ಬಂದಿದ್ದ ಫಾತಿಮಾಗೆ ತನ್ನ ಹುಂಜವನ್ನು ಆತ ಕಿತ್ತುಕೊಂಡಾನೆಂಬ ಭಯ. ಆ ಸಿರಿವಂತ ಪ್ಲಾಂಟರ್ ಮನುಷ್ಯನೂ ಅಲ್ಲ ಅನ್ನುವುದು ಖಾತ್ರಿಯಾಯಿತು. ‘ಯಾರ ನೆರವೂ ಬೇಕಿಲ್ಲ. ನಾವೇ ಮಡಿಕೇರಿಗೆ ಕರೆದೊಯ್ಯುತ್ತೇವೆ’ ಎಂದು ಆ ಪ್ಲಾಂಟರ್‌ಗೆ ಹೇಳಿ ಮೊಹ್ಮದ್ ಕುಟುಂಬವನ್ನು ಕಾರ್‌ನಲ್ಲಿ ಕೂರಿಸಿಕೊಂಡು ಹೊರಟೆವು. ಆಗ ಸುಲೇಮಾನ್ (ಆತ ಸಿರಿವಂತನೇನಲ್ಲ, ಅವನದ್ದೇ ಆದ ನೂರೆಂಟು ಸಮಸ್ಯೆಗಳಿದ್ದವು. ಅವನ ಬಳಿ ಇದ್ದದ್ದು ಮನುಷ್ಯತ್ವ ಎಂಬ ಆಸ್ತಿ ಮಾತ್ರ) ‘ನಮ್ಮ ಮನೆಗೇ ಕರೆದುಕೊಂಡು ಹೋಗುತ್ತೇನೆ. ಹೇಗೂ ನಾನೂ ಅಮ್ಮ ಮತ್ತು ಸೋದರಮಾವ ಮಾತ್ರ ಇರೋದು’ ಎಂದ. ಮಡಿಕೇರಿಗೆ ವಾಪಸಾದ ನಂತರ ಮಾರನೇ ದಿನ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮೊಹ್ಮದ್ ಕುಟುಂಬಕ್ಕೆ ಪರಿಹಾರ ಒದಗಿಸಲು ಮುಂದಾದ. ಸೋಮವಾರಪೇಟೆಯಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೂ ಆ ಕುಟುಂಬ ಸುಲೇಮಾನ್ ಮನೆಯಲ್ಲೇ ಇತ್ತು. ಈಗ ಸುಲೇಮಾನ್ ಶಾಲೆಯೊಂದರಲ್ಲಿ ಅಧ್ಯಾಪಕನಾಗಿದ್ದಾನೆ. ಇನ್ನೋರ್ವ ಗೆಳೆಯ ಯೂನುಸ್ ಡಿಸೈನರ್ ವೇರ್ ಷೋರೂಂ ಇಟ್ಟುಕೊಂಡಿದ್ದಾನೆ. ಮೊಹ್ಮದ್ ಕುಟುಂಬ ಈಗ ಎಲ್ಲಿದೆಯೋ ಹೇಗಿದೆಯೋ ಗೊತ್ತಿಲ್ಲ.

ಸೋಮವಾರಪೇಟೆಯಲ್ಲಿ ನಡೆದ ಈ ಕೋಮು ಹಿಂಸೆ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ತೊಂಬತ್ತರ ದಶಕದ ಆರಂಭದಲ್ಲಿ ನಡೆದ ರಾಮಜ್ಯೋತಿ ರಥಯಾತ್ರೆಯ ಎಫೆಕ್ಟ್. ಅಡ್ವಾಣಿ ಸುದ್ದಿಯಾದಾಗಲೆಲ್ಲ ನನಗೆ ನೆನಪಾಗುವುದು ಅವರ ಸಾರಥ್ಯದಲ್ಲಿ ನಡೆದ ರಾಮಜ್ಯೋತಿ ರಥಯಾತ್ರೆ. ಅಡ್ವಾಣಿಯವರ ರಾಮಜ್ಯೋತಿ (ಒಂದರ್ಥದಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅಡಿಪಾಯ), ಬಿಜೆಪಿ ಪಾಲಿಗೆ ಬೆಳಕಾದರೆ, ಅದೆಷ್ಟೋ ಅಲ್ಪಸಂಖ್ಯಾತರ ಕುಟುಂಬಗಳಿಗೆ ಬೆಂಕಿಯಾಯಿತು.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಪ್ರಕರಣದಲ್ಲಿ ಸಂಚಿನ ಆರೋಪ ಹೊತ್ತ ಅಡ್ವಾಣಿ, ಮುರಳೀ ಮನೋಹರ ಜೋಷಿ ಮತ್ತು ಉಮಾಭಾರತಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ಈಗ ಮರುಜೀವ ನೀಡಿದೆ.  ಕೆಲವು ತಿಂಗಳ ಹಿಂದೆ ಅಡ್ವಾಣಿ, ಮತ್ತೆ ಎದುರಾಗಬಹುದಾದ ತುರ್ತು ಪರಿಸ್ಥಿತಿ ಮತ್ತು ಸರ್ವಾಧಿಕಾರದ ಅಪಾಯಗಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಅವರ ಈ ಮಾತುಗಳು ತಮಗೆ ಅಧಿಕಾರ ತಪ್ಪಿದ ಹತಾಶೆಯ ಉಗುಳಿನಂತೆ ಕಾಣುತ್ತಿತ್ತು.

ಅನೇಕ ತಿಂಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಜತೆ ಕಾಣಿಸಿಕೊಳ್ಳದಿದ್ದ ಅಡ್ವಾಣಿ ಇತ್ತೀಚೆಗೆ ಜತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಧಿಕಾರಾವಧಿ ಇನ್ನೇನು ಒಂದೆರಡು ತಿಂಗಳಲ್ಲಿ ಮುಗಿಯಲಿರುವುದರಿಂದ ಅಡ್ವಾಣಿ ಅವರಲ್ಲೂ ರಾಷ್ಟ್ರಪತಿ ಸ್ಥಾನದ ಕನಸು ಮೊಳೆತಿರಲೂಬಹುದು. ಆದರೆ ಅವರ ಆಸೆಗೆ ಸುಪ್ರೀಂ ಕೋರ್ಟ್ ತೀರ್ಮಾನ ತಣ್ಣೀರೆರಚಿದೆ.

ರಾಮಜ್ಯೋತಿಯ ಪರಿಣಾಮಗಳು, ಅದು ನನ್ನ ಮುಂದಿಟ್ಟ ಪ್ರಶ್ನೆಗಳನ್ನು ಒಂದು ಮನ ಮಿಡಿಯುವ ಘಟನೆ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ ಅಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry