ಸೋಮವಾರ, ಜೂಲೈ 6, 2020
26 °C
ಆರ್ಥಿಕ ನೆರವಿಗೆ ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ತಾತ್ವಿಕ ಒಪ್ಪಿಗೆ

ಕಾಮಗಾರಿಗೆ ₹3,700 ಕೋಟಿ ಸಾಲ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಕಾಮಗಾರಿಗೆ ₹3,700 ಕೋಟಿ ಸಾಲ

ಬೆಂಗಳೂರು:  ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣಾ ಯೋಜನೆಯಲ್ಲಿ ನಿರ್ಮಾಣವಾಗಲಿರುವ 13.79 ಕಿ.ಮೀ ಉದ್ದದ ಸುರಂಗಮಾರ್ಗಕ್ಕೆ

₹ 3,700 ಕೋಟಿ ಸಾಲ ಪಡೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

‘ನಾಗವಾರ– ಗೊಟ್ಟಿಗೆರೆ  (ರೀಚ್‌ 6) ಮಾರ್ಗದಲ್ಲಿ  13.9 ಕಿ.ಮೀ ಉದ್ದದ ಸುರಂಗ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ  ಆರ್ಥಿಕ ನೆರವು ನೀಡಲು ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ತಾತ್ವಿಕ ಒಪ್ಪಿಗೆ ನೀಡಿದೆ’ ಎಂದು  ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕಿನ ನಿಯೋಗ ಕಳೆದ ವಾರ ಇಲ್ಲಿಗೆ ಭೇಟಿ ನೀಡಿತ್ತು. ಪ್ರಗತಿಯಲ್ಲಿರುವ ಮೆಟ್ರೊ ಕಾಮಗಾರಿಗಳನ್ನು ಅದರ ಸದಸ್ಯರು ಪರಿಶೀಲಿಸಿದ್ದರು. ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ  ಅವರು ಬ್ಯಾಂಕಿನ ಆಡಳಿತ ಮಂಡಳಿಗೆ ವರದಿ ನೀಡಲಿದ್ದಾರೆ. ಆ ವರದಿಯನ್ನು ಆಧರಿಸಿ ಸಾಲ ಮಂಜೂರಾಗಲಿದೆ’ ಎಂದು ಖರೋಲ ವಿವರಿಸಿದರು.

‘ಮೆಟ್ರೊ ಮೊದಲ ಹಂತದಲ್ಲಿ  8.8 ಕಿ.ಮೀ ಉದ್ದದ ಸುರಂಗ ನಿರ್ಮಿಸಲಾಗಿದೆ.   ಈ ಕಾಮಗಾರಿಯ ಸಂದರ್ಭದಲ್ಲಿ ಅನೇಕ ಅಡ್ಡಿಗಳನ್ನು ಎದುರಿಸಬೇಕಾಯಿತು. ಮೊದಲ ಹಂತದ ಕಾಮಗಾರಿ ನಮಗೆ ಪಾಠ ಕಲಿಸಿದೆ. ಹಾಗಾಗಿ  ಎರಡನೇ ಹಂತದ ಕಾಮಗಾರಿಯಲ್ಲಿ ಅಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ’ ಎಂದು ಅವರು ತಿಳಿಸಿದರು.

ಸಂಪಿಗೆ ರಸ್ತೆ– ಮೆಜೆಸ್ಟಿಕ್‌ ನಡುವೆ  ನೆಲಮಟ್ಟದಿಂದ 60 ಅಡಿ ಆಳದಲ್ಲಿ ಸುರಂಗ ಕೊರೆಯುತ್ತಿದ್ದ ಗೋದಾವರಿ ಯಂತ್ರದ ಕಟರ್‌ ಹೆಡ್‌  ಹಾಳಾಗಿತ್ತು. ಅದನ್ನು ಬದಲಾಯಿಸಿ ಕಾಮಗಾರಿ ಮುಂದುವರಿಸಬೇಕಾಗಿತ್ತು.  ವಿಕ್ಟೋರಿಯಾ ಆಸ್ಪತ್ರೆಯಿಂದ ಚಿಕ್ಕಪೇಟೆ ಕಡೆಗೆ ಸುರಂಗ ಮಾರ್ಗ ಕೊರೆಯುವಾಗ  ಅನೇಕ ಅಡ್ಡಿಗಳು ಎದುರಾಗಿದ್ದವು. ಅನಿರೀಕ್ಷಿತವಾಗಿ ಕಲ್ಲು ಬಂಡೆಗಳು,  ಬಾವಿಗಳು, ರಾಜರ ಕಾಲದ ಸುರಂಗ ಮಾರ್ಗಗಳು ಎದುರಾಗಿದ್ದವು.  ಇದರಿಂದಾಗಿ ಸುರಂಗ ನಿರ್ಮಾಣದ ವೇಗ ಕುಂಠಿತಗೊಂಡ ಪರಿಣಾಮ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರೈಸಲು ಸಾಧ್ಯವಾಗಿರಲಿಲ್ಲ.   

ಎರಡನೇ ಹಂತದಲ್ಲಿ ರೀಚ್‌ 6 ಮಾರ್ಗದಲ್ಲಿ ನಾಗವಾರದಿಂದ ಡೇರಿ ವೃತ್ತದವರೆಗೆ ಸುರಂಗ ಮಾರ್ಗ ಹಾಗೂ ಸ್ವಾಗತ್‌ ಕ್ರಾಸ್‌ ನಿಲ್ದಾಣದಿಂದ ಗೊಟ್ಟಿಗೆರೆ ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ.

ಸುರಂಗ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ನಿರ್ಮಾಣವಾಗಲಿವೆ.   ಈ ಮಾರ್ಗವು ಎಂ.ಜಿ. ರಸ್ತೆ, ಶಿವಾಜಿನಗರ, ದಂಡು (ಕಂಟೋನ್ಮೆಂಟ್‌)  ರೈಲು ನಿಲ್ದಾಣದಂತಹ ಪ್ರಮುಖ ತಾಣಗಳಿಗೆ ಮೆಟ್ರೊ ಸಂಪರ್ಕ ಕಲ್ಪಿಸಲಿದೆ.

ಕಾಮಗಾರಿ ಆರಂಭಿಸುವ ಮುನ್ನ 245 ಕಟ್ಟಡಗಳನ್ನು   ತೆರವುಗೊಳಿಸಬೇಕಾಗುತ್ತದೆ. ಇದಕ್ಕಾಗಿ ನಿಗಮವು ಟೆಂಡರ್‌ ಆಹ್ವಾನಿಸಿದೆ. 

ಮೊದಲ ಹಂತದಲ್ಲಿ ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲಿ ಸಿಟಿ ರೈಲು ನಿಲ್ದಾಣದಿಂದ (ಕುಷ್ಠರೋಗ ಆಸ್ಪತ್ರೆ ಬಳಿ)  ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಹಾಗೂ  ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗೆ ಒಟ್ಟು 8.8  ಕಿ.ಮೀ   ಉದ್ದದ ಜೋಡಿ ಮಾರ್ಗಕ್ಕೆ ಸುಮಾರು 17 ಕಿ.ಮೀ ಸುರಂಗ ನಿರ್ಮಿಸಲಾಗಿತ್ತು.

ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಣೆ

‘2020ರ ಒಳಗೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಸುರಂಗ ಕೊರೆಯುವ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬ ಕಾರಣಕ್ಕೆ ಈ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಿದ್ದೇವೆ. ಇವುಗಳನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಿದ್ದೇವೆ’ ಎಂದು ಖರೋಲ ತಿಳಿಸಿದರು.

13 ಯಂತ್ರಗಳು ಬೇಕು:

ಮೊದಲ ಹಂತದ ಕಾಮಗಾರಿಯಲ್ಲಿ ಸುರಂಗ ಕೊರೆಯುವ ಆರು  ಯಂತ್ರಗಳನ್ನು (ಟಿಬಿಎಂ)  ಬಳಕೆ ಮಾಡಲಾಗಿತ್ತು. ಎರಡನೇ ಹಂತದ ಸುರಂಗ ಕಾಮಗಾರಿಗೆ ಒಟ್ಟು 13 ಟಿಬಿಎಂಗಳನ್ನು ಬಳಸಲಾಗುತ್ತದೆ.

‘ಮೊದಲ ಹಂತದ ಕಾಮಗಾರಿಗೆ   ಅತ್ಯಾಧುನಿಕ ಟಿಬಿಎಂಗಳನ್ನು ಬಳಸಿದ್ದೆವು.  ಅದೇ ಮಾದರಿಯ ಟಿಬಿಎಂಗಳನ್ನೇ ನಾವು ಎರಡನೇ ಹಂತದಲ್ಲೂ ಬಳಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಉಪಯೋಗಿಸಿದ ಯಂತ್ರಗಳನ್ನು ಎರಡನೇ ಹಂತದಲ್ಲೂ ಬಳಸುವ ಬಗ್ಗೆ ಈಗಲೇ ಹೇಳಲಾಗದು. ಅದು ಕಾಮಗಾರಿಯ ಗುತ್ತಿಗೆದಾರರ ವಿವೇಚನೆಗೆ ಬಿಟ್ಟಿದ್ದು’ ಎಂದು ಖರೋಲ ತಿಳಿಸಿದರು.

ಅಂಕಿಅಂಶ

21.25ಕಿ.ಮೀ ನಾಗವಾರ– ಗೊಟ್ಟಿಗೆರೆ ಮಾರ್ಗದ ಉದ್ದ

13.79ಕಿ.ಮೀ  ನಾಗವಾರದಿಂದ ಡೇರಿ ವೃತ್ತದವರೆಗಿನ ಸುರಂಗ ಮಾರ್ಗದ ಉದ್ದ

12 ನಿಲ್ದಾಣಗಳು  ಸುರಂಗಮಾರ್ಗದಲ್ಲಿ ನಿರ್ಮಾಣವಾಗಲಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.