5

ದೇಶಪ್ರೇಮದ ಮತಿಭ್ರಮಣೆಯ ಆಯಾಮ

ರಾಮಚಂದ್ರ ಗುಹಾ
Published:
Updated:
ದೇಶಪ್ರೇಮದ ಮತಿಭ್ರಮಣೆಯ ಆಯಾಮ

​ಹಾಗೆಯೇ ನಮ್ಮ ಗಣರಾಜ್ಯವನ್ನು ಕಾಡುತ್ತಿರುವ ಸಾರ್ವಜನಿಕ ಸಂಸ್ಥೆಗಳ ಭ್ರಷ್ಟಾಚಾರ, ದಲಿತರು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ, ನಡೆಯುತ್ತಲೇ ಇರುವ ಜನಾಂಗೀಯ ಹಿಂಸೆಯ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಿರುತ್ತಾರೆ. ಇದು ಟ್ಯಾಗೋರ್ ಮತ್ತು ಗಾಂಧೀಜಿ  ನಮಗೆ ನೀಡಿರುವ ಮುಕ್ತ ಮನಸ್ಸಿನ, ಚಿಂತನಶೀಲ ಮತ್ತು ಸ್ವವಿಮರ್ಶೆಯ ದೇಶಪ್ರೇಮ.

ಪೂರ್ವ ಮತ್ತು ಪಶ್ಚಿಮ ಕರಾವಳಿಯ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡುವುದಕ್ಕಾಗಿ ನಾನು ಈ ತಿಂಗಳ ಮೊದಲ ಭಾಗದಲ್ಲಿ ಅಮೆರಿಕದಲ್ಲಿದ್ದೆ. ಪ್ರತಿ ಸ್ಥಳಕ್ಕೂ ನಾನು ಹೋಗುವುದಕ್ಕೆ ಮೊದಲು ಕಾರ್ಯಕ್ರಮ ಸಂಘಟಕರಿಗೆ ನನ್ನ ಬಗ್ಗೆ ಎಚ್ಚರಿಕೆ ನೀಡಿ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) (ಸಾಗರೋತ್ತರ) ಕಾರ್ಯಾಧ್ಯಕ್ಷರು ಒಂದೇ ರೀತಿಯ ಸಂದೇಶಗಳನ್ನು ಕಳುಹಿಸಿದ್ದರು.‘ಅವರ ಕೃತಿಗಳನ್ನು ಓದಿದ ಮತ್ತು ಅವರು ನೀಡಿದ ಉಪನ್ಯಾಸಗಳ ವಿಡಿಯೊಗಳನ್ನು ನೋಡಿದ ಅನುಭವದಲ್ಲಿ ಹೇಳುವುದಾದರೆ ಅವರಿಗೆ ಶಿಕ್ಷಣ ನೀಡಿ ಜೀವನೋಪಾಯವನ್ನು ಕಲ್ಪಿಸಿದ ದೇಶದ ಬಗ್ಗೆ ಅವರಿಗೆ ಯಾವ ಸಹಾನುಭೂತಿಯೂ ಇಲ್ಲ’ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಬರೆದಿದ್ದರು.‘ಗುಹಾ ಅವರ ಹಿನ್ನೆಲೆಯನ್ನು ಗಮನಿಸಿದರೆ ಭಾರತದ ಬಗ್ಗೆ ಮಾತನಾಡಲು ಅವರು ಸರಿಯಾದ ವ್ಯಕ್ತಿ ಅಲ್ಲ ಎಂಬುದನ್ನು ಹೇಳಲು ಬಯಸುತ್ತೇನೆ’ ಎಂದೂ ವಿಎಚ್‌ಪಿ  ಮುಖಂಡ ಹೇಳಿದ್ದರು. ಅದನ್ನು ಸಮರ್ಥಿಸುವುದಕ್ಕಾಗಿ ನನ್ನ ನಿರ್ದಿಷ್ಟ ಟ್ವೀಟೊಂದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲ ಪ್ರತಿಕ್ರಿಯೆಗಳೂ ನಕಾರಾತ್ಮಕವಾಗಿದ್ದವು ಎಂದು ಅವರು ಹೇಳಿದ್ದಾರೆ (ಈ ಎಲ್ಲ ಪ್ರತಿಕ್ರಿಯೆಗಳು ವಿಎಚ್‌ಪಿ ಮುಖಂಡ ಪ್ರತಿನಿಧಿಸುವ ರಾಜಕೀಯ ಸಿದ್ಧಾಂತ ಹೊಂದಿರುವವರದ್ದೇ ಆಗಿದ್ದವು ಎಂಬುದನ್ನು ಮಾತ್ರ ಅವರು ಹೇಳಿಲ್ಲ).ಹಿಂದೆಯೂ ಈ ವ್ಯಕ್ತಿ ಹಲವು ಆತಂಕದ ಸಂದೇಶಗಳನ್ನು ಕಳುಹಿಸಿದ್ದರಿಂದ ಅವರ ಬಗ್ಗೆ ನನಗೆ ಗೊತ್ತು. ನನ್ನ ಹಿಂದೂ ವಿರೋಧಿ ನಿಲುವುಗಳನ್ನು ಪರಿವರ್ತಿಸುವ ಪ್ರಯತ್ನದಲ್ಲಿ ಹತಾಶರಾಗಿ ಅವರು ಈಗ ತಾಯ್ನಾಡಿನ ಬಗ್ಗೆ ನಾನು ಪಶ್ಚಿಮ ವಿಶ್ವವಿದ್ಯಾಲಯಗಳಲ್ಲಿ ಅನಾರೋಗ್ಯಕರ ವಿಷ ಬೀಜ ಬಿತ್ತುತ್ತಿದ್ದೇನೆ ಎಂದು ಅಲ್ಲಿನವರನ್ನು ಎಚ್ಚರಿಸಿದ್ದಾರೆ. ಭಾರತದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಬಲ್ಲ, ಅಧಿಕೃತ ಅಭಿಪ್ರಾಯಗಳನ್ನು ತಿಳಿಸಬಲ್ಲ ಪರ್ಯಾಯ ವ್ಯಕ್ತಿಗಳನ್ನು  ಒದಗಿಸುವುದಾಗಿಯೂ ಅವರು ಹೇಳಿದ್ದಾರೆ.ಹಿಂದುತ್ವ ಹೊಡೆತದ ಮುಂದುವರಿಕೆಯ ನಡುವೆಯೂ ವಿಎಚ್‌ಪಿಯ ಈ ಮುಖಂಡ ವಿನಯದಿಂದಿದ್ದರು. ಅವರು ಪದಗಳ ಮೂಲಕ ಮಾತ್ರ ನನ್ನನ್ನು ಶುದ್ಧೀಕರಿಸಲು ಯತ್ನಿಸುತ್ತಿದ್ದರೆ ವಿಎಚ್‌ಪಿಯ ಕಾರ್ಯಕರ್ತರು ರಾಜಸ್ತಾನದ ಅಲ್ವರ್‌ನಲ್ಲಿ ಮುಗ್ಧ ವ್ಯಕ್ತಿಯೊಬ್ಬರ ಹತ್ಯೆ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹೆಚ್ಚು ಪ್ರಬಲವಾಗಿರುವ ಗೋ ಗೂಂಡಾ ಸೇನೆಯ ಸರಣಿ ದಾಳಿಗಳಲ್ಲಿ ಇದು ಇತ್ತೀಚಿನದು.

ಮನೆಯಲ್ಲಿ ಕುಳಿತು ಈ ಸುದ್ದಿ ಓದಿದ ನಾನು ಆಘಾತಗೊಂಡೆ. ರಾಜಸ್ತಾನ ಮತ್ತು ಇತರೆಡೆಗಳಲ್ಲಿನ ಆಡಳಿತ ಪರಿವಾರ ಈ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನನ್ನನ್ನು ಇನ್ನಷ್ಟು ಆಘಾತಗೊಳಿಸಿದೆ. ‘ಪೆಹ್ಲು ಖಾನ್ ಅವರ ಮೇಲೆ ಹಲ್ಲೆ ನಡೆಸಿದವರ ಚಿಂತನೆಗಳು ಸರಿಯಾಗಿವೆ, ಬಹುಶಃ ಅವರ ವಿಧಾನ ಸರಿ ಇರಲಿಕ್ಕಿಲ್ಲ’ ಎಂದು ರಾಜಸ್ತಾನದ ಗೃಹ ಸಚಿವರು ಹೇಳಿದ್ದಾರೆ.ತಮ್ಮ ಸಮೀಪದಲ್ಲಿ, ತಮ್ಮ ಕಣ್ಣೆದುರಿನಲ್ಲಿ ನಡೆದ ಹಲ್ಲೆಯ ಬಗ್ಗೆ ಮೌನವಾಗಿರುವ ರಾಜಸ್ತಾನದ ಮುಖ್ಯಮಂತ್ರಿ, ಸ್ಟಾಕ್‌ಹೋಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ರಾಷ್ಟ್ರೀಯ ಗೋರಕ್ಷಕ ಮಹಿಳಾ ದಳ ಎಂಬ ಸಂಘಟನೆಯ ಮುಖ್ಯಸ್ಥೆ, ಸ್ವಯಂ ಘೋಷಿತ ಸಾಧ್ವಿಯೊಬ್ಬರು ಕೊಲೆಗಡುಕರನ್ನು ಭೇಟಿಯಾಗಿ ಅವರನ್ನು ಆಧುನಿಕ ಕಾಲದ ಭಗತ್ ಸಿಂಗ್ ಎಂದು ಬಣ್ಣಿಸಿದ್ದಾರೆ.ಹಲ್ಲೆ ಅತ್ಯಂತ ಘೋರ ಕೃತ್ಯ. ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಗಳನ್ನು ಗಮನಿಸಿದಾಗ ನನಗೆ ಅನಿಸಿದ ಒಂದು ಅಂಶವೆಂದರೆ, ಹಲ್ಲೆ ಅಥವಾ ಅದರ ಸಮರ್ಥಕರ ಬಗ್ಗೆ ಈ ಭಾಗದಲ್ಲಿ ಪ್ರಬಲವಾಗಿರುವ ಹಿಂದುತ್ವವಾದಿಗಳು ಆಕ್ರೋಶಗೊಂಡಿಲ್ಲ; ಬದಲಿಗೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಈ ಬಗ್ಗೆ ಮಾಡಿದ ಸಮಚಿತ್ತದ ವಾಸ್ತವಿಕ ವರದಿ ಬಗ್ಗೆ ಅವರಲ್ಲಿ ಆಕ್ರೋಶ ಇದೆ.

ವರದಿಯ ಶೀರ್ಷಿಕೆ ಹೀಗಿತ್ತು: ‘ಹಿಂದೂ ಗೋ ರಕ್ಷಕರು ಭಾರತದ ರಾಜಸ್ತಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ’.  ವರದಿಯಲ್ಲಿ ಸಮಚಿತ್ತದ, ಸತ್ಯಾಂಶವನ್ನಷ್ಟೇ ಹೊಂದಿದ ಈ ಪ್ಯಾರಾ ಇತ್ತು: ‘ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಗೋರಕ್ಷಕ ಗುಂಪುಗಳ ಸಂಖ್ಯೆ ಹೆಚ್ಚಾಗಿದೆ. ಮುಸ್ಲಿಮರ ಮೇಲೆ ಹೆಚ್ಚಾಗಿ ದಾಳಿ ನಡೆಸುವ ಈ ಗುಂಪುಗಳು ಗೋಹತ್ಯೆಯ ಶಂಕೆಯಲ್ಲಿ ಕೆಳ ಜಾತಿಯ ಹಿಂದೂಗಳ ಮೇಲೆಯೂ ಕೆಲವೊಮ್ಮೆ ದಾಳಿ ನಡೆಸಿವೆ’.ಈ ಶೀರ್ಷಿಕೆ ಮತ್ತು ವರದಿ ಟ್ವಿಟರ್‌ನಲ್ಲಿ ಬಿರುಗಾಳಿ ಎಬ್ಬಿಸಿತು. ಹಲ್ಲೆ ನಡೆಸಿದವರು ಮತ್ತು ಹಲ್ಲೆಗೆ ಒಳಗಾದವರ ಧರ್ಮವನ್ನು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಬಾರದಿತ್ತು ಎಂಬುದು ಟ್ವಿಟರ್‌ನಲ್ಲಿ ವ್ಯಕ್ತವಾದ ಒಂದು ದೂರು. ಇನ್ನೊಂದು ದೂರು ಏನೆಂದರೆ, ಭಾರತ ವಿರೋಧಿ ಎಡಪಂಥೀಯರು ಈ ಪತ್ರಿಕೆ ನಡೆಸುತ್ತಿದ್ದಾರೆ ಮತ್ತು ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಇತಿಹಾಸವನ್ನೇ ಈ ಪತ್ರಿಕೆ ಹೊಂದಿದೆ.

ನಮ್ಮ ಶ್ರೇಷ್ಠ ದೇಶಕ್ಕೆ ಜಾಗತಿಕ ಇತಿಹಾಸದಲ್ಲಿ ನೀಡಲೇಬೇಕಿರುವ ಕೇಂದ್ರ ಸ್ಥಾನವನ್ನು ನಿರಾಕರಿಸುವ ಅಭಿಯಾನದ ಭಾಗವಾಗಿ ಈ ವರದಿ ಪ್ರಕಟವಾಗಿದೆ. ಒಂದು ಸತ್ಯ ವರದಿಯು ದೇಶದ ಹೆಸರು ಕೆಡಿಸುತ್ತಿದೆ ಎಂದು ಆರೋಪಿಸಿ ನನ್ನ ದೇಶದ ಜನರು ಆಕ್ರೋಶಗೊಳ್ಳುತ್ತಿರುವುದು ವಿಚಿತ್ರ ಮತ್ತು ಹೆಚ್ಚು ಬೇಸರ ಹುಟ್ಟಿಸುವಂತಹುದಾಗಿದೆ. ಅವರ ಮಾನವೀಯತೆ ಎಲ್ಲಿ ಹೋಯಿತು? ಅಮೆರಿಕದ ಪತ್ರಿಕೆಯೊಂದರ ವರದಿ ತಮ್ಮದೇ ದೇಶದ ವ್ಯಕ್ತಿಯೊಬ್ಬನ ಹತ್ಯೆಗಿಂತ ಹೆಚ್ಚು ಮುಖ್ಯ ಎಂದು ಅವರು ಯಾಕೆ ಭಾವಿಸುತ್ತಿದ್ದಾರೆ?ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ದೇಶಪ್ರೇಮಕ್ಕೆ ವಿಚಿತ್ರವಾದ ಮತಿಭ್ರಮಣೆಯ ಆಯಾಮವೂ ಇದೆ. ಭಾರತದಲ್ಲಿರುವ ಭಾರತೀಯರು, ವಿದೇಶಗಳಲ್ಲಿರುವ ಭಾರತೀಯರು ಅಥವಾ ವಿದೇಶಿಯರಿಂದ ವಿಮರ್ಶೆ ಎದುರಿಸುವುದಕ್ಕೆ ಶಕ್ತಿ ಇಲ್ಲದಷ್ಟು ಭಾರತ ಮಾತೆಯು ನಾಜೂಕಾಗಿರುವಂತೆ ಕಾಣಿಸುತ್ತಿದೆ.

ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಈ ಲೇಖಕನ ವಿರುದ್ಧ ಎಚ್ಚರಿಕೆ ನೀಡುವ ವಿಎಚ್‌ಪಿ ಮುಖಂಡನ ವಿಕಾರ ಪ್ರಯತ್ನ, ಭಾರತದ ಸಾಮಾಜಿಕ ಜಾಲ ತಾಣಗಳಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ವಿರುದ್ಧ ವ್ಯಕ್ತವಾದ ಆಕ್ರೋಶಗಳು ಈ ಮತಿಭ್ರಮಣೆಯ ದೇಶಪ್ರೇಮದ ಅಭಿವ್ಯಕ್ತಿಗಳಾಗಿವೆ.

ಇವು ಅಲ್ಲೊಂದು ಇಲ್ಲೊಂದಷ್ಟೇ ನಡೆದ ಘಟನೆಗಳಲ್ಲ, ಬದಲಿಗೆ ಒಂದು ಸಾಮಾನ್ಯ ಪ್ರವೃತ್ತಿಯ ಭಾಗವಾಗಿವೆ. ಗೋ ಗೂಂಡಾಗಳಿಂದ ಪೆಹ್ಲು ಖಾನ್ ಹತ್ಯೆಯಾದಾಗ ಅದು ಸ್ಪಷ್ಟವಾಯಿತು. ‘ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಭಾರತ ವಿರೋಧಿ ವರದಿಗಳನ್ನು ಪ್ರಶ್ನಿಸಲು ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ದೃಷ್ಟಿಕೋನವನ್ನು ಕಟ್ಟಿಕೊಡಲು ಅತ್ಯಾಧುನಿಕ ಡಿಜಿಟಲ್ ವೇದಿಕೆ ರೂಪಿಸಲು ಪ್ರಸಾರ ಭಾರತಿ ಯೋಜನೆ ರೂಪಿಸಿದೆ’ ಎಂಬ ಪ್ರೆಸ್‌ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಅದನ್ನು ಇನ್ನಷ್ಟು ದೃಢಪಡಿಸಿತು.ಈ ನವ ಮಾಧ್ಯಮ ವೇದಿಕೆಯ ನೀಲನಕ್ಷೆ ರೂಪಿಸಿದವರು ಪ್ರಸಾರ ಭಾರತಿ ಮಂಡಳಿಯ ಅಧ್ಯಕ್ಷ ಎ.ಸೂರ್ಯಪ್ರಕಾಶ್. ‘ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ. ಹಾಗಾಗಿ ಆಡಳಿತಕ್ಕೆ ಸಂಬಂಧಿಸಿ ಹಲವು ಅಸಾಧಾರಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಕ್ರಮಗಳನ್ನು ಹಲವು ಸರ್ಕಾರಗಳು ಮಾದರಿ ಎಂದು ಪರಿಗಣಿಸಬಹುದು. ಆದರೆ ಪಶ್ಚಿಮದ ಮಾಧ್ಯಮಗಳು ಭಾರತ ಸಂಘರ್ಷ ವಲಯ ಎಂಬ ಚಿತ್ರಣವನ್ನು ನೀಡಲು ಯತ್ನಿಸುತ್ತಿವೆ. ಇದು ಸಂಪೂರ್ಣ ಸುಳ್ಳಾಗಿದ್ದು ಅದನ್ನು ಸರಿಪಡಿಸುವ ಅಗತ್ಯ ಇದೆ’ ಎಂದು ಸೂರ್ಯ ಪ್ರಕಾಶ್ ಹೇಳಿದ್ದಾರೆ.ಪಿಟಿಐ ವರದಿಯ ಪ್ರಕಾರ, ಈ ಸರ್ಕಾರಿ ಮಾಧ್ಯಮ ವೇದಿಕೆ ಇಂಗ್ಲಿಷ್‌ನಲ್ಲಿ ಆರಂಭವಾಗಲಿದ್ದು ನಂತರ ಸ್ಪ್ಯಾನಿಷ್ ಮತ್ತು ಚೀನೀ ಭಾಷೆಯಲ್ಲಿಯೂ ಪ್ರಕಟವಾಗಲಿದೆ. ಕಾರ್ಯಾಚರಣೆ ಆರಂಭಿಸಿ ಐದು ವರ್ಷಗಳಲ್ಲಿ ಹತ್ತು ಕೋಟಿ ಜನರನ್ನು ತಲುಪುವ ಗುರಿಯನ್ನು ಇದು ಹೊಂದಿದೆ. ಸುದ್ದಿ ಮತ್ತು ವರದಿಗಳ ಜತೆಗೆ, ಈ ವೇದಿಕೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಮತ್ತು ಪ್ರತಿಭಾ ಪ್ರದರ್ಶನಗಳೂ ಇರಲಿವೆ.ಇದರ ನಿರ್ವಹಣೆಗೆ ವರ್ಷಕ್ಕೆ ₹75 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಯೋಜನೆಯ ವಿವರಗಳು ಆಕರ್ಷಕವಾಗಿವೆ. ಸ್ವದೇಶಿ ಎಂದು ಹೆಮ್ಮೆಪಡಬಹುದಾದ ಈ ಹೊಸ ವೇದಿಕೆಯ ಎಲ್ಲ ಅಂಶಗಳ ಬಗ್ಗೆ ಚಿಂತಿಸಲಾಗಿದ್ದರೂ ಹೆಸರು ಮಾತ್ರ ಇರಿಸಿಲ್ಲ. ‘ಆಲ್ ಮೋದಿ ಮೀಡಿಯಾ’ ಅಂತ ಯಾಕೆ ಹೆಸರು ಇರಿಸಬಾರದು? ಮತಿಭ್ರಮಣೆಯ ದೇಶಭಕ್ತಿಯ ಹಿಂದಿನ ಯುಗದಲ್ಲಿ ನಮ್ಮಲ್ಲಿ ಆಲ್ ಇಂಡಿಯಾ  (ಇಂದಿರಾ) ರೇಡಿಯೊ ಇರಲಿಲ್ಲವೇ?ದೇಶಪ್ರೇಮ ಎಂಬುದು ಉದಾತ್ತ ಚಿಂತನೆ. ವಿಎಚ್‌ಪಿಯ ಪ್ರತೀಕಾರ ಮನೋಭಾವದ ಧರ್ಮಾಂಧರು ಮತ್ತು ಪ್ರಸಾರ ಭಾರತಿಯ ಸರ್ಕಾರಿ ಸಮರ್ಥಕರಿಂದ ಅದನ್ನು ರಕ್ಷಿಸುವ ಅಗತ್ಯ ಇದೆ. ಸ್ವಜಾಗೃತಿ, ಸ್ವಪ್ರಜ್ಞೆ ಮತ್ತು ಆತ್ಮವಿಶ್ವಾಸ ಇರುವ ದೇಶಪ್ರೇಮಿಗಳು ಪ್ರಜಾಪ್ರಭುತ್ವದ ವೈಶಿಷ್ಟ್ಯವನ್ನು ಪೋಷಿಸುವಲ್ಲಿ, ಬಡತನವನ್ನು ಕಡಿಮೆಗೊಳಿಸುವಲ್ಲಿ ಆಗಿರುವ ಪ್ರಗತಿಯ ಬಗ್ಗೆ ಹೆಮ್ಮೆಪಡುತ್ತಾರೆ.ಹಾಗೆಯೇ ನಮ್ಮ ಗಣರಾಜ್ಯವನ್ನು ಕಾಡುತ್ತಿರುವ ಸಾರ್ವಜನಿಕ ಸಂಸ್ಥೆಗಳ ಭ್ರಷ್ಟಾಚಾರ ಮತ್ತು ಅವುಗಳ ಸವೆತ, ದಲಿತರು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ, ನಡೆಯುತ್ತಲೇ ಇರುವ ಜನಾಂಗೀಯ ಹಿಂಸೆಯ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಿರುತ್ತಾರೆ. ಇದು ಟ್ಯಾಗೋರ್ ಮತ್ತು ಗಾಂಧೀಜಿ ನಮಗೆ ನೀಡಿರುವ ಮುಕ್ತ ಮನಸ್ಸಿನ, ಚಿಂತನಶೀಲ ಮತ್ತು ಸ್ವವಿಮರ್ಶೆಯ ದೇಶಪ್ರೇಮ.ಭಾರತವನ್ನು ಸಂಘರ್ಷ ವಲಯ ಎಂದು ಚಿತ್ರಿಸಿರುವುದು ‘ಸಂಪೂರ್ಣ ಹುಸಿ’ಯನ್ನು ಮಾತ್ರ ಹೇಳುತ್ತಿದೆ ಎಂದು ಸೂರ್ಯಪ್ರಕಾಶ್ ಪ್ರತಿಪಾದಿಸುತ್ತಾರೆ. ನಾನು ಈಗ ಓದಿದ ಪತ್ರಿಕೆ ಮುದ್ರಣ ಆಗಿರುವುದು ಬೆಂಗಳೂರಿನಲ್ಲಿಯೇ ಹೊರತು ನ್ಯೂಯಾರ್ಕ್‌ನಲ್ಲಿ ಅಲ್ಲ. ಈ ಪತ್ರಿಕೆ ಹೇಳುವಂತೆ, ಕಾಶ್ಮೀರದಲ್ಲಿ ಹಿಂಸೆ ಮುಂದುವರಿದಿದೆ, ಛತ್ತೀಸಗಡದಲ್ಲಿ ಸಿಆರ್‌ಪಿಎಫ್‌ನ 25 ಯೋಧರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಮತ್ತು ಗೋರಕ್ಷಕರಿಂದ ದೆಹಲಿ ಮತ್ತು ಜಮ್ಮುವಿನಲ್ಲಿ ಹೊಸ ಹಲ್ಲೆ ಪ್ರಕರಣಗಳು ನಡೆದಿವೆ (ಸಂತ್ರಸ್ತರಲ್ಲಿ ಒಂಬತ್ತು ವರ್ಷದ ಬಾಲಕಿಯೂ ಸೇರಿದ್ದಾಳೆ).ನಿಜ ಹೇಳಬೇಕೆಂದರೆ, ಭಾರತದ ಬಹುಭಾಗ ಶಾಂತಿಯಿಂದಲೇ ಇದೆ; ಆದರೆ ಇತರ ಭಾಗಗಳು ಹಿಂಸೆ ಮತ್ತು ಸಂಘರ್ಷದ ಅಪಾಯದಲ್ಲಿಯೇ ಇವೆ. ದೇಶದ ಕೆಲವು ಭಾಗಗಳು ಪ್ರಗತಿ ಪಥದಲ್ಲಿ ಸಾಗಿವೆ. ಹಿಂದಿನ ದಿನಗಳಲ್ಲಿ, ಋತುಮತಿಯರಾದಾಗ ಶಾಲೆ ಬಿಡುತ್ತಿದ್ದ ಬಾಲಕಿಯರು ಈಗ ಕಾಲೇಜಿಗೆ ಹೋಗುತ್ತಿದ್ದಾರೆ; ಭಾರತದ್ದೇ ಭಾಗ ಎಂದು ಭಾರತೀಯರು ಹೇಳುವ ಒಂದು ಪ್ರದೇಶದಲ್ಲಿ ಶೇ 7ರಷ್ಟು ಜನ ಮಾತ್ರ ಮತ ಹಾಕಲು ಮತಗಟ್ಟೆಗೆ ಹೋಗಿದ್ದಾರೆ.ಇದೂ ಭಾರತದ ಭಾಗವೇ ಆಗಿದೆ. ವಿದ್ವಾಂಸ ಮತ್ತು ಪತ್ರಕರ್ತನ ಕೆಲಸ ಪ್ರಗತಿ ಮತ್ತು ಪ್ರತಿಗಾಮಿತನಗಳೆರಡರ ಬಗ್ಗೆಯೂ ಮಾತನಾಡುವುದು ಮತ್ತು ವರದಿ ಮಾಡುವುದಾಗಿದೆ. ದೇಶಪ್ರೇಮಿಗಳ ಕೆಲಸ ದೇಶದ ಒಳಗಿನ ಗಾಯಗಳನ್ನು ಗುಣಪಡಿಸುವುದೇ ಹೊರತು ಗಾಯಗಳೇ ಇಲ್ಲ ಎಂದು ಸಾಧಿಸುವುದಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry