ಸುಕ್ಮಾ ದಾಳಿಯ ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸಲಿದ್ದಾರೆ ಗೌತಮ್ ಗಂಭೀರ್

ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ಸೋಮವಾರ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಎಲ್ಲ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕ್ರಿಕೆಟಿಗ ಗೌತಮ್ ಗಂಭೀರ್ ಘೋಷಿಸಿದ್ದಾರೆ.
‘ಗೌತಮ್ ಗಂಭೀರ್ ಫೌಂಡೇಷನ್ ಮೂಲಕ ಶಿಕ್ಷಣ ವೆಚ್ಚ ಭರಿಸಲಾಗುವುದು. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪ್ರಗತಿಯಲ್ಲಿದೆ. ನನ್ನ ತಂಡ ಈಗಾಗಲೇ ಕಾರ್ಯಾರಂಭ ಮಾಡಿದೆ. ಸದ್ಯದಲ್ಲೇ ಈ ಕೆಲಸದಲ್ಲಾದ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಎಲ್ಲ ಸದಸ್ಯರು, ಬುಧವಾರ ನಡೆದ ಐಪಿಎಲ್ ಪಂದ್ಯದ ಸಂದರ್ಭ ಕೈಗೆ ಕಪ್ಪು ಪಟ್ಟಿ ಧರಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದರು.
ಯೋಧರ ಹತ್ಯೆಗೆ ಬೇಸರ: ‘ಬುಧವಾರ ಬೆಳಿಗ್ಗೆ ಎದ್ದ ತಕ್ಷಣ, ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಇಬ್ಬರು ಯೋಧರ ಮಕ್ಕಳು ರೋಧಿಸುತ್ತಿರುವ ಚಿತ್ರವನ್ನು ದಿನಪತ್ರಿಕೆಯಲ್ಲಿ ನೋಡಿದೆ. ಒಬ್ಬಾಕೆ ಹುತಾತ್ಮ ತಂದೆಗೆ ಸಲ್ಯೂಟ್ ಮಾಡುತ್ತಿದ್ದರೆ, ದುಃಖದಿಂದ ಅಳುತ್ತಿದ್ದ ಮತ್ತೊಬ್ಬಾಕೆಯನ್ನು ಸಂಬಂಧಿಕರೊಬ್ಬರು ಸಂತೈಸುತ್ತಿರುವ ಚಿತ್ರಗಳು ಅವುಗಳಾಗಿದ್ದವು’ ಎಂದು ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.
ಅಲ್ಲದೆ, ನಕ್ಸಲ್ ದಾಳಿ ಘಟನೆಯಿಂದಾಗಿ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
‘ಸಶಸ್ತ್ರ ಪಡೆಗಳನ್ನೂ ನಾನು ಪ್ರೀತಿಸುತ್ತೇನೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಆತ್ಮೀಯನನ್ನೊಬ್ಬನನ್ನು ನಾವು ಕಳೆದುಕೊಳ್ಳುವುದನ್ನು ಕ್ರಿಕೆಟ್ ಪಂದ್ಯವೊಂದನ್ನು ಸೋತದ್ದರ ಜತೆ ಎಂದಿಗೂ ಹೋಲಿಸಲಾಗದು’ ಎಂದು ಅವರು ಹೇಳಿದ್ದಾರೆ.
‘ಸಿಆರ್‌ಪಿಎಫ್‌ನ 25 ಸಿಬ್ಬಂದಿ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು. ಕೆಲ ಬಾರಿ, ಆ ತ್ಯಾಗಕ್ಕೆ ನಾವು ಅರ್ಹರೇ ಎಂಬ ಅನುಮಾನ ಮೂಡುತ್ತದೆ’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
25 CRPF men sacrificed lives for d country. Sometimes I wonder if we deserve their sacrifice!!! pic.twitter.com/yKN8bzEom2
— Gautam Gambhir (@GautamGambhir) April 26, 2017
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪ್ರತ್ಯೇಕತಾವಾದಿಯೊಬ್ಬ ಯೋಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಯೋಧರ ಮೇಲೆ ನಡೆಯುವ ಒಂದೊಂದು ಹಲ್ಲೆಗೂ 100 ಜಿಹಾದಿಗಳನ್ನು ಹತ್ಯೆ ಮಾಡಿ ಎಂದು ಅವರು ಟ್ವೀಟ್ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.