ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಂಗಿಕ ನಡವಳಿಕೆ’ಯ ಮಾನಸಿಕ ಆಯಾಮಗಳು

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಲೈಂಗಿಕ ಬಯಕೆ ಅತಿಯಾದರೆ ಎದುರಿಸಬೇಕಾದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಹಿಂದಿನ ಅಂಕಣದಲ್ಲಿ ತಿಳಿಸಲಾಗಿತ್ತು. ಈ ಬಾರಿ   ಕೆಲವು ಲೈಂಗಿಕ ನಡವಳಿಕೆಗಳ ಕುರಿತು ತಿಳಿದುಕೊಳ್ಳೋಣ.

ಲೈಂಗಿಕ ಬಯಕೆ ಅತ್ಯಧಿಕವಿರುವುದನ್ನು ಸಮಸ್ಯೆ ಎಂದು ಪರಿಗಣಿಸುವುದು ಒಂದು ದೃಷ್ಟಿಕೋನ. ಇದಕ್ಕೆ ವಿರುದ್ಧವಾಗಿ ‘ಲೈಂಗಿಕ ನಿರಾಸಕ್ತಿ’ ಹೊಂದಿರುವ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. ಹಲವು ಮಂದಿ, ಲೈಂಗಿಕತೆ ತಮ್ಮ ಬದುಕಿನ ಒಂದು ಭಾಗವೆಂದೂ, ಅದು ತಮ್ಮ ಜೀವನಕ್ಕೆ ಅತಿ ಅವಶ್ಯಕವೆಂದೂ ಪರಿಗಣಿಸುತ್ತಾರೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಕೆಲವರ ಜೀವನದಲ್ಲಿ ಲೈಂಗಿಕ ವಿಷಯಕ್ಕೆ ಪ್ರಾಮುಖ್ಯವೇ ಇರುವುದಿಲ್ಲ. ಅವರಿಗೆ ಲೈಂಗಿಕತೆಯಲ್ಲಿ ಆಸಕ್ತಿಯೂ ಇರುವುದಿಲ್ಲ. ಅವರು ಯಾವುದೇ ವ್ಯಕ್ತಿಯೆಡೆಗೆ ಲೈಂಗಿಕವಾಗಿ ಆಕರ್ಷಿತಗೊಳ್ಳುವುದೂ ಇಲ್ಲ.

‘ಲೈಂಗಿಕ ಜೀವನದಲ್ಲಿ ನಿರಾಸಕ್ತಿ’ ಎಂದಾಕ್ಷಣ ಅದು ಬ್ರಹ್ಮಚರ್ಯ ಎಂದು ಭಾವಿಸುವುದುಂಟು. ಬ್ರಹ್ಮಚರ್ಯಕ್ಕೂ ಲೈಂಗಿಕ ನಿರಾಸಕ್ತಿಗೂ ವ್ಯತ್ಯಾಸವಿದೆ. ಲೈಂಗಿಕ ನಿರಾಸಕ್ತರು ಯಾರೆಡೆಗೂ ಲೈಂಗಿಕ ಕಾಮನೆ ವ್ಯಕ್ತಪಡಿಸುವುದಿಲ್ಲ. ಆದರೆ ಬ್ರಹ್ಮಚರ್ಯ ಎಂದರೆ ಉದ್ದೇಶಪೂರ್ವಕವಾಗಿ ಲೈಂಗಿಕ ಜೀವನವನ್ನು ಆರಿಸಿಕೊಳ್ಳದೇ ಇರುವುದು.

ಆಸಕ್ತಿ ಇಲ್ಲವೆಂದ ಮಾತ್ರಕ್ಕೆ ಅವರು  ಲೈಂಗಿಕವಾಗಿ ನಿಷ್ಕ್ರಿಯರಾಗಿರುತ್ತಾರೆ ಎನ್ನುವಂತಿಲ್ಲ. ಅವರ ದೇಹ ಲೈಂಗಿಕ ಚಟುವಟಿಕೆ ನಡೆಸಲು ಸಮರ್ಥವಾಗಿರುತ್ತದೆ. ಆದರೆ ಅವರು ಲೈಂಗಿಕ ವಿಷಯದ ಕುರಿತು ಚಿಂತಿಸುವುದೂ ಇಲ್ಲ. ಅವರ ಜೀವನದಲ್ಲಿ ಅದೊಂದು ಕೊರತೆ  ಎಂದು ಪರಿಗಣಿಸುವುದೂ ಇಲ್ಲ.

ಲೈಂಗಿಕ ನಿರಾಸಕ್ತರು ಹೇಗಿರುತ್ತಾರೆ?
ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಾಕ್ಷಣ ವೈವಾಹಿಕ ಜೀವನ ನಡೆಸುವುದಿಲ್ಲ ಎನ್ನುವಂತಿಲ್ಲ, ಅವರೂ ಮದುವೆಯಾಗುತ್ತಾರೆ. ಆದರೆ ತಾವು ಆಕರ್ಷಿತಗೊಂಡವರ ಮೇಲೆ ಭಾವನಾತ್ಮಕವಾಗಿ ತಮ್ಮ ಅಭಿಲಾಷೆಗಳನ್ನು ವ್ಯಕ್ತಪಡಿಸುತ್ತಾರೆಯೇ ಹೊರತು ದೈಹಿಕವಾಗಿ ಅಲ್ಲ.

ಲೈಂಗಿಕತೆಯೆಡೆಗೆ ಲೈಂಗಿಕ ನಿರಾಸಕ್ತರ ನಡೆಯೂ ಭಿನ್ನವಾಗಿರುತ್ತದೆ. ಕೆಲವರು ಅದರ ಬಗ್ಗೆ ಹೇವರಿಕೆ ಬೆಳೆಸಿಕೊಂಡರೆ, ಜೊತೆಗಾರರ ಸಂತೋಷಕ್ಕೆ ಲೈಂಗಿಕ ಜೀವನ ನಡೆಸುವವರೂ ಇರುತ್ತಾರೆ. ಇವರಲ್ಲಿ ಇನ್ನೂ ಒಂದು ವರ್ಗವಿದೆ.  ಇವರು ಹಸ್ತಮೈಥುನ ಮಾಡಿಕೊಳ್ಳುವವರಾಗಿದ್ದು, ಅದು ದೇಹದ ಒಂದು ಅವಶ್ಯಕತೆಯೇ ಹೊರತು, ಅದು ಲೈಂಗಿಕತೆಯ ಭಾಗ ಎಂದು ಪರಿಗಣಿಸುವುದಿಲ್ಲ.

ನಿರಾಸಕ್ತಿ ಒಂದು ಬಗೆಯದಾದರೆ, ಸಮಾಜದಲ್ಲಿ ದಿನನಿತ್ಯ ನಡೆಯುವ, ಹಾಗೂ ಸಮಾಜ ‘ಅಸಹಜ’ ಎಂದು ಪರಿಗಣಿಸಿದ ಕೆಲವು ಲೈಂಗಿಕ ನಡವಳಿಕೆಗಳೂ ಇವೆ. ಮನಶಾಸ್ತ್ರದಲ್ಲಿ ಈ ರೀತಿ ನಡವಳಿಕೆ ಹೊಂದಿರುವವರನ್ನು ‘ಪ್ಯಾರಾಫಿಲಿಯಾಸ್’ ಎನ್ನಲಾಗುತ್ತದೆ.
ಪ್ಯಾರಾಫಿಲಿಯಾಸ್ ಎಂದರೆ ಯಾರು?

ಡಯಾಗ್ನಿಸ್ಟಿಕ್ ಅಂಡ್‌ ಸ್ಟಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್‌ ಡಿಸಾರ್ಡರ್ಸ್ ನಾಲ್ಕನೇ ಆವೃತ್ತಿ (ಡಿಎಸ್‌ಎಂ–4) ಪ್ರಕಾರ,  ‘ಪ್ಯಾರಾಫಿಲಿಯಾ’ಗಳು ಮಾನಸಿಕ ಸಮಸ್ಯೆ ಹೊಂದಿದವರಾಗಿದ್ದು, ಲೈಂಗಿಕ  ವಿಷಯಕ್ಕೆ ಸಂಬಂಧಿಸಿದಂತೆ ಭ್ರಮೆಗಳನ್ನು ಹೊಂದಿರುತ್ತಾರೆ. ಹಾಗೆಯೇ ಮನುಷ್ಯೇತರ ವಸ್ತುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಹಾಗೂ ಅಸಹಜ ರೀತಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸುವ ನಡವಳಿಕೆಯನ್ನೂ ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ ಈ ಒಂದು ವರ್ಗಕ್ಕೆ ಸೇರಿದವರ ನಡವಳಿಕೆ ತೀವ್ರತರವಾಗಿದ್ದು, ಸಮಾಜದಲ್ಲಿ ಒಪ್ಪಿತವಾಗಿರುವ ನಿರ್ದಿಷ್ಟ ನೀತಿ ನಿಯಮಗಳ ಆಚೆಗೆ ಇವರ ಆಲೋಚನೆಗಳಿರುತ್ತವೆ. ತಮ್ಮದೇ ರೀತಿಯಲ್ಲಿ ಲೈಂಗಿಕ ತೃಪ್ತಿ ಗಳಿಸುವ ದಾರಿಯನ್ನು ಹಿಡಿಯುತ್ತಾರೆ.

ಆದರೆ ಇದು ಅಪಾಯಕಾರಿ ಹಾಗೂ ಸಮಾಜದ ಕಟ್ಟುಪಾಡುಗಳಾಚೆಗೆ ಸರಿದಾಗ ಪರಿಸ್ಥಿತಿ ಗಂಭೀರವಾಗುತ್ತದೆ.  ಇಂಥ ನಡವಳಿಕೆಯುಳ್ಳ ಕೆಲವು ವಿಧದ ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ.

ಎಕ್ಸಿಬಿಷನಿಸಂ (ಪ್ರದರ್ಶನಾಕಾಂಕ್ಷಿಗಳು)
ತಮ್ಮ ದೇಹವನ್ನು ಅಥವಾ ಗುಪ್ತಾಂಗವನ್ನು ಮತ್ತೊಬ್ಬರಿಗೆ ಪ್ರದರ್ಶಿಸುವ ಮೂಲಕ ಲೈಂಗಿಕ ಪ್ರಚೋದನೆ ಪಡೆಯುವ ವ್ಯಕ್ತಿಗಳನ್ನು ಪ್ರದರ್ಶನಾಕಾಂಕ್ಷಿಗಳು ಎನ್ನಲಾಗುತ್ತದೆ. ಅಪರಿಚಿತರ ಬಳಿ ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸುವ ಬಯಕೆ ಇವರಲ್ಲಿರುತ್ತದೆ. ಹೀಗೆ ಪ್ರದರ್ಶಿಸುವುದು ತಮ್ಮಲ್ಲಿನ ಲೈಂಗಿಕ ಕಾಮನೆಯನ್ನು ತೀರಿಸಿಕೊಳ್ಳುವ ದಾರಿ ಎಂದು ಭಾವಿಸುತ್ತಾರೆ. ಇದೊಂದು ಮಾನಸಿಕ ಸಮಸ್ಯೆಯಾಗಿದ್ದು, ಇಂಥ ಶೇಕಡಾ 100ರಷ್ಟು ಪ್ರಕರಣಗಳಲ್ಲಿ ಪುರುಷರು ಮಹಿಳೆಯರ ಬಳಿ ಹೀಗೆ ವರ್ತಿಸುವುದು ಕಂಡುಬಂದಿದೆ.

ಫೆಟಿಷಿಸಂ (ವಸ್ತುಗಳ ಮೂಲಕ ಲೈಂಗಿಕ ಚಟುವಟಿಕೆ)
ಯಾವುದೇ ಒಂದು ವಸ್ತುಗಳ ಮೂಲಕ ತಮ್ಮ ಲೈಂಗಿಕ   ಬಯಕೆಯನ್ನು ತೃಪ್ತಿಪಡಿಸಿಕೊಳ್ಳುವ ಬಗೆಯನ್ನು ಫೆಟಿಷಿಸಂ ಎಂದು ಕರೆಯಲಾಗುತ್ತದೆ. ಮನುಷ್ಯನ ಅಂಗಗಳಿಗೆ ಹೋಲುವ ಅಥವಾ ಹಾಗೆಂದು ಭಾವಿಸುತ್ತಾ ಅದರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವುದು. ಉದಾಹರಣೆಗೆ– ಶೂಗಳು, ಕೈಗವಸು, ಒಳ ಉಡುಪುಗಳು... ಇಂಥ ವಸ್ತುಗಳ ಮೂಲಕ ತಮ್ಮ ಬಯಕೆಯನ್ನು ತೀರಿಸಿಕೊಳ್ಳುವ ದಾರಿ ಇದು.

ಫ್ರ್ಯಾಟೊಯುರಿಸಂ
ಸ್ಪರ್ಶದಿಂದ ಲೈಂಗಿಕ ಸುಖವನ್ನು ಪಡೆಯಲು ಹಾತೊರೆಯುವ ನಡವಳಿಕೆಯನ್ನು ಫ್ರ್ಯಾಟೊಯುರಿಸಂ ಎನ್ನಬಹುದು. ಪುರುಷರು ತಮ್ಮ ಗುಪ್ತಾಂಗವನ್ನು ಮಹಿಳೆಯರ ದೇಹಕ್ಕೆ ಸ್ಪರ್ಶಿಸುವ ಮೂಲಕ ಲೈಂಗಿಕ ತೃಪ್ತಿ ಪಡೆಯುವುದು ಇದರ ಒಂದು ರೂಪ.

ಪೆಡೊಫಿಲಿಯಾ
ಮಕ್ಕಳೆಡೆಗೆ ಲೈಂಗಿಕ ಬಯಕೆ ತೋರುವುದನ್ನು, ಪದೇ ಪದೇ ಮಕ್ಕಳ ಮೇಲೆ ಲೈಂಗಿಕ ಚಟುವಟಿಕೆ ನಡೆಸುವುದು ಪೆಡೊಫಿಲಿಯಾ. ಸಾಮಾನ್ಯವಾಗಿ ಹದಿಮೂರು ವಯಸ್ಸು ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ಬಯಕೆ ವ್ಯಕ್ತಪಡಿಸುವ ನಡವಳಿಕೆಯಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿಗೆ ಕನಿಷ್ಠ ಹದಿನಾರು ವರ್ಷವಾಗಿರುತ್ತದೆ. ತನಗಿಂತ ಐದು ವರ್ಷ ಕಡಿಮೆ ಇರುವ ಮಕ್ಕಳ ಮೇಲೆ ಈ  ನಡವಳಿಕೆ ವ್ಯಕ್ತವಾಗುತ್ತದೆ.
ಲೈಂಗಿಕ ಪೀಡನೆ: ಈ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಯು ಲೈಂಗಿಕವಾಗಿ ಕೆಲವು ಭ್ರಮೆಗಳನ್ನು ಹೊಂದಿರುತ್ತಾನೆ. ಈ ವ್ಯಕ್ತಿಗೆ, ಹಿಂಸಾತ್ಮಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಪ್ರಚೋದನೆಯನ್ನು ನೀಡುತ್ತದೆ.

ಕ್ರೌರ್ಯ
ಕನಿಷ್ಠ ಆರು ತಿಂಗಳ ಅವಧಿ, ಪದೇ ಪದೇ ಲೈಂಗಿಕ ಕಾಮನೆಗಳು ಕಾಡುವುದು, ಲೈಂಗಿಕ ಪ್ರಚೋದನೆ ಅನುಭವಿಸುವುದು, ಸತತ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು.  ವ್ಯಕ್ತಿಯ ಮೇಲೆ ನಿರಂತರವಾಗಿ ಲೈಂಗಿಕ ಚಟುವಟಿಕೆ ನಡೆಸುವುದು, ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿ, ಅವರು   ಅನುಭವಿಸುವ ನೋವಿನಿಂದ ಪ್ರಚೋದನೆ ಪಡೆಯುವುದಾಗಿದೆ.

ವೊಯೆಯುರಿಸಂ
ಇದನ್ನು ಸ್ಕೋಪೊಫಿಲಿಯಾ ಎಂದೂ ಕರೆಯುತ್ತಾರೆ. ಬೆತ್ತಲೆ ಇರುವ ವ್ಯಕ್ತಿಯನ್ನು ನೋಡಿದಾಗ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ನಿರತರಾದವರನ್ನು ನೋಡಿದಾಗ ತಾವೂ ಉದ್ರೇಕಗೊಂಡು ವರ್ತಿಸುವುದನ್ನು ಸ್ಕೋಪೊಫಿಲಿಯಾ ಎಂದು ಕರೆಯುತ್ತಾರೆ.

ಟ್ರಾನ್ಸ್‌ವೆಸ್ಟಿಕ್ ಫೆಟಿಷಿಸಂ
ತಮ್ಮ ವಿರುದ್ಧ ಲಿಂಗಿಗಳ ಉಡುಪುಗಳನ್ನು ತೊಡುವುದರ ಮೂಲಕ ಲೈಂಗಿಕ ತೃಷೆಯನ್ನು ನೀಗಿಸಿಕೊಳ್ಳುವುದು ಈ ಸಮಸ್ಯೆಯ ಲಕ್ಷಣ. ಉಡುಪು ಪ್ರಚೋದನಕಾರಿ ಎಂದು ಭಾವಿಸಲಾಗಿದ್ದು, ಆ ಉಡುಪುಗಳನ್ನು ತೊಡುವ ಮೂಲಕ ತಮ್ಮ ಬಯಕೆಯನ್ನು ತೀರಿಸಿಕೊಳ್ಳುವ ಒಂದು ಮಾರ್ಗ ಇದಾಗಿದೆ.

ನೆಕ್ರೊಫಿಲಿಯಾ ಮತ್ತು ಝೂಫಿಲಿಯಾ
ಶವದೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವ ಮನಸ್ಥಿತಿಯನ್ನು ‘ನೆಕ್ರೊಫಿಲಿಯಾ’ ಎಂದು ಕರೆಯುತ್ತಾರೆ. ಪ್ರಾಣಿಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಝೂಫಿಲಿಯಾ ಎಂದು ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT