7

ದೇವರು ಹಾಗೂ ದುಡಿಮೆ

ಪ್ರಸನ್ನ
Published:
Updated:
ದೇವರು ಹಾಗೂ ದುಡಿಮೆ

ದೇವರು ಹಾಗೂ ದುಡಿಮೆ ಪ್ರತ್ಯೇಕಗೊಂಡಿವೆ. ಒಡೆದು ಹೋಳಾಗಿವೆ. ಒಡಕಿನ ನೋವು ನಮ್ಮೆಲ್ಲರನ್ನೂ ತಲುಪಿದೆ. ದೇವರ ಪರವಾದವರು ಬಲಪಂಥೀಯರೆಂತಲೂ ದುಡಿಮೆಯ ಪರವಾಗಿರುವವರು ಎಡಪಂಥೀಯರೆಂತಲೂ ಆಗಿ, ಒಡೆದು, ರಾಜಕೀಯ ಘರ್ಷಣೆ ನಡೆದಿದೆ. ವಿಶ್ವದಾದ್ಯಂತ ಸಮಾಜ ವ್ಯವಸ್ಥೆ ಚೂರು ಚೂರಾಗತೊಡಗಿದೆ. ಸಮಾಜ ಬೆಸೆಯುತ್ತೇವೆ ಎಂದು ಹೊರಟವರು, ಬದಲಿಗೆ ಧರ್ಮಕಾರಣ ಹಾಗೂ ರಾಜಕಾರಣಗಳನ್ನು ಬೆಸೆಯುತ್ತಿದ್ದಾರೆ. ಅದು ಬೆಸೆಯುವ ಬದಲು ಬಿರುಕು ಬಿಡುತ್ತಿದೆ.ಕ್ರೈಸ್ತರು, ಮುಸಲ್ಮಾನರು, ಹಿಂದೂಗಳು, ಬೌದ್ಧರು, ಯಹೂದ್ಯರು... ಎಲ್ಲರಲ್ಲೂ ಅವರವರ ರಾಷ್ಟ್ರೀಯತೆಗಳು ಮೇಲೆದ್ದು ಬಂದಿವೆ, ತಮ್ಮದೇ ಪ್ರಜೆಗಳನ್ನು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ವಿಭಜಿಸಿ ಕೊಲ್ಲತೊಡಗಿವೆ.ಒಡಕನ್ನು ಗ್ರಾಮೋದ್ಯೋಗ ಚಳವಳಿ ಮಾತ್ರವೇ ಬೆಸೆಯಬಹುದು, ಗ್ರಾಮೋದ್ಯೋಗ ಚಳವಳಿ ಮಾತ್ರವೇ ದೇವರು ಹಾಗೂ ದುಡಿಮೆಗಳನ್ನು ಮತ್ತೆ ಒಂದಾಗಿಸಬಹುದು ಎಂಬುದು ಈ ಲೇಖನದ ಪ್ರತಿಪಾದನೆಯಾಗಿದೆ. ಒಬ್ಬ ಸಮರ್ಥ ಗ್ರಾಮೋದ್ಯೋಗ ಚಳವಳಿಗಾರ ದುಡಿಮೆಯಲ್ಲಿ ದೇವರನ್ನೂ ದೇವರಲ್ಲಿ ದುಡಿಮೆಯನ್ನೂ ಕಾಣಬಲ್ಲನು ಎಂಬುದು ಪ್ರತಿಪಾದನೆಯಾಗಿದೆ.ಈ ಪ್ರತಿಪಾದನೆಗಿರುವ ಆಧಾರವೆಂದರೆ ಸಂತ ಚಳವಳಿ. ಸಂತ ಚಳವಳಿಗಳೆಲ್ಲವೂ ಗ್ರಾಮೋದ್ಯೋಗ ಚಳವಳಿಗಳೂ ಆಗಿದ್ದವು. ತಮ್ಮ ತಮ್ಮ ಉಪಕರಣಗಳನ್ನು ಸಂತರು, ದುಡಿಮೆಯ ಸಾಧನವಾಗಿಯೂ ಬಳಸಿದರು. ದೈವದ ಸಾಧನವಾಗಿಯೂ ಬಳಸಿದರು.ಕಬೀರನ ಮಗ್ಗ, ರವಿದಾಸನ ಚಮ್ಮಾರಿಕೆ, ನುಲಿಯ ಚಂದಯ್ಯನ ಹಗ್ಗಹೊಸೆಯುವಿಕೆ, ಏಸುಕ್ರಿಸ್ತನ ಕುರಿಗಾಹಿಕೆ ಎಲ್ಲವೂ ಎರಡೂ ಆಗಿದ್ದವು. ಆಧುನಿಕ ಮಾನವನಲ್ಲಿ ಕೂಡ  ಇದು ಆಗಬಲ್ಲದು. ಗ್ರಾಮೋದ್ಯೋಗ ಚಳವಳಿಯು ಆಧುನಿಕ ಮಾನವನ ಜೀವನೋಪಾಯದ ಜೊತೆಜೊತೆಗೆ ಆತನ  ದೈವಿಕ ಅಗತ್ಯಗಳನ್ನೂ  ಸಮರ್ಥವಾಗಿ ನಿರ್ವಹಿಸಬಲ್ಲದು.ಆಧುನಿಕ ಯಂತ್ರೋದ್ಯಮವಾದರೋ ದುಡಿಮೆ ಹಾಗೂ ದೈವಗಳನ್ನು ಎರಡಾಗಿ ಒಡೆಯಿತು. ಒಡೆಯುವುದು ಅದಕ್ಕೆ ಅಗತ್ಯವಿತ್ತು. ಅದು ಬೃಹತ್ತಾದ ಹಾಗೂ ಭವ್ಯವಾದ ನಾಗರಿಕತೆಗಳನ್ನು ನಿರ್ಮಾಣ ಮಾಡಬೇಕಿತ್ತು. ಮಾಡಿ ತೋರಿಸಿತು ಕೂಡ. ಆದರೆ ಭವ್ಯತೆ ಹಾಗೂ ಬೃಹತ್ತತೆಯೇ ಅದರ ಸಮಸ್ಯೆಯಾಯಿತು. ರಾವಣನ ಲಂಕೆಯಂತೆ ಯಂತ್ರನಾಗರಿಕತೆಯೂ  ಭವ್ಯತೆ ಹಾಗೂ ಬೃಹತ್ತತೆಯ ಅಹಂಕಾರಕ್ಕೆ ಬಲಿಯಾಯಿತು. ಎಲ್ಲ ಬೃಹತ್ ನಾಗರಿಕತೆಗಳೂ ರಾವಣನ ಲಂಕೆಯಂತೆಯೇ ಸರಿ. ಬೃಹತ್ತಾದ ಅಸಭ್ಯತೆಗಳು ಅವು.ಅಲ್ಲಿ ಎಲ್ಲವೂ ಇರುತ್ತದೆ. ಅಗತ್ಯಕ್ಕಿಂತ ಜಾಸ್ತಿ ಇರುತ್ತದೆ. ರಾವಣನನ್ನೇ ನೋಡಿ! ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಸಿದ್ದರಾಮಯ್ಯ, ಯಡಿಯೂರಪ್ಪ– ಹೀಗೆ ಆಧುನಿಕ ರಾಜಕಾರಣಿಗಳಷ್ಟೇ ಯಶಸ್ವಿ ಪುರುಷ ರಾವಣ. ಯಶಸ್ವಿ ದೈವಭಕ್ತ! ತನ್ನ ಪ್ರಜೆಗಳ ಮೇಲೆ ಸಂಪೂರ್ಣ ಹಿಡಿತವಿದ್ದವನು. ಲಂಕೆಯಲ್ಲಿ, ಒಂದೊಮ್ಮೆ ಚುನಾವಣೆ ಏನಾದರೂ ನಡೆದಿದ್ದರೆ ಅಭೂತಪೂರ್ವ ಗೆಲುವು ಸಾಧಿಸಿರುತ್ತಿದ್ದ ಅವನು.

ಸುಖ ಸಂಪತ್ತು, ಯಂತ್ರ ಮಂತ್ರ, ಅಧಿಕಾರ ಅಹಂಕಾರಗಳಿಂದ ತುಂಬಿ ತುಳುಕುತ್ತಿತ್ತು ರಾವಣನ ಲಂಕೆ. ಹೌದು, ಇಂದಿನ ಭಾರತದಂತೆ ರಾವಣನ ಲಂಕೆಯೂ ತುಂಬ ತುಂಬ ಯಶಸ್ವಿಯಾದ ಸಭ್ಯತೆಯಾಗಿತ್ತು. ಹಾಗಾಗಿಯೇ ಅದು ಶಿಕ್ಷಾರ್ಹವಾಯಿತು. ಹಾಗಾಗಿಯೇ ಅದು ರಾಕ್ಷಸ ಸಭ್ಯತೆಯಾಯಿತು. ಯಂತ್ರನಾಗರಿಕತೆಯೂ ಸಹ, ತನ್ನ ಅತಿಯಾದ ಯಶಸ್ಸು, ಅತಿಯಾದ ಭೋಗ, ಅತಿಯಾದ ಶ್ರೀಮಂತಿಕೆಗಳ ಕಾರಣದಿಂದಾಗಿಯೇ ಶಿಕ್ಷಾರ್ಹವಾಗಲಿದೆ. ಆಗಲಿ.ನಮ್ಮ ಮುಂದಿರುವ ಪ್ರಶ್ನೆ ಶಿಕ್ಷೆಯದ್ದಲ್ಲ, ಉದ್ಯಮಶೀಲತೆಯದ್ದು. ಉದ್ಯಮಶೀಲತೆಯೆಂದರೆ ಕೇವಲ ಲಾಭಬಡುಕತನವಲ್ಲ. ಉದ್ಯಮಶೀಲತೆ ಪ್ರಕೃತಿಯಲ್ಲಿರಲಿಲ್ಲ. ಪ್ರಾಣಿಗಳು ಕೈಗಾರಿಕೆಗಳ ನಿರ್ಮಾಣ ಮಾಡುವುದಿಲ್ಲ; ದಿನಬಳಕೆ ವಸ್ತುಗಳನ್ನು ತಯಾರು ಮಾಡುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ ಅಥವಾ ಲಾಭ ಮಾಡುವುದಿಲ್ಲ. ಮನುಷ್ಯ ಮಾತ್ರ ಮಾಡುತ್ತಾನೆ. ಮಾಡುವುದರಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ.

ಉದ್ಯಮಶೀಲತೆ, ತಂತಾನೆ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ. ಕೆಟ್ಟದ್ದಲ್ಲ ಏಕೆಂದರೆ ಮಾನವನು ಸಭ್ಯನಾಗಲಿಕ್ಕೆ ಅದು ದಾರಿ ಮಾಡಿ ಕೊಟ್ಟಿತು. ಒಳ್ಳೆಯದಲ್ಲ ಏಕೆಂದರೆ ಶೋಷಣೆಗೂ ಅದು ದಾರಿ ಮಾಡಿಕೊಟ್ಟಿತು.ಉದ್ಯಮಶೀಲತೆಯ ಕೆಟ್ಟಗುಣವನ್ನು ನಿಯಂತ್ರಿಸಲಿಕ್ಕೆಂದೇ ದೈವವು, ವೈರಾಗ್ಯಶೀಲತೆ ಅಥವಾ ಅನಾಸಕ್ತಿಯೋಗ ಎಂಬ ಗುಣವನ್ನು ಅದರೊಟ್ಟಿಗೆ ಬೆರೆಸಿ ಬಳಸುವಂತೆ ಬೋಧಿಸಿತು. ‘ವೈರಾಗ್ಯಶೀಲತೆ ಹಾಗೂ ಉದ್ಯಮಶೀಲತೆಗಳನ್ನು ಬೆರೆಸು, ಅನಾಸಕ್ತಿಯಿಂದ ಕೆಲಸ ಮಾಡು, ನೆರೆಹೊರೆಯ ಒಳಿತಿಗಾಗಿ, ದರಿದ್ರರ ಒಳಿತಿಗಾಗಿ ಜೀವನ ಸಾಗಿಸು’ ಎಂದು ಅದು ಮಾನವನಿಗೆ ಹೇಳಿತು. ಆದರೆ ಯಂತ್ರನಾಗರಿಕತೆ ಮಾನವೀಯವಲ್ಲ.

ಅದು ವೈರಾಗ್ಯವನ್ನೂ ಉದ್ದಿಮೆಯನ್ನೂ ಪ್ರತ್ಯೇಕಿಸಿತು. ಪ್ರತ್ಯೇಕವಾದ ಉದ್ದಿಮೆಗಳನ್ನಾಗಿ ಮಾಡಿತು. ಮಠಮಾನ್ಯಗಳು, ಮಂದಿರ ಮಸೀದಿಗಳು, ಚರ್ಚುಗಳು ಕೊಬ್ಬಿ ಬೆಳೆದವು, ಎರಡೂ ಸಂಸ್ಥೆ ಕೊಬ್ಬಿ ಬೆಳೆಯಿತು. ಸಮಾಜವು ಶ್ರೇಣೀಕೃತವಾಯಿತು. ದರಿದ್ರರು ಮೂಲೆಗುಂಪಾದರು. ಪ್ರಕೃತಿ ನಾಶವಾಯಿತು. ಮಾನವತೆ ನಾಶವಾಯಿತು. ಲಾಭಬಡುಕುತನ ಅತಿಯಾಯಿತು. ವ್ಯವಸ್ಥೆ ನಿಯಂತ್ರಣ ಕಳೆದುಕೊಂಡಿತು.ದೈವವು ಬೋಧಿಸಿದ ವೈರಾಗ್ಯಶೀಲತೆ ಪರಿಣಾಮಕಾರಿಯಾಗಲಿಕ್ಕೆ ಸಭ್ಯತೆ ಸಣ್ಣದಿರಬೇಕು. ಸಣ್ಣದಾಗಿ ಉಳಿಯಬೇಕೆಂದರೆ ಸಭ್ಯತೆಗಳು ಶ್ರಮ ಮೂಲದ ಉತ್ಪಾದಕತೆಗೆ ಮರಳಬೇಕು. ಶ್ರಮಮೂಲದ ಉತ್ಪಾದಕತೆಯೆಂದರೆ ಗ್ರಾಮೋದ್ಯೋಗ ಮಾತ್ರ.ಗ್ರಾಮೋದ್ಯೋಗ ಚಳವಳಿಯು ಬಡವರ ಆರ್ಥಿಕತೆಯನ್ನು ಗಟ್ಟಿಗೊಳಿಸುವ ಜೊತೆಜೊತೆಗೆ ಅವರ ಧಾರ್ಮಿಕತೆಯನ್ನೂ ಗಟ್ಟಿಗೊಳಿಸುತ್ತದೆ. ಉಳ್ಳವರಾದ ನಾವು, ಚಳವಳಿಯಲ್ಲಿ ಭಾಗವಹಿಸುವ ಮೂಲಕ ನಮ್ಮ ಆರ್ಥಿಕತೆ ಹಾಗೂ ಧಾರ್ಮಿಕತೆ ಎರಡನ್ನೂ ಸಣ್ಣದು ಹಾಗೂ ಮಾನವೀಯವಾದದ್ದೂ ಆಗಿಸಿಕೊಳ್ಳುತ್ತೇವೆ. ಗ್ರಾಮೋದ್ಯೋಗ ಚಳವಳಿ ಮಾತ್ರವೇ ಉಳ್ಳವರು ಹಾಗೂ ಬಡವರು ಇಬ್ಬರನ್ನೂ ಮೇಲೆತ್ತಬಹುದು, ಸಂಘರ್ಷವಿಲ್ಲದೆ ಮೇಲೆತ್ತಬಹುದು.ಯಂತ್ರಗಳನ್ನು ನಾವು ಕಳಚಬೇಕಾದದ್ದು, ಗ್ರಾಮೋದ್ಯೋಗ ಚಳವಳಿಯನ್ನು ಮುಂದೊತ್ತಬೇಕಾದದ್ದು ಕೇವಲ ಪ್ರದೂಷಣ ನಿವಾರಣೆಗಾಗಿ ಅಲ್ಲ. ಗ್ರಾಮೋದ್ಯೋಗ ಒಂದು ದೈವಿಕ ಕ್ರಿಯೆಯಾಗಿದೆ. ಆದರೆ ನಾವು ಹಾಗೆ ಮಾಡುತ್ತಿಲ್ಲ.ಕಳೆದ ಮೂವತ್ತು ವರ್ಷಗಳಿಂದ ನಾನು ನನ್ನನ್ನು ತೊಡಗಿಸಿಕೊಂಡಿರುವ ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ನಿರ್ಮಾಣ ಕಾರ್ಯವು ಕೇವಲ ಕಾರ್ಖಾನೆಯೊಂದರ ನಿರ್ಮಾಣ ಕಾರ್ಯವೆಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಸಾಹಸಮಯ ಸೋಲಿನ ಕೆಲಸವೆಂದು ಹೆಚ್ಚಿನವರು ತಿಳಿದಿದ್ದಾರೆ. ಹಾಗೆ ತಿಳಿದವರು, ತಮ್ಮ ತಪ್ಪುಗ್ರಹಿಕೆಯಿಂದಾಗಿ ಕಲಬೆರಕೆ ಮಾಡುತ್ತಾರೆ.

ಒಳಿತು ಕೆಡಕುಗಳ ಕಲಬೆರಕೆ ಮಾಡುತ್ತಾರೆ, ದೇವರು ಹಾಗೂ ಲಾಭಬಡುಕತನಗಳ ಕಲಬೆರಕೆ ಮಾಡುತ್ತಾರೆ. ಮಾಡಿ ದೇವರನ್ನೂ ಕಲುಷಿತಗೊಳಿಸುತ್ತಾರೆ ದುಡಿಮೆಯನ್ನೂ ಕಲುಷಿತಗೊಳಿಸುತ್ತಾರೆ. ಚರಕ ಚಳವಳಿ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಕಲಬೆರಕೆಯದ್ದೇ ಆಗಿದೆ.ನಗರ ಬಿಡಿ, ಹಳ್ಳಿಗಳೂ ಕಲಬೆರಕೆಯಾಗಿವೆ. ಶ್ರಮಜೀವಿಗಳು ಕಲಬೆರಕೆ ಜೀವಿಗಳಾಗಿದ್ದಾರೆ. ತಮ್ಮ ಪರಿಸ್ಥಿತಿಯಲ್ಲಿ ಶ್ರಮಜೀವಿಗಳೂ ಮನಸ್ಥಿತಿಯಲ್ಲಿ ಸುಲಭಜೀವಿಗಳೂ ಆಗಿದ್ದಾರೆ ಅವರು. ಅವರನ್ನು ಹಾಗೆ ಮಾಡಿದವರು ನಾವೇ. ನಾವು, ನಮ್ಮ ಸರ್ಕಾರ, ನಮ್ಮ ಸ್ವಯಂಚಾಲಿತ ಉದ್ದಿಮೆ, ಹಾಗೂ ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಸುಲಭ ಬದುಕು ಅವರನ್ನು ಕಲಬೆರಕೆ ಜೀವಿಗಳನ್ನಾಗಿ ಮಾಡಿದೆ. ಅವರಲ್ಲಿರುವ ನುಲಿಯಚಂದಯ್ಯ, ಏಸುಕ್ರಿಸ್ತ, ಕಬೀರ, ರವಿದಾಸರುಗಳ ಬಗ್ಗೆಯೇ ಅವರಿಗೆ ಅನುಮಾನ ಉಂಟಾಗುವಂತೆ ಮಾಡಿದ್ದೇವೆ ನಾವು.ಸಂತರನ್ನು ನಮ್ಮವನನ್ನಾಗಿಸಿಕೊಳ್ಳುವ ಆತುರದಲ್ಲಿ ಸಂತರನ್ನೇ ಸುಲಭಜೀವಿಗಳನ್ನಾಗಿ ಪರಿವರ್ತಿಸಿದ್ದೇವೆ ನಾವು. ಅಲ್ಲಮ, ಏಸುಕ್ರಿಸ್ತ, ಪ್ರವಾದಿ ಮಹಮ್ಮದ್‌ ಇತ್ಯಾದಿ ಎಲ್ಲರನ್ನೂ ಸುಲಭವಾಗಿಸಿ ಮಂದಿರ ಮಸೀದಿ ಚರ್ಚುಗಳಲ್ಲಿ ಬಂಧಿಸಿಟ್ಟಿದ್ದೇವೆ. ಶಾಲೆಗಳಲ್ಲಿ ಶ್ರಮದ ಮೂರ್ತಿಗಳನ್ನಿಟ್ಟು ಪ್ರೇಯರ್ ಮಾಡಿಸುತ್ತೇವೆ, ಮಕ್ಕಳಿಗೆ ಸುಲಭಜೀವನ ತರಬೇತಿ ನೀಡುತ್ತೇವೆ.ಅಕ್ಕಿ, ಬೇಳೆ, ಹಾಲು, ಟೀವಿ ಬಿಟ್ಟಿ ಹಂಚುತ್ತೇವೆ, ಹಂಚಿ ಶ್ರಮದ ಕೊಲೆ ಮಾಡುತ್ತೇವೆ. ಇತ್ತ ಧರ್ಮದ ಪರ ರಾಜಕೀಯ ಮಾಡುತ್ತೇವೆ. ದೇವರನ್ನು ಕಬ್ಬಿನ ಜಲ್ಲೆಯಂತೆ ಯಂತ್ರದೊಳಗೆ ಹುಗಿಸಿ ರಸ ಹೀರಿ ಒಣಸಿಪ್ಪೆಯಾಗಿಸಿ ಎಸೆಯುತ್ತೇವೆ. ಇನ್ನು ಪ್ರಗತಿಪರರು ಯಂತ್ರಗಳ ದಾಸರಾಗಿದ್ದಾರೆ.ಗ್ರಾಮೋದ್ಯೋಗ ಚಳವಳಿಯನ್ನು ಕೊಲ್ಲಲು ಬಳಸಲಾಗುತ್ತಿರುವ ಅಸ್ತ್ರ ಕಲಬೆರಕೆ. ಕುಂಬಾರಪೇಟೆ ಪ್ಲಾಸ್ಟಿಕ್ಕಿನ ಕೊಡದ ಪೇಟೆಯಾಗಿದೆ. ಚಮ್ಮಾರರು ಪ್ಲಾಸ್ಟಿಕ್ಕಿನ ಚಪ್ಪಲಿ ಮಾರಾಟ ಮಾಡುತ್ತಿದ್ದಾರೆ. ಬ್ರಾಹ್ಮಣರು ಅನ್ನ ಮಾರುತ್ತಿದ್ದಾರೆ. ಮೊನ್ನೆ ಹೀಗೆಯೇ ಆಯಿತು. ಶುದ್ಧ ಕೈಮಗ್ಗ ವಸ್ತ್ರ ಮಾರಾಟ ಮಾಡುತ್ತಿದ್ದ  ‘ದೇಸಿ’ ಅಂಗಡಿಯೊಂದು ಕಲಬೆರಕೆ ಪದಾರ್ಥ ಮಾರಲಿಕ್ಕೆ ಆರಂಭಿಸಿತು. ನಮ್ಮವರೇ ಹೀಗೆ ಮಾಡಿದರು. ನಮ್ಮವರನ್ನು ಹಳಿಯಲಿಕ್ಕೆ ನನಗಾವ ಹಕ್ಕೂ ಇರಲಿಲ್ಲ.ನಾನೇ ತರಬೇತುಗೊಳಿಸಿದವರು ಅವರು, ನನ್ನದೇ ಸುಲಭಬದುಕಿನ ಅನುಕರಣೆ ಮಾಡಲಿಕ್ಕೆ ಹೊರಟರು. ವ್ಯಾಪಾರದ ವಾಸ್ತವವು ಬೆಲೆವೆಣ್ಣಿನಂತೆ ಅವರನ್ನಾವರಿಸಿ ಚಳವಳಿಯನ್ನು ಹಿಂದಕ್ಕೊತ್ತಿ, ಪಾಪಕೃತ್ಯಕ್ಕೆ ಎಳೆಸಿತ್ತು. ಪಾಪಿ ನಾನು. ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿತ್ತು ನನಗೆ, ಬೆಳಗಾವಿಯ ಟಿಳಕವಾಡಿ ರಸ್ತೆಯಲ್ಲಿ, ‘ದೇಸಿ’ ಅಂಗಡಿ ಇದ್ದ ಜಾಗದೆದುರು ಕುಳಿತು ಭಿಕ್ಷೆ ಬೇಡಿದೆ. ಭಿಕ್ಷೆಗೆ ಕುಳಿತಾಗಲೂ ಸಿಟ್ಟಿನಿಂದ ಕುದಿಯುತ್ತಿದ್ದೆ. ಹತಾಶನಾಗಿದ್ದೆ. ದೇವರನ್ನು ಕಳೆದುಕೊಂಡಿದ್ದೆ.ಆಗ ಅವನು ಕಂಡ. ಅವನೊಬ್ಬ ಭಿಕ್ಷುಕ. ನಿಜವಾದ ಭಿಕ್ಷುಕ. ಅವನು ಮುದುಕ. ಅವನ ಮುಖವು ಕಾಯಿಲೆಯಿಂದ ಊದಿಕೊಂಡಿತ್ತು. ಪ್ಯಾಂಟು ಶರಟು ಗಲೀಜಾಗಿತ್ತು. ಕಾಲು ಎಳೆದೆಳೆದು ಬಿಡುತ್ತಿದ್ದ ಅವನು. ಪ್ಯಾಂಟಿನ ಗುಂಡಿಗಳು ಬಿಚ್ಚಿಕೊಂಡಿದ್ದವು. ಅವನ ಮುಖದಲ್ಲಿದ್ದ ಯಾತನೆ ಹಾಗೂ ಬಿಚ್ಚಿಕೊಂಡಿದ್ದ ಆತನ ಲೈಂಗಿಕತೆಯ ಗುಂಡಿಗಳು, ವಿಕ್ಷಿಪ್ತತೆಯ ಸೂಚನೆಯಾಗಿ ಕಂಡಿತು. ಹೆದರಿದೆ.ನನ್ನನ್ನು ನೋಡಿ ನಿಂತ. ನೋಡಿಯೇ ನೋಡಿದ. ಕೈಯೆತ್ತಿ ಎಸೆದು ಎಸೆದು ಏನನ್ನೋ ಹೇಳಲಿಕ್ಕೆ ಶುರುಮಾಡಿದ. ಅವನು ಹೇಳುತ್ತಿದ್ದದ್ದು ನನಗೆ ಅರ್ಥವಾಗುತ್ತಿರಲಿಲ್ಲ. ಮುಖ ತಗ್ಗಿಸಿ ಕುಳಿತುಕೊಂಡೆ. ಆದರೂ ಅವನು ಕೈ ಎಸೆಯುತ್ತಲೇ ಇದ್ದ. ಅವನ ಬಲವಂತಕ್ಕೆ ಮಣಿದು ಅವನ ಕೈಗಳು ತೋರುತ್ತಿದ್ದ ಎಡೆಗೆ ತಿರುಗಿ ನೋಡಿದೆ. ಅಲ್ಲೊಂದಿಷ್ಟು ನೆರಳಿತ್ತು.

ನಾನು ಕುಳಿತೆಡೆ ಬಿಸಿಲಿತ್ತು. ನೆರಳಿನಲ್ಲಿ ಕುಳಿತುಕೊ ಎಂದವನು ಹೇಳುತ್ತಿದ್ದ. ಬೇಕೆಂದೇ ಬಿಸಿಲಿನಲ್ಲಿ ಕುಳಿತಿದ್ದ ನನ್ನ ಹಟವು ಅವನಿಗೆ ಅವಿವೇಕದಂತೆ ಕಂಡಿತ್ತು. ಒಂದೂ ತೋಚದೆ ಎರಡೂ ಕೈಗಳನ್ನೆತ್ತಿ ಅವನಿಗೆ ನಮಸ್ಕರಿಸಿಬಿಟ್ಟೆ. ಗೊಣಗುತ್ತ ತಲೆ ಕೊಡವುತ್ತ ಮುಂದೆ ದಾಟಿದ ಅವನು.ಮತ್ತೆ ಬಂದ. ನನ್ನೆದುರಿಗಿನ ಪಾತ್ರೆಗೆ ಒಂದು ರೂಪಾಯಿಯ ನಾಣ್ಯ ಹಾಕಿ, ಕಾಲೆಳೆದೆಳೆದು ಎಳೆದು ಬಿಡುತ್ತ ಗೊಣಗುತ್ತ ಹೊರಟುಹೋದ. ನನ್ನಲ್ಲಿ ಮಡುಗಟ್ಟಿದ್ದ ಮುಜುಗರ ಸಿಟ್ಟು ಸೆಡವು ಅಹಂಕಾರ ಎಲ್ಲವೂ ಕರಗಿಹೋದವು. ಬಿಸಿಲ ತಾಪ ಕಳೆದುಹೋಯಿತು. ಕಣ್ಣುಗಳು ಒದ್ದೆಯಾದವು. ಗ್ರಾಮೋದ್ಯೋಗದ ಬಗೆಗಿನ ನಂಬಿಕೆ ಗಟ್ಟಿಗೊಂಡಿತು.ನಾನು ಭಿಕ್ಷೆಗೆ ಕುಳಿತ ದಿನ, ನನಗೇ ತಿಳಿದಿರಲಿಲ್ಲ, ಶುಭ ಸೂಚನೆಯ ದಿನಗಳಾಗಿತ್ತು. ಏಪ್ರಿಲ್ ಹದಿನಾಲ್ಕು, ಎರಡು ಸಾವಿರದ ಹದಿನೇಳು. ಅದು ಅಂಬೇಡ್ಕರ್ ಹುಟ್ಟಿದ ದಿನವೂ ಆಗಿತ್ತು, ಏಸುಕ್ರಿಸ್ತ ಶಿಲುಬೆಗೇರಿದ ಶುಭ ಶುಕ್ರವಾರದ ದಿನವೂ ಆಗಿತ್ತು. ನಾನು ಕುಳಿತಿದ್ದ ಬೀದಿ ಬಾಲಗಂಗಾಧರ ತಿಲಕರ ಹೆಸರಿನ ಬೀದಿಯಾಗಿತ್ತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry