7

ಕೇಂದ್ರ ಸರ್ಕಾರದ ಹೊಸ ಹುಮ್ಮಸ್ಸು?

Published:
Updated:
ಕೇಂದ್ರ ಸರ್ಕಾರದ ಹೊಸ ಹುಮ್ಮಸ್ಸು?

ಸಂಸತ್ತಿನ ಹಿಂದಿ ರಾಜಭಾಷಾ ಸಮಿತಿಯು ತನ್ನ ಹನ್ನೊಂದನೆಯ ವರದಿಯಲ್ಲಿ ಮಾಡಿರುವ ಹಲವು ಶಿಫಾರಸುಗಳನ್ನು ರಾಷ್ಟ್ರಪತಿ ಪ್ರಣವ್  ಮುಖರ್ಜಿ ಇತ್ತೀಚೆಗೆ ಅಂಗೀಕರಿಸಿರುವ ಸುದ್ದಿ ಹೊಸ ವಿವಾದಗಳಿಗೆ ಕಾರಣವಾಗಿದೆ. ಹಿಂದಿ ಹೇರಿಕೆಯು ಹಿತ್ತಿಲ ಬಾಗಿಲಿಂದ ಹೊಸ ರೂಪ ಧರಿಸಿ ಬರತೊಡಗಿದೆ ಎಂದು ಹಿಂದಿ ಭಾಷಿಕರಲ್ಲದ ಭಾರತೀಯರು ಆತಂಕಪಡುವಂತಾಗಿದೆ.ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದಿ-ಹಿಂದೂ- ಹಿಂದುತ್ವವಾದಿ ಚಿಂತನೆ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದಿಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ‘ಹಿಂದಿ ಸಾಮ್ರಾಜ್ಯಶಾಹಿ’ಯ ಭಯವನ್ನು ಹುಟ್ಟಿ ಹಾಕಿದ್ದರೆ ಅದು ಸ್ವಾಭಾವಿಕ.ಅರವತ್ತೈದು ವರ್ಷಗಳ ಹಿಂದಿನ ಮಾತು. ಢಾಕಾದ ಬೀದಿಗಳಲ್ಲಿ ಗೋಲಿಬಾರ್‌ಗೆ ಬಲಿಯಾದ ನೂರಾರು ವಿದ್ಯಾರ್ಥಿಗಳ ಹೆಣಗಳು ಉರುಳಿದ್ದವು. ಭಾರತ ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿದ್ದ ಪೂರ್ವ ಬಂಗಾಳವನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗಿತ್ತು. 

ಪಶ್ಚಿಮ ಪಾಕಿಸ್ತಾನವು ಬಂಗಾಳಿ ಭಾಷಿಕರ ಪೂರ್ವ ಪಾಕಿಸ್ತಾನದ ಮೇಲೆ ಬಲವಂತವಾಗಿ ಉರ್ದುವನ್ನು ರಾಷ್ಟ್ರೀಯ ಭಾಷೆ ಎಂದು ಹೇರಿತ್ತು. ತನ್ನ ತಾಯ್ನುಡಿ ಬಂಗಾಳಿಯ ಮೇಲೆ ನಡೆದಿದ್ದ ಈ ಹಲ್ಲೆಯನ್ನು ಪ್ರತಿಭಟಿಸಿ ಪೂರ್ವ ಪಾಕಿಸ್ತಾನ ಇಡಿಯಾಗಿ ಭುಗಿಲೆದ್ದಿತ್ತು.ಉರ್ದುವಿನ ಬಲವಂತ ಹೇರಿಕೆ ವಿರುದ್ಧ ಸಿಡಿದೆದ್ದ ಆಂದೋಲನ ಅಂತಿಮವಾಗಿ ಪ್ರತ್ಯೇಕ ರಾಷ್ಟ್ರೀಯತೆಯ ಆಂದೋಲನವಾಗಿ ಪರಿಣಮಿಸಿತು. ಉರ್ದು ಹೇರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಆಂದೋಲನದ ನೇತೃತ್ವ ವಹಿಸಿದ್ದ ಶೇಖ್ ಮುಜೀಬುರ್ ರೆಹಮಾನ್ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಹೋರಾಟದ ನಾಯಕತ್ವವನ್ನೂ ವಹಿಸಿದ್ದರು. ಪೂರ್ವ ಪಾಕಿಸ್ತಾನವು ಸ್ವತಂತ್ರ ಬಾಂಗ್ಲಾ ದೇಶವಾಗಿ ಉದಯಿಸಿತು.ಉತ್ತರ ಭಾರತ ಎಂಬುದು ಪಶ್ಚಿಮ ಪಾಕಿಸ್ತಾನವೂ ಅಲ್ಲ, ದಕ್ಷಿಣ ಭಾರತವು ಪೂರ್ವ ಪಾಕಿಸ್ತಾನವೂ ಅಲ್ಲ ಎಂಬುದು ನಿಜ. ಆದರೆ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ತಲೆಯೆತ್ತಿದ ಇತಿಹಾಸವನ್ನು ಹಿಂದಿ ಹೇರಿಕೆಯ ಅತ್ಯುತ್ಸಾಹಿಗಳು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.ಭಾರತ, ಪಾಕಿಸ್ತಾನ ಅಲ್ಲ ನಿಜ. ಆದರೆ ಉರ್ದು ಹೇರಿಕೆಯು ಪಾಕಿಸ್ತಾನ ವಿಭಜನೆಗೆ ಕಾರಣವಾಗಿ ಬಾಂಗ್ಲಾದೇಶ ಹೊರಸಿಡಿದು ಪ್ರತ್ಯೇಕ ರಾಷ್ಟ್ರ ಆಯಿತು ಎಂಬ ಕಟು ಸತ್ಯವನ್ನು ಮರೆಯುವಂತಿಲ್ಲ. ಉಪರಾಷ್ಟ್ರೀಯತೆಗಳ ವಾಸ್ತವವನ್ನು ಗೌರವಿಸುವ ವಿವೇಕ ಉದಯಿಸಿದ್ದರಿಂದಲೇ ಭಾರತವು ಭಾಷಾವಾರು ಪ್ರಾಂತ್ಯ ರಚಿಸಿದೆ.ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯನ್ನು ಉತ್ತರ ಭಾರತೀಯರು ದಕ್ಷಿಣದ ಮೇಲೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೇರುತ್ತಲೇ ಬಂದಿದ್ದಾರೆ. ಸಂವಿಧಾನವು ಯಾವ ಭಾಷೆಗೂ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿಲ್ಲ. ಹಿಂದಿ ಸೇರಿದಂತೆ ಸಂವಿಧಾನದ ಎಂಟನೆಯ ಷೆಡ್ಯೂಲಿನಲ್ಲಿ ಸೇರಿರುವ ಎಲ್ಲ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಎಲ್ಲವೂ ಸಮಾನವೇ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ.ಹಿಂದಿ  ಹೇರಿಕೆ ಕುರಿತು ರಾಹುಲ ಸಾಂಕೃತ್ಯಾಯನ ಮತ್ತು ರಾಮಮನೋಹರ ಲೋಹಿಯಾ ಅವರಂತಹ ಪ್ರಖರ ಉದಾರ ರಾಷ್ಟ್ರವಾದಿಗಳ ಆಲೋಚನೆ ಕೂಡ ಸೂಕ್ಷ್ಮತೆ, ಸಂವೇದನಾಶೀಲತೆ ಕಳೆದುಕೊಂಡಿತ್ತು ಎಂಬುದು ವಿಷಾದಭರಿತ ವಾಸ್ತವ.1946ರ ಡಿ. 10. ದಿಲ್ಲಿಯಲ್ಲಿ ಸಂವಿಧಾನ ರಚನಾ ಸಭೆಯ ಕಲಾಪ ಜರುಗಿತ್ತು. ಸಂಯುಕ್ತ ಪ್ರಾಂತಗಳ ಪ್ರತಿನಿಧಿ ಆರ್.ವಿ.ಧುಲೇಕರ್ ಎದ್ದು ನಿಂತು ತಿದ್ದುಪಡಿಯೊಂದನ್ನು ಮುಂದಿರಿಸಿ ಹಿಂದುಸ್ತಾನಿಯಲ್ಲಿ ಮಾತಾಡತೊಡಗಿದ್ದರು.

‘ಬಹಳ ಮಂದಿ ಸದಸ್ಯರಿಗೆ ಅರ್ಥವಾಗದ ಭಾಷೆಯ ಬಳಕೆ ಬೇಡ’ ಎಂಬ ಸಭಾಧ್ಯಕ್ಷರ ಸೂಚನೆಗೆ ಧುಲೇಕರ್ ದನಿಯೇರಿಸಿ ನೀಡಿದ ಉತ್ತರ ಹೀಗಿತ್ತು: ‘ಹಿಂದುಸ್ತಾನಿ ಗೊತ್ತಿಲ್ಲದ ಜನಕ್ಕೆ ಭಾರತದಲ್ಲಿ ನೆಲೆಸುವ ಹಕ್ಕು ಇಲ್ಲ... ದೇಶ ಬಿಟ್ಟು ತೊಲಗಬಹುದು’.ಮೊದಲು ಹಿಂದುಸ್ತಾನಿ, ಆ ನಂತರ ಹಿಂದಿ ಆಡಳಿತ ಭಾಷೆಯಾಗಬೇಕೆಂಬ ಕುರಿತು ಸಂವಿಧಾನರಚನಾ ಸಭೆ, ಕಾವೇರಿದ ಸುದೀರ್ಘ ಚರ್ಚೆಗಳನ್ನು ನಡೆಸಿದ ದಾಖಲೆ ಇದೆ. 1965ರಲ್ಲಿ ಇಂಗ್ಲಿಷನ್ನು ಕೈ ಬಿಟ್ಟು ಹಿಂದಿಯನ್ನು ಏಕೈಕ ಆಡಳಿತ ಭಾಷೆಯಾಗಿ ಅಳವಡಿಸಿಕೊಳ್ಳುವ ಹವಣಿಕೆಯನ್ನು ತಮಿಳುನಾಡಿನ ಪ್ರತಿಭಟನೆಗಳು ವಿಫಲಗೊಳಿಸಿದವು. ಆದರೆ ಧುಲೇಕರ್ ಮನೋವೃತ್ತಿ ನಿರಂತರ ಪ್ರಕಟಗೊಳ್ಳುತ್ತಲೇ ನಡೆದಿದೆ.ಹಿಂದಿ ಹೇರಿಕೆಗೆ ದಕ್ಷಿಣ ಭಾರತೀಯರ ಪ್ರತಿಭಟನೆ ಕುರಿತು ವಿಷಾದ, ಸೋಜಿಗ ಪ್ರಕಟಿಸುವ ಹಿಂದಿ ಮಂದಿ ತಾವು ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯುವ ಕುರಿತು ಎಷ್ಟು ಆಸಕ್ತಿ ತೋರಿದ್ದಾರೆಂದು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ.ಕಳೆದ 50 ವರ್ಷಗಳಲ್ಲಿ ಹೇರಿಕೆಯಿಲ್ಲದ ವಾತಾವರಣದಲ್ಲಿ ಹಿಂದಿ ದೇಶದಾದ್ಯಂತ ಪಸರಿಸಿರುವುದು ಕಡಿಮೆ ಸಾಧನೆಯೇನೂ ಅಲ್ಲ. ದೇಶದ ಮೂಲೆ ಮೂಲೆಯ ಪೇಟೆ ಪಟ್ಟಣಗಳಲ್ಲಿ ಹರುಕುಮುರುಕು ಹಿಂದಿ ಮಾತಾಡುವ ಇಲ್ಲವೇ ಅರ್ಥ ಮಾಡಿಕೊಳ್ಳುವ ಮಂದಿ ಸಿಕ್ಕೇ ಸಿಗುತ್ತಾರೆ.

ಐವತ್ತು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಜನಪ್ರಿಯ ಹಿಂದಿ ಸಿನಿಮಾ,  ಟಿ.ವಿ ಧಾರಾವಾಹಿ ಹಾಗೂ ಕ್ರಿಕೆಟ್ ಕ್ರೀಡೆಯ ನೇರ ಟಿ.ವಿ ಪ್ರಸಾರ ಇದನ್ನು  ಸಾಧಿಸಿದೆ. ಹಿಂದಿ ಭಾಷಾಂಧತೆಗೆ ಈ ವಾಸ್ತವ ಅರ್ಥ ಆಗಬೇಕು. ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪ್ರಾಣಹಾನಿಯಾಗಿದೆ. ಈ ಗಾಯ ಪುನಃ ಕೆದಕಿ ಉಪ್ಪು ಸವರುವುದು ವಿವೇಕದ ನಡೆ ಅಲ್ಲ.ದೇಶಕ್ಕೊಂದು ಸಂಪರ್ಕ ಭಾಷೆ ಅತ್ಯಗತ್ಯ ಎಂದು ನಂಬಿದ್ದ ನಾಯಕರು ಜನಸಾಮಾನ್ಯರ ತಿಳಿವಳಿಕೆಗೆ ನಿಲುಕದ ಇಂಗ್ಲಿಷ್ ಬದಲು ಹಿಂದುಸ್ತಾನಿಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡುವ ಕುರಿತು ಒಲವು ತೋರಿದ್ದರು. ಗಾಂಧೀಜಿ,  ನೆಹರೂ ಇಬ್ಬರೂ ಒಪ್ಪಿದ್ದ ಸಂಪರ್ಕ ಭಾಷೆ ಹಿಂದುಸ್ತಾನಿ. ಹಿಂದಿ ಮತ್ತು ಉರ್ದು ಬೆರೆತ ಹಿಂದುಸ್ತಾನಿಯೇ ಸೂಕ್ತ ಎಂದು ಬಗೆದಿದ್ದರು.ದೇಶ ವಿಭಜನೆಯ ಬೆಳವಣಿಗೆಯಿಂದ ಉರ್ದುವಿರೋಧಿ ಭಾವನೆಗೆ ಇಂಬು ದೊರೆಯಿತು. ಉರ್ದು- ಹಿಂದಿ ಮಿಶ್ರಿತ ಹಿಂದುಸ್ತಾನಿಗೆ ರಾಷ್ಟ್ರಭಾಷೆಯ ಪಟ್ಟ ಕಟ್ಟುವ ಪ್ರಯತ್ನ ಅವಸಾನ ಕಂಡಿತು. ಸಂವಿಧಾನ ರಚನಾ ಸಭೆಗಳಲ್ಲಿ ಹಿಂದುಸ್ತಾನಿ ಪರ ವಾದವು ಕಾಲಕ್ರಮೇಣ ದೇವನಾಗರಿ ಲಿಪಿಯುಳ್ಳ ಹಿಂದಿ ಪರ ತಿರುವು ಪಡೆಯಿತು. ಹಿಂದುಸ್ತಾನಿಯೇ ಬೇಡವೆಂದಿದ್ದ ದಕ್ಷಿಣ ಭಾರತೀಯರ ಪಾಲಿಗೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯಿತು ಹಿಂದಿ ಪ್ರತಿಪಾದನೆ.ಹಿಂದಿ ರಾಷ್ಟ್ರಭಾಷೆಯಾದರೆ, ಹಿಂದಿ ಭಾಷಿಕರಲ್ಲದವರನ್ನು ಕೇಂದ್ರ ತನ್ನ ಗುಲಾಮಗಿರಿಗೆ ತಳ್ಳುವ ಭಯ ದಕ್ಷಿಣ ಭಾರತೀಯರದು. ಪ್ರತ್ಯೇಕ ದೇಶ ಬಯಸುವ ಶಕ್ತಿಗಳು ಈಗಾಗಲೇ ದಕ್ಷಿಣ ಭಾರತದಲ್ಲಿ ತಲೆಯೆತ್ತಿವೆ. ‘ಉತ್ತರಪ್ರದೇಶದ ನಮ್ಮ ಮಿತ್ರರು ‘ಹಿಂದಿ ಸಾಮ್ರಾಜ್ಯವಾದ’ಕ್ಕೆ ಹೀಗೆ ರಭಸದ ಗಾಳಿ ಹಾಕುವುದನ್ನು ನಿಲ್ಲಿಸಬೇಕು. ತಮಗೆ ಇಡೀ ಭಾರತ ಬೇಕೇ ಅಥವಾ ಹಿಂದಿ ಭಾರತ ಬೇಕೇ ಎಂಬ ಆಯ್ಕೆ ಅವರಿಗೆ ಬಿಟ್ಟದ್ದು’ ಎಂದು ಸಂವಿಧಾನರಚನಾ ಸಭೆಯಲ್ಲಿ ಎಚ್ಚರಿಕೆ ನೀಡಿದ್ದರು ಟಿ.ಟಿ.ಕೃಷ್ಣಮಾಚಾರಿ.ದೇವನಾಗರಿ ಲಿಪಿಯುಳ್ಳ ಹಿಂದಿಯೇ ದೇಶದ ಆಡಳಿತ ಭಾಷೆ ಎಂದು ಸಂವಿಧಾನರಚನಾ ಸಭೆ ನಿರ್ಧರಿಸಿಯೇಬಿಟ್ಟಿತು. ಆದರೆ ಸಂವಿಧಾನ ಅಳವಡಿಕೆಯ ದಿನದಿಂದ ಮೊದಲ 15 ವರ್ಷ ಇಂಗ್ಲಿಷನ್ನೂ ಬಳಸಬಹುದು ಎಂಬ ರಿಯಾಯಿತಿಯನ್ನು ನೀಡಿತು. 1965ರಲ್ಲಿ ಹಿಂದಿಯ ಬಲವಂತ ಜಾರಿಯ ಪ್ರಯತ್ನಗಳು ವಿಶೇಷವಾಗಿ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ ಎದುರಿಸಿದವು.ಈ ಪ್ರತಿಭಟನೆಗಳ ಬೆನ್ನೇರಿ ಡಿ.ಎಂ.ಕೆ. 1967ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಬಂದಿತು. ಹಿಂದಿಯನ್ನು ಆಡಳಿತ ಭಾಷೆಯಾಗಿ ಪ್ರೋತ್ಸಾಹಿಸಲು ವರ್ಷಂಪ್ರತಿ ನೂರಾರು ಕೋಟಿ ರೂಪಾಯಿಗಳನ್ನು ಕೇಂದ್ರ ವೆಚ್ಚ ಮಾಡುತ್ತಿದೆ. ಪ್ರತ್ಯೇಕ ಇಲಾಖೆಗಳನ್ನೇ ಸೃಷ್ಟಿಸಿದೆ. ಕೇಂದ್ರದ ಉದ್ದಿಮೆಗಳು, ಸ್ವಾಯತ್ತ ಸಂಸ್ಥೆಗಳು, ಇಲಾಖೆಗಳ ಹಿಂದಿ ವಿಭಾಗಗಳಲ್ಲಿ ಭಾರೀ ಸಂಖ್ಯೆಯ ನೌಕರ ಸೇನೆಯೇ ಸೃಷ್ಟಿಯಾಗಿದೆ. ಸಂಸತ್ತಿನಲ್ಲಿ ರಾಜಭಾಷಾ ಸಮಿತಿ ಅಸ್ತಿತ್ವದಲ್ಲಿದೆ.

ಬಹುಭಾಷಾ ಸರಸ್ವತಿ

ಹಿಂದಿಯನ್ನು ಆಡಳಿತ ಭಾಷೆಯಾಗಿ ಹೇರಲು ಹಿಂದಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ ಅಂಶವನ್ನು ಸಮರ್ಥನೆಯಾಗಿ ನೀಡಲಾಗಿದೆ. ಶೇ 70ರಷ್ಟು ಮಂದಿ ಹಿಂದಿ  ಭಾಷೆ ಮಾತಾಡುವವರಿದ್ದಾರೆ ಎಂಬ ವಾದದಲ್ಲಿ ಹುರುಳಿಲ್ಲ.

ಹಿಂದಿ ಕುಟುಂಬಕ್ಕೆ ಸೇರಿದ ಭೋಜಪುರಿ, ಮಗಧಿ, ಘಡವಾಲಿ, ಡೋಗ್ರಿ, ರಾಜಸ್ತಾನಿ, ಮಾರವಾಡಿ, ಹರಿಯಾಣ್ವಿ ಮುಂತಾದ ನುಡಿಗಟ್ಟುಗಳಲ್ಲಿ ವ್ಯವಹರಿಸುವವರ ಸಂಖ್ಯೆಯೂ ದೊಡ್ಡದು. ಇವರ ಲೆಕ್ಕವನ್ನೂ ಹಿಡಿದು ಹಿಂದಿ ಭಾಷಿಕರ ಸಂಖ್ಯೆಯನ್ನು ಶೇ 45 ಎಂದು ಭಾವಿಸಿದರೂ, ಉಳಿದ ಶೇ 55ರಷ್ಟು ಭಾರತೀಯರು ಇತರೆ ಭಾಷಿಕರು ಹಿಂದಿ ಅರಿಯದವರು.ಈಶಾನ್ಯ ಭಾರತದಲ್ಲಿ 50ಕ್ಕೂ ಹೆಚ್ಚು ಭಿನ್ನ ನುಡಿಗಟ್ಟುಗಳಿವೆ. ‘ಆದಿವಾಸಿ ಭಾರತ’ ಹಲವು ಭಾಷೆಗಳನ್ನು ಆಡುತ್ತದೆ. ಕೊಂಕಣಿ, ತುಳು, ಕೊಡವ, ಬ್ಯಾರಿ ಹೀಗೆ ತಾಯಿ ಭಾರತಿ ಬಹುಭಾಷಾ ಸರಸ್ವತಿಯೇ ವಿನಾ ಕೇವಲ ಹಿಂದೀ ಸರಸ್ವತಿ ಅಲ್ಲ.

ಪೊಳ್ಳುವಾದ

ಬಹುಸಂಖ್ಯಾತರು ಆಡುವ ಭಾಷೆಯೇ ಆಡಳಿತ ಭಾಷೆ ಆಗಬೇಕು ಎಂಬ ವಾದದ ಪೊಳ್ಳುತನವನ್ನು ತಮಿಳುನಾಡಿನ ನೇತಾರ ಸಿ.ಎನ್.ಅಣ್ಣಾದುರೈ ಬಹಳ ಹಿಂದೆಯೇ ಬಯಲು ಮಾಡಿದ್ದಾರೆ. ಭಾರತದಲ್ಲಿ ನವಿಲುಗಳಿಗಿಂತ ಕಾಗೆಗಳ ಸಂಖ್ಯೆಯೇ ಅತ್ಯಧಿಕ. ಹುಲಿಗಳ ಸಂಖ್ಯೆಗಿಂತ ಎಷ್ಟೋ ಪಾಲು ಅಧಿಕ ಸಂಖ್ಯೆಯಲ್ಲಿವೆ ಇಲಿಗಳು.

ಹಿಂದಿ  ಭಾಷಾಂಧ ತರ್ಕವನ್ನೇ ಮುಂದೆ ಮಾಡಿದರೆ ನವಿಲುಗಳ ಬದಲಾಗಿ ಕಾಗೆಗಳು ರಾಷ್ಟ್ರೀಯ ಪಕ್ಷಿ ಆಗಬೇಕು, ಹುಲಿಯ ಬದಲಾಗಿ ಇಲಿ ರಾಷ್ಟ್ರೀಯ ಪ್ರಾಣಿ ಆಗಬೇಕು ಎಂದು ಅಣ್ಣಾದುರೈ ಲೇವಡಿ ಮಾಡಿದ್ದುಂಟು.

ಭಾಷಾಶಾಸ್ತ್ರಜ್ಞ ಗಣೇಶ ದೇವಿ ನೇತೃತ್ವದ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯೊಂದು ಭಾರತದಲ್ಲಿ 780 ಭಾಷೆಗಳನ್ನು ದಾಖಲು ಮಾಡಿದೆ. ಕಳೆದ 5 ದಶಕಗಳಲ್ಲಿ 220 ಭಾರತೀಯ ಭಾಷೆಗಳು ನಶಿಸಿ ಹೋಗಿವೆ. ಮುಂದಿನ 50 ವರ್ಷಗಳಲ್ಲಿ ಇನ್ನೂ 150 ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ.

ಪ್ರತ್ಯಕ್ಷ- ಪರೋಕ್ಷ ಹಿಂದಿ ಹೇರಿಕೆಗೆ ವೆಚ್ಚವಾಗುತ್ತಿರುವ ಹಣ ಮತ್ತು ತೋರಲಾಗುತ್ತಿರುವ ಅತ್ಯುತ್ಸಾಹದ ನೂರರ ಒಂದಂಶವೂ ಈ ತಬ್ಬಲಿ ಭಾಷೆಗಳ ಕುರಿತು ವ್ಯಕ್ತವಾಗುತ್ತಿಲ್ಲ ಎಂಬುದು ಕಟು ಸತ್ಯ.

ತಮಿಳುನಾಡಿನ ವಿನಾ ಇಡೀ ದಕ್ಷಿಣ ಭಾರತ ತ್ರಿಭಾಷಾ ಸೂತ್ರವನ್ನು (ಹಿಂದಿ-ಇಂಗ್ಲಿಷ್- ಸ್ಥಳೀಯ ಭಾಷೆ) ಜಾರಿ ಮಾಡಿದೆ. ಹಿಂದಿ ಭಾಷಿಕ ಸೀಮೆಗಳಿಗೆ ತ್ರಿಭಾಷಾ ಸೂತ್ರ ಅನ್ವಯಿಸುವುದಿಲ್ಲವೇ? ಹಿಂದಿ ಭಾಷಿಕರು ಅಳವಡಿಸಿಕೊಂಡಿರುವ ಮೂರನೆಯ ಭಾಷೆ ಯಾವುದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry