7

ಆಂತರಿಕ ಭದ್ರತೆ; ನಿರಂತರ ವೈಫಲ್ಯ

ಶೇಖರ್‌ ಗುಪ್ತ
Published:
Updated:
ಆಂತರಿಕ ಭದ್ರತೆ; ನಿರಂತರ ವೈಫಲ್ಯ

ದೇಶದ ಆಂತರಿಕ ಭದ್ರತೆ ಕುರಿತು ಎನ್‌ಡಿಎ ಸರ್ಕಾರದ ಸಾಧನೆಯು ಬಹುಮಟ್ಟಿಗೆ ಯುಪಿಎ ಸರ್ಕಾರದಂತೆಯೇ ಇದೆ. ನಕ್ಸಲರ ದಾಳಿಯನ್ನು ಹೇಡಿತನದ, ವಿಶ್ವಾಸಘಾತುಕ ಮತ್ತು ರಾಷ್ಟ್ರವಿರೋಧಿ ಕೃತ್ಯ ಎಂದು ಅದೇ ಹಿಂದಿನ ಮಾಮೂಲಿ ರಾಗದಲ್ಲಿ ಟೀಕಿಸಲಾಗಿದೆ.ಭದ್ರತಾ ಪಡೆ ಯೋಧರ ಸಾಮೂಹಿಕ ಹತ್ಯೆಯ ಎಲ್ಲ ದುಷ್ಕೃತ್ಯಗಳನ್ನು ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ‘ಪುಕ್ಕಲುತನದ’ ಕೃತ್ಯ ಎಂದು ಜರೆಯುತ್ತಿದ್ದರು. ಈ ಬಾರಿಯೂ ಹಾಗೆಯೇ ಆಗಿದೆ.ಛತ್ತೀಸಗಡದ ಸುಕ್ಮಾದಲ್ಲಿ ನಡೆದ ಘಾತಕ ಕೃತ್ಯದ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಆಘಾತ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ ನಂತರ, ಮಾಮೂಲಿನಂತೆ ಯೋಧರ ಬಲಿದಾನವು ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ ಎನ್ನುವ ಒಣ ಭರವಸೆ ನೀಡಲಾಗಿದೆ.ಉರಿ ನಿರ್ದಿಷ್ಟ (ಸರ್ಜಿಕಲ್‌) ದಾಳಿ ಹೊರತುಪಡಿಸಿದರೆ, ಇತ್ತೀಚಿನ ನಕ್ಸಲರ ಅಟ್ಟಹಾಸಕ್ಕೆ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರದ ಪ್ರತಿಕ್ರಿಯೆಯು ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಧೋರಣೆಯನ್ನೇ ಹೋಲುತ್ತಿದೆ. ಬಿಜೆಪಿ ಮುಖಂಡರೂ ಬೆನ್ನೆಲುಬು ಇಲ್ಲದವರಾಗಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಅವರು ಸ್ವತಂತ್ರ ಆಲೋಚನೆಯ ಪ್ರಭಾವಿ ಮಹಿಳೆಯಾಗಿದ್ದರೂ, ಪಾಕಿಸ್ತಾನ ಉಗ್ರರ ದಾಳಿ ಸಂದರ್ಭದಲ್ಲಿ ಬಳೆಗಳನ್ನು ಕಳಿಸುವ ಮೂಲಕ ಅವರ ಹೇಡಿತನದ ಕೃತ್ಯವನ್ನು ಮೂದಲಿಸಿದ್ದರು.  ಇರಾನಿ ಅವರ ಟೀಕಾಕಾರರು  ಈಗ ಅವರ ಮೂದಲಿಕೆಯ ಧೋರಣೆಯನ್ನು ನೆನಪಿಸಿದ್ದಾರೆ.ಪಾಕಿಸ್ತಾನದ ಉಗ್ರರು 26/11 ರಂದು ಮುಂಬೈನಲ್ಲಿ ನಡೆಸಿದ ದಾಳಿಯನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಯೋಧರು ಸದೆಬಡೆಯುತ್ತಿದ್ದಾಗ, ನರೇಂದ್ರ ಮೋದಿ ಅವರು ಮುಂಬೈನ ಒಬೆರಾಯ್‌ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಅವರ ಈ ನಡೆಯು, ಮಹಾರಾಷ್ಟ್ರದ ಪಕ್ಕದ ರಾಜ್ಯವೊಂದರ ಮುಖ್ಯಮಂತ್ರಿಯ ಸ್ಥಾನಕ್ಕೆ ತಕ್ಕುದಾಗಿರಲಿಲ್ಲ. ಯುಪಿಎ ಸರ್ಕಾರದ ಮನಮೋಹನ್‌ ಸಿಂಗ್‌, ಶಿವರಾಜ್‌ ಪಾಟೀಲ್‌ ಮತ್ತು  ಸುಶೀಲ್‌ ಕುಮಾರ್‌ ಶಿಂಧೆ ಅವರು ಮಾತ್ರ ಲೇವಡಿಗೆ ಗುರಿಯಾಗಿದ್ದರು.ಆಂತರಿಕ ಭದ್ರತಾ ವಿಷಯದಲ್ಲಿ ಯುಪಿಎ ಸರ್ಕಾರ ತುಂಬ ದುರ್ಬಲ ಧೋರಣೆ ತಳೆದಿತ್ತು. ಸರ್ಕಾರದ ನಾಯಕತ್ವವು ಬೆನ್ನೆಲುಬು ಇಲ್ಲದ ನಾಯಕರಿಗಿಂತ ಹೆಚ್ಚು ಕೆಟ್ಟದಾಗಿತ್ತು ಎನ್ನುವುದು ಬಹುಜನಾಭಿಪ್ರಾಯವಾಗಿತ್ತು.ದೇಶದ ಒಳಗಿನ ಜಿಹಾದಿಗಳು ಮತ್ತು ಮಾವೋವಾದಿಗಳ ಬಗ್ಗೆ ಯುಪಿಎ ಮುಖಂಡರು ನೈತಿಕವಾಗಿ ತಪ್ಪು ಧೋರಣೆ ತಳೆದಿದ್ದರು. ಮುಸ್ಲಿಂ ಸಂಘಟನೆಗಳ ದುಷ್ಕೃತ್ಯಗಳ ಬಗ್ಗೆ ಕಾಂಗ್ರೆಸ್‌ ದ್ವಂದ್ವ ನೀತಿ ಅನುಸರಿಸುತ್ತಿತ್ತು. ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿತ್ತು.

ಇಂಡಿಯನ್‌ ಮುಜಾಹಿದಿನ್ ಸಂಘಟನೆಗೆ ಸೇರಿದ ಉಗ್ರರು ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ ಒಬ್ಬರು ಈ ಘಟನೆಯಲ್ಲಿ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಡವಳಿಕೆ ವಿಶ್ಲೇಷಿಸಿದರೆ, ವೋಟ್‌ ಬ್ಯಾಂಕ್‌ ರಾಜಕೀಯದ ವಿಷಯದಲ್ಲಿ ಪಕ್ಷವು ಮೃದು ಧೋರಣೆ ತಳೆದಿರುವುದು ಸ್ಪಷ್ಟವಾಗಿತ್ತು.ಈ ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದ ಇನ್‌ಸ್ಪೆಕ್ಟರ್‌ಗೆ ಶಾಂತಿ ಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿರುವ ಅಶೋಕ ಚಕ್ರವನ್ನು  ಮರಣೋತ್ತರವಾಗಿ ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ರೀತಿಯಲ್ಲಿ ವರ್ತಿಸಿತ್ತು. ಮಾವೋವಾದಿಗಳ ವಿಷಯದಲ್ಲಿಯೂ ಎರಡು ವಿದ್ಯಮಾನಗಳು ಕಾಂಗ್ರೆಸ್‌ನ ದ್ವಂದ್ವ ಧೋರಣೆಗೆ ಕನ್ನಡಿ ಹಿಡಿಯುತ್ತವೆ.ಮಾವೋವಾದಿಗಳ ವಿರುದ್ಧ ಚಿದಂಬರಂ ಅವರು ನಡೆಸಿದ್ದ ಕಾರ್ಯಾಚರಣೆಯ ಫಲವಾಗಿ ಪಾಲಿಟ್‌ಬ್ಯೂರೊದ ಇಬ್ಬರು ಸದಸ್ಯರು ಹತರಾಗಿದ್ದರು ಮತ್ತು ಕೆಲವರು ಬಂಧಿತರಾಗಿದ್ದರು. ಆದರೆ, ನಕ್ಸಲರಿಗೆ ನೆರವು ನೀಡಿದ್ದ ಕಾರಣಕ್ಕೆ ದೇಶದ್ರೋಹದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಡಾ. ಬಿನಾಯಕ ಸೇನ್‌ ಅವರನ್ನು ಯೋಜನಾ ಆಯೋಗದ ಮಹತ್ವದ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಿಜೆಪಿಯು, ‘ಯುಪಿಎ–2’ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ಶ್ರಮಿಸಿತ್ತು.ಆಂತರಿಕ ಸುರಕ್ಷತೆಗೆ ಸಂಬಂಧಿಸಿದ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಯುಪಿಎ ಸರ್ಕಾರದ ಪುಕ್ಕಲುತನ ಕುರಿತು  ತೀಕ್ಷ್ಣವಾಗಿ ಟೀಕಿಸುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ, ಈ ಕುರಿತ ಸರ್ಕಾರದ ವೈಫಲ್ಯಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ತಮ್ಮ ಮೂರು ವರ್ಷಗಳ ಪ್ರಧಾನಿ ಪಟ್ಟದ ಅಧಿಕಾರಾವಧಿಗೂ, ಅದಕ್ಕೂ ಹಿಂದಿನ ಪರಿಸ್ಥಿತಿಗೂ ಪ್ರಧಾನಿ ನರೇಂದ್ರ ಮೋದಿ ಯಾವತ್ತಾದರೂ ತುಲನೆ ಮಾಡಿರುವರೇ?  2014ರಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಬಹುತೇಕ ಶಾಂತವಾಗಿತ್ತು. ಈಗ ಅದು ಹೊತ್ತಿ ಉರಿಯುತ್ತಿದೆ.

ಕಾಶ್ಮೀರ ಕಣಿವೆಯಲ್ಲಿ ಹಿಂಸಾಕೃತ್ಯಗಳು ತಾಂಡವ ಆಡುತ್ತಿವೆ. ಕಾಶ್ಮೀರದ ಯಾವುದೇ ಪ್ರಮುಖ ವ್ಯಕ್ತಿಗಳನ್ನು ಕೇಳಿದರೂ, ಅವರೆಲ್ಲರೂ ಕಾಶ್ಮೀರದಲ್ಲಿನ ಈಗಿನ ಪರಿಸ್ಥಿತಿಯು ಹಿಂದೆಂದಿಗಿಂತ  ಹೆಚ್ಚು ಬಿಗಡಾಯಿಸಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ.ಸರ್ಕಾರ ರಚನೆ ವಿಷಯದಲ್ಲಿ ಪಿ.ಡಿ.ಪಿ ಜತೆಗೆ ಮೈತ್ರಿ ಸಾಧಿಸುವ ಬಿಜೆಪಿಯ ಉದ್ದೇಶವು  ಸಂಪೂರ್ಣವಾಗಿ ವಿಫಲಗೊಂಡಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಮಧ್ಯೆ ಹೊಂದಾಣಿಕೆ ತರುವಲ್ಲಿ ಎರಡೂ ಪಕ್ಷಗಳ ಉನ್ನತ ನಾಯಕರು ವಿಫಲರಾಗಿರುವುದೇ ಇದಕ್ಕೆ ಕಾರಣ. ಈ ಅಸಹಜ ಮೈತ್ರಿಕೂಟವನ್ನು ನೈತಿಕ, ಕಾರ್ಯತಂತ್ರ ಮತ್ತು ರಾಜಕೀಯ ಕಾರಣಗಳಿಗಾಗಿ ಸಮರ್ಥಿಸಿಕೊಳ್ಳಲಾಗುತ್ತಿದೆ. 

ವಿಧಾನಸಭೆಯ ಚುನಾವಣೆ ನಂತರ ಈ ಮೈತ್ರಿಕೂಟಕ್ಕೆ ಹೊರತಾದ ರಾಜಕೀಯ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದ್ದರೆ, ಎರಡೂ ದೇಶಗಳ ಸಿದ್ಧಾಂತವನ್ನು ಮತ್ತೆ ಪ್ರತಿಪಾದಿಸುವುದಕ್ಕೆ ಪೂರಕವಾಗಿರುವಂತಹ ವಾತಾವರಣವು ರಾಜ್ಯದಲ್ಲಿ  ಸೃಷ್ಟಿಯಾಗುತ್ತಿತ್ತು. ರಾಜ್ಯವನ್ನು ಮುಸ್ಲಿಂ ಪ್ರಾಬಲ್ಯದ ಕಣಿವೆ ಮತ್ತು  ಹಿಂದೂಗಳ ಜಮ್ಮು ಎಂದು ವಿಭಜನೆ ಮಾಡಲಿತ್ತು ಎಂದು ಕಾರಣ ನೀಡಲಾಗುತ್ತಿದೆ.ಮೈತ್ರಿಕೂಟವು ಕಾರ್ಯನಿರ್ವಹಿಸಬೇಕಾದರೆ, ಬಿಜೆಪಿಯು ಹೆಚ್ಚು ಸಹನೆಯಿಂದ ವರ್ತಿಸಬೇಕಾಗಿದೆ. ಗೋಮಾಂಸ ನಿಷೇಧ ಮತ್ತು ಮಸರತ್‌ ಅಲಮ್‌ ಬಿಡುಗಡೆ ವಿಚಾರದಲ್ಲಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರನ್ನು ಗಲಿಬಿಲಿಗೊಳಿಸುವುದು ಬಿಜೆಪಿಗೆ ಬೇಕಾಗಿರಲಿಲ್ಲ, ಸಯೀದ್‌ ಅವರ ಅಕಾಲಿಕ ನಿಧನವು ಇನ್ನೊಂದು ಹಿನ್ನಡೆಯಾಗಿ ಪರಿಣಮಿಸಿತು. ಮೈತ್ರಿಯ ಒಟ್ಟಾರೆ ಫಲಶ್ರುತಿಯನ್ನು ನಾವು ಈಗ ಕಾಶ್ಮೀರ ಜನರ ಸಿಟ್ಟು ಮತ್ತು ಹಿಂಸಾಚಾರದ ಕೃತ್ಯಗಳಲ್ಲಿ ಕಾಣುತ್ತಿದ್ದೇವೆ.ಮಾವೋವಾದಿಗಳ ಪ್ರಾಬಲ್ಯದ ಪ್ರದೇಶದಲ್ಲಿ ಮೋದಿ ಸರ್ಕಾರವು ಕಂಡ ಇತ್ತೀಚಿನ ಎರಡು  ಹಿನ್ನಡೆಗಿಂತ ಮುಂಚೆ ಕೆಲಮಟ್ಟಿಗೆ ಪ್ರಗತಿ ಸಾಧಿಸಿತ್ತು. ರಸ್ತೆ ನಿರ್ಮಾಣ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಪೂರಕವಾಗಿ ಈ ಬಾರಿ ಸೂಕ್ತ ಬೇಹುಗಾರಿಕೆ ಮತ್ತು ಅರೆ ಸೇನಾ ಪಡೆಗಳ ನಿಯೋಜನೆ ಬಗ್ಗೆ ಸಾಕಷ್ಟು ಮುಂಜಾಗ್ರತೆ ಕೈಗೊಂಡಿರಲಿಲ್ಲ.

ಒಂದು ಬಾರಿ ಮಾತ್ರ, ಮಾವೋವಾದಿಗಳ ಶಿಬಿರದ ಮೇಲೆ ನಡೆದ ಯಶಸ್ವಿ ದಾಳಿಯಲ್ಲಿ ಕೆಲ ಮುಖಂಡರೂ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಮಾವೋವಾದಿಗಳನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು.ಇತ್ತೀಚಿನ ಎರಡು ಮಾವೋವಾದಿಗಳ ದಾಳಿಗಳನ್ನು ಗಮನಿಸಿದರೆ, ಭದ್ರತಾ ಪಡೆಗಳು ಈ ದಾಳಿಗೆ ದುರ್ಬಲ ರೀತಿಯಲ್ಲಿ ಮಾರುತ್ತರ ನೀಡಿರುವುದು ಕಂಡು ಬರುತ್ತದೆ. ಈ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಮಾವೋವಾದಿಗಳು ಕದ್ದು ಒಯ್ದಿದ್ದಾರೆ.

ಎರಡು ತಿಂಗಳ ಅವಧಿಯಲ್ಲಿ ಮಾವೋವಾದಿಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಮ್ಮೊಂದಿಗೆ ಸಾಗಿಸಿದ್ದಾರೆ. ರೈಫಲ್ಸ್‌, ಲೈಟ್‌ ಮಷಿನ್‌ ಗನ್‌, ಗನೈಡ್‌ ಲಾಂಚರ್‌ಗಳು, ಗರಿಷ್ಠ ತರಂಗಾಂತರ ಸಾಮರ್ಥ್ಯದ ರೇಡಿಯೊ ಸೆಟ್‌ ಮತ್ತು ಗುಂಡು ನಿರೋಧಕ ಜಾಕೆಟ್‌ಗಳನ್ನು ಕದ್ದು ಒಯ್ದಿದ್ದಾರೆ.ಯೋಧರ ಹತ್ಯೆ ನಡೆದ ಸ್ಥಳದಲ್ಲಿ ಮಾವೋವಾದಿಗಳು ಸಾಕಷ್ಟು ಹೊತ್ತು ಇದ್ದರು. ಈ ಅವಧಿಯಲ್ಲಿ ಯೋಧರ ಕೆಲ ಅಂಗಗಳನ್ನು ಕತ್ತರಿಸಿ ತಮ್ಮ ಪಾಶವೀ ಕೃತ್ಯವನ್ನು ಮನದಟ್ಟು ಮಾಡಿ ಹೋಗಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ಉನ್ನತ ಅಧಿಕಾರಿಗಳು ಇಂತಹ ವರದಿಗಳನ್ನು ತಳ್ಳಿ ಹಾಕಿದ್ದಾರೆ. ತಮ್ಮಷ್ಟಕ್ಕೆ ತಾವೇ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಲು ಮತ್ತು ಪಡೆಗಳಲ್ಲಿ ಇನ್ನಷ್ಟು ಆಕ್ರೋಶ ಹೆಚ್ಚುವುದನ್ನು ತಪ್ಪಿಸಲು ಈ ನಿರಾಕರಣೆ ನೀಡಲಾಗಿದೆ.

ನಿರಾಕರಣೆಯೂ ತುಂಬ ತಡವಾಗಿ ಬಂದಿತು. ಅಷ್ಟೊತ್ತಿಗಾಗಲೇ ಮಾವೋವಾದಿಗಳು ಎಸಗಿದ ಕೃತ್ಯದ ಛಾಯಾಚಿತ್ರಗಳು ಹರಿದಾಡಿದ್ದವು. ಜವಾಬ್ದಾರಿಯುತ ಮಾಧ್ಯಮಗಳು ಮಾತ್ರ ಅಂತಹ ಚಿತ್ರಗಳನ್ನು ಪ್ರಕಟಿಸಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರು ನೀಡಿದ್ದ ವಾಗ್ದಾನಕ್ಕೆ ಈ ಎಲ್ಲ ಬೆಳವಣಿಗೆಗಳು ಸಂಪೂರ್ಣ ವಿರುದ್ಧವಾಗಿವೆ.ಮೊನ್ನೆ ನಡೆದ ದಾಳಿಯು ಬೇಸಿಗೆಯ ಬೆಳಗಿನ ಹೊತ್ತು 11.30ಕ್ಕೆ ನಡೆದಿರುವುದನ್ನೂ ನಾವು ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕೊಲೆಗಡುಕ ಮಾವೋವಾದಿಗಳನ್ನು ಸದೆಬಡಿಯಲು ಅವರನ್ನು ಹಿಮ್ಮೆಟ್ಟಿಸಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ಒದಗಿತ್ತು. ಉತ್ತಮ ತರಬೇತಿ ಪಡೆದ ಪಡೆಗಳನ್ನು ಹೆಲಿಕಾಫ್ಟರ್‌ ಮೂಲಕ ಘಟನಾ ಸ್ಥಳಕ್ಕೆ ರವಾನಿಸಬಹುದಾಗಿತ್ತು. ಅಂತಹ ಯಾವುದೇ ಪ್ರಯತ್ನಗಳು ಕಂಡು ಬರಲಿಲ್ಲ.‘ಕಟ್ಟಾ ರಾಷ್ಟ್ರೀಯವಾದಿ’ ಎನ್‌ಡಿಎ ಸರ್ಕಾರವು ಮೂರು ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ, ಮಾವೋವಾದಿಗಳ ದಾಳಿ ಹಿಮ್ಮೆಟ್ಟಿಸಲು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಇದೆಲ್ಲವನ್ನು ನೋಡಿದರೆ, ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿದ್ದ ಟೀಕೆಗಳೇ ಈಗ ಎನ್‌ಡಿಎ ಸರ್ಕಾರದ ವಿರುದ್ಧವೂ ಕೇಳಿ ಬರುತ್ತಿವೆ.ಆಂತರಿಕ ಸುರಕ್ಷತೆಗೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರದ ದಾಖಲೆಯೂ ರಕ್ತದ ಕಲೆಗಳಿಂದ ತುಂಬಿದೆ. ನಾಗಾಲ್ಯಾಂಡ್‌ ಬಿಕ್ಕಟ್ಟು ಈ ಮೊದಲಿಗಿಂತ ಹೆಚ್ಚು ವಿಷಮಗೊಂಡಿದೆ. ಮಣಿಪುರ ಗಡಿ ಜಿಲ್ಲೆಗಳಲ್ಲಿ ಬಂಡಾಯ ಮತ್ತೆ ಎಲೆ ಎತ್ತುತ್ತಿದೆ. ನಾಗಾ ಶಾಂತಿ ಮಾತುಕತೆ ಅರ್ಧಕ್ಕೆ ಕೊನೆಗೊಂಡಿವೆ. ಇದೇ ಮೊದಲ ಬಾರಿಗೆ ‘ಎನ್ಎಸ್‌ಸಿಎನ್‌’ ಬಂಡುಕೋರರು ನಾಗಾಲ್ಯಾಂಡ್‌ನ ಅಕ್ಕಪಕ್ಕದ ಜಿಲ್ಲೆಗಳಲ್ಲಿ ದಾಳಿ ನಡೆಸುತ್ತಿದ್ದಾರೆ.ಆಂತರಿಕ ಸುರಕ್ಷತೆಗೆ ಸಂಬಂಧಿಸಿದಂತೆ 2014ರ ಮೇ ತಿಂಗಳು ಮತ್ತು ಇತ್ತೀಚೆಗೆ ನಡೆದಿರುವ ದಾಳಿಗಳನ್ನು ದೇಶದ ಭೂಪಟದಲ್ಲಿ  ಕೆಂಪು ಬಣ್ಣದಿಂದ ಗುರುತಿಸಿದರೆ ಆ ಚಿತ್ರಣವು ನರೇಂದ್ರ ಮೋದಿ ಅವರ ಮುಖಸ್ಥುತಿಯನ್ನೇನೂ ಮಾಡಲಾರದು.ಸರ್ಜಿಕಲ್‌ ದಾಳಿ ಸಂದರ್ಭದಲ್ಲಿನ ಸಂಭ್ರಮವು, ಗುರುದಾಸಪುರ, ಪಠಾಣಕೋಟ್‌ ಮತ್ತು ಉರಿಯಲ್ಲಿನ ವೈಫಲ್ಯಗಳನ್ನು ಮುಚ್ಚಿ ಹಾಕಿತ್ತು. ಒಂದೇ ಘಟನೆಯನ್ನು ಬಾರಿ ಬಾರಿಗೂ ಬಂಡವಾಳವನ್ನಾಗಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಾರದು.ಕಾಶ್ಮೀರದಲ್ಲಿನ ಪರಿಸ್ಥಿತಿ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗಿರುವುದರ ಹೊಣೆಯನ್ನು ನಾಜೂಕಾದ ರಾಜಕೀಯ ಸಂದೇಶ ಬೀರುವುದರ ಮೂಲಕ ಕಳಚಿಕೊಳ್ಳುವಲ್ಲಿ ಮೋದಿ ಮತ್ತು ಅವರ  ಪಕ್ಷ ಯಶಸ್ವಿಯಾಗಿದೆ. ಪಾಕಿಸ್ತಾನವನ್ನು ದೂಷಿಸುವ, ಇಸ್ಲಾಂ ವಾದ ಪ್ರಸ್ತಾಪಿಸುವ, ಕಲ್ಲು ತೂರುವ ಜನರು ಮತ್ತು ಸೈನಿಕರ ಮಧ್ಯೆ ನಡೆಯುತ್ತಿರುವ ಘರ್ಷಣೆಯನ್ನೇ ಮುಖ್ಯವಾಗಿಟ್ಟುಕೊಂಡು ಎನ್‌ಡಿಎ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. 

ಎನ್‌ಡಿಎ ಸರ್ಕಾರವು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಮತದಾರರ ಧ್ರುವೀಕರಣಕ್ಕೆ ನೆರವಾಗುತ್ತಿದೆ.ಆದರೆ, ಇಂತಹ ರಾಜಕೀಯ ತಂತ್ರಗಾರಿಕೆಯು ತುಂಬ ಅಪಾಯಕಾರಿಯಾಗಿದೆ. ಇಂತಹ ಕಾರ್ಯತಂತ್ರ ಬಹಳ ದಿನ ನಡೆಯಲಾರದು. ಕುಪ್ವಾರಾ ಮತ್ತು ಉರಿ ಹತ್ಯಾಕಾಂಡದಂತಹ ಘಟನೆಗಳು ಮತ್ತೆ ಮರುಕಳಿಸದಿರಲಿ.

ಸಿಆರ್‌ಪಿಎಫ್‌ ಅಥವಾ ಸೇನೆಯು ತಿಂಗಳ ಕಾಲ ಪರಿಸ್ಥಿತಿ ಮೇಲೆ ನಿಯಂತ್ರಣ ಸಾಧಿಸಲು ವಿಫಲವಾಗಿ ಹಿಂಸಾಕೃತ್ಯದಲ್ಲಿ ತೊಡಗಿದ ಜನರ ಮೇಲೆ ಗುಂಡಿನ ಮಳೆಗರೆಯುವಂತಹ ಪರಿಸ್ಥಿತಿ ಉದ್ಭವವಾಗದಿರಲಿ. ಗಾವ್ಕದಲ್‌ ಮಾದರಿಯ ಜನರ ಮಾರಣಹೋಮ ಮತ್ತೆಂದೂ ನಡೆಯದಿರಲಿ. 27 ವರ್ಷಗಳ ಹಿಂದೆ ನಡೆದಿದ್ದ ಈ ಘಟನೆ ಈಗಲೂ ಕಪ್ಪು ಚುಕ್ಕೆಯಾಗಿ ಉಳಿದಿದೆ.ಮಾವೋಮಾದಿ ಪ್ರಾಬಲ್ಯದ ಪ್ರದೇಶಗಳು ಮತ್ತು ಈಶಾನ್ಯ ಭಾರತದಲ್ಲಿನ ಹಿಂಸಾಚಾರಗಳು, ಭದ್ರತಾ ಪಡೆಗಳಲ್ಲಿ ಹೆಚ್ಚುತ್ತಿರುವ ಸಾವು ನೋವಿನ ಸಂಖ್ಯೆ ಮತ್ತು ಗೋವು ರಕ್ಷಕರ ದಾಳಿಗಳಿಗೆ ಪ್ರತಿಯಾಗಿ ಬಿಜೆಪಿ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾದೀತು.

ಇಂತಹ ಘಟನೆಗಳನ್ನು ನಿಯಂತ್ರಿಸಲು ವಿಫಲವಾಗಿರುವುದು, ಈ ಬಗ್ಗೆ, ಯಾವುದೇ ಮಾಹಿತಿ ಹೊಂದಿಲ್ಲದಿರುವುದು ಮತ್ತು ಗದ್ದಲ ಮಾಡುವುದು ಸರಿಯಲ್ಲ, ಈ ಹಿಂದಿನ ಸರ್ಕಾರದ ವಿರುದ್ಧ ಬಿಜೆಪಿ ಇದೇ ಬಗೆಯ ಆರೋಪಗಳನ್ನು ಮಾಡುತ್ತ ಬಂದಿತ್ತು ಎನ್ನುವುದು ಎನ್‌ಡಿಎ ಸರ್ಕಾರಕ್ಕೆ ನೆನಪಿರಬೇಕು.ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಜನರಿಗೆ ಸಂದೇಶ ನೀಡುವಲ್ಲಿ ಅವರ ಸರ್ಕಾರದ ಸಾಮರ್ಥ್ಯ ಅಸಾಧಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯೋಧರ ಹೆಚ್ಚುತ್ತಿರುವ ಬಲಿದಾನ ಮತ್ತು ಪರಿಸ್ಥಿತಿ ಮೇಲೆ ಭದ್ರತಾ ಪಡೆಗಳು ನಿಯಂತ್ರಣ ಕಳೆದುಕೊಳ್ಳುವುದರ ಹೊಣೆಗಾರಿಕೆಯಿಂದ ಎನ್‌ಡಿಎ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು.ಶೀಘ್ರದಲ್ಲಿಯೇ ಸರ್ಕಾರದ ದೌರ್ಬಲ್ಯ ಮತ್ತು ಅಸಾಮರ್ಥ್ಯ ಸಾಬೀತಾಗಲಿದೆ, ಆಂತರಿಕ ಭದ್ರತೆಗೆ ಸಂಬಂಧಿಸಿದ ವೈಫಲ್ಯಗಳು ಹೆಚ್ಚುತ್ತಲೇ ಸಾಗಿದ್ದು, ಇವೆಲ್ಲವೂ ಮೋದಿ ಅವರ ವೇಗಕ್ಕೆ ಕಡಿವಾಣ ಹಾಕಲಿವೆ. ಇಂತಹ ಘಟನೆಗಳಿಗೆ ಮತದಾರರಲ್ಲಿ ಆಕ್ರೋಶ ಮಡುಗಟ್ಟುತ್ತಿದ್ದಂತೆ ಅವರು ರಾಜಕಾರಣಿಗಳಿಗೆ ಬಳೆಗಳನ್ನು ಕಳಿಸಿ ಕೊಡಲು ಯಾವತ್ತೂ ಹಿಂದೇಟು ಹಾಕಲಾರರು. ಅಷ್ಟೇ ಅಲ್ಲ, ಅವರು ಅಂತಹವರಿಗೆ  ಮತ  ಹಾಕಲೂ ಮನಸ್ಸು ಮಾಡಲಾರರು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry