7

ಸ್ವಯಂ ಪರಿಪೂರ್ಣತೆಯೆಡೆಗೆ ಕೃತಕ ಬುದ್ಧಿಮತ್ತೆ

Published:
Updated:

ವಿಶ್ವದ ಅತ್ಯಂತ ಮುಂದುವರಿದ ದೇಶ ಅಮೆರಿಕದಲ್ಲಿ ವಿಚಿತ್ರ ವಿಚಾರವೊಂದು ಚರ್ಚೆಯಾಗುತ್ತಿದೆ. ಪುಸ್ತಕಗಳಲ್ಲಿ ಇದರ ಬಗ್ಗೆ ಬರೆಯಲಾಗುತ್ತಿದೆ, ಇದರ ಬಗ್ಗೆ ಭಾಷಣಗಳು ಆಗುತ್ತಿವೆ (ಅವುಗಳನ್ನು ಯುಟ್ಯೂಬ್‌ ಮೂಲಕ ವೀಕ್ಷಿಸಬಹುದು), ಆದರೆ ಈ ಬಗ್ಗೆ ಯಾವುದೇ ಕ್ರಿಯೆ ಇದುವರೆಗೆ ಆಗಿಲ್ಲ. ಅದು ಶೀಘ್ರದಲ್ಲೇ ಆಗುವ ನಿರೀಕ್ಷೆ ಇದೆ.

 

ಕೃತಕ ಬುದ್ಧಿಮತ್ತೆಯು ಮನುಷ್ಯನಿ­ಗಿಂತ ಹೆಚ್ಚು ಚೂಟಿಯಾಗಿರುವುದಕ್ಕೆ ಸಂಬಂಧಿಸಿದ ವಿಚಾರ ಇದು. ಭಾರತದಲ್ಲಿರುವ ನಮಗೆ ಇದು ಅಷ್ಟೇನೂ ಚಿಂತಿಸಬೇಕಾದ ವಿಚಾರದಂತೆ ಕಾಣುತ್ತಿಲ್ಲ. ನಮ್ಮ ಪಾಲಿಗೆ ಕಂಪ್ಯೂಟರ್‌­ಗಳು ಎಂದರೆ, ‘ನಮ್ಮ ನಿಯಂತ್ರಣ­ದಲ್ಲಿರುವ ಸಾಧನ’ಗಳು.

 

ಲ್ಯಾಪ್‌­ಟಾಪ್‌ಗಳು, ಮೊಬೈಲ್‌ ಫೋನ್‌ಗಳು ನಮ್ಮ ಪಾಲಿಗೆ ಸಾಧನಗಳು, ನಮ್ಮ ಸೇವಕರು ಮಾತ್ರ. ಅವು ನಮ್ಮ ಧಣಿಗಳಲ್ಲ. ಆದರೆ, ಕೃತಕ ಬುದ್ಧಿಮತ್ತೆಯ (ಅಂದರೆ, ಕಂಪ್ಯೂಟರ್ ಪ್ರೋಗ್ರಾಮ್‌ಗಳು) ಆಲೋಚನಾ ಶಕ್ತಿ ಮನುಷ್ಯನ ಆಲೋಚನಾ ಶಕ್ತಿಯನ್ನು ಹಿಂದಿಕ್ಕಿದಾಗ ಏನಾಗಬಹುದು ಎಂಬ ಬಗ್ಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕದ ಕೆಲವು ಚೂಟಿ ಮನುಷ್ಯರು ಯೋಚಿಸುತ್ತಿದ್ದಾರೆ.

 

ಅವರು ಇದರ ಬಗ್ಗೆ ಯೋಚಿಸುತ್ತಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು: ‘ಬುದ್ಧಿಮತ್ತೆ’ ಅಂದರೆ ಏನು ಎಂಬುದರ ಬಗ್ಗೆ ಒಮ್ಮತವಿದೆ. ಮನುಷ್ಯನ ಮನಸ್ಸಿನ ಕೆಲಸದ ಸ್ವರೂಪವು ಯಕ್ಷಿಣಿ ವಿದ್ಯೆಯಂತಲ್ಲ.‘ಆಲೋಚನೆ’ಯನ್ನು ವೈಜ್ಞಾನಿಕವಾಗಿ, ಜೀವವಿಜ್ಞಾನದ ನೆಲೆಯಲ್ಲಿ ನಿರ್ದಿಷ್ಟವಾಗಿ ವಿವರಿಸಬಹುದು. ಮಾಹಿತಿಯನ್ನು ಹೊಂದಿರುವುದು ಹಾಗೂ ಆ ಮಾಹಿತಿಯಿಂದ ಏನು ಮಾಡಬಹುದು ಎಂಬ ಅರಿವು ಇರುವುದು ‘ಬುದ್ಧಿಮತ್ತೆ’.ಕಳೆದ 20 ವರ್ಷಗಳ ಅವಧಿಯಲ್ಲಿ, ಅದರಲ್ಲೂ ಮುಖ್ಯವಾಗಿ ಕಳೆದ ಮೂರು ವರ್ಷಗಳಲ್ಲಿ, ‘ಬುದ್ಧಿಮತ್ತೆ’ಯ ವಿಚಾರದಲ್ಲಿ ಕಂಪ್ಯೂಟರ್‌ಗಳು ಬಹಳ ಸುಧಾರಣೆ ಕಂಡಿವೆ.

 

ಇದಕ್ಕೆ ತೀರಾ ಸರಳ ಉದಾಹರಣೆಯೆಂದರೆ, ಅಮೆರಿಕದಲ್ಲಿ ಈಗ ಇರುವ ಸ್ವಯಂಚಾಲಿತ ಕಾರುಗಳು. ಸಂಪೂರ್ಣ ಸ್ವಯಂಚಾಲಿತವಾದ ಕಾರುಗಳು ಇನ್ನೆರಡು ವರ್ಷಗಳಿಗೆ ಮೊದಲೇ ಸಿದ್ಧವಾಗಲಿವೆ ಎಂದು ಊಹಿಸಲಾಗುತ್ತಿದೆ. ಇದರ ಅರ್ಥ, ನೀವು ಈ ಕಾರಿನಲ್ಲಿ ಕುಳಿತು ದಿನಪತ್ರಿಕೆ ಓದಬಹುದು, ನಿದ್ರೆ ಮಾಡಬಹುದು. ಕಾರು ನಿಮ್ಮನ್ನು ಗಮ್ಯ ಸ್ಥಾನಕ್ಕೆ ತಾನಾಗಿಯೇ ಕರೆದೊಯ್ಯುತ್ತದೆ.ನಾವು ಮಾಡುವ ಎಲ್ಲ ಕೆಲಸಗಳನ್ನು ಈ ಕಾರು ತಾನಾಗಿಯೇ ಮಾಡಿಕೊಳ್ಳುತ್ತದೆ– ಎಂಜಿನ್ ಚಾಲೂ ಮಾಡಿ, ಗಿಯರ್ ಬದಲಾಯಿಸಿ, ಅಗತ್ಯವಿದ್ದಾಗ ಬ್ರೇಕ್ ಅದುಮಿ, ನಂತರ ವೇಗ ಹೆಚ್ಚಿಸಿಕೊಳ್ಳಬಲ್ಲದು. ನಾವು ಮಾಡಲಾಗದ ಕೆಲಸವನ್ನೂ ಮಾಡಬಲ್ಲದು. ನಾಲ್ಕೂ ದಿಕ್ಕಿನಿಂದ ಬರಬಹುದಾದ ಅಪಾಯಗಳನ್ನು ಮನುಷ್ಯನಿಗೆ ಸಾಧ್ಯವಾಗದಷ್ಟು ನಿಖರವಾಗಿ ಗ್ರಹಿಸಬಲ್ಲದು.ಇಂಧನ ಕ್ಷಮತೆ ಹೆಚ್ಚಿಸಲು ಕಾರಿನ ವೇಗ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಬಲ್ಲದು. ಬೇರೆ ಬೇರೆ ಕಾರುಗಳ ಜೊತೆ ಸಂಪರ್ಕ ಸಾಧಿಸಿ, ನೂರಾರು ಕಿಲೋ ಮೀಟರ್‌ಗಳವರೆಗೆ ರಸ್ತೆಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಬಲ್ಲದು. ನಾನು ಈಗಾಗಲೇ ಹೇಳಿದಂತೆ, ಕಂಪ್ಯೂಟರ್‌ನ ಬುದ್ಧಿಶಕ್ತಿ ಈಗಾಗಲೇ ಏನೆಲ್ಲ ಮಾಡಬಲ್ಲದು ಎಂಬುದಕ್ಕೆ ಇವೆಲ್ಲವೂ ಸರಳ ಉದಾಹರಣೆಗಳು ಮಾತ್ರ.

 

ಕೃತಕ ಬುದ್ಧಿಮತ್ತೆಯಲ್ಲಿ ಸುಧಾರಣೆ ಕಂಡುಬರಲಿದೆ, ಸುಧಾರಣೆ ವೇಗವಾಗಿ ಆಗಲಿದೆ. ಏಕೆ? ಏಕೆಂದರೆ, ತಂತ್ರಜ್ಞಾನದ ಮೂಲಕ ಪರಿಹರಿಸಿಕೊಳ್ಳಬೇಕಾದ ಸಮಸ್ಯೆಗಳು ನಮ್ಮಲ್ಲಿ ಸಾಕಷ್ಟಿವೆ. ರೋಗಗಳಿಗೆ ಪರಿಹಾರ ಕಂಡುಕೊಳ್ಳುವುದರಿಂದ ಆರಂಭವಾಗಿ ವಾಣಿಜ್ಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವವರೆಗೆ ಸಮಸ್ಯೆಗಳ ವ್ಯಾಪ್ತಿಯಿದೆ. ಆಧುನಿಕ ಜಗತ್ತಿನ ಎಲ್ಲದಕ್ಕೂ ಕಂಪ್ಯೂಟರ್‌ನ ಬುದ್ಧಿಮತ್ತೆಯ ಅವಶ್ಯಕತೆ ಇದೆ. ಈ ಪರಿಸ್ಥಿತಿ ಬದಲಾಗುವುದಿಲ್ಲ.

 

ಬುದ್ಧಿಮತ್ತೆಯ ಈ ಆಸ್ಫೋಟದ ಜೊತೆ ಸ್ಪರ್ಧೆಗೆ ಇಳಿಯಲು ಮನುಷ್ಯನಿಗೆ ಆಗದು ಎಂಬುದನ್ನು ಜನ ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಏಕೆಂದರೆ, ನಮ್ಮ ಮಿದುಳಿನ ಸಾಮರ್ಥ್ಯಕ್ಕೆ ಮಿತಿ ಇದೆ. ಯೋಚಿಸುವ, ಜ್ಞಾಪಕ ಇಟ್ಟುಕೊಳ್ಳುವ ಸಾಮರ್ಥ್ಯಕ್ಕೂ ಮಿತಿ ಇದೆ. ಆದರೆ ಕಂಪ್ಯೂಟರ್‌ನ ಬುದ್ಧಿಮತ್ತೆಗೆ ಇಂತಹ ಮಿತಿಗಳಿಲ್ಲ. ದೊಡ್ಡ ಕಟ್ಟಡದಷ್ಟು ಗಾತ್ರದ ಕಂಪ್ಯೂಟರ್‌ ರೂಪಿಸಲು ಸಾಧ್ಯವಿದೆ.

 

ಆದರೆ, ನಾವು ನಿರೀಕ್ಷೆ ಮಾಡಿರದ ಅಪಾಯಗಳು ಇವೆ ಎಂಬುದು ಗೊತ್ತಾದ ನಂತರವೂ ಇಷ್ಟು ಬೃಹತ್ ಆಗಿರುವ ಸಾಧನವೊಂದನ್ನು ರೂಪಿಸಲು ಯಾರು, ಏಕೆ ಮನಸ್ಸು ಮಾಡುತ್ತಾರೆ ಎಂಬ ಪ್ರಶ್ನೆ ಇದೆ. ವಿಶ್ವದ ಕಂಪೆನಿಗಳು ಹಾಗೂ ಸೈನ್ಯಗಳು ತಂತ್ರಜ್ಞಾನದ ಪ್ರಗತಿಯ ವಿಚಾರದಲ್ಲಿ ಎದುರಾಳಿಗಳ ಜೊತೆ ಸ್ಪರ್ಧೆಗಿಳಿಯಲಿವೆ. ಹಾಗಾಗಿ, ಕೆಲವು ವರ್ಷಗಳ ಹಿಂದೆ ಆರಂಭವಾದ ಈ ಸ್ಪರ್ಧೆ ವಿರಾಮವಿಲ್ಲದೆ ಮುಂದುವರಿಯಲಿದೆ.

 

ಕಂಪೆನಿಗಳು, ಸೈನ್ಯಗಳು ಇನ್ನಷ್ಟು ಚೂಟಿಯಾದ, ಇನ್ನಷ್ಟು ಹೆಚ್ಚು ಸಮರ್ಥವಾದ ಕಂಪ್ಯೂಟರ್‌ಗಳನ್ನು, ಕಂಪ್ಯೂಟರ್‌ ಪ್ರೋಗ್ರಾಮ್‌ಗಳನ್ನು ರೂಪಿಸಲಿವೆ. ಇವುಗಳ ಜೊತೆ ಓಟಕ್ಕಿಳಿಯಲು ಮನುಷ್ಯನಿಗೆ ಸಾಧ್ಯವಿಲ್ಲದ ಕಾರಣ ಈ ಬುದ್ಧಿಮತ್ತೆಗೆ ಸ್ವಾಯತ್ತೆ ನೀಡಬೇಕಾಗುತ್ತದೆ.

 

ವಿಶ್ವದ ಅತ್ಯುತ್ತಮ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಇಪ್ಪತ್ತು ವರ್ಷಗಳ ಹಿಂದೆ ಒಂದು ಕಂಪ್ಯೂಟರ್, ಚೆಸ್ ಆಟದಲ್ಲಿ ಸೋಲಿಸಿತು. ಅದಾದ ಎರಡು ದಶಕಗಳ ಅವಧಿಯಲ್ಲಿ ಕಂಪ್ಯೂಟರ್‌ಗಳು ಇನ್ನಷ್ಟು ಚೂಟಿಯಾಗಿವೆ.

 

ಮುಂದಿನ 25 ವರ್ಷಗಳಲ್ಲಿ, ಮನುಷ್ಯನನ್ನು ಎಲ್ಲ ರೀತಿಯಲ್ಲೂ ಹಿಂದಿಕ್ಕುವ ಬುದ್ಧಿಮತ್ತೆಯ ಕಂಪ್ಯೂಟರ್‌ಗಳು ಬರಲಿವೆ. ಆ ಹಂತದಲ್ಲಿ ಕಂಪ್ಯೂಟರ್‌ನ ಬುದ್ಧಿಮತ್ತೆಯು ತನ್ನನ್ನು ತಾನೇ ಸುಧಾರಣೆಗೆ ಒಡ್ಡಿಕೊಳ್ಳಲಿದೆ – ಮನುಷ್ಯನಿಗಿಂತ ವೇಗವಾಗಿ. ಆಗ ಸುಧಾರಣೆಯ ವೇಗ ಕೂಡ ತೀವ್ರವಾಗಿರುತ್ತದೆ.

 

ಕಂಪ್ಯೂಟರ್‌ಗಳು ಮಾಹಿತಿಯನ್ನು ನಮಗಿಂತ ಹೆಚ್ಚು ವೇಗವಾಗಿ ಸಂಸ್ಕರಿಸಬಲ್ಲವು. ಅವುಗಳಿಗೆ ನಮಗಿರುವಂತೆ ಜೈವಿಕ–ರಾಸಾಯನಿಕ ಮಿತಿಗಳು ಇರುವುದಿಲ್ಲ.

 

ಈ ಪರಿಯ ಬುದ್ಧಿಮತ್ತೆಯು ಯಾವ ರೀತಿಯ ಪ್ರಗತಿಯನ್ನು ತರಲಿದೆ ಎಂಬ ಬಗ್ಗೆ ನಮಗೆ ಎಳ್ಳಷ್ಟೂ ಅರಿವಿಲ್ಲ. ಈ ಬುದ್ಧಿಮತ್ತೆಯು ನಮಗೆ ಕೇಡುಬಯಸುವ ರೀತಿಯಲ್ಲಿ ಇರುವುದಿಲ್ಲ ಎಂಬ ಊಹೆ ಇದೆ. ಅದು ನಮಗೆ ಉದ್ದೇಶಪೂರ್ವಕವಾಗಿ ಹಾನಿ ಎಸಗದಿದ್ದರೂ, ನಾವು ಕ್ರಿಮಿ–ಕೀಟಗಳನ್ನು ಕಾಣುವ ರೀತಿಯಲ್ಲಿ ಅದು ನಮ್ಮನ್ನು ಕಾಣಲಿದೆ ಎಂಬ ಊಹೆಯೂ ಇದೆ.

 

ತನ್ನನ್ನು ತಾನು ಪರಿಪೂರ್ಣ ಆಗಿಸಿಕೊಳ್ಳುವತ್ತ ಸಾಗಲಿರುವ ಬುದ್ಧಿಮತ್ತೆ, ನಮ್ಮನ್ನು ಕಡೆಗಣಿಸಲಿದೆ. ಅಮೆರಿಕದವರು ಆಲೋಚಿಸುತ್ತಿರುವುದು ಇದರ ಬಗ್ಗೆಯೇ. ಇದನ್ನು ನಾವು ಕೂಡ ಬಹುಕಾಲ ಉಪೇಕ್ಷಿಸಲು ಸಾಧ್ಯವಿಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ 

ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry