ಲಕ್ಷ್ಮೇಶ್ವರದಲ್ಲಿ ಜಾತ್ರಾ ಮಹೋತ್ಸವ 4ರಿಂದ

ಲಕ್ಷ್ಮೇಶ್ವರ: ನಾಡಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಮತ್ತು ಇಲ್ಲಿಯ ಆರಾಧ್ಯ ದೇವರಾದ ಸೋಮೇಶ್ವರರ ಜಾತ್ರಾ ಮಹೋತ್ಸವ ಇದೇ 4ರಿಂದ 6ರ ವರೆಗೆ ನಡೆಯಲಿದೆ.
ಇಂದಿನ ಲಕ್ಷ್ಮೇಶ್ವರಕ್ಕೆ ಹಿಂದೆ ಪುಲಿಗೆರೆ, ಹುಲಿಗೆರೆ, ಪುಲಿಕಾನಗರ, ಪುರಿಕರನಗರ ಎಂದೆಲ್ಲ ಕರೆಯುತ್ತಿದ್ದರು. ಲಕ್ಷ್ಮಣರಸ ಎಂಬ ಅರಸ ಈ ಊರಲ್ಲಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ‘ಲಕ್ಷ್ಮಣಪುರ’ ಎಂದು ಕರೆದರು. ಅದೇ ಮುಂದೆ ‘ಲಕ್ಷ್ಮೇಶ್ವರ’ ಎಂದು ಪ್ರಸಿದ್ಧಿ ಪಡೆಯಿತು ಎಂಬುದು ಇತಿಹಾಸ ತಜ್ಞರ ಅಭಿಮತ.
ಆದಿಕವಿ ಪಂಪನು ಈ ಊರಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾನೆ ಎಂಬುದು ಮುಖ್ಯ. ಇಲ್ಲಿನ ಅನೇಕ ಐತಿಹಾಸಿಕ ಸ್ಮಾರಕಗಳು ಜಗತ್ ಪ್ರಸಿದ್ಧವಾಗಿದ್ದು ಇವುಗಳಲ್ಲಿ ಸೋಮೇಶ್ವರ ದೇವಸ್ಥಾನ ಅತ್ಯಂತ ಮಹತ್ವದ್ದಾಗಿದೆ.
ಸಂಕ್ಷಿಪ್ತ ಇತಿಹಾಸ: ಹನ್ನೊಂದನೇ ಶತಮಾನದಲ್ಲಿ ನಿರ್ಮಾಣವಾಗಿರುವ ಸೋಮೇಶ್ವರ ದೇವಾಲಯ ನೋಡಲು ಬಹಳ ಸುಂದರವಾಗಿದ್ದು , ಚಾಲುಕ್ಯ ಶಿಲ್ಪ ಶೈಲಿ ಹೊಂದಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ದಿಕ್ಕುಗಳಿಂದ ದೇವಾಲಯದೊಳಗೆ ಪ್ರವೇಶ ಮಾಡಲು ಮೂರು ಬೃಹತ್ ಬಾಗಿಲುಗಳಿವೆ. ಅಲ್ಲದೆ ದೇವಸ್ಥಾನದ ಸುತ್ತಲೂ ಬೃಹತ್ ಕಲ್ಲುಗಳಿಂದ ನಿರ್ಮಿಸಿದ ದೊಡ್ಡ ಕೋಟೆಯಿದ್ದು, ಇದು ದೇವಸ್ಥಾನಕ್ಕೆ ರಕ್ಷಣೆ ಒದಗಿಸುತ್ತಿದೆ. ಗರ್ಭಗೃಹ, ಅರ್ಧ ಮಂಟಪ, ನವರಂಗ ಮತ್ತು ಮುಖ ಮಂಟಪಗಳಿಂದ ದೇವಸ್ಥಾನ ಕಂಗೊಳಿಸುತ್ತಿದೆ.
ಗರ್ಭ ಗುಡಿಯಲ್ಲಿರುವ ಶಿವ-–ಪಾರ್ವತಿಯರ ಮೂರ್ತಿಯನ್ನು ಆದಯ್ಯನೆಂಬ ಶಿವಭಕ್ತ ಸೌರಾಷ್ಟ್ರದಿಂದ ತಂದು ಪ್ರತಿಷ್ಠಾಪಿಸಿದ್ದಾನೆಂದು ಹೇಳಲಾಗುತ್ತಿದೆ. ಮೂರ್ತಿಯ ವಿಶೇಷವೇನೆಂದರೆ ಶಿವನು ತನ್ನ ಹೆಂಡತಿ ಪಾರ್ವತಿಯನ್ನು ನಂದಿ ಮೇಲೆ ಕೂಡಿಸಿಕೊಂಡು ಲೋಕ ಸಂಚಾರಕ್ಕೆ ಹೊರಟಿರುವುದು.
ಇದು ಆಧುನಿಕ ಕಾಲದ ಗಂಡ- ಹೆಂಡತಿ ಬೈಕ್ ಸವಾರಿ ಮಾಡುವುದನ್ನು ಪ್ರತಿನಿಧಿಸುತ್ತದೆ. ಇಲ್ಲಿನ ಮತ್ತೊಂದು ವಿಶೇಷ ಏನೆಂದರೆ ಪ್ರತಿ ವರ್ಷ ಮೇ ಕೊನೆ ವಾರದಲ್ಲಿ ಮುಂಜಾನೆ ಉದಯಿಸುವ ಸೂರ್ಯನ ಹೊಂಬಣ್ಣದ ಕಿರಣಗಳು ನೇರವಾಗಿ ಸಪ್ತ ದ್ವಾರಗಳನ್ನು ದಾಟಿ, ಗರ್ಭ ಗುಡಿಯಲ್ಲಿನ ಶಿವ ಪಾರ್ವತಿ ಮೂರ್ತಿ ಮೇಲೆ ಸತತ ಐದು ದಿನಗಳವರೆಗೆ ಬೀಳುತ್ತವೆ.
ಇಷ್ಟು ಮಹತ್ವವಾದ ದೇವಸ್ಥಾನ ಶಿಥಿಲಾವಸ್ಥೆಗೆ ತಲುಪಿತ್ತು. ಇನ್‌ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಅವರು ಅಂದಾಜು ₹4.50 ಕೋಟಿ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿಸಿದ್ದು ಮತ್ತೆ ಅದು ತನ್ನ ವೈಭವ ಮರಳಿ ಪಡೆದುಕೊಂಡಿದೆ.
ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಸೋಮೇಶ್ವರನ ಜಾತ್ರಾ ಮಹೋತ್ಸವ ಇದೇ ಗುರುವಾರದಿಂದ ಆರಂಭವಾಗಲಿದೆ. ಅಂದು ಸಂಜೆ 7ಕ್ಕೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ.
5ರಂದು (ಶುಕ್ರವಾರ) ಸಂಜೆ 6ಕ್ಕೆ ಮಹಾರಥೋತ್ಸವ ಮತ್ತು 6ರಂದು (ಶನಿವಾರ) ಸಂಜೆ 5ಕ್ಕೆ ಕಡುಬಿನ ಕಾಳಗ ನಡೆಯಲಿದೆ. ಇದಲ್ಲದೇ ಎರಡು ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
–ನಾಗರಾಜ ಎಸ್. ಹಣಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.