ಗುರುವಾರ , ಆಗಸ್ಟ್ 18, 2022
25 °C

ಜಿಎಸ್‌ಟಿ ಆರ್ಥಿಕ ಪಥ ಬದಲಿಸುವ ಬ್ರಹ್ಮಾಸ್ತ್ರ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ ಆರ್ಥಿಕ ಪಥ ಬದಲಿಸುವ ಬ್ರಹ್ಮಾಸ್ತ್ರ

ದೇಶದ ಅರ್ಥ ವ್ಯವಸ್ಥೆಯ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರುವ ಪೂರ್ವಭಾವಿ ಸಿದ್ಧತೆಗಳೆಲ್ಲ ಭರದಿಂದ ಸಾಗಿವೆ. ಹೊಸ ವ್ಯವಸ್ಥೆ ಜಾರಿಗೆ ತರಲು ಜುಲೈ 1ರ ಗಡುವು ನಿಗದಿ ಮಾಡಲಾಗಿದೆ.

ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮ ಇದಾಗಿದೆ. ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿದೆ. ಹೊಸ ತೆರಿಗೆ ವ್ಯವಸ್ಥೆಯು ಸದ್ಯದ ತೆರಿಗೆ ಸ್ವರೂಪವನ್ನೇ ಆಮೂಲಾಗ್ರವಾಗಿ ರೂಪಾಂತರಿಸಲಿದೆ.  ದೇಶದ ಅರ್ಥ ವ್ಯವಸ್ಥೆಯ ಗತಿಯನ್ನೇ ಬದಲಿಸುವ ಶಕ್ತಿ ಇದಕ್ಕಿದೆ. ವ್ಯಾಪಕ ಸ್ವರೂಪದ ಸಂಕೀರ್ಣಮಯ ಒಕ್ಕೂಟ ವ್ಯವಸ್ಥೆಯಲ್ಲಿನ ದೇಶಿ ಉದ್ಯಮ ವಹಿವಾಟು ಇನ್ನು ಮುಂದೆ ಹೆಚ್ಚು ಪಾರದರ್ಶಕವಾದ ರಾಜಮಾರ್ಗದಲ್ಲಿ ನಡೆಯಲಿದೆ.

ಅಬಕಾರಿ ಸುಂಕ, ಸೇವಾ ತೆರಿಗೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಸೇರಿದಂತೆ  ಡಜನ್‌ಗೂ ಹೆಚ್ಚು ತೆರಿಗೆಗಳ ಬದಲಿಗೆ, ದೇಶದಾದ್ಯಂತ ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ಬರುವುದರಿಂದ ತೆರಿಗೆ ಕುರಿತ ಅಸ್ಪಷ್ಟತೆಗಳೆಲ್ಲ ದೂರವಾಗಲಿವೆ. ‘ಜಿಎಸ್‌ಟಿ’ಯು ದೇಶಿ ಅರ್ಥ ವ್ಯವಸ್ಥೆಯನ್ನು ಸಮಗ್ರವಾಗಿ ಬಲಪಡಿಸಲಿದೆ. ತೆರಿಗೆ ಪಾವತಿ ದಕ್ಷತೆ ಹೆಚ್ಚಿಸಿ, ವೆಚ್ಚ ಉಳಿಸಿ, ಉಪಭೋಗ ಹೆಚ್ಚಿಸುವುದರಿಂದ ಉತ್ಪನ್ನಗಳೆಲ್ಲ ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯಲಿವೆ. ತಯಾರಕರು, ಮಾರಾಟಗಾರರು ಮತ್ತು ಗ್ರಾಹಕರೂ ಇದರ ಪ್ರಯೋಜನ ಪಡೆಯಲಿದ್ದಾರೆ. ‘ಒಂದು ದೇಶ, ಒಂದು ತೆರಿಗೆ’ ವ್ಯವಸ್ಥೆ ಜಾರಿಗೆ ತರಲು  ಹಾದಿಯಲ್ಲಿನ ಅಡೆತಡೆಗಳೆಲ್ಲ ದೂರವಾಗಿವೆ. 

ಏನಿದು ಜಿಎಸ್‌ಟಿ?

ಸದ್ಯಕ್ಕೆ ಜಾರಿಯಲ್ಲಿ ಇರುವ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಳ್ಳಲಿದೆ. ದೇಶದಾದ್ಯಂತ ಒಂದೇ ಬಗೆಯ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಇಡೀ ದೇಶ ಒಂದೇ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿದೆ.  ಯಾವುದೇ ಸರಕು ಮತ್ತು ಸೇವೆಯ ಬೆಲೆ ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿದೆ.

* ಹತ್ತಾರು ತೆರಿಗೆಗಳು ರದ್ದಾಗಿ ಒಂದೇ ಬಗೆಯ ತೆರಿಗೆ ವ್ಯವಸ್ಥೆ  

* ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ರದ್ದು

* ವ್ಯಾಪಾರಿಗಳು ಮತ್ತು ಉದ್ಯಮಿಗಳ ತೆರಿಗೆ ವಂಚನೆಗೆ ಕೊನೆ 

* ತೆರಿಗೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳ

* ಅಭಿವೃದ್ಧಿಗೆ ತೊಡಕಾಗಿದ್ದ ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ಸರಳ

* ಸರಕುಗಳ ಸಾಗಣೆ ವೆಚ್ಚ ಇಳಿಕೆ

ವಹಿವಾಟು ಮಿತಿ ಏರಿಕೆ

ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೋಂದಣಿಗೆ ವಹಿವಾಟು ಮಿತಿಯನ್ನು ಈಗಿರುವ ₹ 10 ಲಕ್ಷಗಳಿಂದ ₹ 20 ಲಕ್ಷಕ್ಕೆ ಏರಿಸಿರುವುದರಿಂದ ಚಿಕ್ಕಪುಟ್ಟ ವ್ಯಾಪಾರ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಸರಕು ಮತ್ತು ಸೇವೆಗಳ   ವಾರ್ಷಿಕ ವಹಿವಾಟು ₹ 20 ಲಕ್ಷಗಳಿದ್ದರೆ ಮಾತ್ರ ನೋಂದಣಿ ಕಡ್ಡಾಯವಿರುತ್ತದೆ.

ಸಾವಿರಾರು ಉತ್ಪನ್ನ ಮತ್ತು ಸೇವೆಗಳನ್ನು ಐದು ತೆರಿಗೆ ಹಂತಗಳಲ್ಲಿ  (ಶೇ 0, 5, 12,18 ಮತ್ತು 28)   ಸೇರ್ಪಡೆ ಮಾಡುವುದು ಜಿಎಸ್‌ಟಿ ಮಂಡಳಿ ಮುಂದಿರುವ ಸದ್ಯದ ಕ್ಲಿಷ್ಟಕರ ಸಮಸ್ಯೆಯಾಗಿದೆ.

ಸರಕು ಮತ್ತು ಸೇವೆಗಳ ತೆರಿಗೆ

ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ)  ಸರಕುಗಳ  ತಯಾರಿಕೆ, ಮಾರಾಟ ಹಾಗೂ ಸೇವೆಗಳ ಬಳಕೆ ಮೇಲೆ  ದೇಶದಾದ್ಯಂತ ಏಕರೂಪದಲ್ಲಿ  ವಿಧಿಸಲಾಗುವ ತೆರಿಗೆಯಾಗಿದೆ. ಹೊಸ ವ್ಯವಸ್ಥೆಯಲ್ಲಿ ಸರಕು ಹಾಗೂ ಸೇವೆಗಳ ಮೇಲೆ ಹಲವು ಹಂತಗಳಲ್ಲಿ ತೆರಿಗೆ ಕೊಡುವ ಬದಲು ಕೊನೆಯ ಹಂತದಲ್ಲಿ ಮಾತ್ರವೇ ಗ್ರಾಹಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಸದ್ಯಕ್ಕೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಿಗೆ ಸಂಗ್ರಹ ಕ್ರಮದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ.  ಇನ್ನು ಮುಂದೆ ಈ ವ್ಯತ್ಯಾಸ ದೂರವಾಗಲಿದೆ.

ಗ್ರಾಹಕನಿಗೆ ಲಾಭ

ಹೊಸ ತೆರಿಗೆ ವ್ಯವಸ್ಥೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಮಟ್ಟದ ತೆರಿಗೆಗಳನ್ನು ಸರಕು ಅಥವಾ ಸೇವೆಗಳನ್ನು ಗ್ರಾಹಕನಿಗೆ ಪೂರೈಸುವಾಗ ಅಂದರೆ ವಹಿವಾಟಿನ ಅಂತಿಮ ಹಂತದಲ್ಲಿ ಸಂಗ್ರಹಿಸಲಾಗುತ್ತದೆ.   ಇದರಿಂದ ತೆರಿಗೆ ಪ್ರಮಾಣ ಕಡಿಮೆಯಾಗುತ್ತದೆ. ಗ್ರಾಹಕರ ಮೇಲೆ ಕಡಿಮೆ ಹೊರೆ ಬೀಳಲಿದೆ.

ತೆರಿಗೆ ದರ ಕಡಿಮೆ  ಆಗುವುದರಿಂದ ಸರಕು ಮತ್ತು   ಸೇವೆಗಳ ದರವೂ ತಗ್ಗುತ್ತದೆ. ಇದರಿಂದಾಗಿ ಜನರು ಸರಕು ಸೇವೆಗಳನ್ನು ಬಳಸುವ ಪ್ರಮಾಣವು ಹೆಚ್ಚುತ್ತದೆ. ಬೇಡಿಕೆ ಹೆಚ್ಚಳವು ತಯಾರಿಕೆಗೆ ಉತ್ತೇಜನ ನೀಡಿ ವಹಿವಾಟನ್ನು ಇನ್ನಷ್ಟು ಹೆಚ್ಚಿಸಲಿದೆ.

ಹೆಚ್ಚುವರಿ ತೆರಿಗೆಯಲ್ಲ

ಇದು ಹೆಚ್ಚುವರಿ ತೆರಿಗೆಯಂತೂ ಆಗಿರುವುದಿಲ್ಲ. ಸಿಜಿಎಸ್‌ಟಿಯು (ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆಯು) ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ ಹಾಗೂ ಹೆಚ್ಚುವರಿಯಾಗಿ ಕೇಂದ್ರ ಮಟ್ಟದಲ್ಲಿನ ಸುಂಕಗಳನ್ನು ಒಳಗೊಂಡಿರುತ್ತದೆ.

ರಾಜ್ಯ ಮಟ್ಟದಲ್ಲಿಯಾದರೆ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ನಾಕಾ ತೆರಿಗೆ, ಲಾಟರಿ ತೆರಿಗೆ, ವಿದ್ಯುತ್ ಸುಂಕ, ಸರಕುಗಳ ಹಾಗೂ ಸೇವೆಗಳ ಪೂರೈಕೆಗೆ ಹಾಗೂ ಖರೀದಿ ತೆರಿಗೆಗೆ ಸಂಬಂಧಿಸಿದಂತೆ ಸರ್ಚಾರ್ಜ್‌ ಇವೆಲ್ಲವನ್ನೂ ಒಳಗೊಂಡಿರುತ್ತದೆ.

‘ಜಿಎಸ್‌ಟಿ’ಯು ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು (ಜಿಡಿಪಿ) ಹೆಚ್ಚಿಸಿ ಪ್ರಗತಿಯ ಪಥದತ್ತ ಒಯ್ಯುವ ‘ಬ್ರಹ್ಮಾಸ್ತ್ರ’ವಾಗಿದೆ. ಒಟ್ಟಾರೆ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಕಾರಣವಾಗಿ ಭ್ರಷ್ಟತೆಗೂ ಕಡಿವಾಣ ಹಾಕಲಿರುವುದನ್ನು ಗ್ರಾಹಕರು, ವಣಿಕ ಸಮುದಾಯ ಮತ್ತು ಉದ್ಯಮ ವಲಯ ಕುತೂಹಲದಿಂದ ಎದುರು ನೋಡುತ್ತಿದೆ.

ತಂತ್ರಜ್ಞಾನ

ದರಪಟ್ಟಿಗಳನ್ನು ಪರಿಶೀಲಿಸಿ ತೆರಿಗೆ ಹೊಂದಾಣಿಕೆ ಮಾಡಲು ಜಿಎಸ್‌ಟಿ ಸಂಪರ್ಕ ಜಾಲ (ಜಿಎಸ್‌ಟಿಎನ್‌) ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವು ಹೊಸ ತೆರಿಗೆ ವ್ಯವಸ್ಥೆಯ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸಲಿದೆ. ಇದರ ನೆರವಿನಿಂದ ತೆರಿಗೆ ವಂಚನೆಯ ಜಾಡನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ತೆರಿಗೆದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆದರೆ, ದಕ್ಷಿಣದ ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿಲ್ಲ. ಹೀಗಾಗಿ ಜುಲೈ 1ರ ಬದಲಿಗೆ ಸೆಪ್ಟೆಂಬರ್‌ ತಿಂಗಳಿಗೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ.

***

ಜಿಎಸ್‌ಟಿಯ ವೈಶಿಷ್ಟ್ಯಗಳು

* ವರ್ಷಕ್ಕೆ  ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.

* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.

* ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು  ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.

* ವಿಲಾಸಿ ಸರಕು,  ತಂಪು ಪಾನೀಯ ಮತ್ತು  ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ     ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.

* ಜಿಎಸ್‌ಟಿ  ಗರಿಷ್ಠ ದರ ಶೇ 40ರಷ್ಟು 

ಈ ನಾಲ್ಕು ಹಂತದ ತೆರಿಗೆ ದರಗಳಲ್ಲಿ ಯಾವ, ಯಾವ ಸರಕು ಮತ್ತು ಸೇವೆಗಳನ್ನು ಸೇರ್ಪಡೆ ಮಾಡಬೇಕು ಎನ್ನುವುದನ್ನು ಜಿಎಸ್‌ಟಿ ಮಂಡಳಿ ಇನ್ನೂ ನಿರ್ಧರಿಸಬೇಕಾಗಿದೆ. ಬಾಕಿ ಉಳಿದಿರುವ ಈ ಕೆಲಸ ಪೂರ್ಣಗೊಂಡರೆ, ತೆರಿಗೆಗೆ ಸಂಬಂಧಿಸಿದ ಅನುಮಾನಗಳೆಲ್ಲ ದೂರವಾಗಲಿವೆ.

**

ರದ್ದಾಗಲಿರುವ ತೆರಿಗೆಗಳು

* ಕೇಂದ್ರ ಅಬಕಾರಿ ಸುಂಕ, ಸೀಮಾ ಸುಂಕ, ಸೇವಾ ತೆರಿಗೆ ಮತ್ತು ಹೆಚ್ಚುವರಿ ಉಪ ಕರಗಳು (ಸೆಸ್‌/ಸರ್ಚಾರ್ಜ್‌)

* ರಾಜ್ಯಗಳ ಮೌಲ್ಯವರ್ಧಿತ ತೆರಿಗೆ, ಪ್ರವೇಶ ತೆರಿಗೆ, ಮನರಂಜನಾ ತೆರಿಗೆ, ಜಾಹೀರಾತು ತೆರಿಗೆ, ಲಾಟರಿ ತೆರಿಗೆ ಮತ್ತು ರಾಜ್ಯಗಳ ಉಪ ಕರಗಳು

* ಕೇಂದ್ರ ಸರ್ಕಾರ ನಿಗದಿಪಡಿಸುವ ತೆರಿಗೆಗಳನ್ನು ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯ ಸರ್ಕಾರಗಳು ವಿಧಿಸುವ  ತೆರಿಗೆ ‘ಎಸ್‌ಜಿಎಸ್‌ಟಿ’ ಆಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.