ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಉಳಿಸಿಕೊಳ್ಳಲು ನಿರಂತರ ಆಂದೋಲನ

ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಹೇಳಿಕೆ
Last Updated 3 ಮೇ 2017, 6:56 IST
ಅಕ್ಷರ ಗಾತ್ರ

ಬೆಳಗಾವಿ: ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಸ್ವಾತಂತ್ರ್ಯಕ್ಕಾಗಿ ಸಂವಿಧಾನ ಉಳಿಸಿಕೊಳ್ಳಬೇಕು. ಇದಕ್ಕಾಗಿ ನಿರಂತರ ಆಂದೋಲನ ಅಗತ್ಯ ಎಂದು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ ಅಂಬೇಡ್ಕರ್‌ ತಿಳಿಸಿದರು.

ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಕರ್ನಾಟಕ ಘಟಕ ಹಾಗೂ ಜಿಲ್ಲೆಯ ದಲಿತ ಸಂಘಟನೆಗಳು ಮಂಗಳವಾರ ಇಲ್ಲಿನ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಬಚಾವೋ, ದೇಶ ಬಚಾವೋ’ ವಿಭಾಗಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭಗವಾನ್‌ ಬುದ್ಧನಿಂದ ಹಿಡಿದು ತುಕಾರಾಂವರೆಗೆ ಅನೇಕ ಸಂತರು ಆಗಿ ಹೋಗಿದ್ದಾರೆ. ಎಲ್ಲರೂ ಸಮಾಜ ಸುಧಾರಣೆಗೆ ಕ್ರಾಂತಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಾಂತಿಯಾಗಿ ಮನುಧರ್ಮ ಶಾಸ್ತ್ರ ಹೇರುವುದೂ ನಡೆಯುತ್ತಿದೆ. ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ರಾಂತಿಗೆ ಪ್ರತಿಯಾಗಿ ಸಂವಿಧಾನ ಬಚಾವೋ ಚಳವಳಿ ಅನಿವಾರ್ಯವಾಗಿದೆ’ ಎಂದು ಹೇಳಿದರು.

ಹೋರಾಟ ಮುಂದುವರಿಯಬೇಕು: ‘ಸಂವಿಧಾನದಿಂದಾಗಿ ದೇಶದಲ್ಲಿ ಶಾಂತಿ, ಸಹಬಾಳ್ವೆ ನೆಲೆಸಿದೆ. ಸಮಾನ ಹಕ್ಕುಗಳು ದೊರೆಯುತ್ತಿವೆ. ದೇಶದಲ್ಲಿ ಎಲ್ಲ ಸಂತರು, ದಾರ್ಶನಿಕರು ಹೇಳಿದ ಅಂಶಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ. ಬಾಬಾಸಾಹೇಬರು ಸಂವಿಧಾನದ ಮೂಲಕ ಪರಸ್ಪರ ಗೌರವಿಸುವ ಸಂದೇಶ ನೀಡಿದರು. ಆದರೆ, ಈಗ ದೇಶದಲ್ಲಿ ಒಬ್ಬರನ್ನು ಇನ್ನೊಬ್ಬರು ದ್ವೇಷಿಸುವ ವಾತಾವರಣ ಬೆಳೆಯುತ್ತಿದೆ. ಇದಕ್ಕೆ ಆರ್‌ಎಸ್‌ಎಸ್‌, ಬಿಜೆಪಿ ಕಾರಣವಾಗುತ್ತಿದೆ’ ಎಂದು ಟೀಕಾಪ್ರಹಾರ ನಡೆಸಿದರು.

‘ದೇಶದಲ್ಲಿ ಸಂವಿಧಾನ ಉಳಿಸಿಕೊಳ್ಳುವುದಕ್ಕಾಗಿ ಅಂಬೇಡ್ಕರ್‌ವಾದಿಗಳು ಹೋರಾಟ ಮುಂದುವರಿಸಬೇಕು’ ಎಂದರು. ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಕರ್ನಾಟಕ ಘಟಕದ ಅಧ್ಯಕ್ಷ ಆರ್. ಮೋಹನ್‌ರಾಜ್‌, ‘ದಲಿತ ಸಮಾಜ ಒಗ್ಗೂಡಿಸಿ, ಬಲಿಷ್ಠಗೊಳಿಸಲು ಪ್ರಕಾಶ್‌ ಅಂಬೇಡ್ಕರ್ ಅವರು ಸಂವಿಧಾನ ಬಚಾವೋ, ದೇಶ ಬಚಾವೋ  ಆಂದೋಲನ ನಡೆಸುತ್ತಿದ್ದಾರೆ.

ದೇಶದಲ್ಲಿ ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಮೀಸಲಾತಿ ಕಸಿದುಕೊಳ್ಳುವ ಯತ್ನಗಳು ನಡೆಯುತ್ತಿವೆ. ಸಂವಿಧಾನವನ್ನು ತಿರುಚುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಿದೆ. ಪಂಚಾಂಗ, ಮನುವಾದ ಜಾರಿಗೆ ಹುನ್ನಾರ ನಡೆಸುತ್ತಿದೆ’ ಎಂದು ದೂರಿದರು.

ದಲಿತರನ್ನೂ ಉಳಿಸಬೇಕು: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಗಂಡಾಂತರದಲ್ಲಿದೆ. ಇದರಿಂದ ಸಮಾಜವೂ ಗಂಡಾಂತರಕ್ಕೆ ಸಿಲುಕಿದೆ. ದಲಿತ ಸಂಘಟನೆಗಳಲ್ಲಿ ಪರಸ್ಪರ ವೈಷಮ್ಯ ಹೆಚ್ಚಾಗುತ್ತಿದೆ.

ಸಂವಿಧಾನ ಬಚಾವೋ ಚಳವಳಿ ಜತೆ ದಲಿತ ಬಚಾವೋ ಚಳವಳಿಯೂ ನಡೆಯಬೇಕಾಗಿದೆ. ಈ ಮೂಲಕ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯವಾಗಬೇಕು’ ಎಂದು ಸಲಹೆ ನೀಡಿದರು.

ನಿಜಗುಣ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ವಿವೇಕರಾವ ಪಾಟೀಲ, ಮಹಾನಗರಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಜಿ. ತಳವಾರ, ಮುಖಂಡರಾದ ಕೆ.ಎನ್‌. ವಿಠ್ಠಲ, ಪ್ರಕಾಶ ಮೈಲಾಕೆ, ಮಲ್ಲೇಶ ಚೌಗಲೆ, ಅಶೋಕ ಐನಾವರ, ಕೆ.ಡಿ. ವೆಂಕಟೇಶ್‌, ಮಹೇಶ್ ತಮ್ಮಣ್ಣ, ರಾಜು ತಳವಾರ, ಆನಂದ ಕೆಳಗಡೆ ಭಾಗವಹಿ ಸಿದ್ದರು.

ಸೋದರನ ವಿರುದ್ಧ ಸಚಿವ ಟೀಕೆ
‘ಜಿಲ್ಲೆಯಲ್ಲಿ ಕೆಲವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರು ಬಳಸಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ದಲಿತ ಸಮಾಜಕ್ಕೆ ಅವರು ನೀಡಿದ ಕೊಡುಗೆಯಾದರೂ ಏನು ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಸಹೋದರ, ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT