ಉಪ್ಪಾರರ ಅಭಿವೃದ್ಧಿಗೆ ನೆರವು

ಕಲಬುರ್ಗಿ: ‘ಉಪ್ಪಾರ ಸಮಾಜದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ಕಾರದಿಂದ ಸೌಲಭ್ಯ ಒದಗಿಸಲಾಗುವುದು’ ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದರು.
ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಭಗೀರಥ ಮಹರ್ಷಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭಗೀರಥ ಮಹರ್ಷಿಗಳು ಕಠೋರ ತಪಸ್ಸುಗೈದ ಮಹನೀಯರು. ಅವರ ಭಕ್ತಿ, ಶ್ರದ್ಧೆಯಿಂದ ಭೂಲೋಕಕ್ಕೆ ಗಂಗಾನದಿಯನ್ನು ಕರೆದುಕೊಂಡು ಬಂದಿದ್ದಾರೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ಭಗೀರಥ ಮಹರ್ಷಿ ಅವರ ಭಕ್ತಿ, ಶ್ರದ್ಧೆ, ಪರಿಶ್ರಮ ಯುವಪಿಳಿಗೆಗೆ ಆದರ್ಶವಾಗಬೇಕು’ ಎಂದು ಹೇಳಿದರು.
‘ನಮಾಮಿ ಗಂಗೆ ಯೋಜನೆಯಡಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ವೆಚ್ಚದಲ್ಲಿ ಗಂಗಾ ನದಿಯ ಶುಚಿತ್ವ ಕೈಗೆತ್ತಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು. ‘ಉಪ್ಪಾರ ಸಮಾಜದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ಉಪನ್ಯಾಸಕಿ ಡಾ.ಗೀತಾಂಜಲಿ ಉಪ್ಪಾರ ಮಾತನಾಡಿ, ‘ಭಗೀರಥ ಮಹರ್ಷಿ ಗಂಗೆಯನ್ನೇ ಭೂಲೋಕಕ್ಕೆ ತಂದಿದ್ದಾರೆ. ಅವರ ಪ್ರಯತ್ನ ಎಂತದ್ದು ಎಂದು ಇದರಿಂದ ತಿಳಿಯುತ್ತದೆ. ಉಪ್ಪಾರರು ಸಂಘಟಿತರಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕು’ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್, ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ ಸಗರ, ಉಪ್ಪಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಸಗರ, ಜಗದೀಶ್ವರಿ ಶಿವಕೇರಿ ಇದ್ದರು. ಶಿವಾನಂದ ಅಣಜಿಗಿ ನಿರೂಪಿಸಿ, ರಂಗನಾಥ ಜಡಿ ವಂದಿಸಿದರು.
ನಗರದಲ್ಲಿ ಭಗೀರಥ ಮಹರ್ಷಿ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆ ಯಿತು. ಉಪ್ಪಾರಗಲ್ಲಿಯ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಮಕ್ತಂಪುರ, ಸರಾಫ್ ಬಜಾರ್, ಚೌಕ್ ಪೊಲೀಸ್ ಸ್ಟೇಷನ್, ಸೂಪರ್‌ಮಾರ್ಕೆಟ್, ಜಗತ್ ವೃತ್ತದ ಮೂಲಕ ರಂಗಮಂದಿರ ತಲುಪಿತು. ಡೊಳ್ಳು ಕುಣಿತ ಹಾಗೂ ಕಲಾ ತಂಡಗಳು ಮೆರವ ಣಿಗೆಗೆ ರಂಗು ತುಂಬಿದವು.
*
ಭಗೀರಥ ಮಹರ್ಷಿ ಆದರ್ಶ ಪಾಲಿಸಿ ಉಪ್ಪಾರ ಸಮಾಜ ದವರು ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು.
-ಭಾಗಣ್ಣಗೌಡ ಪಾಟೀಲ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.