ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದೀಪ್‌ ‘ಹ್ಯಾಟ್ರಿಕ್‌’ ಮೋಡಿ

Last Updated 3 ಮೇ 2017, 19:30 IST
ಅಕ್ಷರ ಗಾತ್ರ

ಇಪೊ, ಮಲೇಷ್ಯಾ (ಪಿಟಿಐ): ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಛಲದಿಂದ ಹೋರಾಡಿ ‘ಹ್ಯಾಟ್ರಿಕ್‌’ ಗೋಲಿನ ಸಾಧನೆ ಮಾಡಿದ ಸ್ಟ್ರೈಕರ್‌ ಮನದೀಪ್‌ ಸಿಂಗ್‌ ಬುಧವಾರ  ಹಾಕಿ ಪ್ರಿಯರ  ಮನ ಗೆದ್ದರು.

ಮನದೀಪ್‌ ಅವರ ಕೆಚ್ಚೆದೆಯ ಆಟದ ಬಲದಿಂದಾಗಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ಅಜ್ಲಾನ್‌ ಷಾ ಕಪ್‌ ಹಾಕಿ ಟೂರ್ನಿಯ ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ಜಯದ ಸಿಹಿ ಸವಿಯಿತು.

ಭಾರತ 4–3 ಗೋಲುಗಳಿಂದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ತನಗಿಂತಲೂ ಕೆಳಗಿನ ಸ್ಥಾನ ಹೊಂದಿರುವ ಜಪಾನ್‌ ತಂಡದ ಸವಾಲು ಮೀರಿ ನಿಂತಿತು.

ಇದರೊಂದಿಗೆ ಪೂರ್ಣ ಪಾಯಿಂಟ್‌ ಹೆಕ್ಕಿರುವ  ತಂಡ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಆಸೆಗೆ ಬಲ ತುಂಬಿ ಕೊಂಡಿದೆ. ಆಡಿರುವ ನಾಲ್ಕು ಪಂದ್ಯ ಗಳಿಂದ ತಂಡ ಏಳು ಪಾಯಿಂಟ್ಸ್‌ ಸಂಗ್ರಹಿಸಿದೆ.

ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ದಿಟ್ಟ ಆಟವಾಡಿದರೂ  ಹಾಲಿ ಚಾಂಪಿ ಯನ್‌ ಆಸ್ಟ್ರೇಲಿಯಾಕ್ಕೆ ಮಣಿದಿದ್ದ ಭಾರತ ತಂಡ, ಜಪಾನ್‌ ವಿರುದ್ಧದ ಪೈಪೋಟಿಯಲ್ಲಿ ಶುರುವಿನಿಂದಲೇ ಚುರುಕಿನ ಆಟ ಆಡಿ ಗಮನ ಸೆಳೆಯಿತು.

ಚೆಂಡು ಹೆಚ್ಚು ಸಮಯ ತಮ್ಮ ಬಳಿಯೇ ಇರುವಂತೆ ನೋಡಿಕೊಂಡ ಭಾರತದ ಆಟಗಾರರು ಪದೇ ಪದೇ ಜಪಾನ್‌ ರಕ್ಷಣಾ ಕೋಟೆಯ ಮೇಲೆ ದಾಳಿ ನಡೆಸುವ ತಂತ್ರ ಅನುಸರಿಸಿದರು.

ಎಂಟನೇ ನಿಮಿಷದಲ್ಲಿ ಚೆಂಡಿ ನೊಂದಿಗೆ ಆವರಣ ಪ್ರವೇಶಿಸಿದ ಭಾರ ತದ ಆಟಗಾರನನ್ನು ಜಪಾನ್‌ನ  ಆಟಗಾರ ಬೀಳಿಸಿದರು. ಹೀಗಾಗಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು.  ಈ ಅವಕಾಶವನ್ನು ಡ್ರ್ಯಾಗ್‌ಫ್ಲಿಕ್‌ ಪರಿಣತ ಆಟಗಾರ ರೂಪಿಂದರ್‌ ಪಾಲ್‌ ಸಿಂಗ್‌ ಚೆನ್ನಾಗಿ ಬಳಸಿಕೊಂಡರು. ಅವರು ಗುರಿ ಇಟ್ಟು ಕಳುಹಿಸಿದ ಚೆಂಡನ್ನು ತಡೆಯಲು ಜಪಾನ್‌ ತಂಡದ ಗೋಲ್‌ ಕೀಪರ್‌ ಸುಗುರು ಶಿಮ್ಮೊಟ್ಟೊ ಬಲಕ್ಕೆ  ಜಿಗಿದರಾದರೂ ಅವರ ಪ್ರಯತ್ನ ಫಲಿಸ ಲಿಲ್ಲ. ಹೀಗಾಗಿ ಭಾರತ ಗೋಲಿನ ಖಾತೆ ತೆರೆಯಿತು.
ಈ ಖುಷಿ ಹೆಚ್ಚು ಹೊತ್ತು ಉಳಿಯಲು ಜಪಾನ್‌ನ ಕಜುಮಾ ಮುರಾತ ಅವಕಾಶ ನೀಡಲಿಲ್ಲ. 10ನೇ ನಿಮಿಷದಲ್ಲಿ ಚೆಂಡನ್ನು ಭಾರತದ ಗೋಲು ಪೆಟ್ಟಿಗೆ ಯೊಳಗೆ ಸೇರಿಸಿದ ಅವರು 1–1ರ ಸಮಬಲಕ್ಕೆ ಕಾರಣರಾದರು.

14ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಪಡೆಯುವ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಅಪ್ಪಾನ್‌ ಯೂಸುಫ್‌ ಇದನ್ನು ಹಾಳು ಮಾಡಿದರು.

ಆ ನಂತರದ 25 ನಿಮಿಷಗಳ ಕಾಲ ಎರಡೂ ತಂಡಗಳೂ ಮುನ್ನಡೆಯ ಗೋಲು ಗಳಿಸಲು ತುರುಸಿನ ಪೈಪೋಟಿಗೆ ಇಳಿದವು. ಆದರೆ ಯಾವ ತಂಡಕ್ಕೂ ಗೋಲು ದಕ್ಕಲಿಲ್ಲ. 42ನೇ ನಿಮಿಷದಲ್ಲಿ ಜಪಾನ್‌ ತಂಡ ಭಾರತದ ರಕ್ಷಣಾ ವ್ಯೂಹ ಭೇದಿಸುವಲ್ಲಿ ಯಶಸ್ವಿಯಾಯಿತು.

ಚೆಂಡನ್ನು ಸೊಗಸಾದ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಆವರಣ ಪ್ರವೇಶಿಸಿದ ಹಿಯೆಟಾ ಯೊಶಿಹರಾ ಅವರನ್ನು ತಡೆಯಲು ಭಾರತದ ರಕ್ಷಣಾ ವಿಭಾಗದ ಆಟಗಾರರು ನುಗ್ಗಿದರು. ಇದರಿಂದ ಹಿಯೆಟಾ  ಗಲಿಬಿಲಿ ಗೊಳ್ಳಲಿಲ್ಲ. ಅವರು ಆವರಣದ ಬಲ ತುದಿಯಿಂದ ಮಿಂಚಿನ ಗತಿಯಲ್ಲಿ ಬಾರಿಸಿದ ಚೆಂಡು ಭಾರತದ ಗೋಲ್‌ ಕೀಪರ್‌ ಆಕಾಶ್‌ ಚಿಕ್ಟೆ ಅವರನ್ನು ವಂಚಿಸಿ ಗುರಿ ಸೇರುತ್ತಿದ್ದಂತೆ ಜಪಾನ್‌ ಪಾಳಯ ದಲ್ಲಿ ಸಂತಸದ ಹೊನಲು ಹರಿಯಿತು.

ಮನದೀಪ್‌ ಮೋಡಿ: 45ನೇ ನಿಮಿಷದ ಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಚೆಂಡಿ ನೊಂದಿಗೆ ಜಪಾನ್‌ ಆವರಣ ಪ್ರವೇಶಿ ಸಿದರು. ಈ ವೇಳೆ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ಅವರತ್ತ ನುಗ್ಗಿದರು. ಇದನ್ನು ಗಮನಿಸಿದ ಹರ್ಮನ್‌ಪ್ರೀತ್ ಚೆಂಡನ್ನು  ಮನದೀಪ್‌ ಅವರತ್ತ ತಳ್ಳಿದರು. ಇದನ್ನು ತಡೆದ ಮನ ದೀಪ್‌ ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ  ಗುರಿ ಮುಟ್ಟಿಸಿದರು.

ಹೀಗಾಗಿ ತಂಡ 2–2ರಲ್ಲಿ ಸಮಬಲ ಮಾಡಿಕೊಂಡಿತು. ಮೊದಲರ್ಧದ ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ (45ನೇ ನಿ)  ಗೆನ್ಕಿ ಮಿಟಾನಿ ಗೋಲು ದಾಖಲಿಸಿ ಜಪಾನ್‌ ತಂಡದ ಖುಷಿ ಹೆಚ್ಚಿಸಿದರು. 

ಭಾರತದ ಆವರಣದ ಒಳಗಿನಿಂದ ಮಿಟಾನಿ ‘ಫ್ಲಿಕ್‌’ ಮಾಡಿದ ಚೆಂಡನ್ನು ತಡೆಯಲು ಗೋಲ್‌ಕೀಪರ್‌ ಚಿಕ್ಟೆ ಮೇಲಕ್ಕೆ  ಜಿಗಿದರು. ಆದರೆ ಚೆಂಡು ಅವರ ಕೈಗವಸಿನ ಅಂಚಿಗೆ ತಾಗಿ ಗೋಲು ಪೆಟ್ಟಿಗೆಯೊಳಗೆ ಹೋಗಿ ಬಿತ್ತು.

2–3ರ ಹಿನ್ನಡೆಯೊಂದಿಗೆ ವಿರಾಮ ಕ್ಕೆ ಹೋದ ಭಾರತ ತಂಡ ದ್ವಿತೀಯಾರ್ಧ ದಲ್ಲಿ ಭಿನ್ನ ರಣತಂತ್ರ ಹೆಣೆದು ಅಂಗಳಕ್ಕಿಳಿಯಿತು.  51ನೇ ನಿಮಿಷದಲ್ಲಿ 30 ಗಜ ದೂರದಿಂದ ಸರ್ದಾರ್‌ ಸಿಂಗ್‌ ಬಾರಿಸಿದ ಚೆಂಡನ್ನು ಜಪಾನ್‌ ಗೋಲ್‌ಕೀಪರ್‌  ಶಿಮ್ಮೊಟ್ಟೊ ತಡೆದರು. ಅವರ ಪ್ಯಾಡ್‌ಗೆ ತಾಗಿ ತಮ್ಮತ್ತ ಬಂದ ಚೆಂಡನ್ನು ಗೋಲುಪೆಟ್ಟಿಗೆಯ ಸನಿಹದಲ್ಲೇ ಇದ್ದ ಮನದೀಪ್‌ ಗುರಿ ತಲುಪಿಸಲು ತಡ ಮಾಡಲಿಲ್ಲ. ಹೀಗಾಗಿ ತಂಡ 3–3ರಲ್ಲಿ ಸಮಬಲ ಮಾಡಿ ಕೊಂಡಿತು. ಆ ನಂತರದ ಅವಧಿಯಲ್ಲಿ  ಭಾರತ ದ ಆಟ ಇನ್ನಷ್ಟು ರಂಗು ಪಡೆದು ಕೊಂಡಿತು. 58ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮನದೀಪ್‌ ಅದನ್ನು ಗುರಿ ಮುಟ್ಟಿ ಸುತ್ತಿದ್ದಂತೆ ಭಾರತದ ಆಟ ಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಮಲೇಷ್ಯಾ ವಿರುದ್ಧ ಸೆಣಸಲಿದೆ.

ಆಸ್ಟ್ರೇಲಿಯಾ ಜಯದ ಓಟ
ಹಾಲಿ ಚಾಂಪಿಯನ್‌ ಆಸ್ಟ್ರೇ ಲಿಯಾ ತಂಡ ಅಜ್ಲಾನ್‌ ಷಾ ಕಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಕಾಂಗರೂಗಳ ನಾಡಿನ ತಂಡ 2–1 ಗೋಲು ಗಳಿಂದ ಬ್ರಿಟನ್‌ ತಂಡ ವನ್ನು ಸೋಲಿಸಿತು. ಮ್ಯಾಟ್‌ ಡಾಸನ್‌ ಅವರು 52ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT