ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಗೆದ್ದ ರಾಹುಲ್‌ ತ್ರಿಪಾಠಿ ಆಟ

Last Updated 3 ಮೇ 2017, 20:26 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಯುವ ಆಟಗಾರ ರಾಹುಲ್‌ ತ್ರಿಪಾಠಿ (93; 52ಎ, 9ಬೌಂ, 7ಸಿ) ಬುಧವಾರ ಭಾರತದ ‘ಕ್ರಿಕೆಟ್‌ ಕಾಶಿ’ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸುವ ಅವಕಾಶ ಕಳೆದುಕೊಂಡರು. ಆದರೆ ಕ್ರೀಸ್‌ನಲ್ಲಿದ್ದಷ್ಟು ಸಮಯ ಮನಮೋಹಕ ಆಟವಾಡಿ ಅಭಿಮಾನಿಗಳನ್ನು ರಂಜಿಸಿದರು.

ಅವರ ಅಮೋಘ ಆಟದ ಬಲದಿಂದ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡ ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯದಲ್ಲಿ  4 ವಿಕೆಟ್‌ಗಳಿಂದ ಎರಡು ಬಾರಿಯ ಚಾಂಪಿಯನ್‌ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡವನ್ನು ಸೋಲಿಸಿತು.  ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155ರನ್‌ ಗಳಿಸಿತು. ಸವಾಲಿನ ಗುರಿಯನ್ನು ಸೂಪರ್‌ಜೈಂಟ್‌ 19.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ರಹಾನೆ ವೈಫಲ್ಯ:ಗುರಿ ಬೆನ್ನಟ್ಟಿದ  ಸೂಪರ್‌ಜೈಂಟ್‌ ತಂಡದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ (11; 9ಎ, 2 ಬೌಂ) ಅವರು ಬೇಗನೆ ಔಟಾದರು. ಎರಡನೇ ಓವರ್‌ನಲ್ಲಿ ಉಮೇಶ್‌ ಯಾದವ್‌, ರಹಾನೆ ವಿಕೆಟ್‌ ಕೆಡವಿ ಕೆಕೆಆರ್‌ಗೆ ಮೇಲುಗೈ ತಂದಿತ್ತರು.

ಇದರ ಬೆನ್ನಲ್ಲೇ ನಾಯಕ ಸ್ಮೀವನ್‌ ಸ್ಮಿತ್‌ (9) ಮತ್ತು ಮನೋಜ್‌ ತಿವಾರಿ (8) ಔಟಾಗಿದ್ದರಿಂದ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು. ಆದರೆ ರಾಹುಲ್‌ ತ್ರಿಪಾಠಿ ಸುಂದರ ಆಟ ಆಡಿ ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದರು.

ನೇಥನ್ ಕೌಲ್ಟರ್‌ನೈಲ್‌ ಬೌಲ್‌ ಮಾಡಿದ ಮೂರನೇ ಓವರ್‌ನಲ್ಲಿ ಮೂರು  ಬೌಂಡರಿ ಮತ್ತು ಸಿಕ್ಸರ್‌ ಸಹಿತ 19 ರನ್‌ ಗಳಿಸಿದ ತ್ರಿಪಾಠಿ ಆ ನಂತ ರವೂ ಗರ್ಜಿಸಿದರು. ಉಮೇಶ್‌ ಯಾದವ್‌, ಕ್ರಿಸ್‌ ವೋಕ್ಸ್‌ ಮತ್ತು ಸುನಿಲ್‌ ನಾರಾಯಣ್‌ ಅವರ ಎಸೆತಗಳನ್ನೂ ಸಮರ್ಥ ವಾಗಿ ಎದುರಿಸಿದ ಅವರು ಅಂಗಳದಲ್ಲಿ ಬೌಂಡರಿ, ಸಿಕ್ಸರ್‌
ಗಳ ಚಿತ್ತಾರ ಬಿಡಿಸಿದರು. ತಾವೆದುರಿಸಿದ 20ನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿ ಅರ್ಧಶತಕದ ಸಂಭ್ರಮ ಆಚರಿಸಿದ ಅವರು ಆನಂತರವೂ ಆರ್ಭಟಿಸಿದರು. ಕುಲದೀಪ್‌ ಯಾದವ್‌ ಬೌಲ್‌ ಮಾಡಿದ 13ನೇ ಓವರ್‌ನಲ್ಲಿ ಅವರು ‘ಹ್ಯಾಟ್ರಿಕ್‌’ ಸಿಕ್ಸರ್‌ ಸಿಡಿಸಿದಾಗ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು.

93 ರನ್‌ ಗಳಿಸಿದ್ದ ವೇಳೆ ಅವರು ಕ್ರಿಸ್‌ ವೋಕ್ಸ್‌ ಬೌಲಿಂಗ್‌ನಲ್ಲಿ ಪೊವೆಲ್‌ಗೆ ಕ್ಯಾಚ್‌ ನೀಡಿ ಹೊರ ನಡೆದರು.

ಕೊನೆಯ ಓವರ್‌ನಲ್ಲಿ ಪುಣೆ ಗೆಲು ವಿಗೆ 5ರನ್‌ ಬೇಕಿದ್ದವು. ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಬೌಲ್‌ ಮಾಡಿದ ಓವರ್‌ನ ಎರಡನೇ ಎಸೆತವನ್ನು ಡೇನಿ ಯಲ್‌ ಕ್ರಿಸ್ಟಿಯನ್‌ ಸಿಕ್ಸರ್‌ಗಟ್ಟಿ ತಂಡದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಆಘಾತ: ಬ್ಯಾಟಿಂಗ್‌ ಆರಂಭಿಸಿದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಕ್ಕೆ ದಿನದ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ನಾಯಕ ಗೌತಮ್‌ ಗಂಭೀರ್‌ (24; 19ಎ, 3ಬೌಂ, 1ಸಿ) ಜೊತೆ ಇನಿಂಗ್ಸ್‌ ಆರಂಭಿಸಿದ ಸುನಿಲ್‌ ನಾರಾಯಣ್‌ ಸೊನ್ನೆ ಸುತ್ತಿದರು. 

ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಶೆಲ್ಡನ್‌ ಜಾಕ್ಸನ್‌ (10; 9ಎ, 2ಬೌಂ) ಕೂಡ ಮೋಡಿ ಮಾಡಲಿಲ್ಲ. ವಾಷಿಂಗ್ಟನ್‌ ಸುಂದರ್‌ ಹಾಕಿದ ನಾಲ್ಕನೇ ಓವರ್‌ನ ಆರನೇ ಎಸೆತದಲ್ಲಿ ಅವರು ‘ಹಿಟ್‌ ವಿಕೆಟ್‌’ ಆದರು.

ಬಳಿಕ ಗಂಭೀರ್‌ ಆಟ ಕಳೆಗಟ್ಟಿತು. ವಾಷಿಂಗ್ಟನ್‌ ಸುಂದರ್‌ ಬೌಲ್‌ ಮಾಡಿದ ಆರನೇ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ ಅವರು ಮರು ಎಸೆತದಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇದರ ಬೆನ್ನಲ್ಲೇ ಯೂಸುಫ್‌ ಪಠಾಣ್‌ (4) ಇಮ್ರಾನ್‌ ತಾಹಿರ್‌ಗೆ ವಿಕೆಟ್‌ ಒಪ್ಪಿಸಿದರು.

ಮನೀಷ್‌–ಕಾಲಿನ್‌ ಜೊತೆಯಾಟ: ಈ ಹಂತದಲ್ಲಿ ಒಂದಾದ ಕರ್ನಾಟಕದ ಮನೀಷ್‌ ಪಾಂಡೆ (37; 32ಎ, 4ಬೌಂ, 1ಸಿ) ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌ (36; 19ಎ, 3ಬೌಂ, 2ಸಿ) ಸುಂದರ ಇನಿಂಗ್ಸ್‌ ಕಟ್ಟಿದರು.

ಸಂಕ್ಷಿಪ್ತ ಸ್ಕೋರ್‌:
ಕೋಲ್ಕತ್ತ ನೈಟ್‌ರೈಡರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 (ಗೌತಮ್‌ ಗಂಭೀರ್‌ 24, ಶೆಲ್ಡನ್‌ ಜಾಕ್ಸನ್‌ 10, ಮನೀಷ್‌ ಪಾಂಡೆ 37, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 36, ಸೂರ್ಯಕುಮಾರ್‌ ಯಾದವ್‌ ಔಟಾಗದೆ 30; ಜಯದೇವ್‌ ಉನದ್ಕತ್‌ 28ಕ್ಕೆ2,  ವಾಷಿಂಗ್ಟನ್‌ ಸುಂದರ್‌ 18ಕ್ಕೆ2, ಇಮ್ರಾನ್‌ ತಾಹಿರ್‌ 36ಕ್ಕೆ1).   ರೈಸಿಂಗ್‌ ಪುಣೆ ಸೂಪರ್‌ಜೈಂಟ್‌: 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 158 (ಅಜಿಂಕ್ಯ ರಹಾನೆ 11, ರಾಹುಲ್‌ ತ್ರಿಪಾಠಿ 93, ಬೆನ್‌ ಸ್ಟೋಕ್ಸ್‌ 14, ಡೇನಿ ಯಲ್‌ ಕ್ರಿಸ್ಟಿಯನ್‌ ಔಟಾಗದೆ 9; ಕ್ರಿಸ್‌ ವೋಕ್ಸ್ 18ಕ್ಕೆ3, ಉಮೇಶ್‌ ಯಾದವ್‌ 23ಕ್ಕೆ1, ಸುನಿಲ್‌ ನಾರಾಯಣ್‌ 28ಕ್ಕೆ1, ಕುಲದೀಪ್‌ ಯಾದವ್‌ 35ಕ್ಕೆ1).
ಫಲಿತಾಂಶ: ಪುಣೆ ಸೂಪರ್‌ಜೈಂಟ್‌ ತಂಡಕ್ಕೆ 4 ವಿಕೆಟ್‌ ಗೆಲುವು.
ಪಂದ್ಯಶ್ರೇಷ್ಠ: ರಾಹುಲ್‌ ತ್ರಿಪಾಠಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT