ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ದೃಷ್ಟಿಯನ್ನೇ ಬದಲಿಸಿದ ಪ್ರಕರಣ

Last Updated 5 ಮೇ 2017, 20:02 IST
ಅಕ್ಷರ ಗಾತ್ರ

ನವದೆಹಲಿ: 2012ರ ಡಿಸೆಂಬರ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದು ಅವರು ಸಿಂಗಪುರದ ಆಸ್ಪತ್ರೆಯಲ್ಲಿ ಸಾಯುವವರೆಗಿನ 13 ದಿನಗಳು, ಲೈಂಗಿಕ ದೌರ್ಜನ್ಯವನ್ನು ಭಾರತ ನೋಡುವ ರೀತಿಯನ್ನೇ ಬದಲಾಯಿಸಿಬಿಟ್ಟಿತು.

ಡಿ.16ರಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಮರುದಿನವೇ ದೆಹಲಿಯಲ್ಲಿ ದೊಡ್ಡವರು ಚಿಕ್ಕವರೆನ್ನದೆ ಅಸಂಖ್ಯ ಜನರು ಬೀದಿಗೆ ಬಂದರು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.

ಅತ್ಯಾಚಾರ ಮತ್ತು ದೌರ್ಜನ್ಯದ ಘೋರ ವಿವರಗಳು ಬಹಿರಂಗವಾಗುತ್ತಿದ್ದಂತೆಯೇ ಪ್ರತಿಭಟನೆ ಇನ್ನಷ್ಟು ಬಲವಾಯಿತು. ಇದು ಕೇಂದ್ರ ಸರ್ಕಾರವನ್ನು ಬಲವಾಗಿ ತಟ್ಟಿದ್ದಷ್ಟೇ ಅಲ್ಲ, ಅತ್ಯಾಚಾರ ತಡೆ ಕಾನೂನಿನಲ್ಲಿ ಬದಲಾವಣೆಗೂ ಕಾರಣವಾಯಿತು.

ಇಡೀ ದೇಶವೇ ಆಘಾತದಿಂದ ಅದುರಿ ಹೋಗಿತ್ತು. ಲೈಂಗಿಕ ದೌರ್ಜನ್ಯ ತಡೆಯುವ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸಲುವುದಕ್ಕಾಗಿ ಸಲಹೆಗಳನ್ನು ನೀಡಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೆ.ಎಸ್‌. ವರ್ಮಾ ನೇತೃತ್ವದಲ್ಲಿ ಆಯೋಗವೊಂದನ್ನು ಕೇಂದ್ರ ಸರ್ಕಾರ ರಚಿಸಿತು.

ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆ ಕಾನೂನಿಗೆ ಕಠಿಣ ನಿಯಮಗಳನ್ನು ಸೇರಿಸಿಕೊಳ್ಳಲು ವರ್ಮಾ ಆಯೋಗ ಹಲವು ಸಲಹೆಗಳನ್ನು ನೀಡಿತು. ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ನೀಡುವುದನ್ನು ಆಯೋಗ ವಿರೋಧಿಸಿತು.

ಆದರೆ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ನಿರ್ಭಯಾ ಪ್ರಕರಣ ಕಾರಣವಾಯಿತು. ಬಾಲ ನ್ಯಾಯ ಕಾಯ್ದೆಯಲ್ಲಿಯೂ ತಿದ್ದುಪಡಿ ಮಾಡಲಾಯಿತು. 16–18 ವರ್ಷದ ಬಾಲಕರು ಹೀನ ಕೃತ್ಯಗಳನ್ನು ಎಸಗಿದರೆ ಅವರನ್ನು ಭಾರತೀಯ ದಂಡ ಸಂಹಿತೆ ಅಡಿಯಲ್ಲಿಯೇ ವಿಚಾರಣೆ ನಡೆಸುವಂತೆ ತಿದ್ದುಪಡಿ ತರಲಾಯಿತು.

ನಿರ್ಭಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿ ಮೂರೇ ವರ್ಷದಲ್ಲಿ ಬಾಲಗೃಹದಿಂದ ಬಿಡುಗಡೆಯಾದದ್ದು ಬಾಲ ನ್ಯಾಯ ಕಾಯ್ದೆ ತಿದ್ದುಪಡಿ ತ್ವರಿತಗೊಳ್ಳುವಂತೆ ಮಾಡಿತು. ಬಾಲಾಪರಾಧಿಯ ಬಿಡುಗಡೆಗೆ ನಿರ್ಭಯಾ ಕುಟುಂಬ ಆಕ್ರೋಶ ವ್ಯಕ್ತಪಡಿಸಿತು.

‘ನಿರ್ಭಯಾ ಸಾಯದಿದ್ದರೆ 28 ತುಂಬುತ್ತಿತ್ತು’
ನವದೆಹಲಿ: ಐದು ವರ್ಷಗಳ ಹಿಂದೆ ರಾತ್ರಿ ಕೊರೆಯುವ ಚಳಿಯಲ್ಲಿ  ಐವರು ಕಾಮುಕರ ಪೈಶಾಚಿಕ ಕೃತ್ಯಕ್ಕೆ ಸಿಲುಕಿ ಸಾಯದಿದ್ದರೆ ನಿರ್ಭಯಾಗೆ ಮುಂದಿನ ಬುಧವಾರ 28 ವರ್ಷ ತುಂಬುತ್ತಿತ್ತು.

ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಮರಣ ದಂಡನೆಯನ್ನು ಕಾಯಂಗೊಳಿಸಿದ್ದರಿಂದ  ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

‘ನಮಗೆ ನ್ಯಾಯ ಸಿಕ್ಕಿದೆ, ಇದಕ್ಕಾಗಿಯೇ ಇದುವರೆಗೆ ಬದುಕಿ ಉಳಿದಿದ್ದೇನೆ’ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದರು.
‘ಇಂದು ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡುತ್ತೇನೆ’ ಎಂದು ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್ ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಂತೋಷವಿದೆ ಎಂದ ಅವರು, ನ್ಯಾಯ ತೀರ್ಮಾನಕ್ಕೆ ನ್ಯಾಯಾಲಯಗಳು ವಿಳಂಬ ಮಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಎಷ್ಟೋ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.

ಆಶಾದೇವಿ ನೇತೃತ್ವದಲ್ಲಿ ಅನೇಕ ಪ್ರತಿಭಟನೆಗಳು ನಡೆದ ನಂತರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ಬಂದಿದೆ.
ಈಗ ನಿರ್ಭಯಾ ಕುಟುಂಬವು ಅತ್ಯಾಚಾರ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ‘ನಿರ್ಭಯಾ ಜ್ಯೋತಿ ಟ್ರಸ್ಟ್‌’ ನಡೆಸುತ್ತಿದೆ.

ಬಾಲಾಪರಾಧಿ ಈಗ ದಕ್ಷಿಣ ಭಾರತದಲ್ಲಿ ಅಡುಗೆಭಟ್ಟ
ನವದೆಹಲಿ (ಪಿಟಿಐ): 
‘ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಈಗ, ದಕ್ಷಿಣ ಭಾರತದ ಕರಾವಳಿ ಪಟ್ಟಣವೊಂದರ ಹೋಟೆಲ್‌ ಒಂದರಲ್ಲಿ ಅಡುಗೆ ಭಟ್ಟನಾಗಿ ದುಡಿಯುತ್ತಿದ್ದಾನೆ’ ಎಂದು ಸ್ವಯಂ ಸೇವಾ ಸಂಘಟನೆಯೊಂದು (ಎನ್‌ಜಿಒ) ಹೇಳಿದೆ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದುಡಿಯುತ್ತಿರುವ ಈ ಎನ್‌ಜಿಒ, ಬಾಲಾರೋಪಿ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗುತ್ತಿದೆ.

‘ಅತ್ಯಾಚಾರದ ವೇಳೆ ಈ ಬಾಲಾಪರಾಧಿ ಅತ್ಯಂತ ಪೈಶಾಚಿಕವಾಗಿ ವರ್ತಿಸಿದ್ದ ಎಂಬುದು ಮಾಧ್ಯಮಗಳು ಕಟ್ಟಿದ ಕಥೆ ಅಷ್ಟೆ. ಇದಕ್ಕೆ ಯಾವುದೇ ಪುರಾವೆ ಇಲ್ಲ. ಬಾಲಮಂದಿರದಲ್ಲಿ ಆತ ಅಡುಗೆ ಮಾಡುವುದನ್ನು ಕಲಿತಿದ್ದ. ಅದರ ಮೂಲಕವೇ ಆತ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾನೆ’ ಎಂದು ಅದು ಹೇಳಿದೆ.

‘ಆತನ ಗುರುತು ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಬೇಕಿತ್ತು. ಹೀಗಾಗಿ ಆತನನ್ನು ದೆಹಲಿಯಿಂದ ಬಹಳ ದೂರ, ದಕ್ಷಿಣ ಭಾರತಕ್ಕೆ ಕರೆತಂದಿದ್ದೇವೆ. ಆತ ಈಗ ಕೆಲಸ ಮಾಡುತ್ತಿರುವ ಹೋಟೆಲ್‌ನ ಮಾಲೀಕರಿಗೂ, ಆತನ ಕಥೆ ಮತ್ತು ನಿಜವಾದ ಹೆಸರು ತಿಳಿದಿಲ್ಲ. ಅದು ಗೊತ್ತಾಗಬಾರದು ಎಂದೇ
ಪದೇ–ಪದೇ ಹೋಟೆಲ್‌ ಬದಲಿಸುತ್ತಿದ್ದೇವೆ’ ಎಂದು ಅದು ಹೇಳಿದೆ.
*
‘ಕಠಿಣ ಶಿಕ್ಷೆಯಷ್ಟೇ ಸಾಲದು, ಯೋಚನೆಯೇ ಬದಲಾಗಬೇಕು’
ನವದೆಹಲಿ: 
ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯ ತಡೆಗೆ ಜನರ ಚಿಂತನಾ ಕ್ರಮವೇ ಬದಲಾಗಬೇಕಾದ ಅಗತ್ಯ ಇದೆ. ಲಿಂಗತ್ವ ನ್ಯಾಯದ ಹೋರಾಟದಲ್ಲಿ ಜಯಗಳಿಸಲು ಕಠಿಣ ಕಾನೂನು ಮತ್ತು ಶಿಕ್ಷೆ ಮಾತ್ರ ಸಾಕಾಗದು ಎಂದು ನಿರ್ಭಯಾ ಅಪರಾಧಿಗಳ ಮರಣ ದಂಡನೆ ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಹೇಳಿದೆ.

ಲಿಂಗತ್ವ ಸಮಾನತೆಯನ್ನು ಕಲಿಕಾ ವಿಷಯವಾಗಿ ಪಠ್ಯಕ್ಕೆ ಸೇರಿಸಬೇಕು ಎಂದು ನ್ಯಾಯಮೂರ್ತಿ ಆರ್‌ ಭಾನುಮತಿ ಹೇಳಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಭಾನುಮತಿ ಅವರು ಪ್ರತ್ಯೇಕ ತೀರ್ಪು ನೀಡಿದ್ದಾರೆ.

ದೌರ್ಜನ್ಯ ಶೇ 43ರಷ್ಟು ಹೆಚ್ಚಳ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ 2015ರ ವರದಿಯನ್ನು ನ್ಯಾಯಪೀಠ ಉಲ್ಲೇಖಿಸಿತು. ಈ ವರ್ಷ ಮಹಿಳೆಯರ ವಿರುದ್ಧ 3.27 ಲಕ್ಷ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 2011ಕ್ಕೆ ಹೋಲಿಸಿದರೆ 2015ರಲ್ಲಿ ದೌರ್ಜನ್ಯ ಶೇ  43ರಷ್ಟು ಏರಿಕೆಯಾಗಿದೆ.

2005ರಿಂದ 2015ರ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಅಡಿಯಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ 110.5ರಷ್ಟು ಏರಿಕೆಯಾಗಿದೆ. 2015ರಲ್ಲಿ ದೆಹಲಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಶೇ 53.9ರಷ್ಟು ಮಹಿಳೆಯರ ವಿರುದ್ಧದ ಪ್ರಕರಣಗಳಾಗಿವೆ. ಇದರಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವುದು ನೀತಿ ನಿರೂಪಕರಿಗೆ ಅತ್ಯಂತ ದೊಡ್ಡ ಸವಾಲು. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ ಮಾತ್ರ ಅಲ್ಲ, ಮಾನವ ಹಕ್ಕುಗಳ ವಿಚಾರ ಎಂದು ಪೀಠ ಹೇಳಿದೆ.

ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರು ಗಣನೀಯ ಪ್ರಗತಿ ಸಾಧಿಸಿದ್ದಾರೆ. ಮಹಿಳಾ ಹಕ್ಕುಗಳ ಬಗೆಗಿನ ಜಾಗೃತಿಯೂ ಹೆಚ್ಚಾಗಿದೆ. ಆದರೆ ಮಹಿಳೆಯರ ಮೇಲಿನ ಗೌರವ ಕುಗ್ಗಿದೆ. ಅವರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ನ್ಯಾಯಮೂರ್ತಿ ಭಾನುಮತಿ ಅವರು ಕಳವಳ ವ್ಯಕ್ತಪಡಿಸಿದರು.

ದೌರ್ಜನ್ಯ ತಡೆಗೆ ‘ಸುಪ್ರೀಂ’ ಸಲಹೆ

* ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಲಿಂಗ ಸಮಾನತೆಯ ಜಾಗೃತಿಗಾಗಿ ಫಲಕ ಅಳವಡಿಸಿ
* ಬೀದಿ ದೀಪ ಅವಳಡಿಸಿ, ಬಸ್‌ ನಿಲ್ದಾಣಗಳಲ್ಲಿ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ
* ರಾತ್ರಿ ಹೊತ್ತಿನಲ್ಲಿ ಹೆಚ್ಚುವರಿ ಪೊಲೀಸ್‌ ಗಸ್ತು ವ್ಯವಸ್ಥೆ ಮಾಡಿ
* ಉದ್ಯಾನಗಳು, ಬೀದಿಗಳಲ್ಲಿ ಪೊಲೀಸ್‌ ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಿ
* ಮಹಿಳೆಯರ ತುರ್ತು ನೆರವಿಗೆ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿ

‘ಸುಪ್ರೀಂ’ ಹೇಳಿಕೆಗಳು
* ಮಾನವೀಯತೆಗೆ ಬೆಲೆಯೇ ಇಲ್ಲದ ಬೇರೊಂದು ಜಗತ್ತಿನಲ್ಲಿ ಈ ಪ್ರಕರಣ ನಡೆದಿದೆ ಎಂಬಂತೆ ತೋರುತ್ತಿದೆ.

* ಮರಣಕ್ಕೆ ಮೊದಲು ಸಂಜ್ಞೆ ಮೂಲಕ ನಿರ್ಭಯಾ  ನೀಡಿದ್ದ ಹೇಳಿಕೆ ಅತ್ಯಂತ ವಿಶ್ವಾಸಾರ್ಹ. ವೈದ್ಯಕೀಯ ಮತ್ತು ಇತರ ಸಾಕ್ಷ್ಯಗಳು ಅದನ್ನು ಪುಷ್ಟೀಕರಿಸಿವೆ.
* ಯಾವುದಾದರೂ ಅಪರಾಧ ಪ್ರಕರಣದಲ್ಲಿ ಮರಣ ದಂಡನೆ ನೀಡಲೇಬೇಕಿದ್ದರೆ ಅದು ಇದೇ ಪ್ರಕರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT