ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಯಿಯ ಒಳಬದುಕಿನ ಚಿತ್ರಗಳು

Last Updated 6 ಮೇ 2017, 19:30 IST
ಅಕ್ಷರ ಗಾತ್ರ

ಬಂಗ್ಲೆ ಮನೆಯ ಪ್ರಭು
ಲೇ:
ಶ್ರೀನಿವಾಸ ಜೋಕಟ್ಟೆ
ಪ್ರ: ಶ್ರೀರಾಮ ಪ್ರಕಾಶನ, 893/ಡಿ, 3ನೇ ಕ್ರಾಸ್, ನೆಹರೂ ನಗರ, ಪೂರ್ವ ಬಡಾವಣೆ, ಮಂಡ್ಯ

*

ಮುಂಬಯಿ ಮಹಾನಗರವು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕಾಣಿಕೆಯನ್ನು ನೀಡಿದೆ. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಡಾ. ವ್ಯಾಸರಾವ್ ನಿಂಜೂರ್, ಮಿತ್ರಾ ವೆಂಕಟ್ರಾಜ್, ಜಯಂತ ಕಾಯ್ಕಿಣಿ ಮುಂತಾದವರು ತಮ್ಮ ಕಥನಗಳಲ್ಲಿ ರೂಪಿಸಿದ ಮುಂಬಯಿ ಬದುಕು ಕನ್ನಡದ ಪ್ರಜ್ಞೆಯಲ್ಲಿ ದಾಖಲಾಗಿದೆ. ಇವರೆಲ್ಲರ ಒಡನಾಟದಲ್ಲಿ ಬೆಳೆದ ಮುಂಬಯಿಯ ಶ್ರೀನಿವಾಸ ಜೋಕಟ್ಟೆ ಮುಂದಿನ ತಲೆಮಾರಿನ ಸಂವೇದನೆಯನ್ನು ತಮ್ಮ ಕತೆಗಳಲ್ಲಿ ದಾಖಲು ಮಾಡುತ್ತಾ ಬಂದಿದ್ದಾರೆ. ‘ಬಂಗ್ಲೆ ಮನೆಯ ಪ್ರಭು’ ಎಂಬ ಈ ಕಥಾಸಂಕಲನದಲ್ಲಿ ದಾಖಲಾಗಿರುವ ಮುಂಬಯಿ ಬದುಕಿನ ಆಯಾಮಗಳನ್ನು ‘ವ್ಯಕ್ತಿಯ ಒಳಬದುಕಿನ ಆಯಾಮಗಳು’ ಎಂದು ಗುರುತಿಸಬಹುದು.

ಈ ಸಂಕಲನದಲ್ಲಿರುವ ಹತ್ತು ಕತೆಗಳ ಪೈಕಿ – ‘ಬಂಗ್ಲೆ ಮನೆಯ ಪ್ರಭು’ ಒಂದು ಮಾತ್ರ ಪೂರ್ತಿಯಾಗಿ ದಕ್ಷಿಣ ಕನ್ನಡದ ಹಿನ್ನೆಲೆಯಿರುವ ಕತೆ. ಮನುಷ್ಯಸಹಜ ಭಾವನೆಗಳಿಲ್ಲದೆ, ಹೆಂಡತಿ–ಮಕ್ಕಳನ್ನೂ ಕೂಡಾ ವ್ಯವಹಾರದ ದೃಷ್ಟಿಯಿಂದಲೇ ನಡೆಸಿಕೊಂಡ ಕಲ್ಲುಮನಸ್ಸಿನ ಶ್ರೀಮಂತನೊಬ್ಬನ ಕತೆಯಿದು. ಕೊನೆಗೆ ನಿರೂಪಕ ಹೆಣೆದ ಒಂದು ವ್ಯೂಹದಿಂದಾಗಿ ಬಂಗ್ಲೆ ಮನೆಯ ಪ್ರಭುವಾಗಿದ್ದ ಮುದುಕನಿಗೆ ಪ್ರಾಣಭಯ ಕಾಡಿ, ತಾನು ಮನೆಗೆ ಸೇರಿಸದೆ ಬಾಡಿಗೆ ಮನೆಯಲ್ಲಿರಲು ಕಳುಹಿಸಿದ್ದ ಮಗನನ್ನು ಮನೆಗೆ ಕರೆಸಿಕೊಳ್ಳುತ್ತಾನೆ.

‘ಗೋಲಿ’ ಎನ್ನುವ ಕತೆಯು ಮುಂಬಯಿಯಲ್ಲಿ ಬ್ರಾಹ್ಮಣ ವೈದಿಕ ವೃತ್ತಿಯ ಯುವಕನೊಬ್ಬನ ಬದುಕಿನ ಚಿತ್ರಣವಾಗಿದೆ. ಈ ಕಥೆಯ ನಾಯಕ ಶ್ರೀಪತಿ, ಮುಂಬಯಿಯ ಒದ್ದಾಟದ ಬದುಕು ತನ್ನನ್ನು ಎಲ್ಲಿಗೂ ಒಯ್ಯದೆ ಒಂದು ವೃತ್ತದೊಳಗೆ ಸಿಲುಕಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡು ಊರಿಗೆ ಮರಳಲು ನಿರ್ಧರಿಸುತ್ತಾನೆ.  

‘ಕನಸಿನ ಬೀಜ ಹಸಿರಾಗಿ ಚಿಗುರೊಡೆದು’ ಕತೆಯಲ್ಲಿ ನಾಯಕ ತನ್ನ ದಕ್ಷಿಣಕನ್ನಡದ ಮನೆಯನ್ನು, ನೆಲೆಯನ್ನು ಕಳೆದುಕೊಂಡು ಮುಂಬಯಿಯ ವಾಸಿಯಾಗಿಬಿಟ್ಟಿದ್ದಾನೆ. ಒಂದುಸಲ ಊರಿಗೆ ಬರುವ ನಿರೂಪಕ ತನ್ನ ಮನೆಯಿದ್ದ ಸ್ಥಳ ಈಗ ಬಹುರಾಷ್ಟ್ರೀಯ ಕಂಪೆನಿಯ ವಶವಾಗಿ ನೆಲಸಮವಾಗಿರುವುದನ್ನು, ಹಿಂದಿನ ಆ ಹಳ್ಳಿ ಪ್ರದೇಶವೆಲ್ಲ ನಗರದ ಕಳೆಹೊತ್ತು ವಿದ್ಯುದ್ದೀಪಗಳಿಂದ ಬೆಳಗುತ್ತಿರುವ ಬದಲಾವಣೆಯನ್ನು ನಿರ್ಲಿಪ್ತನಾಗಿ ಕಾಣುತ್ತಾನೆ. ತಮ್ಮ ಹಿಂದಿನ ಮನೆಯನ್ನು ನೆನೆದು ಆ ಕಾಲದ ಬದುಕನ್ನು ಕಲ್ಪಿಸಿಕೊಳ್ಳುತ್ತಾನೆ. ಅವನ ಬಾಲ್ಯದಲ್ಲಿದ್ದ ಹಳ್ಳಿ ಈಗಿಲ್ಲ. ಬದಲಾವಣೆಯ ಬಗ್ಗೆ ಹಳಹಳಿಕೆ ಇದ್ದರೂ ನಾಯಕ ಸದಾಶಿವ ಏಕಪಕ್ಷೀಯ ತೀರ್ಮಾನಕ್ಕೆ ಬರುವುದಿಲ್ಲ. ‘ಅಪ್ಪನ ಶವ ಸಂಸ್ಕಾರ ನಡೆಸಿದ ಆ ಗದ್ದೆಯ ಮೇಲೆ ಕಟ್ಟಡಗಳು ಎದ್ದಿವೆ... ಸಾಂಸ್ಕೃತಿಕವಾಗಿ ಸದ್ದು ಮಾಡುತ್ತಿದ್ದ ಈ ಪುಟ್ಟ ಊರು ಹೊಸ ರೂಪ ಪಡೆಯುತ್ತಿರುವುದನ್ನು ಕಂಡು ಆ ಕ್ಷಣಕ್ಕೆ ಅದು ಸರಿಯೋ  ತಪ್ಪೋ ಎನ್ನುವುದು ಸದಾಶಿವನಿಗೆ ತಿಳಿಯಲಿಲ್ಲ. ಬೈಕ್ ಮುಂದೆ ಓಡುತ್ತಿತ್ತು’ – ಹೀಗೆ ಕತೆ ಕೊನೆಗೊಳ್ಳುತ್ತದೆ. ಬೈಕ್ ಮುಂದೆ ಓಡುವುದು ಕಾಲದ ನಡೆಗೆ ಸಂಕೇತವಾಗಿದೆ. ಹಾಗೆ ಕಾಲ ಓಡುತ್ತಿರುವುದರಿಂದ ಸರಿಯೋ ತಪ್ಪೋ ಎಂದು ಹೇಳಲು ಸಾಧ್ಯವಾಗದು. ಘಟನೆಗಳು ನಡೆಯುವ ಕಾಲದಲ್ಲಿ ಅವುಗಳ ಜೊತೆಗೇ ಇದ್ದು ತೀರ್ಮಾನ ಹೇಳುವುದು ಸುಲಭವಲ್ಲ.

‘ಗುಡ್ಡ’ ಕತೆಯೂ ಇದೇ ವಸ್ತುವಿನ ಇನ್ನೊಂದು ಆಯಾಮದ ಪರಿಶೀಲನೆಯಂತೆ ಕಾಣುತ್ತದೆ. ಮುಂಬಯಿಯಲ್ಲಿರುವ ನಾಯಕನ ಪಾಲಿಗೆ ಊರಿನ ಪಿತ್ರಾರ್ಜಿತ ಆಸ್ತಿಯಾಗಿ ಒಂದು ಗುಡ್ಡ ಬಂದಿರುತ್ತದೆ. ಅದರಲ್ಲಿ ಅವನ ಚಿಕ್ಕಪ್ಪಂದಿರಿಗೂ ಪಾಲಿದೆ. ಅವರೆಲ್ಲ ಸೇರಿ ಅದನ್ನು ಬಿಲ್ಡರ್ ಒಬ್ಬನಿಗೆ ಮಾರಾಟಮಾಡಲು ನಿರ್ಧರಿಸುತ್ತಾರೆ. ನಾಯಕ ಮತ್ತು ಅವನ ಪತ್ನಿ ಕೊನೆಯ ಬಾರಿಗೆ ಆ ಗುಡ್ಡದಲ್ಲಿ ಸುತ್ತಾಡಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಊರಿಗೆ ಬರುತ್ತಾರೆ.

ಈ ಕತೆಯಲ್ಲಿ ಜೋಕಟ್ಟೆಯವರನ್ನು ಈ ಸಂಕಲನದ ಕತೆಗಳಲ್ಲಿ ಕಾಡುತ್ತಿರುವ ಇನ್ನೊಂದು ವಸ್ತುವಿನ ಎಳೆಯಿದೆ. ಅದೇ, ನಾಯಕನನ್ನು ಆಕರ್ಷಿಸಿರುವ ‘ಮತ್ತೊಬ್ಬಳು ಯುವತಿ’. ಈ ಗುಡ್ಡವನ್ನು ನೋಡಲು ಊರಿಗೆ ಹೊರಡುತ್ತಿರುವ ನಾಯಕನಿಗೆ ಮುಂಬಯಿಯಲ್ಲಿಯೇ ಉಳಿದರೆ, ಆ ಇನ್ನೊಬ್ಬಾಕೆಯನ್ನು ಭೇಟಿಮಾಡುವ ಅವಕಾಶವೂ ಇದೆ. ಆದರೆ ಅವನು ಅದನ್ನು ಬಿಟ್ಟು ಪತ್ನಿಯೊಂದಿಗೆ ಊರಿಗೆ ಬರುತ್ತಾನೆ. ಇಲ್ಲಿ ಜೋಕಟ್ಟೆಯವರು ಪತ್ನಿ ಮತ್ತು ಮನಸೆಳೆದ ಗೆಳತಿಯರನ್ನು ಮುಂಬಯಿ ಮತ್ತು ಊರು ಇವುಗಳಿಗೆ ರೂಪಕಗಳನ್ನಾಗಿಸಿ ಪರಿಶೀಲಿಸುತ್ತಿದ್ದಾರೇನೋ ಅನಿಸುತ್ತದೆ. ಈ ಆಕರ್ಷಣೆ ಮುಂದಿನ ಕತೆಗಳಲ್ಲಿ ವಿಭಿನ್ನ ರೀತಿಗಳಲ್ಲಿ ದರ್ಶನ ನೀಡುತ್ತದೆ. ಆದರೆ ಅಲ್ಲೆಲ್ಲ ಇದು ಮುಂಬಯಿ–ಸ್ವಗ್ರಾಮಗಳಿಗೆ ರೂಪಕವಾಗದೆ ಗಂಡುಹೆಣ್ಣಿನ ಸಂಬಂಧಗಳ ಸೂಕ್ಷ್ಮಭಾವಗಳನ್ನು ಮೀಟುತ್ತವೆ. ಹಾಗಾಗಿ ಆ ಆರು ಕತೆಗಳನ್ನು (‘ಕನಸು ಮನಸುಗಳ ಸವೆದ ಹಾದಿಯಲಿ’, ‘ಪ್ರೀತಿಯ ಮಡಿಲಲ್ಲಿ ಕುಳಿತ ಪಾತರಗಿತ್ತಿ’, ‘ತಿರುಗಿ ಬಂದ ಬಾಣ’, ‘ಹಕ್ಕಿಗಳು ಹಾಡತಾವ’, ‘ಕದ ತೆರೆದ ನೆನಪುಗಳ ಕಣ್ಣಾಮುಚ್ಚಾಲೆ’ ಮತ್ತು ‘ಪ್ರೇಮರಾಗ ಹಾಡು ಬಾ’) ಒಂದು ಸ್ಥೂಲ ಚೌಕಟ್ಟಿನೊಳಗೆ ತಂದು ಚರ್ಚಿಸಬಹುದು.

ಈ ಕತೆಗಳ ಪ್ರಧಾನಪಾತ್ರಗಳು ಮುಂಬಯಿಯಲ್ಲಿ ಉದ್ಯೋಗದಲ್ಲಿರುವ ವಿವಾಹಿತ ಪುರುಷ ಪಾತ್ರಗಳು. ಎಲ್ಲಾ ಕತೆಗಳನ್ನು ಒಟ್ಟಾಗಿ ಗಮನಿಸುವಾಗ ಎರಡು ಮೂರು ಅಂಶಗಳನ್ನು ಗುರುತಿಸಬಹುದಾಗುತ್ತದೆ. ಮೊದಲನೆಯದು, ಮುಂಬಯಿಯಲ್ಲಿ ಮಧ್ಯಮ ವರ್ಗದ ಜನಗಳ ಬದುಕಿನ ಪಾರ್ಶ್ವಚಿತ್ರಣಗಳು. ಈ ಮೂಲಕವೇ, ಇಲ್ಲಿನ ಜಂಜಾಟಗಳ ನಡುವೆಯೇ, ಅಥವಾ ಜಂಜಾಟದಿಂದಲೇ ಇಲ್ಲಿನ ಪಾತ್ರಗಳು ಜೀವನೋತ್ಸಾಹವನ್ನು ಪಡೆದಿವೆ ಎಂಬಂತೆ ಇಲ್ಲಿನ ಸಂಬಂಧಗಳು ಬೆಚ್ಚಗೆ ಅರಳಿಕೊಳ್ಳುತ್ತವೆ. ಸುಮ್ಮನಿರಲು ಸಾಧ್ಯವೇ ಇಲ್ಲದಂತಹ ವಾತಾವರಣದಲ್ಲಿ ಪಾತ್ರಗಳಿಗೆ ಚಲನೆಯ ಒತ್ತಡ ಉಂಟಾಗುವುದರಿಂದ ಹೊಸ ಹೊಸ ಕತೆಗಳು ಹುಟ್ಟಿಕೊಳ್ಳುವುದು ಸುಲಭವಾಗುತ್ತದೆ. ಎರಡನೆಯದು ಇಲ್ಲಿನ ಪಾತ್ರಗಳಿಗೆ ಊರು (ಕರ್ನಾಟಕ, ಅದರಲ್ಲೂ ತುಳುನಾಡು) ಒಂದು ತುಡಿತದ ರೂಪದಲ್ಲಿದೆ. ಮೂರನೆಯದು, ಇಲ್ಲಿನ ನಾಯಕನ ಜೀವನೋತ್ಸಾಹಕ್ಕೆ ಕಾರಣವಾಗುವುದು – ಹೆಂಡತಿಯಲ್ಲದ ಯುವತಿಯೊಬ್ಬಳ ಪ್ರೇಮ. ಈ ಆರೂ ಕತೆಗಳು ಬಹಳ ಆಕರ್ಷಕವಾದ ಕತೆಗಳಾಗಿವೆ.

ಮುಂಬಯಿಯ ನಿತ್ಯದ ಓಡಾಟಗಳ ನಡುವೆ ಧುತ್ತೆಂದು ಕತೆಗಳು ಹುಟ್ಟಿಕೊಳ್ಳುವುದು, ಮಧುರ ಭಾವಗಳು ಅರಳುವುದು ಜೋಕಟ್ಟೆಯವರ ಕತೆಗಳ ವೈಶಿಷ್ಟ್ಯ. ಹಾಗಾಗಿ ಅವರ ಕತೆಗಳು ಬೋರ್ ಹೊಡೆಸುವುದೇ ಇಲ್ಲ. ಘಟನೆಗಳು, ಸಂಭಾಷಣೆಗಳು, ನಡುನಡುವೆ ಸುಳಿಯುವ ಸೆಳೆಮಿಂಚಿನಂತಹ ಒಳತೋಟಿಗಳು ಕತೆಗಳ ಆಕರ್ಷಣೆಗೆ ಕಾರಣವಾಗಿವೆ. ಸುದೀರ್ಘ ವೈಚಾರಿಕ ಚರ್ಚೆಗಳು, ಸನ್ನಿವೇಶ ವರ್ಣನೆಗಳಲ್ಲಿ ಅವರು ಕಾಲವ್ಯಯ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT