ಬಿರು ಬೇಸಿಗೆಯಲ್ಲೂ ನಿತ್ಯ ನೀರು ಪೂರೈಕೆ

7

ಬಿರು ಬೇಸಿಗೆಯಲ್ಲೂ ನಿತ್ಯ ನೀರು ಪೂರೈಕೆ

Published:
Updated:
ಬಿರು ಬೇಸಿಗೆಯಲ್ಲೂ ನಿತ್ಯ ನೀರು ಪೂರೈಕೆ

ಮಂಗಳೂರು: ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ಎಲ್ಲೆಡೆ ನೀರಿನ ಬವಣೆ ಎದುರಾಗುತ್ತದೆ. ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳ ಆರ್ಭಟ ಹೆಚ್ಚಾಗುತ್ತದೆ. ಮಂಗಳೂರು ನಗರ ಮಾತ್ರ ಇದಕ್ಕೆ ಹೊರತಾಗಿದೆ. ಮೇ ತಿಂಗಳಲ್ಲಿ ನಗರದ ನಾಗರಿಕರಿಗೆ ನಿತ್ಯ ನೀರು ಪೂರೈಕೆ ಆಗುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ಕಳೆದ ಎರಡು ತಿಂಗಳು ಕೈಗೊಂಡ ಮುನ್ನೆಚ್ಚರಿಕೆಯ ಫಲವಾಗಿ, ಈ ಬಾರಿ ನಿತ್ಯ ನೀರು ಪೂರೈಕೆ ಸಾಧ್ಯವಾಗಿದೆ. ಈ ವರ್ಷ ತುಂಬೆ ನೂತನ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಆರಂಭಿಸಿರುವುದೂ ಅನುಕೂಲಕರವಾಗಿ ಪರಿಣಮಿಸಿದೆ.

ಕಳೆದ ಬೇಸಿಗೆಯಲ್ಲಿ ಎದುರಾದ ನೀರಿನ ಬವಣೆಯಿಂದ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ, ಈ ವರ್ಷ ಮಾರ್ಚ್‌ನಿಂದಲೇ ಲಭ್ಯವಿರುವ ನೀರನ್ನು ಮಿತಬಳಕೆ ಮಾಡಲು ಮುಂದಾಗಿತ್ತು. ಇದಕ್ಕಾಗಿ ರೇಷನಿಂಗ್‌ ವ್ಯವಸ್ಥೆಯನ್ನೂ ಜಾರಿಗೊಳಿಸಿತ್ತು.

ಮೊದಲ ಹಂತದಲ್ಲಿ 2 ದಿನ ನೀರು ಪೂರೈಕೆ ಒಂದು ದಿನ ನೀರು ಸ್ಥಗಿತಗೊಳಿಸಲಾಗಿತ್ತು. ನಂತರ ಮೂರು ದಿನ ನೀರು, ಎರಡು ಸ್ಥಗಿತದ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಮತ್ತೊಂದು ಬದಲಾವಣೆ ಮಾಡಿದ ಪಾಲಿಕೆ, ನಾಲ್ಕು ದಿನ ನೀರು ಪೂರೈಸಿ, ಎರಡು ದಿನ ನೀರು ಸ್ಥಗಿತಗೊಳಿಸುವ ಕ್ರಮ ಅನುಸರಿಸಿತ್ತು. ಅಂತಿಮವಾಗಿ ಏಪ್ರಿಲ್‌ 27 ರಿಂದ ನಿತ್ಯ ನೀರು ಪೂರೈಕೆ ಮಾಡುವ ನಿರ್ಧಾರ ಕೈಗೊಂಡಿದೆ.

ಜಲಾಶಯಗಳಲ್ಲಿ ನೀರು ಲಭ್ಯ: ತುಂಬೆಯಲ್ಲಿ ನಿರ್ಮಿಸಿರುವ ನೂತನ ಅಣೆಕಟ್ಟೆಯಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಈ ಅಣೆಕಟ್ಟೆಯ ಮೇಲ್ಭಾಗದಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಶಂಭೂರು ಬಳಿ ಎಎಂಆರ್‌ ಜಲಾಶಯವಿದೆ. ತುಂಬೆಯಲ್ಲಿ ನೀರು ಸಂಗ್ರಹ ಕಡಿಮೆ ಆಗುತ್ತಿದ್ದಂತೆಯೇ ಎಎಂಆರ್‌ ಜಲಾಶಯದಿಂದ ನೀರು ಪಡೆಯಲಾಗುತ್ತದೆ.

‘ಸದ್ಯಕ್ಕೆ ಎಎಂಆರ್‌ ಜಲಾಶಯದಲ್ಲಿ 4.25 ಮೀಟರ್‌ ನೀರು ಸಂಗ್ರಹವಾಗಿದ್ದು, ತುಂಬೆ ಜಲಾಶಯದಲ್ಲಿ 4.6 ಮೀಟರ್‌ ನೀರು ಲಭ್ಯವಿದೆ. ಏಪ್ರಿಲ್‌ 27 ರಂದು ಎಎಂಆರ್‌ನಿಂದ ತುಂಬೆ ಜಲಾಶಯಕ್ಕೆ ನೀರು ಹರಿಸಲಾಗಿದ್ದು, ತುಂಬೆ ಅಣೆಕಟ್ಟೆಯಲ್ಲಿ 5 ಮೀಟರ್ ನೀರು ಸಂಗ್ರಹಿಸಲಾಗಿತ್ತು. ನೇತ್ರಾವತಿಯಲ್ಲಿ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದರೂ, ತುಂಬೆಯಲ್ಲಿ 5 ಮೀಟರ್‌ ನೀರು ಲಭ್ಯವಾಗಿದೆ. ಹೀಗಾಗಿ ಮೇ ತಿಂಗಳಲ್ಲಿ ನಿತ್ಯ ಪೂರೈಕೆ ಮಾಡಲು ಪಾಲಿಕೆ ಮುಂದಾಗಿದೆ’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ತುಂಬೆಯಲ್ಲಿ 5 ಮೀಟರ್‌ ನೀರು ಸಂಗ್ರಹಿಸಿದಲ್ಲಿ, ಇಡೀ ತಿಂಗಳು ನಿತ್ಯ ಪೂರೈಕೆ ಮಾಡಬಹುದಾಗಿದೆ. ತುಂಬೆ ಅಣೆಕಟ್ಟೆಯ ನೀರಿನ ಪ್ರಮಾಣ 4.5 ಮೀಟರ್‌ಗೆ ಇಳಿಯುತ್ತಿದ್ದಂತೆಯೇ, ಮತ್ತೆ ಎಎಂಆರ್‌ ಜಲಾಶಯದಿಂದ ನೀರು ಬಿಡಿಸಲಾಗುವುದು. ಒಟ್ಟಿನಲ್ಲಿ ಮೇ ತಿಂಗಳು ಜನರಿಗೆ ನಿತ್ಯ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಬೆಂಬಲಿಸಿದ ವರುಣ: ಪಾಲಿಕೆಯ ನಿರ್ಧಾರಕ್ಕೆ ಮಳೆಯೂ ಬೆಂಬಲ ಸೂಚಿಸಿದಂತಿದ್ದು, ಏಪ್ರಿಲ್‌ ಕೊನೆಯ ವಾರ ಹಾಗೂ ಮೇ ಮೊದಲ ವಾರದಲ್ಲಿ ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಸುರಿದಿದೆ.

ಇದರಿಂದಾಗಿ ನೇತ್ರಾವತಿ ನದಿಯಲ್ಲಿ ಅಲ್ಪಪ್ರಮಾಣದ ಒಳಹರಿವು ಆರಂಭವಾಗಿದೆ. ಉಪ್ಪಿನಂಗಡಿ ಬಳಿ ಸಂಪೂರ್ಣ ಬತ್ತಿ ಹೋಗಿದ್ದ ನೇತ್ರಾವತಿಯಲ್ಲಿ ಇದೀಗ ನೀರಿನ ಹರಿವು ಆರಂಭವಾಗಿದೆ.

ಖರ್ಚಿಲ್ಲದೇ ನಿರ್ವಹಣೆ

ಕಳೆದ ವರ್ಷ ಅನುಭವಿಸಿದ ಬವಣೆಯಿಂದ ಪಾಠ ಕಲಿತಿರುವ ಮಹಾನಗರ ಪಾಲಿಕೆ, ಈ ಬಾರಿ ಯಾವುದೇ ಖರ್ಚಿಲ್ಲದೇ, ನೀರಿನ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.

‘ಕಳೆದ ವರ್ಷ ನೀರಿಲ್ಲದೇ, ಹೋಟೆಲ್‌ ಉದ್ಯಮ ಬಹುತೇಕ ಸ್ಥಗಿತಗೊಂಡಿತ್ತು. ಅಲ್ಲದೇ ವಸತಿ ನಿಲಯ, ಕೋಚಿಂಗ್‌ ಕ್ಲಾಸ್‌ಗಳಿಗೂ ನೀರಿನ ಬಿಸಿ ತಟ್ಟಿತ್ತು. ಈ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ 43 ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಜತೆಗೆ 53 ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಲಾಗಿತ್ತು. ಒಟ್ಟಾರೆ ₹1.43 ಕೋಟಿಯನ್ನು ನೀರಿಗಾಗಿಯೇ ಖರ್ಚು ಮಾಡಲಾಗಿತ್ತು. ಆದರೆ, ಈ ವರ್ಷ ಯಾವುದೇ ಹೆಚ್ಚುವರಿ ಖರ್ಚು ಮಾಡದೇ, ಸಮರ್ಪಕ ನೀರು ಪೂರೈಕೆ ಮಾಡಲಾಗಿದೆ’ ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry